ಭೂತ ನಗರಿಗಳು ನಮಗೆ ಮಾದರಿಯಾಗಬೇಕೆ?
Team Udayavani, Jul 8, 2018, 10:11 AM IST
1949ರಲ್ಲಿ ಚೀನದಲ್ಲಿ ಕೇವಲ 49 ನಗರಗಳು ಇದ್ದವು. 2016ಕ್ಕೆ ಈ ಸಂಖ್ಯೆ 628 ದಾಟಿದೆ ಮತ್ತು ನೂರಾರು ನಗರಗಳು ನಿರ್ಮಾಣ ಹಂತದಲ್ಲಿವೆ. 1949ರಲ್ಲಿ ಕೇವಲ 12 ಪ್ರತಿಶತ ಜನರು ನಗರವಾಸಿಗಳಾಗಿದ್ದರೆ ಈಗ 731 ಮಿಲಿಯನ್ ಜನರು ನಗರ ಪ್ರದೇಶದಲ್ಲಿ ವಾಸ ಮಾಡುತ್ತಿದ್ದಾರೆ. ಶೇಕಡಾ 50ರಷ್ಟು ಚೀನಿಯರು ನಗರ ವಾಸಿಗಳಾಗಿದ್ದಾರೆ. ಒಂದು ಅಂದಾಜಿನ ಪ್ರಕಾರ ಚೀನದಲ್ಲಿ ಕಳೆದ 30 ವರ್ಷದಲ್ಲಿ ಅಮೆರಿಕದ ಜನಸಂಖ್ಯೆಯಷ್ಟು ಜನ ಹಳ್ಳಿಯಿಂದ ನಗರಕ್ಕೆ ಸ್ಥಳಾಂತರಗೊಂಡಿದ್ದಾರೆ.
ಚೀನ ದೇಶದ ಅಭಿವೃದ್ಧಿ ಮಾದರಿ ಮತ್ತು ಅದು ಅನುಸರಿಸುತ್ತಿರುವ ಅಭಿವೃದ್ಧಿ ನೀತಿಯು ಭಾರತಕ್ಕೆ ಅನ್ವಯವಾಗುತ್ತದಾ? ಇತ್ತೀಚೆಗೆ ರಾಹುಲ್ ಗಾಂಧಿಯವರು ಚೀನದ ನಗರಗಳ ಬೆಳವಣಿಗೆಯನ್ನು ಭಾರತಕ್ಕೆ ಹೋಲಿಸಿ ಪ್ರಧಾನಿ ನರೇಂದ್ರ ಮೋದಿಯವರನ್ನು ಪ್ರಶ್ನಿಸಿದ್ದರು. ಈ ಹಿನ್ನೆಲೆಯಲ್ಲಿ ಚೀನದ ನಗರಾಭಿವೃದ್ಧಿಯ ಪಥವನ್ನು ಅವಲೋಕಿಸಿದರೆ ಈ ಪ್ರಶ್ನೆಗೆ ಉತ್ತರ ದೊರೆಯುತ್ತದೆ.
“”ಚೀನ ದೇಶದಲ್ಲಿ ಭೂತಗಳ ನಗರಗಳನ್ನು ನಿರ್ಮಿಸಲಾಗುತ್ತಿದೆ. ನೂರಾರು ನಗರಗಳನ್ನು ನಿರ್ಮಿಸಿದ್ದರೂ ಅದರಲ್ಲಿ ಯಾವುದೇ ಜನ ವಸತಿ ಇಲ್ಲ” ಎಂದು ಅಲ್‌ಜಝೀರಾ ವರದಿಗಾರ್ತಿಯು ಮಾಡಿದ ವರದಿಯ ಜಾಡನ್ನು ಹಿಡಿದು ವೇಡ್ ಷಪರ್ಡ್ ಎಂಬ ಲೇಖಕ ಚೀನಾ ಪ್ರವಾಸವನ್ನು ಕೈಗೊಂಡು ಸತ್ಯಾಸತ್ಯತೆಗಳನ್ನು ಪರಿಶೀಲಿಸುತ್ತಾನೆ. ಅದರ ಆಧಾರದಲ್ಲಿ ಬರೆದ ಪುಸ್ತಕ ಎಜಟsಠಿ ಇಜಿಠಿಜಿಛಿs ಟf ಇಜಜಿnಚ ಮೂಲಕ ಆ ದೇಶದಲ್ಲಿನ ನಗರಗಳ ನಿರ್ಮಾಣ ಮತ್ತು ಅಗಾಧತೆಯನ್ನು ಪ್ರಪಂಚಕ್ಕೆ ಪರಿಚಯಿಸುತ್ತಾರೆ.
