ಸುಭದ್ರ ವೇದಿಕೆ ನಿರ್ಮಿಸಿದ ಬಜೆಟ್
ಮುಂದಿನ ಐದು ವರ್ಷಕ್ಕೆ ಬಲಿಷ್ಠ ನೋಟ ಒದಗಿಸಿದ ವಿತ್ತ ಸಚಿವರು
Team Udayavani, Jul 9, 2019, 5:10 AM IST
ಇನ್ನು ಪರಿಸರ ರಕ್ಷಣೆಯ ವಿಚಾರದಲ್ಲಿ ಜಾಗತಿಕ ಮಟ್ಟದಲ್ಲಿ ಭಾರತದ ಬದ್ಧತೆಗೆ ಪೂರಕವಾಗುವಂಥ ಘೋಷಣೆಗಳೂ ಆಗಿವೆ. ಭಾರತವನ್ನು ವಿದ್ಯುತ್ ಚಾಲಿತ ವಾಹನಗಳ ಕೇಂದ್ರ ಸ್ಥಾನವಾಗಿಸುವಲ್ಲಿ ಮತ್ತು ಈ ವಾಹನಗಳ ಬಳಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ದೊಡ್ಡ ಶಕ್ತಿಯನ್ನು ತುಂಬಿದೆ. ವಿದ್ಯುತ್ ಚಾಲಿತ ವಾಹನಗಳ ಅಳವಡಿಕೆಗೆ ವೇಗ ಕೊಡುವುದಕ್ಕಾಗಿ ಫೇಮ್‌ಯೋಜನೆಯ ಎರಡನೇ ಹಂತದಲ್ಲಿ 10 ಸಾವಿರ ಕೋಟಿ ರೂಪಾಯಿ ವಿನಿಯೋಗಿಸಲಾಗುತ್ತಿದೆ.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮೋದಿ 2.0 ಸರ್ಕಾರದ ಮೊದಲ ಮುಂಗಡ ಪತ್ರವನ್ನು ಮಂಡಿಸಿದ್ದಾರೆ. ಈ ಬಜೆಟ್‌ನಲ್ಲಿ ಸೀತಾರಾಮನ್ ದೇಶಕ್ಕಾಗಿ ಬೃಹತ್ ಯೋಜನೆಗಳನ್ನು ಘೋಷಿಸುವ ಬದಲು, ಮುಂದಿನ ಐದು ವರ್ಷಗಳಿಗೆ ಬೇಕಾದ ಬಲಿಷ್ಠ ನೋಟವನ್ನು-ದೂರದೃಷ್ಟಿಯನ್ನು ಒದಗಿಸುವುದಕ್ಕೆ ಹೆಚ್ಚು ಒತ್ತು ಕೊಟ್ಟಿದ್ದಾರೆ. ಇದು ನಿಜಕ್ಕೂ ಗುಣಾತ್ಮಕ ಹೆಜ್ಜೆಯಾಗಿದೆ ಮತ್ತು ದೇಶದ ವಿತ್ತಸ್ಥಿತಿಯನ್ನು ಬಲಿಷ್ಠಗೊಳಿಸಬೇಕಾದ ಈಗಿನ ಅಗತ್ಯಕ್ಕೆ ಪೂರಕವಾಗಿದೆ. ಇನ್ನು 2020ರ ವೇಳೆಗೆ ಹಣಕಾಸು ಕೊರತೆಯ ಗುರಿಯನ್ನು ಜಿಡಿಪಿಯ 3.4 ಪ್ರತಿಶತದಿಂದ 3.3 ಪ್ರತಿಶತಕ್ಕೆ ಇಳಿಸಿದ್ದಾರೆ ವಿತ್ತ ಸಚಿವರು.
