ಗೇಮ್ ಚೇಂಜರ್ ಆಗಲಿದೆ ಸುಪ್ರೀಂ ತೀರ್ಪು!
Team Udayavani, Aug 27, 2017, 7:40 AM IST
ಅನ್ಯ ಧರ್ಮದ ಮಹಿಳೆಯರೂ ತಮ್ಮನ್ನು ತುಳಿಯಲಾಗುತ್ತಿದೆ, ತಮ್ಮ ವಿರುದ್ಧ ಅನ್ಯಾಯ ಮಾಡಲಾಗುತ್ತಿದೆ ಎಂದಾದಾಗ ಅವರೂ ನಿರ್ಭಯವಾಗಿ ಹೋರಾಡಲು ಮುಂದಾಗುತ್ತಾರೆ. “ಮುಸಲ್ಮಾನ ಮಹಿಳೆಯರು ಕಠಿಣ ಕಟ್ಟಳೆಗಳು/ಪರಿಸ್ಥಿತಿಯ ನಡುವೆಯೂ ಯಶಸ್ವಿಯಾಗಿ ಹೋರಾಡಿ ಗೆಲ್ಲುತ್ತಾರೆ ಎಂದಾದರೆ ನಮಗೇಕೆ ಸಾಧ್ಯವಾಗುವುದಿಲ್ಲ?’ ಎಂದು ಮುಸ್ಲಿಂಮೇತರ ಮಹಿಳೆಯರೂ ತಮ್ಮನ್ನು ತಾವು ಪ್ರಶ್ನಿಸಿಕೊಳ್ಳುತ್ತಾರೆ.
ತ್ರಿವಳಿ ತಲಾಖ್‌ನ ವಿಚಾರವಾಗಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ನಿಜಕ್ಕೂ ಐತಿಹಾಸಿಕವಾದದ್ದು. ಆದರೆ ಈ ತೀರ್ಪು ಭಾರತದ ಮುಸಲ್ಮಾನ ಸಮುದಾಯದ ಮೇಲೆ ಯಾವ ರೀತಿಯಲ್ಲಿ ಗುಣಾತ್ಮಕ ಬದಲಾವಣೆಗಳಿಗೆ ಕಾರಣವಾಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ. ಅಂದರೆ ಸದ್ಯಕ್ಕಂತೂ ತ್ರಿವಳಿ ತಲಾಖ್‌ನ ವಾಸ್ತವಿಕ ಮೌಲ್ಯಮಾಪನ ಮಾಡಲು ನಮಗ್ಯಾರಿಗೂ ಸಾಧ್ಯವಿಲ್ಲ.
ಆದರೆ ಸತ್ಯವೇನೆಂದರೆ ಇದರಿಂದಾಗಿ ಮುಸಲ್ಮಾನ ಹೆಣ್ಣುಮಕ್ಕಳಿಗೆ ಸ್ವಾತಂತ್ರÂ ಸಿಗುವುದಷ್ಟೇ ಅಲ್ಲದೇ, ಅವರಲ್ಲೂ ಸಮಾನತೆ ಮತ್ತು ಸಬಲೀಕರಣದ ಭಾವನೆ ಮೂಡಲಿದೆ.
ಸುಪ್ರೀಂ ಕೋರ್ಟ್‌ನ ಈ ತೀರ್ಪು ಮುಸಲ್ಮಾನ ಸಮುದಾಯದಲ್ಲಿ ಮೂಲಭೂತ ಬದಲಾವಣೆ ತರಲಿದೆ. ಸುಪ್ರೀಂ ಕೋರ್ಟ್‌ನ ಬೆಂಬಲ ಸಿಕ್ಕಿರುವುದರಿಂದ ಮುಂದಿನ ದಿನಗಳಲ್ಲಿ ಮಹಿಳೆಯರು ತ್ರಿವಳಿ ತಲಾಖ್ ಅನ್ನು ತಮ್ಮ ಹಣೆಬರಹವೆಂದು ಒಪ್ಪಿಕೊಳ್ಳದೇ, ತಿರುಗಿ ಬೀಳಲಿದ್ದಾರೆ ಎಂದು ನನಗನ್ನಿಸುತ್ತದೆ.
ಇನ್ಮುಂದೆ ಹೆಣ್ಣುಮಕ್ಕಳು ಒಂದು ವೇಳೆ ತಮ್ಮ ಪತಿ ತ್ರಿವಳಿ ತಲಾಖ್ ಕೊಡಲು ಮುಂದಾದರೆ, “ತ್ರಿವಳಿ ತಲಾಖ್ ಅಸಾಂವಿಧಾನಿಕ. ನಾನಂತೂ ಈ ಮನೆ ತೊರೆಯುವುದಿಲ್ಲ. ನೀನು ಬೇಕಿದ್ದರೆ ಮನೆ ಬಿಟ್ಟು ಹೋಗಬಹುದು’ ಎಂದು ತಮ್ಮ ಗಂಡನಿಗೆ ಹೇಳಲಿದ್ದಾರೆ.
