ಎದುರಾಗುತ್ತಿದೆ ನಮ್ಮ ಜವಾಬ್ದಾರಿಯ ಪರೀಕ್ಷೆ


Team Udayavani, May 10, 2018, 6:00 AM IST

11.jpg

ನಮ್ಮನ್ನು ಆಳುವ ವ್ಯಕ್ತಿಯ ಸಾಮರ್ಥ್ಯದ ಬಗ್ಗೆ ಮುಕ್ತವಾಗಿ ಚರ್ಚೆಗಳಾಗಬೇಕು. ಈ ಮೊದಲು ಕ್ಷೇತ್ರದಲ್ಲಿ ಆತ ಮಾಡಿದ ಕೆಲಸಗಳೇನು ಎನ್ನುವುದನ್ನು ಪಟ್ಟಿ ಮಾಡಬೇಕು. ಯಾವ ಯೋಜನೆಗಳನ್ನು ಅವರು ಕ್ಷೇತ್ರಕ್ಕೆ ತಂದಿದ್ದಾರೆ? ಎಷ್ಟು ಅನುದಾನವನ್ನು ಮಂಜೂರು ಮಾಡಿಸಿಕೊಂಡು ಬಂದಿದ್ದಾರೆ? ಅದರ ಸದ್ವಿನಿಯೋಗ ಎಷ್ಟರ ಮಟ್ಟಿಗೆ ಆಗಿದೆ? ಅಭಿವೃದ್ಧಿ ಕೆಲಸಗಳೇನಾಗಿವೆ? ವೈಯಕ್ತಿಕವಾಗಿ ಮತ್ತು ಸಾಮಾಜಿಕವಾಗಿ ಅಭ್ಯರ್ಥಿಯ ನಡವಳಿಕೆ ಹೇಗಿದೆ? ಒಟ್ಟಾರೆ ಅಭ್ಯರ್ಥಿಯ ಬದ್ಧತೆಯ ಬಗ್ಗೆ ಮುಕ್ತ ವಿಶ್ಲೇಷಣೆ-ಚರ್ಚೆಗಳು ಅಗತ್ಯ.

ರಾಜ್ಯದ 223 ಕ್ಷೇತ್ರಗಳಲ್ಲಿ ಒಂದೇ ಹಂತದಲ್ಲಿ ಮೇ 12 ರಂದು ಚುನಾವಣೆ ನಡೆಯಲಿದೆ. ಮತದಾರರ ಪಟ್ಟಿ ಪ್ರಕಾರ ರಾಜ್ಯ ಚುನಾವಣೆಗಾಗಿ 18ರಿಂದ 29 ವರ್ಷ ವಯಸ್ಸಿನ 8,24,000 ಹೊಸ ಮತದಾರರನ್ನು ನೋಂದಾಯಿಸಲಾಗಿದೆ. ಕಳೆದ 5 ವರ್ಷ ಗಳಲ್ಲಿ ಮತದಾರರ ಅನುಪಾತವು ಏಕರೀತಿ ಇದ್ದರೂ “ಯುವ ಮತದಾರರ’ ಅನುಪಾತವು 2.2 ಪ್ರತಿಶತಕ್ಕೆ ಏರಿಕೆಯಾಗಿದೆ.

