ಸರಳ ಬದುಕಿನ ನಿಜವಾದ ಹೋರಾಟಗಾರ


Team Udayavani, Apr 9, 2018, 8:35 AM IST

Doreswamy-H-S-600.jpg

ದೇಶಕ್ಕೆ ತಮ್ಮ ಸರ್ವಸ್ವವನ್ನೂ ಅರ್ಪಿಸಿರುವ, ಸರಳ ಜೀವಿ ಹಾಗೂ ಅಪ್ರತಿಮ ಹೋರಾಟಗಾರ ದೊರೆಸ್ವಾಮಿಯವರಿಗೀಗ 100 ವಸಂತಗಳು ತುಂಬಿದ ಸಂಭ್ರಮ. ಇವರ ಬದುಕು ನಾಡಿನ ಜನರಿಗೆ ಒಂದು ಮಾದರಿ. ಈ ಸಂದರ್ಭದಲ್ಲಿ ಅವರ ಅಭಿಮಾನಿಗಳೆಲ್ಲ ಸೇರಿ ಏ. 9ರಂದು ‘ಶತಮಾನೋತ್ಸವದ ಸಂಭ್ರಮ’ ಎಂಬ ಕಾರ್ಯಕ್ರಮವನ್ನು ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಸಂಜೆ 4 ಗಂಟೆಗೆ ಹಮ್ಮಿಕೊಂಡಿದ್ದಾರೆ. 

ಕನ್ನಡ ನಾಡಿನ ಹೆಮ್ಮೆಯ ಚೇತನಗಳಲ್ಲಿ ಒಂದು ಪ್ರಮುಖವಾದ ಹೆಸರು ಶ್ರೀ ಎಚ್‌.ಎಸ್‌.ದೊರೆಸ್ವಾಮಿಯವರದ್ದು. ಅವರನ್ನು ಈಗಲೂ ಅತ್ಯಂತ ಸಾಮಾನ್ಯವಾಗಿ ಸ್ವಾತಂತ್ರ್ಯ ಸೇನಾನಿ ಎಂದು ಕರೆಯುವುದೇ ವಾಡಿಕೆ. ನಾನೂ ಎಲ್ಲರಂತೆ ಅದೇ ರೀತಿ ತಲೆಬರಹದಡಿ ಈ ಲೇಖನ ಬರೆಯಬೇಕೆಂದುಕೊಂಡೆ. ಆಗ ಇದ್ದಕ್ಕಿದ್ದಂತೆ ಹೊಳೆಯಿತು, ಆ ಪದ ಭೂತಕಾಲದಲ್ಲಿ ಮಾತ್ರವೇ ಬಳಕೆಯಾಗುತ್ತಿಲ್ಲ, ವರ್ತಮಾನಕಾಲದಲ್ಲಿ ಬಳಕೆಯಾಗುತ್ತಿದೆ. ಅವರು ಸ್ವಾತಂತ್ರ್ಯ ಹೋರಾಟದ ಸಂದರ್ಭದ ಸೇನಾನಿ ಮಾತ್ರವಲ್ಲ ಇಂದಿಗೂ ನಾವವರನ್ನು ನಮ್ಮೆಲ್ಲರ ‘ಸೇನಾನಿ’ಎಂದೇ ಗುರುತಿಸುತ್ತಿದ್ದೇವೆ. ಎಷ್ಟು ಅರ್ಥಪೂರ್ಣವಾಗಿದೆಯಲ್ಲ ಈ ವಿಶೇಷಣ?

