ಜಯಂತಿಗಳು ಆಚರಣೆಗಷ್ಟೇ ; ಮಹಾತ್ಮರ ಆಶಯಗಳು ಭಾಷಣಕ್ಕಷ್ಟೇ
Team Udayavani, May 5, 2017, 12:21 AM IST
ಜಯಂತಿ ಆಚರಣೆಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿವೆ. ಆದರೆ ನಾವು ಜಯಂತಿ ಆಚರಿಸುತ್ತಿರುವ ಮಹಾಪುರುಷರ ಆದರ್ಶಗಳೋ ಆಶಯಗಳೋ ಅನುಪಾಲನೆಯಾಗುತ್ತಿಲ್ಲ. ಹಾಗಾದರೆ ಜಯಂತಿಗಳು ಕೇವಲ ಆಚರಣೆಗೆ ಮಾತ್ರವೇ? ಆ ಆದರ್ಶ ಪುರುಷರ ಆಶಯಗಳು ಭಾಷಣಕ್ಕೆ ಮಾತ್ರ ವಸ್ತುವೇ?
ಮೊನ್ನೆ ಮೊನ್ನೆ ಬಸವ ಜಯಂತಿ ಆಚರಿಸಲಾಯಿತು. ಅದರ ಬೆನ್ನಲ್ಲೇ ಕ್ರಮವಾಗಿ ಶಂಕರ ಜಯಂತಿ, ರಾಮಾನುಜ ಜಯಂತಿ, ಭಗೀರಥ ಜಯಂತಿ ಆಚರಿಸಲಾಯಿತು. ಬಸವ ಜಯಂತಿ ವೇಳೆ ಸರಕಾರ ಎಲ್ಲ ಸರಕಾರಿ – ಅರೆಸರಕಾರಿ ಕಚೇರಿಗಳಲ್ಲೂ ಬಸವಣ್ಣನವರ ಭಾವಚಿತ್ರ ಅಳವಡಿಕೆ ಕಡ್ಡಾಯಗೊಳಿಸಿ ಆದೇಶ ಹೊರಡಿಸಿತು. ಮೇ 10ರಂದು ಇದೇ ಮೊದಲ ಬಾರಿಗೆ ಹೇಮರೆಡ್ಡಿ ಜಯಂತಿಯನ್ನು ರಜಾರಹಿತ ಸರಕಾರಿ ಕಾರ್ಯಕ್ರಮವಾಗಿ ಆಚರಿಸುವಂತೆ ರಾಜ್ಯ ಸರಕಾರವೂ ಆದೇಶ ಹೊರಡಿಸಿದೆ. ಜಯಂತಿ ಆಚರಣೆಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿವೆ. ರಂಗೇರುತ್ತಿವೆ. ಆದರೆ…
ಅಸ್ಪೃಶ್ಯತೆ
ನಾವು ಆಚರಿಸುತ್ತಿರುವ ಜಯಂತಿಗಳಲ್ಲಿ ಬಸವ ಜಯಂತಿ, ಗಾಂಧಿ ಜಯಂತಿ, ಅಂಬೇಡ್ಕರ್ ಜಯಂತಿ ಒಂದು ದೃಷ್ಟಿಯಲ್ಲಿ ಮಹತ್ವಪೂರ್ಣವಾದವುಗಳು. ಯಾಕೆಂದರೆ ಆ ಮೂವರಲ್ಲೂ ಕೆಲವೊಂದು ಸಮಾನ ಅಂಶಗಳಿವೆ. ಮೂವರೂ ಅಸ್ಪೃಶ್ಯತೆ, ಜಾತೀಯತೆ ವಿರುದ್ಧ ಧ್ವನಿಯೆತ್ತಿದವರು. ಸಾಮಾಜಿಕ ಸಮಾನತೆ ಗಾಗಿ ಹೋರಾಡಿದವರು. ಅಂಬೇಡ್ಕರರಂತೂ ಎಳವೆಯಲ್ಲೇ ಅಸ್ಪೃಶ್ಯತೆಯ ಕಹಿವುಂಡವರು. ಜೀವನ ಪರ್ಯಂತ ಅದರ ನಿವಾರಣೆಗಾಗಿ ಹೆಣಗಾಡಿದವರು. ಗಾಂಧೀಜಿಯವರೂ ಅಸ್ಪೃಶ್ಯತೆ ಹಿಂದೂ ಧರ್ಮಕ್ಕೇ ಮಹಾಕಳಂಕವೆಂದು ತಿಳಿದು ಅದನ್ನು ತೊಡೆದು ಹಾಕಲು ತೊಡೆತಟ್ಟಿ ನಿಂತವರು. ಅವರೆಲ್ಲರ ಜಯಂತಿ ಆಚರಣೆ ವೇಳೆ ಇವನ್ನೆಲ್ಲ ನೆನಪಿಸಿಕೊಳ್ಳುತ್ತೇವೆ. ಅಸ್ಪೃಶ್ಯತೆ ನಿವಾರಣೆಗಾಗಿ ಅವರು ನಡೆಸಿದ ಹೋರಾಟವನ್ನು ಕೊಂಡಾಡುತ್ತೇವೆ. ದುರಂತವೆಂದರೆ ಅಸ್ಪೃಶ್ಯತೆಯಿನ್ನೂ ಮರೆಯಾಗಿಲ್ಲ. ಮಠ -ಮಂದಿರಗಳಿಗೆ ದಲಿತರ ಪ್ರವೇಶಕ್ಕಾಗಿ ಹೋರಾಟ ನಡೆಯುತ್ತಲೇ ಇದೆ. ಇನ್ನೂ ದೊಡ್ಡ ದುರಂತವೆಂದರೆ ಜಾತಿಗಳೊಳಗಷ್ಟೇ ಇದ್ದ ಅಸ್ಪೃಶ್ಯತೆ ಇದೀಗ ರಾಜಕೀಯ ಪಕ್ಷಗಳ ನಡುವೆಯೂ ವಕ್ಕರಿಸಿಬಿಟ್ಟಿದೆ. ಒಂದು ಪಕ್ಷದವರು ಇನ್ನೊಂದು ಪಕ್ಷದವರೊಂದಿಗೆ ವೇದಿಕೆ ಹಂಚಿಕೊಂಡರೆ ಸಾಕು. ಅದು ಪಕ್ಷ ವಿರೋಧಿ ಚಟುವಟಿಕೆ ಅನಿಸಿಕೊಳ್ಳುವುದೂ ಇದೆ. ಅಷ್ಟೇಕೆ? ಬಣ್ಣಗಳ ನಡುವೆಯೂ ಅಸ್ಪೃಶ್ಯತೆ ನುಸುಳಿದ್ದು ವಿಚಿತ್ರವೆನಿಸಿದರೂ ನಿಜ. ಒಂದು ಪಕ್ಷಕ್ಕೆ ಹಸಿರು ಅಪಥ್ಯವೆನಿಸಿದರೆ ಇನ್ನೊಂದಿಷ್ಟು ಪಕ್ಷಗಳಿಗೆ ಕೇಸರಿ ನಿಷಿದ್ಧ! ಪ್ರಾಯಶಃ ರಾಷ್ಟ್ರಧ್ವಜ ರೂಪಿಸುವ ಪ್ರಮೇಯ ಇಂದೇನಾದರೂ ಬಂದೊದಗಿದ್ದಲ್ಲಿ ಈ ಅಸ್ಪೃಶ್ಯತೆ ತ್ರಿವರ್ಣ ಧ್ವಜಕ್ಕೂ ತೊಡಕಾಗುತ್ತಿತ್ತೇನೋ!
