ದೇಶಕ್ಕೆ ಪ್ರಾದೇಶಿಕ ಪಕ್ಷಗಳು ಅನಿವಾರ್ಯವೇ?
Team Udayavani, Jul 16, 2017, 3:55 AM IST
ಪ್ರಾದೇಶಿಕ ಪಕ್ಷಗಳಿಗಿರುವಷ್ಟು ಅವಕಾಶಗಳು ರಾಷ್ಟ್ರೀಯ ಪಕ್ಷಗಳಿಗಿಲ್ಲ. ಜನರು, ಈಗ ಸುತ್ತಲಿನ ಪರಿಸರ, ಭಾಷೆಯನ್ನು ಹೆಚ್ಚು ಭಾವನಾತ್ಮಕವಾಗಿ ಕಾಣುತ್ತಾರೆ. ತೆಲಂಗಾಣ ಹೋರಾಟವನ್ನು ಅವಲೋಕಿಸಿದರೆ ಈ ಸತ್ಯದ ದರ್ಶನವಾಗುತ್ತದೆ. ರಾಷ್ಟ್ರೀಯ ಪಕ್ಷಗಳ ನೀತಿಗಳು ಪ್ರಾದೇಶಿಕ ಸಿಕ್ಕುಗಳನ್ನು ಬಿಡಿಸಲಾರವು.
ರಾಷ್ಟ್ರದಲ್ಲಿ ರಾಜಕೀಯ ಕವಲುದಾರಿಯಲ್ಲಿ ಸಾಗುತ್ತಿದೆ ಎಂದೆನಿಸುತ್ತಿದೆ. ಕಾರಣ ಈ ದೇಶದಲ್ಲಿ ಯಾವ ಪಕ್ಷ ಅಧಿಕಾರ ಬಂದರೆ ಸುಭಿಕ್ಷವಾಗುತ್ತದೆ? ಯಾವುದು ಹೆಚ್ಚು ಕ್ಷೇಮ? ಯಾವುದು ಪರವಾಗಿಲ್ಲ ಎನ್ನುವ ಲೆಕ್ಕಾಚಾರಗಳು ನಡೆಯುತ್ತಿವೆ.
ಹಾಗೆ ನೋಡಿದರೆ ರಾಷ್ಟ್ರೀಯ ಪಕ್ಷಗಳು ಅನಿವಾರ್ಯವೇ? ಪ್ರಾದೇಶಿಕ ಪಕ್ಷಗಳಿಗೆ ನೆಲೆಯಿಲ್ಲವೇ? ಮೈತ್ರಿ ಸರ್ಕಾರಗಳು ಅದೆಷ್ಟು ಸುಭದ್ರ? ಈ ಎಲ್ಲ ಪ್ರಶ್ನೆಗಳು ಅತ್ಯಂತ ಮುಖ್ಯವಾದವುಗಳು. ಯಾಕೆಂದರೆ ಚುನಾವಣೆಗಳ ಅನಂತರ ಹೊರ ಬೀಳುವ ಫಲಿತಾಂಶ ಜನರ ಮೇಲೆ ಉಂಟು ಮಾಡುವ ಪರಿಣಾಮಗಳು ಇಂಥ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಪ್ರೇರಣೆಯಾಗುತ್ತಿವೆ. ರಾಷ್ಟ್ರೀಯತೆ ಮತ್ತು ಪ್ರಾದೇಶಿಕತೆ ಇವುಗಳ ನಡುವೆ ತಿಕ್ಕಾಟವಿದೆ. ಪ್ರತ್ಯೇಕತೆಯತ್ತ ಒಲವು ಹೆಚ್ಚಾಗುತ್ತಿದೆ. ಸಮಗ್ರತೆಯನ್ನು ವಿಶಾಲ ಮನೋಭಾವದಿಂದ ಅರ್ಥಮಾಡಿಕೊಳ್ಳಬೇಕು ಎನ್ನುವ ಮಾತು ಬರೀ ಕ್ಲೀಷೆಯೆನಿಸುತ್ತಿದೆ. ರಾಜಕಾರಣಿಗಳು ತಮ್ಮ ತೆವಲಿಗೆ ಜನರನ್ನು ಬಳಸಿಕೊಳ್ಳುವ ಪ್ರವೃತ್ತಿ ಹೆಚ್ಚಾಗುತ್ತಿದೆ.