ಚೀನದ ನಗರೀಕರಣದ ಕ್ರಾಂತಿಯು ಯಾರ ಊಹೆಗೂ ನಿಲುಕದ ಪ್ರಮಾಣದಲ್ಲಿ ನಡೆಯುತ್ತಿದೆ. ಅದರ ವಿವರಗಳು ಎಂತಹವರನ್ನೂ ಬೆಚ್ಚಿ ಬೀಳಿಸುವುದರಲ್ಲಿ ಸಂಶಯವಿಲ್ಲ. ಆ ದೇಶದಲ್ಲೆಡೆ ನೂರಾರು ನಗರಗಳು ತಲೆ ಎತ್ತುತ್ತಿವೆ. ಅಲ್ಲಿ ಇದೀಗ ನಗರ ನಿರ್ಮಾಣವೇ ಒಂದು ಉದ್ದಿಮೆಯಾಗಿ ಬೆಳೆದಿದೆ. ಕೇವಲ ಹೊಸ ನಗರಗಳ ನಿರ್ಮಾಣ ಕಾರ್ಯವಲ್ಲದೆ ದಶಕಗಳಷ್ಟು ಹಳೆಯದಾದ ನಗರಗಳನ್ನು ನೆಲಸಮ ಮಾಡಿ ಹೊಸದಾಗಿ ಕಟ್ಟುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಪುರಾತನ ಹಳ್ಳಿ ಇರಬಹುದು ಅಥವಾ ಹಳೆಯ ನಗರವಾಗಿರಬಹುದು ಅಲ್ಲಿ ಹೊಸ ನಗರ ನಿರ್ಮಾಣ ಮಾಡಲು ಸ್ಥಳೀಯ ನಗರ ಪಾಲಿಕೆಯು ತೀರ್ಮಾನ ಕೈಗೊಂಡರೆ ಆ ಸ್ಥಳದಲ್ಲಿ ವಾಸ ಮಾಡುತ್ತಿರುವವರು ಕಮಕ್ ಕಿಮಕ್ ಎನ್ನದೆ ಜಾಗ ತೆರವು ಮಾಡಬೇಕು. ಇದಕ್ಕಾಗಿ ಸ್ಥಳೀಯ ಸಂಸ್ಥೆಯ ಅಧಿಕಾರಿಗಳು ಗಡುವು ವಿಧಿಸಿರುತ್ತಾರೆ. ಅದು ಮುಗಿಯುತ್ತಿದ್ದ ಹಾಗೆ ಬುಲ್ಡೋಜರ್‌ಗಳ ಶಬ್ದ ಆರಂಭವಾಗುತ್ತದೆ. ತೆರವುಗೊಳಿಸದೆ ಉಳಿದುಕೊಂಡಿರುವವರು ಅನ್ಯ ಮಾರ್ಗವಿಲ್ಲದೆ ಜಾಗ ಖಾಲಿ ಮಾಡಲೇಬೇಕು.
