ಸ್ವಚ್ಛ ಭಾರತದಲ್ಲಿ “ಸ್ವಚ್ಛ ನ್ಯಾಯಾಲಯ’
Team Udayavani, Nov 5, 2018, 6:00 AM IST
ಕಾನೂನು ದಿನವಾದ ನವೆಂಬರ್ 26ರಂದು ಸ್ವಚ್ಛ ನ್ಯಾಯಾಲಯ ಕಾರ್ಯಕ್ರಮವು ದೇಶಾದ್ಯಂತ ವಿದ್ಯುಕ್ತವಾಗಿ ಆರಂಭವಾಗಲಿದೆ. ಸ್ವಚ್ಛ ಭಾರತ ಅಭಿಯಾನ ಪ್ರೇರಿತ ಸ್ವಚ್ಛ ನ್ಯಾಯಾಲಯದ ಈ ಪರಿಕಲ್ಪನೆ ನಿಜಕ್ಕೂ ಸ್ವಾಗತಾರ್ಹ.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಮದನ್ ಬಿ. ಲೋಕುರ್ ನೇತೃತ್ವದಲ್ಲಿ ಜಾರಿಗೊಳ್ಳಲಿರುವ ಈ ಅಭಿಯಾನಕ್ಕೆ ಸುಮಾರು 700 ಕೋಟಿ ರೂಪಾಯಿ ವೆಚ್ಚವಾಗಲಿದೆ. ಪ್ರತಿಯೊಂದು ನ್ಯಾಯಾಲಯಕ್ಕೆ ಸುಮಾರು 15ರಿಂದ 20 ಲಕ್ಷ ರೂಪಾಯಿ ಖರ್ಚಾಗಲಿದೆಯೆಂದು ಅಂದಾಜಿಸಲಾಗಿದೆ. ಈ ಯೋಜನೆಯ ಅಂಗವಾಗಿ ಶೌಚಾಲಯಗಳನ್ನು ನಿರ್ಮಿಸುವುದು ಮತ್ತು ಕಡತಗಳನ್ನು ವಿಲೇವಾರಿ ಮಾಡುವ ಮೂಲಕ ದೇಶಾದ್ಯಂತ ಕಾರ್ಯಾಚರಿಸುತ್ತಿರುವ ಹದಿನಾರು ಸಾವಿರ ನ್ಯಾಯಾಲಯಗಳ ಕಟ್ಟಡಗಳಿಗೆ ಹೊಸರೂಪ ನೀಡಲು ಉದ್ದೇಶಿಸಲಾಗಿದೆ.
ಸಾಮಾನ್ಯವಾಗಿ ನ್ಯಾಯಾಲಯದ ಕಟ್ಟಡವೆಂದಾಗ ಪಳೆಯುಳಿಕೆಯಂತಹ ಶಿಥಿಲ ಕಟ್ಟಡಗಳ ಚಿತ್ರಣ ಕಣ್ಣಮುಂದೆ ಬರುತ್ತದೆ. ಆದರೂ ನ್ಯಾಯಾಂಗದ ಮೇಲಿನ ಅಚಲ ನಂಬಿಕೆ ಯಿಂದಾಗಿ ಜನತೆ ನ್ಯಾಯಾಲಯವನ್ನು ದೇವಾಲಯವೆಂದೇ ಗೌರವಿಸಿಕೊಂಡು ಬಂದಿದ್ದಾರೆ. ಹಾಗಾಗಿ, ಶಿಥಿಲವಾಗಿದ್ದರೂ ಸಹ ಕಟ್ಟಡಗಳ ಮೂಲಸೌಕರ್ಯ ಸಮಸ್ಯೆಯ ಕುರಿತು ಜನಸಾಮಾನ್ಯರು ಹೆಚ್ಚಾಗಿ ತಲೆಕೆಡಿಸಿಕೊಂಡಿರಲಿಲ್ಲ. ಅದು ನ್ಯಾಯಾಂಗದ ಮೇಲೆ ಜನತೆಗಿದ್ದ ನಂಬಿಕೆಯ ಶಕ್ತಿ. ಆದರೆ ಸ್ವಚ್ಛ ನ್ಯಾಯಾಲಯ ಕಾರ್ಯಕ್ರಮದ ಹಿನ್ನೆಲೆಯಲ್ಲಿ ನ್ಯಾಯಾಲಯಗಳ ಕಟ್ಟಡಗಳನ್ನು ವಿನ್ಯಾಸಗೊಳಿಸುವಾಗ ಸಾರ್ವಜನಿಕ ಸ್ನೇಹಿಯಾಗಿ ಪರಿವರ್ತಿಸುವ ಕುರಿತು ಚಿಂತನೆ ನಡೆಸುವ ಅವಕಾಶ ಸನ್ನಿಹಿತವಾಗಿದೆ. ಹೊಸ ನಿರೀಕ್ಷೆಗಳೊಂದಿಗೆ ಬದಲಾವಣೆಯ ಗಾಳಿ ಬೀಸುತ್ತಿದೆಯೆಂಬ ವಾಸ್ತವವನ್ನು ಸಹ ನ್ಯಾಯಾಂಗದ ವರಿಷ್ಠರು ಸೂಕ್ಷ್ಮವಾಗಿ ಗಮನಿಸಬೇಕು ಎನಿಸುತ್ತದೆ.