ಅಚ್ಚರಿಯ ವಿಷಯವೆಂದರೆ ಒಟ್ಟು ಮತದಾರರ ಪೈಕಿ 20 ರಿಂದ 40 ವಯೋಮಾನದವರೇ 25% ಪ್ರತಿಶತದಷ್ಟಿದ್ದು ಉಳಿದ ವಯೋ ಮಾನದವರಿಗಿಂತ ಅವರೇ ಅತಿ ಹೆಚ್ಚು ಪ್ರಮಾಣದಲ್ಲಿರು ವುದರಿಂದ ನಿರ್ಣಾಯಕ ಪಾತ್ರ ವಹಿಸುವ ಶಕ್ತಿ ಅವರಿಗಿದೆ. ಆದರೆ ಗಮನಿಸಬೇಕಾದ ಅಂಶವೆಂದರೆ, ಇವಿಷ್ಟೂ ಜನರು ವೋಟನ್ನು ಹಾಕುವುದೇ ಅನುಮಾನ! ಈ ಅನುಮಾನಕ್ಕೆ ಕಾರಣವೂ ಇದೆ. ಅನಿವಾರ್ಯ ಕಾರಣಗಳನ್ನು ಪರಿಗಣಿಸಿದರೂ ಕನಿಷ್ಟ 100ರಲ್ಲಿ 90 ಜನರು ವೋಟು ಹಾಕಬೇಕಿತ್ತು. ಆದರೆ ಹಿಂದಿನ ಲೋಕಸಭೆ ಚುನಾವಣೆಗಳ ಲೆಕ್ಕ ತೆಗೆದು ನೋಡಿದರೆ, 2004ರಲ್ಲಿ ಪುರುಷ ಮತದಾರರಲ್ಲಿ 67.2% ಮಾತ್ರ ಮತ ಚಲಾಯಿಸಿದರೆ, ಮಹಿಳೆ ಯರಲ್ಲಿ 63% ಮಾತ್ರ ಹಕ್ಕನ್ನು ಚಲಾಯಿಸಿದರು. 2009ರ ಮತ ದಾನದ ಪ್ರಮಾಣ ಏರಿಕೆಯಾಗುವುದರ ಬದಲು ಇಳಿಮುಖ ವಾಯಿತು! 2009ರಲ್ಲಿ 60.9% ಪುರುಷರು ಮತ್ತು 56.6% ಮಹಿಳೆಯರು ಮಾತ್ರ ಮತ ಚಲಾಯಿಸಿದ್ದರು.    

ಇನ್ನೂ ಸ್ವಲ್ಪ ಹಿಂದಿನ ಲೆಕ್ಕ ತೆಗೆದು ನೋಡೋಣ. 1957ರಲ್ಲಿ ನಮ್ಮ 100 ಜನರಲ್ಲಿ 70 ಜನ ಮತ ಚಲಾಯಿಸಿದ್ದೆವು. ಅದಾದ ಮೇಲೆ ಏನಾಯಿತೇನೋ ಗೊತ್ತಿಲ್ಲ, ಕಳೆದ ನಾಲ್ಕು ಚುನಾವಣೆಗಳಲ್ಲಿ (ವಿಧಾನಸಭೆ ಮತ್ತು ಲೋಕಸಭೆ) ನಾವು 100ರಲ್ಲಿ ಅಂದಾಜು 65 ಜನರು ಮಾತ್ರ ಮತ ಚಲಾಯಿಸಿದ್ದೇವೆ. (ವಿಧಾನ ಸಭೆ ಚುನಾವಣೆಗಳಲ್ಲಿ 1994ರಲ್ಲಿ 69, 1999ರಲ್ಲಿ 68, 2007ರಲ್ಲಿ 66 ಮತ್ತು 2008ರಲ್ಲಿ 65 ಮತ್ತು ಲೋಕಸಭೆ ಚುನಾವಣೆ 2004ರಲ್ಲಿ 65% ಮತ್ತು 2009ರಲ್ಲಿ 59%). ಉಳಿದ 35 ಜನರು ಮತದಾನದ ಹಕ್ಕು ಚಲಾಯಿಸಿಲ್ಲ. ತಮ್ಮಿಂದ ಆಗಬೇಕಾದ್ದೇನೂ ಇಲ್ಲ ಎಂದು ಇವರೆಲ್ಲ ನಿರ್ಣಯ ಮಾಡಿದಂತಿದೆ. ನಾಳೆಯ ದಿನಗಳಲ್ಲಿ ಪ್ರತಿಯೊಂದು ಸಮಸ್ಯೆಗೂ ನಮ್ಮನ್ನಾಳುವವರನ್ನು ಪ್ರಶ್ನಿಸುವ ಹಕ್ಕೂ ಇವರಿಗಿರುವುದಿಲ್ಲ. ಏಕೆಂದರೆ ಅವರ ಆಯ್ಕೆಯಲ್ಲಿ ಇವರ ಪಾತ್ರ ಶೂನ್ಯ. ಉಳಿದ 35 ಜನರಲ್ಲಿ ಕನಿಷ್ಟ 25 ರಿಂದ 30 ಜನರು ಮತದಾನದ ಹಕ್ಕನ್ನು ಚಲಾಯಿಸಿದ್ದೇ ಆಗಿದ್ದಲ್ಲಿ ಇಲ್ಲಿಯವರೆಗಿನ ಫ‌ಲಿತಾಂಶಗಳೆಲ್ಲ ಬೇರೆಯದೇ ರೂಪ ಪಡೆದಿರುತ್ತಿದ್ದವೇನೋ?   

