ರಾಜಧರ್ಮದ ರಾಜಕಾರಣಿ ಅಟಲ್; ಇಂದು ವಾಜಪೇಯಿಯವರ 94ನೇ ಹುಟ್ಟುಹಬ್ಬ
Team Udayavani, Dec 25, 2017, 1:26 PM IST
ಕ್ರಿಕೆಟ್‌ನಲ್ಲಿ ಗೆಲ್ಲುವುದು ಮಾತ್ರವಲ್ಲ, ಪಾಕಿಸ್ತಾನಿಗಳ ಹೃದಯವನ್ನು ಗೆದ್ದು ಬನ್ನಿ’ ಎಂಬ ಮಾತು ಭಾರತದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಬಾಯಿಂದ ಬಂದಾಗಲೇ ದೇಶದ ಕ್ರಿಕೆಟ್ ತಂಡವಲ್ಲದೆ ಕ್ರೀಡಾ ಫಲಿತಾಂಶಕ್ಕಾಗಿ ದುರುಗುಟ್ಟಿ ಕಾಯುತ್ತಿದ್ದ ಭಾರತ
ಮತ್ತು ಪಾಕ್ ದೇಶಗಳೆರಡೂ ದಿಗ್ಭ್ರಾಂತವಾಗಿ ನಿಂತಿದ್ದವು. “ಯಾರೂ ಊಹಿಸದ ಇಂತಹ ಭಾವಪೂರ್ಣ ಮಾತುಗಳು ಕವಿ ಹೃದಯದ ಅಟಲ್‌ಜೀ ಅವರಿಂದಲ್ಲದೆ ಮತ್ತಾರ ಬಾಯಿಯಿಂದ ಬರಲು ಸಾಧ್ಯ?’ ಎಂದು ಅಂತಾರಾಷ್ಟ್ರೀಯ ಪತ್ರಿಕೆಗಳು ತಮ್ಮ ಸಂಪಾದಕೀಯದಲ್ಲಿ ಮನ ತುಂಬಿ ಬರೆದವು.
ಎತ್ತರದ ನಿಲುವು, ಕಣ್ಮನ ಸೆಳೆಯುವ ಆಕರ್ಷಕ ವ್ಯಕ್ತಿತ್ವ, ರಾಷ್ಟ್ರೀಯತೆಯ ವಿಷಯವನ್ನೆತ್ತಿಕೊಂಡರೆ ಲಕ್ಷಾಂತರ ಜನರ ನರನಾಡಿಗಳಲ್ಲಿ ರೋಮಾಂಚನ ಉಂಟು ಮಾಡಬಲ್ಲ ಕಂಚಿನ ಕಂಠ, ಮಿಂಚಿನ ಮಾತುಗಳು. ರಾಜಕಾರಣದಲ್ಲಿ ಅಧಿಕಾರವನ್ನೇ ಗುರಿಯಾಗಿಸಿಕೊಳ್ಳದೆ ಸೈ ದ್ಧಾಂತಿಕತೆಯ ತಪಸ್ಸಿನ ಮೂಲಕ ದಶಕಗಳ ಕಾಲ ಕಾದು, ಪ್ರಧಾನಿ ಪಟ್ಟವೇರಿ ಸ್ವತಂತ್ರ ಭಾರತದಲ್ಲಿ ರಾಜಧರ್ಮದ ರಾಜಕಾರಣ ಮಾಡಿದ, ಆಧುನಿಕ ಭಾರತದ ಮಹಾನ್ ನಾಯಕ, ದೇಶಭಕ್ತ, ಅಟಲ್ ಬಿಹಾರಿ ವಾಜಪೇಯಿಯವರ 94ನೇ ಹುಟ್ಟುಹಬ್ಬವಿಂದು.
ವಾಜಪೇಯಿಯವರಂತಹ ತ್ರಿಕರಣ ಶುದ್ಧಿಯುಳ್ಳ ವ್ಯಕ್ತಿಯೊಬ್ಬ, ಬದುಕಿನ ದಾರಿಯಲ್ಲಿ ಸವೆಸಿದ ಏರು-ತಗ್ಗುಗಳು, ಅನುಭವಿಸಿದ ಸಿಹಿ-ಕಹಿಗಳ ಪರಿಚಯ ಇಂದಿನ ವೃತ್ತಿಪರ ರಾಜಕಾರಣದ ಜಂಜಾಟದ ನಡುವೆ ಅರ್ಥ ಮಾಡಿಕೊಳ್ಳುವುದು ಕಷ್ಟ. “”ವ್ಯಕ್ತಿಗಿಂತ ಪಕ್ಷ ಮುಖ್ಯ, ಆದರೆ ರಾಷ್ಟ್ರದ ಪ್ರಶ್ನೆ ಬಂದಾಗ ಪಕ್ಷಕ್ಕಿಂತ ದೇಶವೇ ಮುಖ್ಯ” ಎಂಬ ನಂಬಿಕೆಯ ವೃಕ್ಷದ ಕೊಂಬೆಯಾಗಿ ಬೆಳೆದ ಅಟಲ್, ತುರ್ತು ಪರಿಸ್ಥಿತಿಯ ಕರಾಳ ದಿನಗಳಲ್ಲಿ ದೇಶಕ್ಕಾಗಿ ತಾವೇ ನೀರೆರೆದು ಪೋಷಿಸಿದ, ಜನಸಂಘವೆಂಬ ಸಂಘಟನೆಯನ್ನೇ ವಿಸರ್ಜಿಸಲು ಹಿಂದೆ ಮುಂದೆ ನೋಡದೆ ಒಪ್ಪಿಬಿಟ್ಟಿದ್ದರು. ಆ ನಿರ್ಧಾರದ ಹಿಂದೆ, ರಾಜಕಾರಣವನ್ನು ವ್ರತವಾಗಿ ಸ್ವೀಕರಿಸಿದ ಶ್ಯಾಂ ಪ್ರಸಾದ್ ಮುಖರ್ಜಿಯವರು ಹುಟ್ಟು ಹಾಕಿ 25 ವರ್ಷಗಳ ಕಾಲ ಕಟ್ಟಿ ಬೆಳೆಸಿದ ರಾಷ್ಟ್ರಪ್ರೇಮಿ ಸಂಘಟನೆಯನ್ನೇ ಮರೆತು ಬಿಟ್ಟ ನೋವಿತ್ತು. ಆದರದು ಪಕ್ಷಕ್ಕಿಂತ ದೇಶ ಮುಖ್ಯವೆಂಬ ಸಿದ್ಧಾಂತಕ್ಕೆ ಕೊಟ್ಟ ಒಪ್ಪಿಗೆಯಾಗಿತ್ತು. ಆದರೆ ಇಂದು ಪ್ರಕಾಶಿಸುತ್ತಿರುವ ಭಾರತದಲ್ಲಿ ತಮ್ಮ ಪಾರ್ಟಿಯ ಏಳಿಗೆಗಾಗಿ ಉಗ್ರಗಾಮಿಗಳ ಜತೆ ಕೈ ಜೋಡಿಸಿದ ನಿದರ್ಶನಗಳು ನಮ್ಮನ್ನೆಲ್ಲ ಬೆಚ್ಚಿ ಬೀಳಿಸುತ್ತಿರುವಾಗ, ಅಟಲ್‌ಜೀಯ ದೃಷ್ಟಿಕೋನ ನೆನಪಾಗುತ್ತದೆ.
1942ರ ಡಿ.25ರಂದು, ಜಗತ್ತಿಗೆ ಶಾಂತಿ ಸಂದೇಶ ಸಾರಿದ ಏಸು ಕ್ರಿಸ್ತನ ಜನ್ಮ ದಿನದಂದೇ, ಮಧ್ಯಪ್ರದೇಶದ ಗ್ವಾಲಿಯರ್‌ನ ಶಿಂಧೆದಂಡುವಿನ ಸುಸಂಸ್ಕೃತ ಮನೆತನದಲ್ಲಿ, ತಂದೆ ಕೃಷ್ಣ ಬಿಹಾರಿ ವಾಜಪೇಯಿ, ತಾಯಿ ಕೃಷ್ಣಾದೇವಿಯವರಿಗೆ ಜನಿಸಿದ ಅಟಲ್‌ಗೆ, “ಅಟಲ್ ಬಿಹಾರಿ’ ಎಂದು ನಾಮಕರಣ ಮಾಡಿದ್ದಕ್ಕೆ ಹೆತ್ತವರು ಕೊಡುವ ಕಾರಣವೆಂದರೆ, “ಅಟಲ್’ ಎಂದರೆ “ಕಾರ್ಯಸಾಧಕ’, “ಬಿಹಾರಿ’ ಎಂದರೆ ಆಳವಾದ ವಿಮರ್ಶಕ’ ಎನ್ನುತ್ತಾರೆ. ಅಟಲ್ ಬಾಲ್ಯದ ದಿನಗಳಲ್ಲಿ ಶುದ್ಧ ಭಾರತೀಯ ವಾತಾವರಣದಲ್ಲಿ ಬೆಳೆದರು.
