ಮೋದಿ – ಟ್ರಂಪ್ ‘ದೋಸ್ತಿ ಕಾ ಧಮ್’
ಅಭಿಮತ
Team Udayavani, Feb 24, 2020, 8:11 AM IST
ಅಮೆರಿಕ ವಿಶ್ವದ ಶ್ರೀಮಂತ, ಬಲಿಷ್ಠ, ಭವ್ಯ ರಾಷ್ಟ್ರ. ಇದೀಗ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫೆ. 24 ಮತ್ತು 25 ರಂದು ಭಾರತದ ಪ್ರವಾಸ ಕೈಗೊಳ್ಳಲಿದ್ದಾರೆ. ಈವರೆಗೆ ಐವರು ಅಮೆರಿಕ ಅಧ್ಯಕ್ಷರು ಭಾರತಕ್ಕೆ ಭೇಟಿ ನೀಡಿದ್ದಾರೆ. ಟ್ರಂಪ್‌ಗೆ ಜಗತ್ತಿನ ಯಾವುದೇ ಭಾಗದಲ್ಲಿ ಸಿಗದ ಅದ್ದೂರಿಯ ಸ್ವಾಗತ ಮತ್ತು ವ್ಯವಸ್ಥಿತ ರೀತಿಯ ಆದರಾತಿಥ್ಯಗಳನ್ನು ನೀಡಲು ಭಾರತ ಸಜ್ಜಾಗಿದೆ ಹಾಗೂ ಈ ಭೇಟಿ ಜಾಗತಿಕವಾಗಿ ಭಾರತದ ನಿಲುವನ್ನು ಸ್ವಷ್ಟಗೊಳಿಸುವ ಒಂದು ಪ್ರಮುಖ ಕಾರ್ಯಕ್ರಮವಾಗಿ ಮೂಡಿ ಬರಲಿದೆ.
ಅಂತಾರಾಷ್ಟ್ರೀಯ ಸಂಬಂಧವು ರಾಜಕೀಯ, ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ, ಔದ್ಯಮಿಕ ಆಯಾ ಮಗಳನ್ನು ಒಳಗೊಂಡಿರುತ್ತದೆ ಹಾಗೂ ಅಂತಾರಾಷ್ಟ್ರೀಯ ರಾಜಕಾರಣದ ಕೇಂದ್ರ ಬಿಂದುವಾಗಿದೆ. ಎರಡು ರಾಷ್ಟ್ರಗಳ ನಡುವೆ ಸರಕಾರಿ ಮಟ್ಟದಲ್ಲಿ ರಾಷ್ಟ್ರೀಯ ಮುಖಂಡರ ಮುಖಾಂತರ ನಡೆಯುವ ಸಂಬಂಧಗಳು ಅಂತಾರಾಷ್ಟ್ರೀಯ ಸಂಬಂಧಗಳಾಗಿರುತ್ತವೆ. ರಾಷ್ಟ್ರಗಳು ತಮ್ಮ ಹಿತಾಸಕ್ತಿಗಳನ್ನು ಇತರ ರಾಷ್ಟ್ರಗಳೊಡನೆ ಹೇಗೆ ಸಮನ್ವಯ ಮಾಡಿಕೊಳ್ಳುತ್ತವೆ ಎಂಬುದು ಇಲ್ಲಿ ಪ್ರಮುಖ ವಿಚಾರವಾಗಿದೆ.
ಜಗತ್ತಿನ ಎರಡು ಮಹಾನ್ ಪ್ರಜಾತಂತ್ರ ರಾಷ್ಟ್ರಗಳು ಒಗ್ಗೂಡುವುದು ಭಾರತಕ್ಕೆ ಒಂದು ದೊಡ್ಡ ಶಕ್ತಿ ಬಂದಂತೆ. ಇದೇ ಸಂದರ್ಭದಲ್ಲಿ ಭಾರತವನ್ನು ವೈರತ್ವದ ದೃಷ್ಟಿಯಲ್ಲಿ ನೋಡುವ ರಾಷ್ಟ್ರಗಳಿಗೆ ಬಲವಾದ ಸಂದೇಶವೂ ಹೌದು. ಭಾರತ ಮತ್ತು ಅಮೆರಿಕ ಬಹು ಹಿಂದಿನಿಂದಲೂ ಸ್ನೇಹಿತ ರಾಷ್ಟ್ರಗಳು. ಪ್ರತಿಭಾವಂತ ಭಾರತೀಯರಿಗೆ ಅಮೆರಿಕ ಎಂಬುದು ಈಗಲೂ ಒಂದು ಸುಂದರ ಕನಸು.
