ಸರ್ವರ ಸಹಕಾರದಿಂದಷ್ಟೇ ಕಡ್ಡಾಯ ಶಿಕ್ಷಣ ಆಶಯ ಫಲಪ್ರದ
Team Udayavani, Feb 19, 2020, 6:59 AM IST
ದೇಶದ ನಾಗರಿಕರ ಏಳಿಗೆಯ ದೃಷ್ಟಿಯಿಂದ ಮಕ್ಕಳ ಕಡ್ಡಾಯ ಶಿಕ್ಷಣ ದಂತಹ ಕೆಲವೊಂದು ಉತ್ತಮ ಕಾನೂನುಗಳನ್ನು ಸರಕಾರ ಜಾರಿಗೆ ತಂದಿದೆ.
ಅವುಗಳಲ್ಲಿ 6ರಿಂದ 14 ವರ್ಷದೊಳಗಿನ ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣದ ಕುರಿತಾಗಿನ ಕಾನೂನು ಒಂದು. ಇದನ್ನು ಸಂವಿಧಾನದ 21ಎ ವಿಧಿಯ ಮೂಲಕ ಮೂಲಭೂತ ಹಕ್ಕನ್ನಾಗಿ ಪ್ರತಿ ಪಾದಿಸಲಾಗಿದೆ. ಪ್ರವೇಶಾತಿ ನೀಡುವುದು, ಹಾಜರಾತಿ ಖಚಿತಪಡಿಸಿ ಕೊಳ್ಳುವುದು ಮತ್ತು ಆ ವಯೋಮಾನದೊಳಗೆ ದೇಶದ ಪ್ರತಿ ಮಗು ವಿಗೂ ಕನಿಷ್ಟ ಎಲಿಮೆಂಟರಿ ಶಿಕ್ಷಣ ಒದಗಿಸಿಕೊಡುವ ಕಡ್ಡಾಯ ಜವಾಬ್ದಾರಿ ಸರಕಾರದ್ದಾಗಿರುತ್ತದೆ. 2009ರ ಆಗಸ್ಟ್ 4ರಂದು ಸಂಸತ್‌ನಲ್ಲಿ ಅಂಗೀಕಾರಗೊಂಡ ಶಿಕ್ಷಣ ಹಕ್ಕು ಕಾನೂನು 2010ರ ಏಪ್ರಿಲ್ 1ರಿಂದ ಜಾರಿಗೊಂಡಿದೆ. ಆ ಹೊತ್ತು ಭಾರತ ಮಕ್ಕಳ ವಿದ್ಯಾಭ್ಯಾಸವನ್ನು ಮೂಲಭೂತ ಹಕ್ಕನ್ನಾಗಿಸಿದ ಜಗತ್ತಿನ 135 ದೇಶಗಳೊಳಗೆ ಒಂದೆನಿ ಸಿತ್ತು. ಮಕ್ಕಳನ್ನು ಅನುತ್ತೀರ್ಣ ಮಾಡದ ಆಶಯುವೂ 2009ರ ಕಡ್ಡಾಯ ಶಿಕ್ಷಣ ಕಾನೂನಿನಲ್ಲಿತ್ತು. ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ (ತಿದ್ದುಪಡಿ) ಕಾನೂನು ಸಂಸತ್‌ನಲ್ಲಿ 2019ರ ಜ.3ರಂದು ಅಂಗೀಕಾರಗೊಂಡಿತು. 2019 ಜ.10ರಂದು ರಾಷ್ಟ್ರಪತಿಗಳ ಅಂಕಿತ ದೊರೆತು ಗಜೆಟ್ ಪ್ರಕಟನೆಯೂ ಆಗಿದೆ. ಈ ತಿದ್ದುಪಡಿ ಕಾನೂನಿನ ಮೇರೆಗೆ ಅನುತ್ತೀರ್ಣ ಕುರಿತಾಗಿನ ತೀರ್ಮಾನವನ್ನು ಆಯಾ ರಾಜ್ಯ ಸರಕಾರಗಳು ತೆಗೆದುಕೊಳ್ಳಬಹುದಾಗಿದೆ.
