ಕಾಂಗ್ರೆಸ್ ಕೈ ಹಿಡಿದ ಅನ್ನದಾತ
Team Udayavani, Dec 13, 2018, 6:00 AM IST
ರೈತರ ಅಸಮಾಧಾನವನ್ನು ಬಿಜೆಪಿ, “ಪ್ರತಿಪಕ್ಷ ಪ್ರಾಯೋಜಿತ ಆಂದೋಲನ’ ಎಂದೇ ನೋಡುತ್ತಾ ಬಂತು. ಇದರಿಂದ ಬಿಜೆಪಿಯೆಡೆಗೆ ರೈತರ ಸಿಟ್ಟು ಹೆಚ್ಚುತ್ತಾ ಹೋಯಿತು. ಪಂಚರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಈ ಸಿಟ್ಟಿನ ಲಾಭಪಡೆದುಕೊಂಡಿತು. ರೈತರ ಅಸಮಾಧಾನ ಭುಗಿಲೆದ್ದಿದ್ದ ರಾಜ್ಯಗಳಲ್ಲಿ ಅದು, “ನಮ್ಮ ಸರ್ಕಾರ ಬಂದರೆ ಸಾಲ ಮನ್ನಾ ಮಾಡುತ್ತೇವೆ’ ಎಂದು ಭರವಸೆ ನೀಡಿತು. ಸತ್ಯವೇನೆಂದರೆ, ಕಾಂಗ್ರೆಸ್‌ನ ಈ ಭರವಸೆಯ ಪರಿಣಾಮ ಮತದಾನಕ್ಕಿಂತಲೂ ಮೊದಲೇ ಕಾಣಿಸಿಕೊಳ್ಳಲಾರಂಭಿಸಿತ್ತು…
ಪಂಚರಾಜ್ಯಗಳ ವಿಧಾನಸಭಾ ಚುನಾವಣೆಗಳ ಫಲಿತಾಂಶವನ್ನು ಗಮನವಿಟ್ಟು ನೋಡಿದಾಗ, ಮಿಜೋರಾಂ ಹೊರತುಪಡಿಸಿ ಉಳಿದ ನಾಲ್ಕು ರಾಜ್ಯಗಳಲ್ಲಿ “ರೈತ’ನೇ ಮಹತ್ವಪೂರ್ಣ ಪಾತ್ರ ವಹಿಸಿದ್ದಾನೆ ಎನ್ನುವುದು ತಿಳಿಯುತ್ತದೆ. ರೈತರ ಸಮಸ್ಯೆಗಳೆಡೆಗೆ ಅಷ್ಟಾಗಿ ಗಮನಹರಿಸದ ಕಾರಣಕ್ಕಾಗಿಯೇ ಬಿಜೆಪಿ ಈ ರಾಜ್ಯಗಳಲ್ಲಿ ಭಾರೀ ನಷ್ಟ ಅನುಭವಿಸಬೇಕಾಯಿತು. ವಿಪಕ್ಷಗಳು ರೈತರನ್ನು ರಾಜಕೀಯ ದಾಳ ಮಾಡಿಕೊಳ್ಳುತ್ತಿವೆ, ಅವು ಬಿಂಬಿಸುವಷ್ಟರ ಮಟ್ಟಿಗೆ ರೈತರೇನೂ ಬೇಸರಗೊಂಡಿಲ್ಲ ಎಂದೇ ಭಾರತೀಯ ಜನತಾ ಪಾರ್ಟಿ ಭಾವಿಸುತ್ತಾ ಬಂದಿತ್ತು. ವಿಪಕ್ಷಗಳ ಬಗ್ಗೆ ಅಷ್ಟೇನೂ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಭಾವಿಸಿದ ಬಿಜೆಪಿ, ಅವು ಎತ್ತಿದ ರೈತರ ಸಮಸ್ಯೆಗಳ ವಿಷಯದ ಬಗ್ಗೆಯೂ ತಲೆಕೆಡಿಸಿಕೊಳ್ಳಲಿಲ್ಲ. ಖರೀದಿ ಬೆಲೆಯನ್ನು ಹೆಚ್ಚಿಸುವ ಘೋಷಣೆ ಮಾತ್ರದಿಂದಲೇ ರೈತರ ಬೆಂಬಲ ಪಡೆಯಬಹುದು ಎಂದು ಮೋದಿ ಸರ್ಕಾರ ಭಾವಿಸಿತು. ತಮ್ಮ ಘೋಷಣೆಯ ಲಾಭ ರೈತರವರೆಗೂ ತಲುಪುತ್ತಿದೆಯೇ ಇಲ್ಲವೇ ಎಂದು ನೋಡುವ ಪ್ರಯತ್ನಕ್ಕೂ ಬಿಜೆಪಿ ಮುಂದಾಗಲಿಲ್ಲ.