ಭಾರತೀಯರು ಅಧ್ಯಯನಕ್ಕಾಗಿ ಅಥವಾ ಉದ್ಯೋಗಕ್ಕಾಗಿ ಅಮೆರಿಕದ ವಿಸಾ ಪಡೆಯಬೇಕೆಂದು ಕನಸು ಕಾಣುತ್ತಿರುತ್ತಾರೆ. ಅಮೆರಿಕದಲ್ಲಿರುವ ಭಾರತೀಯರು ಶ್ರೀಮಂತರಾಗಿದ್ದಾರೆ ಮತ್ತು ಯಶಸ್ವಿಗಳಾಗಿದ್ದಾರೆ. ಆಸುಪಾಸು ಇದೀಗ ಅಮೆರಿಕದಲ್ಲಿ 45 ಲಕ್ಷ ಭಾರತೀಯರು ನೆಲೆಸಿದ್ದಾರೆ. ಟ್ರಂಪ್‌ರವರು ಈ ಭೇಟಿಯಿಂದ ಉಭಯ ದೇಶಗಳ ಸಂಬಂಧ ಮತ್ತು ವ್ಯವಹಾರ ಅಭಿವೃದ್ಧಿಯಾಗುವ ನಿರೀಕ್ಷೆ ಇದೆ.
ಟ್ರಂಪ್‌ರವರ ಭಾರತದ ಭೇಟಿಯಲ್ಲಿ ರಾಷ್ಟ್ರದ ಹಿತಾಸಕ್ತಿಯೊಂದಿಗೆ ಅವರ ಸ್ವಹಿತಾಸಕ್ತಿಯೂ ಇಲ್ಲದೇ ಇಲ್ಲ. ಎಲ್ಲದಕ್ಕಿಂತಲೂ ಹೆಚ್ಚಾಗಿ ಎರಡು ಪ್ರಮುಖ ಉದ್ದೇಶಗಳನ್ನು ಗಣನೆಗೆ ತೆಗೆದುಕೊಳ್ಳಬಹುದು. ಅದೇನೆಂದರೆ ಚೀನದೊಂದಿಗೆ ವಾಣಿಜ್ಯ ಸಂಘರ್ಷದಲ್ಲಿರುವ ಅಮೆರಿಕಕ್ಕೆ ಭಾರತದ ಸಹಭಾಗಿತ್ವ ಬೇಕಾಗಿದೆ.
ಕೊರೊನಾ ವೈರಸ್‌ನ ಹಾವಳಿಗೆ ತುತ್ತಾಗಿರುವ ಚೀನ ತನ್ನ ಹಲವಾರು ವ್ಯಾಪಾರ ವಹಿವಾಟುಗಳನ್ನು ನಿಲ್ಲಿಸಿರುವುದೂ ಉಲ್ಲೇಖನೀಯ. ಆದರೆ ಈ ಬಗ್ಗೆ ಅಮೆರಿಕದ ನಿಲುವನ್ನು ಹೇಳಲಾಗದು. ಇನ್ನೊಂದು ಮಹದುದ್ದೇಶ ನವೆಂಬರ್‌ನಲ್ಲಿ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಿರುವುದರಿಂದ ಅಮೆರಿಕದಲ್ಲಿರುವ ಭಾರತೀಯರನ್ನು ಆಕರ್ಷಿಸುವುದು. ಇಲ್ಲಿ ಉಭಯ ರಾಷ್ಟ್ರಗಳಿಗೆ ತಮ್ಮದೇ ಆದ ರಾಷ್ಟ್ರೀಯ ಹಿತಾಸಕ್ತಿಗಳಿವೆ. ಬದಲಾಗುತ್ತಿರುವ ವಿಶ್ವ ಸಮುದಾಯದ ಬಗೆಗೆ, ಹೊಸ ವಿದ್ಯಮಾನಗಳು ಹೊಸ ಘಟನೆಗಳ ಬಗೆಗೆ ಸದ್ಯದ ಪರಿಸ್ಥಿತಿಯಲ್ಲಿ ಯಾವ ರೀತಿಯಲ್ಲಿ ಸ್ಪಂದಿಸುತ್ತವೆ ಎಂಬುದು ಅತ್ಯಂತ ಪ್ರಮುಖ ವಿಚಾರ.
