ಪ್ರಗತಿ ಪಥದಲ್ಲಿ ಮತ್ಸ್ಯೋದ್ಯಮ
Team Udayavani, Nov 21, 2020, 6:10 AM IST
ಸಾಂದರ್ಭಿಕ ಚಿತ್ರ
ನವೆಂಬರ್ 21ವಿಶ್ವ ಮೀನುಗಾರಿಕಾ ದಿನ. ಈ ಸಂದರ್ಭದಲ್ಲಿ ಶನಿವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮತ್ಸ್ಯ ಸಂಪದ ಯೋಜನೆಯ ಕಾರ್ಯಾಗಾರ ಉದ್ಘಾಟಿಸುವರು.
ಸ್ವಾಭಾವಿಕವಾಗಿ ಮೀನುಗಾರಿಕೆ ಎಂದರೆ ವಿಶಾಲ ಸಾಗರದಲ್ಲಿ ಬೃಹತ್ ಯಾಂತ್ರಿಕೃತ ದೋಣಿಗಳ ಮೂಲಕ ವಿವಿಧ ಜಾತಿಯ ಮೀನುಗಳನ್ನು ಹಿಡಿದು, ದಡಕ್ಕೆ ತಂದು ಮಾರಾಟ ಮಾಡುವುದಕ್ಕೆ ಸೀಮಿತಗೊಳಿಸಿ ಮೀನುಗಾರಿಕೆ ಉದ್ದಿಮೆ ಮುಂದೆ ಸಾಗುತ್ತದೆ.
ಗತಕಾಲದ ನೆನಪುಗಳನ್ನು ಕೆದಕಿ ಮೀನುಗಾರಿ ಕೆಯತ್ತ ದೃಷ್ಟಿ ಹಾಯಿಸಿದರೆ ಕರಾವಳಿಯ ಕಡಲ ಮೀನುಗಾರಿಕೆ ಮಾರಿ ಬಲೆಯಿಂದ ಪ್ರಾರಂಭವಾಗುತ್ತದೆ. ಯಾವುದೇ ಯಾಂತ್ರಿಕತೆಯ ಸೋಂಕಿಲ್ಲದೆ, ಕಡಲ ಮಕ್ಕಳು ದೈಹಿಕ ಶ್ರಮದ ಮೇಲೆ ಬದುಕು ಕಟ್ಟಿಕೊಂಡು ಇಡೀ ಕುಟುಂಬಕ್ಕೆ ತುತ್ತು ಅನ್ನದ ಬದುಕು ರೂಪಿಸಿದ ಚಿತ್ರಣ ನಮ್ಮ ಕಣ್ಣ ಮುಂದೆ ಹಾದು ಹೋಗುತ್ತದೆ.
ನಿಜ, ಹೊಳೆಯ ಮಧ್ಯದಲ್ಲಿ ಪುಟ್ಟ ದೋಣಿ ಯೊಂದಿಗೆ ಸಣ್ಣ ಬಲೆಯೊಡನೆ ಒಂದು ಬುಟ್ಟಿ ಮೀನಿಗಾಗಿ ಪರಿತಪಿಸುವ ಕಾಲ ಈಗಿಲ್ಲ. ನಸುಕು ಹರಿಯುತ್ತಲೇ ಕಡಲಂಚಿನ ನೆಲೆಯಿಂದ ಪಡುಗಡಲ ಒಡಲೊಳಗೆ ಧುಮುಕಿ ಮರದ ದೋಣಿಯನ್ನು ಹುಟ್ಟುಹಾಕುತ್ತ ಐದು ಮಾರುಗಳ ದೂರವೆಂಬ ಜಲರಾಶಿಗೆ ಬಲೆಹಾಕಿ ಬೆನ್ನಿಗೆ ಅಡ್ಡಕಟ್ಟಿಕೊಂಡು ಬಲೆ ಎಳೆಯುವ ಗತಕಾಲದ ಸಂಪ್ರದಾಯದಿಂದ ಹೊರಬಂದು, ಒಂದು ತಿಂಗಳು ಸಮುದ್ರದಲ್ಲಿ ಬಿಡಾರ ಹೂಡಿ ಟನ್‌ಗಟ್ಟಲೆ ಮೀನಿನೊಂದಿಗೆ ದಡ ಸೇರಬಲ್ಲ ಯಾಂತ್ರಿಕ ದೋಣಿಗಳು ಇಂದು ಸಮುದ್ರ ಸೇರಿವೆ.