ಕರ್ನಾಟಕದಲ್ಲಿ ಮತದಾನದ ಪ್ರಮಾಣ ಹೀಗೆ ಕೆಳಮುಖ ಹಾದಿ ಹಿಡಿದಿದ್ದರೆ, ಪಕ್ಕದ ತಮಿಳುನಾಡಿನ ಮತದಾರ 2001ರಲ್ಲಿ 59, 2006ರಲ್ಲಿ 70, 2011ರಲ್ಲಿ 78 ಪ್ರತಿಶತ ಮತ ಚಲಾಯಿಸಿ ಹಂತಹಂತವಾಗಿ 90ರ ಆಜುಬಾಜು ಬರಲು ಉತ್ಸುಕರಾಗಿದ್ದಾರೆ. ಪ್ರತಿ ಚುನಾವಣೆಯಲ್ಲಿ ಈ ಪ್ರಮಾಣ ಏರಿಕೆ ಕಂಡಿದೆಯೇ ಹೊರತು ಇಳಿಕೆಯಂತೂ ಸುಳ್ಳು. ಹಿಂದುಳಿದ ಪ್ರದೇಶವೆಂದು ಕರೆ ಯಿಸಿಕೊಳ್ಳುವ ಉತ್ತರ ಪ್ರದೇಶದಲ್ಲೂ ಇತ್ತೀಚಿನ ಚುನಾವಣೆ ಯಲ್ಲಿ 14 ಪ್ರತಿಶತ ಹೆಚ್ಚಿನ ಮತದಾನ ಪ್ರಮಾಣ ಕಂಡುಬಂದಿದೆ. (2007ರಲ್ಲಿ 46 ಪ್ರತಿಶತ ಮತ್ತು 2012ರಲ್ಲಿ 60 ಪ್ರತಿಶತ).

ಈ ಅಂಕಿ ಅಂಶಗಳು ಮತದಾನದ ಪ್ರಮಾಣ ಮತ್ತು ಅದರ ಫ‌ಲಿತಾಂಶಗಳ ಸಂಬಂಧಗಳನ್ನು ಎತ್ತಿ ತೋರಿಸುತ್ತವೆ. ನಾವು, ಪ್ರಜೆಗಳೇ ಪ್ರಭುಗಳಾಗಿರುವ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶದ ವರು ಎಂದು ಹೇಳಿಕೊಳ್ಳುವಾಗ ಮೇಲಿನ ಅಂಕಿ ಅಂಶಗಳು ತರ್ಕಕ್ಕೆ ಈಡುಮಾಡುತ್ತವೆ. ಅರ್ಧಕ್ಕಿಂತ ತುಸು ಹೆಚ್ಚು ಜನ ಮಾತ್ರ ಮತದಾನ ಮಾಡಿ ಗೆಲ್ಲಿಸಿದ ರಾಜಕಾರಣಿಯೊಬ್ಬ ಹೇಗೆ ಎಲ್ಲರ ಪ್ರತಿನಿಧಿಯಾಗುತ್ತಾನೆ? ಉಳಿದ ಅರ್ಧಕ್ಕಿಂತ ಸ್ವಲ್ಪ ಕಡಿಮೆ ಇರುವ ಜನರಿಗೆ ಇದನ್ನು ಅರ್ಥಮಾಡಿಸುವುದು ಹೇಗೆ ಎಂಬುದರ ಬಗ್ಗೆ ಚಿಂತಿಸಿ ಪರಿಹಾರ ಕಂಡುಹಿಡಿಯುವುದಕ್ಕೆ ಇದು ಸಕಾಲ.