ಈಗ ಫಲಿತಾಂಶ ಕಣ್ಣೆದುರಿಗಿದೆ, ಆದರೆ ಇದೇ ಅಂತ್ಯವಲ್ಲ. ಸತ್ಯವೇನೆಂದರೆ, ಇದು ಒಂದು ರೀತಿಯಲ್ಲಿ ಆರಂಭ. 2019ರ ಲೋಕಸಭಾ ಚುನಾವಣೆಗಳಲ್ಲಿ ರೈತರೇ ಬಹುದೊಡ್ಡ ಫ್ಯಾಕ್ಟರ್ ಆಗಲಿದ್ದಾರೆ ಎಂದು ಈ “ಆರಂಭ’ ಸಾರುತ್ತಿದೆ. ಇಂದು ದೇಶದ ರೈತರ ಆದಾಯ ರಾಷ್ಟ್ರೀಯ ಸರಾಸರಿ ಆದಾಯಕ್ಕಿಂತಲೂ ಕಡಿಮೆಯಿದೆ. ಬೆಳೆಗೆ ನ್ಯಾಯೋಚಿತ ಬೆಲೆ ಸಿಗದೇ ರೈತ ಸಾಲದ ಭಾರಕ್ಕೆ ಕುಸಿಯುತ್ತಿದ್ದಾನೆ. ಕಳೆದ ಬಾರಿಯ ಸರ್ಕಾರಿ ಅಂಕಿಸಂಖ್ಯೆಗಳನ್ನೇ ನೋಡುವುದಾದರೆ, ರಾಜಸ್ಥಾನವೊಂದರಲ್ಲಿ 85 ಲಕ್ಷ ರೈತರ ಕುಟುಂಬಗಳ ಮೇಲೆ 82 ಸಾವಿರ ಕೋಟಿ ರೂಪಾಯಿಗಳ ಸಾಲವಿದೆ. ಹರ್ಯಾಣದಲ್ಲಿ 15 ಲಕ್ಷ ರೈತರ ಮೇಲೆ 56 ಸಾವಿರ ಕೋಟಿ ಸಾಲವಿದೆ. ಮಹಾರಾಷ್ಟ್ರದ 31 ಲಕ್ಷ ರೈತರ ಮೇಲೆ 30 ಸಾವಿರ ಕೋಟಿ ಸಾಲವಿತ್ತು. ಮಧ್ಯಪ್ರದೇಶದ ರೈತರ ಸಾಲದ ಪ್ರಮಾಣ 74 ಸಾವಿರ ಕೋಟಿ ರೂಪಾಯಿಯ ಸೀಮೆಯನ್ನೂ ದಾಟಿತು. ಹೆಚ್ಚುತ್ತಿರುವ ರೈತರ ಸಾಲದ ವಿಷಯವಾಗಿ ಪ್ರಶ್ನಿಸಿದಾಗ ಕೇಂದ್ರ ಕೃಷಿ ಸಚಿವ ರಾಧಾ ಮೋಹನ್ ಸಿಂಗ್ ಅವರು “ನಮ್ಮ ಸರ್ಕಾರ 2022ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸಲು ಪ್ರಯತ್ನಿಸುತ್ತಿದೆ’ ಎಂದು ಹೇಳಿದ್ದರು.