ತಂದೆ ಕೃಷ್ಣ ಬಿಹಾರಿಯನ್ನು ನೋಡಲು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗಣ್ಯರನೇಕರು ಮನೆಗೆ ಬರುವುದು, ಚರ್ಚೆ ಮಾಡುವುದು, ಸಮರ್ಥ ಮತ್ತು ಸ್ವಾಭಿಮಾನಿ ಭಾರತ ನಿರ್ಮಾಣವಾಗಬೇಕೆಂಬ ಸಂಘ ಪ್ರಮುಖರ ಕಲ್ಪನೆಗಳೆಲ್ಲ ಅಟಲ್ ರನ್ನು ಓರ್ವ ಉಜ್ವಲ ರಾಷ್ಟ್ರಭಕ್ತನನ್ನಾಗಿ ರೂಪಿಸಲು ತಳಪಾಯ ಹಾಕಿದವು. ಹೈಸ್ಕೂಲ್ ಮಟ್ಟದಲ್ಲಿ ಕಲಿಯುತ್ತಿರುವಾಗಲೇ ಕಾವ್ಯಮಯವಾದ ಭಾಷೆ, ಪ್ರಾಸಬದ್ಧ ಮಾತುಗಾರಿಕೆ, ಚಾಟಿಯೇಟಿನಂತಹ ನುಡಿ ಅವರಿಗೆ ಕರಗತವಾಗಿತ್ತು. ತಂದೆ ಕೃಷ್ಣ ಬಿಹಾರಿ ಆದರ್ಶ ಶಿಕ್ಷಕರಾದ್ದರಿಂದ, ಮನೆಯ ಕೌಟುಂಬಿಕ ವಾತಾವರಣವೂ ಅಟಲ್ ವ್ಯಕ್ತಿತ್ವ ರೂಪಣಕ್ಕೆ ಮುನ್ನುಡಿ ಬರೆಯಿತು. ಗ್ವಾಲಿಯರ್‌ನ ವಿಕ್ಟೋರಿಯಾ ಕಾಲೇಜಿನಲ್ಲಿ ಬಿಎ, ಕಾನ್ಪುರದ ಶಿಕ್ಷಣ ಸಂಸ್ಥೆಯಲ್ಲಿ ಎಂಎ ಪದವಿ ಪಡೆದ ಅಟಲ್, ತನ್ನ ಮಗ ಪ್ರಖ್ಯಾತ ವಕೀಲನಾಗಬೇಕೆಂಬ ತಂದೆಯ ಆಸೆಯಿಂದಾಗಿ ಅನಿವಾರ್ಯವಾಗಿ, ಅರೆಮನಸ್ಸಿನಿಂದ ಲಾ ಕಾಲೇಜು ಸೇರಿಕೊಂಡರು. ಆದರೆ ಕಾನೂನು ಶಿಕ್ಷಣ ಹಿಡಿಸದೆ ನಡುವೆಯೇ ಕಾಲೇಜು ತೊರೆದರು.