ಭಾರತಕ್ಕೆ ಸ್ವಾತಂತ್ರ್ಯ ದೊರೆಯುವ ಹೊತ್ತು ದೇಶದ ಸಾಕ್ಷರತಾ ಪ್ರಮಾಣ ಕೇವಲ ಶೇ.12 ಆಗಿತ್ತು. ಈಗ ಏಳು ದಶಕಗಳ ಬಳಿಕ ಆಡಳಿತ ನಡೆಸಿದ ಸರಕಾರಗಳ ಪ್ರಯತ್ನ ಮತ್ತು ಜನರ ಸಹಭಾಗಿತ್ವ ದಿಂದ ಈ ಪ್ರಮಾಣ ಶೇ.70ನ್ನು ದಾಟಿದೆ. ದೇಶ ಪ್ರಗತಿಪಥದಲ್ಲಿ ಸಾಗುತ್ತಿದ್ದಂತೆ ಜನರ ಸಾಕ್ಷರತಾ ಪ್ರಮಾಣವೂ ಹೆಚ್ಚಾಗಬೇಕು. ಕೇವಲ ಸಾಕ್ಷರತಾ ಪ್ರಮಾಣವಲ್ಲದೆ ಜನರ ತಿಳಿವಳಿಕೆಯ ಮಟ್ಟದಲ್ಲೂ ಏರಿಕೆಯಾಗಬೇಕು. ಆಗ ಮಾತ್ರ ದೇಶ ನಿಜವಾದ ಪ್ರಗತಿ ಸಾಧಿಸಿದೆ ಎನ್ನಬಹುದು.
ಈ ದೃಷ್ಟಿಯಲ್ಲಿ ನೋಡುವಾಗ ಕಡ್ಡಾಯ ಶಿಕ್ಷಣ ಎನ್ನುವುದು ಒಂದು ಅತ್ಯತ್ತಮ ಹೆಜ್ಜೆ ಎನ್ನಬಹುದು. ಕಡ್ಡಾಯ ಶಿಕ್ಷಣದ ಜವಾಬ್ದಾರಿ ಸರಕಾರದ್ದಾಗಿರುವುದಾದರೂ ಸರಕಾರವೆನ್ನುವುದು ಜನರಿಂದ, ಜನರಿಗಾಗಿ ಮತ್ತು ಜನರದ್ದೇ ವ್ಯವಸ್ಥೆಯಾದ ಕಾರಣ ಕಡ್ಡಾಯ ಶಿಕ್ಷಣದ ಅನುಷ್ಠಾನದಲ್ಲಿ ಬಡವ – ಬಲ್ಲಿದ, ವಿದ್ಯಾವಂತ ಅವಿದ್ಯಾವಂತ ನೆನ್ನದೆ ಎಲ್ಲರ ಸಹಭಾಗಿತ್ವವೂ ಅಡಕವಾಗಿರಬೇಕು. ಆದರೆ ವಾಸ್ತವ ಸ್ಥಿತಿ ಹೇಗಿದೆ? ಶಾಲಾ ಸಿಬ್ಬಂದಿ ಮತ್ತು ಸರಕಾರಿ ಅಧಿಕಾರಿಗಳೇನೋ ತಮ್ಮ ವ್ಯಾಪ್ತಿಗೊಳಪಟ್ಟ ಪ್ರದೇಶಗಳಲ್ಲಿ 6ರಿಂದ 14ರೊಳಗಿನ ಮಕ್ಕಳು ಶಾಲೆಯಿಂದ ಹೊರಗುಳಿಯದಂತೆ ನೋಡಿ ಕೊಳ್ಳುತ್ತಾರೆ. ಆದರೆ ದಾಖಲಾತಿ ಪಡೆದ ಮಗು ತರಗತಿಯಲ್ಲಿ ಹಾಜರಿರುತ್ತದೋ, ಪಾಠ ಆಟದ ಚಟುವಟಿಕೆಗಳಲ್ಲಿ ಭಾಗವಹಿಸಿ ಸರಿಯಾದ ವಿದ್ಯಾಭ್ಯಾಸ ಪಡೆ ಯುತ್ತದೆಯೋ ಎನ್ನುವುದನ್ನು ಬಹುಶಃ ಅವರಿಂದಲೂ ನೋಡಿಕೊಳ್ಳಲಾಗುವುದಿಲ್ಲ.
ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾನೂನು ಜಾರಿಗೊಳ್ಳುವ ಅನೇಕ ವರ್ಷಗಳ ಹಿಂದೆಯೇ ಬಾಲಕಾರ್ಮಿಕ ದುಡಿಮೆ (ನಿರ್ಬಂಧ ಮತ್ತು ನಿಯಂತ್ರಣ) ಕಾನೂನು 1986ರಲ್ಲಿ ಜಾರಿಗೊಂಡಿದ್ದು, ಅದರಂತೆ 14 ವರ್ಷ ಕೆಳಗಿನ ಮಕ್ಕಳನ್ನು ಯಾವುದೇ ಉದ್ಯೋಗಗಳಲ್ಲಿ ತೊಡಗಿಸಿಕೊಳ್ಳುವಂತಿಲ್ಲ.
ಅಂದರೆ ಗೃಹ ಕೃತ್ಯಗಳಲ್ಲಿ, ವಾಹನ ತೊಳೆ ಯುವುದು, ಬೀದಿ ಬದಿ ಆಹಾರ ಮಾರಾಟ ಮತ್ತಿತರ ಉದ್ಯೋಗ ಗಳಲ್ಲೂ ಮಕ್ಕಳು ದುಡಿಯುವಂತಿಲ್ಲ.
2016ರಲ್ಲಿ ಜಾರಿಗೊಂಡ ತಿದ್ದುಪಡಿ ಪ್ರಕಾರ 14ರಿಂದ 18ರೊಳಗಿನವರನ್ನು ಹದಿಹರೆಯದವರು ಎಂದಿರುವ ಕಾನೂನು ಅವರನ್ನು ಅಪಾಯಕಾರಿ ಎಂದು ಸಾರಿರುವ ಉದ್ಯಮ ಮತ್ತು ಅಂತಹ ಉದ್ಯೋಗಗಳಲ್ಲಿ ತೊಡಗಿಸದಂತೆ
ನಿರ್ಬಂ ಧಿ ಸಿದೆ. ತಮ್ಮದೇ ಮನೆವಾರ್ತೆಯಲಿ/ಕುಟುಂಬದ ಕಸುಬಲ್ಲಿ ಶಾಲಾ ಅವಧಿಯ ಬಳಿಕ ಮಕ್ಕಳು ಸಹಾಯ ಮಾಡಬಹುದಾಗಿದೆ.
ನಮ್ಮ ದೇಶದಲ್ಲಿ ಸದುದ್ದೇಶದಿಂದ ರಚಿಸಿದ ಕಾನೂನುಗಳೇನೋ ಇವೆ. ಆದರೆ ಅವುಗಳ ಸದುಪಯೋಗ ನಿರೀಕ್ಷಿತ ಮಟ್ಟದಲ್ಲಿರದಿರು ವುದು ಬೇಸರದ ಸಂಗತಿ. ಮಕ್ಕಳ ಕಡ್ಡಾಯ ಶಿಕ್ಷಣದ ಕುರಿತಾಗಿನ ಕಾನೂ ನನ್ನೇ ಗಮನಿಸೋಣ. ದೊಡ್ಡ ದೊಡ್ಡ ಜಾತ್ರೆಗಳು, ಸಾಂಸ್ಕೃತಿಕ ಉತ್ಸವಗಳು ಮತ್ತಿತರ ಕಾರ್ಯಕ್ರಮಗಳಿರುವಲ್ಲಿ ಬಲೂನು, ಗೊಂಬೆ ಗಳು ಮತ್ತಿತರ ವಸ್ತುಗಳ ಮಾರಾಟ, ಹಗ್ಗದ ಮೇಲಿನ ನಡಿಗೆ ಮತ್ತಿತರ ಆಟಗಳನ್ನೊಳಗೊಂಡ ಪ್ರದರ್ಶನ ಕಾರ್ಯಕ್ರಮಗಳು ಸಾಮಾನ್ಯ ವಾಗಿ ಹಲವಾರು ದಿನ ನಡೆಯುತ್ತವೆ.
