ಅಭಿಮತ: ಮೆಕಾಲೆಯ ನೆರಳಿಂದ ಹೊರಬರುವ ಹೊತ್ತು
Team Udayavani, Aug 21, 2020, 6:20 AM IST
ಸಾಂದರ್ಭಿಕ ಚಿತ್ರ
ಪ್ರಶ್ನೆ- ದೇಶ ಆತ್ಮನಿರ್ಭರವಾಗುವುದು ಹೇಗೆ? ಉತ್ತರ: ಆ ದೇಶದಲ್ಲಿರುವ ಹೆಚ್ಚಿನ ಪ್ರಮಾಣದ ಜನ ಸ್ವಾವಲಂಬಿಗಳಾದಾಗ. ಜನರನ್ನು ಸ್ವಾವಲಂಬಿಗಳ ನ್ನಾಗಿಸುವುದು ಹೇಗೆ? ಸ್ವಾವಲಂಬನೆ ಅಥವಾ ಆತ್ಮ ನಿರ್ಭರತೆ ಒಂದು ಮನಃಸ್ಥಿತಿ. ಅಂತಹ ಮನಃಸ್ಥಿತಿ ಇರುವ ಜನ ಆತ್ಮನಿರ್ಭರ ಆಗುತ್ತಾರೆ. ಅಂತಹ ಮನಃಸ್ಥಿತಿ ಹೇಗೆ ಬರುತ್ತದೆ? ವ್ಯಕ್ತಿಯೊಬ್ಬನೊಳಗೆ ತಾನು ಆತ್ಮಗೌರವದಿಂದ ಬದುಕಬೇಕೆಂಬ ಮನಃಸ್ಥಿತಿ ಹುಟ್ಟಿಕೊಂಡಾಗ ಅದು ಬರುತ್ತದೆ. ಅದು ಹೇಗೆ ಬರುತ್ತದೆ? ಅದು ಬರುವುದು ಶಿಕ್ಷಣ ಮತ್ತು ಸಂಸ್ಕೃತಿಯಿಂದ. ಮುಖ್ಯವಾಗಿ ಮನಸ್ಸು ಆಳವಾಗಿ ಒಂದು ಘನ ಸಂಸ್ಕೃತಿಯಲ್ಲಿ ಬೇರೂರಿ ನಿಂತಾಗ.
ಉದಾಹರಣೆಗೆ ನಮ್ಮ ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಜನ ಬಡವರಾಗಿದ್ದರು. ಆದರೂ ಅವರಿಗೆ ಆತ್ಮ ಗೌರವವಿತ್ತು. ಆತ್ಮಸ್ಥೈರ್ಯವಿತ್ತು. ಭ್ರಷ್ಟರಾಗಿರಲಿಲ್ಲ. ಘನತೆಯಿಂದ ಅವರು ಬದುಕಿದ್ದರು. ದೇಶಕ್ಕಾಗಿ ಯಾವ ತ್ಯಾಗವನ್ನೂ ಮಾಡಲು ಸಿದ್ಧರಿದ್ದರು. ಗಾಂಧೀಜಿಯವರ ಮಾತು ಕೇಳಿ ಬಡ ಮಹಿಳೆಯರು ಕೂಡ ತಮ್ಮ ಒಡವೆಗಳನ್ನು ದೇಶಕ್ಕಾಗಿ ದಾನ ಮಾಡಿದರು. ಅತ್ಮಗೌರವ ಉಳ್ಳ ಜನತೆ ದೇಶದ ಬೆನ್ನೆಲುಬಾಗಿರುತ್ತದೆ. ಏಕೆಂದರೆ ಅಂತಹ ಜನರೇ ಹೆಚ್ಚು ಹೆಚ್ಚಾಗಿ ಸ್ವಂತ ಉದ್ಯೋ ಗದಲ್ಲಿ ತೊಡಗಿಕೊಳ್ಳುವುದು. ಸ್ವಂತ ಉದ್ಯೋಗದಲ್ಲಿ ತೊಡಗಿಕೊಳ್ಳುವುದೂ ಒಂದು ಮಾನಸಿಕತೆ. ಅಂಥವರು