ಸಲಿಂಗ ವಿವಾಹಕ್ಕೆ ಸಿಗುವುದೇ ಮಾನ್ಯತೆ?
Team Udayavani, Jan 24, 2018, 1:16 PM IST
ಸಲಿಂಗ ಕಾಮವನ್ನು ಸಮರ್ಥಿಸುವವರ ವಾದಕ್ಕೆ ಬಲ ಬಂದಿರುವುದು ಸುಪ್ರೀಂ ಕೋರ್ಟ್ ಇತ್ತೀಚೆಗೆ ಖಾಸಗಿತನವನ್ನು ಎತ್ತಿ ಹಿಡಿದು ನೀಡಿರುವ ತೀರ್ಪಿನಿಂದ. ಮದುವೆ, ಸಂಸಾರ ಇವೆಲ್ಲವೂ ಜನರ ಖಾಸಗಿ ಹಕ್ಕುಗಳಾದರೆ ಯಾರು ಯಾರನ್ನು ಮದುವೆಯಾಗಬೇಕು ಎನ್ನುವುದು ಕೂಡ ಈ ಹಕ್ಕಿನ ವ್ಯಾಪ್ತಿಯಲ್ಲಿ ಬರಬೇಕಲ್ಲವೇ? ಎನ್ನುವುದು ಅವರ ವಾದ.
ಮಹಾರಾಷ್ಟ್ರದಲ್ಲಿ ಮೊದಲ ಸಲಿಂಗ ಮದುವೆ, ಅದೂ ಹಿಂದೂ ಸಂಪ್ರದಾಯದಂತೆ, ಇತ್ತೀಚೆಗೆ ನಡೆದಿದೆ. ಯವತ್ಮಾಲ್ ಗ್ರಾಮದ ಯುವಕನೊಬ್ಬ ಉದ್ಯೋಗಕ್ಕಾಗಿ ಅಮೆರಿಕಕ್ಕೆ ತೆರಳಿದ್ದಾಗ ಅಲ್ಲಿ ಚೀನಿ ಯುವಕನ ಪರಿಚಯವಾಗಿತ್ತು. ಇಬ್ಬರ ಮಧ್ಯೆ ಆಕರ್ಷಣೆ ಬೆಳೆದು ವಿವಾಹವಾಗಲು ನಿರ್ಧರಿಸಿದರು. ಯವತ್ಮಾಲ್ ಯುವಕನ ತಂದೆ ಆರಂಭದಲ್ಲಿ ವಿರೋಧಿಸಿದರೂ ವಿಧಿಯಿಲ್ಲದೆ ಮದುವೆಗೆ ಒಪ್ಪಿಗೆ ಸೂಚಿಸಿದ್ದಾರೆ. ಕುಟುಂಬಸ್ಥರೇ ಮುಂದೆ ನಿಂತು ಅದ್ದೂರಿಯಾಗಿ ಮಾಡಿಸಿರುವ ಈ ವಿವಾಹದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡಿವೆ.
ಜಲಂಧರ್‌ನಲ್ಲಿ ಪಿಎಸ್‌ಐ ಆಗಿರುವ ಮನ್‌ಜಿತ್ ಕೌರ್ ತನ್ನ ಬಾಲ್ಯದ ಗೆಳತಿಯನ್ನೇ ವರಿಸಿದ್ದಾರೆ. ಈ ಮದುವೆಯಲ್ಲೂ ಬಂಧು – ಬಾಂಧವರು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಪಾಲ್ಗೊಂಡಿದ್ದರು.
ಸರಣಿ ಮದುವೆ!
“ಸಲಿಂಗ ವಿವಾಹಗಳಿಗೆ ಅಡ್ಡಿಪಡಿಸುವಂತಿಲ್ಲ’ ಎಂದು ಫ್ರಾನ್ಸ್ ಸುಪ್ರೀಂ ಕೋರ್ಟ್ ಆದೇಶಿಸುವ ಮೂಲಕ ಏಕಲಿಂಗೀಯರ ವಿವಾಹಕ್ಕೆ ರಹದಾರಿ ಮಾಡಿಕೊಟ್ಟಿದೆ. ಸಮಾಜದ ಸ್ವಾಸ್ಥ್ಯಕ್ಕೆ ಧಕ್ಕೆ ತರುವ ಸಲಿಂಗ ವಿವಾಹದ ಬಗ್ಗೆ ಫ್ರಾನ್ಸ್‌ನ ಬಹುತೇಕರಿಗೆ ಸದಭಿಪ್ರಾಯವಿಲ್ಲ, ಹಾಗಾಗಿ ಸಲಿಂಗ ವಿವಾಹವನ್ನು ಕೂಡಲೇ ತಡೆಯಬೇಕು ಎಂದು ಮೇಯರ್‌ಗಳ ಗುಂಪು ಕೋರ್ಟ್ ಮೊರೆಹೋಗಿತ್ತು. ಸಮೀಕ್ಷೆಗಳೂ ಇದೇ ಅಭಿಪ್ರಾಯ ವ್ಯಕ್ತಪಡಿಸಿ ದ್ದವು. ಆದರೆ, ನ್ಯಾಯಾಲಯದ ತೀರ್ಪಿನ ಬೆನ್ನಲ್ಲೇ ಆ ದೇಶದಲ್ಲಿ ಸಲಿಂಗ ವಿವಾಹಗಳ ಸರಣಿಯೇ ನಡೆದುಹೋಯಿತು!
ಬರಾಕ್ ಒಬಾಮಾ ಅಧ್ಯಕ್ಷರಾಗಿದ್ದ ಅವಧಿಯಲ್ಲೇ ಅಮೆರಿಕ ದಲ್ಲಿ ಸಲಿಂಗ ವಿವಾಹ ಸಕ್ರಮಗೊಳಿಸಿ ಅಲ್ಲಿನ ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿ, ಈ ಹಕ್ಕಿಗಾಗಿ ದಶಕಗಳಿಂದ ಹೋರಾಟ ನಡೆಸಿದ್ದ ಸಲಿಂಗಿಗಳು, ದ್ವಿಲಿಂಗಿಗಳು ಹಾಗೂ ಹಿಜಡಾಗಳಿಗೆ ಮುನ್ನಡೆ ಒದಗಿಸಿದೆ. ಸಲಿಂಗ ವಿವಾಹವನ್ನು 2017ರ ಕ್ರಿಸ್ಮಸ್‌ಗೂ ಕೊಂಚ ಮೊದಲು ಆಸ್ಟ್ರೇಲಿಯಾ ಸರಕಾರವೂ ಕಾನೂನುಬದ್ಧಗೊಳಿಸಿದೆ. ರಾಷ್ಟ್ರವ್ಯಾಪಿ ನಡೆದ ಅಂಚೆ ಮತದಾನದಲ್ಲಿ ಶೇ. 61.6ರಷ್ಟು ಜನರು ಸಲಿಂಗಿಗಳ ವಿವಾಹದ ಪರವಾಗಿ ಮತ ಚಲಾಯಿಸಿದ್ದರು. ಸಂಸತ್ತಿನಲ್ಲಿ ಚರ್ಚೆ ನಡೆದಾಗ 150ರಲ್ಲಿ ಈ ಕಾನೂನು ಜಾರಿಗೊಳಿಸುವುದನ್ನು ವಿರೋ ಧಿಸಿದ್ದು ಕೇವಲ ಐವರು! ಜನರ ಅಭಿಪ್ರಾಯ ಗೌರವಿಸಬೇಕಾದ್ದು ನಮ್ಮ ಕರ್ತವ್ಯ. ಫಲಿತಾಂಶ ನಿಸ್ಸಂದಿಗ್ಧವಾಗಿ ಬಂದಿದೆ ಮತ್ತು ಆಶ್ಚರ್ಯಕರವಾಗಿದೆ ಎಂದು ಆಸ್ಟ್ರೇಲಿಯಾದ ಪ್ರಧಾನಿ ಮಾಲ್ಕಮ್ ಟರ್ನ್ಬುಲ್ ಪ್ರತಿಕ್ರಿಯಿಸಿದ್ದಾರೆ.