ಶಾಲೆಗಳಿರುವ ದಿನಗಳಲ್ಲೇ ದೂರ ದೂರದ ಊರುಗಳಿಂದ ಬಂದಿರುವ ಈ ಮಾರಾಟ ಅಂಗಡಿಗಳಲ್ಲಿ, ಕಸರತ್ತು ಪ್ರದರ್ಶನಗಳಲ್ಲಿ 6 ರಿಂದ 14 ವರ್ಷದೊಳಗಿನ ಮಕ್ಕಳೂ ಕಾಣ ಸಿಗುತ್ತಾರೆ ಅಂದರೆ ಒಂದೋ ಅವರು ಶಾಲೆಗೇ ಸೇರ್ಪಡೆ ಗೊಂಡಿಲ್ಲ, ಅಲ್ಲದಿದ್ದಲ್ಲಿ ಅವರು
ಶಾಲೆ ತಪ್ಪಿಸಿ ಪಾಲಕರಿಗೆ ನೆರವಾಗಲು ದುಡಿಯುತ್ತಿದ್ದಾರೆ. ಹೀಗಿರುವಾಗ ಉದಾತ್ತ ಧ್ಯೇಯವಿಟ್ಟುಕೊಂಡು ಕೈಗೊಂಡಿರುವ ದೇಶದ ಎಲ್ಲಾ ಪ್ರಜೆಗಳನ್ನು ಸುಶಿಕ್ಷಿತಗೊಳಿಸುವ ಯೋಜನೆ ಕೈಗೂಡುವುದಾದರೂ ಹೇಗೆ?
ಈಗೀಗ ಸಣ್ಣ ದೊಡ್ಡ ನಗರಗಳಲ್ಲಿ ಎಲ್ಲೆಲ್ಲೂ ವಸತಿ ಸಮುಚ್ಚಯಗಳು ತಲೆ ಎತ್ತಿವೆ. ಕೆಲವೊಂದು ವಸತಿ ಸಮುಚ್ಚಯಗಳಲ್ಲಿ ಕಾವಲುಗಾರ (ವಾಚ್‌ಮನ್), ಕಟ್ಟಡ ನಿರ್ವಹಣೆ(ಹೌಸ್ ಕೀಪಿಂಗ್) ಕೆಲಸಗಳಲ್ಲಿ ಕುಟುಂಬವೊಂದನ್ನು ನೇಮಿಸಲಾಗುತ್ತದೆ. ಈ ಕುಟುಂಬದ ವಾಸ್ತವ್ಯ ಸಮುಚ್ಚಯದಲ್ಲೇ ನಡೆಯುತ್ತದೆ. ಕುಟುಂಬದಲ್ಲಿ ಗಂಡ – ಹೆಂಡತಿ ಮತ್ತು ಮಕ್ಕಳಿರುತ್ತಾರೆ. ಕೆಲವು ಕಡೆ ಮಕ್ಕಳ ಸಂಖ್ಯೆ ಮೂರಕ್ಕಿಂತ ಅಧಿಕ ಇರುವುದೂ ಇದೆ. ಕುಟುಂಬದ ಗಂಡಸು ಹಗಲು ಪಾಳಿಯಲ್ಲಿ ಹೊರಗಡೆ ಕೆಲಸಕ್ಕೆ ಹೋದರೆ ರಾತ್ರಿ ಪಾಳಿಯಲ್ಲಿ ಕಾವಲುಗಾರ ನಾ ಗಿಯೂ, ಹೆಂಗಸು ಹತ್ತಾರು ಮಹಡಿಗಳ ಸಮುಚ್ಚಯದ ನೈರ್ಮಲ್ಯ ಕೆಲಸಕ್ಕೆ ಮತ್ತು ಹಗಲುಪಾಳಿಯ ಕಾವಲು ನೋಡಿಕೊಳ್ಳುತ್ತಾರೆ.