ದೊರೆಸ್ವಾಮಿಯವರು ಇಂದಿಗೂ ಅತ್ಯಂತ ಸಕ್ರಿಯವಾಗಿರುವ ಚಿರಂತನ ಚಿಲುಮೆ. ಅವರು ನೇರವಾಗಿ ಪರೋಕ್ಷವಾಗಿ ತೊಡಗಿಕೊಂಡಿರುವ ರಚನಾತ್ಮಕ ಕೆಲಸಗಳು ಮತ್ತು ಸಾಮಾಜಿಕ ಹೋರಾಟಗಳು ಒಂದೆರಡಲ್ಲ. ಗಾಂಧಿ ಸೇವಾ ಪ್ರತಿಷ್ಠಾನದ ಕೆಲಸಗಳಿಂದ ದುಡಿದು ಕಲಾಮಂದಿರಕ್ಕೆ ನೆರವಾಗುವ ತನಕ, ಭ್ರಷ್ಟಾಚಾರ ವಿರೋಧಿ ಹೋರಾಟಗಳಿಂದ ಹಿಡಿದು ಬಡವರ ಭೂಮಿ ಮತ್ತು ವಸತಿಯ ಹೋರಾಟಗಳ ತನಕ ಎಲ್ಲದರಲ್ಲೂ ನೇರವಾಗಿ ಪಾಲ್ಗೊಂಡವರು. ಅವರದ್ದೇ ಮಾತುಗಳಲ್ಲಿ ಹೇಳುವುದಾದರೆ ಸ್ವಾತಂತ್ರ್ಯ ಅಂದರೆ ಬ್ರಿಟೀಷರಿಂದ ಮಾತ್ರವೇ ಸಿಗಬೇಕಾಗಿರೋದಾ? ಎಲ್ಲಾ ಲೂಟಿಕೋರರೂ ದೇಶದ ಶತ್ರುಗಳೇ… ಅವರ ವಿರುದ್ಧ ಹೋರಾಡೋದು ಕೂಡಾ ಎಲ್ಲಾ ಪ್ರಜೆಗಳ ಕರ್ತವ್ಯ. ಆದ್ದರಿಂದ ಆರೋಗ್ಯಕರವಾದ ಸಮಾಜ ನಿರ್ಮಾಣ ಸ್ವಾತಂತ್ರ್ಯ ಚಳವಳಿಯ ಆಶಯದ ಭಾಗ ಎಂದು ಭಾವಿಸಿ ಈಗಲೂ ಕ್ರಿಯಾಶೀಲರಾಗಿರುವ ಹಿರಿಯ ಚೇತನ ದೊರೆಸ್ವಾಮಿಯವರು.

ದೊರೆಸ್ವಾಮಿಯವರು ಹುಟ್ಟಿದ್ದು ಈಗಿನ ರಾಮನಗರ ಜಿಲ್ಲೆಯ ಕನಕಪುರದ ಹಾರೋಹಳ್ಳಿಯಲ್ಲಿ. 1918ನೇ ಇಸವಿ ಏಪ್ರಿಲ್‌ 10ರಂದು. ಶಾನುಭೋಗಿಕೆಯನ್ನು ನಡೆಸುತ್ತಿದ್ದ ಮಧ್ಯಮ ವರ್ಗದ ಕುಟುಂಬವಾದರೂ ಆಗಲೇ ಸಮಾಜದಲ್ಲಿ ಹಬ್ಬುತ್ತಿದ್ದ ರಾಷ್ಟ್ರೀಯ ಆಂದೋಲನದ ಕಿಚ್ಚು ವಿದ್ಯಾರ್ಥಿ ದೆಸೆಯಲ್ಲೇ ದೊರೆಸ್ವಾಮಿಯವರಿಗೂ ಸೋಕಿತ್ತು. ಆ ಕಾಲದಲ್ಲೇ ಅಲ್ಲಲ್ಲಿ ನಡೆಯುತ್ತಿದ್ದ ಸಭೆ ಸಮಾರಂಭಗಳು, ಶಾಲೆಗಳಲ್ಲಿ ಶಿಕ್ಷಕರ ಮಾತುಗಳು ದೇಶದ ವಿಮೋಚನೆಗಾಗಿ ತಾವೆಲ್ಲರೂ ಏನಾದರೂ ಮಾಡಬೇಕೆಂಬ ಪ್ರೇರೇಪಣೆಯನ್ನು ನೀಡುತ್ತಿತ್ತು. ಆಗಲೇ, ಸ್ವಾತಂತ್ರ್ಯ ಆಂದೋಲನದ ಕರೆಗೆ ಓಗೊಟ್ಟು ಜನರಲ್ಲಿ ಎಚ್ಚರ ಮೂಡಿಸುವ ಕೈಂಕರ್ಯವನ್ನು ಹೊತ್ತು ಸಮಾಜಮುಖೀಯಾದರು. ಆಗಿನ್ನೂ ಕರ್ನಾಟಕದಲ್ಲಿ ಸ್ವದೇಶೀ ಆಂದೋಲನ ಬಿರುಸು ಪಡೆದುಕೊಂಡಿರಲಿಲ್ಲ. ಆಗ, ಖಾದಿ ಪ್ರಚಾರದ ಕೆಲಸಗಳೂ ಕೂಡಾ ಅಗತ್ಯವಾಗಿದ್ದವು. ಅಂತಹ ಚಟುವಟಿಕೆಗಳನ್ನು ಸೇರಿದಂತೆ ಸ್ವಾತಂತ್ರ್ಯ ಚಳವಳಿಯಲ್ಲಿ ಸಕ್ರಿಯವಾಗಿದ್ದವರೊಂದಿಗೆ ತೊಡಗಿಕೊಂಡರು.

