ಚಿಂತನೆ: ಕೃಷಿ ಕ್ಷೇತ್ರದ ಬಂಧನವೋ ಸುಧಾರಣೆಯೋ?
Team Udayavani, Sep 25, 2020, 6:53 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಎಪಿಎಂಸಿ ಹಾಗೂ ಕನಿಷ್ಠ ಬೆಂಬಲ ಬೆಲೆಯ ವಿಚಾರದಲ್ಲಿ ವಿಪಕ್ಷಗಳು ಜನರ ಹಾದಿ ತಪ್ಪಿಸಲು ಪ್ರಯತ್ನಿಸುತ್ತಿರುವುದು ಬೇಸರದ ಸಂಗತಿ.
ಎಪಿಎಂಸಿಗಳನ್ನು ಮುಚ್ಚಲಾಗುವುದಿಲ್ಲ, ಕನಿಷ್ಠ ಬೆಂಬಲ ಬೆಲೆಯು ಮುಂದುವರಿಯುತ್ತದೆ ಎಂದು ಸ್ಪಷ್ಟವಾಗಿ ಹೇಳಿದರೂ ಪ್ರತಿಭಟನೆಗಳ ಗದ್ದಲದಲ್ಲಿ ಈ ಧ್ವನಿ ಯಾರಿಗೂ ಕೇಳದಾಗಿದೆ.
ಕೇಂದ್ರದ ಕೃಷಿ ಮಸೂದೆಗಳು ಪರ-ವಿರೋಧದ ಚರ್ಚೆಗೆ ಗ್ರಾಸವಾಗಿವೆ. ಹರಿಯಾಣ, ಪಂಜಾಬ್ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ.
ನಿಜಕ್ಕೂ ಈ ಮಸೂದೆಗಳು ತಮ್ಮ ಹಿತದೃಷ್ಟಿಯಲ್ಲಿ ರಚನೆಯಾಗಿವೆಯೊ ಇಲ್ಲವೋ ಎನ್ನುವ ವಿಚಾರದಲ್ಲಿ ರೈತರಲ್ಲಿ ಗೊಂದಲವಂತೂ ಮೂಡಿದೆ.
ಈ ಗೊಂದಲವನ್ನು ಇನ್ನಷ್ಟು ಹೆಚ್ಚಿಸುವ ಪ್ರಯತ್ನಗಳೂ ನಡೆದಿವೆ. ರೈತರ ಆತಂಕಕ್ಕೆ ತುಪ್ಪ ಸುರಿಯುವ ಕೆಲಸವಾಗುತ್ತಿದೆ.
ಅದರಲ್ಲೂ ಎಪಿಎಂಸಿ ಹಾಗೂ ಕನಿಷ್ಠ ಬೆಂಬಲ ಬೆಲೆಯ ವಿಚಾರದಲ್ಲಿ ವಿಪಕ್ಷಗಳು ಜನರ ಹಾದಿ ತಪ್ಪಿಸಲು ಪ್ರಯತ್ನಿಸುತ್ತಿರುವುದು ಬೇಸರದ ಸಂಗತಿ. ಎಪಿಎಂಸಿಗಳನ್ನು ಮುಚ್ಚಲಾಗುವುದಿಲ್ಲ, ಕನಿಷ್ಠ ಬೆಂಬಲ ಬೆಲೆಯೂ ಮುಂದುವರಿಯುತ್ತದೆ ಎಂದು ಸ್ಪಷ್ಟವಾಗಿ ಹೇಳಿದರೂ ಪ್ರತಿಭಟನೆಗಳ ಗದ್ದಲದಲ್ಲಿ ಈ ಧ್ವನಿ ಯಾರಿಗೂ ಕೇಳದಾಗಿದೆ. ಆದರೆ ಒಂದಂತೂ ಸತ್ಯ, ಕೇಂದ್ರದ ಹೆಜ್ಜೆಯು ಎಪಿಎಂಸಿ, ಮಧ್ಯವರ್ತಿಗಳ ಏಕಸ್ವಾಮ್ಯವನ್ನಂತೂ ತಗ್ಗಿಸಲಿವೆ.
