ಸಮರ್ಥರು ಅಧ್ಯಕ್ಷರಾಗಲಿ
Team Udayavani, Mar 1, 2017, 3:50 AM IST
ಅಕಾಡೆಮಿಗಳ ಅಧ್ಯಕ್ಷರ ಸ್ಥಾನ, ನಿಗಮ ಮಂಡಳಿಗಳಂತಲ್ಲ, ಸಾಂಸ್ಕೃತಿಕ ರಾಯಭಾರಿಕೆಯನ್ನು ಅತ್ಯಂತ ಮೌಲಿಕವಾಗಿ ನಿಭಾಯಿಸುವ ಹೊಣೆಗಾರಿಕೆಯುಳ್ಳದ್ದು. ಹೀಗಾಗಿ ಅಲ್ಲಿಗೆ ಯೋಗ್ಯ ಸಾಮರ್ಥ್ಯವಂತರನ್ನೇ ಆಯ್ಕೆ ಮಾಡುವ ಕೆಲಸವಾಗಬೇಕು.
ಅವರು ರಂಗಭೂಮಿಯಲ್ಲಿಸಾಕಷ್ಟು ಕೆಲಸ ಮಾಡಿದವರು. ಈಚೆಗೆ ಧಾರವಾಡದಲ್ಲಿ ಜರುಗಿದ ರಂಗ ಚಟುವಟಿಕೆಗಳ ಬಗೆಗಿನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಆಗಮಿಸಿದ್ದರು. ಅವರೊಂದಿಗೆ ಹೀಗೇ ಚಹಾ ಕುಡಿಯುವ ವೇಳೆ ಹರಟುವಾಗ “ಇನ್ನೇನು ಅಕಾಡೆಮಿಗಳ ಅಧ್ಯಕ್ಷರ ಅವಧಿ ಮುಗಿಯುವ ಹಂತಕ್ಕೆ ಬಂತು ತಾವೇಕೆ ಪ್ರಯತ್ನಿಸಬಾರದು…?’ ಎಂದು ಕೇಳಿದರೆ ಅವರು ನಗುತ್ತ “ಅಯ್ಯೋ ನಮ್ಮಂಥವರನ್ನ ಯಾರು ಕೇಳ್ತಾರೆ…? ಅದಾಗಲೇ ಆ ಹುದ್ದೆಗಳಿಗಾಗಿ ಬೆಂಗಳೂರಲ್ಲಿಯೇ ಬೀಡು ಬಿಟ್ಟವರಿದ್ದಾರೆ. ನಮಗೆ ಅದೆಲ್ಲ ಸಾಧ್ಯವಿಲ್ಲ’ ಎಂದು ಯಥಾರ್ಥವಾಗಿ ನುಡಿದರು.
ಅವರು ಹೇಳಿರುವುದರಲ್ಲಿ ಸತ್ಯವೂ ಇತ್ತು. ಸಾಕಷ್ಟು ಸೃಜನಶೀಲ ಕೆಲಸ, ನಿಜವಾದ ಸಾಮರ್ಥ್ಯ, ಪ್ರಾಮಾಣಿಕ ಎನ್ನುವುದು ಯಾವ ಕಾಲದ ಆಯ್ಕೆಯ ಮಾನದಂಡವೂ ಅಲ್ಲ. ಹುದ್ದೆಗಳಿಗಾಗಿ ತಕ್ಕಮಟ್ಟಿನ ಕಟಿಪಿಟಿ ಮಾಡುವ ಖಯಾಲಿಗಳು ಇದ್ದೇ ಇವೆ. ಕೆಲ ಬಾರಿ ನೀವು ಎಷ್ಟೇ ಸಮರ್ಥರನ್ನು ಆಯ್ಕೆ ಮಾಡಿದಾಗಲೂ ಅವರ ಬಗ್ಗೆ ಒಂದಷ್ಟು ವಕ್ರ ಮಾತುಗಳು ಅವರನ್ನು ಕುರಿತು ಇದ್ದದ್ದೇ. ಹಾಗೆಂದು ಈ ಬಗೆಯ ವಕ್ರೋಕ್ತಿಗಳಿಗೆ ತಳಬುಡವಿಲ್ಲವೆಂದು ತಳ್ಳಿಹಾಕಲಂತೂ ಸಾಧ್ಯವಿಲ್ಲ. ಇವೆಲ್ಲದರ ನಡುವೆಯೂ ತೀರಾ ಅಪರೂಪಕ್ಕಾದರೂ ಇಲ್ಲೊಬ್ಬ ವ್ಯಕ್ತಿ ಸಾಕಷ್ಟು ಸಮರ್ಥನಿದ್ದು ಆ ಅಕಾಡೆಮಿಗೆ ಹೇಳಿ ಮಾಡಿಸಿದಂತಿರುವವನು ಎಂದು ಅವನನ್ನೇ ಅವಕಾಶ ಹುಡುಕಿ ಹೋದರೆ ಅದೊಂದು ದೊಡ್ಡ ಪವಾಡವೇ ಸರಿ. ದಸರಾ ಕವಿಗೋಷ್ಠಿಯಲ್ಲಿ ಕವನ ವಾಚಿಸಲು ಮಾಡಬಾರದ ಕಸರತ್ತನ್ನು ಮಾಡುವ; ತಾಲೂಕು, ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರುಗಳ ಬೆನ್ನುಹಿಡಿದು ಆಯಾ ಮಟ್ಟದ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗಳಲ್ಲಿ ಹೆಸರು ಸೇರಿಸುವ ಕೆಲವು ಕವಿಪುಂಗವರ ಬಗ್ಗೆ ಕೇಳಿಯೇ ಇದ್ದೇವೆ. ಇಂತಹುವುಗಳಿಂದ ಇಡೀ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಪರಿಸರದ ಕೊಳಕುತನಕ್ಕೆ ಕಾರಣರಾದದ್ದು ಮಾತ್ರ ಸುಳ್ಳಲ್ಲ. ಪರಿಣಾಮವಾಗಿ ರಾಜಕೀಯ ವಲಯದಲ್ಲಿರುವವರು “ನಿಮ್ಮ ಸಾಹಿತ್ಯಕ ವಲಯದಲ್ಲಿ ಇರುವಷ್ಟು ರಾಜಕಾರಣ ನಮ್ಮಲ್ಲೂ ಇಲ್ಲ ಮಾರಾಯೆ’ ಎನ್ನುವಂತಾಗಿದೆ.
ಯೋಗ್ಯರನ್ನು ಆರಿಸುವ ಸವಾಲು
ಈಗಾಗಲೇ ಅನೇಕ ಅಕಾಡೆಮಿ ಅಧ್ಯಕ್ಷರ ಅಧಿಕಾರಾವಧಿ ಮುಗಿಯುವ ಹಂತಕ್ಕೆ ಬಂದಿದೆ. ಕೆಲವರು ಅದಾಗಲೇ ನಿರ್ಗಮಿಸುವ ಮಾತನಾಡುತ್ತಿರುವುದೂ ಇದೆ. ಹಿಂದಿನ ಅವಧಿಯಲ್ಲಿ ಸಾಕಷ್ಟು ಶ್ರಮ ಹಾಕಿಯೂ ದಕ್ಕದಿರುವ ಕುರ್ಚಿಗಾಗಿ ನಿರಾಶರಾಗದೇ ಮರಳಿ ಯತ್ನವ ಮಾಡು ಎನ್ನುವ ಮಾತಿನಿಂದ ಪ್ರೇರಣೆ ಪಡೆದು ಈ ಅವಧಿಗಾದರೂ ಅಧ್ಯಕ್ಷ ಗದ್ದುಗೆಯನ್ನು ಏರಬೇಕೆಂದು ಸಾಕಷ್ಟು ತಾಲೀಮು ಮಾಡಿ ಸಜ್ಜಾಗಿ ಕುಳಿತಿದ್ದಾರೆ. ಇನ್ನೇನು ಇವರು ಅಖಾಡಕ್ಕೆ ಇಳಿದು ಮಾಡಬಾರದ ಕಸರತ್ತನ್ನು ಮಾಡಲಿದ್ದಾರೆ. ಶಿಫಾರಸಿಗಾಗಿ ಓಡಾಡಲಿದ್ದಾರೆ.