ವಿಶೇಷವಾಗಿ ಗಾಂಧಿ, ಸುಭಾಷ್‌ಚಂದ್ರ ಬೋಸ್‌ ಮತ್ತು ವಿನೋಬಾ ಭಾವೆಯವರ ಚಿಂತನೆಗಳ ಕಡೆ ವಿಶೇಷ ಆಕರ್ಷಣೆಯಿತ್ತು. ಗಾಂಧೀಜಿಯವರ ಹಿಂದ್‌ ಸ್ವರಾಜ್‌ ಪುಸ್ತಕ, ಆ ಸಮಯದ ಎಲ್ಲ ಆದರ್ಶವಾದಿ ಯುವಜನರ ಆಲೋಚನೆಗಳ ಮೇಲೆ ಪ್ರಭಾವ ಬೀರಿತ್ತು. ಸಾಮಾನ್ಯ ಭಾರತದ ಉದ್ಧಾರ ಮತ್ತು ವ್ಯಕ್ತಿಗತ ನೈತಿಕ ಮೌಲ್ಯಗಳು ಸದಾ ತಮ್ಮನ್ನು ಮುನ್ನಡೆಸುವ ಶಕ್ತಿಯಾಗಿರಬೇಕೆಂದು ಆಗಲೇ ನಿರ್ಧರಿಸಿಕೊಂಡರು. ಆದ್ದರಿಂದಲೇ, ಆಗಿನಿಂದಲೂ ಸಚ್ಚಾರಿತ್ರ್ಯ, ಪ್ರಾಮಾಣಿಕತೆ ಮತ್ತು ಸಮಾಜಸೇವೆಯನ್ನು ತಮ್ಮ ವ್ಯಕ್ತಿತ್ವದ ಭಾಗವಾಗಿ ಮಾಡಿಕೊಂಡರು.

ಅಷ್ಟರಲ್ಲಿ ಕ್ವಿಟ್‌ ಇಂಡಿಯಾ ಚಳವಳಿಯ ಬಿಸಿ ಆರಂಭವಾಯಿತು. ಹಳೇ ಮೈಸೂರು ರಾಜ್ಯದಲ್ಲಿಯೂ ಬ್ರಿಟೀಷರೇ ಭಾರತ ಬಿಟ್ಟು ತೊಲಗಿ’ ಎಂಬ ಕೂಗು ಜೋರಾಯಿತು. ಆ ಚಳವಳಿಯ ಅನೇಕ ಬಗೆಯ ಕ್ರಿಯಾಶೀಲ ಚಟುವಟಿಕೆಗಳ ಕಾರಣಕ್ಕೆ ದೊರೆಸ್ವಾಮಿಯವರೂ ಜೈಲುವಾಸವನ್ನೂ ಅನುಭಸಬೇಕಾಯಿತು. ಅದೂ ಕೂಡಾ ಅವರ ಆತ್ಮಬಲವನ್ನು ಇನ್ನಷ್ಟು ಹೆಚ್ಚಿಸಿತೇ ವಿನಃ ಕುಗ್ಗಿಸಲಿಲ್ಲ. ಹೊರಬಂದ ನಂತರ ಇನ್ನಷ್ಟು ಉತ್ಸಾಹದಿಂದ ಆಂದೋಲನದಲ್ಲಿ ತೊಡಗಿಕೊಂಡರು.