ಸರಕಾರಗಳ ಸಹಾಯಕ್ಕಾಗಿ ವಿಶೇಷವಾಗಿ ಕಾದು ನಿಲ್ಲುವುದೂ ಇಲ್ಲ. ಆತ್ಮ ನಿರ್ಭರ ಜನ ದೇಶವೊಂದನ್ನು ಕಟ್ಟುವುದು ಹೀಗೆ. ಇಂತಹ ದೇಶಗಳು ತಲೆ ಎತ್ತಿ ನಿಲ್ಲುತ್ತವೆ. ಈ ವಿಷಯಗಳನ್ನು ನಾನು ಏಕೆ ಹೇಳುತ್ತಿದ್ದೇನೆಂದರೆ ದೇಶ ವನ್ನು ಆತ್ಮನಿರ್ಭರವನ್ನಾಗಿಸುವ ದಾರಿಯಲ್ಲಿ ನಾವು ಮೊದಲು ಆತ್ಮನಿರ್ಭರ ಜನರನ್ನು ಕಟ್ಟಬೇಕಿದೆ. ಘನತೆವಂತರು, ಸಚ್ಚಾರಿತ್ರ್ಯ ವಂತರು, ಆತ್ಮ ಶಕ್ತಿಯುಳ್ಳವರು ಇಂತಹ ಜನರಿಂದ ತುಂಬಿದ ಸಮಾಜವೊಂದನ್ನು.
ಇದು ಸಾಧ್ಯವಾಗುವುದು ಸಂಸ್ಕೃತಿಯಲ್ಲಿ ಬೇರೂರಿದ ಶಿಕ್ಷಣದಿಂದ ಮಾತ್ರ. ಆತ್ಮ ನಿರ್ಭರತೆಯನ್ನು, ಸ್ವಾವಲಂಬನೆಯ ಭಾವನೆ, ಘನತೆಯನ್ನು ಇಂದು ಮತ್ತೆ ತುಂಬಬಲ್ಲವು ಕ್ಲಾಸ್ ರೂಮ್‌ಗಳು. ವಿಷಾದವೇನೆಂದರೆ ಹಿಂದೆ ನಮ್ಮಲ್ಲಿ ಇದ್ದ ಇಂತಹ ಮೌಲ್ಯಗಳು ಇಂದು ಕಾಣೆ ಆಗಲು ಕಾರಣ ನಮ್ಮ ಪಠ್ಯ ಪುಸ್ತಕಗಳು. ಇಂದಿನ ನಮ್ಮ ಪಠ್ಯಗಳು ಮಾಹಿತಿಯನ್ನು ನೀಡುತ್ತವೆ. ಆದರೆ ವ್ಯಕ್ತಿಯನ್ನು ಕಟ್ಟುವುದಿಲ್ಲ. ಭಾರತೀಯ ಸಂಪ್ರದಾಯಕ್ಕೆ, ಕೌಶಲಗಳಿಗೆ ಪ್ರತಿನಿಧಿಯಾದ ವ್ಯಕ್ತಿಯನ್ನು ನಿರ್ಮಾಣ ಮಾಡುವುದಿಲ್ಲ. ವಿಷಾದದ ವಿಷಯವೆಂದರೆ ಹಲವು ವರ್ಷ ಗಳಿಂದ ಒಂದು ಸಿದ್ಧಾಂತದ ಹೆಸರಿನಲ್ಲಿ ನಾವು ಭಾರತೀಯ ಸಂಸ್ಕೃತಿಯನ್ನು ತಿರಸ್ಕರಿಸಿಬಿಟ್ಟಿದ್ದೇವೆ. ನಮ್ಮ ಸಂಸ್ಕೃತಿಯನ್ನು ತಿರಸ್ಕರಿಸಿದ ಆ ಸಿದ್ಧಾಂತ ಈ ದೃಷ್ಟಿಯಿಂದ ನಮ್ಮ ದೇಶಕ್ಕೆ ಬ್ರಿಟಿಷರು ಮಾಡಿದ ಹಾನಿಗಿಂತಲೂ ಹೆಚ್ಚಿನ ಹಾನಿಯನ್ನು ಉಂಟು ಮಾಡಿದೆ, ಮೆಕಾಲೆ ಏನು ಮಾಡಬೇಕೆಂದಿದ್ದನೋ ಅದನ್ನು ಮಾಡಿಯೇಬಿಟ್ಟಿದೆ.
