ಸಕ್ಕರೆ ಸಚಿವರಿಗೊಂದು ಬಹಿರಂಗ ಪತ್ರ


Team Udayavani, Nov 30, 2019, 5:55 AM IST

zx-21

ಮಂಡ್ಯದ ಮೈಶುಗರ್‌ ಮತ್ತು ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಎಂ.ಪಿ.ಎಂ ಕಾರ್ಖಾನೆಗಳನ್ನು ಖಾಸಗಿ ಉದ್ಯಮಿಗಳಿಗೆ ಮಾರಾಟ ಮಾಡಿ ಕೈ ತೊಳೆದುಕೊಳ್ಳುವುದಕ್ಕೆ ಸರಕಾರ ಯೋಚಿಸುತ್ತಿದೆ. ಖಾಸಗಿ ಸಕ್ಕರೆ ಕಾರ್ಖಾನೆಗಳಿಗೆ ಪ್ರತಿಸ್ಪರ್ಧಿಯಾಗಿ ಕಾರ್ಯನಿರ್ವಹಿಸಬೇಕಾದ ಸರಕಾರಿ ಕಾರ್ಖಾನೆಗಳು ಖಾಸಗಿಯವರ ಪಾಲಾದರೆ ಹೇಗೆ?

ಸರಕಾರ ತುಂಬ ಆಸಕ್ತಿಯಿಂದ ಕಟ್ಟಿದ ಮತ್ತು ನೇರವಾಗಿ ಸರಕಾರದ ಆಡಳಿತಕ್ಕೆ ಒಳಪಟ್ಟ ಮಂಡ್ಯದ ಮೈಶುಗರ್‌ ಕಂಪನಿ ಮತ್ತು ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಎಂ.ಪಿ.ಎಂ ಎರಡು ಸಕ್ಕರೆ ಕಾರ್ಖಾನೆಗಳಿವೆ. ಈ ಕಾರ್ಖಾನೆಗಳು ಕಳೆದ 10 ವರ್ಷಗಳಿದ ನಿರಂತರವಾಗಿ ಹಾನಿ ಅನುಭವಿಸುತ್ತಿರುವುದರಿಂದ ಎರಡೂ ಸಕ್ಕರೆ ಕಾರ್ಖಾನೆಗಳನ್ನು ಖಾಸಗಿ ಉದ್ಯಮಿಗಳಿಗೆ ಮಾರಾಟ ಮಾಡಿ ಕೈತೊಳೆೆದುಕೊಳ್ಳುವುದಕ್ಕೆ ಸರ ಕಾರ ಯೋಚಿ ಸು ತ್ತಿ ದೆ. ಖಾಸಗಿ ಸಕ್ಕರೆ ಕಾರ್ಖಾನೆಗಳಿಗೆ ಪ್ರತಿಸ್ಪರ್ಧಿ ಯಾಗಿ ಕಾರ್ಯನಿರ್ವಹಿಸಬೇಕಾದ ಸರಕಾರಿ ಕಾರ್ಖಾನೆಗಳು ಖಾಸಗಿಯವರ ಪಾಲಾದರೆ ಹೇಗೆ? ಎಂದು ರೈತರು ಪ್ರಶ್ನಿಸುತ್ತಿದ್ದಾರೆ.

ಈಗಾಗಲೇ ರಾಜ್ಯದ 10 ಸಹಕಾರಿ ರಂಗದ ಸಕ್ಕರೆ ಕಾರ್ಖಾನೆಗಳನ್ನು ಖಾಸಗಿ ಉದ್ದಿಮೆಗಳಿಗೆ 30 ವರ್ಷದ ಅವಧಿಗೆ ಲೀಜ್‌ ಮೇಲೆ ಕೊಡಲಾಗಿದೆ. ಸರಕಾರಿ ಸ್ವಾಮ್ಯದ ಎರಡೂ ಕಾರ್ಖಾನೆ ಖಾಸಗಿ ಅವರ ಪಾಲಾದರೆ ಅದು ನಿಜಕ್ಕೂ ನೋವಿನ ಸಂಗತಿ.