ಜಾತೀಯತೆ
ಗಾಂಧಿ, ಬಸವಾದಿ ಮಹಾಪುರುಷರು ಕಿತ್ತೂಗೆಯಬಗೆದ ಇನ್ನೊಂದು ಕಳಂಕ ಜಾತೀಯತೆ. ಮಾನವ ಕುಲಂ ತಾನೊಂದೆ ವಲಂ ಎಂದಿದ್ದಾನೆ ಕನ್ನಡದ ಆದಿಕವಿ ಪಂಪ. ನಡೆವುದೊಂದೇ ಭೂಮಿ, ಕುಡಿವುದೊಂದೇ ನೀರು, ಸುಡುವಗ್ನಿಯೊಂದೇ ಇರುತಿರಲು ಕುಲಗೋತ್ರ ನಡುವೆ ಎತ್ತಣದು? ಎಂದು ಪ್ರಶ್ನಿಸಿದ್ದಾನೆ ತ್ರಿಪದಿಬ್ರಹ್ಮ ಸರ್ವಜ್ಞ. ವರ್ಣವ್ಯವಸ್ಥೆ, ಜಾತಿಪದ್ಧತಿ ಹಿಂದೂ ಧರ್ಮ ಬೆಳೆಸಿಕೊಂಡು ಬಂದ ಘೋರಶಾಪವೆಂದು ಅದರ ಬೇರಿಗೆ ಬೆನ್ನೀರೆರೆಯಲು ಬಗೆದರು ಬಸವಣ್ಣನವರು. ಜಾತಿ ಪದ್ಧತಿಯಿಂದ ಬಹಳಷ್ಟು ನೊಂದಿದ್ದ ದಲಿತ ಸೂರ್ಯ ಅಂಬೇಡ್ಕರ್ ಸಂವಿಧಾನ ರಚಿಸುವ ವೇಳೆ ನಮ್ಮದು ಜಾತ್ಯತೀತ ರಾಷ್ಟ್ರವೆಂದು ಸಾರಿದರು. ವಿಪರ್ಯಾಸವೆಂದರೆ ಜಾತ್ಯತೀತ ರಾಷ್ಟ್ರವೆಂದು ಘೋಷಿಸಲಾದ ಈ ದೇಶದಲ್ಲಿ ಜಾತೀಯತೆಯಿನ್ನೂ ಜೀವಂತ. ಜಾತಿ ಸಂಖ್ಯೆಯಲ್ಲೂ ಏರಿಕೆಯಾಗಿದೆ. 2015ರಲ್ಲಿ ರಾಜ್ಯದಲ್ಲಿ ಕೈಗೊಳ್ಳಲಾದ ಜಾತಿಗಣತಿ ವೇಳೆ ಜಾತಿಗಳ ಸಂಖ್ಯೆ 459ರಿಂದ 1,459ಕ್ಕೇರಿರುವುದಾಗಿ ಪತ್ರಿಕೆಗಳಲ್ಲಿ ಓದಿದ ನೆನಪು. ಸ್ವಾತಂತ್ರ್ಯ, ಸಮಾನತೆ, ಜಾತ್ಯತೀತತೆ ಮುಂತಾದ ಮೌಲ್ಯಗಳ ಮೇಲೆ ನಿಂತಿರುವ ಸಂವಿಧಾನ ಜಾರಿಗೊಂಡು ಇಷ್ಟು ವರ್ಷಗಳುರುಳಿದರೂ ಜಾತಿ ಬಿಡಿ, ಅರ್ಜಿ ನಮೂನೆಯಲ್ಲಿರುವ ನಿಮ್ಮ ಜಾತಿ ಯಾವುದು ಎಂಬ ಕಾಲಮ್ಮನ್ನೇ ನಮಗಿನ್ನೂ ಕಿತ್ತೆಸೆಯಲಾಗಿಲ್ಲ! ಅಪಘಾತದಲ್ಲಿ ಅಸು ನೀಗಿದವರ ಕುಟುಂಬಕ್ಕೆ ಸಾಂತ್ವನ ಹೇಳುವಲ್ಲೂ ಜಾತಿ – ಧರ್ಮಗಳ ವಿಚಾರ ನುಸುಳುವುದೂ ಇದೆ. ದೇವರನಾಡು ಕೇರಳದಲ್ಲಿ ಮೇಲಿಂದ ಮೇಲೆ ನಡೆಯುತ್ತಿರುವ ಹತ್ಯೆಯ ಹಿಂದೆ ಜಾತೀಯತೆ-ಧರ್ಮಾಂಧತೆ ಕೆಲಸ ಮಾಡುತ್ತಿದೆ. ಜಾತೀಯತೆಯ ವಿಶ್ವರೂಪವನ್ನು ಜನಾಂಗೀಯ ಕಲಹವೆನ್ನಬಹುದೇನೋ. ಬಿಟ್ಟೆನೆಂದರೂ ಬಿಡದೀ ಮಾಯೆ -ಜಾತಿ ಭೂತ.
