ಅಭಿವೃದ್ಧಿ ಸೂಚ್ಯಂಕದಲ್ಲಿ ನಾವೇಕೆ ಹಿಂದೆ?
Team Udayavani, Sep 20, 2021, 6:10 AM IST
ಬದಲಾಗುತ್ತಿರುವ ಭಾರತವನ್ನು ಒಂದು ಅಭಿವೃದ್ಧಿ ಶೀಲ ರಾಷ್ಟ್ರ ಎನ್ನಲಾಗುತ್ತದೆ. ಅದೆಷ್ಟೋ ವರ್ಷಗಳಿಂದ ಈ ಪಟ್ಟವನ್ನು ಹೊತ್ತಿರುವ ಭಾರತದಲ್ಲಿ ಹಲವು ಗಮನಾರ್ಹ ಬದಲಾವಣೆಗಳ ಹೊರತಾಗಿಯೂ ನಾವು ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಪಟ್ಟಿಯಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗಿಲ್ಲ. ಬಡತನ, ಜನಸಂಖ್ಯಾ ಬಾಹುಳ್ಯ, ಅಸಮಾನತೆ, ಹಸಿವು, ಅನಕ್ಷರತೆ, ಅಪೌಷ್ಟಿಕತೆ, ರಾಜಕೀಯ ಅಸ್ಥಿರತೆ, ಭ್ರಷ್ಟಾಚಾರ ಮುಂತಾದವುಗಳ ವಿಷ ವರ್ತುಲಗಳಿಂದ ಬಿಡಿಸಿಕೊಳ್ಳಲು ಇನ್ನೂ ಸಾಧ್ಯವಾಗಿಲ್ಲ. ವಿಶ್ವಸಂಸ್ಥೆಯ 2020ರ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಭಾರತವು 131ನೇ ಸ್ಥಾನಕ್ಕೆ ಕುಸಿದಿದೆ. ಅಂದರೆ ಅಭಿವೃದ್ಧಿಯಲ್ಲಿ ಹಿಂದಿನ ಸಾಲಿನಲ್ಲಿ ಇದ್ದೇವೆ.
ಆದಾಯದ ಹೆಚ್ಚಳ, ಬಡತನ ನಿವಾರಣ ಯೋಜನೆಗಳು, ಕೈಗಾರಿಕೆ, ತಂತ್ರಜ್ಞಾನದ ಪ್ರಗತಿ, ಶೈಕ್ಷಣಿಕ ಮತ್ತು ಆರೋಗ್ಯ ಸೌಲಭ್ಯಗಳ ಹೆಚ್ಚಳಗಳ ಹೊರತಾಗಿಯೂ ನಮ್ಮ ಅಭಿವೃದ್ಧಿಯ ಸೂಚ್ಯಂಕ ಹಿಂದೆ ಇದೆ. ಹಾಗಾದರೆ ದೇಶವೊಂದರ ಅಭಿವೃದ್ಧಿ ಯನ್ನು ಅಳೆಯುವುದು ಹೇಗೆ? ಇದಕ್ಕೆಂದೇ ವಿಶ್ವಸಂಸ್ಥೆಯ ಅಭಿವೃದ್ಧಿ ಯೋಜನೆಯು (UNDP) ಮಾನವ ಅಭಿವೃದ್ಧಿ ಸೂಚ್ಯಂಕ (HDI)ವನ್ನು ಅಭಿವೃದ್ಧಿ ಪಡಿಸಿದೆ.