ಅಕಾಡೆಮಿಗಳ ಅಧ್ಯಕ್ಷರ ಸ್ಥಾನಕ್ಕೆ ನಿಜವಾಗಿ ಅರ್ಹರಾಗಿರುವವರು, ಲಾಬಿ ಮಾಡುವ ಮನೋಭಾವ ಇಲ್ಲದಿರುವವರು ಯಥಾರ್ಥವಾಗಿ ದೂರ ತೀರದಲ್ಲಿ ನಿಂತು ಕುರ್ಚಿಗಾಗಿ ಕಸರತ್ತು ಮಾಡುವವರನ್ನು ನೋಡುತ್ತ ಇನ್ನಷ್ಟು ಸಿನಿಕರಾಗುತ್ತಿದ್ದಾರೆ. ತಿಂಗಳಾನುಗಟ್ಟಲೆ ಜಾತಿ, ಪ್ರದೇಶ, ಧರ್ಮ, ಪರಿಚಯ, ಪ್ರಭಾವ ಇತ್ಯಾದಿ… ಇತ್ಯಾದಿಗಳ ಸೆಲೆ ಹಿಡಿದುಕೊಂಡು ಓಡಾಡುವವರ ನಡುವೆ ಹೀಗೆ ಇವಾವುಗಳ ಹಂಗಿಲ್ಲದೇ ಎಲ್ಲ ಬಗೆಯ ಅರ್ಹತೆಗಳಿರುವಾಗಲೂ ವ್ಯವಸ್ಥೆಯ ಕೊಳಕುತನಕ್ಕೆ ಬೇಸರಿಸಿ ದೂರ ಊಳಿದವರಿಗೆ ನಿಜವಾಗಿಯೂ ಅನ್ಯಾಯವಾಗುತ್ತಿರುತ್ತದೆ. ಅಳುವವರನ್ನೇ ಮಾತನಾಡಿಸದ ವ್ಯವಸ್ಥೆಯ ನಡುವೆ ಹೀಗೆ ಮೌನ ಮುರಿಯದೇ ಎಲ್ಲವನ್ನೂ ಮೂಕ ಪ್ರೇಕ್ಷಕನಂತೆ ನೋಡುವವರನ್ನು ಯಾರು ಕೇಳಬೇಕು? ಸಾಲದೆಂಬಂತೆ “ಆ ಹುದ್ದೆ ನಿಮ್ಮಂಥವರಿಗಲ್ಲ ಮಾರಾಯಾ…’ ಎನ್ನುವ ಸಮಜಾಯಿಶಿಯ ಮಾತುಗಳು ಬೇರೆ. ಖಾಲಿ ಕೊಡಗಳೇ ಹೆಚ್ಚು ಸದ್ದು ಮಾಡುವ ಸತ್ಯ ಯಾರಿಗೆ ಗೊತ್ತಿಲ್ಲ? ಅ ಬಗೆಯ ಸದ್ದುಗಾರಿಕೆಯೇ ಇಷ್ಟವಾಗುವ ಜಮಾನಾದಲ್ಲಿ ಯೋಗ್ಯರನ್ನು ಈ ಬಗೆಯ ಆಕಾಡೆಮಿಗಳಿಗೆ ಆಯ್ಕೆ ಮಾಡುವುದು ಕೂಡ ಸಂಬಂಧಿಸಿದ ಇಲಾಖೆಗೆ ಬಹು ದೊಡ್ಡ ಸವಾಲು. ಕೊನೆಗೂ ವಶೀಲಿ ಬಾಜಿಗಳೇ ಗೆಲ್ಲುವ ಸಂದರ್ಭದಲ್ಲಿ ಈ ಅಕಾಡೆಮಿಗಳು ಎಷ್ಟರ ಮಟ್ಟಿಗೆ ಅಧ್ಯಕ್ಷರ ಆಯ್ಕೆಯಲ್ಲಿ ಮತ್ತು ಅಂಥವರ ನೇತೃತ್ವದ ಕಾರ್ಯನಿರ್ವಹಣೆಯಲ್ಲಿ ನ್ಯಾಯ ಕೊಡಬಲ್ಲವು ಎನ್ನುವುದನ್ನು ಗಂಭೀರವಾಗಿ ಯೋಚಿಸಬೇಕಿದೆ.