ಇದೇ ಮೇ 12 ರಂದು ಮತದಾರನ ಜವಾಬ್ದಾರಿಯ ಪರೀಕ್ಷೆ ಎದುರಾಗಲಿದೆ. ವರ್ಷಗಟ್ಟಲೇ ದುಂಬಾಲುಬಿದ್ದು, ಹೆಣಗಾಡಿ ಟಿಕೆಟ್‌ಗಿಟ್ಟಿಸಿದ ಅಭ್ಯರ್ಥಿಗೂ ಇದು ಅಗ್ನಿ ಪರೀಕ್ಷೆ. ಅದೇಕೋ ಮತದಾರರು ನಿರ್ಣಾಯಕ ಹಂತ (ಪೀಕ್‌ ಪಿರಿಯಡ್‌)ದಲ್ಲಿ ಎಡವಿಬಿಡುತ್ತಾರೆ. ಇದರಿಂದಾಗಿ ರಾಜಕೀಯ ಪಕ್ಷಗಳ ಮತ್ತದೇ ರಾದ್ಧಾಂತಗಳು, ಮತ್ತದೇ ಗೋಳು, ಅಸಹನೆ, ರೇಜಿಗೆ ಪುನರಾ ವರ್ತನೆಯಾಗುತ್ತದೆ. ಕೆಲ ಸುಶಿಕ್ಷಿತ ವರ್ಗದ ಜನರಂತೂ ಇದೊಂದು ರಗಳೆ, ಮತ್ತಿದರ ಗೊಡವೆಯೇ ಬೇಡವೆಂಬಂತೆ ಮತದಾನವನ್ನು ತಿರಸ್ಕರಿಸುತ್ತಾರೆ. ಅರೇ, ನೀವು, ನಾವು ತಿರಸ್ಕರಿ ಸಿದ ಮಾತ್ರಕ್ಕೆ ಆಯ್ಕೆಗೊಂಡ ಅಭ್ಯರ್ಥಿ ನಮ್ಮನ್ನು ಪ್ರತಿನಿಧಿಸದೇ ಇರುತ್ತಾನೆಯೇ? ಅಥವಾ ಮತದಾನವನ್ನು ತಿರಸ್ಕರಿಸಿದವರಿ ಗಾಗಿಯೇ ಒಬ್ಬ ನಾಯಕನೇನಾದರೂ ಹುಟ್ಟುತ್ತಾನೆಯೇ? ಇಲ್ಲ ವಲ್ಲ? ಈ ಹಕ್ಕನ್ನು ತಿರಸ್ಕರಿಸುವುದರಿಂದ ನಮ್ಮ ಪ್ರಜಾಪ್ರಭುತ್ವವನ್ನು ನಾವೇ ವಿರೋಧಿಸಿದಂತೆ ಅಲ್ಲವೇ? 

ನಮ್ಮಲ್ಲಿ ಕೆಲವರು ಈ ಹಕ್ಕನ್ನು ಮಾರಿಕೊಳ್ಳುವುದಕ್ಕೂ ರೆಡಿ ಯಾಗುತ್ತಾರೆ. ಏಕೆಂದರೆ ಇವರಲ್ಲಿ ಯಾರಿಗೆ ಮತ ಹಾಕಬೇಕು ಎನ್ನುವುದರ ವಿವೇಚನಾ ಶಕ್ತಿ ಇಲ್ಲದೇ ಇರುವುದು ಮತ್ತು ಅವರನ್ನು ಆರಿಸಿ ತಂದರೆ ಮುಂದೆ ಆಗಬಹುದಾದ ಪರಿಣಾಮಗಳ ಬಗ್ಗೆ ದೂರದೃಷ್ಟಿ ಇಲ್ಲದಿರುವುದು. ಆ ಕ್ಷಣದಲ್ಲಿ ಅಭ್ಯರ್ಥಿ ನೀಡುವ ಹಣ ಅಥವಾ ಇನ್ನಾವುದೋ ಆಮಿಷಕ್ಕೆ ಬಲಿಯಾಗಿ ಇವರು ಅಮೂಲ್ಯ ಮತವನ್ನೇ ಮಾರಿಕೊಂಡುಬಿಡುತ್ತಾರೆ. ಈ ತಪ್ಪು ಮುಂದೆ 5 ವರ್ಷಗಳವರೆಗೂ ಕಾಡುತ್ತದೆ ಎಂಬ ಅಂಶವನ್ನು ಗಮನಿಸಬೇಕಾಗುತ್ತದೆ. 