ಮಾನವ ಅಭಿವೃದ್ಧಿ ಸೂಚ್ಯಂಕ ಮೌಲ್ಯದಲ್ಲಿ ಗರಿಷ್ಠ ಅಂಕ 1 ಹಾಗೂ ಕನಿಷ್ಠ ಸೊನ್ನೆ ಆಗಿರುತ್ತದೆ. 0.8 00ದಿಂದ ಅಧಿಕ ಅಂಕಗಳನ್ನು ಗಳಿಸಿದ ರಾಷ್ಟ್ರಗಳು ಗರಿಷ್ಠ (ಅತೀ ಉನ್ನತ) ಹಂತದ ಮಾನವಾಭಿವೃದ್ಧಿ ರಾಷ್ಟ್ರಗಳೆಂದು 0.700 ರಿಂದ 0.799 ಅಂಕಗಳನ್ನು ಗಳಿಸಿದ ರಾಷ್ಟ್ರಗಳನ್ನು ಉನ್ನತ ಹಂತದ ಮಾನವಾಭಿವೃದ್ಧಿ ಹೊಂದಿದ ರಾಷ್ಟ್ರಗಳೆಂದು, 0.550 ರಿಂದ 0.699 ಅಂಕ ಗಳಿಸಿದ ರಾಷ್ಟ್ರಗಳು ಮಧ್ಯಮ ಹಂತದ ರಾಷ್ಟ್ರವೆಂದು ಹಾಗೂ 0.549 ಕ್ಕಿಂತ ಕಡಿಮೆ ಅಂಕಗಳನ್ನು ಗಳಿಸಿದ ರಾಷ್ಟ್ರಗಳನ್ನು ಕನಿಷ್ಠ ಹಂತದ ಮಾನವಾಭಿವೃದ್ಧಿ ಹೊಂದಿರುವ ರಾಷ್ಟ್ರಗಳೆಂದು ಗುರುತಿಸಲಾಗುತ್ತದೆ.
2020ರಲ್ಲಿ ಭಾರತವು ಇದರಲ್ಲಿ 0.645 ಅಂಕ ಪಡೆದಿದೆ. 2017 ಹಾಗೂ 2018ರಲ್ಲಿ ಇದು 0.640 ಆಗಿದ್ದು ಹಾಗೂ 2019ರಲ್ಲಿ 0.645. ಭಾರತವು ಮಧ್ಯಮ ಅಭಿವೃದ್ಧಿ ಸ್ಥಿತಿಯ ದೇಶಗಳ ವರ್ಗದಲ್ಲಿದೆ. 1990ರಲ್ಲಿ ಭಾರತದ ಅಂಕ 0.427 ಆಗಿತ್ತು.
ಎಚ್‌ಡಿಐ ಮಾನವ ಅಭಿವೃದ್ಧಿ ಸೂಚಿಯು ಒಂದು ದೇಶದ ಅಭಿವೃದ್ಧಿಯ ಮಟ್ಟವನ್ನು ಮಾಪನ ಮಾಡುವ ಅತ್ಯುತ್ತಮ ಸಾಧನಗಳಲ್ಲಿ ಒಂದು. ಯಾಕೆಂದರೆ ಇದು ಆರ್ಥಿಕ ಅಭಿವೃದ್ಧಿಗೆ ಕಾರಣವಾಗಿರುವ ಎಲ್ಲ ಪ್ರಮುಖವಾದ ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಥಿಕ ಸೂಚಕಗಳನ್ನು ಒಳಗೊಂಡಿದೆ.
ಮಾನವ ಅಭಿವೃದ್ಧಿ ಸೂಚ್ಯಂಕವು ಒಂದು ದೇಶದ ಸಾಧನೆಯನ್ನು ಅದರ ಸಾಮಾಜಿಕ ಮತು ಆರ್ಥಿಕ ಆಯಾಮಗಳಲ್ಲಿ ಅಳೆಯಲು ಬಳಸುವ ಸಂಖ್ಯಾಶಾಸ್ತ್ರೀಯ ಸಾಧನ. ಒಂದು ದೇಶದ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿ ಅಲ್ಲಿನ ಜನರ ಆರೋಗ್ಯ, ಶಿಕ್ಷಣ ಮತ್ತು ಅವರ ಜೀವನ ಮಟ್ಟವನ್ನು ಆಧರಿಸಿವೆ. ಪ್ರತೀ ವರ್ಷ ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮವು ತನ್ನ ವಾರ್ಷಿಕ ವರದಿಯಲ್ಲಿ ಬಿಡುಗಡೆ ಮಾಡುವ ಎಚ್‌ಡಿಐ (HDI) ವರದಿಯನ್ನು ಆಧರಿಸಿ ವಿವಿಧ ದೇಶಗಳಿಗೆ ಅವು ಗಳಿಸಿದ ಅಂಕಗಳಿಗೆ ಅನುಸಾರವಾಗಿ ಸ್ಥಾನವನ್ನು (Ranking)ನೀಡುತ್ತದೆ.