ಅಕಾಡೆಮಿ ಚಟುವಟಿಕೆ ಅರ್ಥವತ್ತಾಗಬೇಕು
ಅದು ಯಾವುದೇ ಅಕಾಡೆಮಿ ಇರಲಿ, ಅದು ತನ್ನ ಸಾಂಪ್ರದಾಯಿಕ ಕಾರ್ಯಾಚರಣೆಯನ್ನು ಮೀರಿ ಕಾರ್ಯ ನಿರ್ವಹಿಸುವ ಅಗತ್ಯವಿದೆ. ಕೇವಲ ಒಂದಷ್ಟು ಗೋಷ್ಠಿ, ಕೆಲವು ಗ್ರಂಥ ಪ್ರಕಟನೆ, ಕೆಲವು ಕಾರ್ಯಾಗಾರಗಳನ್ನು ಸಾಂಪ್ರದಾಯಿಕವಾಗಿಯೇ ಮಾಡಿ ಮುಗಿಸುವ ಮೂಲಕ ಅಧ್ಯಕ್ಷರಾದವರು ಕೃತಾರ್ಥರಾಗಬೇಕಿಲ್ಲ. ಈ ಗೋಷ್ಠಿ, ಕಾರ್ಯಾಗಾರಗಳಲ್ಲಿಯೂ ಮತ್ತದೇ ಹಳೆಯ ಚಾಳಿ. ತಮಗೆ ಆಪ್ತರಾದವರಿಗೆ, ಪ್ರದೇಶದವರಿಗೆ ಪ್ರಥಮ ಪ್ರಾಶಸ್ತ$Â ಜತೆಗೆ ಅಕಾಡೆಮಿಯಲ್ಲಿರುವ ಹಳೆಯ ಹೆಸರುಗಳಿಗೆ ಪ್ರಾತಿನಿಧ್ಯ. ಹಾಗೆ ಮಾಡುವ ಬದಲಾಗಿ ಹೊಸ ಮುಖಗಳಿಗೆ ಅವಕಾಶ ನೀಡುವ, ಗುರುತಿಸುವ, ಪ್ರೋತ್ಸಾಹಿಸುವ ಕೆಲಸಗಳಾಗಬೇಕು. ಇಂಥ ಸಂದರ್ಭದಲ್ಲಿ ನಾ ನಿನಗಾದರೆ ನೀ ನನಗೆ ಎನ್ನುವ ತತ್ವದ ಮಗ್ಗಲು ಮುರಿಯುವ ಆವಶ್ಯಕತೆಯಿದೆ. ಅಕಾಡೆಮಿಗಳ ಕಾರ್ಯಚಟುವಟಿಕೆಗಳನ್ನು ಇನ್ನಷ್ಟು ಅರ್ಥವತ್ತಾಗಿ ರೂಪಿಸುವ ಕಡೆಗೆ ಗಮನಹರಿಸುವ ಅಗತ್ಯವಿದೆ.
ಹಾಗಾಗಿಯೇ ಸಂಬಂಧಿಸಿದ ಪ್ರಕಾರದಲ್ಲಿ ಸಾಕಷ್ಟು ಕೆಲಸ ಮಾಡಿರುವ ಕ್ರಿಯಾಶೀಲ ಮತ್ತು ಸೃಜನಶೀಲ ಮನೋಭಾವದವರು ಈ ಅಧ್ಯಕ್ಷರ ಹುದ್ದೆಗೆ ಬರುವಂತಾಗಬೇಕು. ಅಂಥವರು ಆಯ್ಕೆಯಾಗುವ ಅವಕಾಶ ಸೃಷ್ಟಿಯಾಗಬೇಕು. ಅಕಾಡೆಮಿ ಅಧ್ಯಕ್ಷರ ಹುದ್ದೆ ಅತ್ಯಂತ ಸೂಕ್ಷ್ಮವಾದುದು. ಅಂದಾದುಂದಿಯ ಕಾರ್ಯಭಾರ ಇಲ್ಲಿ ನಡೆಯಬಾರದು. ನಾಡಿನ ಭಾಷೆ ಮತ್ತು ಸಂಸ್ಕೃತಿಯ ಸಂರಕ್ಷಣೆಯ ಗುರುತರ ಹೊಣೆಗಾರಿಕೆ ಈ ಬಗೆಯ ಅಕಾಡೆಮಿ ಮತ್ತು ಪ್ರಾಧಿಕಾರಗಳ ಮೇಲಿದೆ. ಅನೇಕ ಸಮರ್ಥರನ್ನು ತನ್ನ ಅಸಮರ್ಥನೀಯ ಮಾರ್ಗಗಳ ಮೂಲಕ ಹಿಂದೆ ಹಾಕಿ ಮುಂದೆ ಹೋದವನ ಆಲೋಚನಾ ಕ್ರಮದಲ್ಲಿಯೇ ಭ್ರಷ್ಟತೆ ಇರುವಾಗ ಅಂಥವರ ನೇತೃತ್ವದಲಿಲ ನ್ಯಾಯಸಮ್ಮತವಾದ ಕೆಲಸಗಳನ್ನು ಅಕಾಡೆಮಿಯಿಂದ ನಿರೀಕ್ಷಿಸಲು ಸಾಧ್ಯವೆ?