ಹಾಗಾಗಲು ಸಂಘ ಮತ್ತು ಸಾರ್ವಜನಿಕ ಜೀವನದ ಸೆಳೆತವೂ ಕಾರಣವಾಗಿತ್ತು. ನ್ಯಾಯಶಾಸ್ತ್ರವನ್ನು ಓದದಿದ್ದರೂ ಅಟಲ್‌ಜೀ ರಾಜಕೀಯ ಕ್ಷೇತ್ರದಲ್ಲಿ ಸರ್ವಶ್ರೇಷ್ಠ ನ್ಯಾಯಧೀಶನಂತೆ ನಡೆದುಕೊಂಡರು. ಸರಿಸುಮಾರು ಆರು ದಶಕಗಳ ಕಾಲ ಭಾರತದ ರಾಜಕೀಯದಲ್ಲಿ
ಉದಾತ್ತ ಧ್ಯೇಯಗಳಿಂದ ಶತಕೋಟಿ ಮೀರಿದ ಭಾರತೀಯರ ಹೃದಯದಲ್ಲಿ ಚಿರಸ್ಥಾಯಿಯಾಗಿ ನಿಂತ ವಾಜಪೇಯಿಯವರ ವ್ಯಕ್ತಿತ್ವ ರೂಪು ಗೊಂಡದ್ದು ಸಂಘದ ಶಾಖೆಗಳ ಮೂಲಕ. ಆರ್‌ಎಸ್‌ಎಸ್ ಸ್ವಯಂಸೇವಕನಾಗಿ ಲಕ್ನೋ ಸಮೀಪದ ಕಾಂಡಿಲಾ ಶಾಖೆ ನಡೆಸಿದ್ದಲ್ಲದೆ, ಪ್ರಚಾರಕನಾಗಿ ಊರೂರು ಸುತ್ತಿದ್ದರು. ಸ್ವಾತಂತ್ರ ಚಳಿವಳಿಯ ದಿನಗಳಲ್ಲೇ, ಪಂಡಿತ್ ದೀನ್ ದಯಾಳ್ ಅವರ ಜತೆಗೂಡಿ ಆರಂಭಿಸಿದ “ರಾಷ್ಟ್ರಧರ್ಮ’ ಮಾಸಪತ್ರಿಕೆಯಲ್ಲಿ ದುಡಿದುದಲ್ಲದೆ, “ಪಾಂಚಜನ್ಯ’ ಎಂಬ ವಾರಪತ್ರಿಕೆಯ ಜತೆ, “ಸ್ವದೇಶ’ ಮತ್ತು “ವೀರಅರ್ಜುನ’ ಎಂಬ ದಿನಪತ್ರಿಕೆಗಳ ಸಂಪಾದಕರಾಗಿ ದುಡಿದಿದ್ದರು ಅಟಲ್.
ಮಗುವಿನಂಥ ಮುಗ್ಧತೆ- ಧೃಢಚಿತ್ತ ಸೇನಾನಿ ಬೆಳಿಗ್ಗೆ ಏಳುತ್ತಲೇ ಸಾಕುನಾಯಿಗಳೊಂದಿಗೆ ಕಾಲ್ನಡಿಗೆಯಲ್ಲಿ ಸುತ್ತಾಡುವುದು, ವ್ಯಂಗ್ಯಚಿತ್ರಗಳನ್ನು ನೋಡಿ ಬಾಯ್ತುಂಬ ನಗುವುದು, ಸಂಗೀತ ಕೇಳುವುದು ಪಾಜಪೇಯಿಗೆ ಅಚ್ಚುಮೆಚ್ಚು. ವಾಜಪೇಯಿಯವರ ಸ್ನೇಹ ಹಸ್ತದ ಪರಿ ಹೇಗಿತ್ತೆಂದರೆ, ನಖಶಿಖಾಂತ ಭಾರತವನ್ನು ವಿರೋಧಿಸುವ ಪಾಕಿಸ್ತಾನದ ಲಾಹೋರ್ ಗೆ ಭಾರತದಿಂದ ಬಸ್ ಸಂಚಾರ ಪ್ರಾರಂಭಿಸಿಯೇ ಬಿಟ್ಟರು. ನಿರಂತರ ದ್ವೇಷ ಸಾಧನೆಯ ಮೂಲಕ ಭಾರತ-ಪಾಕ್ ಎರಡೂ ದೇಶಗಳು ಮಾನವಜೀವಗಳ ಸಹಿತ ಆರ್ಥಿಕ ನಷ್ಟವನ್ನು ಅನುಭವಿಸಬೇಕಾಗಿದೆ.