ಪಾಕಿಸ್ಥಾನದ ಅರ್ಥಶಾಸ್ತ್ರಜ್ಞ ಮೆಹಬೂಬ್ ಉಲ್ ಹಕ್ ಮತ್ತು ಭಾರತದ ನೊಬೆಲ್ ಪ್ರಶಸ್ತಿ ವಿಜೇತ ಡಾ| ಅಮರ್ಥ್ಯ ಸೇನ್ ಅವರು 1990ರಲ್ಲಿ ಮಾನವ ಅಭಿವೃದ್ಧಿ ಸೂಚ್ಯಂಕವನ್ನು ರಚಿಸಿದರು. ಇದನ್ನು ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ (ಯುಎನ್‌ಡಿಪಿ)ದ ಅಡಿಯಲ್ಲಿ ರೂಪಿಸಲಾಗಿದ್ದು ದೇಶದ ಅಭಿವೃದ್ಧಿಯನ್ನು ಮಾಪನ ಮಾಡಲು ಬಳಸಲಾಯಿತು. ಇದು ಒಂದು ಸಂಯುಕ್ತ ಸೂಚಿಯಾಗಿದ್ದು ಈ ಸೂಚ್ಯಂಕದ ಲೆಕ್ಕಾಚಾರವು ಮೂರು ಪ್ರಮುಖ ಸೂಚಕಗಳನ್ನು ಒಳಗೊಂಡಿ ರುತ್ತದೆ. ಅವುಗಳೆಂದರೆ 1.ಆರೋಗ್ಯದ ಮಟ್ಟ (ಆಯುರ್ಮಾನ ನಿರೀಕ್ಷೆ) 2. ಶೈಕ್ಷಣಿಕ ಸಾಧನೆ (ಶಾಲಾ ಶಿಕ್ಷಣದ ಸರಾಸರಿ ವರ್ಷಗಳು) ಮತ್ತು 3. ಜೀವನಮಟ್ಟವನ್ನು, ಜನರ ಕೊಳ್ಳುವ ಶಕ್ತಿಯನ್ನು ಬಿಂಬಿಸುವ ತಲಾ ಆದಾಯ.
ಸ್ವಾತಂತ್ರ್ಯಾ ಪೂರ್ವದಲ್ಲಿ ಭಾರತವು ಶ್ರೀಮಂತ ರಾಷ್ಟ್ರವಾಗಿತ್ತು. ಬ್ರಿಟಿಷರು ಭಾರತದ ಸಂಪತ್ತನ್ನು ಲೂಟಿ ಮಾಡಿ ಅದನ್ನು ಬಡ ರಾಷ್ಟ್ರವನ್ನಾಗಿಸಿದರು ಎಂದು ಇತಿಹಾಸದಲ್ಲಿ ಓದಿದ್ದೇವೆ. ಸ್ವಾತಂತ್ರ್ಯ ದೊರಕಿ ಏಳು ದಶಕಗಳು ಕಳೆದರೂ ನಮ್ಮ ದೇಶದಲ್ಲಿ ಬಡತನ, ಹಸಿವು, ಅಪೌಷ್ಟಿಕತೆ, ಮೂಲ ಸೌಲಭ್ಯಗಳ ಕೊರತೆಗಳು ಸಂಪೂರ್ಣವಾಗಿ ಮರೆಯಾಗಿಲ್ಲ. ಹಾಗಾಗಿ ನಾವಿನ್ನೂ ಅಭಿವೃದ್ಧಿ ಹೊಂದಿದ ದೇಶಗಳ ಸಾಲಲ್ಲಿ ನಿಲ್ಲಲು ಸಾಧ್ಯವಾಗಿಲ್ಲ. ಭಾರತ ಇನ್ನೂ ಅಭಿವೃದ್ಧಿ ಶೀಲ ರಾಷ್ಟ್ರವೆಂದೇ ಗುರುತಿಸಲ್ಪಡುತ್ತಿದೆ.