ಚರ್ಚೆ ಹುಟ್ಟುಹಾಕಿದ ತೀರ್ಪು
1861ರಲ್ಲಿ ರಚನೆಯಾದ ಭಾರತೀಯ ದಂಡ ಸಂಹಿತೆ ಕಲಂ 377ರ ಪ್ರಕಾರ ಪರಸ್ಪರ ಒಪ್ಪಿಗೆಯ ಸಲಿಂಗ ಕಾಮವೂ ಶಿûಾರ್ಹ ಅಪರಾಧ. ಇದನ್ನು ಪ್ರಶ್ನಿಸಿ ಅನೇಕ ಸಂಘಟನೆಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿ, ವಯಸ್ಕರು ಪರಸ್ಪರ ಒಪ್ಪಿಗೆಯ ಮೇರೆಗೆ ನಡೆಸುವ ಸಲಿಂಗ ಕಾಮವು ಅಪರಾಧವಲ್ಲ ಎಂದು 2009ರ ಜುಲೈ 2ರಂದು ದೆಹಲಿ ಹೈಕೋರ್ಟ್ ತೀರ್ಪು ನೀಡಿತ್ತು. ನ್ಯಾ| ಅಜಿತ್ ಪ್ರಕಾಶ್ ಶಾ ಮತ್ತು ನ್ಯಾ| ಎಸ್. ಮುರಳೀಧರ್ ಅವರನ್ನು ಒಳಗೊಂಡ ಪೀಠ, ಸಂವಿಧಾನದ ಪ್ರಕಾರ ಭಾರತೀಯ ರಿಗೆ ಸಮಾನ ಹಕ್ಕು ನೀಡಬೇಕು. ಅವರು ಇಷ್ಟದಂತೆ ಬದುಕಲು ಅವಕಾಶ ಮಾಡಿಕೊಡಬೇಕು. ಶಿಕ್ಷೆಯ ಮೂಲಕ ಹಕ್ಕನ್ನು ದಮನಿಸುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟು, ಸಲಿಂಗ ಕಾಮವನ್ನು ಅಪರಾಧ ಎಂದು ಪರಿಗಣಿಸುವ ಭಾರತೀಯ ದಂಡ ಸಂಹಿತೆ ಕಲಂ 377ನ್ನು ರದ್ದುಪಡಿಸಿತ್ತು.
ಈ ತೀರ್ಪನ್ನು ಪ್ರಶ್ನಿಸಿ ಅಖೀಲ ಭಾರತ ಚರ್ಚ್‌ಗಳ ಸಂಘ, ಅಖೀಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಮತ್ತು ಇತರರು ಸಲ್ಲಿಸಿದ ಮೇಲ್ಮನವಿಯನ್ನು ಪರಿಶೀಲಿಸಿದ ಸುಪ್ರೀಂ ಕೋರ್ಟ್, 2013ರಲ್ಲಿ ದೆಹಲಿ ಹೈಕೋರ್ಟ್ ತೀರ್ಪನ್ನು ರದ್ದುಪಡಿ ಸಿತ್ತು. ಭಾರತೀಯ ದಂಡ ಸಂಹಿತೆಯ ಕಲಂ 377 ಸಹಿತ ಯಾವುದೇ ಕಲಂ ರದ್ದುಪಡಿಸುವ ಅಧಿಕಾರ ಸಂಸತ್ತಿನದು. ಕಾನೂನು ತಿದ್ದುಪಡಿ ಮೂಲಕ ಸಲಿಂಗ ಸಂಗ ಮತ್ತು ವಿವಾಹವನ್ನು ನ್ಯಾಯಬದ್ಧಗೊಳಿಸುವಂತೆ ಸೂಚಿಸಿ, ಚೆಂಡನ್ನು ಸರ್ಕಾರದ ಅಂಗಳಕ್ಕೆ ತಳ್ಳಿತ್ತು.
ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸಿದ 26ನೇ ರಾಷ್ಟ್ರ ವಾಗಿ ಆಸ್ಟ್ರೇಲಿಯಾ ಸೇರಿಕೊಂಡ ಬೆನ್ನಲ್ಲೇ ಭಾರತವೂ ಅಂಥ ದ್ದೊಂದು ಕ್ರಾಂತಿಕಾರಿ ಮತ್ತು ಅಷ್ಟೇ ವಿವಾದಾತ್ಮಕ ಕ್ರಮಕ್ಕೆ ನಾಂದಿ ಹಾಡುವ ಸಾಧ್ಯತೆಯ ಸುಳಿವು ಸಿಗುತ್ತಿದೆ. “ಭಾರತದಲ್ಲಿ ಸಲಿಂಗ ಸಂಗ ಮತ್ತು ವಿವಾಹವನ್ನು ಅಪರಾಧವೆಂದು ಪರಿಗಣಿಸುವ ಐಪಿಸಿ ಸೆಕ್ಷನ್ 377ನ್ನು ರದ್ದು ಮಾಡಬಹುದೆಂಬ ಅಭಿಪ್ರಾಯ ಚರ್ಚೆ ಹಾಗೂ ಸಮಾಲೋಚನೆಗಳಲ್ಲಿ ವ್ಯಕ್ತವಾಗುತ್ತಿದೆ. ತೃತೀಯ ಲಿಂಗಿಗಳ ಹಕ್ಕುಗಳಿಗೆ ಸಂಬಂಧಿಸಿ ಡಿಎಂಕೆ ನಾಯಕ ತಿರುಚ್ಚಿ ಶಿವ ಮಂಡಿಸಿದ ಖಾಸಗಿ ಮಸೂದೆ ರಾಜ್ಯಸಭೆಯಲ್ಲಿ ಅಂಗೀಕಾರ ಪಡೆದಿದೆ. ಲೋಕಸಭೆಯಲ್ಲೂ ಸಮ್ಮತಿಯ ಮುದ್ರೆ ಬಿದ್ದರೆ ಸೆಕ್ಷನ್ 377 ಅಪ್ರಸ್ತುತವಾಗಲಿದೆ’ ಎಂದು ಅವರು ಹೇಳಿದ್ದಾರೆ. ಲೋಕಸಭೆಯಲ್ಲಿ ಶೋಭಾ ಕರಂದ್ಲಾಜೆ ಸಹಿತ ಮೂವರು ಸಂಸದರು ಬೆಂಬಲಿಸಿರುವ ತೃತೀಯ ಲಿಂಗಿಗಳ ಕುರಿತಾದ ಮಸೂದೆ ಶಿಕ್ಷಣ, ಉದ್ಯೋಗ, ಆರ್ಥಿಕ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಹಕ್ಕುಗಳಿಗೆ ಸಂಬಂಧಿಸಿದ್ದು. ಅದರಲ್ಲಿ ಲೈಂಗಿಕ ಹಕ್ಕಿನ ಪ್ರಸ್ತಾಪವಿಲ್ಲ ಎಂಬುದೂ ಉಲ್ಲೇಖನೀಯ.
ಕರ್ನಾಟಕ ಕ್ವೀರ್ ಹಬ್ಬ
ಬೆಂಗಳೂರು ಮೂಲದ ಸಿಎಸ್‌ಎಂಆರ್ ಸಂಸ್ಥೆ ಸಲಿಂಗಿ, ಉಭಯಲಿಂಗಿ, ತೃತೀಯ ಲಿಂಗಿ ಹಾಗೂ ಲೈಂಗಿಕ ಅಲ್ಪಸಂಖ್ಯಾತರ ಪ್ರಾತಿನಿಧಿಕ ಸಂಘಟನೆಯಾಗಿದ್ದು, 2008ರಿಂದ “ಬೆಂಗಳೂರು ಪ್ರçಡ್ ಮತ್ತು ಕರ್ನಾಟಕ ಕ್ವೀರ್ ಹಬ್ಬ’ವನ್ನು ಆಚರಿಸಿಕೊಂಡು ಬರುತ್ತಿದೆ. ಎಲ್‌ಜಿಬಿಟಿ ಒಕ್ಕೂಟದ ಸಹ ಸಂಸ್ಥಾಪಕ ಅಕ್ಕೆ„ ಪದ್ಮಸಾಲಿ, ಲೈಂಗಿಕ ಅಲ್ಪಸಂಖ್ಯಾತರ ಮೇಲೆ ನಿಗಾ ಇಡುವ ಕರ್ನಾಟಕ ಪೊಲೀಸ್ ಕಾಯ್ದೆ- 36(ಎ) ನಮ್ಮ ಮೂಲಭೂತ ಹಕ್ಕುಗಳ ಉಲ್ಲಂಘನೆ ಮಾಡುತ್ತಿದೆ. ಇದರ ಆಧಾರದಲ್ಲಿ ಪೊಲೀಸರು ಸುಳ್ಳು ಪ್ರಕರಣ ದಾಖಲು ಮಾಡುತ್ತಿದ್ದಾರೆ. ಸಮಾಜವೂ ನಿಕೃಷ್ಟವಾಗಿ ಕಾಣುವ ಲೈಂಗಿಕ ಅಲ್ಪಸಂಖ್ಯಾತರನ್ನು ಶೋಷಿಸಲು ಬಳಕೆಯಾ ಗುತ್ತಿರುವ ವಿಕ್ಟೋರಿಯಾ ಕಾಲದ ಐಪಿಸಿ ಕಲಂ 377 ಹಾಗೂ ಕರ್ನಾಟಕ ಪೊಲೀಸ್ ಕಾಯ್ದೆ- 36(ಎ)ಯನ್ನು ತೆಗೆದುಹಾಕಿದರೆ ನಮ್ಮ ಹೋರಾಟಕ್ಕೆ ಅರ್ಥ ಬರುತ್ತದೆ ಎಂದು ಹೇಳಿದ್ದಾರೆ.