ಕಳೆದ ಅವಧಿಯಿಂದಲೂ ಕೇಂದ್ರ ಸರ್ಕಾರ ಭಾರತದ ಪ್ರತಿಯೊಬ್ಬ ನಾಗರಿಕನಿಗೂ ಬದುಕಿನ ಮೂಲ ಅವಶ್ಯಕತೆಗಳನ್ನು ಪೂರೈಸುವುದರತ್ತ ಧ್ಯಾನ ಕೇಂದ್ರೀಕರಿಸಿದ್ದು, ಈಗ ಅದು ತನ್ನ ಭರವಸೆಯನ್ನು ಈಡೇರಿಸುವ ಹಾದಿಯಲ್ಲಿ ಇದೆ. ಸಾಮಾಜಿಕ ಮೂಲಸೌಕರ್ಯಾಭಿವೃದ್ಧಿಗೆ ಹೆಚ್ಚು ಅನುದಾನ ಒದಗಿಸುವ ಪರಿಪಾಠ ಈ ಬಜೆಟ್‌ನಲ್ಲೂ ಮುಂದುವರಿದಿದೆ. ಈ ಎಲ್ಲಾ ಸುಧಾರಣೆಗಳಲ್ಲಿ ಅತಿ ಹೆಚ್ಚು ಆಯಾಮಗಳಲ್ಲಿ ಪ್ರಭಾವ ಬೀರಲಿರುವ ಅಂಶವೆಂದರೆ, ಉನ್ನತ ಶಿಕ್ಷಣಕ್ಕೆ ಈ ಬಾರಿ ಅಧಿಕ ಬಲ ತುಂಬಿರುವುದು. ಪ್ರಸ್ತಾವಿತ ರಾಷ್ಟ್ರೀಯ ಶಿಕ್ಷಣ ನೀತಿಯು ದೇಶದಲ್ಲಿನ ಟಾಪ್ ಪ್ರತಿಭೆಗಳನ್ನು ದೇಶದಲ್ಲೇ ಉಳಿಸಿಕೊಳ್ಳಲು ಮತ್ತು ಅವರನ್ನು ಬೆಳೆಸಲು ಸಹಾಯ ಮಾಡಲಿದೆ. ಹಾಗೆ ನೋಡಿದರೆ, ನಮ್ಮ ವಿಶ್ವವಿದ್ಯಾಲಯಗಳಲ್ಲಿ ಸಾಕಷ್ಟು ಗುಣಮಟ್ಟದ ಸಂಶೋಧನೆಗಳೇನೂ ಆಗುತ್ತಿಲ್ಲ. ಹೀಗಾಗಿ, ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಸಂಶೋಧನಾ ಸಂಸ್ಥೆಯ ಸ್ಥಾಪನೆಯು ಸಮಯೋಚಿತವಾಗಿದೆ. ಇನ್ನು ಶಿಕ್ಷಣ ಸಂಸ್ಥೆಗಳಲ್ಲಿ ಹೆಚ್ಚಿನ ಸ್ವಾಯತ್ತತೆಯನ್ನು ತರಲು ಉನ್ನತ ಶಿಕ್ಷಣ ಆಯೋಗವನ್ನು ಸ್ಥಾಪಿಸುವುದರಿಂದಾಗಿ, ಶೈಕ್ಷಣಿಕ ಫಲಪ್ರದತೆಯಲ್ಲೂ ಗುಣಾತ್ಮಕ ಬದಲಾವಣೆ ಕಂಡು ಬರಲಿದೆ.