ಜನಸ್ನೇಹಿ ವಾತಾವರಣದ ಅಗತ್ಯ
ನ್ಯಾಯಾಲಯಗಳ ಸಂಕೀರ್ಣಕ್ಕೆ ನೀಡುವ ಭೇಟಿಯು ಜನ ಸಾಮಾನ್ಯರ ಪಾಲಿಗೆ ಹಿತಕರ ಅನುಭವವಾಗಿ ಉಳಿದಿಲ್ಲವೆಂಬುದು ಮಾತ್ರ ಸಾರ್ವತ್ರಿಕ ಸತ್ಯ. ಸಮರ್ಪಕ ನಿರ್ವಹಣೆಯ ಕೊರತೆಯಿಂದ ನ್ಯಾಯಾಲಯಗಳ ಹೊಸ ಕಟ್ಟಡಗಳು ಸಹ ಸಹ್ಯವಾಗಿ ಉಳಿದಿಲ್ಲ. ಮೂಲಭೂತ ಸೌಕರ್ಯಗಳ ಕೊರತೆ ಒಂದೆಡೆಯಾದರೆ ಸರಿಯಾದ ಮಾಹಿತಿ ಕೇಂದ್ರ ಇಲ್ಲದಿರುವುದು ಮತ್ತೂಂದು ಸಮಸ್ಯೆ. ವಿಶೇಷ ಚೇತನರಿಗೆ ಮತ್ತು ದೃಷ್ಟಿ ನ್ಯೂನತೆಯಿಂದ ಬಳಲುವವರಿಗೆ ತಡೆರಹಿತವಾಗಿ ನಡೆದಾಡಲು ವ್ಯವಸ್ಥೆ ಇಲ್ಲ. ದೈಹಿಕ ಅಶಕ್ತರಿಗೆ ಪ್ರತ್ಯೇಕ ಶೌಚಾಲಯದ ಸೌಲಭ್ಯವಿಲ್ಲ.
ನ್ಯಾಯಾಲಯಗಳ ಸಂಕೀರ್ಣಗಳನ್ನು ವಿನ್ಯಾಸಗೊಳಿಸುವಾಗ ಸಾರ್ವಜನಿಕರ ಅನುಕೂಲವನ್ನು ಗಮನದಲ್ಲಿರಿಸಿ ಸೂಕ್ತ ಪಾರ್ಕಿಂಗ್ ಸೌಲಭ್ಯ ಕಲ್ಪಿಸದಿರುವುದರಿಂದ ಪ್ರತಿನಿತ್ಯ ಬೆಳಿಗ್ಗೆ ಇಕ್ಕಟ್ಟಿನ ಮತ್ತು ಒತ್ತಡದ ಅನುಭವವಾಗುತ್ತದೆ. ನ್ಯಾಯಾಲಯದ ಸಂಕೀರ್ಣದಲ್ಲಿ ಮಹಿಳೆಯರು ಹಾಗೂ ಸಣ್ಣ ಮಕ್ಕಳಿಗೆ ವಿಶ್ರಾಂತಿ, ಶೌಚಾಲಯ, ಖಾಸಗಿತನ ಕಾಪಾಡಲು ಸ್ಥಳಾವಕಾಶ ಇಲ್ಲದಿರುವುದು ಕಂಡಾಗ ಬದಲಾವಣೆಯ ಗಾಳಿ ಜೋರಾಗಿ ಬೀಸಬೇಕೆನ್ನಿಸುತ್ತದೆ.