ಮಂಡ್ಯ ಸಕ್ಕರೆ ಕಾರ್ಖಾನೆ ದೊಡ್ಡ ಇತಿಹಾಸ ಮತ್ತು ಪರಂಪರೆಯನ್ನು ಹೊಂದಿದೆ. 1933ರಲ್ಲಿ ಆರಂಭವಾದ ಈ ಕಾರ್ಖಾನೆ ರಾಜ್ಯದ ಮೊದಲು ಸಕ್ಕರೆ ಗಿರಣಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದನ್ನು ಕಟ್ಟಿದವರು ಕೃಷಿ ಅಧಿಕಾರಿಯಾಗಿದ್ದ ಇಂಗ್ಲೆಂಡಿನ ಲಿಸ್ಟಿ ಕೋಲ್ಮನ್‌. ಕೆ.ಆರ್‌.ಎಸ್‌ ಜಲಾಶಯ ಕಟ್ಟಿದ ಮೇಲೆ ಈ ಭಾಗಕ್ಕೆ ನೀರಾವರಿ ಸೌಲಭ್ಯ ದೊಡ್ಡ ಪ್ರಮಾಣದಲ್ಲಿ ದೊರೆಯಿತು. ಒಣಬೇಸಾಯ ಮಾಡುತ್ತಿದ್ದ ರೈತರ ಹೊಲಗಳಿಗೆ ನೀರು ಹರಿದು ಬರತೊಡಗಿತು. ಈ ನೀರು ಸಮರ್ಪಕವಾಗಿ ಬೇಸಾಯಕ್ಕೆ ಬಳಸಿಕೊಳ್ಳುವುದು ರೈತರಿಗೆ ಸರಿಯಾಗಿ ಗೊತ್ತಿರಲಿಲ್ಲ. ಕೃಷಿ ಅಧಿಕಾರಿ ಲಿಸ್ಟಿ ಕೋಲ್ಮನ್‌ ಕಬ್ಬು ಬೇಸಾಯಕ್ಕೆ ಪ್ರೋತ್ಸಾಹ ನೀಡಿದರು. ಈ ಕಬ್ಬು ನುರಿಸಲು ಸಕ್ಕರೆ ಕಾರ್ಖಾನೆ ಅವಶ್ಯವೆಂದು ಕೋಲ್ಮನ್‌ ಮೈಸೂರು ದೊರೆಗಳಿಗೆ ತಿಳಿಸಿದರು. ನಾಲ್ವಡಿ ಕೃಷ್ಣರಾಜ್‌ ಒಡೆಯರ್‌, ಮಿರ್ಜಾ ಇಸ್ಮಾಯಿಲ್‌ ಮತ್ತು ಸರ್‌ ಎಂ. ವಿಶ್ವೇಶ್ವರಯ್ಯನವ ರ ಮುಂದಾಲೋಚನೆಯಿಂದ ಸಕ್ಕರೆ ಕಾರ್ಖಾನೆ ಕಟ್ಟಲು ಒಪ್ಪಿಗೆ ನೀಡಿದರು. ಈ ಕಾರ್ಖಾನೆ ಕಟ್ಟಲು ಕೋಲ್ಮನ್‌ ತಮ್ಮ ಸ್ವಂತ ಹಣ ಹಾಕಿ ಚಾಲನೆ ನೀಡಿದ್ದು ಸ್ಮರಣೀಯ ಸಂಗತಿಯಾಗಿದೆ. ಮಂಡ್ಯದ ರೈತರು ಕೋಲ್ಮನ್‌ ಅವರಿಗೆ ಗೌರವ ಸಲ್ಲಿಸುವುದಕ್ಕಾಗಿ ಕಾರ್ಖಾನೆ ಮುಂದೆ ಅವರ ಪ್ರತಿಮೆಯನ್ನು ಸ್ಥಾಪಿಸಿ ದ್ದಾರೆ. ಕೋಲ್ಮನ್‌ರ ಮಗಳು 10 ವರ್ಷಗಳ ಹಿಂದೆ ತಮ್ಮ ಪತಿಯೊಂದಿಗೆ ಮಂಡ್ಯಕ್ಕೆ ಬಂದು ತಂದೆಯ ಪ್ರತಿಮೆಯ ಅನಾವರಣ ಮಾಡಿದರು. ಈ ಭಾಗದ ರೈತರು ಕೋಲ್ಮನ್‌ರ ಮಗಳು ಮತ್ತು ಅಳಿಯ ಅವರನ್ನು ಮೆರವಣಿಗೆಯಲ್ಲಿ ಕರೆತಂದು ಸನ್ಮಾನ ಮಾಡಿದರು. ಕೋಲ್ಮನ್‌ರ ಬಗ್ಗೆ ಈ ಭಾಗದ ರೈತರು ತುಂಬ ಗೌರವವನ್ನು ಹೊಂದಿದ್ದಾರೆ.

ಕೋಲ್ಮನ್‌ ಸ್ಕಾಟ್‌ಲ್ಯಾಂಡ್‌ದಿಂದ ಯಂತ್ರೋಪಕರಣ ತರಿಸಿ ತಾವೇ ಸ್ವತಃ ಮುಂದೆ ನಿಂತು ಈ ಕಾರ್ಖಾನೆ ಕಟ್ಟಿದರು. ಆರಂಭದಲ್ಲಿ ಈ ಕಾರ್ಖಾನೆ ದಿನಕ್ಕೆ 400 ಟನ್‌ ಕಬ್ಬು ಅರೆಯುವ ಸಾಮರ್ಥ್ಯ ಹೊಂದಿತ್ತು. ಇದರೊಂದಿಗೆ 2 ಮೆಗಾ ವ್ಯಾಟ್‌ ವಿದ್ಯುತ್‌ ಉತ್ಪಾದನೆ ಮಾಡಲಾಗುತ್ತಿತ್ತು. ಮೈಸೂರು ದಸರಾ ಉತ್ಸವಕ್ಕೆ ಇಲ್ಲಿಂದಲೇ ವಿದ್ಯುತ್‌ ಪೂರೈಕೆ ಮಾಡಲಾಗುತ್ತಿತ್ತು.