ಟ್ರಂಪ್ ಮೋದಿಯವರನ್ನು ತನ್ನ ಆಪ್ತ ಸ್ನೇಹಿತ ಎಂದು ಕರೆದುಕೊಂಡಿದ್ದಾರೆ. ಮೋದಿಯವರ ಕಾರ್ಯ ವೈಖರಿ ಉತ್ತಮವಾಗಿದ್ದು ಭಾರತಕ್ಕೆ ಬರಲು ಉತ್ಸುಕನಾಗಿದ್ದೇನೆ ಎಂದಿದ್ದಾರೆ.
ನರೇಂದ್ರ ಮೋದಿಯವರು ರಾಷ್ಟ್ರಕಂಡ ಒಬ್ಬ ನಿಷ್ಕಳಂಕ ನಾಯಕ. ಪ್ರತಿಯೋರ್ವ ಅಂತಾರಾಷ್ಟ್ರೀಯ ನಾಯಕರಿಗೆ ಗೌರವವನ್ನಿತ್ತು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ತನ್ನದೇ ಆದ ಅಳಿಸಲಾಗದ ಛಾಪನ್ನು ಮೂಡಿಸಿದ ಮಹಾನ್ ನಾಯಕ.
ಸುದೀರ್ಘ ಎರಡು ದಶಕಗಳಷ್ಟು ಉನ್ನತ ಸ್ಥಾನದಲ್ಲಿದ್ದರೂ ಭ್ರಷ್ಟಾಚಾರದ ಕಳಂಕವನ್ನು ಅಂಟಿಸಿಕೊಳ್ಳದ, ಸಾರ್ವಜನಿಕ ವೇದಿಕೆಗಳಲ್ಲಿ ಅಪಹಾಸ್ಯವಾಗುವಂತೆ ನಡೆದುಕೊಳ್ಳದ, ವಿರೋಧಿಗಳು ಕೆಳಮಟ್ಟದಲ್ಲಿ ಟೀಕಿಸಿದರೂ ಎಂದಿಗೂ ರಾಷ್ಟ್ರ ತಲೆ ತಗ್ಗಿಸುವಂತೆ ನಡೆದುಕೊಳ್ಳದ, ವಿಶ್ವಮಟ್ಟದಲ್ಲಿ ಭಾರತದ ಘನತೆ ಗೌರವಗಳನ್ನು ಉತ್ತುಂಗಕ್ಕೇರಿಸಿದ ಪ್ರಾಮಾಣಿಕ ದೇಶಭಕ್ತ ಎಂಬುದರಲ್ಲಿ ಎರಡು ಮಾತಿಲ್ಲ.
ಭಾರತದ ಪ್ರವಾಸದ ಅಂಗವಾಗಿ ಟ್ರಂಪ್ ದಂಪತಿ ಗುಜರಾತ್‌ನ ಅಹ್ಮದಾಬಾದಿಗೆ ಭೇಟಿ ನೀಡಲಿದ್ದಾರೆ. ತನ್ಮೂಲಕ ವಿಶ್ವದ ಇಬ್ಬರು ಪ್ರಭಾವೀ ನಾಯಕರ ಸಮಾಗಮ. ಅಹ್ಮದಾಬಾದಿನಲ್ಲಿ ಮೂರು ತಾಸಿನ ಕಾರ್ಯಕ್ರಮಕ್ಕಾಗಿ ಗುಜರಾತ್ ಸರಕಾರ ಸುಮಾರು ನೂರು ಕೋಟಿ ರೂಪಾಯಿ ಖರ್ಚು ಮಾಡುತ್ತಿದೆ.