ನಮ್ಮ ಇಡೀ ಒಂದು ಸಂಸ್ಕೃತಿಯ ಹಿನ್ನೆಲೆಯ ಪಠ್ಯಗಳನ್ನು ಶಿಕ್ಷಣದಲ್ಲಿ ತಿರಸ್ಕರಿಸಿದ್ದು ನಾವು ನಮ್ಮ ಸಾಂಸ್ಕೃತಿಕ, ಆರ್ಥಿಕ ಹಾಗೂ ವ್ಯಕ್ತಿಗತ ನಿರ್ಭರತೆ ಯನ್ನು ಕಳೆದುಕೊಳ್ಳಲು ಕಾರಣ. ಆ ಸಿದ್ಧಾಂತ ನಮ್ಮ ಸಂಸ್ಕೃತಿ ಪರಂಪರೆಯನ್ನು ಗೇಲಿ ಮಾಡಿತು. ರಾಮಾಯಣ, ಮಹಾಭಾರತಗಳನ್ನು ಹಿಡಿದು ನಮ್ಮ ಸಾಂಸ್ಕೃತಿಕ ಕಥಾನಕಗಳ ಪರಂಪರೆಯನ್ನು ಅದು ಅವಹೇಳನ ಮಾಡಿತು. ಹೀಗಾಗಿ ನಾವು ನಮ್ಮ ಇಡೀ ಘನತೆಯನ್ನು, ಸಂಸ್ಕೃತಿಯನ್ನು ಕಳೆದುಕೊಂಡು ಅತಂತ್ರರಾದೆವು. ನಮ್ಮಲ್ಲಿ ಮಾನಸಿಕವಾಗಿ, ಸಾಂಸ್ಕೃತಿಕವಾಗಿ, ಆರ್ಥಿಕವಾಗಿ ಆತ್ಮ ನಿರ್ಭರತೆ ಕಳೆದುಹೋದ ಕಾರಣ ನಮ್ಮ ಶಿಕ್ಷಣ ಮರೆಸಿಬಿಟ್ಟ ನಮ್ಮ ಗ್ರಾಮೀಣ ಜೀವನ ವಿಧಾನ ಮತ್ತು ಆತ್ಮನಿರ್ಭರ ಕೌಶಲಗಳು. ನಮ್ಮ ಪಠ್ಯ ಪಾಠಗಳು ಮತ್ತು ಪಠ್ಯ ಪಾಠದ ವಿಧಾನ ಮರೆಸಿದ್ದು. ಸಿದ್ಧಾಂತಗಳ ಹೆಸರಿನಲ್ಲಿ, ಸಾಮಾಜಿಕ ನ್ಯಾಯದ ಹೆಸರಿನಲ್ಲಿ ನಾವು ಮಾಡಿದ್ದು ಇದು. ಭಾರತದ ಪಠ್ಯಗಳ ಕುರಿತು ತೀವ್ರ ಅನುಮಾನ ಹೊಂದಿ ರುವ ನಾವು ಅದನ್ನು ಬದಲಾಯಿಸಿದ್ದು ಪಾಶ್ಚಿಮಾತ್ಯ ಪಠ್ಯಗಳ ಮೂಲಕ. ಜನ ತಮ್ಮ ಪರಂಪರಾಗತ ಮೌಲ್ಯಗಳನ್ನು ಕಳೆದು ಕೊಂಡು ನಿಂತಿದ್ದು ಹೀಗೆ. ಸಾಂಸ್ಕೃತಿಕವಾಗಿ ಭ್ರಷ್ಟನಾದ ವ್ಯಕ್ತಿ ಮಾನಸಿಕವಾಗಿ ಭ್ರಷ್ಟನಾಗುತ್ತಾನೆ.