ಸ್ವಚ್ಛ ನ್ಯಾಯಾಲಯ ಅಭಿಯಾನದ ಅಂಗವಾಗಿ ಹಲವಾರು ಮೂಲಭೂತ ಸುಧಾರಣೆಗಳನ್ನು ಜಾರಿಗೆ ತರಲು ಅವಕಾಶವಿದೆ. ಉದಾಹರಣೆಗೆ, ನ್ಯಾಯಾಲಯದಲ್ಲಿ ಬೆಳಗ್ಗಿನಿಂದ ಸಂಜೆಯವರೆಗೆ ಅನಿವಾರ್ಯವಾಗಿ ಕಾಯಲೇಬೇಕಿರುವವರಿಗೆ ಸಮಯ ಕಳೆಯಲು ಕಾನೂನು ಮಾಹಿತಿ ಪುಸ್ತಕಗಳನ್ನು ಹಾಗೂ ನಿಯತಕಾಲಿಕಗಳನ್ನು ಓದಲು ಸಾರ್ವಜನಿಕ ಗ್ರಂಥಾಲಯ ವ್ಯವಸ್ಥೆ ಅಥವಾ ಕಾನೂನು ಮಾಹಿತಿ ಬಿತ್ತರಿಸುವ ವೀಡಿಯೋ ಅಥವಾ ಟಿ.ವಿ. ಕಾರ್ಯಕ್ರಮಗಳ ವೀಕ್ಷಣಾ ವ್ಯವಸ್ಥೆಯನ್ನು ಯಾಕೆ ಮಾಡಬಾರದು? ವಕೀಲರಿಗೆ ಬಾರ್ ಅಸೋಸಿಯೇಷನ್ ವತಿಯಿಂದ ವೃತ್ತಿ ನಿರ್ವಹಣೆಗೆ ಪೂರಕವಾದ ಎಲ್ಲಾ ಸೌಲಭ್ಯ ಹಾಗೂ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ಆದರೆ ಅಸಹಾಯಕರಿಗೆ ನ್ಯಾಯದಾನ ಮಾಡಲೆಂದೇ ಸ್ಥಾಪಿತವಾಗಿರುವ ನ್ಯಾಯಾಲಯದ ಸಂಕೀರ್ಣದಲ್ಲಿ ಸಾರ್ವಜನಿಕರಿಗೆ ಮಾತ್ರ ಯಾವುದೇ ಮಹತ್ವವನ್ನು ನೀಡಿದಂತೆ ಕಾಣುತ್ತಿಲ್ಲ! ಬ್ರಿಟಿಷ್ ಕಾಲದ ಮನೋಭಾವ ಇನ್ನಾದರೂ ತೊಲಗಬೇಕು. ಆದುದರಿಂದ, ಸ್ವಚ್ಛ ನ್ಯಾಯಾಲಯ ಅಭಿಯಾನವು ನ್ಯಾಯಾಧೀಶರು ಮತ್ತು ನ್ಯಾಯವಾದಿಗಳನ್ನು ಮಾತ್ರವಲ್ಲದೆ ನ್ಯಾಯಾಲಯಕ್ಕೆ ಭೇಟಿ ನೀಡುವ ಜನಸಾಮಾನ್ಯರನ್ನು ಸಹ ಗಮನದಲ್ಲಿಟ್ಟು ಕೆಲಸ ಮಾಡಬೇಕಾಗಿದೆ.
ನ್ಯಾಯಾಲಯದಲ್ಲಿ ದಿನವಿಡೀ ಕಾಯುವುದು ಮತ್ತೂಂದು ಸಮಸ್ಯೆ. ತಮ್ಮ ಕೇಸುಗಳನ್ನು ಕರೆಯುವವರೆಗೆ ಪಕ್ಷಗಾರರು, ಆರೋಪಿಗಳು, ಸಾಕ್ಷಿದಾರರು ಹಾಗೂ ವಿವಿಧ ಇಲಾಖೆಗಳನ್ನು ಪ್ರತಿನಿಧಿಸುವ ಅಧಿಕಾರಿಗಳು ಚಾತಕ ಪಕ್ಷಿಗಳಂತೆ ಕಾಯುವುದು ನಿತ್ಯದ ಗೋಳಾಗಿದೆ. ಕೇಸು ಕರೆಯುವಾಗ ನ್ಯಾಯಾಧೀಶರ ಮುಂದೆ ಸರಿಯಾದ ಸಮಯಕ್ಕೆ ಹಾಜರಾಗಲು ವಿಫಲವಾದಲ್ಲಿ ಪ್ರಕರಣಗಳನ್ನು ಮುಂದೂಡುವ ಅಥವಾ ವಾರಂಟ್ ಹೊರಡಿಸುವ ಭೀತಿಯನ್ನು ಸದಾ ಎದುರಿಸಬೇಕಾಗುತ್ತದೆ. ಇದನ್ನು ನಿವಾರಿಸಲು ವಿಚಾರಣೆಗೆ ಕೈಗೆತ್ತಿಕೊಳ್ಳುವ ಪ್ರಕರಣಗಳ ಪಟ್ಟಿಯನ್ನು ಮುಂಚಿನ ದಿನದಂದು