ಮೋದಿಯವರು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಭಾರತ – ಅಮೆರಿಕ ನಡುವಿನ ಸಂಬಂಧಗಳು ಹಿಂದೆಂದಿಗಿಂತಲೂ ಉತ್ತಮಗೊಂಡಿವೆ. ಅಮೆರಿಕ ಕೂಡಾ ತನ್ನ ಕಾರ್ಯತಂತ್ರ ಮತ್ತು ಅಗತ್ಯಗಳಿಗಾಗಿ ಭಾರತದ ಅತ್ಯಂತ ಸ್ನೇಹಿತ ರಾಷ್ಟ್ರವಾಗಿ ಉಳಿದಿದೆ. ಟ್ರಂಪ್ ಭೇಟಿಯ ವೇಳೆ ರಕ್ಷಣೆ ಮತ್ತು ಗುಪ್ತಚರ ಮಾಹಿತಿ ಹಂಚಿಕೆ ಸಂಬಂಧ ಹೊಸ ಅಧ್ಯಾಯ ತೆರೆದುಕೊಳ್ಳಲಿದೆ ಎಂಬ ಭರವಸೆಯನ್ನು ತಜ್ಞರು ಹೊರ ಹಾಕುತ್ತಿದ್ದಾರೆ.
ವ್ಯಾಪಾರ ವಹಿವಾಟುಗಳಲ್ಲಿನ ಬಿಕ್ಕಟ್ಟುಗಳನ್ನು ಸರಿ ಪಡಿಸಿಕೊಳ್ಳುವುದು. ಇರಾನ್ ಅಮೆರಿಕ, ನಿರ್ಬಂಧಗಳು ಭಾರತದ ಮೇಲೆ ಬೀರಿರುವ ತೊಂದರೆಗಳ ಪರಿಹಾರ, ಬಾಹ್ಯಾಕಾಶ, ಭದ್ರತೆ ಮತ್ತು ಮಿಲಿಟರಿ ಸಹಕಾರ, ವಲಸೆ ಮತ್ತು ಎಚ್1ಬಿ ವೀಸಾ ಮತ್ತು ಇನ್ನಿತ್ತರ ಬಿಕ್ಕಟ್ಟುಗಳಲ್ಲಿ ಎಷ್ಟರಮಟ್ಟಿಗೆ ಶಮನವಾಗುವುದೆಂಬುದನ್ನು ಕಾದು ನೋಡಬೇಕಾಗಿದೆ.
ಏತನ್ಮಧ್ಯೆ ಟ್ರಂಪ್‌ರವರು ಯಾವ ವ್ಯಾಪಾರ ಮತ್ತು ವಾಣಿಜ್ಯ ಒಪ್ಪಂದಗಳಿಗೆ ಸಹಿ ಹಾಕುವುದಿಲ್ಲ ಮತ್ತು ಭಾರತ ಅಮೆರಿಕವನ್ನು ಸರಿಯಾಗಿ ನಡೆಸಿಕೊಂಡಿಲ್ಲ ಎಂಬುದನ್ನು ಬಹಿರಂಗವಾಗಿ ಹೇಳಿರುವುದು ಮಾತ್ರವಲ್ಲದೆ ಅಮೆರಿಕದ ವಾಣಿಜ್ಯ ಪ್ರತಿನಿಧಿಯವರು ಭಾಗವಹಿಸುವ ಸಾಧ್ಯತೆ ಇಲ್ಲದಿರುವುದು ಭಾರತದ ಪಾಲಿಗೆ ನಿರಾಶಾದಾಯಕವಾಗಿದೆ.