ವಿವಿಧ ವಲಯಗಳಲ್ಲಿನ ಬೆಳವಣಿಗೆಯನ್ನು ಉತ್ತೇಜಿಸುವುದು ಮತ್ತು ಬೆಂಬಲಿಸುವುದರ ಮೂಲಕ ಬೃಹತ್ ಮಟ್ಟದ ಮೂಲಸೌಕರ್ಯಾಭಿವೃದ್ಧಿ ಮಾಡುವುದು ಈ ಸರ್ಕಾರದ ಮುಂದಿನ ಗುರಿಯಾಗಿರಲಿದೆ. ದೇಶದ ಜಿಡಿಪಿಯಲ್ಲಿ ಸರಕುಸಾಗಣೆ/ಯಾನ(ಲಾಜಿಸ್ಟಿಕ್ಸ್) ಪಾಲು 14.4 ಪ್ರತಿಶತದಷ್ಟಿದೆ. ಪಾಶ್ಚಿಮಾತ್ಯ ಆರ್ಥಿಕತೆಗಳಿಗಿಂತಲೂ ಇದು ಎರಡು ಪಟ್ಟು ಅಧಿಕ ಪ್ರಮಾಣ. ಈ ಕ್ಷೇತ್ರದಲ್ಲಿ ಅದ್ಭುತ ಪ್ರಮಾಣದ ಫಲಪ್ರದತೆಯನ್ನು ತರುವುದಕ್ಕೆ ಅಪಾರ ಸಾಧ್ಯತೆ ಎದುರಿದೆ.
ತನಗೆ ಮುಂದಿನ ಐದು ವರ್ಷಗಳಲ್ಲಿ ಮೂಲ ಸೌಕರ್ಯಕ್ಕೆಂದು 100 ಲಕ್ಷ ಕೋಟಿ ರೂಪಾಯಿ ಹೂಡುವ ಉದ್ದೇಶವಿದೆ ಎಂದು ಕೇಂದ್ರ ಸರ್ಕಾರವು ಘೋಷಿಸಿದೆ. ಜಿಎಸ್‌ಟಿಯಲ್ಲಿನ ಸುಧಾರಣೆಯ ನಂತರ ಅಂತಾರಾಜ್ಯಗಳ ನಡುವಿನ ಸರಕು ಸಂಚಾರ ಪ್ರಕ್ರಿಯೆಯು ಸುಗಮವಾಗಿದೆ. ಈಗ ಈ ಬಾರಿಯ ಬಜೆಟ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ ಯೋಜನೆಯ ಮರುರಚನೆ, ರೈಲ್ವೆ ಮತ್ತು ಒಳನಾಡು ಜಲಮಾರ್ಗ ಮೂಲಸೌಕರ್ಯಗಳ ಉನ್ನತೀಕರಣಗಳ ಘೋಷಣೆ ಮಾಡಲಾಗಿರುವುದರಿಂದ ಸಾಗಣೆ ಜಾಲದಲ್ಲಿ ಹೆಚ್ಚಿನ ಸುಧಾರಣೆ ಆಗಲಿದೆ.
ಅಸ್ತಿತ್ವದಲ್ಲಿರುವ 44 ಕಾರ್ಮಿಕ ಕಾನೂನುಗಳನ್ನು ಸಮರ್ಥಗೊಳಿಸಿ, ಅವುಗಳನ್ನೆಲ್ಲ ಕೇವಲ ನಾಲ್ಕು ಲೇಬರ್ ಕೋಡ್‌ಗಳಲ್ಲಿ ಅಳವಡಿಸುವುದರಿಂದ ಉದ್ಯಮಗಳಿಗೆ ಇವುಗಳ ಅನುಸರಣೆ ಪ್ರಕ್ರಿಯೆ ಸುಲಭವಾಗುತ್ತದೆ. ಇನ್ನು ನೋಂದಣಿ ಮತ್ತು ರಿಟರ್ನ್ಸ್ ಸಲ್ಲಿಕೆ ಪ್ರಕ್ರಿಯೆಯನ್ನು ಸರಾಗಗೊಳಿಸುವ ಹೆಜ್ಜೆಯು ವ್ಯಾಪಾರ ಖರ್ಚನ್ನು ಕಡಿಮೆಗೊಳಿಸುವುದಷ್ಟೇ ಅಲ್ಲದೇ, ಕಾರ್ಮಿಕ ಬಾಹುಳ್ಯದ ಉದ್ಯಮಗಳು/ಕೈಗಾರಿಕೆಗಳಲ್ಲಿ ವಿದೇಶಿ ಹೂಡಿಕೆಯನ್ನು ಆಕರ್ಷಿಸಲಿದೆ. ಕಾರ್ಮಿಕರ ಔಪಚಾರಿಕೀಕರಣವು ವೇತನ ಸಮಾನತೆ ಮತ್ತು ಕಾರ್ಯಕ್ಷೇತ್ರದಲ್ಲಿ ವಿವಾದ ಮತ್ತು ಕಿರುಕುಳವನ್ನು ತಗ್ಗಿಸುತ್ತದೆ.