ಅಭಿವೃದ್ಧಿ ಎಂದರೇನು? ಅಭಿವೃದ್ಧಿಯನ್ನು ಮಾಪನ ಮಾಡುವುದು ಹೇಗೆ ಎನ್ನುವುದಕ್ಕೆ ಸಾಮಾನ್ಯವಾಗಿ ಆ ದೇಶದ ಆದಾಯ, ಜನರ ಜೀವನ ಮಟ್ಟ, ಮೂಲ ಆವಶ್ಯಕತೆಗಳ ಲಭ್ಯತೆಗಳನ್ನು ಸಾಮಾನ್ಯವಾಗಿ ಪರಿಗಣಿಸಲಾಗುತ್ತದೆ. ಆದರೆ ಕೇವಲ ದೇಶದ ಆದಾಯ ಅಥವಾ ತಲಾ ಆದಾಯ ಹೆಚ್ಚಳವಾದ ಮಾತ್ರಕ್ಕೆ ದೇಶ ಅಭಿವೃದ್ಧಿ ಹೊಂದಿದೆ ಎನ್ನಲಾಗದು. ಅಲ್ಲಿನ ಜನರ ಬಡತನ, ಕೊಳ್ಳುವ ಶಕ್ತಿ, ಆರೋಗ್ಯ ಸೌಲಭ್ಯಗಳು, ವಸತಿ ಸೌಲಭ್ಯಗಳು ಆಯುರ್ಮಾನ, ಸಾಕ್ಷರತಾ ಮಟ್ಟ, ಲಿಂಗ ತಾರತಮ್ಯದ ಮಟ್ಟ ಜನಸಂಖ್ಯೆಯ ಗುಣಮಟ್ಟ ಇವೆಲ್ಲವೂ ಅಭಿವೃದ್ಧಿಯ ಹಂತವನ್ನು ಪ್ರತಿನಿಧಿಸುತ್ತವೆ. ಜನಸಂಖ್ಯೆ ಅಧಿಕವಾಗಿರುವ ಭಾರತದಲ್ಲಿ ಇವೆಲ್ಲದರಲ್ಲಿ ಗಣನೀಯ ಸಾಧನೆಯನ್ನು ಮಾಡುವುದು ಸುಲಭವಲ್ಲ. ಮಾತ್ರವಲ್ಲದೆ ಇವೆಲ್ಲವನ್ನು ಸಾಧಿಸಲು ಭ್ರಷ್ಟಾಚಾರ ಮುಕ್ತವಾದ ಸ್ಥಿರ ರಾಜಕೀಯ ವ್ಯವಸ್ಥೆಯೂ ಬೇಕು.
ಸುಮಾರು 5 ವರ್ಷಗಳಲ್ಲಿ ಭಾರತದ ಸ್ಥಾನದಲ್ಲಿ ಹೆಚ್ಚಿನ ಬದಲಾವಣೆಯಾಗಿಲ್ಲ. ನಮ್ಮಿಂದ ಅಧಿಕ ಜನಸಂಖ್ಯೆ ಇರುವ ಚೀನ ದೇಶ 85ನೇ ಸ್ಥಾನವನ್ನು ಪಡೆದಿದ್ದರೆ ಶ್ರೀಲಂಕಾ 72, ಬಾಂಗ್ಲಾದೇಶ 133, ಪಾಕಿಸ್ಥಾನ 154ನೇ ಸ್ಥಾನದಲ್ಲಿದೆ. ಅಂದರೆ ಆರೋಗ್ಯದ ಸೌಲಭ್ಯ, ಶಿಕ್ಷಣ ಮಟ್ಟ, ಕೊಳ್ಳುವ ಶಕ್ತಿಯ ಸಾಮರ್ಥ್ಯವನ್ನು ಬಿಂಬಿಸುವ ತಲಾ ಆದಾಯ, ಜೀವನ ಮಟ್ಟ, ಮೂಲ ಸೌಕರ್ಯಗಳ ಲಭ್ಯತೆ ಮುಂತಾದವುಗಳಲ್ಲಿ ನಾವಿನ್ನೂ ಸಾಧಿಸಬೇಕಾದುದು ಬಹಳಷ್ಟಿದೆ. ಕೇವಲ ಆರ್ಥಿಕ ಸಾಧನೆ, ರಾಷ್ಟ್ರೀಯ ಆದಾಯದ ಹೆಚ್ಚಳ ಅಭಿವೃದ್ಧಿಯ ಮಾನದಂಡವಾಗದು. ಅದು ದೇಶದ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಹಾಗೂ ಸಾಂಸ್ಥಿಕ ಬದಲಾವಣೆಗಳನ್ನು ಬಿಂಬಿಸಬೇಕು.
