ನಾಯಕತ್ವಕ್ಕೊಂದು ಹೊಸ ವ್ಯಾಖ್ಯಾನ : ಪರಿವರ್ತನಶೀಲ ಬದಲಾವಣೆ
Team Udayavani, Jan 28, 2017, 3:50 AM IST
ದೇಶದ ಹೆಚ್ಚಿನ ವಲಯಗಳು ಅಭಿವೃದ್ಧಿಯ ಹಾದಿಯಲ್ಲಿದ್ದರೂ ಸಾರ್ವಜನಿಕ ರಂಗದ ಕೆಲವು ಉದ್ದಿಮೆಗಳು ರೋಗಗ್ರಸ್ತವಾಗಿವೆ. ಸಮರ್ಥ ನಾಯಕತ್ವ ಮತ್ತು ಅದರಿಂದ ಪ್ರೇರಿತವಾಗಿ ಬದ್ಧತೆಯಿಂದ ದುಡಿಯುವ ಉದ್ಯೋಗಿಗಳ ಕೊರತೆ ಈ ಉದ್ದಿಮೆಗಳ ಅಧೋಗತಿಗೆ ಪ್ರಮುಖ ಕಾರಣ. ಸಾರ್ವಜನಿಕ ವಲಯದ ರೋಗಗ್ರಸ್ತ ಉದ್ದಿಮೆಗಳನ್ನು ಮಾತ್ರ ಅಲ್ಲ, ಅಭಿವೃದ್ಧಿಯ ಶ್ರುತಿಗೆ ಹೊಂದಿಕೊಳ್ಳಲು ಕಷ್ಟಪಡುವ ಎಲ್ಲ ವಲಯಗಳನ್ನು ಪ್ರಗತಿಯ ಹಳಿಗೆ ತಂದು ನಿಲ್ಲಿಸಲು ಪರಿವರ್ತನಶೀಲ ನಾಯಕತ್ವ ಅತ್ಯಗತ್ಯವಾಗಿದೆ.
ನಮ್ಮ ದೇಶದಲ್ಲಿ ಈಗ ಕಂಡುಬರುತ್ತಿರುವ ತ್ವರಿತಗತಿಯ ಅಭಿವೃದ್ಧಿ ಪ್ರಕ್ರಿಯೆ ಈಗಾಗಲೇ ವಿಶ್ವದ ಗಮನ ಸೆಳೆದಿದೆ. ಇದು ನಾವು ನಿಜಕ್ಕೂ ಹೆಮ್ಮೆ ಪಡಬೇಕಾದ ಸಂಗತಿ. ದೇಶದ ಹೆಚ್ಚಿನ ವಲಯಗಳು ಚೇತೋಹಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರೂ ಕೆಲವೊಂದು ಸಾರ್ವಜನಿಕ ವಲಯದ ಉದ್ದಿಮೆಗಳು ‘ಅಪೌಷ್ಟಿಕ ಶಿಶು’ಗಳಂತೆ ನಿಸ್ತೇಜಗೊಂಡಿವೆ. ಇವುಗಳಲ್ಲಿ ಹಲವು ಉದ್ದಿಮೆಗಳು ನಷ್ಟವನ್ನು ಅನುಭವಿಸುತ್ತಿದ್ದರೆ ಇನ್ನು ಕೆಲವು ಸಂಪೂರ್ಣ ರೋಗಗ್ರಸ್ಥವಾಗಿವೆ. ಅತ್ತ ಸಂಪೂರ್ಣವಾಗಿ ಪುನಃಶ್ಚೇತನಗೊಳ್ಳದೆ, ಇತ್ತ ನಷ್ಟದಿಂದ ಮೇಲೆದ್ದು ಬಾರದ ಪರಿಸ್ಥಿತಿಯನ್ನು ನಮ್ಮ ಸಾರ್ವಜನಿಕ ರಂಗದ ಉದ್ದಿಮೆಗಳು ಅನುಭವಿಸುತ್ತಿರುವುದು ಬೇಸರದ ಸಂಗತಿ. ಈ ರೀತಿಯ ದ್ವಂದ್ವ ಪರಿಸ್ಥಿತಿ ದೇಶದ ಇನ್ನಿತರ ವಲಯಗಳಲ್ಲಿ ಇಲ್ಲವೆಂದಲ್ಲ. ಆದರೆ ಅದರ ತೀವ್ರತೆ ಕಡಿಮೆ. ಈ ರೀತಿಯ ಸಮಸ್ಯೆಗೆ ಕಾರಣಗಳೇನು? ಇವುಗಳಿಗೆ ಖಾಯಂ ಪರಿಹಾರ ಹೇಗೆ ಒದಗಿಸಬಹುದು? ಹೆಚ್ಚಿನ ಸಮಸ್ಯೆಗಳಿಗೆ ಸಂಬಂಧಿಸಿ ಪ್ರಧಾನಿ ಮೋದಿಯವರು ಉಲ್ಲೇಖೀಸಿದ ‘ಪರಿವರ್ತನಶೀಲ ಬದಲಾವಣೆ’ ಪರಿಕಲ್ಪನೆಯನ್ನು ನಾವು ಯಾವ ‘ಲೆನ್ಸ್’ನಿಂದ ವೀಕ್ಷಿಸಬೇಕು ಮತ್ತು ಅದಕ್ಕೆ ಸಂಬಂಧಿಸಿ ಯಾವ ರೀತಿಯ ನಾಯಕತ್ವ ಮತ್ತು ಆಡಳಿತಾತ್ಮಕ ಬದಲಾವಣೆಗಳು ರೂಪುಗೊಳ್ಳಬೇಕು? ಈ ಪ್ರಶ್ನೆಗಳಿಗೆ ಉತ್ತರಗಳನ್ನು ನೀಡುವ ಮೊದಲು ಆಡಳಿತ, ನಿರ್ವಹಣೆ ಮತ್ತು ನಾಯಕತ್ವ ವಿಚಾರಗಳ ಬಗ್ಗೆ ಆಳವಾದ ಅಧ್ಯಯನ ನಡೆಸಿದ ಪೀಟರ್ ಡ್ರಕರ್ ಅವರ ಮಾತುಗಳನ್ನು ಆಲಿಸುವುದು ಸಮಂಜಸ. ಪೀಟರ್ ಡ್ರಕರ್ ಅವರು ಹೇಳುವಂತೆ ‘ಕೆಲವೊಂದು ಸಮಸ್ಯೆಗಳಿಗೆ ಶಾಶ್ವತ ಪರಿಹಾರವಿಲ್ಲ. ಆದರೆ ಆ ಸಮಸ್ಯೆಗಳನ್ನು ಮೀರಿ ನಿಲ್ಲುವ ಪ್ರಯತ್ನವನ್ನು ಖಂಡಿತ ಮಾಡಬಹುದು.’
ಭವಿಷ್ಯದಲ್ಲಿ ತಲೆದೋರಬಹುದಾದ ಸಮಸ್ಯೆಯನ್ನು ವರ್ತಮಾನದಲ್ಲೇ ಗ್ರಹಿಸಿ ಪ್ರಚಲಿತ ವಾಸ್ತವತೆಯ ಆಧಾರದಲ್ಲಿ ಆ ಸಮಸ್ಯೆಗಳನ್ನು ಪರಿಹಾರಗೊಳಿಸಲು ಪರಿವರ್ತನಶೀಲ ಬದಲಾವಣೆ ಪ್ರಕ್ರಿಯೆಯಿಂದ ಸಾಧ್ಯವಿದೆ. ಯಾವುದೇ ಒಂದು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಮೊದಲು ಆ ಸಮಸ್ಯೆಯನ್ನು ನಾವು ಯಾವ ‘ಲೆನ್ಸ್’ನಿಂದ ನೋಡುತ್ತೇವೆ ಎನ್ನುವುದು ಬಹಳ ಮುಖ್ಯ. ನಾವು ಬಳಸುವ ‘ಲೆನ್ಸ್’ ಸಮಸ್ಯೆಯನ್ನು ಸ್ಪಷ್ಟವಾಗಿ ಸೂರೆಗೊಳ್ಳಲು ಶಕ್ತವಾಗಿದೆಯೋ ಇಲ್ಲವೋ ಎಂಬುದನ್ನು ಮೊದಲು ಖಚಿತಪಡಿಸಿಕೊಳ್ಳಬೇಕು.
ಚಿಂತನೆಯ ಪ್ರಕಾರಗಳು ಮತ್ತು ‘ಲೆನ್ಸ್’
ಎಷ್ಟೋ ಬಾರಿ ಸಮಸ್ಯೆಗಳಿಗೆ ಪರಿಹಾರಗಳನ್ನು ಹುಡುಕುವ ನಿಟ್ಟಿನಲ್ಲಿ ನಾವು ಚಿಂತಿಸುವ ವಿಧಾನವೇ ನಮಗೆ ಅರಿವಿಲ್ಲದೆ ಮುಳುವಾಗುವ ಸಾಧ್ಯತೆಯಿದೆ. ವ್ಯಕ್ತಿ ಸಾಮಾನ್ಯವಾಗಿ ಎರಡು ವಿಧವಾಗಿ ಚಿಂತಿಸುತ್ತಾನೆ. ಒಂದು, ಶಾಬ್ದಿಕ ಚಿಂತನೆ. ಇಲ್ಲಿ ಬಳಸುವ ಶಬ್ದಗಳು ಸೂಕ್ತವಾಗಿದ್ದರೆ ಚಿಂತನೆಯು ಅರ್ಥಪೂರ್ಣವಾಗಿ ಇಚ್ಛಿತ ಫಲ ದೊರೆಯುುತ್ತದೆ. ಒಂದು ವೇಳೆ ಶಬ್ದಗಳು ಸೂಕ್ತವಾಗದಿದ್ದಲ್ಲಿ ಚಿಂತನೆ ಅರ್ಥಶೂನ್ಯವಾಗುವುದರಲ್ಲಿ ಸಂದೇಹವಿಲ್ಲ. ಎರಡನೆಯದ್ದು ಚಿತ್ರಣಗಳ ಮೂಲಕ ಚಿಂತನೆ. ಇಲ್ಲಿ ವ್ಯಕ್ತಿಯ ಕಲ್ಪನಾಶಕ್ತಿ ಬೆಳಕಿಗೆ ಬರುತ್ತದೆ. ಇನ್ನೂ ಸ್ವಲ್ಪ ಮುಂದುವರಿದು ಹೇಳುವುದಾದರೆ, ಚಿಂತಿಸಲು ಅಸಾಧ್ಯ ಅನ್ನುವ ವಿಚಾರಗಳ ಬಗ್ಗೆ ಚಿಂತಿಸಿ ಯಶಸ್ವೀ ಆವಿಷ್ಕಾರಗಳನ್ನು ಹುಟ್ಟು ಹಾಕಿದ ಅದೆಷ್ಟೋ ನಿದರ್ಶನಗಳು ನಮ್ಮ ಮುಂದಿವೆ. ಇದು ಸಾಧ್ಯವಾದದ್ದು ಕಲ್ಪನಾ ಶಕ್ತಿಯಿಂದ. ಹಾಗೆಯೇ ಚಿಂತನೆಯ ಧಾಟಿ ಸರಿಯಿದ್ದರೂ ನಾವು ಎಷ್ಟೋ ಬಾರಿ ಎಲ್ಲವೂ ಸರಿಯಿದೆ ಎಂದು ಭಾವಿಸಿ ಕೊನೆಗೆ ಯಾವುದೂ ಸರಿಯಿಲ್ಲ ಎಂಬ ತೀರ್ಮಾನಕ್ಕೆ ದಿಢೀರ್ ಬಂದು ಬಿಡುತ್ತೇವೆ. ಇದೂ ಒಂದು ರೀತಿಯ ದ್ವಂದ್ವವಲ್ಲವೇ? ಇನ್ನೂ ಸ್ಪಷ್ಟವಾಗಿ ಹೇಳುವುದಾದರೆ, ನಾವು ನೋಡುವ ‘ಲೆನ್ಸ್’ನಲ್ಲಿ ನಿಜವಾದ ಸಮಸ್ಯೆ ಅಡಗಿದೆ. ಯಾವುದೇ ಪೂರ್ವಾಗ್ರಹವಿಲ್ಲದೆ, ಸ್ವ-ನಿರ್ಮಿತ ದ್ವಂದ್ವಗಳಿಗೆ ಆಸ್ಪದ ನೀಡದೆ ಸಮಸ್ಯೆಯನ್ನು ‘ಸ್ಪಷ್ಟ ಲೆನ್ಸ್’ನಿಂದ ವೀಕ್ಷಿಸಿದಲ್ಲಿ ಪರಿಹಾರವನ್ನು ಸುಲಭವಾಗಿ ಕಂಡುಕೊಳ್ಳಬಹುದು. ಇವೆಲ್ಲಕ್ಕಿಂತ ಮಿಗಿಲಾಗಿ ಸಮಸ್ಯೆಯನ್ನು ನಿಭಾಯಿಸಲೇಬೇಕು ಅನ್ನುವ ಅಚಲ ನಿರ್ಧಾರ ನಮ್ಮದಾಗಬೇಕು. ಈ ವಿಚಾರದಲ್ಲಿ ವ್ಯಕ್ತಿತ್ವಕ್ಕಿಂತ ನಾಯಕತ್ವ ಹೆಚ್ಚು ಮಹತ್ವವನ್ನು ಪಡೆದುಕೊಳ್ಳುತ್ತದೆ. ಏಕೆಂದರೆ ನಾಯಕತ್ವ, ವ್ಯಕ್ತಿತ್ವಕ್ಕಿಂತ ಹೆಚ್ಚು ಗಹನವಾದ ಮತ್ತು ಆಳವಾದ ವಿಚಾರ. ಪ್ರಧಾನಿ ಮೋದಿ ಉಲ್ಲೇಖೀಸಿದ ಪರಿವರ್ತನಶೀಲ ಬದಲಾವಣೆ ಕೇವಲ ವ್ಯಕ್ತಿತ್ವಕ್ಕೆ ಸಂಬಂಧಿಸಿದ ವಿಚಾರವಲ್ಲ. ಅದು ನಾಯಕತ್ವಕ್ಕೆ ಸಂಬಂಧಿಸಿದ ಚಿಂತನೆ ಅನ್ನುವುದನ್ನು ನಾವು ಮೊದಲು ಅರಿಯಬೇಕು.
ಪರಿವರ್ತನಶೀಲ ಬದಲಾವಣೆ
‘ಬದಲಾವಣೆ’ ಪದವನ್ನು ನಾವು ನಿತ್ಯ ಬಳಸುತ್ತೇವೆ. ಪರಿವರ್ತನಶೀಲ ಬದಲಾವಣೆಯ ಪರಿಕಲ್ಪನೆ ಭಿನ್ನ, ಅದೊಂದು ಶಕ್ತಿಶಾಲಿ, ಸಂಪನ್ಮೂಲಭರಿತ ಚಿಂತನೆಯ ಫಲಶ್ರುತಿ. ಈ ಬದಲಾವಣೆಯನ್ನು ತಂದೊಡ್ಡುವ ನಾಯಕತ್ವ ಅನುಸರಣಾ ವರ್ತನೆಗೆ ಅವಕಾಶ ಮಾಡಿಕೊಡುವುದಿಲ್ಲ. ಮೂಲಭೂತವಾಗಿ ಪರಿವರ್ತನಶೀಲ ಬದಲಾವಣೆ ಜನತೆಯ ಹೃದಯ ಮತ್ತು ಚಿತ್ತವನ್ನು ಬದಲಿಸುವ ಪ್ರಕ್ರಿಯೆಯಾಗಿದೆ. ಈ ಪರಿವರ್ತನೆ ಮೊದಲು ಪ್ರಾರಂಭಗೊಳ್ಳುವುದು ಅರ್ಥಪೂರ್ಣ, ನಿಷ್ಕಲ್ಮಶ ಸಂಭಾಷಣೆಯಿಂದ. ಅರ್ಥಪೂರ್ಣ ಸಂಭಾಷಣೆಯಿಂದ ಜನರ ಜತೆ ಜನತೆ ನಿಸ್ಸಂದೇಹವಾಗಿ ಬೆಸೆಯುತ್ತಾರೆ. ಕಷ್ಟ, ಸುಖಗಳನ್ನು ಸಮಾನವಾಗಿ ಹಂಚಿಕೊಳ್ಳುತ್ತಾರೆ. ತಕ್ಕಮಟ್ಟಿಗೆ ಪರಿಹಾರೋಪಾಯಗಳೂ ಸೃಷ್ಟಿಗೊಳ್ಳುತ್ತವೆ.