ಅದೇ ಸಮಯದಲ್ಲಿ ಅವರಿಗೆ, ಬ್ರಿಟೀಷರ ಕಾಲದಲ್ಲೇ ಆಗಲಿ, ಸ್ವಾತಂತ್ರ್ಯಾನಂತರದ ದಿನಗಳಲ್ಲೇ ಆಗಲಿ, ಸಮಾಜದ ಓರೆಕೋರೆಗಳನ್ನು ತಿದ್ದಲು ಪತ್ರಿಕೆ ಅತ್ಯಂತ ಸಶಕ್ತವಾದ ಮಾಧ್ಯಮ ಎಂಬ ಅನಿಸಿಕೆ ಬಂತು. ಸ್ವಾತಂತ್ರ್ಯ ಚಳವಳಿಯ ಆಶಯಗಳು ಏನೇ ಇದ್ದರೂ, ಆಳ್ವಿಕೆ ನಡೆಸುವವರಿಗೊಂದು ಅಂಕುಶವಿರುವುದು ಅಗತ್ಯವೆನಿಸಿತ್ತು. ಅದೇ ರೀತಿ, ಸಮಾಜದಲ್ಲಿದ್ದ ಅನೇಕ ಬಗೆಯ ಅಂಕುಡೊಂಕುಗಳನ್ನು ತಿದ್ದದಿದ್ದರೆ ಅಂತಹ ಸ್ವಾತಂತ್ರ್ಯ ಅರ್ಥಹೀನ ಎಂಬ ಭಾವನೆ ದೊರೆಸ್ವಾಮಿಯವರಲ್ಲಿ ಬಲವಾಯಿತು. ಅದಕ್ಕಾಗಿ ಆರಂಭವಾಗಿದ್ದು ಪೌರವಾಣಿ ಪತ್ರಿಕೆ. ಅದನ್ನು ಮೈಸೂರು ಸರ್ಕಾರ ನಿಷೇಧಿಸಿದಾಗ ಎಂತಹ ಸಂದರ್ಭದಲ್ಲೂ ನಡೆಸಬೇಕೆಂಬ ಛಲದಿಂದ, ಭೂಗತರಾಗಿ ಆಂಧ್ರದ ಹಿಂದೂಪುರದಿಂದ ಪತ್ರಿಕೆಯನ್ನು ನಡೆಸಿದರು. ಪತ್ರಿಕೆಯನ್ನು ಪ್ರಜಾತಂತ್ರದ ನಾಲ್ಕನೆಯ ಅಂಗ ಎಂಬ ಹೇಳಿಕೆಗೆ ಅನ್ವರ್ಥವಾಗುವಂತೆ ಪೌರವಾಣಿ ಸಾಕಷ್ಟು ಕಾಲ ನಡೆದುಬಂತು.

ಸ್ವಾತಂತ್ರ್ಯಾನಂತರ ಭೂದಾನ ಚಳವಳಿಯಲ್ಲಿ ವಿನೋಬಾ ಭಾವೆಯವರೊಂದಿಗೆ ತೊಡಗಿಕೊಂಡಾಗ ಭೂಹೀನ ಬಡವರ ಬದುಕಿನ ಹತ್ತಿರದ ದರ್ಶನವಾಯಿತು. ಅವರೇ ತಮ್ಮ ಪುಸ್ತಕ ‘ನೆನಪಿನ ಸುರುಳಿ ತೆರೆದಾಗ’ದಲ್ಲಿ ಹೇಳಿಕೊಂಡಿರುವಂತೆ, ಕೇವಲ ಬ್ರಿಟಿಷರಿಂದ ಸ್ವಾತಂತ್ರ್ಯವಷ್ಟೇ ಈ ದೇಶದ ಎಲ್ಲ ಸಮಸ್ಯೆಗಳಿಗೂ ಪರಿಹಾರವಲ್ಲ ಎಂಬ ಅಭಿಪ್ರಾಯ ಬಲಗೊಳ್ಳತೊಡಗಿದ್ದೇ ಅಲ್ಲಿಂದ. ಆದ್ದರಿಂದಲೇ, ಅನೇಕ ಬಗೆಯ ರಚನಾತ್ಮಕ ಆಂದೋಲನಗಳ ಮೂಲಕ ಬಡತನ ನಿವಾರಣೆ, ಅಸ್ಪಶ್ಯತೆಯಂತಹ ಆಚರಣೆಗಳಿಗೆ ವಿರೋಧ, ವೈಚಾರಿಕತೆಯನ್ನು ಹರಡುವ ಪ್ರಯತ್ನಗಳನ್ನು ನಿರಂತರವಾಗಿ ನಡೆಸಿಕೊಂಡು ಬಂದರು.