ಹಲವು ನವ ವಲಯಗಳನ್ನು ಬೆಳೆಸುವ ನಿಟ್ಟಿನಲ್ಲಿಯೂ ಈ ಬಾರಿಯ ಬಜೆಟ್‌ನಲ್ಲಿ ಪ್ರಮುಖ ಸಂಗತಿಗಳಿದ್ದವು. ಹೂಡಿಕೆ ಸಂಬಂಧಿ ಆದಾಯತೆರಿಗೆ ಕಡಿತವು ಜಾಗತಿಕ ಕಂಪನಿಗಳನ್ನು ದೇಶದತ್ತ ಆಕರ್ಷಿಸುತ್ತದೆ ಮತ್ತು ಅವು ಅತ್ಯಾಧುನಿಕ ತಂತ್ರಜ್ಞಾನಗಳಾದ ಸೆಮಿ ಕಂಡಕ್ಟರ್ ಫ್ಯಾಬ್ರಿಕೇಷನ್(ಫ್ಯಾಬ್), ಸೋಲಾರ್ ಫೋಟೋವೋಲಾrಯಿಕ್ ಸೆಲ್ಸ್, ಲೀಥಿಯಂ ಸ್ಟೋರೇಜ್ ಬ್ಯಾಟರಿ, ಸೋಲಾರ್ ಎಲೆಕ್ಟ್ರಿಕ್ ಚಾರ್ಜಿಂಜ್ ಮೂಲಸೌಕರ್ಯಗಳು, ಕಂಪ್ಯೂಟರ್ ಸರ್ವರ್‌ಗಳು, ಲ್ಯಾಪ್‌ಟಾಪ್‌ಗ್ಳು ಮತ್ತು ಇತರೆ ಸುಧಾರಿತ ತಂತ್ರಜ್ಞಾನಿಕ ಕ್ಷೇತ್ರಗಳಲ್ಲಿ ಮೆಗಾ ಉತ್ಪಾದನಾ ಘಟಕಗಳನ್ನು ಸ್ಥಾಪಿಸುವುದಕ್ಕೆ ಕಾರಣವಾಗಲಿದೆ.
ಇನ್ನು ಪರಿಸರ ರಕ್ಷಣೆಯ ವಿಚಾರದಲ್ಲಿ ಜಾಗತಿಕ ಮಟ್ಟದಲ್ಲಿ ಭಾರತದ ಬದ್ಧತೆಗೆ ಪೂರಕವಾಗುವಂಥ ಘೋಷಣೆಗಳೂ ಆಗಿವೆ. ಭಾರತವನ್ನು ವಿದ್ಯುತ್ ಚಾಲಿತ ವಾಹನಗಳ ಕೇಂದ್ರ ಸ್ಥಾನವಾಗಿಸುವಲ್ಲಿ ಮತ್ತು ಈ ವಾಹನಗಳ ಬಳಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ದೊಡ್ಡ ಶಕ್ತಿಯನ್ನು ತುಂಬಿದೆ.