ಕಾಂಗ್ರೆಸ್‌ಗೆ ಜೊತೆಯಾದ ರೈತರು: ಹಾಗೆ ನೋಡಿದರೆ 2018ರ ವರ್ಷ, “ರೈತರ ಆಂದೋಲನದ ವರ್ಷ’ವಾಗಿ ರುಜುವಾತಾಗಿದೆ. ಆದರೆ, ಅಚ್ಚರಿ ಹುಟ್ಟುಹಾಕುವ ಸಂಗತಿಯೆಂದರೆ, ಕೇಂದ್ರ ಸರ್ಕಾರಕ್ಕಾಗಲಿ ಅಥವಾ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯ ಸರ್ಕಾರಗಳಿಗಾಗಲಿ ಈ ವಿಷಯದೆಡೆಗೆ ಗಮನ ಕೊಡಬೇಕು ಎಂದು ಅನಿಸಲೇ ಇಲ್ಲ. ಈ ವರ್ಷದ ಫೆಬ್ರವರಿ ತಿಂಗಳಲ್ಲಿ ದೆಹಲಿ ಮತ್ತು ಹರ್ಯಾಣದಲ್ಲಿ ರೈತರಿಂದ ಪ್ರತಿಭಟನೆ ಮತ್ತು ಘೇರಾವ್‌ಗಳಾದವು. ರೈತರು ತಮ್ಮ ಬೇಡಿಕೆಯನ್ನು ಈಡೇರಿಸಬೇಕೆಂದು ಆಗ್ರಹಿಸಿ ಮಹಾರಾಷ್ಟ್ರದ ನಾಸಿಕ್‌ನಿಂದ ಮುಂಬೈವರೆಗೂ ಪಾದಯಾತ್ರೆ ಮಾಡಿ ಸದ್ದು ಮಾಡಿದರು. ಇದಾದ ನಂತರ 3 ಬಾರಿ ವಿವಿಧ ರಾಜ್ಯಗಳಿಂದ ರೈತರು ದೆಹಲಿಗೆ ತಲುಪಿ ಪ್ರತಿಭಟಿಸಿದರು. ಆದರೆ ರೈತರ ಈ ಅಸಮಾಧಾನವನ್ನು ಬಿಜೆಪಿ “ಪ್ರತಿಪಕ್ಷಗಳ ಪ್ರಾಯೋಜಿತ ಆಂದೋಲನ’ ಎಂದೇ ನೋಡುತ್ತಾ ಬಂತು. ಇದರಿಂದ ಬಿಜೆಪಿಯೆಡೆಗೆ ರೈತರ ಸಿಟ್ಟು ಹೆಚ್ಚುತ್ತಾ ಹೋಯಿತು.
ಪಂಚರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಈ ಸಿಟ್ಟಿನ ಲಾಭಪಡೆದುಕೊಳ್ಳಲು ಪ್ರಯತ್ನಿಸಿತು. ಬಹುಮಟ್ಟಿಗೆ ಅದಕ್ಕೀಗ ಲಾಭವೂ ಆಗಿದೆ. ಕಾಂಗ್ರೆಸ್ ಮಾಡಿದ ಕೆಲಸವೆಂದರೆ, ರೈತರ ಅಸಮಾಧಾನ ಭುಗಿಲೆದ್ದಿರುವ ರಾಜ್ಯಗಳಲ್ಲಿ ಅದು, “ನಮ್ಮ ಸರ್ಕಾರ ಬಂದರೆ ಸಾಲ ಮನ್ನಾ ಮಾಡುತ್ತೇವೆ’ ಎಂದು ಭರವಸೆ ನೀಡಿದ್ದು.
ಕಾಂಗ್ರೆಸ್‌ನ ಈ ಭರವಸೆಯ ಪರಿಣಾಮ ಮತದಾನಕ್ಕಿಂತಲೂ ಮೊದಲೇ ಕಾಣಿಸಿಕೊಳ್ಳತೊಡಗಿತು. ಈ ಭರವಸೆಯನ್ನು ನಂಬಿದ ರೈತರು ಸಾಲ ಪಾವತಿಯನ್ನು ಹಠಾತ್ತನೆ ನಿಲ್ಲಿಸಿಬಿಟ್ಟರು. ಹೇಗಿದ್ದರೂ ಕಾಂಗ್ರೆಸ್ ಬಂದ ಮೇಲೆ ಸಾಲ ಮನ್ನಾ ಆಗಬಹುದು, ತಾವೇಕೆ ಹಣ ಕಳೆದುಕೊಳ್ಳಬೇಕು ಎಂದು ಅವರು ಅಂದುಕೊಂಡರು. ಛತ್ತೀಸ್‌ಗಡದಲ್ಲಂತೂ ರೈತರು ಸರ್ಕಾರಿ ಖರೀದಿ ಕೇಂದ್ರಗಳಿಗೆ ತೆರಳಿ ಬೆಳೆ ಮಾರಾಟಮಾಡುವುದನೇ ನಿಲ್ಲಿಸಿಬಿಟ್ಟರು. ಏಕೆಂದರೆ, ಬೆಳೆ ಮಾರಿದ ನಂತರ ಸಿಗುವ ಹಣದಲ್ಲಿ ಸಾಲದ ರಕಮು ಕಟ್ ಆಗುವುದು ಅವರಿಗೆ ಇಷ್ಟವಿರಲಿಲ್ಲ.