ಶಸ್ತ್ರಾಸ್ತ್ರದ ಬದಲು ಹಸ್ತಲಾಘವದ ಮೂಲಕ ಬದುಕು ಬೆಸೆಯೋಣ ಎಂದ ವಾಜಪೇಯಿ ಸ್ವತಃ ಬಸ್‌ನಲ್ಲಿ ಲಾಹೋರ್‌ಗೆ ಪ್ರಯಾಣ ಬೆಳೆಸಿದ್ದರು. ಆದರೇನು, ಪ್ರಪಂಚದ ಮುತ್ಸದ್ದಿ ರಾಜಕಾರಣಿ ನೀಡಿದ ಸ್ನೇಹಹಸ್ತದ ಔದಾರ್ಯಕ್ಕೆ ಮರು ಪ್ರೀತಿಯ ಧಾರೆ ಎರೆಯುವ ಬದಲು ಪಾಕಿಸ್ತಾನ ಎಂಬ ಭ್ರಮಾಧೀನ ನೆಲ ಕಾರ್ಗಿಲ್ ಯುದ್ಧದ ಉಡುಗೊರೆ ಕೊಟ್ಟಿತು.
ಲಾಹೋರ್ ಮಾತುಕತೆಯಲ್ಲಿ, ಕಾಶ್ಮೀರ ನಮ್ಮ ಹಕ್ಕು ಎಂದು ಕ್ಯಾತೆ ತೆಗೆದ ಪಾಕಿಸ್ತಾನದ ಅಂದಿನ ಪ್ರಧಾನಿ ನವಾಜ್ ಷರೀಫ್ಗೆ ಅಟಲ್, “ಅದ್ಯಾವ ಆಧಾರದಲ್ಲಿ ಕಾಶ್ಮೀರ ನಿಮ್ಮ ಹಕ್ಕು?’ ಎಂದು ಕೇಳಿದ್ದರು. ಷರೀಫ್ ಮಾರುತ್ತರ ನೀಡಿ, “ಕಾಶ್ಮೀರದಲ್ಲಿ ಮುಸ್ಲಿಮರೇ ಅಧಿಕವಿದ್ದಾರೆ’ ಎಂದಿದ್ದರು. ವಾಜಪೇಯಿ ಆಗ “ಹೌದೇ? ದೇಶ ಧರ್ಮದ ನೆಲೆಯಲ್ಲಿ ತುಂಡಾಯಿತು. ಆದರೆ, ಇಂದೂ ಪಾಕಿಸ್ತಾನಕ್ಕಿಂತ ಹೆಚ್ಚು ಮುಸ್ಲಿಮರು ಹಿಂದೂಸ್ತಾನದಲ್ಲಿದ್ದಾರೆ’ ಎಂದು ಹೇಳಿ ಅವರ ಬಾಯಿ ಮುಚ್ಚಿಸಿದ್ದರು.
ಅಟಲ್‌ಜೀಯವರ ಮೃದುತ್ವವನ್ನೇ ದೌರ್ಬಲ್ಯವೆಂದು ತಿಳಿದುಕೊಂಡ ಪಾಕಿಸ್ತಾನಕ್ಕೆ ತಕ್ಕ ಶಾಸ್ತಿ ಮಾಡಲು ವಾಜಪೇಯಿ ಗಟ್ಟಿ ನಿರ್ಧಾರ ಮಾಡಿದರು. ಭಾರತದಿಂದ ಸಿಡಿದ ಮದ್ದುಗುಂಡುಗಳು ಕಾರ್ಗಿಲ್ ಶಿಖರದಲ್ಲಿ ಅಕ್ರಮವಾಗಿ ಕಟ್ಟಿದ ಪಾಕಿಸ್ತಾನದ ಬಂಕರ್‌ಗಳನ್ನು ನಾಶಮಾಡಿದವು. ಅಟಲ್‌ಜೀಯವರ ರಾಜಗಾಂಭೀರ್ಯದ ಮುಖಂಡತ್ವಕ್ಕೆ ಮನಸೋತ ಅಮೆರಿಕ, ರಷ್ಯಾ, ಜಪಾನ್, ಫ್ರಾನ್ಸ್, ಇಂಗ್ಲೆಂಡ್‌ಗಳೂ ಭಾರತದ ಪರ ನಿಂತು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದವು. ಪಾಕ್, ಚೀನದ ಮೊರೆ ಹೊಕ್ಕರೂ ವಾಜಪೇಯಿ ಅವರ ದೃಢ ನಿರ್ಧಾರದ ಎದುರು ಚೀನವೂ ಮಂಡಿಯೂರಿ ಪಾಕಿಸ್ತಾನಕ್ಕೆ ನೆರವು ನಿರಾಕರಿಸಿತ್ತು.
