ಗಾಂಧೀಜಿಯವರ ಅವಹೇಳನ-ಹಕ್ಕಿದೆಯೇ ನಮಗೆ?
Team Udayavani, Feb 18, 2020, 6:31 AM IST
ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಕುರಿತಾಗಿ ಅಪರೋಕ್ಷವಾಗಿ ಕ್ಷುಲ್ಲಕ ಶಬ್ದಗಳನ್ನು ಉಪಯೋಗಿಸಿದ ಮಹನೀಯರೋರ್ವರು ಕೊಂಚ ಬಿಸಿಯಾದ ಪ್ರತಿಭಟನೆ ವ್ಯಕ್ತವಾದಾಗ “ನಾನು ಯಾರ ಹೆಸರನ್ನೂ ಉಲ್ಲೇಖೀಸಲಿಲ್ಲ’ ಎಂದು ನುಣುಚಿಕೊಂಡರು. ಈ ಕುರಿತು ಕ್ಷಮೆಯಾಚಿ ಸುವ ಪ್ರಶ್ನೆಯೇ ಇಲ್ಲ ಎಂದು ಪಟ್ಟು ಹಿಡಿದರು.
ಪ್ರಶ್ನೆ ಅದಲ್ಲ. ಮಹಾತ್ಮಾ ಗಾಂಧೀಜಿಯವರ ಕುರಿತು ತೋರು ಬೆರಳು ಚಾಚುವ ಹಕ್ಕು ನಮಗಿದೆಯೇ? ಅವರ ಯಾವ ತಪ್ಪುಗಳನ್ನು ಜಾಲಾಡಿಸಿ ಹುಡುಕಲು ಯತ್ನಿಸುತ್ತಿದ್ದೇವೆ ನಾವು? ಇಂದು ಈ ಪ್ರಯತ್ನಗಳೇಕೆ ನಡೆಯುತ್ತಿದೆ? ಇದರ ಹಿಂದಿನ ರಹಸ್ಯ ಮರ್ಮಗಳೇನು? ಇಂತಹ ಹಲವು ಹತ್ತು ಗೊಂದಲಕಾರಿ ಅನುಮಾನಗಳು ಪ್ರಶ್ನೆಗಳಾಗಿ ಬೆಳೆದು ನಿಲ್ಲುತ್ತವೆ.
ಮಹಾತ್ಮಾ ಗಾಂಧೀಜಿಯವರು ಒಂದು ದಿನ ಉಪವಾಸ ನಡೆಸಿದರೆ 2000 ಮೈಲು ದೂರದ ಬ್ರಿಟನ್ ಗದ್ದುಗೆ ತತ್ತರಿಸುತ್ತಿತ್ತು! ಗಾಂಧೀಜಿಯವರ ಉಪವಾಸ ಸತ್ಯಾಗ್ರಹ “ಫಿರಂಗಿ’ ದಾಳಿಗಿಂತಲೂ ಪ್ರಬಲವಾಗಿತ್ತು.
ತಿಂಗಳುಗಟ್ಟಲೆ ಉಪವಾಸ ಕುಳಿತಿರುತ್ತಿದ್ದರು ಆ ಮಹಾತ್ಮ. ಅನ್ನ, ನೀರು ತೊರೆದು ಯಾರಿಗಾಗಿ ಜೀವ ಸವೆಸಿದ್ದರು ಆ ಸಂತ? ಈ ದೇಶ ಮತ್ತು ದೇಶದೊಳಗಿನ ದೇಹಗಳಿಗಾಗಿ ತಾನೆ? ನಮ್ಮ ಸ್ವಾತಂತ್ರÂದ ಬಾಳಿಗಾಗಿ ತಾನೆ? ಅವರ ಕುರಿತು ಕೇವಲವಾಗಿ ಮಾತನಾಡುವ ನಾವು ಎಂದಾದರೂ ದೇಶಕ್ಕಾಗಿ ಒಂದೆರಡು ದಿನ, ಹೋಗಲಿ ನಾಲ್ಕಾರು ಹೊತ್ತುಗಳಷ್ಟು ಕಾಲವಾದರೂ ಅರೆಬರೆ ಹೊಟ್ಟೆಯಲ್ಲಿ ಬದುಕಿದ್ದೇವಾ? ಆ ಶಕ್ತಿ ನಮ್ಮಲ್ಲಿದೆಯೇ?