ಈ ನಿಟ್ಟಿನಲ್ಲಿ ಯೋಚಿಸುವಾಗ ಟ್ರಂಪ್ ಭಾರತಕ್ಕೆ ಭೇಟಿ ನೀಡುವ ಉದ್ದೇಶಗಳಲ್ಲಿ ಮುಂಬರುವ ಅಮೆರಿಕದ ಚುನಾವಣೆಯಲ್ಲಿ ಅಮೆರಿಕದಲ್ಲಿರುವ ಭಾರತೀಯರನ್ನು ಆಕರ್ಷಿಸುವುದು ಪ್ರಮುಖ ಉದ್ದೇಶವೆಂದೆನಿಸುತ್ತದೆ. ಇಲ್ಲಿ ಪ್ರಮುಖ ವಿಚಾರವೆಂದರೆ ರಾಷ್ಟ್ರಗಳ ನಡುವಿನ ಆರ್ಥಿಕ ಪೈಪೋಟಿಯು ಒಬ್ಬರ ಲಾಭ ಇನ್ನೊಬ್ಬರ ನಷ್ಟದಲ್ಲಿ ಅಂತ್ಯವಾಗುತ್ತದೆ.
ಸೈದ್ಧಾಂತಿಕವಾಗಿ ಇಂತಹ ಭೇಟಿಗಳು ವಾಣಿಜ್ಯ ಮತ್ತು ಆರ್ಥಿಕತೆಯ ಬಗೆಗಿನ ಒಪ್ಪಂದಗಳೂ ಪ್ರಮುಖವಾಗಿರುತ್ತವೆ. ವಾಣಿಜ್ಯ ಒಪ್ಪಂದ ಗಳಿಗೆ ಸಮಗ್ರ ಚರ್ಚೆಯ ಬಳಿಕ ಸಹಿ ಹಾಕುವುದಕ್ಕೆ ಎರಡು ದೇಶಗಳು ಸಹಮತಕ್ಕೆ ಬಂದಿವೆಯೆನ್ನುವುದು ಆಶಾದಾಯಕ. ಆದರೆ ಸದ್ಯಕ್ಕಿಲ್ಲ.
ಸದ್ಯದ ಪರಿಸ್ಥಿತಿಯಲ್ಲಿ 71,000 ಕೋ.ರೂ.ಮೌಲ್ಯದ ವ್ಯಾಪಾರ ಒಪ್ಪಂದದ ನಿರೀಕ್ಷೆ ಹುಸಿಯಾಗಿದೆ. ಅಧ್ಯಕ್ಷೀಯ ಚುನಾವಣೆಗೂ ಮುನ್ನಾ ಆಗುತ್ತಾ ಗೊತ್ತಿಲ್ಲ. ಹೀಗಾಗಿ ಟ್ರಂಪ್ ಪ್ರವಾಸ ಗಾಂಧಿ ಆಶ್ರಮ, ಮೊಟೆರಾ ಕ್ರಿಕೆಟ್ ಮೈದಾನ, ಲಕ್ಷ ಜನರನ್ನು ಉದ್ದೇಶಿಸಿ ಭಾಷಣ, ತಾಜ್ ಮಹಲ್ ಭೇಟಿ, ದ್ವಿಪಕ್ಷೀಯ ಮಾತುಕತೆಗಷ್ಟೇ ಸೀಮಿತವಾಗುತ್ತಾ ಎಂಬ ವಿಶ್ಲೇಷಣೆಗಳು ಕೇಳಿ ಬರುತ್ತಿವೆ.
ಅಮೆರಿಕ – ಭಾರತ ವಾಣಿಜ್ಯ ವೈಮನಸ್ಸುಗಳು: ಭಾರತದ ಉಕ್ಕು ಅಲ್ಯುಮಿನಿಯಂ ಉತ್ಪನ್ನಗಳಿಗೆ ಕ್ರಮವಾಗಿ ಶೇ.25 ಮತ್ತು ಶೇ.10 ಹೆಚ್ಚುವರಿ ಸುಂಕವನ್ನು 2018ರಲ್ಲಿ ಅಮೆರಿಕ ವಿಧಿಸಿತ್ತು. ಅದಕ್ಕೆ ತಿರುಗೇಟು ನೀಡಿದ ಭಾರತ ಅಮೆರಿಕದ 28 ಉತ್ಪನ್ನಗಳಿಗೆ ಹೆಚ್ಚುವರಿ ಸುಂಕ ಏರಿಸಿತ್ತು. ಇದರಿಂದ ಎರಡೂ ದೇಶಗಳ ನಡುವೆ ವ್ಯಾಪಾರ ಬಿಕ್ಕಟ್ಟು ಆರಂಭವಾಯಿತು.