ಬದಲಾಗುತ್ತಿದೆಯೇ ದೃಷ್ಟಿಕೋನ?
ಸೃಷ್ಟಿಯ ನಿಯಮ ಒಂದು ಗಂಡಿಗೆ ಒಂದು ಹೆಣ್ಣು ಎಂಬುದೇ ಆಗಿದೆ. ಇದಕ್ಕೆ ಹೊರತಾದ ಲೈಂಗಿಕ ಸಂಬಂಧಗಳು, ಸಲಿಂಗ ಕಾಮವೂ ಸೇರಿದಂತೆ, ಪ್ರಕೃತಿಗೆ ವಿರುದ್ಧವಾಗಿದ್ದು ಎಂಬ ಮನಸ್ಥಿತಿ ನಮ್ಮಲ್ಲಿದೆ. ಇದೇ ಸ್ಥಿತಿ ವಿದೇಶಗಳಲ್ಲೂ ಇತ್ತು. ಸದ್ಯ 26 ದೇಶಗಳಲ್ಲಿ ಕಾನೂನು ಸಮ್ಮತ ಎನಿಸಿರುವ ಸಲಿಂಗ ವಿವಾಹ ಮುಂದೆ ಭಾರತದಲ್ಲಿಯೂ ಸಿಂಧು ಎನಿಸಿದರೆ ಅಚ್ಚರಿಯಿಲ್ಲ.
ಲೈಂಗಿಕ ವಿಚಾರಗಳನ್ನು ಬಹಿರಂಗವಾಗಿ ಮಾತನಾಡಲು, ದಂಪತಿ ಅಲ್ಲದ ಗಂಡು – ಹೆಣ್ಣು ಜತೆಗಿರಲು ಅಂಜುವಷ್ಟು “ಮಡಿವಂತ’ವಾಗಿದ್ದ ನಮ್ಮ ಸಮಾಜದಲ್ಲೂ ಆಧುನಿಕ ಶಿಕ್ಷಣ ಹಾಗೂ ಪಾಶ್ಚಾತ್ಯರ ಪ್ರಭಾವದಿಂದಾಗಿ ನೈತಿಕ ವಿಚಾರಗಳು ಬದಲಾಗುತ್ತಿವೆ. ಲೈಂಗಿಕ ಸ್ವಾತಂತ್ರ್ಯ ನಿಧಾನವಾಗಿ ಬೇರೂರಿದೆ. ಸೂಕ್ತ “ಸಂಗಾತಿ’ಯ ಆಯ್ಕೆ, ವಿವಾಹ ರಹಿತ ಸಹಜೀವನ ಹಾಗೂ ಲೈಂಗಿಕ ಸಂಬಂಧ ತನ್ನ ಹಕ್ಕು ಎಂಬ ಭಾವನೆ ಬೆಳೆಯುತ್ತಿದೆ. ಆ ಸಂಗಾತಿ ಗಂಡೋ, ಹೆಣ್ಣೋ ಅಥವಾ ದ್ವಿಲಿಂಗಿಯೋ ಎಂಬ ಪ್ರಶ್ನೆ ಅಪ್ರಸ್ತುತವಾಗುತ್ತಿದೆ. ಸಮಾಜವೂ ಈ ಬದಲಾವ ಣೆಗಳಿಗೆ ಒಲ್ಲದ ಮನಸ್ಸಿನಿಂದಲೇ ಒಗ್ಗಿಕೊಳ್ಳುತ್ತಿದೆ. ಅಂತರ್ಜಾತಿ ಹಾಗೂ ಅಂತರ್‌ಧರ್ಮೀಯ ವಿವಾಹಗಳಿಗೂ ನಿರ್ಬಂಧವಿದ್ದ ಕಾಲ ಮರೆಯಾಗಿದೆ. ಸದ್ಯ ಅಕ್ರಮ ಎಂದು ಪರಿಗಣಿಸಿರುವ ಎಲ್ಲ ಸಂಬಂಧಗಳೂ ಗುಪ್ತ ವಾ ಗಿದ್ದರೆ, ಕೆಲವರು ಮಾತ್ರ ತಾನು “ಗೇ’ ಎಂದು ಬಹಿರಂಗವಾಗಿ ಹೇಳಿಕೊಳ್ಳುವ ಧೈರ್ಯ ತೋರಿಸುತ್ತಿದ್ದಾರೆ. ಇದರ ಪರಿಣಾಮವಾಗಿ ಸಲಿಂಗ ಕಾಮ – ವಿವಾಹಗಳೀಗ ಚರ್ಚೆಗೆ ಬಂದಿವೆ. ಗಮನಾರ್ಹ ಅಂಶವೆಂದರೆ ಸಿನೆಮಾ ರಂಗದಿಂದ ಸಲಿಂಗ ಕಾಮಕ್ಕೆ ಭಾರೀ ಬೆಂಬಲ ಸಿಗುತ್ತಿದೆ. ಅಂತೆಯೇ ಪ್ರಗತಿಪರರು ಮತ್ತು ಬುದ್ಧಿಜೀವಿಗಳು ಎಂದು ಕರೆಸಿಕೊಳ್ಳುವವರು ಕೂಡ ಜನರ ಮೂಲಭೂತ ಹಕ್ಕಿನ ವಿಚಾರದಡಿಯಲ್ಲಿ ಸಲಿಂಗ ಕಾಮವನ್ನು ಬಲವಾಗಿ ಸಮರ್ಥಿಸಿಕೊಳ್ಳುತ್ತಿದ್ದಾರೆ. ಸಲಿಂಗ ಕಾಮದಂತಹ ಅಸಹಜ ವಿಚಾರಗಳನ್ನು ಬೆಂಬಲಿಸುವುದೇ ವಿಚಾರವಾದ ಎಂಬ ಕಲ್ಪನೆಯೂ ಕೆಲವರಲ್ಲಿದೆ. ಹಾಗೇ ನೋಡಿದರೆ ಸಲಿಂಗ ಕಾಮದ ಕುರಿತು ಬಹಿರಂಗವಾಗಿ ಮಾತನಾಡಲು ಜನರಿಗೆ ನೈತಿಕ ಬಲ ಬಂದದ್ದೇ ಸಿನೆಮಾ ಮತ್ತು ಗ್ಲಾಮರ್ ಕ್ಷೇತ್ರದಿಂದ.
ಬಾಲಿವುಡ್ ನಟಿ ಸೆಲಿನಾ ಜೈಟ್ಲೀ ಸೇರಿದಂತೆ ಹಲವು ಮಂದಿ ಸಲಿಂಗಿಗಳನ್ನು ಬಹಿರಂಗವಾಗಿ ಬೆಂಬಲಿಸುತ್ತಿದ್ದಾರೆ. ನ್ಯಾಯಾಲಯ ಸಲಿಂಗ ಕಾಮ ಶಿಕ್ಷಾರ್ಹ ಅಪರಾಧ ಎಂದು ತೀರ್ಪು ನೀಡಿದಾಗ ಇವರೆಲ್ಲ ಭಾರತದ ಪಾಲಿಗೆ ಇಂದು ಕರಾಳ ದಿನ ಎಂದು ಪ್ರತಿಕ್ರಿಯಿಸಿದ್ದರು. ಈ ನಡುವೆ, ಸಲಿಂಗ ಕಾಮವನ್ನು ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸಿ, ಈ ಅಪರಾಧಕ್ಕೆ ಜೀವಾವಧಿ ಶಿಕ್ಷೆಯನ್ನೂ ವಿಧಿಸಬ ಹುದು ಎಂದು 2103ರಲ್ಲಿ ತಾನೇ ನೀಡಿದ್ದ ತೀರ್ಪನ್ನು ಮರು ಪರಿಶೀಲಿಸಲು ಸುಪ್ರೀಂ ಕೋರ್ಟ್ ಸಮ್ಮತಿಸಿದೆ. “ಐಪಿಸಿ ಸೆಕ್ಷನ್ 377 ಲೈಂಗಿಕ ಆಯ್ಕೆಯನ್ನು ಮೊಟಕು ಮಾಡುತ್ತಿದೆ. ಕಾನೂನು ಕ್ರಮದ ಭೀತಿಯಿಂದ ಲೈಂಗಿಕ ಸುಖದಿಂದ ವಂಚಿತರಾಗುತ್ತಿದ್ದೇವೆ’ ಎಂದು ಹತ್ತಕ್ಕೂ ಹೆಚ್ಚು ವರ್ಷಗಳಿಂದ ಸಹಜೀವನ ನಡೆಸುತ್ತಿರುವ ಸಲಿಂಗ ಜೋಡಿಯೂ ಸೇರಿ “ಎಲ್‌ಜಿಬಿಟಿ’ ಸಮುದಾಯದ ಐವರು ಸಲ್ಲಿಸಿದ್ದ ಪರಿಹಾರಾತ್ಮಕ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠ, ಐವರು ನ್ಯಾಯ ಮೂರ್ತಿಗಳಿರುವ ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಿದೆ. ಅರ್ಜಿದಾರರ ಆಕ್ಷೇಪಕ್ಕೆ ಪ್ರತಿಕ್ರಿಯೆ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಇದರಿಂದಾಗಿ ಲೈಂಗಿಕ ಅಲ್ಪ ಸಂಖ್ಯಾತರು, ಸಾಮಾಜಿಕ ಹೋರಾಟಗಾರರಲ್ಲಿ ಭರವಸೆಯ ಬೆಳಕು ಮೂಡಿದೆ. ಸಲಿಂಗ ಕಾಮವನ್ನು ಸಮರ್ಥಿಸುವವರ ವಾದಕ್ಕೆ ಬಲ ಬಂದಿರುವುದು ಸುಪ್ರೀಂ ಕೋರ್ಟ್ ಇತ್ತೀಚೆಗೆ ಖಾಸಗಿತನವನ್ನು ಎತ್ತಿ ಹಿಡಿದು ನೀಡಿರುವ ತೀರ್ಪು. ಮದುವೆ, ಸಂಸಾರ ಇವೆಲ್ಲ ಜನರ ಖಾಸಗಿ ಹಕ್ಕುಗಳಾದರೆ ಯಾರನ್ನು ಮದುವೆ ಆಗಬೇಕೆನ್ನುವುದು ಕೂಡ ಈ ಹಕ್ಕಿನ ವ್ಯಾಪ್ತಿಯಲ್ಲಿ ಬರುತ್ತದೆ ಎನ್ನುವುದು ಅವರ ವಾದ.
ಲೈಂಗಿಕ ಸ್ವಾತಂತ್ರ್ಯದ ಹೆಸರಿನಲ್ಲಿ ಅಪ್ರಾಪ್ತರು ಹಾಗೂ ಅಮಾ ಯಕರು ಬಲಿಯಾಗುವುದನ್ನು ತಪ್ಪಿಸಲು ಕಾನೂನಿನ ಚೌಕಟ್ಟು ರಚಿಸುವ ಅನಿವಾರ್ಯತೆಯ ಜತೆಗೆ ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳು, ಅವರ ಸ್ವಾತಂತ್ರ್ಯ ಹಾಗೂ ಘನತೆಯ ರಕ್ಷಣೆ ಜತೆಗೆ ನಿಟ್ನೇತಿಯ ವಾತಾವರಣ ಸೃಷ್ಟಿಸುವ ನಿಟ್ಟಿನಲ್ಲಿ ಈ ನಿರ್ಧಾರ ಮಹತ್ವ ಪಡೆದಿದೆ. ಜತೆಗೆ, ಸಲಿಂಗ ಕಾಮ ಹಾಗೂ ವಿವಾಹದ ಕುರಿತು ಇದು ಬದಲಾಗುತ್ತಿರುವ ಭಾರತೀಯ ಮನಸ್ಥಿತಿಯ ದ್ಯೋತಕವೇ ಎಂಬ ಕುತೂಹಲವೂ ಮೂಡಿದೆ.
ಅನಂತ ಹುದೆಂಗಜೆ