ನಮ್ಮನ್ನು ಆಳುವ ವ್ಯಕ್ತಿಯ ಸಾಮರ್ಥ್ಯದ ಬಗ್ಗೆ ಮುಕ್ತವಾಗಿ ಚರ್ಚೆಗಳಾಗಬೇಕು. ಈ ಮೊದಲು ಕ್ಷೇತ್ರದಲ್ಲಿ ಆತ ಮಾಡಿದ ಕೆಲಸಗಳೇನು ಎನ್ನುವುದನ್ನು ಪಟ್ಟಿ ಮಾಡಬೇಕು. ಯಾವ ಯೋಜನೆಗಳನ್ನು ಅವರು ಕ್ಷೇತ್ರಕ್ಕೆ ತಂದಿದ್ದಾರೆ? ಎಷ್ಟು ಅನುದಾನ ವನ್ನು ರಾಜ್ಯ-ಕೇಂದ್ರದಿಂದ ಮಂಜೂರು ಮಾಡಿಸಿಕೊಂಡು ಬಂದಿದ್ದಾರೆ? ಅದರ ಸದ್ವಿನಿಯೋಗ ಎಷ್ಟರ ಮಟ್ಟಿಗೆ ಆಗಿದೆ? ಅಭಿವೃದ್ಧಿ ಕೆಲಸಗಳೇನಾಗಿವೆ? ವೈಯಕ್ತಿಕವಾಗಿ ಮತ್ತು ಸಾಮಾ ಜಿಕವಾಗಿ ಅಭ್ಯರ್ಥಿಯ ನಡವಳಿಕೆ ಹೇಗಿದೆ? ಆರೋಗ್ಯ, ವೈಯಕ್ತಿಕ ಬದುಕು ಅವರಿಗೆ ಕೆಲಸ ಮಾಡಲು ಪೂರಕವಾಗಿವೆಯೇ? ಸುಶಿಕ್ಷಿತರಾ? ತಕ್ಕ ಮಟ್ಟಿಗಾದರೂ ವಿದ್ಯಾಭ್ಯಾಸವಾಗಿ ದೆಯೇ? ಪಕ್ಷದಲ್ಲಿ ನಿಷ್ಠಾವಂತರಾಗಿದ್ದಾರೋ ಅಥವಾ ಪಕ್ಷಾಂತರವನ್ನೇ ಅಭ್ಯಾಸ ಮಾಡಿಕೊಂಡಿದ್ದಾರೋ? ಒಟ್ಟಾರೆ ಅಭ್ಯರ್ಥಿಯ ಬದ್ಧತೆಯ ಬಗ್ಗೆ ಮುಕ್ತವಾಗಿ ವಿಶ್ಲೇಷಣೆ-ಚರ್ಚೆಗಳಾಗಬೇಕು. ಯೋಗ್ಯ ವ್ಯಕ್ತಿಯೊಬ್ಬರು ಟಿಕೆಟ್‌ ವಂಚಿತರಾಗಿ ಹತಾಶರಾಗಿದ್ದಲ್ಲಿ ಕಣದಿಂದ ಹಿಂದೆ ಸರಿಯದೇ ಪಕ್ಷೇತರರಾಗಿಯಾದರೂ ಸ್ಪರ್ಧಿ ಸುವಂತೆ ಬೆಂಬಲಿಸಬೇಕು. ಹಾಲಿ ಇರುವ ಅಭ್ಯರ್ಥಿಯ ಕಾರ್ಯದಕ್ಷತೆಯನ್ನು ಅಳೆದು ತೂಗಬೇಕು. ಆಯಾ ಕ್ಷೇತ್ರಗಳಲ್ಲಿ ಸುಶಿಕ್ಷಿತರಾದವರು, ಶ್ರೀಸಾಮಾನ್ಯರಿಗೆ ಇದರ ಅರಿವನ್ನುಂಟು ಮಾಡಿಕೊಡಬೇಕು. ಒಂದು ಬಾರಿ ಈ ಬಗ್ಗೆ ಶ್ರೀಸಾಮಾನ್ಯ ಜಾಗೃತ ಗೊಂಡರೆ ಆತ ಯಾವುದೇ ಆಮಿಷಕ್ಕೂ ಅಷ್ಟು ಸುಲಭವಾಗಿ ಬೀಳಲಾರ. ವಿವಿಧ ಸಂಘ ಸಂಸ್ಥೆಗಳು ಮುಕ್ತ ಚರ್ಚೆಗಳನ್ನು ಏರ್ಪಡಿಸಿ ಸಾಧ್ಯವಾದಷ್ಟು ಮತದಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಬೇಕು. ಮಹಿಳೆಯರ ಮತದಾನದ ಪ್ರಮಾಣವನ್ನು ಹೆಚ್ಚಿಸುವುದು ಅತ್ಯಗತ್ಯವಾಗಿದ್ದು ಮಹಿಳಾ ಸಂಘಟನೆಗಳು ಇದಕ್ಕೆ ಪಣತೊಡಬೇಕಿದೆ. ಪದವಿ ಕಾಲೇಜುಗಳಲ್ಲಿ ಉಪನ್ಯಾಸಕ ವರ್ಗವು ವಿದ್ಯಾರ್ಥಿಗಳಿಗೆ ಮತದಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲಿ. ಯಾವೊಬ್ಬ ವಿದ್ಯಾರ್ಥಿಯೂ ಮತ ದಾನ ಮಾಡದೇ ಉಳಿಯದಂತೆ ಮಾಡಬೇಕಿದೆ. ಕುಟುಂಬದ ಪ್ರತಿಯೊಬ್ಬರೂ ತಮ್ಮ ಹಾಗೂ ತಮ್ಮ ಕುಟುಂಬದ ಸದಸ್ಯರ 
ಹೆಸರು ಮತದಾರರ ಪಟ್ಟಿಯಲ್ಲಿ ಇದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಿಕೊಳ್ಳಬೇಕಿದೆ. ಹೊಸ ಮತದಾರರು ಇನ್ನೊಬ್ಬರನ್ನು ಅನುಸರಿಸದೇ ಸ್ವಂತ ಮತ್ತು ಸಮಚಿತ್ತದ ನಿರ್ಣಯ ತೆಗೆದುಕೊಳ್ಳಬೇಕು.    