ವಿದ್ಯುತ್ ಚಾಲಿತ ವಾಹನಗಳ ಅಳವಡಿಕೆಗೆ ವೇಗ ಕೊಡುವುದಕ್ಕಾಗಿ ಫೇಮ್- Faster Adoption and Manufacturing of (Hybrid &) Electric Vehicles (FAME)
ಯೋಜನೆಯ ಎರಡನೇ ಹಂತದಲ್ಲಿ 10 ಸಾವಿರ ಕೋಟಿ ರೂಪಾಯಿ ವಿನಿಯೋಗಿಸಲಾಗುತ್ತಿದೆ. ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸುವವರಿಗೆ ತೆರಿಗೆ ಕಡಿತದಿಂದ ಹಿಡಿದು, ಜಿಎಸ್‌ಟಿ ಮತ್ತು ಕಸ್ಟಮ್ ಡ್ಯೂಟಿಗಳಲ್ಲಿನ ಇಳಿಕೆಯ ಮೂಲಕವೂ ವಿದ್ಯುತ್ ಚಾಲಿತ ವಾಹನಗಳ ವಲಯಕ್ಕೆ ಆರೋಗ್ಯಕರ ಉತ್ತೇಜನ ನೀಡಲಾಗುತ್ತಿದೆ.
ದೇಶವು 8-9 ಪ್ರತಿಶತದ ದರದಲ್ಲಿ ಬೆಳೆಯಲು ಹೆಚ್ಚಿನ ಪ್ರಮಾಣದಲ್ಲಿ ಬಂಡವಾಳ ಹರಿವಿನ ಅಗತ್ಯವಿದೆೆ. ಹೀಗಾಗಿ ವಿದೇಶಿ ಬಂಡವಾಳ ಹೂಡಿಕೆ ಕಾರ್ಯಕ್ರಮವನ್ನು ಹೆಚ್ಚು ಆಕರ್ಷಕಗೊಳಿಸುವ ಅಗತ್ಯವಿತ್ತು- ಅದರಲ್ಲೂ ವಾಯುಯಾನ, ಮಾಧ್ಯಮ ಮತ್ತು ವಿಮೆ ಕ್ಷೇತ್ರದಲ್ಲಿ ಇದು ಅತ್ಯಗತ್ಯವಾಗಿತ್ತು.
400 ಕೋಟಿಯವರೆಗೆ ವಹಿವಾಟು ಮಿತಿ ಹೊಂದಿದ ಕಂಪನಿಗಳನ್ನು ಶೇ. 25ರ ಕಾರ್ಪೊರೇಟ್ ತೆರಿಗೆ ವ್ಯಾಪ್ತಿಯ ಒಳಗೆ ತರಲಾಗಿದ್ದು, 99.3 ಪ್ರತಿಶತ ಕಂಪನಿಗಳು ಈ ವ್ಯಾಪ್ತಿಯಲ್ಲಿ ಬಂದಿವೆ. ಆದರೆ ಸರ್ಕಾರವು ಇನ್ನುಳಿದ 0.7 ಪ್ರತಿಶತ ಕಂಪನಿಗಳನ್ನು ಬೆಂಬಲಿಸುವ ಅಗತ್ಯವೂ ಇದೆ. ಏಕೆಂದರೆ, ಈ ಬೆರಳೆಣಿಕೆಯ ಭಾರತದ ಕಂಪನಿಗಳೇ ಇಂದು ಅಂತಾರಾಷ್ಟ್ರೀಯ ಕಂಪನಿಗಳ ವಿರುದ್ಧ ಜಾಗತಿಕ ಮಾರುಕಟ್ಟೆಯಲ್ಲಿ ಹೆಚ್ಚಾಗಿ ಪೈಪೋಟಿ ನಡೆಸುತ್ತಿವೆ. ಇವೇ ಕಂಪನಿಗಳೇ ದೇಶದ ಔಪಚಾರಿಕ ವಲಯದ ಪ್ರತಿಭೆಗಳನ್ನು ಬೆಳೆಸುತ್ತಿರುವುದು. ಹೀಗಾಗಿ ಇವುಗಳ ಬೆಳವಣಿಗೆಗೆ ಬೆಂಬಲ ನೀಡಲೇಬೇಕಿದೆ. ಇದೇ ವೇಳೆಯಲ್ಲೇ ಕಿರು