ಮಂಡ್ಯದ ಈ ಕಾರ್ಖಾನೆ ಮುಂದಿನ ದಿನಗಳಲ್ಲಿ ಕರ್ನಾಟಕದ ಸಕ್ಕರೆ ಉದ್ದಿಮೆಯ ಹೆಬ್ಟಾಗಿಲನ್ನೇ ತೆರೆಯಿತು. ಕರ್ನಾಟಕ ಸಕ್ಕರೆ ಉದ್ದಿಮೆಯ ಹಬ್‌ ಆಗಿ ಬೆಳೆಯಲು ನಾಂದಿ ಹಾಡಿತು. ರೈತರ ಬಾಳಿಗೂ ಬೆಳಕಾಯಿತು. ಮಂಡ್ಯ ಸಕ್ಕರೆಯ ನಾಡು ಎಂಬ ಹೆಮ್ಮೆಯ ಹೆಸರು ಪಡೆಯಿತು.

ಸ್ವಾತಂತ್ರ್ಯಾ ನಂತರ ಈ ಸಕ್ಕರೆ ಕಾರ್ಖಾನೆಯ ಅಭಿವೃದ್ಧಿಗೆ ಎಲ್ಲರೂ ಕೈ ಜೋಡಿಸಿ ದುಡಿದರು. ಕಬ್ಬು ಅರೆಯುವ ಸಾಮರ್ಥ್ಯವನ್ನು 5000 ಟನ್ನಿಗೆ ಹೆಚ್ಚಿಸಲಾಯಿತು. ಕಬ್ಬು ಕೃಷಿ ಸಂಶೋಧನೆ ಕೇಂದ್ರ ಆರಂಭ ವಾಯಿತು. ರೈತರಿಗೆ ಸುಧಾರಿಸಿದ ಬೀಜ, ಗೊಬ್ಬರ ನೀಡಿ ಹೆಚ್ಚು ಕಬ್ಬು ಬೆಳೆಯಲು ಪ್ರೋತ್ಸಾಹ ನೀಡಲಾಯಿತು. ಇದರಿಂದಾಗಿ ಮಂಡ್ಯ ಜಿಲ್ಲೆ ಯಲ್ಲಿ ಹೊಸ ಸಕ್ಕರೆ ಕಾರ್ಖಾನೆಗಳನ್ನು ಕಟ್ಟುವ ಹುಮ್ಮಸ್ಸು ಬೆಳೆಯಿತು.

ಹಿನ್ನಡೆ ಆರಂಭ
ಮನುಷ್ಯ ಬದುಕಿಗೆ ಒಂದು ಗತಿ ಇರುವಂತೆ ಕೈಗಾರಿಕೆಗಳ ಬದುಕಿಗೂ ಒಂದು ಗತಿ ಇರುವಂತೆ ಕಾಣುತ್ತದೆ. ರಾಜಕೀಯ ಮೇಲಾಟ, ಅಪ್ರಾಮಾಣಿಕತೆ, ಭ್ರಷ್ಟಾಚಾರ, ರೈತ ಸಂಘಟನೆಗಳಲ್ಲಿ ಬಿರುಕು ಈ ಎಲ್ಲ ಕಾರಣಗಳಿಂದ 2000 ಇಸ್ವಿಯಿಂದ ಮಂಡ್ಯ ಕಾರ್ಖಾನೆ ದಿನ ದಿನಕ್ಕೆ ಸೊರಗ ತೊಡಗಿತು. ಅದು ಇಲ್ಲಿಯವರೆಗೆ ಉಸಿರು ಹಿಡಿದದ್ದು ಸರಕಾರದ ಅನುದಾನದ ಮೇಲೆ. ಈ ಕಾರ್ಖಾನೆ 2015-16 ಮತ್ತು 2016-17ನೆಯ ಹಂಗಾಮಿನಲ್ಲಿ ಪೂರ್ಣ ಸ್ಥಗಿತಗೊಂಡಿತ್ತು. ರಾಜ್ಯ ಸರಕಾರ 100 ಕೋಟಿ ಅನುದಾನ ಬಿಡುಗಡೆ ಮಾಡಿದ ಮೇಲೆ 2018-19ನೆಯ ಹಂಗಾಮಿನಲ್ಲಿ ಕೇವಲ 1.32 ಲಕ್ಷ ಟನ್‌ ಕಬ್ಬು ಅರಿಯಿತು. (ಈ ಸಕ್ಕರೆ ಕಾರ್ಖಾನೆ ಕಬ್ಬು ಅರೆಯುವ ಸಾಮರ್ಥ್ಯ ವರ್ಷಕ್ಕೆ 6 ರಿಂದ 7 ಲಕ್ಷ ಟನ್‌) ಮಂಡ್ಯ ಸಕ್ಕರೆ ಕಾರ್ಖಾನೆಗೆ ಸರಕಾರ ಕಳೆದ 12 ವರ್ಷಗಳ ಅವಧಿಯಲ್ಲಿ ಒಟ್ಟು 480 ಕೋಟಿ ರೂ ಸಹಾಯಧನ ನೀಡಿದೆ. ಹಿಂದಿನ ಸಮ್ಮಿಶ್ರ ಸರಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ 100 ಕೋಟಿ ರೂ ಸಹಾಯಧನ ಬಿಡುಗಡೆ ಮಾಡಿದ್ದಾರೆ. ಇಲ್ಲಿಯವರೆಗೆ ಬಿಡುಗಡೆಯಾದ ಹಣದಲ್ಲಿ 2 ಸುಸಜ್ಜಿತ ಸಕ್ಕರೆ ಕಾರ್ಖಾನೆಗಳನ್ನು ಕಟ್ಟಬಹುದಾಗಿತ್ತು. ಕಳೆದ 20 ವರ್ಷಗಳ ಅವಧಿಯಲ್ಲಿ ಈ ಕಾರ್ಖಾನೆ ಒಂದು ಪೈಸೆ ಲಾಭ ಮಾಡಿಲ್ಲ. ಅಲ್ಲಿ ಉದ್ಯೋಗಿಗಳ ಸಂಬಳಕ್ಕೆ ಸರಕಾರವೇ ದುಡ್ಡು ಕೊಡುತ್ತಿದೆ.