ಕೆಲವರು ಅಧಿಕಾರಾವಧಿಯಲ್ಲಿರುವಾಗ ಮಹತ್ತರವಾದುದನ್ನು ಮಾಡಲು ಅವಕಾಶಗಳಿರುವಾಗಲೂ ದಿನ ದೂಡುವ ಮೂಲಕ ದಡ ತಲುಪಿ, ಮತ್ತೂಂದು ಅವಧಿಗೆ ಮುಂದುವರಿಯುವ ಬಗ್ಗೆ ಕನಸು ಕಾಣುವುದಿದೆ. ಆ ಬಗೆಯ ಸಾಧ್ಯತೆಗಳು ಕೂಡ ಇಲ್ಲದಿಲ್ಲ. ಹೇಗೂ ಹೊಸ ನೇಮಕಾತಿ ಆಗುವವರೆಗೆ ಒಂದು ವರ್ಷ ಕಳೆದರೂ ಅಚ್ಚರಿಯಿಲ್ಲ ಎನ್ನುವ ಭರವಸೆಯ ಮೇಲೆ ಈ ಬಗೆಯ ಕನಸುಗಳು ಅವರಲ್ಲಿ ಮೂಡಿರಲಿಕ್ಕೂ ಸಾಕು.
ಆಯ್ಕೆ ಸಾಮರ್ಥ್ಯ ಆಧರಿಸಿರಲಿ
ಸರಕಾರ ಅವಧಿ ಮುಗಿದ ತತ್‌ಕ್ಷಣ ಹೊಸ ಅಧ್ಯಕ್ಷರ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ತಡವಾದಷ್ಟು ಎಡವಟ್ಟುಗಳು ಹೆಚ್ಚುವ ಸಾಧ್ಯತೆಯಿರುತ್ತದೆ. ಅಕಾಡೆಮಿ ಅಧ್ಯಕ್ಷರ ಆಯ್ಕೆಯಲ್ಲಿ ಅತ್ಯಂತ ಪಾರದರ್ಶಕವಾದ ಮಾರ್ಗವನ್ನು ಸರಕಾರ ಅನುಸರಿಸಬೇಕು. ಯೋಗ್ಯ ಸ್ಥಾನಕ್ಕೆ ಯೋಗ್ಯ ವ್ಯಕ್ತಿ ಎನ್ನುವಂತೆ ಆಯ್ಕೆಯಾಗಬೇಕು. ಸಮರ್ಥರಾಗಿ, ಅಜ್ಞಾತರಂತೆ ಉಳಿದಿರುವವರನ್ನು ಆಯ್ಕೆ ಮಾಡುವಲ್ಲಿಯೇ ಆ ಇಲಾಖೆಯ ಘನತೆ ಅಡಕವಾಗಿರುತ್ತದೆ.