ಚುನಾವಣೆಗಳನ್ನು ಹಣ ಆಳುತ್ತಿದೆ. ಜನರೂ ಇದಕ್ಕೆ ಒಗ್ಗಿಕೊಳ್ಳುತ್ತಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಜನರಿಗೆ ಆಯ್ಕೆ ಎನ್ನುವುದು ಕಷ್ಟವಾಗುತ್ತಿದೆ. ಈ ಕಾರಣಕ್ಕಾಗಿಯೇ ಪಕ್ಷ ರಾಜಕಾರಣದಲ್ಲಿ ರಾಷ್ಟ್ರೀಯತೆ ಮತ್ತು ಪ್ರಾದೇಶಿಕತೆ ನಡುವೆ ಸಂಘರ್ಷ.
ಈ ದೇಶದ ರಾಜಕಾರಣವನ್ನು ಅವಲೋಕಿಸಿದರೆ ಅಸ್ಪಷ್ಟತೆ ಗೋಚರಿಸುತ್ತದೆ. ನಿರ್ದಿಷ್ಟ ಸಂಖ್ಯಾಬಲದ ಕೊರತೆಯಿಂದಾಗಿ ಸರ್ಕಾರಗಳನ್ನು ಅಸ್ಥಿರತೆ ಕಾಡುತ್ತಿದೆ.
ಈ ಲೆಕ್ಕಾಚಾರವನ್ನು ಮತ್ತಷ್ಟು ಅವಲೋಕಿಸಿದರೆ ರಾಷ್ಟ್ರೀಯ ಪಕ್ಷಗಳು ಇನ್ನೆಷ್ಟು ಕಾಲ ಏಕಾಂಗಿಯಾಗಿ ಅಧಿಕಾರ ನಡೆಸುವ ಶಕ್ತಿಯನ್ನು ಉಳಿಸಿಕೊಳ್ಳಲಿವೆ ಎನ್ನುವುದು ಒಂದು ಪ್ರಶ್ನೆಯಾದರೆ, ಪ್ರಾದೇಶಿಕ ಪಕ್ಷಗಳು ತಮ್ಮ ಪ್ರಾಬಲ್ಯ ಮೆರೆಯಲು ಕಾರಣ ಗಳೇನು? ಎನ್ನುವುದು ಮತ್ತೂಂದು ಪ್ರಶ್ನೆ. ಪಶ್ಚಿಮ ಬಂಗಾಳದಲ್ಲಿ ಹಲವು ದಶಕಗಳಿಂದ ನಿರಂತರವಾಗಿ ಅಧಿಕಾರದ ಚುಕ್ಕಾಣಿ ಹಿಡಿದುಕೊಂಡೇ ಇದ್ದ ಎಡಪಕ್ಷಗಳನ್ನು ತೃಣಮೂಲ ಕಾಂಗ್ರೆಸ್ ಧೂಳೀಪಟ ಮಾಡಿತು. ಇದೊಂದು ದಾಖಲೆ. ಆದರೆ ಈ ದಾಖಲೆ ಬರೆದವರು ಮತ್ತು ಹಿಂದಿನ ದಾಖಲೆ ಅಳಿಸಿ ಹಾಕಿದವರು ಆ ರಾಜ್ಯದ ಜನರು. ಅದೇ ಜನ ಎಡಪಕ್ಷವನ್ನು ಅಧಿಕಾರಕ್ಕೆ ತರುತ್ತಿದ್ದರು, ಈಗ ಅದೇ ಜನ ತೃಣಮೂಲ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೇರಿಸಿದರು. ಇಲ್ಲಿ ಜನರ ಆಶೋತ್ತರಗಳು ಮುಖ್ಯವಾದವು. ರಾಷ್ಟ್ರೀಯ ಪಕ್ಷವಾಗಿದ್ದ ಎಡಪಕ್ಷ ಜನರ ಭಾವನೆಗಳನ್ನು ಘಾಸಿಗೊಳಿಸಿತು. ಜನರು ಅದನ್ನು ಬಹಳ ಕಾಲದ ಅನಂತರ ಅರ್ಥಮಾಡಿಕೊಂಡು ಅಧಿಕಾರದಿಂದ ಕಿತ್ತೂಗೆದರು.