ಭಾರತ ರಫ್ತು ಮಾಡುವ ಉಕ್ಕು, ಅಲ್ಯುಮಿನಿಯಂ ಉತ್ಪಾದನೆಗಳಿಗೆ ಹೆಚ್ಚುವರಿ ಸುಂಕದಿಂದ ವಿನಾಯಿತಿ ನೀಡಬೇಕು. ಕೃಷಿ ವಲಯ ಉತ್ಪನ್ನಗಳಿಗೆ ಹೆಚ್ಚಿನ ಮಾರುಕಟ್ಟೆ ಕಲ್ಪಿಸಬೇಕು ಎಂದು ಭಾರತ ಬೇಡಿಕೆ ಇಟ್ಟಿದೆ. ಇದೇ ವೇಳೆ ತನ್ನ ಕೃಷಿ, ಉತ್ಪಾದನಾ ವಸ್ತುಗಳು, ಡೈರಿ ಪದಾರ್ಥಗಳು, ವೈದ್ಯ ಉಪಕರಣಗಳಿಗೆ ಹೆಚ್ಚಿನ ಮಾರುಕಟ್ಟೆ ಅವಕಾಶ ನೀಡಬೇಕು ಎಂದು ಅಮೆರಿಕ ವಾದಿಸಿದೆ.
ಈ ಬಿಕ್ಕಟ್ಟುಗಳಿಂದಾಗಿ ಟ್ರಂಪ್ ಒಪ್ಪಂದಕ್ಕೆ ಹಿಂಜರಿಯುತ್ತಿದ್ದಾರೆ.
ಆರ್ಥಿಕ ಹಿಂಜರಿತದ ಸಂದರ್ಭದಲ್ಲಿಯೂ ಕೂಡಾ ಭಾರತವು ಆರ್ಥಿಕ ಬದ್ಧತೆ ಮತ್ತು ರಕ್ಷಣೆಯನ್ನು ಅತ್ಯಂತ ಸಮರ್ಪಕವಾಗಿ ನಿಭಾಯಿಸುತ್ತಿದೆ. ಭಾರತದ ಪಾಲಿಗೆ ಇದೊಂದು ಪ್ರತಿಷ್ಠೆ. ಆರ್ಥಿಕ ಹಿಂಜರಿತ ವಿದ್ದರೂ ಭಾರತೀಯ ವಿದೇಶಿ ವಿನಿಮಯ 2019ನೇ ಸಾಲಿಗೆ 466.7 ಬಿಲಿಯನ್ ಡಾಲರ್‌ಗೆ ತಲುಪಿರುವುದು ಪ್ರಶಂಸನೀಯವೇ ಆಗಿದೆ ಮತ್ತು ಆರ್ಥಿಕಾಭಿವೃದ್ಧಿಯಲ್ಲಿ ಮೂರನೇ ಸ್ಥಾನಕ್ಕೆ ಏರಿದೆ.