ಗುಣಮಟ್ಟವಿಲ್ಲದ ಸಕ್ಕರೆ ಉತ್ಪಾದನೆ
ರಾಜ್ಯದ ಸಕ್ಕರೆ ಕಾರ್ಖಾನೆಗಳ ಸಕ್ಕರೆಯ ಸರಾಸರಿ ಇಳುವರಿ ಪ್ರಮಾಣ 10% ಇದೆ. ಆದರೆ ಮೈಶುಗರ್‌ ಕಾರ್ಖಾನೆಯ ಇಳುವರಿ ಕೇವಲ 7% ಇದೆ. ಅಂದರೆ ರಾಜ್ಯದ ಸಕ್ಕರೆ ಕಾರ್ಖಾನೆಗಳು ಪ್ರತಿಟನ್‌ ಕಬ್ಬಿಗೆ 100 ಕಿ.ಲೋ ಸಕ್ಕರೆ ಉತ್ಪಾದಿಸಿದರೆ, ಮೈಶುಗರ್‌ ಕೇವಲ 70 ಕಿ.ಲೋ ಸಕ್ಕರೆ ಉತ್ಪಾದಿಸುತ್ತದೆ. ಇದು ದೊಡ್ಡ ಹಾನಿಗೆ ಮೊದಲ ಕಾರಣವಾಗಿದೆ. ಕಳೆದ ವರ್ಷ 1.32 ಲಕ್ಷ ಕಬ್ಬು ಅರೆದು 91 ಕ್ವಿಂಟಲ್‌ ಸಕ್ಕರೆ ಉತ್ಪಾದಿಸಲಾಗಿದೆ. ಅತ್ಯಂತ ನೋವಿನ ಸಂಗತಿ ಎಂದರೆ ಉತ್ಪಾದನೆಯಾದ ಎಲ್ಲ ಸಕ್ಕರೆ ಆಹಾರ ಎಂದು ಬಳಸಲು ಯೋಗ್ಯವಾಗಿಲ್ಲವೆಂದು ಆರೋಗ್ಯ ಇಲಾಖೆ ನೋಟಿಸು ನೀಡಿದೆ. ಮಾರಾಟಕ್ಕೆ ಅವಕಾಶವಿಲ್ಲದೆ ಸಕ್ಕರೆಯ ಮೂಟೆಗಳು ಗೋದಾಮುಗಳಲ್ಲಿ ಕೊಳೆಯತೊಡಗಿವೆ. ಇದರಿಂದಾಗಿ ಕಳೆದ ವರ್ಷದ ಒಟ್ಟು ಶ್ರಮ “”ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತೆ” ಆಗಿದೆ. ಕಾರ್ಖಾನೆಯ ಸಿಬ್ಬಂದಿ ಹಾಗೂ ಅಧಿಕಾರಿಗಳ ದಿವ್ಯ ನಿರ್ಲಕ್ಷಕ್ಕೆ ಈ ಸಕ್ಕರೆ ಸಾಕ್ಷಿಯಾಗಿ ನಿಂತಿದೆ.

ಭದ್ರಾವತಿ ಎಂ.ಪಿ.ಎಂ ಕಾರ್ಖಾನೆ ಕಥೆ
ಭದ್ರಾವತಿಯಲ್ಲಿ ಮೈಸೂರು ಪೇಪರ್‌ ಮಿಲ್ಲಿಗೆ ಒಳಪಟ್ಟ ಎಂ.ಪಿ.ಎಂ ಸಕ್ಕರೆ ಕಾರ್ಖಾನೆ ಸರಕಾರಿ ಸ್ವಾಮ್ಯದ ಎರಡನೆಯ ಸಕ್ಕರೆ ಕಾರ್ಖಾನೆಯಾಗಿದೆ. ಇಲ್ಲಿಯ ಪೇಪರ್‌ ಮಿಲ್‌ಗೆ ಕಬ್ಬಿನ ಸಿಪ್ಪೆಯನ್ನು ಕಚ್ಚಾ ವಸ್ತು ಎಂದು ಒದಗಿಸಲು ಸರಕಾರ ಸಕ್ಕರೆ ಕಾರ್ಖಾನೆಯನ್ನು ಕಟ್ಟಲಾಗಿದೆ. 1983-84ರಲ್ಲಿ ಆರಂಭವಾದ ಈ ಕಾರ್ಖಾನೆ ಸರಕಾರದ ಅನುದಾನ ತಿಂದು ಉಸಿರಾಡುತ್ತ 2014ರವರೆಗೆ ಕಾರ್ಯನಿರ್ವಹಿಸಿತು. ಕಳೆದ 5 ವರ್ಷಗಳಿಂದ ಕಾರ್ಖಾನೆ ಪೂರ್ಣ ಸ್ಥಗಿತಗೊಂಡಿದೆ. ಇಲ್ಲಿಯ ಅರ್ಧಕ್ಕೂ ಹೆಚ್ಚು ಸಿಬ್ಬಂದಿಯನ್ನು ವ್ಹಿ.ಆರ್‌.ಎಸ್‌ ನೀಡಿ ಮನೆಗೆ ಕಳುಹಿಸಲಾಗಿದೆ. ರೈತರ ಬಾಕಿ ಹಣ ಹಾಗೆಯೇ ಉಳಿದಿದೆ.