ಎರಡು ಅಥವಾ ಮೂರು ಕೆಲಸಗಳಿಗಾಗಿ ಸಂಬಳಗಳನ್ನೂ ಅವರಿಗೆ ನೀಡಲಾಗುತ್ತದೆ. ಜತೆಗೆ ಅಂತಹವರು ನಿವಾಸಿಗಳ ವಾಹನ ತೊಳೆ ಯುವ ಮತ್ತಿತರ ಕೆಲಸಗಳನ್ನೂ ನಿರ್ವಹಿಸುತ್ತಾರೆ. ಆದರೆ ಇಷ್ಟೆಲ್ಲಾ ಕೆಲಸಗಳನ್ನು ವಯಸ್ಕರಿಂದಲೇ ನಡೆಸಲು ಸಾಧ್ಯವೇ?
ಇಲ್ಲಿಯೂ ಆ ಕುಟುಂಬದ ಮಕ್ಕಳು ಶ್ರಮಭರಿತ ಎಲ್ಲಾ ಕೆಲಸಗಳನ್ನು ನಿರ್ವಹಿಸುತ್ತಾರೆ. ತೋರಿಕೆಗೆ ಆ ಮಕ್ಕಳು ಶಾಲೆಗೆ ಸೇರ್ಪಡೆಗೊಂಡಿರುತ್ತಾರೆ. ಆದರೆ ರಜಾ ದಿನಗಳಲ್ಲಿ ಮಾತ್ರವಲ್ಲ ಶಾಲೆಯನ್ನು ತಪ್ಪಿಸಿಯೂ ಅವರು ವಸತಿ ಸಮುಚ್ಚಯದಂತಹ ಸ್ಥಳಗಳಲ್ಲಿ ದುಡಿಯುತ್ತಾರೆ. ಹೀಗಿರುವಾಗ ನಮ್ಮ
ಕಾನೂನುಗಳ ಆಶಯ ಉಪಯೋಗಕ್ಕೆ ಬರುವುದಾದರೂ ಹೇಗೆ?
ಮಕ್ಕಳನ್ನು ಶ್ರಮದಾಯಕ ಕೆಲಸದಲ್ಲಿ ತೊಡಗಿಸಿಕೊಳ್ಳುವ ಅವರ ಪಾಲಕರ, ಹೀಗೆ ಕೆಲಸಕ್ಕೆ ನೇಮಕ ಮಾಡಿಕೊಂಡಿರುವ ಮಾಲಕರ ಮತ್ತಿತರ ಎಲ್ಲರ ಸಹಕಾರವಿದ್ದಾಗ ಮಾತ್ರ ಇಂತಹ ಕಾನೂನುಗಳು ಫಲಪ್ರದವಾಗಲು ಸಾಧ್ಯವಿದೆ. ಈ ಅಂಶಗಳನ್ನು ಮನಗಂಡಾಗ ಮಾತ್ರ ದೇಶ ನಿಜವಾದ ಪ್ರಗತಿ ಸಾಧಿಸುವುದು.
– ಎಚ್. ಆರ್. ಆಳ್ವ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.