ನಾಯಕತ್ವ, ನಿರ್ವಹಣೆ ವೈಫಲ್ಯ
ನಮ್ಮ ಕೆಲವು ಸಾರ್ವಜನಿಕ ವಲಯದ ಉದ್ದಿಮೆಗಳು ಈಗಲೂ ಸಾಂಪ್ರದಾಯಿಕ ರೀತಿಯಲ್ಲೇ ಕಾರ್ಯನಿರ್ವಹಿಸುತ್ತಿವೆ. ಬದಲಾವಣೆ ಅವುಗಳಿಗೆ ಬೇಡ. ನಿರ್ವಹಣಾ ಅಧ್ಯಕ್ಷತೆ, ಅರ್ಥಪೂರ್ಣ ಸಂಭಾಷಣೆಯ ಗೈರುಹಾಜರಿ, ನಾಯಕತ್ವ ವೈಫಲ್ಯ, ಇಳಿಮುಖಗೊಂಡ ಉತ್ಪಾದಕ ಸತ್ವ ಇವೇ ಮೊದಲಾದ ಸಮಸ್ಯೆಗಳು ಇವುಗಳಲ್ಲಿ ಮನೆಮಾಡಿವೆ. ಉದ್ಯಮಾಡಳಿತ ಸಂಶೋಧನೆಯ ಪ್ರಕಾರ ನಾಯಕತ್ವ ಮತ್ತು ನಿರ್ವಹಣೆ ಒಂದಕ್ಕೊಂದು ಪೂರಕವಾಗಿ ಕಾರ್ಯನಿರ್ವಹಿಸುವ ಅಂಶಗಳು. ಹಾಗೆಂದ ಮಾತ್ರಕ್ಕೆ ಇವೆರಡು ಒಂದೇ ಅಂಶಗಳು ಎಂದು ಭಾವಿಸಬಾರದು! ಯಾವುದೇ ಒಂದು ಉದ್ದಿಮೆ ಅಥವಾ ಸಂಸ್ಥೆಯಲ್ಲಿ ಪರಿವರ್ತನಶೀಲ ನಾಯಕತ್ವ ಸೃಜನಶೀಲತೆಗೆ ಮತ್ತು ನಿರಂತರ ಉತ್ತಮ ಕಾರ್ಯವೈಖರಿಗೆ ಉತ್ತೇಜನ ನೀಡಿದರೆ, ಪರಿಣಾಮಕಾರಿ ನಿರ್ವಹಣೆ ಸಂಕೀರ್ಣತೆಯನ್ನು ಹದ್ದುಬಸ್ತಿನಲ್ಲಿಡಲು ಸಹಕರಿಸುತ್ತದೆ. ದುರ್ದೈವವೆಂದರೆ, ನಮ್ಮ ಕೆಲವು ಸಾರ್ವಜನಿಕ ಉದ್ದಿಮೆಗಳು ಅತ್ತ ಸೃಜನಶೀಲತೆಯ ತಾಣಗಳೂ ಆಗಿಲ್ಲ, ಇತ್ತ ಅವುಗಳಲ್ಲಿ ಸಂಕೀರ್ಣತೆಯೂ ಕುಂಠಿತಗೊಂಡಿಲ್ಲ. ಅರಾಜಕತೆ ಮಾತ್ರ ಮುಂದುವರಿದಿದೆ!