ಸರಕಾರಿ ಸ್ವಾಮ್ಯದ ಈ ಕಾರ್ಖಾನೆಗಳ ವ್ಯಾಪ್ತಿಯಲ್ಲಿ ರೈತರು ಚೆನ್ನಾಗಿ ಕಬ್ಬು ಬೆಳೆಯುತ್ತಿದ್ದಾರೆ. ಈ ಕಬ್ಬು ದೂರದ ಸಕ್ಕರೆಯ ಕಾರ್ಖಾನೆಗಳಿಗೆ ಸಾಗಿಸುವುದು ರೈತರಿಗೆ ಬಹುದೊಡ್ಡ ಸಮಸ್ಯೆಯಾಗಿದೆ. ದೂರದ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಸಾಗಿಸಲು ಸರಕಾರ ರೈತರಿಗೆ ಅನುದಾನ ಕೊಡಬೇಕು ಎಂಬ ಚಿಂತನೆ ನಡೆಸಿದೆ. ಇದು ಸರಿಯಾದ ಪರಿಹಾರವಾಗಲಾರದು. ಹೀಗೆ ಎಷ್ಟು ವರ್ಷ ಸಾರಿಗೆ ವೆಚ್ಚ ರೈತರಿಗೆ ನೀಡುತ್ತೀರಿ?

ಹೊಸ ತಂತ್ರಜ್ಞಾನ ಬೇಕು
ಸಕ್ಕರೆ ಉದ್ದಿಮೆಯಲ್ಲಿ ಹೊಸ ತಂತ್ರಜ್ಞಾನ ಬಹಳ ಬೆಳೆದಿದೆ. ಸಲ್ಪರ್‌ ಬಳಸದೇ ಉತ್ತಮ ಗುಣಮಟ್ಟದ ಸಕ್ಕರೆ ಉತ್ಪಾದಿಸುವ ಸರಳ ತಂತ್ರಜ್ಞಾನ ಈಗ ಬಹಳ ಜನಪ್ರಿಯವಾಗತೊಡಗಿದೆ. ಕಾರ್ಖಾನೆಗಳನ್ನು ನಡೆಸಲು ಸರಕಾರ ಅನನುಭವಿ ಅಧಿಕಾರಿಗಳನ್ನು ನೇಮಿಸುವುದು ಸರಿ ಅಲ್ಲ. ಸಕ್ಕರೆ ತಂತ್ರಜ್ಞಾನದ ಪರಿಣತ ವ್ಯಕ್ತಿಗಳನ್ನು ಜವಾಬ್ದಾರಿಯುತ ಸ್ಥಾನಕ್ಕೆ ನೇಮಕ ಮಾಡಬೇಕು. ಈ ಉತ್ತಮ ವಿಧಾನವನ್ನು ಮಹಾರಾಷ್ಟ್ರ, ಆಂಧ್ರ, ಗುಜರಾತ್‌ ರಾಜ್ಯಗಳು ಅನುಸರಿಸುತ್ತಿವೆ. ಸಕ್ಕರೆಯೊಂದಿಗೆ ಉಪ ಉತ್ಪನ್ನಗಳನ್ನು ಮೌಲ್ಯಾಧಾರಿತ ಉತ್ಪನ್ನಗಳನ್ನಾಗಿ ಪರಿವರ್ತಿಸಿ ಲಾಭ ಮಾಡಿಕೊಳ್ಳಬೇಕು. ಕಬ್ಬಿನಲ್ಲಿಯ ಪೂರ್ಣ ರಸ ಹೀರಿಕೊಳ್ಳುವ ಹೊಸ ಯಂತ್ರಗಳು ಬಂದಿವೆ. ಇವುಗಳನ್ನು ಕಡ್ಡಾಯವಾಗಿ ಬಳಸಿಕೊಳ್ಳಬೇಕು. ಸಕ್ಕರೆ ಉತ್ಪಾದನೆಗೆ ಮಾಡುವ ಖರ್ಚನ್ನು ಕಡಿಮೆ ಮಾಡುವ ಹೊಸ ಯಂತ್ರೋಪಕರಣಗಳು ಬಂದಿವೆ. ಅವುಗಳನ್ನು ಅಳವಡಿಸಿಕೊಳ್ಳಬೇಕು. ಈ ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳ ಮನಸ್ಥಿತಿ ಕೂಡ ಬದಲಾಗಬೇಕು. ಕೆಲಸ ಮಾಡುವ ಸಂಸ್ಕೃತಿ ಬೆಳೆಯಬೇಕು. ಕೆಲಸದ ಕುಶಲತೆ ಹೆಚ್ಚಿಸಿಕೊಳ್ಳಬೇಕು. ಕೈಗಾರಿಕೆ ಗಳ ಮುಖ್ಯ ಉದ್ದೇಶ ಉತ್ಪಾದನೆ, ಉದ್ಯೋಗ ನೀಡಿಕೆ ಮತ್ತು ಲಾಭ. ಈ ತತ್ವಕ್ಕೆ ಅಂಟಿಕೊಂಡು ಈ ಎರಡೂ ಕಾರ್ಖಾನೆಗಳು ಕಾರ್ಯ ನಿರ್ವಹಿಸಬೇಕು. ಎಲ್ಲ ವ್ಯವಹಾರಗಳನ್ನು ಪಾರದರ್ಶಕತೆಗೆ ಹಾಗೂ ಶಿಸ್ತಿಗೆ ಒಳಪಡಿಸಬೇಕು. ಈ ಬದಲಾವಣೆ ತರುವುದು ಕಷ್ಟದ ಕೆಲಸವೇ ನಲ್ಲ. ಗಟ್ಟಿ ಮನಸ್ಸು ಮಾಡಿ ಮುನ್ನಡೆಸುವವರು ಬೇಕಾಗಿದ್ದಾರೆ.