ಅಸಮಾನತೆ
ಅಸ್ಪೃಶ್ಯತೆಯಿನ್ನೂ ಅಳಿದಿಲ್ಲ. ಜಾತೀಯತೆಯಿನ್ನೂ ಜೀವಂತ. ಪರಿಣಾಮವಾಗಿ ಸಮಾನತೆಯಿನ್ನೂ ಮರೀಚಿಕೆ. ಬಸವಾದಿ ಸಮಾಜ ಸುಧಾರಕರು ಕಟ್ಟಬಯಸಿದ್ದು ಸ್ವಾತಂತ್ರ್ಯ, ಸಮಾನತೆ, ಸೌಹಾರ್ದಗಳ ಅಡಿಗಲ್ಲಿನ ಮೇಲೆ ನಿಂತ ಸರ್ವೋದಯನಿಷ್ಠವಾದ ಆದರ್ಶ ಸಮಾಜವನ್ನು. ಆದರೆ ಸಾಮಾಜಿಕ ಅಸಮಾನತೆಯೊಂದಿಗೆ ಆರ್ಥಿಕ ಅಸಮತೆಯೂ ಸೇರಿಕೊಂಡ ಪರಿಣಾಮ ಸಮಾನತೆಯಿನ್ನೂ ನೆಲೆಗೊಂಡಿಲ್ಲ. ನಿರೀಕ್ಷಿತ ಸರ್ವೋದಯವಿನ್ನೂ ಸಾಧ್ಯವಾಗಿಲ್ಲ. ಆರ್ಥಿಕ ಅಸಮತೆ ನೀಗಿದಲ್ಲಿ ಸಾಮಾಜಿಕ ಅಸಮತೆ ನೀಗಬಹುದೇನೋ. ದುರದೃಷ್ಟವಶಾತ್ ಆರ್ಥಿಕ ಅಸಮತೆ ಹೆಚ್ಚುತ್ತಿದೆ. ಸಿರಿವಂತ ರಾಷ್ಟ್ರಗಳಲ್ಲಿ 7ನೆಯದು ನಮ್ಮದು. ಆದರೆ ವಿಶ್ವದ ಏಕಮೇವಾದ್ವಿತೀಯ ಶ್ರೀಮಂತರಿರುವ ಈ ದೇಶದಲ್ಲಿ ನಿಮಿಷಕ್ಕೊಬ್ಬರಂತೆ ಹಸಿವಿನಿಂದ ಸಾಯುವವರೂ ಇದ್ದಾರೆ. ಆರ್ಥಿಕ ಅಸಮತೆಗೆ ಕಾರಣವಾಗುವ ಬಡತನವೊಂದು ಜಾಗತಿಕ ಸಮಸ್ಯೆ. ಸಮೀಕ್ಷೆಯೊಂದರ ಪ್ರಕಾರ ಜಗತ್ತಿನ ಅಗ್ರ 62 ಶ್ರೀಮಂತರ ಆಸ್ತಿ ಪ್ರಮಾಣವು ಬಡವರ ಒಟ್ಟು ಸಂಪತ್ತಿಗೆ ಸಮಾನ. ಅಂದರೆ ಶೇ.1ರಷ್ಟು ಜನಸಂಖ್ಯೆಯ ಆದಾಯ ಉಳಿದ ಶೇ.99ರಷ್ಟು ಜನಸಂಖ್ಯೆಯ ಆದಾಯಕ್ಕೆ ಸಮ. ಆರ್ಥಿಕ ಅಸಮತೆಗೆ ಇದಕ್ಕಿಂತ ಪುರಾವೆ ಬೇಕಿಲ್ಲ.