ಸತ್ಯವೇನೆಂದರೆ, ಈ ಹಿಂದೆ ಇದೇ ಕಾಂಗ್ರೆಸ್ ಎಪಿಎಂಸಿಯ ಏಕಸ್ವಾಮ್ಯವನ್ನು ಕೊನೆಗೊಳಿಸುವುದಾಗಿ ಹೇಳಿತ್ತು! ಈಗ ಇದೇ ಪಕ್ಷ ಎಪಿಎಂಸಿ ಹಾಗೂ ಕನಿಷ್ಠ ಬೆಂಬಲ ಬೆಲೆಯನ್ನು ತೆಗೆದುಹಾಕಲಾಗುತ್ತದೆ ಎಂದು ರೈತರಲ್ಲಿ ಆತಂಕ ಹುಟ್ಟಿಸುತ್ತಿದೆ. ಬಹುಶಃ ಈ ಕಾರಣಕ್ಕಾಗಿಯೋ ಏನೋ ರೈತರಲ್ಲಿ ಭರವಸೆ ಹುಟ್ಟಿ ಸಲು ಕೇಂದ್ರ ಸರಕಾರ ಅವಸರವಸರವಾಗಿ ಗೋಧಿ ಸೇರಿದಂತೆ ಇತರ ಐದು ಬೆಳೆಗಳ ಕನಿಷ್ಠ ಬೆಂಬಲ ಬೆಲೆಯನ್ನೂ ಹೆಚ್ಚಿಸಿದೆ.
ನಾವು ಅರ್ಥಮಾಡಿಕೊಳ್ಳಬೇಕಾದ ಅಂಶವೆಂದರೆ, ಎಲ್ಲಿಯವರೆಗೂ ಜನರಿಗೆ ಸರಕಾರಗಳು ರೇಷನ್ ಅಂಗಡಿಗಳ ಮೂಲಕ ಅಕ್ಕಿ, ಗೋಧಿ, ಪಾಮ್ ಎಣ್ಣೆ, ಧಾನ್ಯಗಳು, ಸಕ್ಕರೆ ಹಾಗೂ ಸೀಮೆಎಣ್ಣೆಯಂಥ ಇತರೆ ಅಗತ್ಯ ವಸ್ತುಗಳನ್ನು ಪೂರೈಸುತ್ತವೋ ಅಲ್ಲಿಯವರೆಗೂ ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆ ಇದ್ದೇ ಇರಲಿದೆ. ಇದು ವಿಪಕ್ಷಗಳಿಗೂ ಚೆನ್ನಾಗಿ ತಿಳಿದಿದೆ.
ಈ ವಿಚಾರದಲ್ಲಿ ನನ್ನ ಗಮನ ಸೆಳೆದದ್ದು, ಒಂದು ಕಾಲದಲ್ಲಿ ರಾಹುಲ್‌ರ ಆಪ್ತರಾಗಿದ್ದ, ಈಗ ಕಾಂಗ್ರೆಸ್‌ನಿಂದ ದೂರವಾಗಿರುವ ಸಂಜಯ್ ಝಾ ಅವರ ಮಾತುಗಳು: “2019ರ ಕಾಂಗ್ರೆಸ್‌ನ ಪ್ರಣಾಳಿ ಕೆಯಲ್ಲಿ ಎಪಿಎಂಸಿ ಕಾಯ್ದೆಯನ್ನು ನಿಷೇಧಿಸುವ ಮತ್ತು ಕೃಷಿ ಉತ್ಪನ್ನವನ್ನು ನಿರ್ಬಂಧಗಳಿಂದ ಮುಕ್ತಗೊಳಿಸುವ ಪ್ರಸ್ತಾವವಿತ್ತು. ಈಗ ಕೃಷಿ ಬಿಲ್ ಮೂಲಕ ಮೋದಿ ಸರಕಾರ ಮಾಡಲು ಹೊರಟಿರುವುದು ಇದನ್ನೇ..” ಎನ್ನುವ ಝಾ ಅವರ ಹೇಳಿಕೆಗೆ ಕಾಂಗ್ರೆಸ್ ಅಂತೂ ಉತ್ತರಿಸುತ್ತಿಲ್ಲ. ಇದೇ ವೇಳೆ ಯಲ್ಲೇ ಝಾ ಅವರು, ಮೋದಿಯನ್ನು ವಿರೋಧಿಸಲೇಬೇಕು ಎನ್ನುವುದು ಗೀಳಾಗಬಾರದು ಎಂದೂ ಕಾಂಗ್ರೆಸ್ ಅನ್ನು ಎಚ್ಚರಿಸಿದ್ದಾರೆ.