1996ರಲ್ಲಿ 13 ದಿನಗಳ ಕಾಲ ಪ್ರಧಾನಿಯಾಗಿದ್ದ ಅಟಲ್‌ಜೀ, 1999ರಲ್ಲಿ 13 ತಿಂಗಳುಗಳ ಕಾಲ ಪ್ರಧಾನಿಯಾದರು. ಇತಿಹಾಸದ ಪುಟವನ್ನು ತಿರುವಿ ನೋಡಿದರೆ, ಆ ದಿನಗಳಲ್ಲಿ ಲೋಕಸಭೆಯಲ್ಲಿ ವಿಶ್ವಾಸ ಮತ ಕೋರಲು ನಿಂತ ಅಟಲ್ ದೇಶವನ್ನುದ್ದೇಶಿಸಿ ಹೇಳಿದ್ದು, “ನನ್ನ ಸರಕಾರವನ್ನು ಉಳಿಸಲು ಬೆರಳಣಿಕೆಯ ಮತಗಳ ಅಗತ್ಯವಿದೆ. ಮಾರುಕಟ್ಟೆಯಲ್ಲಿ ಖರೀದಿಗೆ ಮಾಲುಗಳು ಸಿದ್ಧವಾಗಿ ನಿಂತಿವೆ. ಆದರೆ ನನ್ನ ಸರಕಾರವನ್ನು ಉಳಿಸಿಕೊಳ್ಳಲು ಅಕ್ರಮ ಮತಗಳನ್ನು ಎಡಗಣ್ಣಿನಿಂದಲೂ ನೋಡಲಾರೆ’. ಬಳಿಕ “ಸೋತ ಒಂದು ಮತದ ಗುರಿಯನ್ನಿಟ್ಟುಕೊಂಡು, ಮತ್ತೂಮ್ಮೆ ಗೆಲುವಿಗಾಗಿ ಭಾರತೀಯರಲ್ಲಿ ಒಂದೊಂದೇ ಮತವನ್ನು ಕೇಳುತ್ತೇನೆ’ ಎಂದು ರಾಜೀನಾಮೆ
ಸಲ್ಲಿಸಿದ್ದರು. ಅಂದಿನ ಅವರ ಮಾತುಗಳನ್ನಾಲಿಸಿದ ಭಾರತೀಯರು ತಮ್ಮ ಒಂದೊಂದು ಮತಗಳ ಮೂಲಕ 1999ರಿಂದ 2004ರ ವರೆಗೆ ಐದು ವರ್ಷಗಳ ಕಾಲ ಸಂಪೂರ್ಣ ಅಧಿಕಾರ ನೀಡಿ ವಾಜಪೇಯಿಯವರ ವ್ಯಕ್ತಿತ್ವಕ್ಕೆ ಗೌರವ ಸಲ್ಲಿಸಿದ್ದರು.
ತಂದರು ಭಾರತಕ್ಕೆ ಅಣುಬಾಂಬ್ ಶಕ್ತಿ
ಮೃದು ಮನಸ್ಸಿನ ಅಟಲ್‌ಜೀ ರಾಷ್ಟ್ರಕ್ಕಾಗಿ ಎಂತಹ ಕಠಿಣ ನಿರ್ಧಾರವನ್ನು ನಿರ್ದಾಕ್ಷಿಣ್ಯವಾಗಿ ತೆಗೆದುಕೊಳ್ಳುತ್ತಾರೆಂದರೆ, ಜಗತ್ತಿನ ಬೆರಳಣಿಕೆಯ ರಾಷ್ಟ್ರಗಳ ಸೊತ್ತಾಗಿದ್ದ ಅಣ್ವಸ್ತ್ರ ಸಾಮರ್ಥ್ಯ, ಅವರ ಕಾಲದಲ್ಲಿ ಭಾರತದ ಮಡಿಲಿಗೂ ಬಂತು. ಪೋಖಾನ್ ಅಣುಬಾಂಬ್ ಪರೀಕ್ಷೆಯ ಬಳಿಕ ದೊಡ್ಡಣ್ಣ ಅಮೆರಿಕವೂ ಸೇರಿ ಸಿರಿವಂತ ದೇಶಗಳೆಲ್ಲ “ಆರ್ಥಿಕ ದಿಗ್ಬಂಧನ ಹೇರುತ್ತೇವೆ’ ಎಂದು ಬೆದರಿಸಿದಾಗ ಅಟಲ್‌ಜೀ, “ಅಣು ಬಾಂಬ್ ಅನ್ಯರ ಮೇಲೆ ದಾಳಿಗಲ್ಲ. ಅಮೆರಿಕ, ಫ್ರಾನ್ಸ್, ಬ್ರಿಟನ್, ಚೀನಗಳಂಥ ದೇಶಗಳು ಅಣ್ವಸ್ತ್ರಗಳನ್ನು ತಮಗೆ ಬೇಕಾದವರಿಗೆ ಮಾರುವಾಗ ಭಾರತ ಕೈಕಟ್ಟಿ ಕುಳಿತುಕೊಳ್ಳಬೇಕೇ? ಇತರರೊಂದಿಗೆ ಸ್ಪರ್ಧಿಯಾಗಬೇಕಾದರೆ ನಮ್ಮ ತಾಕತ್ತಿನ ಅರಿವು ಅವರಿಗಾಗಬೇಕು. ಅಣುಬಾಂಬ್ ಹೊಂದಿದ ದೇಶವೊಂದು, ಅದು ಇಲ್ಲದಿರುವ ದೇಶವನ್ನು ತಾತ್ಸಾರದಿಂದ ಕಾಣುತ್ತದೆ’ ಎಂದು ಪ್ರತಿಪಾದಿಸಿದರು.