ಇಲ್ಲಿಯೇ ನಮಗೆ ಎಚ್‌.ಎಸ್‌.ದೊರೆಸ್ವಾಮಿಯವರ ವೈಶಿಷ್ಟ್ಯ ಮನಸ್ಸಿಗೆ ನಾಟುವುದು! ಅವರು ಕೇವಲ ರಾಷ್ಟ್ರೀಯ ಆಂದೋಲನಕ್ಕಷ್ಟೇ ತಮ್ಮನ್ನು ಸೀಮಿತಗೊಳಿಸಿಕೊಳ್ಳಲಿಲ್ಲ. ಜಾಗತಿಕ ಆದರ್ಶ ಮೌಲ್ಯಗಳಾದ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ, ಸಾಮಾಜಿಕ ನ್ಯಾಯಗಳ ಸಾಕಾರಕ್ಕಾಗಿ ದುಡಿಯುವ ನಿರ್ಧಾರ ಮಾಡಿದರು. ಗಾಂಧೀಜಿಯವರ ಬಹಳ ಪ್ರಖ್ಯಾತವಾದ ಹೇಳಿಕೆಯೊಂದಿದೆ. ಈ ದೇಶದ ಕಟ್ಟಕಡೆಯ ವ್ಯಕ್ತಿಗೆ ಸ್ವಾತಂತ್ರ್ಯ ದೊರೆತಾಗಲೇ ಈ ದೇಶ ಸ್ವತಂತ್ರಗೊಂಡಿದೆ ಎಂದರ್ಥ ಎಂಬುದು. ಇದನ್ನು ನಿಜಕ್ಕೂ ದೊರೆಸ್ವಾಮಿಯವರು ತಮ್ಮ ಬದುಕಿನ ಧ್ಯೇಯವಾಕ್ಯವನ್ನಾಗಿ ಮಾಡಿಕೊಂಡಿದ್ದಾರೆ. ಅವರ ಬದುಕಿನ ನಡೆ ರೂಪುಗೊಂಡಿದ್ದೇ, ಈ ದೇಶದ ಕಟ್ಟ ಕಡೆಯ ಮನುಷ್ಯರಿಗೂ ಬದುಕಿನ ಮೂಲಭೂತ ಅಗತ್ಯಗಳನ್ನು ಪೂರೈಸಿಕೊಂಡು ಘನತೆಯಿಂದ ಬದುಕಬಹುದಾದ ಸ್ಥಿತಿ ನಿರ್ಮಾಣಗೊಳ್ಳುವುದು ಹೇಗೆ ಎಂಬ ಚಿಂತನ- ಮಂಥನದ ಕುಲುಮೆಯಲ್ಲಿ. ಹಾಗೆಯೇ, ಸ್ವಾತಂತ್ರ್ಯಾನಂತರ ಅನೇಕರು ನೇರ ರಾಜಕಾರಣಕ್ಕಿಳಿದಾಗ, ಆ ಹಾದಿಯನ್ನು ತುಳಿಯದೇ ಸದಾ ಎಚ್ಚೆತ್ತ ವಿರೋಧ ಪಕ್ಷವಾಗಿ ನಿಂತವರು ದೊರೆಸ್ವಾಮಿಯವರು. ಜನರ ದನಿಯನ್ನು ಹತ್ತಿಕ್ಕುವ ಪ್ರಯತ್ನ ನಡೆದಾಗಲೆಲ್ಲ ಅವರು ಜನರ ಪರವಾಗಿ ಪ್ರಭುತ್ವದ ವಿರುದ್ಧವಾಗಿ ಬೀದಿಗಿಳಿದವರು. ತಾವು ಸ್ವಾತಂತ್ರ್ಯ ಚಳವಳಿಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ಮೂಲಕವೇ ಸಾಮಾಜಿಕ ಕ್ಷೇತ್ರವನ್ನು ಪ್ರವೇಶಿಸಿದ್ದರೂ, ಅದರ ಜನವಿರೋಧಿ ನಡೆಗಳನ್ನು ಕಟುವಾಗಿ ಟೀಕಿಸಿದವರು. ತುರ್ತು ಪರಿಸ್ಥಿತಿಯ ವಿರುದ್ಧವೂ ಆಂದೋಲನಕ್ಕಿಳಿದು ಬಂಧನಕ್ಕೊಳಗಾದವರು. ಇದೇ ಅವರನ್ನು ಅವರ ಸಮಕಾಲೀನರಾದ ಇನ್ನೂ ಅನೇಕ ಹೋರಾಟಗಾರರಿಂದ ಭಿನ್ನವಾಗಿ ಎತ್ತರದ ಸ್ಥಾನದಲ್ಲಿ ನಿಲ್ಲಿಸುವಂಥದ್ದು.

