ವೇದಿಕೆಗೆ ಸೀಮಿತವಾಗಬೇಕೇ ಕೃಷಿ ಅಭಿವೃದ್ಧಿ?
Team Udayavani, Jul 18, 2017, 7:29 AM IST
ಕೃಷಿ ಮತ್ತು ಕೃಷಿಕನ ಸೋಲಿಗೆ ಕಾರಣ ನಮ್ಮ ಅಭಿವೃದ್ಧಿ ನೀತಿಗಳು. ಆಡಳಿತಗಾರರಿಗೆ ಇದೆಲ್ಲ ಅರ್ಥವಾಗುವುದಿಲ್ಲ. ಅವರೆಲ್ಲ “ಅರ್ಥ’ದ ಅಭಿವೃದ್ಧಿಯ ಲೆಕ್ಕಾಚಾರದಲ್ಲಿದ್ದಾರೆ. ಆರ್ಥಿಕ ಬೆಳೆ ಮೇಳೈಸುತ್ತಾ (ಒಂದು ಹಂತದಲ್ಲಿ ಅದೂ ಕುಸಿಯಲಾರಂಭಿಸೀತು) ಆಹಾರ ಬೆಳೆಯ ವಿಸ್ತಾರ ಕುಸಿಯುತ್ತಿರುವುದು ಅನಭಿವೃದ್ಧಿಯ ಲಕ್ಷಣ. ಕೃಷಿ ಭೂಮಿ ಅದರಲ್ಲೂ ಆಹಾರ ಬೆಳೆಯ ಭೂಮಿಯನ್ನು ಉಳಿಸಿಕೊಳ್ಳದೇ ಹೋದರೆ ಭವಿಷ್ಯದಲ್ಲಿ ಎದುರಾಗುವ ಪರಿಸರ ಸಂಬಂಧಿ ಸವಾಲುಗಳನ್ನು ಮತ್ತು ಉಣ್ಣುವುದಕ್ಕೆ ಒದಗಬಹುದಾದ
ಸಂಕಟವನ್ನು ನಿಭಾಯಿಸುವುದೆಂತು?
ಕೃಷಿ ಮತ್ತು ಪರಿಸರ ಸಂಬಂಧಿ ಸುದ್ದಿಗಳೇಕೆ ನಮಗೆ ಶಾಕ್ ನೀಡುತ್ತಿಲ್ಲ? ಪತ್ರಿಕೆಯ ಯಾವ್ಯಾವುದೋ ಸುದ್ದಿಗಳ ಬಗ್ಗೆ, ಟಿ.ವಿ. ಸಮಾಚಾರಗಳ ಬಗ್ಗೆ ಚರ್ಚಿಸುವ, ನಿದ್ದೆ ಬಿಡುವ ನಮಗೆ ಇತ್ತಿತ್ತಲಾಗಿ ಯಾವ ವಿಷಯಕ್ಕೆ ಆದ್ಯತೆ ಕೊಡಬೇಕೆಂಬುದು ಗೌಣವಾಗುತ್ತಿದೆಯೇ? ಈ ಪೀಠಿಕೆ ಏಕೆಂದರೆ ಇತ್ತೀಚೆಗೆ ಇದೇ ಪತ್ರಿಕೆಯಲ್ಲಿ ಕೃಷಿಯ ಬಗೆಗಿನ ಒಂದು ವರದಿ ಪ್ರಕಟವಾಗಿತ್ತು. ಅದೇನೆಂದರೆ, “”ಬೆಳ್ತಂಗಡಿ ತಾಲೂಕಿನಲ್ಲಿ ಕೇವಲ ನಾಲ್ಕೇ ವರ್ಷಗಳಲ್ಲಿ 3,790 ಹೆಕ್ಟೇರ್ ಭತ್ತದ ಕೃಷಿ ಕುಸಿದಿದೆ” (ಎಲ್ಲ ತಾಲೂಕುಗಳಲ್ಲೂ ಪರಿಸ್ಥಿತಿ ಒಂದೇ). ನಿಜಕ್ಕೂ ನಿದ್ದೆಗೆಡಿಸುವ ವರದಿಯಿದು. ಹಾಗಿದ್ದರೆ ಕುಸಿದ ಭತ್ತದ ಕೃಷಿ ವ್ಯಾಪ್ತಿಯಲ್ಲಿ ಹೆಚ್ಚಾದ ಚಟುವಟಿಕೆಗಳಾವುವು? ಆಹಾರ ಬೆಳೆ ವ್ಯಾಪ್ತಿ ಕಡಿಮೆ ಆಗಿ ಆರ್ಥಿಕ ಬೆಳೆ ಹೆಚ್ಚಾಯಿತೇ? ಅಥವಾ ಕೃಷಿ ಭೂಮಿ ಕೃಷಿಯೇತರ ಭೂಮಿಯಾಗಿ ಪರಿವರ್ತಿತವಾಯಿತೇ? ಕೃಷಿಯೇತರವೆಂದಾದರೆ ಅದು ಯಾವುದು? ಎಂಬ ಪ್ರಶ್ನೆಗಳನ್ನು ಕೇಳಬೇಕಾಗಿದೆ. ಕೃಷಿ ಭೂಮಿ ಅದರಲ್ಲೂ ಆಹಾರದ ಬೆಳೆ ವಿಸ್ತಾರ ಕುಸಿಯುವುದೆಂದರೆ ಆತಂಕದ ವಿಚಾರ.
ಇವತ್ತು ಕೃಷಿಗೆ ವ್ಯಾಪಕ ಪ್ರಚಾರ, ಒತ್ತು ಸಿಗುತ್ತಿದೆ. ಕೃಷಿಕನಿಗೆ ಸಮ್ಮಾನ, ಪ್ರಶಸ್ತಿಗಳೂ ಲಭಿಸುತ್ತವೆ. ಆದರೆ “”ನಾನು ಕೃಷಿಕ ನನ್ನ ಮಗ ಕೃಷಿಕನಾಗುವುದು ಬೇಡ” ಎಂಬ ಮನೋಭಾವ ಬೆಳೆಯುತ್ತಿದೆ. ಸಾಮಾಜಿಕ ಸ್ಥಾನಮಾನಗಳು, ಕೌಟುಂಬಿಕ ಭಾಗ್ಯಗಳು ಗತಕಾಲದ ವೈಭವಗಳಾಗುತ್ತಿವೆ. ಇದಕ್ಕೆಲ್ಲ ನಮ್ಮ ರಾಜಕಾರಣಿಗಳಲ್ಲಿ, ಆಡಳಿತಗಾರರಲ್ಲಿ ಉತ್ತರವಿದೆಯೆ? ಕೈ ಕೆಸರಾದರೆ ಬಾಯಿ ಮೊಸರು ಎಂಬ ಗಾದೆ ಮೌಲ್ಯ ಕಳಕೊಂಡು ಯಾರ ಕೈ ಕೆಸರಾದರೆ ಯಾರ ಬಾಯಿ ಮೊಸರು? ಎಂದು ಕೇಳುವಂತಾಗಿದೆ. ಕೈ ಕೆಸರಾಗದೆ ಬಾಯಿ ಮೊಸರು ಎಂದು ಹೇಳ್ಳೋಣವೆ?
ಕೃಷಿಗೆ ಸಂಬಂಧಿಸಿದಂತೆ ದೇಶದ ಸ್ಥಿತಿ-ಗತಿಯ ಬಗ್ಗೆ ಪತ್ರಿಕಾ ವರದಿ ಏನು ಹೇಳುತ್ತದೆಯೆಂದರೆ ಒಟ್ಟಾರೆಯಾಗಿ 6 ಲಕ್ಷ ಹೆಕ್ಟೇರ್ ಕೃಷಿ ಭೂಮಿ ಕೃಷಿಯೇತರ ಭೂಮಿಯಾಗಿ ಪರಿವರ್ತಿತವಾಗಿದೆ. ಪ್ರತೀ ವರ್ಷ 6000 ಹೆಕ್ಟೇರ್ ಕೃಷಿ ಭೂಮಿ ಕೃಷಿಯೇತರ ಭೂಮಿಯಾಗಿ ಮಾರ್ಪಡುತ್ತಿದೆ. ಇದೇ ಅವಧಿಯಲ್ಲಿ 11,64,000 ಹೆಕ್ಟೇರ್ ಪ್ರದೇಶದಲ್ಲಿ ವಾಣಿಜ್ಯ ಬೆಳೆ ಹೆಚ್ಚಳವಾಗಿದೆ. ಕಳವಳಕಾರಿ ವಿಷಯವೇನೆಂದರೆ ಕಳೆದೊಂದು ವರ್ಷದಲ್ಲಿ 73,000 ಹೆಕ್ಟೇರ್ ಭೂ ವಿಸ್ತಾರದಲ್ಲಿ ಆಹಾರ ಬೆಳೆ ಕುಂಠಿತವಾಗಿರುವುದು. ಹೀಗೆಯೇ ಮುಂದುವರಿದರೆ ಪರಿಸ್ಥಿತಿ ಎಲ್ಲಿಗೆ ಮುಟ್ಟಿàತು? ಕೃಷಿಕ ಸೋಲುತ್ತಿದ್ದಾನೆ, ದೇಶದ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ.