ಹಾಗೆ ನೋಡಿದರೆ ಭಾರತದಲ್ಲಿ ಪೊಲಿಟಿಕಲ್ ಅವೇರ್ನೆಸ್ ಕಡಿಮೆಯೇನಲ್ಲ. ರಾಜಕೀಯ ತಿಳುವಳಿಕೆ ಕಡಿಮೆ ಎನ್ನುವುದನ್ನು ಒಪ್ಪಿಕೊಳ್ಳಬೇಕಾದರೆ ಈ ದೇಶದ ರಾಜ್ಯಗಳನ್ನು ರಾಷ್ಟ್ರೀಯ ಪಕ್ಷಗಳೇ ಆಳಬೇಕಿತ್ತು. 1976ಕ್ಕೂ ಮೊದಲು ದೇಶದಲ್ಲಿ ನೆಹರೂ ಕುಟುಂಬ ಅದರಲ್ಲೂ ಇಂದಿರಾ ಗಾಂಧಿ ಅವರನ್ನು ಬಿಟ್ಟರೆ ಬೇರೆ ರಾಜಕಾರಣಿಗಳಿದ್ದಾರೆ, ರಾಜಕೀಯ ಪಕ್ಷಗಳೂ ಇವೆ ಎನ್ನುವುದು ಗೊತ್ತೇ ಇರಲಿಲ್ಲ. ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಹೇರದೇ ಇರುತ್ತಿದ್ದರೆ ಪ್ರಾದೇಶಿಕ ಪಕ್ಷಗಳು ಜನ್ಮ ತಳೆಯುತ್ತಿರಲಿಲ್ಲ ಮತ್ತು ಕಾಂಗ್ರೆಸ್‌ಗೆ ಪರ್ಯಾಯ ಶಕ್ತಿಗಳು ಉದಯಿಸುತ್ತಿರಲಿಲ್ಲ. ಕಾಂಗ್ರೆಸ್ ವಿರುದ್ಧ ಧ್ವನಿಯೆತ್ತುತ್ತಿದ್ದವರು ಇಂದಿರಾ ಅವರಿಂದಾಗಿ ಜೈಲು ಸೇರದೇ ಇರುತ್ತಿದ್ದರೆ ಅವರಿಗೆ ಬಲ ಬರುತ್ತಿರಲಿಲ್ಲ ಮತ್ತು ಹೊಸ ರಾಜಕೀಯ ಚಿಂತನೆಗಳು ಜೀವಪಡೆಯುತ್ತಿರಲಿಲ್ಲ. ಈ ಮಟ್ಟಿಗೆ ಕಾಂಗ್ರೆಸ್ಸೇತರ ಪಕ್ಷಗಳು, ಅವುಗಳ ಮುಖಂಡರು ಇಂದಿರಾ ಗಾಂಧಿಗೆ ಚಿರಋಣಿಯಾಗಿರಬೇಕು.