ಕೈಯಲ್ಲೊಂದು ಊರುಗೋಲು, ಒಂದು ಹಳೆಯದಾದ ಬಿಳಿ ಪಂಚೆ, ಒಂದು ತೇಪೆ ಹಾಕಿದ ಶಾಲು ಹೊದ್ದುಕೊಂಡು ಅಂಗಿ ಧರಿಸದೆ ದುಂಡು ಮೇಜಿನ ಪರಿಷತ್ತಿಗೆ ತೆರಳಿ ಕೋಟು, ಹ್ಯಾಟು, ಬೂಟು ಧರಿಸಿದವರ ನಡುವೆ ಕುಳಿತು ಅವರ ಅಪಾರ ಗೌರವವನ್ನು ಪಡೆದ ಮಹಾತ್ಮನ ಸರಳತೆಯಲ್ಲಿ ತಪ್ಪು ಹುಡುಕುತ್ತಿದ್ದೇವಾ ನಾವು? ಒಂದೇ ಒಂದು ಸಾರಿ ಅಂತಹ ಸರಳತನದಲ್ಲಿ ನಮ್ಮ ರಸ್ತೆಗಳಲ್ಲೇ ನಾವು ಓಡಾಡಿದ್ದಿದೆಯೇ? ತನ್ನ ಉಡುಪುಗಳಿಗೆ ಬೇಕಾದ ನೂಲುಗಳನ್ನು ತಾನೇ ಚರಕ ತಿರುಗಿಸಿ ಪಡೆದುಕೊಳ್ಳುತ್ತಿದ್ದರಂತೆ ಕರಮಚಂದರು. ಸಾವಿರಾರು ರೂಪಾಯಿ ಮೌಲ್ಯದ ಉಡುಪುಗಳನ್ನು ದಿನವೊಂದರ ನಾಲ್ಕಾರು ಸಾರಿ ಬದಲಾಯಿಸುವವರು ನಾವಲ್ಲವೇ ಸ್ವಾಮೀ, ನೀವಲ್ಲವೇ? ಅವರ ಸರಳ ಸಜ್ಜನಿಕೆಯಲ್ಲಿ ಭೂತಕನ್ನಡಿ ಹಿಡಿದು ಕುಂದನ್ನು ಹುಡುಕುತ್ತಿದ್ದೇವಾ?
ಗಾಂಧೀಜಿಯವರು ವಾಸಿಸುತ್ತಿದ್ದ ಸಾಬರಮತಿ ಆಶ್ರಮವನ್ನು ಎಂದಾದರೂ ಅರಿತುಕೊಂಡಿದ್ದೇವಾ? ಏನಿತ್ತು ಅಲ್ಲಿ? ಒಂದು ಹಳೆಯ ಮಂಚ, ನಾಲ್ಕಾರು ಮಡಕೆಗಳು, ಒಂದೆರಡು ಚರಕ, ರಾಟೆ, ತಕಲಿಗಳು, ಅವರದೇ ಆದ ಪಂಚೆ, ದೋತ್ರಗಳು, ಚಾಪೆ. ಯಾರಾದರೂ ಅತಿಥಿಗಳು ಬಂದರೆ ಅವರನ್ನು ಮಂಚದಲ್ಲಿ ಮಲಗಿಸಿ ಗಾಂಧೀಜಿ ಚಾಪೆ ಬಿಡಿಸಿ ನೆಲದ ಮೇಲೆ ಮಲಗುತ್ತಿದ್ದರಂತೆ! ಒಮ್ಮೆ ನಮ್ಮ ಭವ್ಯ ಬಂಗಲೆಗಳ ವೈಭವದೊಂದಿಗೆ ತಾಳೆಹಾಕಿ ನೋಡೋಣವೇ? ಇಂತಹ ಯೋಗಿವ ರನನ್ನು ನಿಂದಿಸುವ ನಮ್ಮ ಮನಸ್ಸು ಯಾಕಿಷ್ಟು ಕಠೊರವಾಯಿತು.