ಅಭಿವೃದ್ಧಿ ಎಂದರೇನು? ಕೃಷಿ ಮತ್ತು ಕೃಷಿಕನ ಸೋಲಿಗೆ ಕಾರಣವೇ ನಮ್ಮ ಅಭಿವೃದ್ಧಿ ನೀತಿಗಳು. ಆಡಳಿತಗಾರರಿಗೆ ಇದೆಲ್ಲ ಅರ್ಥವೇ ಆಗುವುದಿಲ್ಲ. ಏಕೆಂದರೆ ಅವರೆಲ್ಲ “”ಅರ್ಥ”ದ ಅಭಿವೃದ್ಧಿಯ ಲೆಕ್ಕಾಚಾರದಲ್ಲಿದ್ದಾರೆ. ಆರ್ಥಿಕ ಬೆಳೆ ಮೇಳೈಸುತ್ತಾ (ಒಂದು ಹಂತದಲ್ಲಿ ಅದೂ ಕುಸಿಯಲಾರಂಭಿಸೀತು) ಆಹಾರ ಬೆಳೆಯ ವಿಸ್ತಾರ ಕುಸಿಯುತ್ತಿರುವುದು ಅನಭಿವೃದ್ಧಿಯ ಲಕ್ಷಣ. ಎಲ್ಲರೂ ದುಡ್ಡು ಮಾಡುವುದಕ್ಕೆ ಹೊರಟಿದ್ದಾರೆಂದೇ ಅರ್ಥ. ಕೃಷಿ ಭೂಮಿ ಅದರಲ್ಲೂ ಆಹಾರ ಬೆಳೆಯ ಭೂಮಿಯನ್ನು ಉಳಿಸಿಕೊಳ್ಳದೇ ಹೋದರೆ ಭವಿಷ್ಯದಲ್ಲಿ ಎದುರಾಗುವ ಪರಿಸರ ಸಂಬಂಧಿ ಸವಾಲುಗಳನ್ನು ಮತ್ತು ಉಣ್ಣುವುದಕ್ಕೆ ಒದಗಬಹುದಾದ ಸಂಕಟವನ್ನು ನಿಭಾಯಿಸುವುದೆಂತು?