ಈಗಾಗಲೇ ಚುನಾವಣೆ ಆಯೋಗವು ದಕ್ಷ ಅಧಿಕಾರಿ ವರ್ಗ ವನ್ನು ಚುನಾವಣೆಗೆ ನೇಮಿಸಿದೆ. ಜನಸಾಮಾನ್ಯರಿಗೆ ಸರಿಯಾದ ಮಾಹಿತಿ ಕೊಡಲು ಪ್ರಾರಂಭಿಸಿದ್ದು, ನಕಲಿ ಮತದಾನ ಮತ್ತು ತಿರಸ್ಕೃತ ಮತದಾನದ ಪ್ರಮಾಣವು ಆದಷ್ಟು ಕಡಿಮೆ ಆಗಲೆಂದು ಪಣತೊಟ್ಟಿದೆ. ಕನಿಷ್ಟ ಪಕ್ಷ ನಮ್ಮ ಮತದಾನದ ಪ್ರಮಾಣ 90 ಪ್ರತಿಶತ ದಾಟಿದರೆ ಸುಭದ್ರ ಸರ್ಕಾರ ನೆಲೆಯೂರುವಲ್ಲಿ ಸಂದೇಹವಿಲ್ಲ. ಚುನಾವಣಾ ದಿನದಂದು ನಮ್ಮೆಲ್ಲ ವೈಯಕ್ತಿಕ ಕಮಿಟ್‌ಮೆಂಟ್‌ಗಳನ್ನು ಬದಿಗೊತ್ತಿ ಅಸಡ್ಡೆ ಮಾಡದೇ ಮತದಾನದಲ್ಲಿ ಪಾಲ್ಗೊಂಡು ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿಯೋಣ. ಏಕೆಂದರೆ ಮುಂದಿನ 5 ವರ್ಷಗಳಿಗಾಗಿ ನಾವು ಕಣದಲ್ಲಿರುವ ಅಭ್ಯರ್ಥಿಗಳ ಜೊತೆಗೆ ಕಮಿಟ್‌ ಆಗಬೇಕಿದೆಯಲ್ಲ!

ಡಾ. ಅಶೋಕ ಪಾಟೀಲ 

ಟಾಪ್ ನ್ಯೂಸ್

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

One Nation, One Election; ಏಕ ಚುನಾವಣೆ: ಸಾಂವಿಧಾನಿಕ ಸವಾಲು

One Nation, One Election; ಏಕ ಚುನಾವಣೆ: ಸಾಂವಿಧಾನಿಕ ಸವಾಲು

Train ಹಳಿ ಧ್ವಂಸ ತಡೆಯಲು ನಾವೇನು ಮಾಡಬಹುದು?

Train ಹಳಿ ಧ್ವಂಸ ತಡೆಯಲು ನಾವೇನು ಮಾಡಬಹುದು?

3-

Investigative Authorities: ಕುಸಿಯುತ್ತಿದೆ ತನಿಖಾ ಪ್ರಾಧಿಕಾರಗಳ ವಿಶ್ವಾಸಾರ್ಹತೆ !

ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

Employment: ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.