ಮಾಹಿತಿಗಾಗಿ ಅಂತರ್ಜಾಲದಲ್ಲಿ ಪ್ರಕಟಿಸಬಹುದು. ಹೈಕೋರ್ಟಿನಲ್ಲಿ ಈ ವ್ಯವಸ್ಥೆ ದಶಕದಿಂದ ಜಾರಿಯಲ್ಲಿದೆ. ಇದರಿಂದಾಗಿ, ನ್ಯಾಯಾಲಯದ ಸುತ್ತ ಜನ ನಿಬಿಡತೆ ಮತ್ತು ವಾಹನ ಸಂಚಾರದ ಒತ್ತಡ ಕಡಿಮೆ ಮಾಡಬಹುದು. ಆಯಾ ದಿನದ ಕೇಸುಗಳ ಪಟ್ಟಿಯನ್ನು ನ್ಯಾಯಾಲಯದ ಹೊರಗೆ ಬೃಹತ್ ಟಿ.ವಿ. ಪರದೆಯಲ್ಲಿ ಬೆಳಿಗ್ಗೆಯೇ ಪ್ರದರ್ಶಿಸಿದಲ್ಲಿ ನ್ಯಾಯಾಲಯದ ಮುಖ್ಯ ಬಾಗಿಲಲ್ಲಿ ಕಾಣುವ ನೂಕುನುಗ್ಗಲು ಹಾಗೂ ಗೊಂದಲವನ್ನು ತಪ್ಪಿಸಬಹುದು. ಹಾಗೆಯೇ, ಬೆಂಚ್ ಕ್ಲರ್ಕ್ ಅಥವಾ ದಫೇದಾರ್‌ಗಳು ಕೇಸನ್ನು ಅಸ್ಪಷ್ಟವಾಗಿ ಕೂಗಿ ಕರೆಯುವ ಬದಲು ಮೆದುದನಿಯಲ್ಲಿ ಮೈಕ್ ಘೋಷಣೆ ಮೂಲಕ ಕೇಸಿನ ಸಂಖ್ಯೆ ಮತ್ತು ಪಕ್ಷಗಾರರು ಅಥವಾ ಸಾಕ್ಷಿದಾರರನ್ನು ಕರೆಯುವ ಸರಳ ವ್ಯವಸ್ಥೆಯನ್ನು ಯಾಕೆ ಜಾರಿಗೆ ತರಬಾರದು?
ಸಾರ್ವಜನಿಕ ಸಂಪರ್ಕ ಹಾಗೂ ಮಾಹಿತಿ
ಬೆಳಿಗ್ಗೆ 11 ಗಂಟೆಯಿಂದ ಪ್ರಾರಂಭವಾಗುವ ನ್ಯಾಯಾಲಯದ ಕಲಾಪವು ಸಾಮಾನ್ಯವಾಗಿ ಸಂಜೆ 5ರಿಂದ 6ರವರೆಗೆ ನಿರಂತರವಾಗಿ ನಡೆಯುತ್ತದೆ. ಈ ಅವಧಿಯಲ್ಲಿ ತೆರೆದ ನ್ಯಾಯಾಂಗಣದಲ್ಲಿ ವಕೀಲರ ಹೊರತು ಬೇರಾರಿಗೂ ತುಟಿಬಿಚ್ಚಲು ಸಹ ಅವಕಾಶವಿಲ್ಲ. ನ್ಯಾಯಾಲಯದ ಕಾರ್ಯಕಲಾಪಗಳಿಗೆ ಅಡ್ಡಿಯಾಗದಂತೆ ಎಲ್ಲರೂ ಗಂಭೀರತೆ, ಮೌನ ಹಾಗೂ ಶಿಸ್ತನ್ನು ಕಾಪಾಡುವುದು ಅಗತ್ಯ. ಇಂತಹ ವಾತಾವರಣದಲ್ಲಿ ಸಾರ್ವಜನಿಕರಿಗೆ ಸೂಕ್ತ ಮಾಹಿತಿ ನೀಡುವ ಯಾವುದೇ ವ್ಯವಸ್ಥೆ ಇಲ್ಲದಿರುವುದರಿಂದ ಜನಸಾಮಾನ್ಯರು ಸಣ್ಣಪುಟ್ಟ ಮಾಹಿತಿಗೂ ವಕೀಲರನ್ನೇ ಅವಲಂಬಿಸುವಂತಾಗಿದೆ. ಮಧ್ಯಾಹ್ನದ ಭೋಜನ ವಿರಾಮ ವೇಳೆ ನ್ಯಾಯಾಲಯದ ಸಿಬ್ಬಂದಿಗಳಿಂದ ಸಹಜವಾಗಿಯೇ ವ್ಯವಧಾನ ನಿರೀಕ್ಷಿಸುವಂತಿಲ್ಲ. ಈ ಕಾರಣಕ್ಕಾಗಿ ನ್ಯಾಯಾಲಯದಲ್ಲಿ “ಮಾಹಿತಿ ಕೇಂದ್ರ’ ತೆರೆದು
“ಸಾರ್ವಜನಿಕ ಸಂಪರ್ಕಾಧಿಕಾರಿ’ಯವರನ್ನು ಯಾಕೆ ನೇಮಿಸಬಾರದು? ಈ ನಿಟ್ಟಿನಲ್ಲಿ ನ್ಯಾಯಾಂಗದ ಆಡಳಿತ ನಿರ್ವಹಣಾ ತಜ್ಞರು ಗಂಭೀರವಾಗಿ ಯೋಚಿಸಬೇಕು.
