ವಿಚ್ಛೇದನ: ಸುಪ್ರೀಂ ಕೋರ್ಟ್ ತೀರ್ಪು ಬದಲಾವಣೆ ತರಬಹುದೇ?
Team Udayavani, Jan 27, 2017, 8:09 AM IST
ಹಳಿ ತಪ್ಪುತ್ತಿರುವ ಕುಟುಂಬ ವ್ಯವಸ್ಥೆಯನ್ನು ಸರಿ ದಾರಿಗೆ ತರಲು ಹಾಗೂ ವೃದ್ಧಾಪ್ಯದಲ್ಲಿ ತಂದೆ-ತಾಯಿಯನ್ನು ಅಮಾನವೀಯವಾಗಿ ಬೀದಿಗೆ ತಳ್ಳುವ ಪರಿಸ್ಥಿತಿಯಿಂದ ಅವರನ್ನು ರಕ್ಷಿಸಲು ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಸುಪ್ರೀಂ ಕೋರ್ಟ್ ಉದ್ದೇಶ ಒಳ್ಳೆಯದ್ದೇ ಆಗಿದೆ. ಆದರೆ ಇದು ಪತಿ ಮನೆಯಲ್ಲಿ ಮಹಿಳೆಯನ್ನು ಇನ್ನಷ್ಟು ಶೋಷಿಸುವುದಕ್ಕೆ ಅಸ್ತ್ರವಾಗಬಹುದೇ?
ಸುಪ್ರೀಂ ಕೋರ್ಟ್ ಕುಟುಂಬ ವ್ಯವಸ್ಥೆಯಲ್ಲಿ ದೂರಗಾಮಿ ಪರಿಣಾಮ ಬೀರಬಲ್ಲ ತೀರ್ಪನ್ನು ಇತ್ತೀಚೆಗೆ ಪ್ರಕಟಿಸಿದೆ. 2001ರಲ್ಲಿ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯ ನೀಡಿದ ತೀರ್ಪನ್ನು ಬದಿಗೆ ಸರಿಸಿ ಹಾಗೂ ಕರ್ನಾಟಕ ಹೈಕೋರ್ಟ್‌ನ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ ನೀಡಿದ ತೀರ್ಪು ವಿಚ್ಛೇದನ ಕಾನೂನಿನಲ್ಲಿ ಮಹತ್ವದ ತಿರುವು ನೀಡಿದೆ.
ನ್ಯಾಯಮೂರ್ತಿ ಅನಿಲ್ ಆರ್. ದವೆ ಹಾಗೂ ಎಲ್. ನಾಗೇಶ್ವರ ರಾವ್ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್‌ನ ನ್ಯಾಯ ಪೀಠ ಈ ತೀರ್ಪು ನೀಡಿದೆ. ಹಿಂದೂ ಸಮಾಜದಲ್ಲಿ ಹೆತ್ತವರನ್ನು ನೋಡಿಕೊಳ್ಳುವುದು ಪುತ್ರನ ಜವಾಬ್ದಾರಿ. ಸಮಾಜ ಸಾಮಾನ್ಯ ಸಂಪ್ರದಾಯ ಹಾಗೂ ಸಾಮಾನ್ಯ ಅಭ್ಯಾಸಗಳನ್ನು ಪತ್ನಿ ತಪ್ಪಿಸಲು ಪ್ರಯತ್ನಿಸಿದರೆ, ಆಕೆ ಸೂಕ್ತ ಕಾರಣ ನೀಡಬೇಕು ಎಂದು ನ್ಯಾಯ ಮೂರ್ತಿಗಳು ಹೇಳಿದ್ದಾರೆ.