1949ರಲ್ಲಿ ಚೀನದಲ್ಲಿ ಕೇವಲ 49 ನಗರಗಳು ಇದ್ದವು. 2016ಕ್ಕೆ ಈ ಸಂಖ್ಯೆ 628 ದಾಟಿದೆ ಮತ್ತು ನೂರಾರು ನಗರಗಳು ನಿರ್ಮಾಣ ಹಂತದಲ್ಲಿವೆ! 1949ರಲ್ಲಿ ಕೇವಲ 12 ಪ್ರತಿಶತ ಜನರು ನಗರವಾಸಿಗಳಾಗಿದ್ದರೆ ಈಗ 731 ಮಿಲಿಯನ್ ಜನರು ನಗರ ಪ್ರದೇಶದಲ್ಲಿ ವಾಸ ಮಾಡುತ್ತಿದ್ದಾರೆ. ಶೇಕಡಾ 50ರಷ್ಟು ಚೀನಿಯರು ನಗರ ವಾಸಿಗಳಾಗಿದ್ದಾರೆ. ಒಂದು ಅಂದಾಜಿನ ಪ್ರಕಾರ ಚೀನಾದಲ್ಲಿ ಕಳೆದ 30 ವರ್ಷದಲ್ಲಿ ಅಮೆರಿಕದ ಜನಸಂಖ್ಯೆಯಷ್ಟು ಜನ ಹಳ್ಳಿಯಿಂದ ನಗರಕ್ಕೆ ಸ್ಥಳಾಂತರ ಗೊಂಡಿದ್ದಾರೆ!
ಆ ದೇಶದಲ್ಲಿ ಹಳ್ಳಿಗಳು ಅತಿವೇಗದಲ್ಲಿ ಮಾಯಾವಾಗಿ ನಗರಗಳು ತಲೆಯೆತ್ತುತ್ತಿವೆ. ಟಿಯಾನ್ ಜಿನ್ ವಿಶ್ವವಿದ್ಯಾಲಯ ನಡೆಸಿದ ಅಧ್ಯಯನದ ಪ್ರಕಾರ ಚೀನಾ ದೇಶದಲ್ಲಿ 2000ದಲ್ಲಿ 37 ದಶಲಕ್ಷ ಹಳ್ಳಿಗಳು ಇದ್ದವು ಆದರೆ ಕಳೆದ ಒಂದು ದಶಕದಲ್ಲಿ ಈ ಸಂಖ್ಯೆಯು 26 ದಶಲಕ್ಷಕ್ಕೆ ಕುಸಿದಿದೆ. ದಿನನಿತ್ಯ ಸರಾಸರಿ 300 ಹಳ್ಳಿಗಳು ಮಾಯವಾಗುತ್ತಿರುವುದು ಇವರ ನಗರದ ವ್ಯಾಮೋಹವನ್ನು ತೋರುತ್ತದೆ.
ನಗರ ಪ್ರದೇಶದಲ್ಲಿ ವಸತಿ ಕಲ್ಪಿಸುವ ಉದ್ದೇಶದಿಂದ ಮನೆಗಳ ನಿರ್ಮಾಣವನ್ನು ಸಮರೋಪಾದಿಯಲ್ಲಿ ಕೈಗೊಳ್ಳಲಾಗುತ್ತಿದೆ. 1995ರಲ್ಲಿ 126 ಮಿಲಿಯನ್ ಮನೆಗಳನ್ನು ನಿರ್ಮಾಣ ಮಾಡಲಾಗಿತ್ತು. ಬೇಡಿಕೆಯು ಸತತವಾಗಿ ಏರುತ್ತಲೇ ಇರುವುದರಿಂದ ಪ್ರತಿ ವರ್ಷ ಎರಡು ಹಾಂಕಾಂಗ್ ನಗರ ವ್ಯಾಪ್ತಿಯಷ್ಟು ಪ್ರದೇಶದಲ್ಲಿ ಗೃಹ ನಿರ್ಮಾಣ ಕಾರ್ಯ ನಡೆಯುತ್ತಿದೆ.