ಇಷ್ಟೇ ಮಹತ್ವದ ಮತ್ತೂಂದು ವಿಚಾರ ಅವರ ನಡೆ-ನುಡಿ- ಚಿಂತನೆಗಳಲ್ಲಿರುವ ಏಕರೂಪತೆ. ಗಾಂಧೀಜಿಯವರು ಬೋಧಿಸಿದ ‘ಸ್ವಯಂಪ್ರೇರಣೆಯ ಬಡತನ’ವನ್ನು ತಮ್ಮ ಉಸಿರಿನಂತೆ ಆರಂಭದಿಂದ ಇಂದಿನ ದಿನದವರೆಗೂ ಪಾಲಿಸುತ್ತಾ ಬಂದವರು ಎಚ್‌.ಎಸ್‌.ದೊರೆಸ್ವಾಮಿಯವರು. ನಿಜವಾದ ಸಾಮಾಜಿಕ ಹೋರಾಟಗಾರ ಸ್ವಯಂಪ್ರೇರಣೆಯಿಂದ ಬಡತನವನ್ನು ಅಪ್ಪಿಕೊಳ್ಳಬೇಕು; ಸರಳವಾದ‌, ಕಠಿಣ ಶ್ರಮದ ಬದುಕು ನಡೆಸಬೇಕೆಂದು ಹೇಳುತ್ತಾ, ತಾವೂ ಹಾಗೆಯೇ ಬದುಕುತ್ತಾ ಇತರರನ್ನೂ ಪ್ರೇರೇಪಿಸಿದವರು. ಇಂದಿಗೂ ಬಾಡಿಗೆಯ ಮನೆಯಲ್ಲಿ ಅತ್ಯಂತ ಸರಳ ಸಹಜ ಬದುಕನ್ನು ನಡೆಸುತ್ತಿದ್ದಾರೆ. ಇತ್ತೀಚೆಗೆ ಒಂದು ಪ್ರಶಸ್ತಿಯೊಂದಿಗೆ 5 ಲಕ್ಷ ರೂ.ಗಳ ನಗದು ಬಂದಾಗ, ಒಂದು ಲಕ್ಷವನ್ನು ಜಯದೇವ ಹೃದ್ರೋಗ ಆಸ್ಪತ್ರೆಗೆ, ಮತ್ತೂಂದು ಲಕ್ಷವನ್ನು ಭೂಮಿ, ವಸತಿ ವಂಚಿತ ಬಡವರ ಹೋರಾಟಕ್ಕೆ ಕೊಡುಗೆಯಾಗಿ ನೀಡಿದರು. ಉಳಿದ ಹಣವನ್ನು ತಮ್ಮ ದೀರ್ಘ‌ ಬದುಕಿನ ಪ್ರತಿ ಹಂತದಲ್ಲೂ ಬೆನ್ನೆಲುಬಾಗಿ ನಿಂತ ಬಾಳಸಂಗಾತಿಗೆ ತಮ್ಮ ಮೊಟ್ಟಮೊದಲ ಕಾಣಿಕೆಯಾಗಿ ಕೊಟ್ಟು ಆ ಹಣದ ಋಣದಿಂದಲೂ ಮುಕ್ತರಾದವರು ದೊರೆಸ್ವಾಮಿಯವರು. ಇಂತಹ ನಡೆ ನುಡಿಯ ಸಾದೃಶ್ಯ ಅತ್ಯಪೂರ್ವವೇ ಸರಿ!