ಎಂಬತ್ತರ ದಶಕದಲ್ಲಿ ಪಂಜಾಬ್, ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಅಸ್ಸಾಂ, ಬಿಹಾರ, ಒರಿಸ್ಸಾ ರಾಜ್ಯಗಳಲ್ಲಿ ಏಕಕಾಲದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ವಿರುದ್ಧವಾದ ಅಲೆಗಳು ಎದ್ದವು. ಅಲ್ಲಿ ಪ್ರಾದೇಶಿಕ ಪಕ್ಷಗಳು ಜನ್ಮ ತಳೆದು ಚುನಾವಣೆಯ ಅಖಾಡಕ್ಕಿಳಿದವು. ಕರ್ನಾಟಕದಲ್ಲಿ ಡಿ.ದೇವರಾಜ ಅರಸು, ರಾಮಕೃಷ್ಣ ಹೆಗಡೆ, ಎಚ್.ಡಿ.ದೇವೇಗೌಡ, ಎಸ್.ಬಂಗಾರಪ್ಪ ಮುಂತಾದವರು ಕಾಂಗ್ರೆಸ್ ವಿರುದ್ಧ ಸೆಟೆದುನಿಂತರು. ಆಂಧ್ರದಲ್ಲಿ ಎನ್.ಟಿ.ಆರ್., ತಮಿಳುನಾಡಲ್ಲಿ ಈ ಹೊತ್ತಿಗೆ ಎಂ.ಜಿ.ಆರ್., ಕರುಣಾನಿಧಿ ಬಹಳ ಬೆಳೆದಿದ್ದರು. ಬಿಹಾರದಲ್ಲಿ ಲಾಲೂಪ್ರಸಾದ್, ಅಸ್ಸಾಂನಲ್ಲಿ ಪ್ರಫುಲ್ಲ ಕುಮಾರ್ ಮೊಹಂತ್ ಹೀಗೆ ಕಾಂಗ್ರೆಸ್ ಪಕ್ಷದ ಹಿಡಿತವನ್ನು ಕುಗ್ಗಿಸಬಲ್ಲ ಶಕ್ತಿಗಳು ಪುಟಿದವು.
ಹರ್ಯಾಣದಲ್ಲಿ ದೇವಿಲಾಲ್ ಕಾಂಗ್ರೆಸ್ ವಿರುದ್ಧ ಸಿಡಿದು ಅಧಿಕಾರ ನಡೆಸಿದರು. ಉತ್ತರ ಪ್ರದೇಶದಲ್ಲಿ ಚರಣ್ ಸಿಂಗ್ 1967ರಲ್ಲಿ ಭಾರತೀಯ ಲೋಕದಳ ಮೂಲಕ ಕಾಂಗ್ರೆಸ್ ಹಿಮ್ಮೆಟ್ಟಿಸಿದ್ದರು. ಒರಿಸ್ಸಾದಲ್ಲಿ 1967ರಲ್ಲೇ ಸ್ವತಂತ್ರ ಪಾರ್ಟಿ ಮತ್ತು ಒರಿಸ್ಸಾ ಜನ ಕಾಂಗ್ರೆಸ್ ಸರ್ಕಾರವನ್ನು ರಾಜೇಂದ್ರ ನಾರಾಯಣ್ ಸಿಂಗ್ ಮುನ್ನಡೆಸಿದ್ದರು.
ಹೀಗೆ ಉತ್ತರದಲ್ಲಿ 70ರ ದಶಕದಲ್ಲಿ ಕಾಂಗ್ರೆಸ್‌ಗೆ ವಿರುದ್ಧವಾಗಿ ಪ್ರಾದೇಶಿಕ ಪಕ್ಷಗಳು ಜನ್ಮ ತಳೆದು ಅಧಿಕಾರ ಸೂತ್ರ ಹಿಡಿದ ಇತಿಹಾಸವಿದ್ದರೆ ದಕ್ಷಿಣದಲ್ಲಿ 80ರ ದಶಕದಲ್ಲಿ ಪ್ರಾದೇಶಿಕ ಪಕ್ಷಗಳು ಅಧಿಕಾರ ನಡೆಸಲು ಮುಂಚೂಣಿಗೆ ಬಂದವು. ಈ ಎಲ್ಲ ರಾಜ್ಯಗಳಲ್ಲಿ ಅಂದು ಕಾಂಗ್ರೆಸ್ ವಿರೋಧಿ ಅಲೆಗಳು ಹುಟ್ಟಿಕೊಳ್ಳಲು ನೆಹರೂ ಕುಟುಂಬ ರಾಜಕಾರಣ ಮತ್ತು ಇಂದಿರಾ ಅವರ ಸರ್ವಾಧಿಕಾರಿ ಧೋರಣೆ ಎನ್ನುವುದನ್ನು ಅರ್ಥಮಾಡಿಕೊಳ್ಳಬಹುದು.