ನಗರವನ್ನು ನಿರ್ಮಾಣ ಮಾಡಲು ಬೇಕಾದ ಜಾಗವನ್ನು ಪಡೆಯಲು ಅಲ್ಲಿನ ಸರಕಾರ ಕಠೊರವಾಗಿ ವರ್ತಿಸುತ್ತದೆ. ಯಾವುದೇ ರಾಜಿ ಇಲ್ಲದೆ ಮತ್ತು ಒತ್ತಡಗಳಿಗೆ ಮಣಿಯದೆ ನಿರ್ಮಾಣ ಕಾರ್ಯವನ್ನು ಆರಂಭಿಸುತ್ತದೆ. ಸರಕಾರದ ಈ ನಿಲುವಿನಿಂದ ಬೇಸತ್ತ ಮತ್ತು ಮನೆಗಳನ್ನು ಕಳೆದುಕೊಂಡ ಹಲವರು ಆತ್ಮಹತ್ಯೆಯ ದಾರಿಯನ್ನು ಹಿಡಿದಿದ್ದಾರೆ.
ಇಲ್ಲಿನ ಮತ್ತೂಂದು ವಿಚಿತ್ರ ಕಾಯಿದೆಯ ಪ್ರಕಾರ ಮನೆಯನ್ನು ಕೊಂಡುಕೊಳ್ಳುವವರಿಗೆ ಮನೆಯ ಮೇಲಿನ ಆಧಿಕಾರ ಕೇವಲ 70 ವರ್ಷಗಳು ಮಾತ್ರ ಇರುತ್ತದೆ. ವಾಣಿಜ್ಯ ಸ್ಥಳವಾದರೆ 50 ವರ್ಷಗಳು, ಕೈಗಾರಿಕೆ ಕಟ್ಟಡವಾದರೆ 40 ವರ್ಷಗಳು ಮಾತ್ರ. ಅವಧಿ ಮುಗಿದ ತರುವಾಯ ಈ ಮನೆಗಳನ್ನು ಮತ್ತೆ ಮಾರಾಟಕ್ಕೆ ಇಡಲಾಗುತ್ತದೆ. ಅಂದಿನ ಮಾರುಕಟ್ಟೆ ದರಕ್ಕೆ ಖರೀದಿಸಬೇಕಾಗುತ್ತದೆ.
ಚೀನದಲ್ಲಿ ಮನೆಗಳನ್ನು ಖರೀದಿಸುವುದು ಬಹು ದೊಡ್ಡ ವ್ಯಾಪಾರವೂ ಆಗಿದೆ ಮತ್ತು ಅಲ್ಲಿ ಮನೆಗಳಿಗೆ ಕಂದಾಯ ವಿಧಿಸದ ಖರೀದಿಸಿದವರು ಪದೇ ಪದೇ ಅದಕ್ಕಾಗಿ ವೆಚ್ಚ ಮಾಡುವ ಅಗತ್ಯವಿಲ್ಲ. ಇದರಿಂದ ಲಾಭದ ಬೆಲೆ ದೊರೆತಾಗ ಮನೆ ಮಾರಾಟ ಮಾಡಲು ಸಹಾಯಕವಾಗಿದೆ.
ಅಗಾಧ ಪ್ರಮಾಣದ ನಗರಗಳ ನಿರ್ಮಾಣದಿಂದ ಪರಿಸರಕ್ಕೆ ಅಪಾರವಾದ ಹಾನಿ ಉಂಟಾಗಿದೆ. 2011ರಲ್ಲಿ ಕೈಗೊಂಡ ಅಧ್ಯಯನ ವರದಿಯ ಪ್ರಕಾರ ಚೀನದಲ್ಲಿ ಎರಡು ಬಿಲಿಯನ್ ಕಟ್ಟಡ ತ್ಯಾಜ್ಯ ಉತ್ಪತ್ತಿಯಾದರೆ, ಕೇವಲ ಶೇಕಡಾ ಐದರಷ್ಟು ಮಾತ್ರ ಪುನರ್ ಸಂಸ್ಕರಣೆ ಮಾಡಲಾಗಿತ್ತು. ತ್ಯಾಜ್ಯ ಸಂಗ್ರಹವು ಕೆಲವೆಡೆ ಎಂಟು ಅಂತಸ್ತಿನ ಮಹಡಿಯ ಎತ್ತರಕ್ಕೆ ಬೆಳೆದು ನಿಂತಿದೆಯಂತೆ.