ಸಾಲಮನ್ನಾದ ಅಸ್ತ್ರವನ್ನು ಬಳಸಿ ಕಾಂಗ್ರೆಸ್ ಅಧಿಕಾರಕ್ಕೇರಿದ್ದು ಈ ಮೊದಲೇನೂ ಅಲ್ಲ. 2008ರಲ್ಲಿ, ಅಂದರೆ, 2009ರ ಲೋಕಸಭಾ ಚುನಾವಣೆಗೆ ಕೆಲವೇ ತಿಂಗಳು ಇರುವಾಗ ಯುಪಿಎ ಸರ್ಕಾರ ರೈತರ 70 ಸಾವಿರ ಕೋಟಿ ರೂಪಾಯಿ ಸಾಲ ಮನ್ನಾ ಮಾಡಿತ್ತು. ಈ ಸಾಲಮನ್ನಾದಿಂದ ದೇಶದ ಮೂರುವರೆ ಕೋಟಿ ರೈತರಿಗೆ ಲಾಭವಾಗಿತ್ತು. ಇದರ ಪರಿಣಾಮವಾಗಿ ಕಾಂಗ್ರೆಸ್ 2009ರಲ್ಲಿ ಮತ್ತೆ ಗದ್ದುಗೆಗೇರಲು ಸಫಲವಾಯಿತು.
2014ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಮಂತ್ರಿ ಹುದ್ದೆಯ ಆಕಾಂಕ್ಷಿಯಾಗಿದ್ದ ನರೇಂದ್ರ ಮೋದಿಯವರು, ತಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದರೆ ಸ್ವಾಮಿನಾಥನ್ ಆಯೋಗದ ಶಿಫಾರಸುಗಳನ್ನು ಲಾಗೂ ಮಾಡುವುದಾಗಿ ಭರವಸೆ ಕೊಟ್ಟಿದ್ದರು. ಆದರೆ ಆ ಭರವಸೆ ಈಡೇರಲೇ ಇಲ್ಲ.
ಬಿಜೆಪಿ-ಕಾಂಗ್ರೆಸ್ ಮಂತ್ರವಾಗಲಿದೆಯೇ ಸಾಲಮನ್ನಾ?
ಈಗ ಬಿಜೆಪಿಗೆ ರೈತರ ಫ್ಯಾಕ್ಟರ್ ವಿಧಾನಸಭಾ ಚುನಾವಣೆಯಲ್ಲಿ ಎಷ್ಟು ಕೆಲಸ ಮಾಡಿದೆ ಎನ್ನುವುದು ಅರ್ಥವಾಗಿರಬಹುದು. ಈ ಕಾರಣಕ್ಕಾಗಿಯೇ 2019ರ ಲೋಕಸಭಾ ಚುನಾವಣೆಯಲ್ಲಿ “ರೈತ’ ಮತ್ತು “ಸಾಲಮನ್ನಾ’ ಪ್ರಮುಖ ವಿಷಯಗಳಾಗಲಿವೆ. ಈಗಿನ ವಿಧಾನಸಭಾ ಚುನಾವಣೆಗಳಲ್ಲಿನ ಯಶಸ್ಸಿನ ರುಚಿ ನೋಡಿರುವ ಕಾಂಗ್ರೆಸ್ ಕೂಡ ಸಾಲಮನ್ನಾ ವಿಷಯವನ್ನೇ ಲೋಕಸಭಾ ಚುನಾವಣೆಯಲ್ಲಿ ಪುನರಾವರ್ತಿಸಲು ಬಯಸಲಿದೆ. ಕಾಂಗ್ರೆಸ್ ನಾಯಕರೂ ಕೂಡ “ಒಂದೊಂದು ರಾಜ್ಯಗಳಿಗೆ ಸೀಮಿತವಾಗುವ ಬದಲಾಗಿ, ಇಡೀ ದೇಶದ ರೈತರ ಸಾಲಮನ್ನಾ ಮಾಡುವ ಯೋಜನೆ’ಯ ಬಗ್ಗೆ ತಾವು ಯೋಚಿಸುತ್ತಿರುವುದಾಗಿ, ಈ ಯೋಜನೆ 2019ರ ಘೋಷಣಾ ಪತ್ರದಲ್ಲಿ ಜಾಗ ಪಡೆಯಲಿರುವುದಾಗಿ ಖಾಸಗಿ ಮಾತುಕತೆಗಳಲ್ಲಿ ಹೇಳುತ್ತಿದ್ದಾರೆ.