ಒಮ್ಮೆ ಅಪರಾಧ ಪ್ರಕರಣವೊಂದರಲ್ಲಿ ಪ್ರೊಫೆಸರ್‌ರೊಬ್ಬರನ್ನು ಬಂಧಿಸಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಕರೆತಂದಿದ್ದರು. ಆಶ್ಚರ್ಯವೆಂದರೆ ಅವರು ಆರೋಪಿಯಾಗಿರಲಿಲ್ಲ. ಬದಲಾಗಿ ಸಾಕ್ಷಿದಾರರಾಗಿದ್ದರು! ಈ ಹಿಂದೆ ಸಾಕ್ಷಿ ನುಡಿಯಲು ಹಾಜರಾಗುವಂತೆ ನ್ಯಾಯಾಲಯವು ಹೊರಡಿಸಿದ್ದ ಸಮನ್ಸ್‌ಗೆ ಸಕಾಲಿಕವಾಗಿ ಹಾಜರಾಗಲು ವಿಫಲರಾದ್ದರಿಂದ ನ್ಯಾಯಾಲಯವು ಅವರ ವಿರುದ್ಧ ಜಾಮೀನು ಸಹಿತ ವಾರಂಟನ್ನು ಹೊರಡಿಸಿತ್ತು. ದುರದೃಷ್ಟವಶಾತ್, ಪೊಲೀಸ್ ಸಿಬ್ಬಂದಿ ಅವರನ್ನು ಬಂಧಿಸಿಯೇ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದ! ಪ್ರಥಮ ಬಾರಿ ನ್ಯಾಯಾಲಯದಿಂದ ಸಮನ್ಸ್ ಬಂದಾಗ ಪ್ರಕರಣದ ಕುರಿತು ಯಾರನ್ನು ಸಂಪರ್ಕಿಸಬೇಕು ಎಂದು ಅರಿಯದೆ ಮಾಹಿತಿ ಹಾಗೂ ಅನುಭವದ ಕೊರತೆಯಿಂದ ಎರಡನೇ ಬಾರಿಗೆ ಸಮನ್ಸು ಬರಬಹುದೆಂಬ ನಿರೀಕ್ಷೆಯೊಂದಿಗೆ ಆ ಪ್ರೊಫೆಸರ್ ಕಾಯುತ್ತಿದ್ದರು. ಆದರೆ ಬಂದದ್ದು ಮಾತ್ರ ವಾರಂಟ್. ಇಂತಹ ಕಹಿ ಘಟನೆಗಳು ಸಾರ್ವಜನಿಕರ ಮನದಲ್ಲಿ ತಪ್ಪು ಕಲ್ಪನೆಗೆ ಕಾರಣವಾಗುತ್ತವೆ.