ಅಂದ ಹಾಗೆ ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಪರಿಸ್ಥಿತಿಯೂ ತೀರಾ ಭಿನ್ನವಾಗಿಲ್ಲ. 2017 ಮತ್ತು 2018ರಲ್ಲಿ ಬಹುತೇಕ ಟಾಪ್ ಅಧಿಕಾರಿಗಳು ಸಾರ್ವಜನಿಕ ವಲಯದ ಬ್ಯಾಂಕ್‌ಗಳಿಂದ ನಿವೃತ್ತರಾಗಲಿದ್ದಾರೆ. ಸೂಕ್ತ ಉತ್ತರಾಧಿಕಾರಿ ಧೋರಣೆ ಈ ಬ್ಯಾಂಕ್‌ಗಳಲ್ಲಿ ಕಂಡುಬರುತ್ತಿಲ್ಲ. ಜತೆಗೆ ಪರಿವರ್ತನಶೀಲ ಬದಲಾವಣೆಯನ್ನು ತರುವ ನಾಯಕತ್ವದ ಕೊರತೆ ಅತೀವವಾಗಿ ಬಾಧಿಸಲಿದೆ. ಈ ರೀತಿಯ ಸಮಸ್ಯೆಯನ್ನು ಮೀರಿ ನಿಲ್ಲುವ ಪ್ರಯತ್ನವನ್ನು ಬ್ಯಾಂಕ್‌ಗಳು ಶೀಘ್ರವಾಗಿ ಮಾಡಬೇಕು. ಆಮೂಲಾಗ್ರವಾಗಿ ತಮ್ಮ ಕಾರ್ಯವೈಖರಿಯನ್ನು ವೃದ್ಧಿಸುವ ಮೂಲಕ ಸಮಸ್ಯೆಯನ್ನು ಮೀರಿ ನಿಲ್ಲಲು ಈ ಬ್ಯಾಂಕ್‌ಗಳಿಗೆ ಖಂಡಿತ ಸಾಧ್ಯವಿದೆ. ಪರಿವರ್ತನಶೀಲ ಬದಲಾವಣೆಯನ್ನು ತರಬಲ್ಲ ಮುಖಂಡತ್ವವನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ಸಾಮರ್ಥ್ಯಕ್ಕೆ ಬದ್ಧತೆ, ಕಾರಣಕ್ಕೆ ಬದ್ಧತೆ ಮತ್ತು ಸಮುದಾಯಕ್ಕೆ ಬದ್ಧತೆ ಅನ್ನುವ ಧ್ಯೇಯ ಮಂತ್ರದಿಂದ ಕೆಲಸ ನಿರ್ವಹಿಸುವ ಉದ್ಯೋಗಿಗಳು ಪರಿವರ್ತನಶೀಲ ಬದಲಾವಣೆಯನ್ನು ತರುವ ನಿಜವಾದ ಹರಿಕಾರರು.
