ಪ್ರಣವ್ ಪಯಣ: ಎಂದೂ ಒತ್ತಡಕ್ಕೆ ಮಣಿಯದ, ಪ್ರೀತಿಯನ್ನು ಮರೆಯದ ಚೇತನ
Team Udayavani, Sep 1, 2020, 6:52 AM IST
ಒಂದು ದೇಶದ ನೇತಾರರಲ್ಲೊಬ್ಬರಾಗಿ ಐದು ದಶಕಗಳಿಗೂ ಹೆಚ್ಚು ಕಾಲ ದುಡಿಯುವುದೆಂದರೆ ಅದು ಸಣ್ಣ ಮಾತಲ್ಲ. ಇದರ ಜೊತೆಗೆ ಎಲ್ಲರ ಪ್ರೀತಿಯನ್ನೂ ಸಂಪಾದಿಸಿಕೊಂಡರೆ ಅದೇ ಒಂದು ದೊಡ್ಡ ಸಾಧನೆ. ಇಂದಿನ ತ್ವೇಷಮಯ ರಾಜಕೀಯ ಸನ್ನಿವೇಶದಲ್ಲಿ ಮೇರು ರಾಜಕಾರಣಿಯೆಂದು ಎಲ್ಲರಿಂದ ಗೌರವಿಸಲ್ಪಡುವುದು ಅಪರೂಪದಲ್ಲಿ ಅಪರೂಪ. ಅಂತಹದ್ದೊಂದು ದಿವ್ಯಶಕ್ತಿ ಪ್ರಣವ್ ಮುಖರ್ಜಿಯವರಿಗಿತ್ತು. ಅದನ್ನು ದೇಶದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಮನಃಪೂರ್ವಕವಾಗಿ ಸ್ಮರಿಸಿಕೊಂಡಿದ್ದಾರೆ ಓದಿ…
– ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ
ಪ್ರಣವ್ ಮುಖರ್ಜಿ ಅವರು ಜನಪರ ಕಾಳಜಿಯ ವ್ಯಕ್ತಿತ್ವಕ್ಕೆ ಅತ್ಯುತ್ತಮ ಉದಾಹರಣೆ. ನಿರಂತರ ಹೋರಾಟ ಶ್ರಮ ಹಾಗೂ ಬದ್ಧತೆಯಿಂದ ರಾಷ್ಟಪತಿ ಸ್ಥಾನದಂತಹ ಉನ್ನತ ಹುದ್ದೆ ಅಲಂಕರಿಸಿದರು.
ಐದು ದಶಕಗಳ ಕಾಲ ರಾಜ್ಯಸಭೆ, ಲೋಕಸಭೆ ಸದಸ್ಯರಾಗಿ ಹಲವಾರು ಜವಾಬ್ದಾರಿ ನಿರ್ವಹಿಸಿದ ಪ್ರಣವ್, ಅಗತ್ಯ ಸಂದರ್ಭಗಳಲ್ಲಿ ನೇರ ಹಾಗೂ ನಿಷ್ಪಕ್ಷಪಾತ ನಿರ್ಣಯ ಕೈಗೊಳ್ಳುತ್ತಿದ್ದರು. ಕೇಂದ್ರದಲ್ಲಿ ಹಣಕಾಸು, ವಿದೇಶಾಂಗ ಹಾಗೂ ರಕ್ಷಣಾ ಇಲಾಖೆ ಸಚಿವರಾಗಿ ಕಾರ್ಯನಿರ್ವಹಿಸಿದ್ದಾಗ ಹಲವು ಮಹತ್ವದ ತೀರ್ಮಾನ, ನಿರ್ಣಯಗಳನ್ನು ಕೈಗೊಂಡರು. ಅವೆಲ್ಲ ಭಾರತೀಯರ ಸ್ಮರಣೆಯಿಂದ ಮಾಸಲು ಸಾಧ್ಯವೇ ಇಲ್ಲ. ವಿದೇಶಾಂಗ ಸಚಿವರಾಗಿದ್ದಾಗ, ವಿದೇಶೀ ನಾಯಕರನ್ನು ತಮ್ಮ ವ್ಯಕ್ತಿತ್ವದಿಂದ ಪ್ರಭಾವಿಸಿದರು. ಭಾರತದ ಗೌರವವನ್ನು ನೂರ್ಮಡಿಗೊಳಿಸಿದರು.