ಸುಧಾರಣೆಯ ಗಾಳಿ
ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೇನೆಂದರೆ, ನ್ಯಾಯಾಲಯವು ಸಾಕ್ಷಿದಾರರಿಗೆ ಹೊರಡಿಸುವ ಸಮನ್ಸ್ ಇನ್ನೂ ಕೂಡ ಬ್ರಿಟಿಷ್ ಕಾಲದ ಆದೇಶದ ಪತ್ರದಂತಿದೆ. ವಕೀಲರ ಮತ್ತು ಹಳೇ ಆರೋಪಿಗಳ ಹೊರತು ಮತ್ಯಾರಿಗೂ ಇದು ಸುಲಭವಾಗಿ ಅರ್ಥವಾಗದು. ಸಾಕ್ಷಿದಾರರಿಗೆ ಸಾಕ್ಷ್ಯ ನುಡಿಯಬೇಕಾದ ಪ್ರಕರಣದ ಕುರಿತ ಮಾಹಿತಿಯನ್ನು ಸಹ ಸಕಾಲಿಕವಾಗಿ ಒದಗಿಸುವ ವ್ಯವಸ್ಥೆಯಿಲ್ಲ. ಸಾಕ್ಷಿದಾರರು ಪೊಲೀಸರ ಮುಂದೆ ತನಿಖೆಯ ವೇಳೆ ನೀಡಿದ್ದ ಹೇಳಿಕೆ ಪ್ರತಿಯನ್ನು ಸಹ ಮುಂಚಿತವಾಗಿ ನೀಡುವವರಿಲ್ಲ. ಕೆಲವೊಮ್ಮೆ ವಿಚಾರಣೆಯ ದಿನಾಂಕದ ಒಂದೆರಡು ದಿನಗಳ ಮೊದಲಷ್ಟೇ ಸಮನ್ಸ್ ಗಳು ಕೈ ಸೇರುತ್ತವೆ. ಇವೆಲ್ಲ ಕಿರಿಕಿರಿಗಳಿಂದ ನ್ಯಾಯಾಲಯಕ್ಕೆ ಸಾಕ್ಷಿ ನುಡಿಯಲು ಹಾಗೂ ನ್ಯಾಯಾಂಗ ಪ್ರಕ್ರಿಯೆಯಲ್ಲಿ ಸಹಕರಿಸಲು ಸಾರ್ವಜನಿಕರು ಹಿಂದೇಟು ಹಾಕುತ್ತಿದ್ದಾರೆ.
ಹಾಗೆಂದ ಮಾತ್ರಕ್ಕೆ ಅಧೀನ ನ್ಯಾಯಾಂಗ ವ್ಯವಸ್ಥೆಯಲ್ಲಿ ಯಾವುದೇ ಸುಧಾರಣೆಯಾಗಿಲ್ಲವೆಂದು ಅರ್ಥವಲ್ಲ. ಕಳೆದ ಹತ್ತು ವರ್ಷಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಹಳೆಯ ಕಟ್ಟಡಗಳನ್ನು ಕೆಡವಿ ಹೊಸ ಕಟ್ಟಡಗಳು ತಲೆ ಎತ್ತಿವೆ. ನ್ಯಾಯಾಧೀಶರುಗಳಿಗೆ ಹವಾನಿಯಂತ್ರಿತ ಆಧುನಿಕ ಕಚೇರಿ, ಪ್ರತ್ಯೇಕ ಗ್ರಂಥಾಲಯ, ಬಂಗಲೆಗಳು ನಿರ್ಮಾಣಗೊಂಡಿವೆ. ಬಾರ್ ಅಸೋಸಿಯೇಶನ್ ಕಟ್ಟಡಗಳು ಹೊಸ ರೂಪ ಪಡೆದುಕೊಂಡಿವೆ. ವೃತ್ತಿಪರತೆ ಕಾಪಾಡಲು ವಕೀಲರಿಗೆ ಸಾಕಷ್ಟು ಸೌಲಭ್ಯಗಳನ್ನೊದಗಿಸಲಾಗುತ್ತಿದೆ. ಕಾನೂನು ನೆರವು ಪ್ರಾಧಿಕಾರದ ಸ್ತುತ್ಯರ್ಹ ಕೆಲಸಗಳಿಂದ ನ್ಯಾಯಾ ಲಯವು ಜನಸಾಮಾನ್ಯರ ಪಾಲಿಗೆ ಮತ್ತಷ್ಟು ಹತ್ತಿರವಾಗಿದೆ. ಆದರೆ ಅವೆಲ್ಲವೂ ನ್ಯಾಯಾಧೀಶರು ಮತ್ತು ವಕೀಲರನ್ನು ಕೇಂದ್ರಿತವಾಗಿ ವಿನ್ಯಾಸಗೊಳಿಸಿದಂಥವು ಎಂದರೆ ತಪ್ಪಾಗಲಾರದು. ಸಾರ್ವಜನಿ ಕರನ್ನು, ವಿಶೇಷವಾಗಿ ಕಕ್ಷಿದಾರರು, ಫಿರ್ಯಾದುದಾರರು, ಸಾಕ್ಷಿದಾರರು ಮತ್ತು ಆರೋಪಿಗಳ ಹಿತವನ್ನು ಗಮನದಲ್ಲಿರಿಸಿ ನ್ಯಾಯಾಲಯದ ಮೂಲಸೌಕರ್ಯವನ್ನು ಪುನರ್ ವಿನ್ಯಾಸ ಗೊಳಿಸುವ ನಿಟ್ಟಿನಲ್ಲಿ ಇನ್ನಷ್ಟು ಪ್ರಯತ್ನಗಳಾಗಬೇಕು.