ಇದಷ್ಟೇ ಅಲ್ಲ, ಮುಸ್ಲಿಂ ಮಹಿಳೆಯರು ಪೊಲೀಸರು ಮತ್ತು ಇತರೆ ಅಧಿಕಾರವರ್ಗದಿಂದ ಭದ್ರತೆಯನ್ನು ಕೋರಲಿದ್ದಾರೆ. ದೇಶದ ಉಳಿದ ನಾಗರಿಕರಂತೆಯೇ ಅವರೂ ಕೂಡ ಮಾನಸಿಕ ಹಿಂಸೆಯ ದೂರು ಕೊಡಬಹುದು. ಆಗ ಅಂಸಾವಿಧಾನಿಕ ತ್ರಿವಳಿ ತಲಾಖ್ ಘೋಷಿಸುವ ಗಂಡಂದಿರನ್ನು ಜೈಲಿಗೆ ತಳ್ಳಲಾಗುತ್ತದೆ. ಒಟ್ಟಲ್ಲಿ ಇಂಥ ನಾಲ್ಕೈದು ಪ್ರಕರಣಗಳು ನಡೆದರೂ ಸಾಕು, ಮುಸಲ್ಮಾನ ಸಮುದಾಯಕ್ಕೆ ಪ್ರಬಲ ಸಂದೇಶ ರವಾನೆಯಾಗುತ್ತದೆ. ಈ ತೀರ್ಪು ಮುಸಲ್ಮಾನ ಮಹಿಳೆಯರ ಬದುಕನ್ನೇ ಬದಲಿಸಿ, ಅವರ ಪಾಲಿನ ಗೇಮ್ ಚೇಂಜರ್ ಆಗಲಿದೆ. ಗಮನಿಸಬೇಕಾದ ಅಂಶವೆಂದರೆ ಇದು ಕೇವಲ ವಿಚ್ಛೇದನಕ್ಕೆ ಸಂಬಂಧಿಸಿದ ತೀರ್ಪಲ್ಲ, ಬದಲಾಗಿ ದೇಶದ ಎಲ್ಲಾ ಮಹಿಳೆಯರಿಗೂ ಸಮಾನತೆ ಮತ್ತು ಸಬಲೀಕರಣವನ್ನು ಕೊಡುವ ತೀರ್ಪು.
ಅನ್ಯ ಧರ್ಮದ ಮಹಿಳೆಯರಿಗೂ ಇದು ಸ್ಫೂರ್ತಿ ತುಂಬುವಂಥದ್ದು. ತಮ್ಮನ್ನು ತುಳಿಯಲಾಗುತ್ತಿದೆ, ತಮ್ಮ ವಿರುದ್ಧ ಅನ್ಯಾಯ ಮಾಡಲಾಗುತ್ತಿದೆ ಎಂದಾದಾಗ ಅವರೂ ನಿರ್ಭಯವಾಗಿ ಹೋರಾಡಲು ಮುಂದಾಗುತ್ತಾರೆ. “ಮುಸಲ್ಮಾನ ಮಹಿಳೆಯರು ಕಠಿಣ ಕಟ್ಟಳೆಗಳು/ಪರಿಸ್ಥಿತಿಯ ನಡುವೆಯೂ ಯಶಸ್ವಿಯಾಗಿ ಹೋರಾಡಿ ಗೆಲ್ಲುತ್ತಾರೆ ಎಂದಾದರೆ ನಮಗೇಕೆ ಸಾಧ್ಯವಾಗುವುದಿಲ್ಲ?’ ಎಂದು ಮುಸ್ಲಿಂಮೇತರ ಮಹಿಳೆಯರೂ ತಮ್ಮನ್ನು ತಾವು ಪ್ರಶ್ನಿಸಿಕೊಳ್ಳುತ್ತಾರೆ. ಹೀಗಾಗಿ ತ್ರಿವಳಿ ತಲಾಖ್ ನಿಷೇಧವನ್ನು ನಿಜಕ್ಕೂ ಬೃಹತ್ ಮೈಲಿಗಲ್ಲು ಎಂದೇ ಹೇಳಬೇಕು.
ಕ್ರಿಯಾತ್ಮಕವಾಗಿರುವ ನಮ್ಮ ಸಮಾಜ, ನಿರಂತರವಾಗಿ ಬದಲಾಗುತ್ತಾ ವಿಕಸನ ಹೊಂದುತ್ತಿದೆ. 1986ರಲ್ಲಿ, ಶಾ ಬಾನೋ ಪ್ರಕರಣ ನಡೆದಾಗ, ಆ ವಿಷಯವಾಗಿ ಮಾತನಾಡಲು ಯಾರೊಬ್ಬರೂ ತಯ್ನಾರಿರಲಿಲ್ಲ. ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ನಿಲುವಿನ ವಿರುದ್ಧ ಪ್ರಧಾನಿಗೆ ಪಿಟೀಷನ್ ಸಲ್ಲಿಸಿದ್ದವರೂ ಕೂಡ ಅಂದು ಬಹಿರಂಗವಾಗಿ ಮಾತಾಡಲೇ ಇಲ್ಲ.