ಈ ಫಲಿತಾಂಶಗಳಿಂದ ಬಿಜೆಪಿಯೂ ಪಾಠ ಕಲಿತಿರಬಹುದು. ಕಾಂಗ್ರೆಸ್‌ನ ಸಾಲಮನ್ನಾ ಘೋಷಣೆಯೇ ಪಂಚರಾಜ್ಯಗಳ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿತು ಎಂದು ಭಾರತೀಯ ಜನತಾಪಕ್ಷದ ಕ್ಯಾಂಪ್‌ಗ್ಳಲ್ಲೂ ಚರ್ಚೆಯಾಗುತ್ತಿದೆ ಎನ್ನಲಾಗುತ್ತದೆ. 2019ರಲ್ಲಿ ಯೇನಕೇನ ಗೆದ್ದು ಅಧಿಕಾರದಲ್ಲಿ ಉಳಿಯಲು ಬಿಜೆಪಿ ಬಯಸುತ್ತಿದೆ. ಹೀಗಾಗಿ, ಅದೂ ಕೂಡ ಸಾಲಮನ್ನಾ ಕುರಿತು ದೊಡ್ಡ ಘೋಷಣೆ ಮಾಡಿದರೆ ಆಶ್ಚರ್ಯವೇನೂ ಇಲ್ಲ. ಕಡೇಪಕ್ಷ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡಾದರೂ ಅದು ರೈತರನ್ನು ಕಡೆಗಣಿಸುವ ರಿಸ್ಕ್ ತೆಗೆದುಕೊಳ್ಳುವುದಿಲ್ಲ.
ಆದರೂ ರಾಜಕೀಯ ಪಕ್ಷಗಳು, ಸಾಲಮನ್ನಾದಂಥ ತಾತ್ಕಾಲಿಕ ಲಾಭವನ್ನು ತೋರಿಸಿ ವೋಟ್ ಪಡೆಯುವ ಬದಲು, ರೈತರ ಆದಾಯವನ್ನು ಹೆಚ್ಚಿಸುವ ಸ್ಥಾಯಿ ಪ್ರಯತ್ನ ಮಾಡಿದ್ದರೆ ಒಳ್ಳೆಯದಿತ್ತು.
ಕೃಪೆ: ನವಭಾರತ ಟೈಮ್ಸ್
ನದೀಮ್ ಕೆ., ಹಿರಿಯ ಪತ್ರಕರ್ತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಟಿಬೆಟ್ ನಲ್ಲಿ ಪ್ರಬಲ ಭೂಕಂಪ… ಸಾವಿನ ಸಂಖ್ಯೆ 53ಕ್ಕೆ ಏರಿಕೆ, 60ಕ್ಕೂ ಹೆಚ್ಚು ಮಂದಿ ಗಾಯ
Updated: ಕೆನಡಾ ಮುಂದಿನ ಪ್ರಧಾನಿ ರೇಸ್ ನಲ್ಲಿ ಭಾರತೀಯ ಮೂಲದ ಅನಿತಾ ಸೇರಿ ಹಲವರ ಪೈಪೋಟಿ!
UP: ಪತಿ, ಆರು ಮಕ್ಕಳನ್ನು ಬಿಟ್ಟು ಭಿಕ್ಷುಕನ ಜತೆ ಓಡಿಹೋದ ಮಹಿಳೆ
Mangaluru: ಆಕಸ್ಮಿಕ ಗುಂಡು ತಗುಲಿ ವ್ಯಕ್ತಿಗೆ ಗಾಯ… ವಾಮಂಜೂರಿನಲ್ಲಿ ಘಟನೆ
Bengaluru: ಎಂಬಿಎ ವಿದ್ಯಾರ್ಥಿ 3ನೇ ಮಹಡಿಯಿಂದ ಬಿದ್ದು ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.