ಹಾಗಾದರೆ ಅಂದು ದೊಡ್ಡ ಪ್ರಮಾಣದಲ್ಲಿ ಕಾಂಗ್ರೆಸ್‌ಗೆ ವಿರುದ್ಧವಾಗಿ ಜನ ಪ್ರಾದೇಶಿಕ ಪಕ್ಷಗಳನ್ನು ಬೆಂಬಲಿಸಿದ್ದರೆ ಈಗ ಯಾಕೆ ಹಿನ್ನಡೆಯಾಗುತ್ತಿದೆ ಅಥವಾ ಕಳೆಗುಂದುತ್ತಿವೆ? ಎನ್ನುವ ಪ್ರಶ್ನೆ ಸಹಜವಾಗಿ ಮೂಡಬಹುದು. ಅಧಿಕಾರದ ಲಾಲಸೆ ಮತ್ತು ಸ್ವಾರ್ಥ ಪ್ರಾದೇಶಿಕ ಪಕ್ಷಗಳನ್ನು ಜನ ನಂಬದಿರಲು ಕಾರಣವೆನ್ನಬಹುದು. ಯಾವೆಲ್ಲ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಅಂದು ತಲೆಯೆತ್ತಿ ನಿಂತವೋ ಅಲ್ಲೆಲ್ಲ ಪಕ್ಷಗಳ ನಾಯಕರೊಳಗೆ ಕಚ್ಚಾಟ ನಡೆದಿವೆ. ತಮ್ಮೊಳಗಿನ ಅಹಂಗಾಗಿ ಪಕ್ಷಗಳನ್ನು ಬಲಿ ಗೊಟ್ಟಿದ್ದಾರೆ. ಕರ್ನಾಟಕದಲ್ಲಿ ಜನತಾ ಪಕ್ಷ, ಜನತಾದಳ, ಸಂಯುಕ್ತ ಜನತಾ ದಳ ಹೀಗೆ ಅದೆಷ್ಟು ಹೋಳುಗಳಾದವು? ರಾಮಕೃಷ್ಣ ಹೆಗಡೆ, ದೇವೇಗೌಡ, ಎಸ್.ಬಂಗಾರಪ್ಪ ತುಳಿದ ಹಾದಿಯನ್ನು ಅವಲೋಕಿಸಿ.
ಆಂಧ್ರದಲ್ಲಿ ಎನ್.ಟಿ.ಆರ್., ಚಂದ್ರಬಾಬು ನಾಯ್ಡು, ಹರ್ಯಾಣದಲ್ಲಿ ದೇವಿಲಾಲ್, ಉತ್ತರಪ್ರದೇಶದಲ್ಲಿ ಮುಲಾಯಂ ಸಿಂಗ್ ಯಾದವ್, ಅಸ್ಸಾಂನಲ್ಲಿ ಪ್ರಫುಲ್É ಕುಮಾರ್ ಮೊಹಂತ, ಬಿಹಾರದಲ್ಲಿ ಲಾಲೂಪ್ರಸಾದ್ ಈ ನಾಯಕರನ್ನು ನಡೆಗಳನ್ನು ಅವಲೋಕಿಸಿದರೆ ಯಾಕೆ ಜನರು ಪ್ರಾದೇಶಿಕ ಪಕ್ಷಗಳಿಂದ ವಿಮುಖರಾದರು ಎನ್ನುವುದು ಅರ್ಥವಾಗುತ್ತದೆ.