ವಿವಾಹವಾದ ಬಳಿಕ ಪತ್ನಿಗಾಗಿ ಪತಿ ಹೆತ್ತವರಿಂದ ದೂರವಾಗುವ ಸಂಸ್ಕೃತಿ ಭಾರತದಲ್ಲಿಲ್ಲ. ವಿಶೇಷವಾಗಿ ಕುಟುಂಬದಲ್ಲಿ ಪುತ್ರನೊಬ್ಬನೇ ದುಡಿಯುವ ವ್ಯಕ್ತಿಯಾಗಿದ್ದ ಸಂದರ್ಭ. ಶಿಕ್ಷಣ ನೀಡಿ ಬೆಳೆಸಿದ ಕಾರಣಕ್ಕಾಗಿ ಹೆತ್ತವರು ವೃದ್ಧರಾದಾಗ ಹಾಗೂ ದುಡಿಯಲು ಸಾಧ್ಯವಾಗದೇ ಇರುವಾಗ ಅವರನ್ನು ಸಲಹುವುದು ಪುತ್ರನ ನೈತಿಕ ಹಾಗೂ ಕಾನೂನಾತ್ಮಕ ಜವಾಬ್ದಾರಿ. ಪತ್ನಿ ಪತಿಯ ಕುಟುಂಬದ ಅಂತರ್ಗತ ಭಾಗ. ಸಮರ್ಥಿಸಿಕೊಳ್ಳಬಹುದಾದ ಯಾವುದೇ ಕಾರಣವಿಲ್ಲದೆ ಕುಟುಂಬದಿಂದ ಬೇರ್ಪಡುವಂತೆ ಹಾಗೂ ಪ್ರತ್ಯೇಕವಾಗಿ ವಾಸಿಸುವಂತೆ ಪತ್ನಿ ಪತಿಗೆ ಸೂಚಿಸುವಂತಿಲ್ಲ. ಪತಿ ಸೂಚಿಸಿದಂತಹ ಸಂದರ್ಭ ಪತ್ನಿಗೆ ವಿಚ್ಛೇದನ ನೀಡುವ ಅವಕಾಶ ಪತಿಗೆ ಇದೆ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪ್ರಸ್ತುತ ಹೆಚ್ಚಿನ ಸಮುದಾಯಗಳಲ್ಲಿ ವಿವಾಹ ಸಂಬಂಧ ಏರ್ಪಡುವ ಸಂದರ್ಭ ವಧು ಹಾಗೂ ವಧುವಿನ ಕಡೆಯಿಂದ ಬರುವ ಪ್ರಮುಖ ಬೇಡಿಕೆ ಎಂದರೆ ವಿವಾಹದ ಅನಂತರ ಪತಿ ತಂದೆ-ತಾಯಿಯೊಂದಿಗೆ ವಾಸಿಸದೇ ಪ್ರತ್ಯೇಕವಾಗಿ ವಾಸಿಸಬೇಕು. ಈ ಕಾರಣದಿಂದ ವಿವಾಹವಾದ ಕೂಡಲೇ ಪತಿ ತಂದೆ-ತಾಯಿಯಿಂದ ಬೇರ್ಪಡಬೇಕಾದ ಸನ್ನಿವೇಶ ಒದಗಿ ಬರುತ್ತಿದೆ. ಹೆಣ್ಣು ಮಕ್ಕಳಿದ್ದರೆ, ಅವರು ವಿವಾಹವಾಗಿ ಪತಿಯ ಮನೆಗೆ ಹೋದರೆ, ಗಂಡು ಮಕ್ಕಳು ವಿವಾಹವಾಗಿ ಮನೆ ತೊರೆಯುತ್ತಿದ್ದಾರೆ. ಇದರಿಂದ ವೃದ್ಧಾಪ್ಯದಲ್ಲಿರುವ ತಂದೆ-ತಾಯಿ ತೀವ್ರ ತೊಂದರೆ ಅನುಭವಿಸಬೇಕಾಗಿದೆ.
ವೃದ್ಧಾಪ್ಯದಲ್ಲಿರುವ ಅವರಿಗೆ ಆಸರೆಯೇ ಇಲ್ಲದಂತಾಗುತ್ತಿದ್ದು, ಅವರು ವೃದ್ಧಾಶ್ರಮ ಅವಲಂಬಿಸಬೇಕಾಗುತ್ತಿದೆ. ಹೀಗೆ ಅತಂತ್ರರಾಗುತ್ತಿರುವ ಹೆತ್ತವರಿಗೆ ಸುಪ್ರೀಂ ಕೋರ್ಟ್‌ನ ಈ ತೀರ್ಪು ನ್ಯಾಯ ದೊರಕಿಸಿ ಕೊಡುತ್ತಿರುವುದು ಸಂತಸದ ವಿಚಾರ.