ಇನ್ನೂ ಒಂದು ಮಹತ್ವದ ವಿಷಯ. ಒಂದು ಸಿದ್ಧಾಂತದಿಂದ ಪ್ರೇರೇಪಿತವಾದ ನಮ್ಮ ಶಿಕ್ಷಣವು ನಮ್ಮ ಪರಂಪರೆಯನ್ನು ಅವೈಜ್ಞಾನಿಕ ಅಥವಾ ಮೌಡ್ಯದಿಂದ ತುಂಬಿದ್ದು ಎಂದು ಕರೆದು ಹೀಗಳೆ ದುಬಿಟ್ಟಿತು. ಅಷ್ಟೇ ಅಲ್ಲ. ನಮ್ಮ ಪರಂಪರಾಗತ ಕೌಶಲ್ಯ ಗಳನ್ನು ಕೂಡ ಅವಹೇಳನ ಮಾಡಿ, ಧಿಕ್ಕರಿಸಿ “ಆಧುನಿಕ’ ಕೌಶಲಗಳನ್ನು ಕಾಲೇಜುಗಳಲ್ಲಿ ನಮಗೆ ಕಲಿಸಲು ಹೊರಟಿತು. ಕೆಲವೇ ವರ್ಷಗಳ ಹಿಂದಿನ ಮಾತು. ಎಪ್ಪತ್ತರ ದಶಕದಲ್ಲಿ ಕಾಲೇಜಿಗೆ ಹೋಗುವ ಮಕ್ಕಳು ಮನೆಗೆಲಸ, ಮನೆಯ ವ್ಯವಹಾರದಲ್ಲಿ ಸಹಾಯ ಮಾಡಿಯೇ ಹೋಗಬೇಕಿತ್ತು. ತೋಟಗಳಲ್ಲಿ ಗದ್ದೆಗಳಲ್ಲಿ ಕೆಲಸ ಮಾಡಬೇಕಿತ್ತು. ಬಡಗಿಯ ಮಗ ಬಡಗಿ ಕೆಲಸ ಮಾಡುತ್ತಿದ್ದ. ಹಾಗೆಯೇ ಆಯಾ ಕೌಟುಂಬಿಕ ಹಿನ್ನೆಲೆಯಿಂದ ಬರುವ ನೇಕಾರ, ಅಂಗಡಿ, ವ್ಯಾಪಾರ, ಹೊಟೇಲ್, ವಾಲಗ, ಯಕ್ಷಗಾನ, ಅಕ್ಕಿಯ ಮಿಲ್ಲು ಹೀಗೆ ತಮ್ಮ ಕೌಟುಂಬಿಕವಾಗಿ ಬಂದಿದ್ದ ಕೆಲಸಗಳನ್ನು ಮಕ್ಕಳು ಮಾಡಿಯೇ ಕಾಲೇಜಿಗೆ ಬರಬೇಕಿತ್ತು. ಬರುತ್ತಿದ್ದರು. ಆದರೆ ಅಂತಹ ಸ್ಥಿತಿಯಿಂದ ಒಂದು ಲಾಭ ವಾಯಿತು. ಏನೆಂದರೆ ಆ ಯುವಕ ಯುವತಿ ಯರಿಗೆ ಹೆಚ್ಚು ಕಡಿಮೆ ಎಲ್ಲರಿಗೂ ಕನಿಷ್ಠ ಒಂದೊಂದು ಕೌಶಲ ಕರಗತವಾಗಿ ಹೋಗಿತ್ತು. ಸಾಧಾರಣವಾಗಿ ಕಾಮರ್ಸ್ ಅಥವಾ ಆರ್ಟ್ಸ್ ಕಲಿಯಲು ಬರುವವರು ಇಂಗ್ಲಿಷ್ ಮತ್ತು ತುಸು ಅಕೌಂಟ್ಸ್‌ಗಳನ್ನು ಕಲಿಯಲು ಕಾಲೇಜಿಗೆ ಬರುವವರು. ಅವರಿಗೆ ಕೃತಕವಾಗಿ ಸ್ಕಿಲ್‌ಗಳನ್ನು ಹೇಳಿಕೊಡುವ ಅಗತ್ಯ ಇರಲಿಲ್ಲ. ನೋವಿನ ವಿಷಯ ವೆಂದರೆ ಸಿದ್ಧಾಂತಗಳನ್ನು ಮುಂದಿಟ್ಟುಕೊಂಡಿದ್ದ ನಮ್ಮ ಶಿಕ್ಷಣ ವ್ಯವಸ್ಥೆ ಅವೆಲ್ಲವನ್ನೂ ತಿರಸ್ಕರಿಸಿ ಹೊಸ ಪಾಶ್ಚಾತ್ಯ ಮಾದರಿಯನ್ನು ಆಯ್ದುಕೊಂಡಿದ್ದು. ನಮ್ಮ ಪರಂಪರಾಗತ ಕೌಶಲಗಳು ಮೂಲೆ ಗುಂಪಾದವು. ಈ ಮಾತುಗಳನ್ನು ವಿದ್ಯಾರ್ಥಿಗಳು ಕೇವಲ ತಮ್ಮ ಕುಲಕಸುಬನ್ನು ಮಂದುವರಿಸಿ ಕೊಂಡು ಹೋಗ ಬೇಕು ಎಂದು ಸೂಚಿಸುವದಕ್ಕಲ್ಲ. ಕನಿಷ್ಠ ಅಷ್ಟಾದರೂ ಕೌಶಲ ಅವರಲ್ಲಿರಲಿ ಎಂದು.