ಕೈಗಾರಿಕೆಗಳಿಗೆ(ಎಮ್‌ಎಸ್‌ಎಮ್‌ಇ) ನೀಡಿರುವ ಸಹಾಯವು ಶ್ಲಾಘನೀಯವಾದದ್ದು. ಇದು ಭಾರತೀಯರಿಗೆ ಉದ್ಯಮಶೀಲತೆಯಲ್ಲಿನ ಉತ್ಸಾಹವನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಬ್ಯಾಂಕೇತರ ಹಣಕಾಸು ಸಂಸ್ಥೆಗಳ(ಎನ್‌ಬಿಎಫ್ಸಿ) ಬಿಕ್ಕಟ್ಟಿನ ನಂತರ ಉದ್ಯಮಗಳಿಗೆ ಸಾಲ ಸೌಲಭ್ಯದ ನಿಲುಕು ಕಠಿಣವಾಗಿತ್ತು. ಬ್ಯಾಂಕಿಂಗ್ ಮೂಲಸೌಕರ್ಯವನ್ನು ಬಲಿಷ್ಠಗೊಳಿಸುವ ಜೊತೆಯಲ್ಲೇ ಸಾಲ ಸೌಲಭ್ಯದ ಪ್ರಕ್ರಿಯೆಯನ್ನು ಸುಲಭಗೊಳಿಸುವುದು ಈ ಕ್ಷಣದ ಅಗತ್ಯವಾಗಿತ್ತು. ಈ ನಿಟ್ಟಿನಲ್ಲಿ ವಿತ್ತ ಸಚಿವರು ಒಳ್ಳೆಯ ಹೆಜ್ಜೆಗಳನ್ನಿಟ್ಟಿದ್ದಾರೆ. ಆರ್ಥಿಕವಾಗಿ ಸಶಕ್ತವಾಗಿರುವ ಎನ್‌ಬಿಎಫ್ಸಿಗಳ ಒಟ್ಟು ಒಂದು ಲಕ್ಷ ಕೋಟಿ ರೂಪಾಯಿ ಮೌಲ್ಯದ ಆಸ್ತಿಗಳನ್ನು ಸಾರ್ವಜನಿಕ ರಂಗದ ಬ್ಯಾಂಕ್‌ಗಳು ಖರೀದಿಸುವ ಪ್ರಸ್ತಾಪವನ್ನು ಕೇಂದ್ರ ಸರ್ಕಾರ ಎದುರಿಟ್ಟಿದೆ. ಅಲ್ಲದೇ, ಸಾರ್ವಜನಿಕ ಷೇರುಗಳ ವಿತರಣೆಯಲ್ಲಿ ಇರುವ ಅಡ್ಡಿಗಳನ್ನು ನಿವಾರಿಸುವ ಮೂಲಕ ಎನ್‌ಬಿಎಫ್ಸಿಗಳು ತಮ್ಮ ನಿಧಿಗಳನ್ನು ಹೆಚ್ಚಸಿಕೊಳ್ಳುವುದಕ್ಕೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲೂ ಹೆಜ್ಜೆಯಿಡಲಾಗಿದೆ. ಅಲ್ಲದೇ, ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ 70 ಸಾವಿರ ಕೋಟಿ ರೂಪಾಯಿಗಳ ಬಂಡವಾಳದ ಬಲಿಷ್ಠ ಬೆಂಬಲ ನೀಡಲಾಗಿದೆ.
ಎನ್‌ಡಿಎ ಸರ್ಕಾರ ಕಪ್ಪು ಆರ್ಥಿಕತೆಯ ವಿರುದ್ಧದ ತನ್ನ ಹೋರಾಟವನ್ನು ಮುಂದುವರಿಸಿದೆ. ಒಂದೇ ಬ್ಯಾಂಕ್ ಖಾತೆಯಿಂದ ಒಂದು ಕೋಟಿ ರೂಪಾಯಿ ಮೇಲಿನ ನಗದೀಕರಣದ ಮೇಲೆ 2 ಪ್ರತಿಶತ ಟಿಡಿಎಸ್ ವಿಧಿಸಿರುವುದು ಡಿಜಿಟಲ್ ಪಾವತೀಕರಣಕ್ಕೆ ನೀಡಿದ ಪ್ರೋತ್ಸಾಹವಾಗಿದೆ.