ಈ ಎರಡೂ ಸಕ್ಕರೆ ಕಾರ್ಖಾನೆಗಳನ್ನು ಖಾಸಗಿಯವರಿಗೆ ವಹಿಸಿಕೊಟ್ಟು ಕೈ ತೊಳೆದುಕೊಳ್ಳುವ ಸುಲಭದ ಕೆಲಸವನ್ನು ಸರಕಾರ ಮಾಡಬಾರದು. ಎರಡೂ ಸರಕಾರಿ ಸ್ವಾಮ್ಯದ ಕಾರ್ಖಾನೆಗಳು ಉತ್ತಮ ರೀತಿಯ ಕಾರ್ಯನಿರ್ವಹಿಸಿ ಮಾದರಿಯಾಗಿ ನಿಲ್ಲಬೇಕು.

ಈಗಾಗಲೇ ರಾಜ್ಯದ 10 ಸಕ್ಕರೆ ಕಾರ್ಖಾನೆಗಳು ಖಾಸಗಿ ಉದ್ದಿಮೆಗಳ ಪಾಲಾಗಿವೆ. ಇನ್ನೂ 5-6 ಸಹಕಾರಿ ಕಾರ್ಖಾನೆಗಳ ಆಡಳಿತ ಮಂಡಳಿಯವರು ತಮ್ಮ ಕಾರ್ಖಾನೆಗಳನ್ನೂ ನಡೆಸುವ ಜವಾಬ್ದಾರಿಯನ್ನು ಖಾಸಗಿಯವರಿಗೆ ವಹಿಸುವ ಅಪಾಯ ಕಾಣುತ್ತಿದೆ. ಈಗ ಸರಕಾರ ತನ್ನ ಕಾರ್ಖಾನೆಗಳನ್ನು ಖಾಸಗಿಯವರಿಗೆ ಕೊಡಲು ಚಿಂತನೆ ನಡೆಸಿರುವುದು ನಿಜಕ್ಕೂ ಕಳವಳದ ಸಂಗತಿಯಾಗಿದೆ.

ಗುಜರಾತ್‌ ರಾಜ್ಯದಲ್ಲಿ ಒಟ್ಟು 18 ಸಕ್ಕರೆ ಕಾರ್ಖಾನೆಗಳಿವೆ. ಈ ಎಲ್ಲ ಕಾರ್ಖಾನೆಗಳು ಸಹಕಾರಿ ರಂಗಕ್ಕೆ ಒಳಪಟ್ಟಿವೆ ಎಂಬುದು ಮಹತ್ವದ ಸಂಗತಿ. ಗುಜರಾತ್‌ನಲ್ಲಿ ಖಾಸಗಿ ಸಕ್ಕರೆ ಕಾರ್ಖಾನೆ ಕಟ್ಟುವುದಕ್ಕೆ ಅವಕಾಶವೇ ಇಲ್ಲ. ಇಲ್ಲಿಯ ಎಲ್ಲ ಸಹಕಾರಿ ಸಕ್ಕರೆ ಕಾರ್ಖಾನೆಗಳೂ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ರೈತರ ಕಬ್ಬಿಗೆ ಲಾಭದಾಯಕ ಬೆಲೆ ನೀಡುತ್ತಿವೆ. ಕರ್ನಾಟಕ ಸರಕಾರ ಗುಜರಾತ್‌ ಮಾದರಿಯ ಅಧ್ಯಯನ ಮಾಡಿ ಕಾರ್ಯರೂಪಕ್ಕೆ ತರಬೇಕು.