ಮೀಸಲಾತಿ
ಪ್ರಾಯಶಃ ಮೇಲೆ ಉಲ್ಲೇಖೀಸಲಾದ ಎಲ್ಲ ಸಮಸ್ಯೆಗಳಿಗೂ ಸಂವಿಧಾನೋಕ್ತ ಪರಿಹಾರವೆಂದರೆ ಮೀಸಲಾತಿ. ಅದು ಸಾಮಾಜಿಕವಾಗಿ ಹಿಂದುಳಿದ ವರ್ಗದವರನ್ನು ಮುಂದೆ ತಂದು ಮುಖ್ಯವಾಹಿನಿಗೆ ತರುವ ಸೌಲಭ್ಯ. ಮೀಸಲಾತಿಗೂ ಜಾತಿ -ಧರ್ಮಗಳಿಗೂ ಯಾವುದೇ ಸಂಬಂಧವಿಲ್ಲ. ಸರಕಾರದ ಸೌಲಭ್ಯಗಳು ಸಾಮಾಜಿಕವಾಗಿ ಹಿಂದುಳಿದವರಿಗೆ ಲಭಿಸಬೇಕು ಎಂದಿದ್ದಾರೆ ಗಾಂಧೀಜಿ. ಆದರೆ ಅದಿನ್ನೂ ಜಾತಿಯ ಜಾಡು ಹಿಡಿದು ಸಾಗುತ್ತಿರುವುದೊಂದು ದುರಂತ. ಹರಿಯಾಣದಲ್ಲಿ ಜಾಟರು ಮೀಸಲಾತಿಗಾಗಿ ಹೋರಾಡುತ್ತಿದ್ದಾರೆ. ಗುಜರಾತಿನಲ್ಲಿ ಪಟೇಲ್ ಜನಾಂಗದವರು ಮೀಸಲಾತಿಗಾಗಿ ಹೋರಾಡುತ್ತಿದ್ದಾರೆ. ಈ ನಡುವೆ ಮಾನ್ಯ ಮುಖ್ಯಮಂತ್ರಿಯವರು ಮೀಸಲಾತಿ ಮಿತಿಯನ್ನು ಈಗಿರುವ ಶೇ.50ರಿಂದ ಶೇ.70ಕ್ಕೇರಿಸಲು ಉತ್ಸುಕರಾಗಿದ್ದಾರೆ. ಇವೆಲ್ಲವೂ ಜಾತಿ ವ್ಯವಸ್ಥೆಯನ್ನು ಮತ್ತಷ್ಟು ಬಲಗೊಳಿಸುವುದೇ ಹೊರತು ಜಾತೀಯತೆಯನ್ನು ನೀಗುವ ಲಕ್ಷಣ ಕಾಣುವುದಿಲ್ಲ. ಎಲ್ಲರಿಗೂ ಸರಕಾರದಿಂದ ಸಿಗುವ ಸವಲತ್ತುಗಳನ್ನು ದಕ್ಕಿಸಿಕೊಂಡು ತಮ್ಮ ಜಾತಿಯನ್ನು ಬಲಗೊಳಿಸುವ ಇರಾದೆಯೇ ಹೊರತು ರಾಷ್ಟ್ರವಾಹಿನಿಯಲ್ಲಿ ಬೆರೆತು ಭಾರತವನ್ನು ಬಲಗೊಳಿಸುವ ಇಚ್ಛಾಶಕ್ತಿ ಇದ್ದಂತಿಲ್ಲ. ಅಸ್ಪೃಶ್ಯತೆ, ಜಾತೀಯತೆಗಳ ನಿವಾರಣೆಗಾಗಿ ಮೀಸಲಾತಿ ವ್ಯವಸ್ಥೆ ಪ್ರಾರಂಭಿಸಲಾಯಿತಷ್ಟೆ. ಆದರೆ ಅವಿನ್ನೂ ಪರಿಹಾರ ಕಂಡಿಲ್ಲ ಅಥವಾ ಪರಿಹಾರ ಕಾಣಲು