ಆದಾಯ ತೆರಿಗೆ ರಿಟರ್ನ್ಸ್ ದಾಖಲಿಸಲು ಪ್ಯಾನ್ ನಂಬರ್‌ಗೆ ಪರ್ಯಾಯವಾಗಿ ಆಧಾರ್ ಅನ್ನು ನೀಡಲು ಸರಕಾರವು ಬಜೆಟ್‌ನಲ್ಲಿ ಸಮ್ಮತಿಸಿರುವುದೂ ಕೂಡ ಈ ನಿಟ್ಟಿನಲ್ಲಿ ಸಹಾಯ ಮಾಡಲಿದೆ. 2014ರಲ್ಲಿ ಅರುಣ್ ಜೇಟ್ಲಿಯವರು ತೆರಿಗೆ ವಂಚನೆಯನ್ನು ನಿಯಂತ್ರಿಸುವ ಪಣತೊಟ್ಟಿದ್ದರು. ಆದರೆ ಅಂದಿನಿಂದಲೂ ಸರ್ಕಾರ ಪ್ರಾಮಾಣಿಕ ತೆರಿಗೆ ದಾರರ ಮೇಲಿನ ಭಾರವನ್ನು ಹೆಚ್ಚಿಸುತ್ತಾ ಬಂದಿದೆ. ಶ್ರದ್ಧೆಯಿಂದ ಕಾನೂನನ್ನು ಪಾಲಿಸುವ ಮತ್ತು ತಮ್ಮ ನಿಜವಾದ ಆದಾಯವನ್ನು ಘೋಷಿಸುವವರಿಗೆ ಪ್ರತಿ ವರ್ಷವೂ ಅಧಿಕ ತೆರಿಗೆ ದರಗಳ ಮೂಲಕ ದಂಡಿಸಲಾಗುತ್ತಿದೆ. 2016ರಲ್ಲಿ, ವಿತ್ತ ಸಚಿವರು 1 ಕೋಟಿಗೂ ಅಧಿಕ ಆದಾಯವಿರುವವರಿಗೆ 3 ಪ್ರತಿಶದಷ್ಟು ಸರ್‌ಚಾರ್ಜ್ ಹೆಚ್ಚಿಸಿದ್ದರು. 2017ರಲ್ಲಿ, 50 ಲಕ್ಷದಿಂದ ಒಂದು ಕೋಟಿಯವರೆಗಿನ ಆದಾಯವಿರುವ ವ್ಯಕ್ತಿಗಳಿಗೆ ಸರ್ಚಾರ್ಜ್ 10 ಪ್ರತಿಶತ ಆಯಿತು. ಈ ವರ್ಷ, 2 ಮತ್ತು 5 ಕೋಟಿ ಆದಾಯವಿರುವವರಿಗೆ ಕ್ರಮವಾಗಿ 10 ಪ್ರತಿಶತ ಮತ್ತು 15 ಪ್ರತಿಶತ ತೆರಿಗೆ ದರ ಹೆಚ್ಚಿಸಲಾಗಿದೆ. ಅವರೆಲ್ಲ ಪ್ರಾಮಾಣಿಕತೆಗೆ ಇಂಥ ಬೆಲೆ ತೆರಬೇಕೇನು?
ಪರ್ಯಾಯ ಹೂಡಿಕೆಯಲ್ಲಿನ ಕೆಟಗರಿ 1 ಮತ್ತು 2ರ ಹೂಡಿಕೆದಾರರಿಗಿದ್ದ ಏಂಜೆಲ್ ಟ್ಯಾಕ್ಸ್ ಕಿರುಕುಳವನ್ನು ತೆಗೆದುಹಾಕುವ ಮೂಲಕ ಬಹುನಿರೀಕ್ಷಿತ ನಿವಾರಣೆ ನೀಡಿದ್ದಾರೆ ವಿತ್ತ ಸಚಿವರು.