ಪರಿವರ್ತನೆ – ಬದಲಾವಣೆಯ ನೃತ್ಯ
ಮೊತ್ತಮೊದಲಾಗಿ ಯಾವುದೇ ಬದಲಾವಣೆ ಪ್ರಕ್ರಿಯೆಯ ಮೂಲೋದ್ದೇಶ ವಾಸ್ತವತೆಯ ಹುಡುಕಾಟವೇ ಆಗಿದೆ. ನಿರ್ವಹಣಾ ತಜ್ಞರು ಪರಿವರ್ತನಶೀಲ ಬದಲಾವಣೆಯನ್ನು ಒಂದು ಸಮೂಹ ನೃತ್ಯಕ್ಕೆ ಹೋಲಿಸಿದ್ದಾರೆ. ಇಚ್ಛಿತ ಪರಿವರ್ತನೆ ತರಲು ನಾವು ಸಾಮೂಹಿಕ ನೃತ್ಯವನ್ನು ಪ್ರಯೋಗವಾಗಿಸಬೇಕು. ಯಾವುದೇ ನೃತ್ಯ ಪ್ರಕಾರದಲ್ಲಿ ನೃತ್ಯಪಟುಗಳು ನೃತ್ಯಗೈಯುವಾಗ ತಮ್ಮ ಆಂಗಿಕ ಚಲನವಲನ ಮತ್ತು ಭಾವಾಭಿನಯದಿಂದ ತಮ್ಮ ನಡುವೆ ಸಿನರ್ಜಿ ಮತ್ತು ರಿದಂ ಸೃಷ್ಟಿಸುತ್ತಾರೆ. ಸಿನರ್ಜಿ ಮತ್ತು ರಿದಂ ಏರ್ಪಟ್ಟರೆ ಮೇಲು-ಕೀಳು, ಅದಕ್ಷತೆ, ಮತ್ಸರಾದಿ ಭಾವನೆಗಳು ತನ್ನಿಂದ ತಾನಾಗಿ ಮಾಯವಾಗುತ್ತವೆ. ಆಗ ಪ್ರತೀ ನೃತ್ಯದ ಕೊಡುಗೆ ಸಾಮೂಹಿಕ ಕೊಡುಗೆಯಾಗಿ ಮಾರ್ಪಾಟು ಹೊಂದಿ ಒಂದು ರೀತಿಯ ಅತೀವ ಸಂತಸ ಸನ್ನಿವೇಶ ನಿರ್ಮಾಣಗೊಳ್ಳುತ್ತದೆ. ಇದೇ ತರ್ಕವನ್ನು ಸಂಸ್ಥೆ ಅಥವಾ ಉದ್ದಿಮೆಗೂ ಅನ್ವಯಿಸಬಹುದು. ಉದ್ಯೋಗಿಗಳು ಸಂತುಷ್ಟವಾದರೆ ಸಂಸ್ಥೆಯು ಸಂತುಷ್ಟಗೊಳ್ಳುತ್ತದೆ. ಪ್ರತೀ ಉದ್ಯೋಗಿ ಸಂಸ್ಥೆಗೊಂದು ಗಿಫ್ಟ್ ಆಗುತ್ತಾನೆ. ಪರಿವರ್ತನಶೀಲ ಬದಲಾವಣೆ ಈ ನವಿರಾದ ಅಂಶಗಳನ್ನು ಒಳಗೊಂಡಿರುತ್ತದೆ. ಈ ಬದಲಾವಣೆಗೆ ಪ್ರಯತ್ನಿಸುವ ಪ್ರತೀ ನಾಯಕ ತನ್ನ ಸಂಸ್ಥೆ ಅಥವಾ ಉದ್ದಿಮೆಯಲ್ಲಿ ನಿರಂತರ ಅರ್ಥಪೂರ್ಣ ಸಂಭಾಷಣೆಗೆ ಉತ್ತೇಜನ ನೀಡುವುದರ ಜತೆಗೆ ಸಾಮೂಹಿಕ ನೃತ್ಯದ ಸಿನರ್ಜಿ ಮತ್ತು ರಿದಂ ಅನ್ನು ಪ್ರತಿಷ್ಠಾಪಿಸಿದಲ್ಲಿ ಸಮಗ್ರ ಅಭಿವೃದ್ಧಿ ಸಾಧಿಸುವುದರಲ್ಲಿ ಎಳ್ಳಷ್ಟೂ ಸಂದೇಹವಿಲ್ಲ.
– ಡಾ| ಸುಧೀರ್ ರಾಜ್ ಕೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.