ವೇಗಗತಿಯಲ್ಲಿ ನಡೆಯುತ್ತಿರುವ ನಗರೀಕರಣದಿಂದ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಒಂದು ಸವಾಲಾಗಿದೆ. ಆದರೆ ವಿದ್ಯುತ್, ನೀರು, ರಸ್ತೆ, ಸಂಚಾರ ಸೌಲಭ್ಯ ನೀಡುವುದರಲ್ಲಿ ಚೀನ ಹಿಂದೆ ಬಿದ್ದಿಲ್ಲ.
1980ರಲ್ಲಿ ಚೀನ ವಿದ್ಯುತ್ ಉತ್ಪಾದನೆಯು 66 ಗೀಗಾ ವ್ಯಾಟ್ ಇತ್ತು, ಈಗ ಅದು 1244 ಗೀಗಾ ವ್ಯಾಟ್ ಉತ್ಪಾದನೆ ಮಾಡುತ್ತಿದೆ. ಶೇಕಡಾ 75ರಷ್ಟು ವಿದ್ಯುತ್ ಉತ್ಪಾದನೆಯು ಕಲ್ಲಿದ್ದಲಿನಿಂದ ಮಾಡಲಾಗುತ್ತಿದೆ. ವರ್ಷಂಪ್ರತಿ 35 ಬಿಲಿಯನ್ ಟನ್ ಕಲಿದ್ದಲು ಬಳಕೆ ಮಾಡಲಾಗುತ್ತಿದ್ದು, ಇದು ಪ್ರಪಂಚದ ಎಲ್ಲಾ ರಾಷ್ಟ್ರಗಳು ಒಟ್ಟು ಬಳಸುವ ಕಲ್ಲಿದ್ದಲಿಗಿಂತಲೂ ಹೆಚ್ಚಿದೆ. ಜಲ ವಿದ್ಯುತ್‌ನಲ್ಲಿಯೂ…ಅಂಕಿ ಸಂಖ್ಯೆಗಳು ಅಗಾಧತೆಯನ್ನು ತೋರುತ್ತವೆ. ಇಡೀ ದೇಶದಲ್ಲಿ 15 ಮೀಟರಿನ 22 ಸಾವಿರ ಡ್ಯಾಂಗಳನ್ನು ನಿರ್ಮಿಸಲಾಗಿದೆ. ಇದಲ್ಲದೆ ಇನ್ನೂ ನೂರಾರು ನಿರ್ಮಾಣ ಹಂತದಲ್ಲಿ ಇವೆ.
ಚೀನದಲ್ಲಿ ಎಲ್ಲವೂ ಹಿಮಾಲಯದೆತ್ತರದ ಯೋಜನೆಗಳೇ ಮತ್ತು ಅದರ ಅನುಷ್ಠಾನ ವೇಗವು ಬಿರುಗಾಳಿಯಂತೆ ಇರುತ್ತದೆ. ನಗರಗಳಲ್ಲಿ ಸುಗಮ ಸಂಚಾರ ವ್ಯವಸ್ಥೆಯನ್ನು ಕಲ್ಪಿಸಲು 7000 ಕಿಮಿ ಉದ್ದದ ಸುರಂಗ ಮಾರ್ಗವನ್ನು ನಿರ್ಮಾಣ ಮಾಡಿದ್ದಾರೆ. ಅಮೆರಿಕದಲ್ಲಿ ಇರುವುದಕ್ಕಿಂತಲೂ 5 ಪಟ್ಟು ಹೆಚ್ಚು ಸುರಂಗ ಮಾರ್ಗಗಳು ಚೀನದಲ್ಲಿವೆ. ಕಳೆದ ಒಂಬತ್ತು ವರ್ಷದಲ್ಲಿ 1.5 ಲಕ್ಷ ರಾಷ್ಟ್ರೀಯ ಹೆದ್ದಾರಿಯನ್ನು ನಿರ್ಮಾಣ ಮಾಡಲಾಗಿದೆ.