ಹಳೆಯ ಪದ್ಧತಿಗಳೆಲ್ಲ ಮಾಯವಾಗಿ ಆಧುನಿ ಕತೆಯ ಸ್ಪರ್ಶ ಪಡೆದು ವಿಶ್ವದಲ್ಲೇ ದೊಡ್ಡ ಉದ್ದಿಮೆಯಾಗಿ ಮೀನುಗಾರಿಕೆ ಬೆಳೆದಿದೆ. ಕರ್ನಾಟಕವೊಂದರಲ್ಲೇ ಕಡಲ ಮೀನುಗಾರಿಕೆ ಯಲ್ಲಿ 22 ಸಾವಿರಕ್ಕೂ ಮಿಕ್ಕಿ ಯಾಂತ್ರಿಕ ದೋಣಿಗಳು ಕಾರ್ಯಾಚರಿಸುತ್ತಿದ್ದರೆ, 4 ಲಕ್ಷ ಮೀನುಗಾರರು ಕಡಲ ಮೀನುಗಾರಿಕೆಯಲ್ಲಿ ದುಡಿಯುತ್ತಿದ್ದಾರೆ. ವಾರ್ಷಿಕ 5 ರಿಂದ 6 ಲಕ್ಷ ಮೆಟ್ರಿಕ್ ಟನ್ ಮೀನು ಹಿಡಿದು, ವಾರ್ಷಿಕ 6 ಸಾವಿರ ಕೋ. ರೂ. ಆದಾಯ ಪಡೆಯಲಾಗುತ್ತಿದೆ.
ರಾಜ್ಯದ ಒಳನಾಡು ಮೀನುಗಾರಿಕೆ ಸಾಕಷ್ಟು ಪ್ರಗತಿ ಕಾಣಬೇಕಿದೆ. 1957ರಲ್ಲಿ ಮೀನುಗಾರಿಕೆ ಇಲಾಖೆ ಸ್ಥಾಪನೆಯಾಗಿದ್ದರೂ ಇತರ ರಾಜ್ಯಗಳಿಗೆ ಹೋಲಿಸಿದರೆ ಬಹಳ ದೊಡ್ಡ ಸಾಧನೆ ಮಾಡಿಲ್ಲ. ರಾಜ್ಯದಲ್ಲಿ 26 ಸಾವಿರ ಕೆರೆಗಳು ಸೇರಿದಂತೆ ಒಟ್ಟು ಜಲರಾಶಿಯ ಸಂಪತ್ತಿನಲ್ಲಿ ಶೇ. 20ರಷ್ಟನ್ನು ಮಾತ್ರ ಬಳಸಿಕೊಳ್ಳಲು ಸಮರ್ಥರಾಗಿದ್ದೇವೆ. 4,37,292 ಹೆಕ್ಟೇರ್‌ಗಳಷ್ಟು ಜಲಪ್ರದೇಶ ಬಳಸಿಕೊಂಡು, 6 ಲಕ್ಷಕ್ಕೂ ಮೀರಿರುವ ಒಳನಾಡು ಮೀನುಗಾರರಿಗೆ ಅವಕಾಶ ಕಲ್ಪಿಸಿದರೆ ಇನ್ನೆರೆಡೇ ವರ್ಷಗಳಲ್ಲಿ ಒಳನಾಡು ಮೀನು ಉತ್ಪಾದನೆಯನ್ನು 4 ಲಕ್ಷ ಮೆಟ್ರಿಕ್ ಟನ್‌ಗಳಿಂದ ದುಪ್ಪಟ್ಟು ಮಾಡಲು ಸಾಧ್ಯ.