ಆದಾಗ್ಯೂ, ಹೂಡಿಕೆದಾರರು, ಹೆಚ್ಚಿನ ರಿಸ್ಕ್ ಇರುವ, ಕಡಿಮೆ ಲಿಕ್ವಿಡಿಟಿಯಿರುವ ನವೋದ್ಯಮಗಳಲ್ಲಿ ಹೂಡಿಕೆ ಮಾಡುವುದನ್ನು ಪ್ರೋತ್ಸಾಹಿಸಬೇಕೆಂದರೆ, ಕ್ಯಾಪಿಟಲ್ ಗೇನ್ ಅನ್ನು 20 ಪ್ರತಿಶತದಿಂದ 10 ಪ್ರತಿಶತಕ್ಕೆ ಇಳಿಸುವ ಅಗತ್ಯವಿದೆ. ಇಲ್ಲದಿದ್ದರೆ, ಹೂಡಿಕೆದಾರರು ಹೆಚ್ಚು ರಿಸ್ಕ್ ಇಲ್ಲದ ಸಾರ್ವಜನಿಕ ಮಾರುಕಟ್ಟೆಯತ್ತಲೇ ಮುಖ ಹಾಕುತ್ತಾರೆ. ಸ್ಟಾರ್ಟ್‌ಅಪ್‌ಗ್ಳು ಬೆಳೆಯಬೇಕೆಂದರೆ, ಅವು ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸಿ, ದೇಶದಲ್ಲಿ ದೀರ್ಘಾವಧಿ ಉದ್ಯೋಗಗಳನ್ನು ನೀಡುವಂತಾಗಬೇಕೆಂದರೆ ನವೋದ್ಯಮ ವಾತಾವರಣವನ್ನು ಒಟ್ಟಾರೆಯಾಗಿ ಪ್ರೋತ್ಸಾಹಿಸುವ ಅಗತ್ಯವಿದೆ. 20 ಸಾವಿರ ಕೋಟಿ ರೂಪಾಯಿಯ ಸ್ಟಾರ್ಟ್‌ಅಪ್ ಫಂಡ್‌ನ ಸ್ಥಾಪನೆಯಲ್ಲಿ ಮತ್ತು ಈ ಹಣದ ವಿತರಣೆಯಲ್ಲಿ ಇರುವ ಅಸ್ಪಷ್ಟತೆಯು ನಿಜಕ್ಕೂ ನಿರಾಶಾದಾಯಕವಾಗಿದೆ. ಇನ್ನು ನೌಕರರ ಮೇಲೆ ಅನಗತ್ಯ ತೆರಿಗೆ ಹೊರೆ ವಿಧಿಸುತ್ತಿರುವ ಇಎಓಪಿ ಟ್ಯಾಕ್ಸೇಷನ್‌ನಲ್ಲೂ ಬದಲಾವಣೆಗಳು ಆಗಿಲ್ಲ. ಕೊನೆಯದಾಗಿ, ಜಾಗತಿಕ ಆರ್ಥಿಕತೆಯಲ್ಲಿನ ವಿಪರೀತ ಪರಿಸ್ಥಿತಿಗಳು ಮತ್ತು ಭಾರತದ ಬೆಳವಣಿಗೆ ಅವಕಾಶವನ್ನು ಗಮನದಲ್ಲಿಟ್ಟು ನೋಡಿದರೆ, ಈ ಬಜೆಟ್ ಮುಂದಿನ ಐದು ವರ್ಷಗಳಿಗೆ ಸುಭದ್ರ ವೇದಿಕೆ ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎನ್ನಬಹುದು.
-ಟಿ.ವಿ. ಮೋಹನ್‌ದಾಸ್ ಪೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.