ಚೀನ ದೇಶದ ರೈಲು ಸಂಚಾರದಲ್ಲಿ ಕೈಗೊಂಡಿರುವ ಅಭಿವೃದ್ಧಿಯು ದಂಗು ಬಡಿಸುವಂತೆ ಇದೆ. 2003ರವರೆಗೆ ಒಂದೇ ಒಂದು ಕಿಮಿ ಹೈ ಸ್ಪೀಡ್ ರೈಲು ಮಾರ್ಗಗಳು ಇರಲಿಲ್ಲ. ಆದರೆ 13 ವರ್ಷದ ಅವಧಿಯಲ್ಲಿ 12,000 ಕಿಮಿ ಉದ್ದದ ಮಾರ್ಗವನ್ನು ನಿರ್ಮಾಣ ಮಾಡಿದ್ದಾರೆ ಮತ್ತು 2020ಕ್ಕೆ ಇದನ್ನು 50 ಸಾವಿರ ಕಿಮಿಗೆ ವಿಸ್ತರಿಸುವ ಯೋಜನೆ ಇದೆ.
ಭಾರತದಲ್ಲಿ ಪ್ರಪಂಚದ ಇತರ ಅಭಿವೃದ್ಧಿ ರಾಷ್ಟ್ರಗಳ ಮಾದರಿಯಲ್ಲಿ ಬುಲೆಟ್ ರೈಲು ಯೋಜನೆ ಕೈಗೊಂಡರೆ ಅದಕ್ಕೆ ನೂರೆಂಟು ವಿಘ್ನಗಳನ್ನು ಉಂಟು ಮಾಡುವುದರಲ್ಲಿ ಮತ್ತು ಕೆಲವರು ವಿರೋಧಿಸುವುದರಲ್ಲಿ ವಿಕೃತ ಸಂತೋಷ ಅನುಭವಿಸುತ್ತಿದ್ದಾರೆ.
ಚೀನದ ಭೂದಾಹ ಕೇವಲ ನೆರೆಯ ರಾಷ್ಟ್ರಗಳಿಗೆ ಸಿಮೀತವಾಗಿಲ್ಲ. ತಮ್ಮಲ್ಲಿ ಇರುವ ಸಮುದ್ರಗಳನ್ನು ಮುಚ್ಚಿ ಅದನ್ನು ಭೂಭಾಗವಾಗಿ ಪರಿವರ್ತಿಸಿ ನಗರಗಳನ್ನು ನಿರ್ಮಾಣ ಮಾಡುತ್ತಿದೆ. ನಗರ ನಿರ್ಮಾಣ ಮಾಡಲು ಸ್ಥಳಾವಕಾಶದ ಕೊರತೆಯಾದರೆ ಅದನ್ನು ತುಂಬಿಸುವ ಪರಿ ಇದಾಗಿದೆ.
ನಿರ್ಮಾಣ ಮಾಡುವ ನಗರಗಳಿಗೆ ಜನರನ್ನು ಹಾಗೂ ವಾಣಿಜ್ಯ ಕೇಂದ್ರಗಳನ್ನು ಆಕರ್ಷಿಸಲು ವಿವಿಧ ರೀತಿಯ ನವೀನ ತಂತ್ರಗಳನ್ನು ಬಳಸುತ್ತಾರೆ. ಚೀನಾ ದೇಶವು ಕೇವಲ ಬೇರೆ ಬೇರೆ ಎಲೆಕ್ಟ್ರಾನಿಕ್ ಉಪಕರಣಗಳನ್ನು ನಕಲು ಮಾಡುವುದರಲ್ಲಿ ಪ್ರಾವಿಣ್ಯತೆ ಗಳಿಸಿಲ್ಲ ನಗರಗಳನ್ನೂ ನಕಲು ಮಾಡುವುದರಲ್ಲಿ ಎತ್ತಿದ ಕೈ. ಹೌದು, ಹಲವಾರು ಯೂರೋಪಿನ ನಗರಗಳ ನಕಲು ಚೀನದಲ್ಲಿ ನಿರ್ಮಾಣವಾಗಿದೆ. ಇದಕ್ಕೆ ಉತ್ತಮ ಉದಾಹರಣೆಯೆಂದರೆ ಆಸ್ಟ್ರಿಯಾದ ಹಾಲ್‌ಸ್ಟ್ರಾಟ್ ನಗರ. ವಿಶ್ವಪಾರಂಪರಿಕ ನಗರ ಎಂದು ಗುರುತಿಸಿರುವ ಈ ನಗರವನ್ನು ಯಥವತ್ತಾಗಿ ನಕಲು ಮಾಡಿ ಚೀನಾದಲ್ಲಿ ನಿರ್ಮಾಣ ಮಾಡಿದ್ದಾರೆ. ಹಾಲ್‌ಸ್ಟ್ರಾಟ್ ನಗರದ ಇಂಚಿಂಚು ಕಾಪಿ ಮಾಡಲಾಗಿದೆಯಂತೆ.