ಸಂದರ್ಭ ಬಂದಾಗ ಮಾತ್ರ ರಾಮನ ನೆನಪಾಗುತ್ತದೆ ನಮಗೆ. ಆಗ “ಜಪ’ ಮಾಡಲು ಆರಂಭಿಸುತ್ತೇವೆ. ಆದರೆ ಜೀವನ ಪೂರ್ತಿ ರಾಮನಾಮ ದೊಂದಿಗೆ ಬಾಳಿದರು. ಶ್ರೀರಾಮಚಂದ್ರ ಅವರ ಅಂತಃಸ್ಸತ್ವವೆನಿಸಿದ್ದ. ಹಂತಕನ ಗುಂಡಿಗೆ ಆಹುತಿಯಾಗುವ ಸಂಕಟ ಕಾಲದಲ್ಲೂ ಅವರ ಜಿಹೆÌಯು “ಹೇ ರಾಮ್’ ಎಂದೇ ನುಡಿಯಿತು. ಅಂತಹ “ರಾಮ ಧುನ್’ ನೊಂದಿಗೆ ಬಾಳಿದ ರಾಮರಾಜ್ಯದ ಕನಸುಗಾರನ ಸಮಾಧಿಯ ಮೇಲೆ ಮತ್ತೆ ತಪ್ಪುಗಳ ಇಟ್ಟಿಗೆಯನ್ನು ಕಟ್ಟಲು ಹೊರಟಿದ್ದೇವಲ್ಲಾ ನಾವು? ಛೇ!
ಗಾಂಧೀಜಿಯವರು ತಾನು ನಡೆದಾಡುವ ದಾರಿಯಲ್ಲಿ ಗೋಚರಿಸುತ್ತಿದ್ದ ಕಸಕಡ್ಡಿ, ಮಲ, ಮೈಲಿಗೆಗಳನ್ನು ತಾನೇ ಸ್ವತಹ ತೆಗೆದೆಸೆಯುತ್ತಿದ್ದರು. ಸ್ವತ್ಛ ಭಾರತ ಕಲ್ಪನೆಯನ್ನು ಅಂದೇ ನೀಡಿದ್ದ ಮಹಾತ್ಮ ಪತ್ನಿ ಕಸ್ತೂರ್ ಬಾರವರಿಂ ದಲೂ ಅದನ್ನೇ ಮಾಡಿಸುತ್ತಿದ್ದರು. ಅವರು ಯಾವುದೇ ರಾಜಕೀಯ ಸ್ಥಾನಮಾನ ಲಾಭಕ್ಕಾಗಿ ಆ ಕೆಲಸವನ್ನು ಮಾಡುತ್ತಿರಲಿಲ್ಲ. ಅಂದಿನ ಅವರ ಸ್ವತ್ಛತಾ ಆಂದೋಲನದ ಯತ್ನವಲ್ಲವೇ ನಮಗೆ ಇಂದಿನ ಪ್ರೇರಣೆ?
ಗಾಂಧೀಜಿಯವರು ಬಡವರ ಬಾದಾಮಿ, ಕಡಲೇಕಾಯಿ ಮತ್ತು ಒಂದೆರಡು ಲೋಟ ಆಡಿನ ಹಾಲನ್ನು ಕುಡಿದು ಬದುಕುತ್ತಿದ್ದರು. ಈ ನನ್ನ ಬಡ ಭಾರತದಲ್ಲಿ ಒಪ್ಪೊತ್ತಿನ ಕೂಳಿಲ್ಲದೆ ಲಕ್ಷಾಂತರ ಜನರು ಒದ್ದಾಡುತ್ತಿರುವಾಗ ನಾನೊಬ್ಬ ಹೇಗೆ ಹೊಟ್ಟೆ ತುಂಬಾ ಉಣ್ಣಲಿ? ಇದು ಗಾಂಧೀಜಿಯವರ ಬಡವರ ಪರವಾದ ನೋವಿನ ಕಾಳಜಿ! ನಮ್ಮ ಐಷಾರಾಮಿ ಭೋಜನವನ್ನು ಒಮ್ಮೆ ನೆನಪಿಸಿಕೊಳ್ಳಿ ದೇವರುಗಳೇ? ನಾವು ಅರ್ಧರ್ಧ ತಿಂದು ಎಸೆಯುವ ಎಂಜಲಿನ ಬೆಲೆ ಎಷ್ಟಾಗಬಹುದೆಂದು ಒಮ್ಮೆ ಲೆಕ್ಕ ಹಾಕಿ ಸ್ವಾಮೀ.