1,110 ಶತಕೋಟಿ ರೂ. ಆದಾಯ
ದೇಶದಲ್ಲಿ ಮೀನುಗಾರಿಕೆಯನ್ನು ನಂಬಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಬದುಕು ಕಟ್ಟಿಕೊಂಡವರ ಸಂಖ್ಯೆ ಸುಮಾರು ಮೂರು ಕೋಟಿಗೂ ಅಧಿಕ. 75 ಸಾವಿರ ಕಿ.ಮೀ.ಗಳಷ್ಟು ಕಡಲ ಕಿನಾರೆಯಲ್ಲಿ, ಒಳನಾಡು ಜಲ ಪ್ರದೇಶವು ಸೇರಿದಂತೆ ಅತೀ ಹೆಚ್ಚು ಜಲ ಸಂಪನ್ಮೂಲವಿರುವ ಜಗತ್ತಿನ ಎರಡನೇ ದೇಶ ನಮ್ಮದು. ಅಂತೆಯೇ ಅತೀ ಹೆಚ್ಚು ಮೀನು ಉತ್ಪಾದನೆಯಲ್ಲೂ ನಮಗೆ ಮೂರನೇ ಸ್ಥಾನ. ವಾರ್ಷಿಕ 13.76 ದಶಲಕ್ಷ ಟನ್‌ಗಳಷ್ಟು ಮೀನು ಉತ್ಪಾದನೆಯಾಗುತ್ತಿದ್ದು, 1.39 ದಶಲಕ್ಷ ಟನ್‌ಗಳಷ್ಟು ಪ್ರಮಾಣ ವಿದೇಶಕ್ಕೆ ರಫ್ತಾಗುತ್ತಿದೆ. ಅಂದರೆ ವಾರ್ಷಿಕ ಮೀನುಗಾರಿಕೆಯ ವಿವಿಧ ಉತ್ಪನ್ನಗಳ ಮೂಲಕ 1,110 ಬಿಲಿಯನ್ ರೂ. ಆದಾಯ ದೇಶಕ್ಕೆ ಬರುತ್ತಿದೆ.
ರಾಜ್ಯದ ಮುಂದಿನ ಗುರಿ
ಕೇಂದ್ರ ರೈಲ್ವೇ ಸೇವೆ ಯೋಜನೆಗಳೊಂದಿಗೆ ಮಾಡಿಕೊಂಡ ಒಪ್ಪಂದದಂತೆ, ದೇಶಾದ್ಯಂತ ರೈಲ್ವೇ ನಿಲ್ದಾಣಗಳ ಮಳಿಗೆಗಳು ಮತ್ತು ರೈಲ್ವೇ ಪ್ರಯಾಣಿಕರ ಕೈಗೆ ಕರ್ನಾಟಕದ ಮೀನಿನ ಬಿಸಿಬಿಸಿ ಖಾದ್ಯ ತಲುಪುವ ಯೋಜನೆಯೂ ರೂಪಿತವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿರುವ ರಾಜ್ಯದ ಏಕೈಕ ಮೀನುಗಾರಿಕಾ ಕಾಲೇಜು 1969ರಲ್ಲಿ ಸ್ಥಾಪನೆಯಾಯಿತು. ದಕ್ಷಿಣ ಏಷ್ಯಾದ ಮೊದಲ ಮೀನುಗಾರಿಕಾ ಕಾಲೇಜಿದು. ಈಗ ಇದೇ ಕಾಲೇಜು ವಿಶ್ವವಿದ್ಯಾಲಯವಾಗಿ ಪರಿ ವರ್ತಿತವಾಗುತ್ತಿದೆ. ಉತ್ತರಕನ್ನಡ, ಮೈಸೂರು, ಶಿವಮೊಗ್ಗ, ಉಡುಪಿ ಸೇರಿದಂತೆ ಐದು ಕಡೆ ಹೊಸ ಕಾಲೇಜುಗಳನ್ನು ಮತ್ತು ಹತ್ತು ಜಿಲ್ಲೆಗಳಲ್ಲಿ ವೃತ್ತಿಪರ ಮೀನುಗಾರಿಕಾ ತರಬೇತಿ ಸಂಸ್ಥೆಗಳನ್ನು ಸ್ಥಾಪಿಸುವ ಉದ್ದೇಶವಿದೆ.