ನ್ಯಾಯಾಲಯಗಳ ಸಣ್ಣಪುಟ್ಟ ನಿರ್ವಹಣಾ ವೆಚ್ಚಕ್ಕೂ ಲೋಕೋಪಯೋಗಿ ಇಲಾಖೆಯನ್ನೇ ಅವಲಂಬಿಸಬೇಕಾಗಿರು ವುದು ದುರದೃಷ್ಟಕರ. ನ್ಯಾಯಾಲಯದ ಕಟ್ಟಡಗಳ ನಿರ್ವಹಣೆಗೆ ತನ್ನದೇ ಸಂಪನ್ಮೂಲವನ್ನು ಕ್ರೋಢೀಕರಿಸುವ ಅಧಿಕಾರವನ್ನು ನ್ಯಾಯಾಂಗಕ್ಕೆ ನೀಡಬೇಕು. ಕಕ್ಷಿಗಾರರು ಪಾವತಿಸುವ ನ್ಯಾಯಾಲ ಯದ ಶುಲ್ಕದ ಮೊತ್ತವನ್ನು ಸಾರ್ವಜನಿಕರಿಗೆ ತಿಳಿಸುವ ಪಾರ ದರ್ಶಕ ವ್ಯವಸ್ಥೆ ಜಾರಿಗೆ ಬರಬೇಕು ಮತ್ತು ಅದರಲ್ಲೊಂದಂಶವನ್ನು ನ್ಯಾಯಾಲಯದ ನಿರ್ವಹಣೆಗೆ ಮೀಸಲಿಡುವಂತಾಗಬೇಕು. ಈ ನಿಟ್ಟಿನಲ್ಲಿ ಆಯಾ ಜಿಲ್ಲಾ ನ್ಯಾಯಾಧೀಶರಿಗೆ ವಿಶೇಷ ಅಧಿಕಾರವನ್ನು ನೀಡಬೇಕು.
ನ್ಯಾಯ ವ್ಯವಸ್ಥೆಯ ಆಧುನೀಕರಣಕ್ಕೆ ಬೆಂಗಳೂರಿನಲ್ಲಿರುವ ಕರ್ನಾಟಕ ಹೈಕೋರ್ಟ್ ಸ್ಥಾಪಿತ ಆರ್ಬಿಟ್ರೇಷನ್ ಕೇಂದ್ರ ಒಂದು ಉತ್ತಮ ನಿದರ್ಶನ. ಆರ್ಬಿಟ್ರೇಷನ್ ಕೇಂದ್ರದಲ್ಲಿ ಹೆಚ್ಚಾಗಿ ವಾಣಿಜ್ಯ ಹಾಗೂ ಉದ್ಯಮ ಸಂಬಂಧಿ ವ್ಯಾಜ್ಯಗಳನ್ನು ನಿರ್ವಹಿಸಲಾಗುತ್ತದೆ. ಅಲ್ಲಿ ಹವಾ ನಿಯಂತ್ರಿತ ಕೊಠಡಿಗಳನ್ನು ನಿರ್ಮಿಸಿ ಬಹುರಾಷ್ಟ್ರೀಯ ಕಂಪೆನಿಯ ಕಚೇರಿಯನ್ನು ನೆನಪಿಸುವಂತಹ ಒಳಾಂಗಣ ವಿನ್ಯಾಸವನ್ನು ಮಾಡಿ, ಮಾಹಿತಿ ನೀಡಲು “ಸ್ವಾಗತಗಾರ್ತಿ’ಯನ್ನು ಸಹ ನೇಮಿಸಲಾಗಿದೆ. ಆರ್ಬಿಟ್ರೇಷನ್ ಕೇಂದ್ರದ ನಿರ್ದೇಶಕರ ನೇತೃತ್ವದಲ್ಲಿ ವೃತ್ತಿಪರ ಸಿಬ್ಬಂದಿಗಳ ತಂಡವಿದ್ದು ಶ್ಲಾಘನಾರ್ಹವಾಗಿ ಕಾರ್ಯನಿರ್ವಹಿಸುತ್ತಿವೆ. ಇಂತಹ ವ್ಯವಸ್ಥೆ ಎಲ್ಲಾ ಅಧೀನ ನ್ಯಾಯಾಲಯಗಳಲ್ಲಿ ಸಾಧ್ಯವಾಗಬೇಕು. ತ್ರಿಸ್ತರ ನ್ಯಾಯದಾನ ವ್ಯವಸ್ಥೆಯಲ್ಲಿ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ಎಲ್ಲಾ ರೀತಿಯ ಸೌಲಭ್ಯಗಳನ್ನು ಪಡೆದುಕೊಂಡಿವೆ. ಜನಸಾಮಾನ್ಯರ ಪಾಲಿಗೆ ಇನ್ನೂ ಕೂಡಾ ದೇವಾಲಯವಾಗಿರುವ ಅಧೀನ ನ್ಯಾಯಾಲಯ ವ್ಯವಸ್ಥೆ ಮಾತ್ರ ಸಮಸ್ಯೆಯಿಂದ ಬಳಲುತ್ತಿದೆ.