ಇದು ಮಾತ್ರವಲ್ಲ ಜಾಗತಿಕ ಸಂತಸದ ಸೂಚಿ (Global Happiness Index ) ನಲ್ಲಿಯೂ ಭಾರತದ ಸ್ಥಾನ 139. ಚೀನ ನಮ್ಮಿಂದ ಮುಂದೆ 84ನೇ ಸ್ಥಾನದಲ್ಲಿದ್ದರೆ ಬ್ರೆಜಿಲ್ 35ನೇ ಸ್ಥಾನ ಪಡೆದಿದೆ. ಮಾತ್ರವಲ್ಲ ನೇಪಾಲ, ಪಾಕಿಸ್ಥಾನ ಶ್ರೀಲಂಕಾ, ಬಾಂಗ್ಲಾದೇಶಗಳೂ ನಮ್ಮಿಂದ ಮುಂದಿವೆ. ಫಿನ್ಲಂಡ್ ಮತ್ತು ಭೂತಾನ್ ದೇಶಗಳು ಹೆಚ್ಚು ಸಂತಸದಿಂದ ಇರುವ ದೇಶಗಳೆಂದು ವರದಿ ಹೇಳುತ್ತದೆ. 20ನೇ ಶತಮಾನದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ರಾಷ್ಟ್ರವೆಂದು ಗುರುತಿಸಿಕೊಂಡರೂ ಸೂಚ್ಯಂಕಗಳಲ್ಲಿ ನಾವು ಹಿಂದುಳಿಯಲು ಕಾರಣವೇನು? ಅತಿಯಾದ ಜನಸಂಖ್ಯೆ, ಅದಕ್ಷತೆ, ಅಪ್ರಾಮಾಣಿಕತೆ, ಬೇರು ಬಿಟ್ಟಿರುವ ಭ್ರಷ್ಟಾಚಾರ, ಆದಾಯದ ಅಸಮಾನತೆ, ಕೌಶಲದ ಕೊರತೆ, ಜನರ-ಜನನಾಯಕರ ಬದ್ಧತೆ ಹಾಗೂ ಇಚ್ಛಾಶಕ್ತಿಯ ಕೊರತೆ ಇವೆಲ್ಲವೂ ಕಾರಣ.
ಅಭಿವೃದ್ಧಿ ವೇಗವನ್ನು ಪಡೆಯಲು ಎಲ್ಲರೂ ಸಹಕರಿಸಬೇಕಿದೆ. ಸರಕಾರದ ಯೋಜನೆಗಳು ನೂರಕ್ಕೆ ನೂರರಷ್ಟು ಜನರಿಗೆ ತಲುಪಬೇಕು. ಜನರು, ಜನನಾಯಕರು, ಅಧಿಕಾರಿಗಳು ಹಾಗೂ ಸರಕಾರದ ಬದ್ಧತೆ ಮತ್ತು ಪ್ರಾಮಾಣಿಕ ಪ್ರಯತ್ನಗಳು ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ನಮ್ಮ ಸ್ಥಾನವನ್ನು ಬದಲಿಸಬಹುದೇನೋ?
–ವಿದ್ಯಾ ಅಮ್ಮಣ್ಣಾಯ, ಕಾಪು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
By Election: ಶಿಗ್ಗಾಂವಿ ಸವಿ ಬೊಮ್ಮಾಯಿ ಪುತ್ರನಿಗೋ, ಯಾಸಿರ್ ಪಠಾಣಗೋ?
King Cobra: “ಕಾಳಿಂಗ’ ಸರ್ಪಕ್ಕೆ ಕನ್ನಡದ್ದೇ ವೈಜ್ಞಾನಿಕ ಹೆಸರು!
Mysuru:’ಕರ್ನಾಟದಲ್ಲಿ “ಗ್ಯಾರಂಟಿ’ ಹೆಸರಲ್ಲಿ ಲೂಟಿ, ಮಹಾರಾಷ್ಟ್ರದಲ್ಲಿ ನೀವು ಘೋಷಿಸಬೇಡಿ’
By Election: ಚನ್ನಪಟ್ಟಣದಲ್ಲಿ ಎಚ್.ಡಿ.ದೇವೇಗೌಡ Vs ಡಿ.ಕೆ.ಶಿವಕುಮಾರ್ ಮೇಕೆದಾಟು ಜಟಾಪಟಿ
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.