ಯಾವುದೇ ನಾಯಕನಿಗೆ ದೃಢಚಿತ್ತ, ಅನಿವಾರ್ಯ ಸಂದರ್ಭಗಳಲ್ಲಿ ಕಠಿನ ನಿರ್ಧಾರ ತೆಗೆದುಕೊಳ್ಳುವ ಧೈರ್ಯ ಇರಬೇಕಾಗುತ್ತದೆ. ಹಾಗೆಯೇ ಪ್ರತಿಯೊಂದು ವಿಚಾರದಲ್ಲೂ ಸ್ಪಷ್ಟ ನಿಲುವು ಇರಬೇಕಾಗುತ್ತದೆ. ಈ ಗುಣಗಳು ಪ್ರಣವ್‌ರಲ್ಲಿತ್ತು. ಅದಕ್ಕೆ ಅವರ ಅಗಾಧ ಅನುಭವವೂ ಬೆನ್ನೆಲುಬಾಗಿತ್ತು. ತಪ್ಪು ಮಾಡಿದಾಗ ತಿದ್ದಬೇಕಾಗಿ ಬಂದರೆ, ಅವರು ಸ್ವಪಕ್ಷೀಯರೆಂದೂ ಯೋಚಿಸುತ್ತಿರಲಿಲ್ಲ. ದಾರಿ ತಪ್ಪಿದ್ದಾಗ ನೇರವಾಗಿ ಹೇಳುತ್ತಿದ್ದರು. ಯಾವುದೇ ಒತ್ತಡಕ್ಕೆ ಮಣಿಯುತ್ತಿರಲಿಲ್ಲ. ಎಂತಹ ಸಂದರ್ಭದಲ್ಲೂ ಸಹನೆ ಕಳೆದುಕೊಳ್ಳುತ್ತಿರಲಿಲ್ಲ.
ಅವರು ರಾಷ್ಟ್ರಪತಿಯಾಗಿದ್ದಾಗಲೂ ಎಲ್ಲರ ಒಮ್ಮತಕ್ಕೆ ಮನ್ನಣೆ ನೀಡುತ್ತಿದ್ದರು. ರಾಷ್ಟ್ರಪತಿಯಾಗಿದ್ದಾಗ ಹಲವು ಸಂದರ್ಭಗಳಲ್ಲಿ ಭೇಟಿಯಾಗಿದ್ದೇನೆ. ಪ್ರತೀಬಾರಿ ಹೋದಾಗಲೂ ಮೊದಲು ನಿಮ್ಮ ಆರೋಗ್ಯ ಹೇಗಿದೆ ಎಂದು ಪ್ರೀತಿಯಿಂದ ಕೇಳುತ್ತಿದ್ದರು. ರಾಷ್ಟ್ರಪತಿಗಳಾಗಿ ಅವರು ನಿಜಕ್ಕೂ ಆ ಹುದ್ದೆಯ ಘನತೆ-ಗೌರವ ಹೆಚ್ಚಿಸಿದರು.
ವೈಯಕ್ತಿಕವಾಗಿಯೂ ನಾನು ಅವರನ್ನು ಬಹಳ ಹತ್ತಿರದಿಂದ ಬಲ್ಲೆ. ರಾಜ್ಯಸಭೆ ಹಾಗೂ ಲೋಕಸಭೆಯಲ್ಲಿ ಅವರು ಮಂಡಿಸುತ್ತಿದ್ದ ವಿಚಾರಗಳು ಜನಪರ ಕಾಳಜಿಗೆ ಸಾಕ್ಷಿಯಾಗಿದ್ದವು.
ಪ್ರಣವ್‌ರನ್ನು ಭೇಟಿಯಾದಾಗಲೆಲ್ಲಾ ಸಾಕಷ್ಟು ವಿಚಾರಗಳ ಬಗ್ಗೆ ಚರ್ಚೆಯಾಗುತ್ತಿದ್ದದ್ದು ಸಹಜವಾಗಿತ್ತು.