ಅದೇ ರೀತಿ ಸಮಕಾಲೀನ ವಿಚಾರಗಳಿಗೆ ಸದಾ ತೆರೆದುಕೊಂಡಿದ್ದು ಅಂದಂದಿನ ಸಮಸ್ಯೆಗಳಿಗೆ ತಕ್ಕಂತೆ ಅಪ್‌ ಡೇಟೆಡ್‌ ಉತ್ತರ ಹುಡುಕುವ ಎಚ್ಚರದ ಮನಸ್ಥಿತಿಯೂ ಕೂಡಾ ಎಲ್ಲರಿಗೂ ಮಾದರಿಯಾಗುವಂಥದ್ದು. ಜಾತಿ ವ್ಯವಸ್ಥೆಯನ್ನು ವಿರೋಧಿಸುವ, ಇಂದಿನ ಸಂದರ್ಭದಲ್ಲಿ ಈ ದೇಶದ ದೊಡ್ಡ ಶತ್ರುವಾಗಿರುವ  ಕೋಮುವಾದವನ್ನು ಟೀಕಿಸುವ, ಭೂರಹಿತ ಬಡಜನರ ಬದುಕಿನ ಅಗತ್ಯಗಳಿಗಾಗಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಮುಂದಾಳಾಗಿ ಈ ಇಳಿವಯಸ್ಸಿನಲ್ಲೂ ಯಾವುದೇ ರಾಜಿಯಿಲ್ಲದ ಹೋರಾಟಕ್ಕಿಳಿಯುವ ದೊರೆಸ್ವಾಮಿಯವರ ಆಂತರಿಕ ಚೈತನ್ಯ ಮತ್ತು ನೈತಿಕ ಶಕ್ತಿಗೆ ಎಣೆಯೇ ಇಲ್ಲ. 

ಕೈಗಾ ಅಣುಸ್ಥಾವರದ ಪ್ರಸ್ತಾಪ ಬಂದಾಗ ಅದರ ವಿರುದ್ಧವೂ ದೊರೆಸ್ವಾಮಿಯವರು ದನಿಯೆತ್ತಿದ್ದರು. ಶಿವರಾಮ ಕಾರಂತರ ಪರಿಸರ ಕಾಳಜಿಗೆ ಜೊತೆಗೂಡಿದ್ದರು. ಜಾಗತಿಕರಣದ ನಂತರದ ದಿನಗಳಲ್ಲಿ ಜಾಗತಿಕ ಬಂಡವಾಳಶಾಹಿ – ಕಾರ್ಪೊರೇಟ್‌ ಬಂಡವಾಳಿಗರ ವಿರುದ್ಧ, ಖ್ಯಾತ ಹೋರಾಟಗಾರ ಎ.ಟಿ. ರಾಮಸ್ವಾಮಿ ಅವರೊಂದಿಗೆ ಭೂಕಬಳಿಕೆಯ ವಿರುದ್ಧ, ಭ್ರಷ್ಟಾಚಾರದ ವಿರುದ್ಧ, ಮಂಡೂರಿನ ಕಸದ ಸಮಸ್ಯೆಯ ವಿರುದ್ಧ, ಪತ್ರಕರ್ತೆ ಗೌರಿ ಲಂಕೇಶ್‌ ಅವರ ಹತ್ಯೆಯ ವಿರುದ್ಧ ದೊರೆಸ್ವಾಮಿಯವರು ದನಿಯೆತ್ತಿದವರು. 