ಮಹಾತ್ಮರು ಜೀವನದಲ್ಲಿ ಒಂದೊಮ್ಮೆಯಾದರೂ ಆ ರೀತಿ ಉಂಡಿದ್ದರೇ? ಎಸೆದಿದ್ದರೇ? ಅರೆಹೊಟ್ಟೆಯಲ್ಲಿ ನೂರಾರು ಮೈಲಿ ಕಾಲ್ನಡಿಗೆಯಲ್ಲಿ ಸಂಚರಿಸುತ್ತಿದ್ದ ಆ ಬಡ ಫಕೀರನನ್ನೇಕೆ ಅನವಶ್ಯಕವಾಗಿ ದೂಷಿಸುತ್ತಿದ್ದೇವೆ ನಾವು?
ದಿಟ ಮತ್ತು ದಿಟ್ಟ ಈ ಎರಡು ಶಬ್ದಗಳು ಗಾಂಧೀಜಿಯವರ ಒಡನಾಡಿ ಯಾಗಿದ್ದವು. ಸತ್ಯವು ಅವರ ರಕ್ಷಣೆಗೆ ತಾನೇ ಟೊಂಕಕಟ್ಟಿ ನಿಲ್ಲುತ್ತಿತ್ತು. ಸತ್ಯಕ್ಕೆ ಹರಿಶ್ಚಂದ್ರ, ಮರ್ಯಾದೆ ಮತ್ತು ತ್ಯಾಗಕ್ಕೆ ಶ್ರೀ ರಾಮಚಂದ್ರ, ಅಹಿಂಸೆಗೆ ಬುದ್ಧ, ಶಾಂತಿಗಾಗಿ ಏಸುಕ್ರಿಸ್ತ ಅವರ ಆದರ್ಶಗಳಾಗಿದ್ದರು. ಅವರು ತನಗಾಗಿ ಎಂದೂ ಯಾರನ್ನೂ ಯಾಚಿಸುತ್ತಿರಲಿಲ್ಲ. ಅವರು ಸ್ವಾತಂತ್ರ್ಯ ಹೋರಾಟ ಮತ್ತು ದೇಶಕ್ಕಾಗಿ ಬೇಡಿದಾಗ ಮಹಿಳೆಯರು ಕೂಡಾ ತಮ್ಮ ಮಾಂಗಲ್ಯ ಸರಗಳನ್ನೇ ಕಳಚಿ ನೀಡುತ್ತಿದ್ದರು. ಅದು ದೇಶದ ಹಿತಕ್ಕಾಗಿ ಸದುಪಯೋಗಗೊಳ್ಳುವ ಭರವಸೆ ಅವರಿಗಿತ್ತು. ಆದರೆ ನಾವು ಐದು ವರ್ಷಕ್ಕೊಮ್ಮೆ ಮುಖ ತೋರಿಸಿ ಯಾಚಿಸಿ ಪಡೆದು ಬೆಳೆದು ನಂತರ ಸುಳ್ಳಿನ ಸೌಧದಲ್ಲಿ ಕಾಲಕಳೆದು ಐಷಾರಾಮವಾಗಿ ಇರುತ್ತೇವಲ್ಲಾ ಸ್ವಾಮೀ?
ಶಿಬಿ ಚಕ್ರವರ್ತಿಯ ಕತೆಗಳನ್ನು ಆಗಾಗ ಉಲ್ಲೇಖೀಸುತ್ತಿದ್ದ ಗಾಂಧೀಜಿ ಆತನಂತೆಯೇ ಸರ್ವಸ್ವವನ್ನೂ ತ್ಯಾಗ ಮಾಡಿದ್ದರು. ಇದ್ದ ಅಲ್ಪಸ್ವಲ್ಪ ಜಮೀನು ಮನೆ ಎಲ್ಲವನ್ನೂ ಸ್ವಾತಂತ್ರ್ಯ ಸಮರಕ್ಕೆ ಸಮರ್ಪಿಸಿದ್ದರು. ಕಾರ್ನಾಡು ಸದಾಶಿವ ರಾವ್‌ರಂತಹ ನೂರಾರು ಮಂದಿಗೆ ಮಾದರಿಯಾದರು.