ಅಟಲ್‌ಜೀ ಎಂದೂ ಮತೀಯವಾದಕ್ಕಾಗಲೀ, ಸಂಘರ್ಷದ ದಾರಿಗಾಗಲೀ ಇಳಿದವರಲ್ಲ. ಅವರ ಕನಸು ದೇಶವಾಸಿಗಳೆಲ್ಲ ಒಂದಾಗಬೇಕು, ಸಮೃದ್ಧ ಭಾರತದ ನಿರ್ಮಾಣವಾಗಬೇಕು ಎಂಬುದಾಗಿತ್ತು. ಅಟಲ್‌ಜೀಯವರ ನೇತೃತ್ವದ ಬಿಜೆಪಿ ಲೋಕಸಭೆಯಲ್ಲಿ ಎರಡೇ ಸ್ಥಾನಗಳನ್ನು ಹೊಂದಿದ್ದಾಗ, ಅನ್ಯ ರಾಜಕೀಯ ಪಕ್ಷಗಳ ಮುಖಂಡರು ವಾಜಪೇಯಿಯವರ ದೂರಗಾಮಿ ಯೋಚನೆಯ ಮಾತುಗಳನ್ನು ಕೇಳಿ ನಕ್ಕಿದ್ದರು.
“ಸಮರ್ಥ ಭಾರತವನ್ನು ನಾವು ಕಟ್ಟುತ್ತೇವೆ’ ಎನ್ನುವ ಅಟಲ್ ಮಾತುಗಳು, ಇತರ ಸಂಸದರಿಗೆ ತಮಾಷೆಯ ವಸ್ತುವಾಗಿತ್ತು.
1980ರ ಅವಧಿಯಲ್ಲಿ, ಸರಿಸುಮಾರು 37 ವರ್ಷಗಳ ಹಿಂದೆ ನಗುವವರಿಗಾಗಿ ವಾಜಪೇಯಿ, “”ಕತ್ತಲು ಹೋಗುತ್ತದೆ, ಮತ್ತೆ ಬೆಳಕು ಪ್ರಜ್ವಲಿಸುತ್ತದೆ, ಕಮಲ ಎಲ್ಲೆಡೆ ಅರಳುತ್ತದೆ” ಎಂದಿದ್ದರು. ಈಗ ಇತಿಹಾಸ ಮಗ್ಗಲು ಮಗುಚಿದೆ. ಅಟಲ್ ಅವರ ಅಂದಿನ ನುಡಿ, ಅವರ ಶಿಷ್ಯ ನರೇಂದ್ರ ಮೋದಿಯವರ ಮೂಲಕ ನಿಜವಾಗಿದೆ. ಅಟಲ್ ಒಬ್ಬ ಪ್ರಾಪಂಚಿಕ ರಾಜಕಾರಣದ ಭವಿಷ್ಯಕಾರನೇ? “ಹೌದು’ ಎನ್ನುತ್ತದೆ ಇತಿಹಾಸ.