ದೇಶಕ್ಕೆ ಅನ್ನ ನೀಡುವವ ಯಾವತ್ತೂ ಸುಖೀಯಾಗಿರಬೇಕು. ದೇಶದ ಆರ್ಥಿಕ ನೀತಿಯಲ್ಲಿ ಅದಕ್ಕೆ ಮೊದಲ ಆದ್ಯತೆ ಸಿಗಬೇಕು. ಆದರೆ ನಮ್ಮಲ್ಲಿ ತದ್ವಿರುದ್ಧ. ಮೂಲಭೂತ ವ್ಯವಸ್ಥೆಗಳಲ್ಲಿ ತೊಡಗಿಕೊಂಡವರು, ಉತ್ಪಾದನಾಂಗ ಚಟುವಟಿಕೆಗಳಲ್ಲಿ ನಿರತರಾದವರು ದೇಶದ ಅಭಿವೃದ್ಧಿಗೆ ತಳಪಾಯ. ತಳಪಾಯವೇ ಅಪಾಯಕ್ಕೆದುರಾದರೆ ದೇಶ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಬಹು ಕೋಟಿವಂತರ ಆದಾಯವೇ ತಲಾದಾಯವಾಗಿ ದೇಶ ಅಭಿವೃದ್ಧಿಯತ್ತ ಮುನ್ನುಗ್ಗುತ್ತಿದೆ ಎಂದು ಬಿಂಬಿಸಲಾಗುತ್ತಿದೆ. ಇಡೀ ದೇಶದಲ್ಲಿ ಲಕ್ಷಾಂತರ ಮಂದಿ ರೈತರು ಸಾವಿಗೀಡಾದ ವರದಿ ಇದೆ. ಕೈಗೆ ಬಂದ ತುತ್ತಿಗೆ ಕನಿಷ್ಠ ವೆಚ್ಚದಷ್ಟಾದರೂ ಬೆಲೆ ಸಿಕ್ಕರೆ ಸಾಕು ಎಂಬಲ್ಲಿಯವರೆಗಿನ ಹತಾಶೆಯ ಸ್ಥಿತಿ ರೈತನದ್ದು., ಇದೇ ಸಂದರ್ಭದಲ್ಲಿ ಕೃಷಿಯನ್ನವಲಂಬಿಸಿದ ಉದ್ಯಮಿಗಳು, ವ್ಯಾಪಾರಿಗಳು, ಸೇವಾ ವಲಯದವರ ಆತ್ಮಹತ್ಯೆ ಪ್ರಕರಣಗಳು ಇಲ್ಲವೆನ್ನುವಷ್ಟು ವಿರಳ ಎಕೆ?
ಸರಕಾರಗಳು ಆಗೊಮ್ಮೆ ಈಗೊಮ್ಮೆ ಘೋಷಿಸುವ ಸಾಲಮನ್ನಾಗಳು, ರಿಯಾಯಿತಿಗಳು, ಬೀಜ, ಗೊಬ್ಬರ, ಕೀಟನಾಶಕಗಳ ನೀಡಿಕೆ ಜೊತೆಗೆ ಉಚಿತ ಸಲಹೆಗಳು ನಮ್ಮ ರೈತಾಪಿ ಬಂಧುಗಳನ್ನು ಹಾಗೂ ಕೃಷಿಪರ ಚಟುವಟಿಕೆಗಳಲ್ಲಿ ತೊಡಗಿರುವವರನ್ನು ಸಬಲೀಕರಣಗೊಳಿಸಲಾರದು. ಅದೆಲ್ಲ ಸಾಂದರ್ಭಿಕ ನಿರ್ವಹಣೆಯಷ್ಟೇ ಹೊರತು ನಿರಂತರತೆಗೆ ಇಂಬು ನೀಡದು.
ಸರಕಾರ ಕೃಷಿಕರಿಗೆ ಮತ್ತು ಕೃಷಿ ಪೂರಕ ಚಟುವಟಿಕೆಗಳಲ್ಲಿ ತೊಡಗಿಕೊಂಡವರಿಗೆ ಆರ್ಥಿಕ ಭದ್ರತೆಯನ್ನೊದಗಿಸುವ ಯೋಜನೆಗಳನ್ನು ಜಾರಿಗೊಳಿಸಬೇಕು. ಸರಕಾರದಲ್ಲಿ ಉದ್ಯೋಗ ಸೃಷ್ಟಿಸುವ ಯೋಜನೆಗಳು ಬೇಕಾದಷ್ಟಿವೆ. ಆದರೆ ಕೃಷಿ ಕ್ಷೇತ್ರವೇ ಬಹಳ ದೊಡ್ಡ ಉದ್ಯೋಗ ಕ್ಷೇತ್ರ (ಸೃಷ್ಟಿ ಮಾಡಬೇಕೆಂಬುದೇ ಇಲ್ಲ) ವೆಂಬುದರ ತಿಳುವಳಿಕೆಯೇ ಇಲ್ಲವೆ? ಇಂದಿನ ಬಹಳಷ್ಟು ಸಮಸ್ಯೆಗಳಿಗೆ ಮೂಲ ಕಾರಣವೇ ಕೃಷಿ ಕ್ಷೇತ್ರ ದುರ್ಬಲವಾದದ್ದು (ನವ ನಾಗರೀಕತೆಯ ಸಮಸ್ಯೆಗಳು).