ರಾಜೀವ್ ಗಾಂಧಿ ಸರ್ಕಾರ ಸುಪ್ರೀಂ ಕೋರ್ಟ್‌ನ ತೀರ್ಪನ್ನು ನಿರಾಕರಿಸುವಂಥ ಕಾನೂನು ಜಾರಿಗೊಳಿಸಿತು. ಯಾವ ಜನರು ಮೊದಲು ಪಿಟೀಷನ್ ಸಲ್ಲಿಸಿದ್ದರೋ, ಅವರೇ ನಂತರ ನನ್ನ ಬಳಿ ಬಂದು “ಆರಿಫ್ ಅವರೇ ಈ ವಿಚಾರವನ್ನು ಇನ್ನಷ್ಟು ಎಳೆಯುವುದು ಬೇಡ’ ಅಂತ ವಿನಂತಿಸಿದರು. ನಾನು ಬಹಳ ಪವರ್‌ಫುಲ್ ವ್ಯಕ್ತಿಗಳನ್ನು ಎದುರುಹಾಕಿಕೊಳ್ಳುತ್ತಿದ್ದೇನೆ ಎಂದು ನನಗೆ ಆಗ ಎಚ್ಚರಿಸಲಾಗಿತ್ತು.
ಆದರೆ ಕಳೆದೆರಡು ದಶಕಗಳಲ್ಲಿ ದೇಶದಲ್ಲಿ ಬೃಹತ್ ಬದಲಾವಣೆಗಳಾಗಿವೆ. 1986ರಲ್ಲಿ ಎಲ್ಲರೂ ಬಲಿಷ್ಠರ ವಿರುದ್ಧ ಮಾತನಾಡಲು ಹೆದರಿದ್ದರು. ಆದರೆ ಈಗಲ್ಲ. ಈಗ ಹೆಣ್ಣುಮಕ್ಕಳು ಮುಕ್ತವಾಗಿ ಮಾತನಾಡುತ್ತಿದ್ದಾರೆ. ಈ ಬದಲಾವಣೆಯು ಶಿಕ್ಷಣದ ಮೂಲಕ ಬಂದಿದೆ ಎನ್ನುವ ಅರಿವು ಮುಸ್ಲಿಂ ಮಹಿಳೆಯರಿಗಿದೆ. ಇದಷ್ಟೇ ಅಲ್ಲ, ತನ್ನ ನಿಲುವು ಸ್ವೀಕಾರಾರ್ಹವಲ್ಲ ಎನ್ನುವ ಸತ್ಯ ಅಖೀಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಗೂ ತಿಳಿದಿದೆ.
ನಾನು ಈ ವಿದ್ಯಮಾನವನ್ನು ಯಾವುದೋ ಒಬ್ಬ ವ್ಯಕ್ತಿ ಅಥವಾ ಪಕ್ಷದ ಗೆಲುವು ಎಂದು ಭಾವಿಸುವುದಿಲ್ಲ. ಇದು ದೇಶದ ಎಲ್ಲಾ ಮಹಿಳೆಯರ ಗೆಲುವು. ಹಾಗೆಂದು ಯುದ್ಧ ಇಲ್ಲಿಗೇ ಮುಗಿದಿಲ್ಲ. ಸತ್ಯವೇನೆಂದರೆ ಈಗಷ್ಟೇ ನಿಜವಾದ ಯುದ್ಧ ಆರಂಭವಾಗಿದೆ. ಮನೆಯಲ್ಲಿ, ಕಚೇರಿಯಲ್ಲಿ, ರಾಜಕೀಯದಲ್ಲಿ, ನ್ಯಾಯಾಂಗದಲ್ಲಿ, ವ್ಯಾಪಾರದಲ್ಲಿ ಮತ್ತು ಜೀವನದ ಪ್ರತಿಯೊಂದು ಹೆಜ್ಜೆಯಲ್ಲಿಯೂ ಸಮಾನತೆ ಸಾಧಿಸುವ ನಿಟ್ಟಿನಲ್ಲಿ ಆರಂಭವಾಗಿರುವ ಯುದ್ಧವಿದು.
(ಲೇಖಕರು ತ್ರಿವಳಿ ತಲಾಖ್ ಪ್ರಕರಣದಲ್ಲಿ ಅರ್ಜಿದಾರರ ಪರವಾಗಿ ವಾದ ಮಂಡಿಸಿದ್ದಾರೆ. ಕೇಂದ್ರದ ಮಾಜಿ ಸಚಿವರೂ ಆಗಿರುವ ಆರಿಫ್ ಮೊಹಮ್ಮದ್ ಖಾನ್, ಅಖೀಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯನ್ನು ನಿಷೇಧಿಸಬೇಕೆಂದು ಹೋರಾಡಿದವರು)
– ಆರಿಫ್ ಮೊಹಮ್ಮದ್ ಖಾನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.