ನೊಂದವನ ನೋವು
ಕೊನೆಯದಾಗಿ, ನ್ಯಾಯಾಂಗ ವ್ಯವಸ್ಥೆಯು ಯಾರ ಸುತ್ತ ತಿರುಗುತ್ತಿದೆ ಎಂಬ ಪ್ರಶ್ನೆ ಕೂಡ ಇಲ್ಲಿ ಪ್ರಸ್ತುತ. ನ್ಯಾಯದಾನ ವ್ಯವಸ್ಥೆಯು ಶ್ರೀಸಾಮಾನ್ಯರನ್ನು ಗಮನದಲ್ಲಿರಿಸಿಯೇ ಕಾರ್ಯನಿರ್ವಹಣೆ ಮಾಡಬೇಕು. ಈ ನಿಟ್ಟಿನಲ್ಲಿ ಶ್ರೀಸಾಮಾನ್ಯ ಮತ್ತು ಕಾನೂನಿನ ನಡುವಿನ ಸಂಬಂಧದ ಕುರಿತು ಖ್ಯಾತ ಮಾನವ ಹಕ್ಕುಗಳ ಪ್ರತಿಪಾದಕ ಹಾಗೂ ನ್ಯಾಯಮೂರ್ತಿ ಜಸ್ಟಿಸ್ ವಿ.ಆರ್. ಕೃಷ್ಣ ಅಯ್ಯರ್‌ರವರ ಮಾತುಗಳು ನೆನಪಿಗೆ ಬರುತ್ತವೆ. “”ಕಕ್ಷಿದಾರರು ಅನ್ಯಾಯಕ್ಕೊಳಗಾಗಿ ನೊಂದ ಕಾನೂನು ರೋಗಿಗಳಂತೆ. ತಮ್ಮ ನೋವಿನ ಗಾಯಗಳಿಗೆ ಶಮನ ಕೋರಿ ಅವರು ನ್ಯಾಯಾಲಯದ ಕದ ತಟ್ಟುತ್ತಾರೆ”. ಈ ಮಾತು ಎಷ್ಟೊಂದು ಮಾರ್ಮಿಕ!
“”ಸ್ವಚ್ಛ ನ್ಯಾಯಾಲಯದ” ಪರಿಕಲ್ಪನೆಯು ಕಟ್ಟಡಗಳ ಮೂಲ ಸೌಕರ್ಯಗಳನ್ನು ನಿರ್ವಹಿಸುವ ಕಾರ್ಯಕ್ಕೆ ಮಾತ್ರ ಸೀಮಿತವಾಗದೆ ಸ್ವಚ್ಛ ಹಾಗೂ ಮೌಲ್ಯಧಾರಿತ ನ್ಯಾಯದಾನ ವ್ಯವಸ್ಥೆಯನ್ನು ಒದಗಿಸುವ ನಿಟ್ಟಿನಲ್ಲಿ ಮತ್ತು ನೊಂದು-ಬೆಂದು ಬರುವ ನ್ಯಾಯಾಕಾಂಕ್ಷಿಗಳ ನೋವಿಗೆ ಸ್ಪಂದಿಸುವ, ಭರವಸೆಯ ಹಾಗೂ ಸ್ನೇಹಪೂರ್ಣ ವಾತಾವರಣವನ್ನು ನಿರ್ಮಿಸುವ ನಿಟ್ಟಿನಲ್ಲಿ ಕೂಡ ಪ್ರವೃತ್ತವಾಗಲೆಂದು ಆಶಿಸೋಣ.
– ವಿವೇಕಾನಂದ ಪನಿಯಾಲ,ವಕೀಲರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು
Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ
Kasaragod: ಬಟ್ಟಿಪದವು; ಪ್ಲೈವುಡ್ ಮಿಲ್ಲಿಗೆ ಬೆಂಕಿ
Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ
Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.