ಈ ಮಟ್ಟಕ್ಕೆ ತಮ್ಮ ದೇಶವನ್ನೂ, ದೇಶದ ಸಹಬಾಂಧವರನ್ನೂ ಪ್ರೀತಿಸುವ, ಅವರ ಒಳಿತಿಗಾಗಿಯೇ ತಮ್ಮ ಸರ್ವಸ್ವವನ್ನೂ ಅರ್ಪಿಸಿರುವ, ತಮ್ಮನ್ನು ತಾವೇ ತೇಯ್ದುಕೊಂಡು ಶ್ರಮಿಸಿರುವ ಸರಳ ಜೀವಿ ಅಸಾಮಾನ್ಯ ಹೋರಾಟಗಾರ ದೊರೆಸ್ವಾಮಿಯವರಿಗೀಗ 100 ವಸಂತಗಳು ತುಂಬಿದ ಸಂಭ್ರಮ. ಈ ಹಿರಿಜೀವದ ಸಾರ್ಥಕ ಬದುಕು ಇಡೀ ನಾಡಿಗೆ ಮಾದರಿ. ಆದ್ದರಿಂದಲೇ, ಅವರಿಗೆ ನೂರು ತುಂಬಿದ ಸಂದರ್ಭದಲ್ಲಿ ದೊರೆಸ್ವಾಮಿಯವರ ಅಭಿಮಾನಿಗಳೆಲ್ಲ ಸೇರಿಕೊಂಡು ಏಪ್ರಿಲ್‌ 9ರಂದು ಸಂತಸದ ಸಂಜೆಯ ಕಾರ್ಯಕ್ರಮವನ್ನು ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದಾರೆ. ಕಾರ್ಯಕ್ರಮ ಯಶಸ್ವಿಯಾಗಬೇಕು; ಕರುನಾಡಿನ ಕಣ್ಮಣಿ ಹಿರಿಯ ಚೇತನ ದೊರೆಸ್ವಾಮಿಯವರಿಗೆ ನಮ್ಮೆಲ್ಲರ ಅಭಿನಂದನೆಗಳು ಸಲ್ಲಬೇಕು.

— ಮುತ್ತುರಾಜು ಮಾದೇಗೌಡನಕೊಪ್ಪಲು, ಮಂಡ್ಯ

ಟಾಪ್ ನ್ಯೂಸ್

1-parm

Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

BJP-waqf-Protest

BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ

1-remo

Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ

ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್

IFFI 2024: ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್

IPL: Players from these countries are fully available for the next three seasons of IPL

IPL: ಇನ್ನು ಮೂರು ಸೀಸನ್‌ ಐಪಿಎಲ್‌ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ

1-a-raga-pg

Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

Employment: ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

ಒತ್ತುವರಿ ತೆರವು ಎಂಬ ಜೇನುಗೂಡಿಗೆ ಕೈಹಾಕುವಾಗ…

ಒತ್ತುವರಿ ತೆರವು ಎಂಬ ಜೇನುಗೂಡಿಗೆ ಕೈಹಾಕುವಾಗ…

India ಸೆಕ್ಯುಲರ್‌ ಸಿವಿಲ್‌ ಕೋಡ್‌-ನಾಡಿನ ನಾಡಿಮಿಡಿತದ ಕರೆ

India ಸೆಕ್ಯುಲರ್‌ ಸಿವಿಲ್‌ ಕೋಡ್‌-ನಾಡಿನ ನಾಡಿಮಿಡಿತದ ಕರೆ

Cinema Story:”ಇಂತಹ” ನೆಗೆಟಿವ್ ಕಥಾ ವಸ್ತುಗಳಿಲ್ಲದೇನೆ ಸಿನಿಮಾ ಬಾಕ್ಸಾಫೀಸ್ ತುಂಬ ಬಹುದೇ ?

Cinema Story:”ಇಂತಹ” ನೆಗೆಟಿವ್ ಕಥಾ ವಸ್ತುಗಳಿಲ್ಲದೇನೆ ಸಿನಿಮಾ ಬಾಕ್ಸಾಫೀಸ್ ತುಂಬ ಬಹುದೇ ?

ರಾಜ್ಯದಲ್ಲಿ ಇನ್ನೊಂದು ಪಕ್ಷದ ಸರ್ಕಾರವಿದ್ದಾಗ ಈ ರಾಜ್ಯಪಾಲರುಗಳು‎ ತುಂಬಾ ಆತಂತ್ರ ಸ್ಥಿತಿ

ಮುಡಾ: ಸಿದ್ದು ವಿರುದ್ಧ ರಾಜ್ಯಪಾಲರ prosecution ಅನುಮತಿ ಸಿಎಂ ಸ್ಥಾನಕ್ಕೆ ಮುಳುವಾಗಬಹುದೇ?

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-parm

Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

BJP-waqf-Protest

BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ

1-remo

Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ

Road Mishap: ಬೈಕ್ ಗೆ ಕಾರು ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ

Road Mishap: ಬೈಕ್ ಗೆ ಕಾರು ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.