ನಿಜವಾಗಿಯೂ ವಿದ್ಯಾರ್ಥಿಗಳಿಗೆ ಕಾಲೇಜಿನ ಯಾವ ವಿಷಯಗಳು ಪ್ರಸ್ತುತದಲ್ಲಿ ದೇಶೀಯವಾಗಿ ಹಾಗೂ ರಾಷ್ಟ್ರೀಯ ವಾಗಿ ಪೂರಕ ಎನ್ನುವುದನ್ನು ಸರ್ವೆ ಮಾಡಬೇಕಿದೆ. ಇದರಿಂದಾಗಿ ಅವರಿಗೆ ತಮ್ಮ ಸ್ಥಳೀಯ ಕೌಶಲಗಳನ್ನು ಬಳಸಿಕೊಳ್ಳಲು ಸಹಾಯ ವಾಗುತ್ತದೆ. ಕನಿಷ್ಠ ಅವರಲ್ಲಿ ಹಲವರು ಪದವಿ ಶಿಕ್ಷಣ ಮುಗಿಸಿ ತಮ್ಮ ಕೌಟುಂಬಿಕ ವ್ಯವಹಾರಕ್ಕೆ ಮರಳಿ ಹೋಗುವಂತೆ ಮಾಡಬೇಕಾಗಿದೆ. ಇದು ಸಾಧ್ಯ ವಾದರೆ ಎರಡು ಲಾಭಗಳಿವೆ. ಒಂದು. ಭಾರಿ ಪ್ರಮಾಣದಲ್ಲಿ ಈಗ ನಡೆದಿರುವ ಹಳ್ಳಿಗಳಿಂದ ದೊಡ್ಡ ಪಟ್ಟಣಗಳಿಗೆ ವಲಸೆ ತಪ್ಪುತ್ತದೆ.ಅಲ್ಲದೆ ನಿರುದ್ಯೋಗದ ಸಮಸ್ಯೆ ಬಹಳ ಮಟ್ಟಿಗೆ ಬಗೆಹರಿಯುತ್ತದೆ.
ನಾವು ಆತ್ಮನಿರ್ಭರರಾಗುವುದು ಸಾಧ್ಯವಾಗುವುದು ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಶಿಕ್ಷಣ ಮುಗಿಸಿ ತಮ್ಮ ಕೌಟುಂಬಿಕ ವ್ಯವಹಾರಗಳಿಗೆ ಮರಳಿ ಹೋಗಿ ಅದನ್ನೇ ಚೀನ ಮಾದರಿಯಲ್ಲಿ ವಿಸ್ತರಿಸಲು ಸಾಧ್ಯವಾದಾಗ. ನಮ್ಮ ಹಳ್ಳಿಗಳು, ಚಿಕ್ಕಪಟ್ಟಣಗಳು ಜಗತ್ತಿಗೆ ತೆರೆದುಕೊಂಡಾಗ. ಆಗ ನಮ್ಮ ಎಂ.ಎಸ್.ಎಂ.ಇ.ಗಳು ಬೆಳೆಯುತ್ತವೆ. ದೊಡ್ಡ ಉದ್ದಿಮೆಗಳಿಗೆ ಬೆಂಬಲವಾಗಿ ನಿಲ್ಲುತ್ತವೆ. ಈ ದಿಶೆಯಲ್ಲಿ ಮುಖ್ಯವಾಗಿ ನಾವು ಗಮನ ನೀಡಬೇಕಿರುವುದು ನಮ್ಮ ಉನ್ನತ ಶಿಕ್ಷಣಕ್ಕೆ.