ಈ ತೀರ್ಪು ದೂರಗಾಮಿ ಪರಿಣಾಮ ಹೊಂದಿದೆ ಎಂಬುದರಲ್ಲಿ ಸಂಶಯವೇ ಇಲ್ಲ. ಇದುವರೆಗೆ ಮಹಿಳೆಯರಿಗೆ “ಕೌಟುಂಬಿಕ ದೌರ್ಜನ್ಯ ಕಾಯ್ದೆ’ ಹಾಗೂ ಐಪಿಸಿಯ ಇತರ ಹಲವು ಕಾಲಂಗಳು ಸಂಪೂರ್ಣ ಬೆಂಬಲ ನೀಡಿದ್ದವು. ಬಹುತೇಕ ಉಚ್ಚ ನ್ಯಾಯಾಲಯದ ತೀರ್ಪು ಮಹಿಳೆಯ ಪರವಾಗಿ ಬಂದಿದ್ದವು. ಮಾತ್ರವಲ್ಲ ಈ ತೀರ್ಪುಗಳು ಮಹಿಳೆಗೆ ಸಂಪೂರ್ಣ ರಕ್ಷಣೆ ಒದಗಿಸಿದ್ದವು. ಆದರೆ ಇದರಿಂದ ಹಲವು ಸಂದರ್ಭ ಕಾನೂನು ದುರುಪಯೋಗವಾಗಿರುವುದು ಕೂಡ ಇದೆ.
ಸುಪ್ರೀಂ ಕೋರ್ಟ್ ಈ ತೀರ್ಪು ಗಂಡ ಹಾಗೂ ಆತನ ತಂದೆ- ತಾಯಿಗೆ ಸ್ವಲ್ಪಮಟ್ಟಿನ ನಿರಾಳತೆ ಒದಗಿಸಿದೆ. ಕಾನೂನು ದುರುಪಯೋಗಪಡಿಸುವ ಮಹಿಳೆಯರಿಗೆ ಇದು ಸ್ವಲ್ಪ ಮಟ್ಟಿಗೆ ಕಡಿವಾಣ ಹಾಕಬಹುದು. ಕಾನೂನಿನ ಅಸ್ತ್ರದ ಬೇಕಾಬಿಟ್ಟಿ ಉಪಯೋಗಕ್ಕೆ ತಡೆ ಒಡ್ಡಬಹುದು. ಆದರೆ ಇದು ಗಂಡನ ಮನೆಯಲ್ಲಿ ಮಹಿಳೆಯನ್ನು ಇನ್ನಷ್ಟು ಶೋಷಿಸುವುದಕ್ಕೂ ಅಸ್ತ್ರವಾಗಬಹುದೇ? ಎಂಬ ಸಣ್ಣ ಸಂಶಯ ಕೂಡ ಹುಟ್ಟಿಕೊಂಡಿದೆ. ಈ ತೀರ್ಪನ್ನು ಆಧಾರವಾಗಿಟ್ಟುಕೊಂಡು ಶತಮಾನಗಳಿಂದ ಹೆಣ್ಣಿನ ಬಾಯಿ ಮುಚ್ಚಿಸಿ ಶೋಷಿಸುತ್ತಾ ಬಂದ ಪರಂಪರೆಯನ್ನು ಮುಂದುವರೆಸಲು ಅವಕಾಶವಾಗುತ್ತದೆ ಎಂಬ ವಾದ ಹುಟ್ಟಿಕೊಂಡಿರುವುದು ಸಹಜವೇ ಆಗಿದೆ. ಅದನ್ನು ಕಾಲವೇ ನಿರ್ಣಯಿಸಬೇಕಷ್ಟೆ .
ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನೆಲೆೆಯನ್ನು ಇಲ್ಲಿ ಸ್ವಲ್ಪ ಗಮನಿಸಬೇಕು. ಹಳಿ ತಪ್ಪುತ್ತಿರುವ ಕುಟುಂಬ ವ್ಯವಸ್ಥೆಯನ್ನು ಸರಿ ದಾರಿಗೆ ತರಲು ಹಾಗೂ ವೃದ್ಯಾಪದಲ್ಲಿ ತಂದೆ-ತಾಯಿಯನ್ನು ಅಮಾನವೀಯವಾಗಿ ಬೀದಿಗೆ ತಳ್ಳುವ ಪರಿಸ್ಥಿತಿಯಿಂದ ರಕ್ಷಿಸಲು ಸುಪ್ರೀಂ ಕೋರ್ಟ್ ಈ ಐತಿಹಾಸಿಕ ತೀರ್ಪು ನೀಡಿದೆ. ಸುಪ್ರೀಂ ಕೋರ್ಟ್ ಉದ್ದೇಶ ಒಳ್ಳೆಯದ್ದೇ ಆಗಿದೆ. ಸಣ್ಣ ಕಾರಣಗಳಿಗೆ ಛಿದ್ರವಾಗುತ್ತಿರುವ ಕುಟುಂಬವನ್ನು ಈ ಮೂಲಕವಾದರು ಒಂದುಗೂಡಿಸಬಹುದು ಎಂಬ ಆಶಯವನ್ನು ಈ ತೀರ್ಪು ಹೊಂದಿದೆ ಎಂದು ವ್ಯಾಖಾನಿಸಲಾಗುತ್ತಿದೆ.
ಆದರೆ ಪತಿ-ಪತ್ನಿಯ ನಡುವೆ ಜೀವನದ ಉದ್ದೇಶ ಹಾಗೂ ಒಟ್ಟಾಗಿ ನಡೆಯಬೇಕೆಂಬ ಒಲವು ಕಾಣೆಯಾದರೆ ಯಾವ ಕಾನೂನು, ತೀರ್ಪುಗಳಾದರು ಏನು ಮಾಡಿಯಾವು? ಮನುಷ್ಯ ಮನುಷ್ಯನನ್ನು ಪ್ರೀತಿಸುವ ಅಂಶ ಕಾಣೆಯಾಗಿ, ಎಲ್ಲವೂ “ಲೆಕ್ಕಚಾರ’ದ ಮೇಲೆ ತೀರ್ಮಾನವಾಗುವುದಾದರೆ ಇಲ್ಲಿ ಯಾವ ಕಾನೂನು, ತೀರ್ಪಿನ ಮೂಲ ಉದ್ದೇಶಗಳೂ ಗೆಲುವು ಸಾದಿಸಲಾರವು. ಈ ಕಾನೂನು, ತೀರ್ಪುಗಳನ್ನು ಹೆಚ್ಚಿನ ಸಂದರ್ಭ ತಮ್ಮ ಗುರಿ ಸಾಧನೆಗೆ ಉಪಯೋಗಿಸಬಹುದು. ತಮಗೆ ಅನುಕೂಲವಾಗುವ ರೀತಿಯಲ್ಲಿ ತೀರ್ಪನ್ನು ನೋಡಬಹುದು. ಕೊನೆಗೂ ಪ್ರತಿಯೊಬ್ಬರ ಆರೋಪ ನ್ಯಾಯಾಲಯದ ತೀರ್ಪಿನ ಮೇಲೆಯೇ. ತಮಗೆ ಅನನುಕೂಲವಾದಾಗ “ತೀರ್ಪು ಸರಿ ಇಲ್ಲ’ ಎಂದು ಹೇಳುತ್ತೇವೆ. ಆದರೆ ಕಾನೂನು ಅಥವಾ ತೀರ್ಪಿನ ಮೂಲ ಉದ್ದೇಶವನ್ನು ನಾವು ಮರೆತರೆ “ಕುಟುಂಬ’ ವ್ಯವಸ್ಥೆಯನ್ನು ಹಳಿಗೆ ತರುವ ಸುಪ್ರೀಂ ಕೋರ್ಟ್‌ನ ಉದ್ದೇಶ ಸಫಲವಾಗಬಹುದೇ? ಅಥವಾ ಅದು ಇನ್ನೊಂದು “ಮಹಿಳಾ ಶೋಷಣೆ’ಗೆ ಅಸ್ತ್ರವಾಗಬಹುದೆ? ಇದಕ್ಕೆ ಕಾಲವೇ ಉತ್ತರಿಸಬೇಕು.