ಬಿಟ್ಟಿಲ್ಲ. ಮೀಸಲಾತಿಯ ಹಿಂದೆ ರಾಜಕೀಯ ಲಾಭ – ನಷ್ಟಗಳ ಲೆಕ್ಕಾಚಾರ ನಡೆಯುತ್ತಿದೆ. ಹೊಸದಾಗಿ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಿಸುವ ನಿರ್ಧಾರದ ಹಿಂದೆ ರೆಡ್ಡಿ ಜನಾಂಗದ ಓಲೈಕೆ ನಡೆದಿದೆ ಎಂದೇ ಅರ್ಥೈಸಲಾಗುತ್ತಿದೆ. ಹಾಗಾಗಿ ಮೀಸಲಾತಿಯೆಂಬುದು ಜಾತೀಯತೆಯ ಗಾಯಕ್ಕೆ ಮುಲಾಮೋ? ಮತಬ್ಯಾಂಕ್ ಜಾತಿಗಳ ಮೂಗಿಗೆ ಸವರುವ ತುಪ್ಪವೋ? ಎಂಬ ಪ್ರಶ್ನೆ ಕಾಡುತ್ತಿದೆ.
ಲೇಖನಾರಂಭದಲ್ಲಿ ಹೇಳಿರುವಂತೆ ಜಯಂತಿ ಆಚರಣೆಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿವೆ. ರಂಗೇರುತ್ತಿವೆ, ಆದರೆ ನಾವು ಜಯಂತಿ ಆಚರಿಸುತ್ತಿರುವ ಮಹಾಪುರುಷರ ಆದರ್ಶಗಳೋ ಆಶಯಗಳೋ ಅನುಪಾಲನೆಯಾಗುತ್ತಿಲ್ಲ. ಹಾಗಾಗಿ ಮತ್ತೆ ಪ್ರಶ್ನೆ ಕಾಡುತ್ತಿದೆ-ಜಯಂತಿಗಳು ಆಚರಣೆಗಷ್ಟೇನಾ? ಅವರ ಆಶಯಗಳು ಭಾಷಣಕ್ಕಷ್ಟೇನಾ? ಲಕ್ಷ ಲಕ್ಷ ಸುರಿದು ಜಯಂತಿ ಆಚರಣೆ ಮಾಡುವುದು ಸರಕಾರದ ಪ್ರವರ – ಪ್ರತಿಷ್ಠೆಗಳಿಗೊಂದು ವೇದಿಕೆ ಅಷ್ಟೇಯೇ? ಹಾಗಾಗದಿರಲಿ. ಮಹಾತ್ಮರ ಆದರ್ಶಗಳು ಅನುಪಾಲನೆಗೊಂಡು ಆಚರಣೆ ಅರ್ಥಪೂರ್ಣವೆನಿಸಲಿ. ಆ ಮೂಲಕ ಆ ಮಹಾನ್ ಚೇತನಗಳಿಗೆ ಗೌರವಾರ್ಪಣೆಯಾಗಲಿ.
– ರಾಂ ಎಲ್ಲಂಗಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್ ಚಾಲಕನ ವಿರುದ್ಧ ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.