ನಮ್ಮ ಹಳ್ಳಿಗಳಲ್ಲಿ ಲಕ್ಷಾಂತರ ಕೌಶಲಗಳಿವೆ. ಹಾಗೆಯೇ ನಮ್ಮ ಬುಡಕಟ್ಟು ಜನಾಂಗಗಳಿಗೆ ಅರಣ್ಯಗಳಲ್ಲಿ ಅಂಚಿನಲ್ಲಿ ವಾಸಿಸುತ್ತಿರುವ ಜನರಿಗೆ ಅಪಾರ ಕೌಶಲಗಳು ತಿಳಿದಿದೆ. ಆ ಕೌಶಲಗಳನ್ನು ಗುರುತಿಸುವುದು ಪ್ರೋತ್ಸಾಹಿಸುವುದು ನಮ್ಮ ಉನ್ನತ ಶಿಕ್ಷಣದ ಭಾಗವಾಗಿರಬೇಕು. ಅವಕ್ಕೆ ಸ್ಥಳ ನೀಡು ವುದು ನಮ್ಮ ಶಿಕ್ಷಣದಲ್ಲಿರಬೇಕು. ಅಂದರೆ ಅವನ್ನು ಕೂಡ ನಮ್ಮ ಶಿಕ್ಷಣದ ಕ್ರೆಡಿಟ್ ನ ಭಾಗವಾಗಿ ನಾವು ಪರಿಶೀಲಿಸಬೇಕಿದೆ.
ಇವೆಲ್ಲ ಮಾತುಗಳನ್ನು ಹೇಳುತ್ತಿರುವುದಕ್ಕೆ ಕಾರಣಗಳಿವೆ. ಏನೆಂದರೆ ಈಗ ಪ್ರಸ್ತಾಪಿತವಾಗಿರುವ ಶಿಕ್ಷಣ ನೀತಿಯ ಮಹತ್ವ ಇರುವುದು ಇಲ್ಲಿ. ಮೇಲೆ ಹೇಳಲಾಗಿರುವ ಹಲವು ಸಮಸ್ಯೆಗಳಿಗೆ ನೀತಿ ಪರಿಹಾರ ಕಂಡುಹಿಡಿಯಲಿದೆ. ಸಮಿತಿಯ ಸದಸ್ಯ ಡಾ| ಟಿ.ವಿ. ಕಟ್ಟಿಮನಿ ಹೇಳಿರುವಂತೆ ಈ ಶಿಕ್ಷಣ ನೀತಿ ಗ್ರಾಮೀಣ ಭಾರತವನ್ನು, ಅದರ ಸಂಸ್ಕೃತಿಗಳನ್ನು ಶಿಕ್ಷಣದ ಭಾಗವಾಗಿಸಲಿದೆ. ನಮ್ಮ ದಿನನಿತ್ಯದ ಬದುಕು ಮತ್ತು ಶಿಕ್ಷಣಗಳನ್ನು ಒಂದು ಗೂಡಿಸಲಿದೆ. ತನ್ಮೂಲಕ ಶಿಕ್ಷಣ ನೀತಿ ದೇಶವನ್ನು ಮೆಕಾಲೆಯ ನೆನಪಿನಿಂದ, ಮೇಲೆ ಹೇಳಲಾದ ಸಾಂಸ್ಕೃತಿಕ ಸಮಸ್ಯೆಗಳಿಂದ ಹೊರತರಲಿದೆ.
ಡಾ| ರಾಮಚಂದ್ರ ಹೆಗಡೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.