ಅಟಲ್‌ಗೆ ಗೌರವ, ಪ್ರಶಸ್ತಿಗಳು ಹುಡುಕಿಕೊಂಡು ಬಂದವು. ಅವರ ರಾಷ್ಟ್ರಪ್ರೇಮ, ಮಾನವತಾವಾದ, ಪರಮತ ಸಹಿಷ್ಣುತೆ, ಸಂಸದೀಯ ಪಟುತ್ವ, ಕವಿ ಹೃದಯ, ಕನಸುಗಾರಿಕೆ ಇವೆಲ್ಲ ಗಮನಿಸಿದ ಅಂದಿನ ಭಾರತ ಸರಕಾರ ಪದ್ಮವಿಭೂಷಣ ಪ್ರಶಸ್ತಿಯನ್ನು ನೀಡಿತ್ತು. ಪ್ರಶಸ್ತಿಗೆ ಪೂರಕವಾಗಿ ದಿಲ್ಲಿಯ ಮೈದಾನದಲ್ಲಿ ನಡೆದ ಸಮ್ಮಾನ ಸಮಾರಂಭದಲ್ಲಿ ಮಾತನಾಡಿದ ಅಟಲ್‌ಜೀ, ಚುಟುಕೊಂದನ್ನು ವಾಚಿಸಿ, “”ಹೇ ಪ್ರಭು
ನನ್ನ ಸುತ್ತಲಿನ ಆತ್ಮೀಯರನ್ನು ಆಲಂಗಿಸಿಕೊಳ್ಳಲಾಗದಷ್ಟು ದೊಡ್ಡವನನ್ನಾಗಿ ನನ್ನನ್ನು ಮಾಡಬೇಡ. ಅಹಂಕಾರದಿಂದ ಮುಕ್ತಗೊಳಿಸು” ಎಂದಿದ್ದರು. ಜನ ಸಾಮಾನ್ಯನ ಸಖನ ಈ ಮಾತು ವಿಶ್ವದೆಲ್ಲೆಡೆ ಮಾರ್ದನಿಸಿತು. ಭಾರತರತ್ನವಂತೂ ಭಾರತದ ಹೆಮ್ಮೆಯ ಅಜಾತಶತ್ರುವಿಗೆ ಸಂದ ಗೌರವ. ಇಂಥ ಅಟಲ್ ಬಿಹಾರಿ ಎಂಬ ಮಹಾನ್ ನಾಯಕ ಬಾಳ ಮುಸ್ಸಂಜೆಯಲ್ಲಿ ಏಕಾಕಿತನಕ್ಕೆ ಅಂಟಿಕೊಂಡಿದ್ದಾರೆ. ಒಂದರ್ಥದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದೇಶಭಕ್ತ ಸೇನಾನಿಯೊಬ್ಬ ಮಾತು ಮುಗಿಸಿ ಮೌನಕ್ಕೆ ಶರಣಾಗಿದ್ದಾನೆ. ರಾಜಕಾರಣವೆಂಬ ಕುರುಕ್ಷೇತ್ರದಲ್ಲಿ ಹಸ್ತಿನಾಪುರವೆಂಬ ಭಾರತದ ನೆಲದ ರಕ್ಷಣೆಗೋಸ್ಕರ ಬದುಕು ಮಡಿಪಾಗಿಟ್ಟ ಬಿಜೆಪಿಯ ಭೀಷ್ಮ ಶರಶಯ್ಯೆಯಲ್ಲಿ ಒರಗಿದ್ದಾರೆ.
*ಕೋಟ ಶ್ರೀನಿವಾಸ ಪೂಜಾರಿ, ಎಂಎಲ್‌ಸಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
laws: ಕಠಿಣ ಕಾಯ್ದೆ ಇರುವುದು ಸ್ತ್ರೀ ರಕ್ಷಣೆಗೆ, ದುರ್ಬಳಕೆ ಸಲ್ಲ: ಸುಪ್ರೀಂ ಕೋರ್ಟ್
Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ
Mangaluru: ಬಾಲಕಿ, ಮಹಿಳೆಯ ವೀಡಿಯೋ ಚಿತ್ರೀಕರಣ: ಆರೋಪಿಗೆ 5 ವರ್ಷಗಳ ಜೈಲು ಶಿಕ್ಷೆ
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
AICC ಅಧಿವೇಶನ: ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿಂದು ಮಹತ್ವದ ಸಭೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.