ಅವರಲ್ಲಿ ತಿರುಗಾಡಲು ಕನಿಷ್ಟ ಒಂದು ಎತ್ತಿನ ಗಾಡಿಯೂ ಇರಲಿಲ್ಲ. ಅವರ ಸರ್ವ ಸಮರ್ಪಣ ತ್ಯಾಗದಿಂದಾಗಿ ಸ್ವಾತಂತ್ರ್ಯ ಪಡೆದ ನಾವು ಇಂದು ಜನರ ಮತವನ್ನು ಪಡೆದು ಅದರೊಂದಿಗೆ ಲಕ್ಷಾಂತರ ಸಂಬಳ, ಬಂಗಲೆ, ಕಾರು, ಭತ್ತೆ, ಎಲ್ಲವನ್ನೂ ಅನುಭವಿಸಿ ನಾವು ಜನ ಸೇವಕರು ಎಂದು ಸುಳ್ಳು ಹೇಳುತ್ತೇವೆ. ಆ ಮಹಾತ್ಮ ಈ ಸಮಾಜದಿಂದ ಒಂದು ಚಿಕ್ಕಾಸನ್ನಾದರೂ ಪಡೆದಿದ್ದರೇ ಸ್ವಾಮೀ? ಹೇಳಿ ನೋಡೋಣ ಒಂದೇ ಒಂದು ಉದಾಹರಣೆ.
ನಾವು ಇತಿಹಾಸದಿಂದ ವಸ್ತುನಿಷ್ಟ ಸತ್ಯವಾದ ಪಾಠವನ್ನು ಕಲಿಯಬೇಕಾಗಿದೆ. ಸುಳ್ಳುಗಳನ್ನು ಪೋಣಿಸಿ ಹೊಸ ಇತಿಹಾಸ ಸೃಷ್ಟಿಸುವುದು ಮುಂದಿನ ಪೀಳಿಗೆಗಳಿಂದ ಸತ್ಯವನ್ನು ಅಪಹರಿಸಿದಂತಲ್ಲವೇ? ಪ್ರಪಂಚ ಕಂಡ ಶ್ರೇಷ್ಟ ಭಾರತೀಯ ಸಂತನ ಕುರಿತು ನಾವು ಹೆಮ್ಮೆ ಪಡಬೇಕಲ್ಲವೇ? ಅದರ ಬದಲು ನಮ್ಮ ಕಾಲುಗಳನ್ನು ನಾವೇ ಕತ್ತರಿಸಿಕೊಳ್ಳುವುದು ಎಷ್ಟು ವಿಹಿತ?
– ಮೋಹನದಾಸ್ ಸುರತ್ಕಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi: ತಹಶೀಲ್ದಾರ್ ಮನೆ ಮೇಲೆ ಲೋಕಾಯುಕ್ತ ದಾಳಿ
ISRO: ಇಸ್ರೋ ನೂತನ ಅಧ್ಯಕ್ಷರಾಗಿ ವಿ.ನಾರಾಯಣನ್ ನೇಮಕ: ಚಿನ್ನದ ಪದಕ ವಿಜೇತ VN ಪರಿಚಯ…
Sandalwood: ಸ್ಪಾನ್ಸರ್ಸ್ ಇದಿದ್ರೆ ನಾನ್ಯಾಕೆ 12 ವರ್ಷ ಕಷ್ಟಪಡಬೇಕಿತ್ತು: ರಚಿತಾ ರಾಮ್
Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ
Atul Subhash Case: ಮೊಮ್ಮಗನನ್ನು ಟೆಕಿ ಅತುಲ್ ತಾಯಿಯ ಸುಪರ್ದಿಗೆ ವಹಿಸಲು ಸುಪ್ರೀಂ ನಕಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.