ಅಮೆರಿಕದ ಪ್ರಮುಖ ವಿದೇಶಿ ನೀತಿಗಳೆಂದರೆ – ಶಾಂತಿ ಸ್ಥಾಪನೆಗೆ ಆದ್ಯತೆ, ವಿಶ್ವಸಂಸ್ಥೆಗೆ ಬೆಂಬಲ, ವ್ಯಕ್ತಿ ಸ್ವಾತಂತ್ರ್ಯಕ್ಕೆ ಗೌರವ, ಪ್ರಜಾಪ್ರಭುತ್ವದ ರಕ್ಷಣೆ, ಮಿಲಿಟರಿ ಶಕ್ತಿ ಇತ್ಯಾದಿ. ಭಾರತದ ವಿದೇಶಿ ನೀತಿಗಳೆಂದರೆ ಆಲಿಪ್ತ ಧೋರಣೆ, ವರ್ಣ ದ್ವೇಷ ನೀತಿಗೆ ವಿರೋಧ, ಶಾಂತಿಯುತ ಸಹಜೀವನ ವಿಶ್ವಸಂಸ್ಥೆಯಲ್ಲಿ ನಂಬಿಕೆ, ಏಷ್ಯಾ ರಾಷ್ಟ್ರಗಳ ಬಗ್ಗೆ ಆಸಕ್ತಿ, ಕಾಮನ್‌ವೆಲ್ತ್ ರಾಷ್ಟ್ರಕೂಟದಲ್ಲಿ ನಂಬಿಕೆ ರಾಷ್ಟ್ರೀಯ ಹಿತಾಸಕ್ತಿಗಳಿಗೆ ಪ್ರಾಮುಖ್ಯತೆ, ಅಹಿಂಸಾ ತತ್ವ, ಪರಮಾಣು.
ಇದೇ ಸಂದರ್ಭದಲ್ಲಿ ಪಾಕಿಸ್ಥಾನ ಮತ್ತು ಚೀನ ದೇಶಗಳ ಜೊತೆಗೆ ಭಾರತದ ಸಂಬಂಧವು ಅಷ್ಟಕಷ್ಟೆ. ಪಾಕಿಸ್ತಾನದ ಭಯೋತ್ಪಾದನೆಯ ವಿರುದ್ಧ ಹೋರಾಡುತ್ತಲೆ ಇದೆ. ಟ್ರಂಪ್ ಭೇಟಿಯಿಂದಾಗಿ ಉಭಯ ದೇಶಗಳ ವಿದೇಶಿ ನೀತಿಗಳು ಸಾಕಾರವಾಗಲಿ. ಭಾರತದ ಆರ್ಥಿಕತೆಯ ಚೇತರಿಕೆಗೆ ಸಹಾಯವಾಗಲಿ, ಅಲ್ಲದೆ ಜಾಗತಿಕ ಆರ್ಥಿಕ ಹಿಂಜರಿತದ ಈ ಸಂದರ್ಭದಲ್ಲಿ ಟ್ರಂಪ್‌ರವರ ಭಾರತ ಭೇಟಿಯು ಉಭಯ ದೇಶಗಳ ಪಾರದರ್ಶಕ ವಾಣಿಜ್ಯ ಒಪ್ಪಂದಗಳಿಗೆ ನಾಂದಿಯಾಗಲಿ ಎಂದು ಹಾರೈಸೋಣ.
– ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kannada Cinema: ‘ನಾ ನಿನ್ನ ಬಿಡಲಾರೆ’ ಟ್ರೇಲರ್ ಬಂತು: ನ.29ಕ್ಕೆ ಸಿನಿಮಾ ತೆರೆಗೆ
Sagara: ಕರವೇ ತಾಲೂಕು ಅಧ್ಯಕ್ಷರ ಮನೆ ಮೇಲೆ ಅರಣ್ಯಾಧಿಕಾರಿಗಳಿಂದ ದಾಳಿ; ಜಿಂಕೆ ಮಾಂಸ ವಶ
BGT Series: ವಿರಾಟ್ ಕೊಹ್ಲಿ ಜತೆ ವೈಯಕ್ತಿಕ ಪೈಪೋಟಿಗೆ ಇಳಿದಿದ್ದೆ: ಮಿಚೆಲ್ ಜಾನ್ಸನ್
Congress ಶಾಸಕರಿಗೆ ಬಿಜೆಪಿ ಆಫರ್; ರವಿ ಗಣಿಗ ಆರೋಪಕ್ಕೆ ಶಾಸಕ ತಮ್ಮಯ್ಯ ಸ್ಪಷ್ಟನೆ
BGT 2024: ಗಾಯಗೊಂಡ ಗಿಲ್: ಮೂರನೇ ಕ್ರಮಾಂಕದಲ್ಲಿ ಕನ್ನಡಿಗನಿಗೆ ಒಲಿದ ಅದೃಷ್ಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.