ಸುಪ್ರೀಂ ಕೋರ್ಟ್ ತೀರ್ಪು ಇಡೀ ದೇಶಕ್ಕೆ ಅನ್ವಯ. ಆದರೆ ಭಾರತದ ಸಾಮಾಜಿಕ ವ್ಯವಸ್ಥೆ ಬೇರೆಯಾಗಿದೆ. ನಗರ, ಗ್ರಾಮೀಣ, ಅಕ್ಷರಸ್ಥ, ಅನಕ್ಷರಸ್ಥ, ಬಡವ, ಶ್ರೀಮಂತ, ಈ ರೀತಿ ಸಾಮಾಜಿಕ ಸ್ತರಗಳು ಇಲ್ಲಿವೆ. ಆದರೆ ತೀರ್ಪುಗಳ ಪರಿಣಾಮ ಒಂದೇ ರೀತಿಯಾಗಿರುತ್ತದೆ. ಈ ತೀರ್ಪು ಅನ್ವಯಿಸುವಾಗ ಬಹಳ ಜಾಗ್ರತೆ ವಹಿಸಬೇಕಾಗುತ್ತದೆ.
ಯಾಕೆಂದರೆ ನಗರದ ವಿದ್ಯಾವಂತರಿಗೂ ಗ್ರಾಮೀಣ ಪ್ರದೇಶದಲ್ಲಿರುವ ಜನರಿಗೂ ವ್ಯತ್ಯಾಸ ಕಂಡು ಬರುತ್ತದೆ. ಜ್ಞಾನ, ಹಣದ ಬಲ ಪ್ರಭಾವ ಇನ್ನೊಬ್ಬರನ್ನು ಶೋಷಿಸಲು ಅವಕಾಶ ಮಾಡಿಕೊಡುತ್ತದೆ. ಇನ್ನೊಬ್ಬರನ್ನು ಅನ್ಯಾಯವಾಗಿ ಸೋಲಿಸಲು ಸುಲಭ ದಾರಿಯನ್ನು ತೆರೆದಿಡುತ್ತದೆ. ಆ ಪ್ರಯತ್ನ ನಿರಂತರ ನಡೆಯುತ್ತದೆ. ಭಾರತದ ಸಂವಿಧಾನದ ನ್ಯಾಯ, ಸಮಾನತೆ ಹಾಗೂ ಶೋಷಣೆ ಮುಕ್ತ ಸಮಾಜವನ್ನು ನಿರ್ಮಿಸಲು ಕಟಿಬದ್ದವಾಗಬೇಕು ಎಂದು ಸಾರುತ್ತದೆ. ಸುಪ್ರೀಂ ಕೋರ್ಟ್‌ನ ತೀರ್ಪಿನ ಉದ್ದೇಶವೂ ಇದೇ ಆಗಿದೆ. ಆದರೆ ಆ ದಾರಿಯಲ್ಲಿ ನಡೆಯುವ ಜವಾಬ್ದಾರಿ ಪ್ರತಿಯೊಬ್ಬ ಪ್ರಜೆ, ಆಡಳಿತ ವರ್ಗಕ್ಕೆ ಇರುತ್ತದೆ. ಈ ಅಂಶವನ್ನು ನಾವು ನೆನಪಿಸಿಕೊಳ್ಳುತ್ತಾ, ಸುಪ್ರೀಂ ಕೋರ್ಟ್ ಇತ್ತೀಚೆಗೆ ನೀಡಿದ ತೀರ್ಪು ಕುಟುಂಬ ವ್ಯವಸ್ಥೆಯನ್ನು ಮತ್ತೆ ಹಳಿಗೆ ತರಬಹುದೆ? ಅಥವಾ ಬೇರೊಂದು ರೀತಿಯ ಬದಲಾವಣೆಗೆ ಕಾರಣವಾಗಬಹುದೆ? ಅಥವಾ ಅದನ್ನು ಕಾಲವೇ ನಿರ್ಣಯಿಸುತ್ತದೆಯೇ? ಈಗ ನೀಡುವ ಉತ್ತರ ಅಪೂರ್ಣವಾಗಬಹುದು. ಕಾದು ನೋಡೋಣ.
– ನವನೀತ ಡಿ ಹಿಂಗಾಣಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bantwala: ನಾವೂರು: ಅತ್ಯಾಚಾರ; ಆರೋಪಿಗೆ ನ್ಯಾಯಾಂಗ ಬಂಧನ
Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್. ಸಂತೋಷ್ ಹೆಗ್ಡೆ
Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್
Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ
Kota: ಸಾಸ್ತಾನ ಟೋಲ್: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.