ಜನಸಾಮಾನ್ಯರು, ಕೃಷಿಕರು, ಮಹಿಳೆಯರು, ಯುವಸಮೂಹದ ಬಗ್ಗೆ ಅವರ ಕಾಳಜಿ ಅಸಾಧಾರಣ. ವಿತ್ತಸಚಿವರಾಗಿದ್ದಾಗ ದೇಶದ ಆರ್ಥಿಕತೆ ಹಳಿತಪ್ಪದಂತೆ ಬಹಳ ಜಾಣ್ಮೆಯಿಂದ ಕಾರ್ಯನಿರ್ವಹಿಸಿದ್ದರು. ಈ ಜಾಣ್ಮೆ ದೇಶದ ಹಿತಕ್ಕೆ ಅನಿವಾರ್ಯವೂ ಆಗಿತ್ತು.
ನಮ್ಮಿಬ್ಬರದ್ದೂ ಬೇರೆ ಬೇರೆ ಪಕ್ಷ. ಆದರೆ ಅವರು ಇದಕ್ಕೆಲ್ಲ ಗಮನವೇ ಕೊಡುತ್ತಿರಲಿಲ್ಲ. ವೈಯಕ್ತಿಕ ಸಂಬಂಧವನ್ನೇ ಅವರು ವಿಶೇಷವಾಗಿ ಪರಿಗಣಿಸುತ್ತಿದ್ದರು. ನಾಯಕನಿಗಿರಬೇಕಾದ ಮುಖ್ಯಗುಣವಿದು. ಕರ್ನಾಟಕದ ಬಗ್ಗೆಯೂ ಅವರಿಗೆ ಅತೀವ ಕಾಳಜಿಯಿತ್ತು. ಇಲ್ಲಿನ ಹಲವಾರು ನಾಯಕರ ಜತೆ ಒಡನಾಟವೂ ಇತ್ತು. ಕಳೆದ ಲೋಕಸಭೆ ಚುನಾವಣೆಯಲ್ಲಿ ನಾನು ಸೋಲು ಅನುಭವಿಸಿದ್ದಾಗ, ನನ್ನ ಜತೆ ಮಾತನಾಡಿದ್ದರು. ಸಾಂತ್ವನ ಹೇಳಿದ್ದರು ಮಾತ್ರವಲ್ಲ, ಬಹಳ ನೊಂದುಕೊಂಡಿದ್ದರು.
ಪ್ರತೀವರ್ಷ ದುರ್ಗಾಪೂಜೆಗೆ ಅವರ ಊರಿಗೆ ಹೋಗಿ ಪೂಜೆ ಸಲ್ಲಿಸುತ್ತಿದ್ದರು. ದೇವರು ಪೂರ್ವಿಕರಿಂದ ಬಳುವಳಿಯಾಗಿ ಬಂದ ಆಚಾರಗಳ ಬಗ್ಗೆ ಅಗಾಧ ನಂಬಿಕೆ ಹೊಂದಿದ್ದರು. ಅವರದು ಆಕರ್ಷಕ ವ್ಯಕ್ತಿತ್ವ ಸರಳ ಜೀವನ. ದೇಶ ಹಾಗೂ ಜಗತ್ತಿನ ವಿದ್ಯಮಾನಗಳ ಬಗ್ಗೆ ಸಾಕಷ್ಟು ತಿಳಿದುಕೊಂಡಿದ್ದ ಜ್ಞಾನಿ. ಅವರ ಹೆಸರನ್ನು ಭಾರತೀಯ ರಾಜಕಾರಣ ಮರೆಯಲು ಸಾಧ್ಯವೇ ಇಲ್ಲ. ಅವರನ್ನು ಕಳೆದುಕೊಂಡು ರಾಷ್ಟ್ರ ಬಡವಾಗಿದೆ, ದುಃಖತಪ್ತವಾಗಿದೆ. ಅಂತಹ ಮುತ್ಸದ್ದಿಗಳು ಅತಿ ವಿರಳ. ಅವರ ಅಗಲಿಕೆ ನನಗೆ ವೈಯಕ್ತಿಕವಾಗಿಯೂ ತುಂಬಾ ನಷ್ಟವುಂಟುಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.