ಪ್ರಾದೇಶಿಕ ಪಕ್ಷಗಳಿಗಿರುವಷ್ಟು ಅವಕಾಶಗಳು ಈಗ ರಾಷ್ಟ್ರೀಯ ಪಕ್ಷಗಳಿಗಿಲ್ಲ. ಜನರು, ಈಗ ತಮ್ಮ ಸುತ್ತಲಿನ ಪರಿಸರ, ನೆಲ, ಜಲ, ಭಾಷೆಯನ್ನು ಹೆಚ್ಚು ಭಾವನಾತ್ಮಕವಾಗಿ ಕಾಣುತ್ತಾರೆ. ತೆಲಂಗಾಣ ಹೋರಾಟವನ್ನು ಕುತೂಹಲಕ್ಕಾಗಿ ಅವಲೋಕಿಸಿದರೆ ಈ ಸತ್ಯದ ದರ್ಶನವಾಗುತ್ತದೆ. ಪ್ರಾದೇಶಿಕವಾದ ಜನರ ಆಶೋತ್ತರಗಳನ್ನು ಈಡೇರಿಸುವುದು ರಾಷ್ಟ್ರೀಯ ಪಕ್ಷಗಳ ಮುಖ್ಯ ಅಜೆಂಡವಾಗಲು ಸಾಧ್ಯವಿಲ್ಲ. ಸಮಗ್ರ ರಾಷ್ಟ್ರವನ್ನು ಕಲ್ಪನೆಯಲ್ಲಿಟ್ಟುಕೊಂಡು ರಾಷ್ಟ್ರೀಯ ಪಕ್ಷಗಳು ರೂಪಿಸುವ ನೀತಿಗಳು ಪ್ರಾದೇಶಿಕವಾದ ಸಿಕ್ಕುಗಳನ್ನು ಬಿಡಿಸಲಾರವು. ಈ ಎಲ್ಲ ಕಾರಣಗಳಿಂದಾಗಿ ಪ್ರಾದೇಶಿಕ ಪಕ್ಷಗಳಿಗೆ ಜನ ಮಾರು ಹೋಗುವ ಅವಕಾಶಗಳು ನಿಚ್ಚಳ ವಾಗಿವೆ. ಜನರ ವಿಶ್ವಾಸವನ್ನು ಪ್ರಾದೇಶಿಕ ಪಕ್ಷಗಳ ನಾಯಕರು ಮೊದಲು ಗಳಿಸಬೇಕು. ಆತ್ಮವಂಚನೆ ರಾಜಕಾರಣದಿಂದ ಬೇಸತ್ತಿರುವುದರಿಂದಲೇ ಮತಗಟ್ಟೆಯಿಂದಲೇ ಜನ ದೂರ ಉಳಿ ಯುತ್ತಿದ್ದಾರೆ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು. ಮತಗಟ್ಟೆಗೆ ಜನ ಸಾಗರೋಪಾದಿಯಲ್ಲಿ ಹರಿದು ಬರುವಂತೆ ಮಾಡಬಲ್ಲ ಸಾಮರ್ಥ್ಯವಿರುವುದು ಪ್ರಾದೇಶಿಕ ಪಕ್ಷಗಳಿಗೆ ಮಾತ್ರ. ಒಂದು ಕಾಲವಿತ್ತು -ಯಾವುದೇ ಪಕ್ಷವೂ ಅಧಿಕಾರಕ್ಕೆ ಬರುವುದಿಲ್ಲ, ಒಂದು ಪಕ್ಷವನ್ನು ಬಿಟ್ಟರೆ ಎಂಬುದಿತ್ತು. ಇದು ಒಂದಷ್ಟು ಕಾಲ ಅಕ್ಷರಶಃ ನಿಜವಾಗಿತ್ತು ಕೂಡ. ಆದರೆ ಜನ ಬೆಳೆದಂತೆ ಬುದ್ಧಿ ಬಲ ಹೆಚ್ಚಾದಂತೆ ಈ ಥಿಯರಿ ಬದಲಾಯಿತು. ಹಾಗೆಯೇ ಕಾಲ ಕಾಲಕ್ಕೆ ಬದಲಾವಣೆಯನ್ನು ನಿರೀಕ್ಷಿಸಿದರೆ ಇಂಥ ಅನಿವಾರ್ಯತೆಗಳು ಸಹಜ. ಈಗ ಕಾಯೋಣ, ಮುಂದೇನಾಗುವುದೆಂದು.
– ಚಿದಂಬರ ಬೈಕಂಪಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.