ಸಕ್ಕರೆ ಉದ್ದಿಮೆ ಕೃಷಿ ಆಧರಿತ ಗ್ರಾಮೀಣ ಭಾಗದ ಪ್ರಮುಖ ಕೈಗಾರಿಕೆಯಾಗಿದೆ. ಪ್ರತಿ ಕಾರ್ಖಾನೆಯ ವ್ಯಾಪ್ತಿಯಲ್ಲಿ 35-40 ಸಾವಿರ ರೈತರು ಕಬ್ಬು ಬೆಳೆಯುತ್ತಿದ್ದಾರೆ. ಅವರ ಹಿತ ಕಾಪಾಡುವ ದೃಷ್ಟಿಯಿಂದ ಸಹಕಾರಿ ಮತ್ತು ಸರಕಾರಿ ರಂಗದ ಕಾರ್ಖಾನೆಗಳು ಸಶಕ್ತವಾಗಿ ಕೆಲಸಮಾಡಬೇಕು. ಖಾಸಗಿ ಕಾರ್ಖಾನೆಗಳಿಗೆ ಪ್ರತಿ ಸ್ಪರ್ಧಿಯಾಗಿ ತಲೆಎತ್ತಿ ನಿಲ್ಲಬೇಕು. ಮಾನ್ಯ ಸಕ್ಕರೆ ಸಚಿವ ಸಿ.ಟಿ. ರವಿಯವರೇ, ನೀವು ಮನಸ್ಸು ಮಾಡಿದರೆ ಈ ಎರಡು ಕಾರ್ಖಾನೆಗಳು ಖಂಡಿತವಾಗಿಯೂ ಎದ್ದು ನಿಲ್ಲುತ್ತವೆ ಎಂಬ ಆಶಾಭಾವ ನಮಗಿದೆ. (ಲೇಖಕರು, ರಾಜ್ಯ ಸಕ್ಕರೆ ಕಾರ್ಖಾನೆಗಳ ಕಾರ್ಮಿಕರ ಮಹಾಮಂಡಳದ ಮಾಜಿ ಕಾರ್ಯದರ್ಶಿ)

ಮಂಡ್ಯದ ಕಾರ್ಖಾನೆ ಕರ್ನಾಟಕದ ಸಕ್ಕರೆ ಉದ್ದಿಮೆಯ ಹೆಬ್ಟಾಗಿಲನ್ನೇ ತೆರೆಯಿತು. ಕರ್ನಾಟಕವು ಸಕ್ಕರೆ ಉದ್ದಿಮೆಯ ಹಬ್‌ ಆಗಿ ಬೆಳೆಯಲು ನಾಂದಿ ಹಾಡಿತು.

ಸಕ್ಕರೆ ಉದ್ದಿಮೆಯಲ್ಲಿ ಹೊಸ ತಂತ್ರಜ್ಞಾನ ಬೆಳೆದಿದೆ. ಸಲ್ಪರ್‌ ಬಳಸದೇ ಗುಣಮಟ್ಟದ ಸಕ್ಕರೆ ಉತ್ಪಾದಿಸುವ ಸರಳ ತಂತ್ರಜ್ಞಾನ ಈಗ ಜನಪ್ರಿಯವಾಗತೊಡಗಿದೆ.

ಮೈಶುಗರ್‌ ಮತ್ತು ಎಂಪಿಎಂಗಳನ್ನು ಖಾಸಗಿಯವರಿಗೆ ಕೊಟ್ಟು ಕೈ ತೊಳೆದುಕೊಳ್ಳುವ ಸುಲಭದ ಕೆಲಸವನ್ನು ಸರಕಾರ ಮಾಡಬಾರದು.

– ಮಲ್ಲಿಕಾರ್ಜುನ ಹೆಗ್ಗಳಗಿ

ಟಾಪ್ ನ್ಯೂಸ್

12-muniratna

Bengaluru: ಶಾಸಕ ಮುನಿರತ್ನ ಕೇಸ್‌: ವಿಕಾಸಸೌಧದಲ್ಲಿ ಸ್ಥಳ ಮಹಜರು

Explainer: ಉಳಿತಾಯ ಖಾತೆಯಲ್ಲಿ ಎಷ್ಟು ನಗದು ಠೇವಣಿ ಇಡಬಹುದು? ವಾರ್ಷಿಕ ಮಿತಿ ಎಷ್ಟು….

Explainer: ಉಳಿತಾಯ ಖಾತೆಯಲ್ಲಿ ಎಷ್ಟು ನಗದು ಠೇವಣಿ ಇಡಬಹುದು? ವಾರ್ಷಿಕ ಮಿತಿ ಎಷ್ಟು….

Bellary; ವಕ್ಫ್‌ ಹೆಸರಲ್ಲಿ ದೇವಸ್ಥಾನ, ಮಠಗಳನ್ನು ಕಬಳಿಸಲು ಸರ್ಕಾರ ಮುಂದಾಗಿದೆ: ಜೋಶಿ

Bellary; ವಕ್ಫ್‌ ಹೆಸರಲ್ಲಿ ದೇವಸ್ಥಾನ, ಮಠಗಳನ್ನು ಕಬಳಿಸಲು ಸರ್ಕಾರ ಮುಂದಾಗಿದೆ: ಜೋಶಿ

Thirthahalli: ಹಣಗೆರೆಕಟ್ಟೆ ದೇವಸ್ಥಾನದ ಹಣ ಏರು ಪೇರು ಆಗಿದ್ದು ನಿಜವೇ?

Thirthahalli: ಹಣಗೆರೆಕಟ್ಟೆ ದೇವಸ್ಥಾನದ ಹಣ ಏರು ಪೇರು ಆಗಿದ್ದು ನಿಜವೇ?

Afghanistan Cricketer: ಏಕದಿನ ಕ್ರಿಕೆಟ್‌ ಗೆ ವಿದಾಯ ಘೋಷಿಸಿದ ಅಫ್ಘಾನ್‌ ಆಲ್‌ರೌಂಡರ್‌

Afghanistan Cricketer: ಏಕದಿನ ಕ್ರಿಕೆಟ್‌ ಗೆ ವಿದಾಯ ಘೋಷಿಸಿದ ಅಫ್ಘಾನ್‌ ಆಲ್‌ರೌಂಡರ್‌

Bhairathi Ranagal; ಶಿವಣ್ಣ ಡ್ರೀಮ್‌ ಪ್ರಾಜೆಕ್ಟ್ ಭೈರತಿ ಮೈಲುಗಲ್‌!