ಆಗೊಂದು ಈಗೊಂದು: ಕಾಂಗ್ರೆಸ್ ಎಂದಷ್ಟೇ ಅಲ್ಲ, ಎಲ್ಲ ರಾಜಕೀಯ ಪಕ್ಷಗಳು ತತ್‌ಕ್ಷಣದ ಲಾಭಕ್ಕೆ ತಕ್ಕಂತೆ ಒಮ್ಮೊಮ್ಮೆ ಒಂದೊಂದು ಮಾತನಾಡುತ್ತವೆ ಎನ್ನುವುದರಲ್ಲಿ ಸಂಶಯವಿಲ್ಲ ಬಿಡಿ. ಇದಕ್ಕೆ ಬಿಜೆಪಿಯೂ ಹೊರತಾಗಿಲ್ಲ! ಏಕೆಂದರೆ, ಈಗ ಮಧ್ಯವರ್ತಿಗಳ, ಏಜೆಂಟರ ಬಗ್ಗೆ ಕಿಡಿಕಾರುವ ಬಿಜೆಪಿ, ಒಂದು ಸಮಯದಲ್ಲಿ ಅವರ ಪರ ವಾದಿಸಿತ್ತು!
ಯುಪಿಎ ಸರಕಾರ ಮಲ್ಟಿಬ್ರಾಂಡ್ ರಿಟೇಲ್‌ನಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಯನ್ನು ತರಲು ಯೋಚಿಸಿದ್ದಾಗ ಅದನ್ನು ವಿರೋಧಿಸುತ್ತಾ ಆಗ ಸುಷ್ಮಾ ಸ್ವರಾಜ್ ಅವರು, ಸಂಸತ್ತಿನಲ್ಲಿ ಹೀಗೆ ಹೇಳಿದ್ದರು- “ರೈತರು ಮತ್ತು ಎಪಿಎಂಸಿಯ ಏಜೆಂಟರ ನಡುವೆ ಒಂದು ಬಾಂಧವ್ಯವಿದೆ ಎಂಬುದನ್ನು ಅಲ್ಲಗಳೆಯಲಾಗದು.
ಬ್ಯಾಂಕ್‌ಗಳಲ್ಲಿ ಈಗ ಎಟಿಎಂಗಳು ಬಂದಿವೆ, ಆದರೆ ಮೊದಲಿಂದಲೂ ರೈತರ ಪಾಲಿಗೆ ಏಜೆಂಟರೇ ಎಟಿಎಂಗಳಾಗಿದ್ದಾರೆ. ರೈತನೊಬ್ಬ ತನ್ನ ಮಗಳ ಮದುವೆ ಮಾಡಬೇಕೆಂದರೆ, ಮಕ್ಕಳಿಗೆ ಶಿಕ್ಷಣ ಕೊಡಿಸಬೇಕೆಂದರೆ, ತಂದೆಗೆ ಔಷಧ ತರಬೇಕೆಂದರೆ ಆತ ನೇರವಾಗಿ ಮಾರುಕಟ್ಟೆಯಲ್ಲಿರುವ ಏಜೆಂಟರ ಬಳಿ ತೆರಳುತ್ತಾನೆ” ಸಮಯಕ್ಕೆ ತಕ್ಕಂತೆ ನಿಲುವನ್ನು ಬದಲಿಸುವ ರಾಜಕೀಯ ಪಕ್ಷಗಳ ಇಂಥ ಗುಣ ಎಂದಿಗೂ ಬದಲಾಗದು ಬಿಡಿ. ಆದರೆ ಪ್ರಶ್ನೆ ಅದಲ್ಲ, ಈಗ ಕೇಂದ್ರ ಸರಕಾರದ ಹೆಜ್ಜೆಗಳು ನಿಜಕ್ಕೂ ಕೃಷಿ ಕ್ಷೇತ್ರಕ್ಕೆ ಸಹಕಾರಿಯಾಗಲಿದೆಯೋ? ಇಲ್ಲವೋ? ಎನ್ನುವುದು. ಸಹಕಾರಿಯಾಗುತ್ತವೆ ಎಂದರೆ ಅದನ್ನು ಸ್ವಾಗತಿಸಲೇಬೇಕಲ್ಲವೇ?