ಚೀನ ದೇಶವು ಇಂದು ವಿಶ್ವದ ಆರ್ಥಿಕ ದೈತ್ಯ ಶಕ್ತಿಯಾಗಿ ಬೆಳೆದು ನಿಂತಿದೆ. ಮಾವೋ ಸಿದ್ಧಾಂತ ನಂಬಿದ್ದರೂ ತಮ್ಮ ಅಭಿವೃದ್ಧಿಗೆ ಪಾಶ್ಚಿಮಾತ್ಯ ನೀತಿಯನ್ನು ಬಳೆಸಿಕೊಂಡು ಅಮೆರಿಕ ದೇಶಕ್ಕೆ ಸೆಡ್ಡು ಹೊಡೆಯುವ ಮಟ್ಟಕ್ಕೆ ತಲುಪಿದೆ. ಚೀನ ದೇಶದ ಪ್ರಗತಿಯ ದಾರಿಯನ್ನು ನಮ್ಮ ದೇಶಕ್ಕೆ ಹೋಲಿಕೆ ಮಾಡಲು ಸಾಧ್ಯವಿಲ್ಲ. ನಗರ ನಿರ್ಮಾಣಕ್ಕೆ ಅಥವಾ ಮೂಲಭೂತ ಸೌಕರ್ಯ ಯೋಜನೆಗಳನ್ನು ಅನುಷ್ಠಾನಗೊಳಿಸಲು ಚೀನ ಅನುಸರಿಸುವ ಮಾರ್ಗವು ಯಾವುದೇ ಪ್ರಜಾತಂತ್ರ ರಾಷ್ಟ್ರಗಳಿಗೆ ಅನುಸರಿಸುವುದಕ್ಕೆ ಸಾಧ್ಯವಾಗದು ಮತ್ತು ಅನುಸರಿಸ ಲೂಬಾರದು. ಮಾನವೀಯತೆಯ ತಿರುಳೇ ಇಲ್ಲದ ಕೇವಲ ವಾಣಿಜ್ಯ ದೃಷ್ಟಿಕೋನದಿಂದ ತನ್ನ ಆರ್ಥಿಕ ಪರಿಸ್ಥಿತಿಯ ಬೆಳವಣಿಗೆಗೆ ಲಕ್ಷಾಂತರ ಜನರ ಬಾಳಿನ ಜಾಡನ್ನೇ ಬದಲಿಸುವ ಚೀನ ಮಾದರಿಯ ಗೊಡವೆ ನಮಗೇಕೆ?
– ಪ್ರಕಾಶ್ ಶೇಷರಾಘವಾಚಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್
Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ
Mangaluru: ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
J-K: ಭೀಕರ ಅಪಘಾ*ತದಲ್ಲಿ SUV ಚಲಾಯಿಸುತ್ತಿದ್ದ 17 ರ ಹುಡುಗರಿಬ್ಬರು ಮೃ*ತ್ಯು
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.