Bhairathi Ranagal; ಶಿವಣ್ಣ ಡ್ರೀಮ್‌ ಪ್ರಾಜೆಕ್ಟ್ ಭೈರತಿ ಮೈಲುಗಲ್‌!

ಪಿಂಚಣಿದಾರರ ಡಿಜಿಟಲ್‌ ಲೈಫ್‌ ಸರ್ಟಿಫಿಕೆಟ್‌: ಅಂಚೆ ಕಚೇರಿಯಿಂದ ಮನೆ ಬಾಗಿಲಲ್ಲೇ ಸೇವೆ

ಪಿಂಚಣಿದಾರರ ಡಿಜಿಟಲ್‌ ಲೈಫ್‌ ಸರ್ಟಿಫಿಕೆಟ್‌: ಅಂಚೆ ಕಚೇರಿಯಿಂದ ಮನೆ ಬಾಗಿಲಲ್ಲೇ ಸೇವೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

Employment: ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

ಒತ್ತುವರಿ ತೆರವು ಎಂಬ ಜೇನುಗೂಡಿಗೆ ಕೈಹಾಕುವಾಗ…

ಒತ್ತುವರಿ ತೆರವು ಎಂಬ ಜೇನುಗೂಡಿಗೆ ಕೈಹಾಕುವಾಗ…

India ಸೆಕ್ಯುಲರ್‌ ಸಿವಿಲ್‌ ಕೋಡ್‌-ನಾಡಿನ ನಾಡಿಮಿಡಿತದ ಕರೆ

India ಸೆಕ್ಯುಲರ್‌ ಸಿವಿಲ್‌ ಕೋಡ್‌-ನಾಡಿನ ನಾಡಿಮಿಡಿತದ ಕರೆ

Cinema Story:”ಇಂತಹ” ನೆಗೆಟಿವ್ ಕಥಾ ವಸ್ತುಗಳಿಲ್ಲದೇನೆ ಸಿನಿಮಾ ಬಾಕ್ಸಾಫೀಸ್ ತುಂಬ ಬಹುದೇ ?

Cinema Story:”ಇಂತಹ” ನೆಗೆಟಿವ್ ಕಥಾ ವಸ್ತುಗಳಿಲ್ಲದೇನೆ ಸಿನಿಮಾ ಬಾಕ್ಸಾಫೀಸ್ ತುಂಬ ಬಹುದೇ ?

ರಾಜ್ಯದಲ್ಲಿ ಇನ್ನೊಂದು ಪಕ್ಷದ ಸರ್ಕಾರವಿದ್ದಾಗ ಈ ರಾಜ್ಯಪಾಲರುಗಳು‎ ತುಂಬಾ ಆತಂತ್ರ ಸ್ಥಿತಿ

ಮುಡಾ: ಸಿದ್ದು ವಿರುದ್ಧ ರಾಜ್ಯಪಾಲರ prosecution ಅನುಮತಿ ಸಿಎಂ ಸ್ಥಾನಕ್ಕೆ ಮುಳುವಾಗಬಹುದೇ?

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

12-muniratna

Bengaluru: ಶಾಸಕ ಮುನಿರತ್ನ ಕೇಸ್‌: ವಿಕಾಸಸೌಧದಲ್ಲಿ ಸ್ಥಳ ಮಹಜರು

1(1)

Vitla: ನಾಲ್ಕೂ ದಿಕ್ಕಿನಿಂದ ಬರುವ ರಸ್ತೆಗಳಲ್ಲಿ ಗುಂಡಿಯೋ ಗುಂಡಿ

Explainer: ಉಳಿತಾಯ ಖಾತೆಯಲ್ಲಿ ಎಷ್ಟು ನಗದು ಠೇವಣಿ ಇಡಬಹುದು? ವಾರ್ಷಿಕ ಮಿತಿ ಎಷ್ಟು….

Explainer: ಉಳಿತಾಯ ಖಾತೆಯಲ್ಲಿ ಎಷ್ಟು ನಗದು ಠೇವಣಿ ಇಡಬಹುದು? ವಾರ್ಷಿಕ ಮಿತಿ ಎಷ್ಟು….

Bellary; ವಕ್ಫ್‌ ಹೆಸರಲ್ಲಿ ದೇವಸ್ಥಾನ, ಮಠಗಳನ್ನು ಕಬಳಿಸಲು ಸರ್ಕಾರ ಮುಂದಾಗಿದೆ: ಜೋಶಿ

Bellary; ವಕ್ಫ್‌ ಹೆಸರಲ್ಲಿ ದೇವಸ್ಥಾನ, ಮಠಗಳನ್ನು ಕಬಳಿಸಲು ಸರ್ಕಾರ ಮುಂದಾಗಿದೆ: ಜೋಶಿ

11-kushtagi

Kushtagi: ದ್ಯಾಮವ್ವ ದೇವಿ ಗುಡಿಗೆ ಭಕ್ತರಂತೆ ಹೋಗಿ ದರ್ಶನ ಪಡೆದ ವಾನರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.