ಕನಿಷ್ಠ ಬೆಂಬಲ ಬೆಲೆ ಎಲ್ಲರಿಗೂ ಸಹಕಾರಿಯೇ?: ಕನಿಷ್ಠ ಬೆಂಬಲ ಬೆಲೆಯ ಉಪಯುಕ್ತತೆಯ ಬಗ್ಗೆ ಗಮನಿಸಬೇಕಾದ ಅಂಶವೆಂದರೆ, ಕನಿಷ್ಠ ಬೆಂಬಲ ಬೆಲೆ ಎಲ್ಲ ರೈತರಿಗೂ ಸಹಕಾರಿಯಲ್ಲ. ದೇಶದಲ್ಲಿ 80 ಪ್ರತಿಶತಕ್ಕೂ ಅಧಿಕ ರೈತರು ಚಿಕ್ಕ ಪ್ರಮಾಣದ ಭೂಮಿಯನ್ನು ಹೊಂದಿದವರು. ಹೀಗಾಗಿ, ಅವರು ತಮ್ಮ ಬೆಳೆಯನ್ನು ಮಾರಾಟ ಮಾಡುವುದಿರಲಿ, ನಿತ್ಯ ಸೇವನೆಗೆ ಅವರೇ ಆಹಾರ ಪದಾರ್ಥಗಳನ್ನು ಖರೀದಿಸುವಂಥ ಸ್ಥಿತಿಯಲ್ಲಿದ್ದಾರೆ. ಇಂಥ ಸಂದರ್ಭ ಕನಿಷ್ಠ ಬೆಂಬಲ ಬೆಲೆಯ ಏರಿಕೆಯು ಈ ರೈತರಿಗೆ ಸಹಾಯ ಮಾಡುವುದ ಕ್ಕಿಂತಲೂ ತೊಂದರೆ ಉಂಟು ಮಾಡುತ್ತದೆ. ಸತ್ಯವೇನೆಂದರೆ, ಕನಿಷ್ಠ ಬೆಂಬಲ ಬೆಲೆ ಎನ್ನುವುದು ದೊಡ್ಡ ರೈತರಿಗೇ ಹೆಚ್ಚು ಸಹಾಯ ಮಾಡುತ್ತದೆ.
ಎಪಿಎಂಸಿಗಳಿಂದ ಹೆಚ್ಚುವರಿ ಶುಲ್ಕ
ದೇಶದ ಎಲ್ಲೆಡೆಯಲ್ಲೂ, ಎಲ್ಲ ಸಮಯದಲ್ಲೂ ಕನಿಷ್ಠ ಬೆಂಬಲ ಬೆಲೆ ರೈತರ ಕೈಗೆ ದಕ್ಕುವುದಿಲ್ಲ. ಪಂಜಾಬ್ ಮತ್ತು ಹರಿಯಾಣದಲ್ಲಿ ರೈತರಿಗೆ ಕನಿಷ್ಠ ಬೆಂಬಲ ಬೆಲೆ ಸಿಗುವ ಖಾತ್ರಿಯಿದೆ. ಆದರೆ ತಮಿಳುನಾಡು, ಕರ್ನಾ ಟಕ, ಉತ್ತರಪ್ರದೇಶ ಮತ್ತು ರಾಜಸ್ಥಾನದಂಥ ರಾಜ್ಯಗಳಲ್ಲಿ ರೈತರು ಹಲವು ಸಂದರ್ಭಗಳಲ್ಲಿ ಕನಿಷ್ಠ ಬೆಂಬಲ ಬೆಲೆಗಿಂತಲೂ ಕಡಿಮೆ ಬೆಲೆಯಲ್ಲಿ ಬೆಳೆಗಳನ್ನು ಮಾರುತ್ತಾರೆ ಎನ್ನುತ್ತವೆ ವರದಿಗಳು.