ಆತ್ಮನಿರ್ಭರ ಭಾರತ್ತ
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಘೋಷಿಸಿದ “ಆತ್ಮನಿರ್ಭರ ಭಾರತ’ ಯೋಜನೆಗೆ ಅನುಗುಣವಾಗಿ ಮೀನುಗಾರಿಕಾ ಇಲಾಖೆ ಹತ್ತು ಸಾವಿರ ಸ್ವಯಂ ಉದ್ಯೋಗ ಸೃಷ್ಟಿಸುವ ಗುರಿ ಹೊಂದಿದ್ದು, ಇದಕ್ಕಾಗಿ ಪಂಜರ ಮೀನು ಕೃಷಿಗೆ ಒತ್ತು ನೀಡಿದೆ. ರಾಜ್ಯದ ನೂರು ಆಯ್ದ ತಾಲೂಕುಗಳಲ್ಲಿ ನಿರುದ್ಯೋಗಿಗಳಿಗೆ ಪಂಜರ ಮೀನು ಕೃಷಿ ತರಬೇತಿ ನೀಡಿ, ಸಬ್ಸಿಡಿ ಒದಗಿಸಿ, ಸ್ವಾವಲಂಬಿಯಾಗಿಸುವ ಉದ್ದೇಶವಿದೆ.
ಸಮಾಧಾನದ ಸಂಗತಿಯೆಂದರೆ ಪ್ರಧಾನ ಮಂತ್ರಿ ಮತ್ಸ್ಯಸಂಪದ ಯೋಜನೆಯಡಿ ಕೇಂದ್ರ ಸರಕಾರ ಮೀನುಗಾರಿಕೆಗೆ 20 ಸಾವಿರ ಕೋಟಿ ರೂಪಾಯಿ ನಿಗದಿಪಡಿಸಿದೆ. ಆ ಪೈಕಿ ಕರ್ನಾಟಕದ ಮೀನುಗಾರಿಕಾ ಅಭಿವೃದ್ಧಿಗಾಗಿ 3 ಸಾವಿರ ಕೋಟಿ ರೂಪಾಯಿ ಮಂಜೂರಾಗುವ ನಿರೀಕ್ಷೆಯಲ್ಲಿದ್ದು ಮೊದಲ ಹಂತದಲ್ಲಿ 137 ಕೋ.ರೂ. ಕಾಮಗಾರಿಗೆ ಅನುಮೋದನೆ ನೀಡಿ, ಭಾಗಶಃ ಹಣ ಬಿಡುಗಡೆ ಮಾಡಿದೆ. ಇದರಿಂದ ಕರಾವಳಿಯ ಕಿರು ಬಂದರುಗಳು, ಮೀನುಗಾರಿಕಾ ಜಟ್ಟಿಗಳು, ಯಾಂತ್ರೀಕೃತ ದೋಣಿಗಳ ಇಳಿದಾಣವೂ ಸೇರಿ ದಂತೆ ಮೀನುಗಾರರಿಗೆ ಸಂಬಂಧಿಸಿದಂತೆ ಮೂಲ ಸೌಕರ್ಯಗಳು ವೃದ್ಧಿಯಾಗಲಿವೆ. “ಅಭಿವೃದ್ಧಿಯಾಗಬೇಕಾದದ್ದು ಮೀನುಗಾರಿಕೆ ಮಾತ್ರವಲ್ಲ, ಬಡ ಮೀನುಗಾರನ ಕುಟುಂಬವೂ ಕೂಡ’. ಅದೇ ಆತ್ಮ ನಿರ್ಭರ ಭಾರತ.
ಕೋಟ ಶ್ರೀನಿವಾಸ ಪೂಜಾರಿ, ಮೀನುಗಾರಿಕೆ ಸಚಿವರು, ಕರ್ನಾಟಕ ಸರಕಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.