ಯಾವುದೇ ಬೆಳೆಗಾರನಿಗೆ ತಾನು ಬೆಳೆಯುವ ಆಹಾರ ಬೆಳೆಗೆ ಅದರ ಉತ್ಪಾದನಾ ವೆಚ್ಚದ ನಾಲ್ಕು ಪಟ್ಟು ಬೆಲೆ ಸಿಗುವಂತಾಗಬೇಕು. ಆರ್ಥಿಕ ಬೆಳೆಯಾದರೆ ಅದರ ಉತ್ಪಾದನಾ ವೆಚ್ಚದ ಮೂರುಪಟ್ಟು ಬೆಲೆ ಸಿಗುವಂತಾಗಬೇಕು. ಈ ರೀತಿಯಲ್ಲಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಸಿಗಬೇಕು. ಅಲ್ಲದೆ ಒಂದೊಮ್ಮೆ ಬೆಳೆ ಯಾವುದೇ ಕಾರಣದಿಂದ (ಸ್ವಂತ ಕಾರಣದ ಹೊರತು) ಹಾನಿಗೊಳಗಾಗಿ, ನಷ್ಟವುಂಟಾದರೆ ರೈತನ ಒಟ್ಟು ವಾರ್ಷಿಕ ಆದಾಯವನ್ನು ಸರಕಾರವೇ ಭರ್ತಿ ಮಾಡುವಂತಿರಬೇಕು. ಅಭಿವೃದ್ಧಿ ಯೋಜನೆಗಳು ಅಲ್ಲದೆ ಕೃಷಿ ಪರ ಚಟುವಟಿಕೆಗಳಲ್ಲಿ ಮತ್ತು ಕೃಷಿ ಕಾರ್ಮಿಕರಾಗಿ ದುಡಿಯುವವರಿಗೆ ಒಂದು ಭಾಗದ ಸಂಬಳವನ್ನು (ಉದ್ಯೋಗ ಖಾತ್ರಿ ಯೋಜನೆಯಂತೆ) ಸರಕಾರವೇ ನೀಡಬೇಕು. ಜೊತೆಗೆ ಭವಿಷ್ಯನಿಧಿ ಅಥವಾ ಪಿಂಚಣಿ ಯೋಜನೆಯನ್ನೂ ಜಾರಿಗೆ ತರಬೇಕು.
ಆರ್ಥಿಕ ಭದ್ರತೆಯ ಹೊರತಾಗಿ ಸರಕಾರವು ಕೃಷಿಕರಿಗೆ ಬೇರೇನೂ ನೀಡಬೇಕಾದ್ದಿಲ್ಲ. ಅನಾವಶ್ಯಕವಾಗಿ (ಅಭಿವೃದ್ಧಿ ಹೆಸರಿನಲ್ಲಿ, ಸುಧಾರಣೆಯ ಹೆಸರಲ್ಲಿ) ರೈತರ ಬದುಕಿನಲ್ಲಿ ಸರಕಾರ ಹಸ್ತಕ್ಷೇಪ ಮಾಡಕೂಡದು. ಒಟ್ಟು ಸಾಮಾಜಿಕ ವ್ಯವಸ್ಥೆಗಳಲ್ಲಿ ರೈತನಿಗೆ ಗತಕಾಲದ ಸ್ಥಾನಮಾನ ದೊರೆಯುವಂತಾಗಬೇಕು. ರೈತನಾಗುವುದು, ರೈತನ ಮಗನಾಗುವುದು ಹೆಮ್ಮೆಯ ಸಂಗತಿಯಾಗಬೇಕು. ಕೇವಲ ವೇದಿಕೆಯ ಹೇಳಿಕೆ ಮತ್ತು ಘೋಷಣೆಯಾಗಬಾರದು.
ರಾಮಕೃಷ್ಣ ಭಟ್ ಬೆಳಾಲು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BJP Congress;ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರಿಗೆ ಪ್ರತಿದೂರು
Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ
Yakshagana;ಕನ್ನಡ ಭಾಷೆಯ ಮೌಲ್ಯವನ್ನು ಉಳಿಸುವಲ್ಲಿ ಸಾರ್ವಕಾಲಿಕ ಕೊಡುಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.