ಅನೇಕ ಎಪಿಎಂಸಿಗಳು ಬೆಳೆ ಮಾರು ಕಟ್ಟೆಯನ್ನು ಪ್ರವೇಶಿಸಲು ಹೆಚ್ಚುವರಿ ಶುಲ್ಕವನ್ನೂ ವಿಧಿಸುತ್ತವೆ. ಮೂಲ ಸೌಕರ್ಯಾ ಭಿವೃದ್ಧಿ ಹಾಗೂ ಮಾರುಕಟ್ಟೆಯನ್ನು ಹೆಚ್ಚು ಪರಿಣಾಮಕಾರಿಯಾಗಿಸಲು ಈ ಹೆಚ್ಚುವರಿ ಶುಲ್ಕವನ್ನು ವಿಧಿಸಲಾಗುತ್ತದೆ ಎನ್ನಲಾಗುತ್ತದಾದರೂ, ಇದು ಸತ್ಯಕ್ಕೆ ದೂರವಾದದ್ದು. ವಾಸ್ತವವೇನೆಂದರೆ, ಈ ಹಣಕ್ಕೆ ಉತ್ತರದಾಯಿತ್ವವೇ ಇಲ್ಲ.
ಇ-ನ್ಯಾಮ್ ಮತ್ತು ಪರ್ಯಾಯ ಮಾರ್ಗಗಳು: ಈಗ ರೈತನಿಗೆ ತನ್ನ ಬೆಳೆಯನ್ನು ಎಲ್ಲಿ ಬೇಕಾದರೂ ಮಾರುವ ಸ್ವಾತಂತ್ರ್ಯ ಸಿಕ್ಕಿದೆ ಎನ್ನುವುದೇನೋ ಸರಿ. ಆದರೆ ಈ ವಿಚಾರದಲ್ಲೂ ಕೆಲವು ಸಮಸ್ಯೆಗಳು ಆತನಿಗೆ ಎದುರಾಗಬಹುದು. ನ್ಯಾಯಯುತ ಬೆಲೆ ಯಾವುದು ಎನ್ನುವುದು ಆತನಿಗೆ ತಿಳಿದಿರಬೇಕು.
2016ರ ಎಪ್ರಿಲ್ ತಿಂಗಳಲ್ಲಿ, ಕೇಂದ್ರವು ಇ-ನ್ಯಾಮ್ ಎನ್ನುವ ಆನ್‌ಲೈನ್ ವೇದಿಕೆಯನ್ನು ತೆರೆಯಿತು. ಎಲ್ಲ ಎಪಿಎಂಸಿಗಳನ್ನು ಬೆಸೆಯುವ ಈ ತಾಣ, ಉತ್ತಮ ಬೆಲೆ ಎಲ್ಲಿ ಲಭ್ಯವಿದೆ ಎನ್ನುವುದನ್ನು ಹುಡುಕಲು ಸಹಕರಿಸುತ್ತದೆ. ಆದರೆ ವರದಿಗಳ ಪ್ರಕಾರ, ಈ ವೇದಿಕೆಯು ರೈತರನ್ನು ಸರಿಯಾಗಿ ತಲುಪಿಯೇ ಇಲ್ಲ. ಇಂದು 4ಜಿ ಕ್ರಾಂತಿ ಇದೆ, ಎಲ್ಲರ ಬಳಿಯೂ ಮೊಬೈಲ್-ಅಂತರ್ಜಾಲ ಸೌಲಭ್ಯವಿದೆ ಎನ್ನುವುದೇನೋ ಸರಿ.