ಸ್ವಜನ ಪಕ್ಷಪಾತ, ಪ್ರಾದೇಶಿಕತೆ, ಜಾತಿ, ಧರ್ಮಗಳ ಹಂಗುಗಳನ್ನು ಹರಿದು ಪಕ್ಕಾ ಸಾಮರ್ಥ್ಯವನ್ನು ಆಧರಿಸಿ ಯೋಗ್ಯ ವ್ಯಕ್ತಿಯನ್ನು ಸರಕಾರ ಆಯ್ಕೆ ಮಾಡಬೇಕು. ದಿನಕ್ಕೆ ಹತ್ತಾರು ಬಾರಿ ಆ ಹುದ್ದೆಯ ಮೇಲಿನ ಮೋಹದಿಂದ ಸುತ್ತಿ ಸುಳಿಯುವ ಜಾಯಮಾನದವನು ಯಾವುದೇ ಕಾರಣಕ್ಕೂ ಅಕಾಡೆಮಿಗೆ ಘನತೆ ತರುವ ಕೆಲಸವನ್ನು ಮಾಡಲಾರರು. ಇಡೀ ವ್ಯವಸ್ಥೆಯೇ ಹಾಳಾಗಿರುವಾಗ ಯಾವುದೋ ಒಂದು ಇಲಾಖೆ, ಹುದ್ದೆ ಯಾಕೆ ನ್ಯಾಯಸಮ್ಮತವಾಗಿರಬೇಕು? ಎನ್ನುವ ಸಿನಿಕತನದ ಪ್ರಶ್ನೆಯನ್ನು ಕೇಳುವ ಬದಲು, ಆರೋಗ್ಯಕರವಾದ ಬದಲಾವಣೆ ಯಾವ ಮೂಲದಿಂದಲಾದರೂ ಸಾಧ್ಯವಾಗಲಿ ಎನ್ನುವ ಇತ್ಯಾತ್ಮಕ ಮನೋಭಾವವನ್ನು ನಾವು ಬೆಳೆಸಿಕೊಳ್ಳಬೇಕಿದೆ. ಅಕಾಡೆಮಿಗಳ ಅಧ್ಯಕ್ಷರ ಸ್ಥಾನ ನಿಗಮ ಮಂಡಳಿಗಳಂತಲ್ಲ, ಸಾಂಸ್ಕೃತಿಕ ರಾಯಭಾರಿಕೆಯನ್ನು ಅತ್ಯಂತ ಮೌಲಿಕವಾಗಿ ನಿಭಾಯಿಸುವ ಹೊಣೆಗಾರಿಕೆಯುಳ್ಳದ್ದು. ಅಹಿತಕರವಾದ ಮಾರ್ಗವನ್ನು ಕ್ರಮಿಸಿಯೇ ಆ ಹುದ್ದೆ ತಲುಪಿದಾತ ಖಂಡಿತವಾಗಿಯೂ ಆ ಹುದ್ದೆಯ ಮೌಲ್ಯವನ್ನು ಕಾಪಾಡಲಾರ. ಈಗಾಗಲೇ ಕೆಲವರು ತಮ್ಮ ಅಧ್ಯಕ್ಷ ಗಾದಿಯ ಅವಧಿ ಮುಗಿಯುವ ಹಂತಕ್ಕೆ ಬರುತ್ತಿರುವಾಗಲೇ ಯಥಾಸ್ಥಿತಿಯಲ್ಲೇ ಇನ್ನೊಂದು ವರ್ಷ, ಸಾಧ್ಯವಾದರೆ ಎರಡು ವರ್ಷ ಜಗ್ಗಬೇಕು ಎಂದು ತಿಪ್ಪರಲಾಗ ಹೊಡೆಯುತ್ತಿರುವವರನ್ನು ನಿರ್ಗಮಿಸುವಂತೆ ಸೂಚಿಸಬೇಕು. ಒಂದು ಬಾರಿ ಸದಸ್ಯರಾದವರಿಗೆ ಮತ್ತೆ ಅಲ್ಲಿ ಇಲ್ಲವೇ ಇನ್ನೊಂದು ಪ್ರಾಧಿಕಾರದಲ್ಲಿ ಸದಸ್ಯರಾಗಿ ಕಾರ್ಯ ನಿರ್ವಹಿಸುವ ಅವಕಾಶ ಮಾಡಿಕೊಡುವುದು ಕೂಡ ಸರಿಯಲ್ಲ. ರಾಜ್ಯದಲ್ಲಿ ಎಲ್ಲ ವಲಯಗಳಲ್ಲಿ ಸಾಕಷ್ಟು ಪ್ರತಿಭಾವಂತರಿದ್ದಾರೆ. ಮಾನವ ಸಂಪನ್ಮೂಲದ ಸದ್ಬಳಕೆ ಎನ್ನುವುದು ಹೊಸ ಕ್ರಿಯಾಶೀಲ ಮುಖಗಳಿಗೆ ಅವಕಾಶ ಒದಗಿಸಿಕೊಡುವುದರಲ್ಲಿಯೇ ಅಡಕವಾಗಿದೆ. ಆದಷ್ಟು ಬೇಗ ಸರಕಾರ ಅವಧಿ ಮುಗಿದ ಎಲ್ಲ ಅಕಾಡೆಮಿಗಳ ಅಧ್ಯಕ್ಷರ ಸ್ಥಾನಕ್ಕೆ ಸಮರ್ಥರನ್ನು ಆಯ್ಕೆ ಮಾಡುವಂತಾಗಲಿ.
ಡಾ| ಎಸ್. ಬಿ. ಜೋಗುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.