ಆದರೆ, ಏಜೆಂಟರ ಸಹಾಯವಿಲ್ಲದೇ ಇ-ನ್ಯಾಮ್‌ನಂಥ ಸೇವೆಯನ್ನು ರೈತರು ಬಳಸುವುದು ಕಷ್ಟದ ಕೆಲಸವೇ ಸರಿ. ಈ ಕಾರಣಕ್ಕಾಗಿಯೇ, ಈ ವಿಷಯದಲ್ಲಿ ರೈತರಿಗೆ ನ್ಯಾಯಯುತ ಬೆಲೆಯನ್ನು ತಿಳಿಸುವ ಸರಿಯಾದ ಮಾರ್ಗವನ್ನು ಸರಕಾರ ಹುಡುಕಬೇಕು. ಖಾಸಗಿ ಮಾರುಕಟ್ಟೆಯಿಂದ ರೈತರಿಗೆ ಅನ್ಯಾಯವಾಗುವುದನ್ನು ತಡೆಯಲು ಸ್ಪಷ್ಟ ನಿರ್ದೇಶನಗಳನ್ನು ಜಾರಿ ಮಾಡಬೇಕು.
ನೆನಪಿರಲಿ, ಖಾಸಗಿ ಮಾರುಕಟ್ಟೆಗಳ ಉದ್ದೇಶ ಲಾಭ ಮಾಡಿಕೊಳ್ಳುವುದೇ ಹೊರತು, ರೈತನಿಗೆ ಸಹಾಯ ಮಾಡಬೇಕು ಎಂದು ಇರುವುದಿಲ್ಲ. ಈ ಕಾರಣಕ್ಕಾಗಿಯೇ, ಅವು ರೈತನನ್ನು ಹಾದಿತಪ್ಪಿಸದಂತೆ ನೋಡಿಕೊಳ್ಳುವುದೂ ಮುಖ್ಯವಾಗುತ್ತದೆ.
ಒಟ್ಟಲ್ಲಿ ಕೃಷಿ ಕ್ಷೇತ್ರವು ಬೃಹತ್ ಬದಲಾವಣೆಯತ್ತ ಸಾಗುವ ದಾರಿ ಎದುರಾಗಿದೆ. ಈ ದಾರಿಗಳಲ್ಲಿ ಎದುರಾಗುವ ಅಡ್ಡಿಗಳನ್ನು ಸರಿಪಡಿಸುವತ್ತ ಎಲ್ಲ ಪಕ್ಷಗಳೂ ಗಮನಹರಿಸಬೇಕು. ವಿರೋಧಿಸಲೇಬೇಕು ಎನ್ನುವ ಕಾರಣಕ್ಕೆ ವಿರೋಧಿಸುವುದು, ಸುಳ್ಳು ಸುದ್ದಿ ಹರಡಿ ದಾರಿತಪ್ಪಿಸುವ ಪ್ರಯತ್ನ ಮಾಡುವುದು ಅನ್ನದಾತನಿಗೆ ಮಾಡುವ ಅವಮಾನವೇ ಸರಿ.
– ಮಹೇಂದ್ರ ಎಸ್.ಕೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Congress: ಜಮೀರ್ ವಿರುದ್ಧ ಕೈಕಮಾಂಡ್‌ಗೆ 20ಕ್ಕೂ ಹೆಚ್ಚು ಶಾಸಕರಿಂದ ದೂರು
Olympics; 2036ರ ಒಲಿಂಪಿಕ್ಸ್‌ಗೆ ಬಿಡ್: ಭಾರತದಿಂದ ಐಒಸಿಗೆ ಅಧಿಕೃತ ಅರ್ಜಿ
Belagavi: ಎಸ್‌ಡಿಎ ಆತ್ಮಹ*ತ್ಯೆ: ಸಚಿವೆ ಹೆಬ್ಬಾಳ್ಕರ್ ರಾಜೀನಾಮೆಗೆ ಬಿಜೆಪಿ ಪಟ್ಟು
Supreme Court: ಬೇಕಾಬಿಟ್ಟಿ ಖಾಸಗಿ ಆಸ್ತಿ ಸ್ವಾಧೀನ ಸಲ್ಲ;ವಿಶೇಷ ಪ್ರಕರಣದಲ್ಲಷ್ಟೇ ಸ್ವಾಧೀನ
LignoSat: ಮರದಿಂದ ತಯಾರಿಸಿದ ವಿಶ್ವದ ಮೊದಲ ಉಪಗ್ರಹ ಉಡಾವಣೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.