“ನೈಸರ್ಗಿಕ ಮನೋವಿಜ್ಞಾನ’ವನ್ನು ಕೆದಕಲು ಹೊರಟಾಗ…
Team Udayavani, Oct 11, 2019, 5:22 AM IST
ಉಡುಪಿ ಜಿಲ್ಲೆ ಬ್ರಹ್ಮಾವರ ಸಮೀಪದ ಮಟಪಾಡಿ ಗ್ರಾಮದ ಬೋಳುಗುಡ್ಡೆ ಎಂಬ ಪ್ರದೇಶದಲ್ಲಿ ಒಂದು ಬಬ್ಬುಸ್ವಾಮಿ ಸನ್ನಿಧಾನವಿದೆ. ಹಿಂದೆ ನೈಸರ್ಗಿಕವಾಗಿ ಮರದ ಬುಡದಲ್ಲಿ ಈ ಸನ್ನಿಧಾನವಿತ್ತು. ದಲಿತ ಸಮುದಾಯಕ್ಕೆ ಸೇರಿದ ತಿಮ್ಮ ಮತ್ತು ನರ್ಸಿ ದಂಪತಿಯ ಮಗಳು ಲಕ್ಷ್ಮೀ ಚಿಕ್ಕಪ್ರಾಯದಲ್ಲಿ ಮನೆ ಕೆಲಸಕ್ಕೆಂದು ಮುಂಬೈಗೆ ಹೋದವರು ಬಂದಿರಲಿಲ್ಲ. ಲಕ್ಷ್ಮೀಯನ್ನು ಕರೆ ತರಿಸಬೇಕೆಂದು ತಿಮ್ಮ ಮತ್ತು ಇನ್ನೊಬ್ಬ ಮಗಳು ಗುಲಾಬಿ ಬಬ್ಬುಸ್ವಾಮಿ ದೈವದ ದರ್ಶನದಲ್ಲಿ ಕೇಳಲು ಹೋದರು. ಮೂಡುಬೆಳ್ಳೆಯ ಸೂರ್ಯ ಆಗ ಪಾತ್ರಿಗಳು. ಆಗ ದೈವದ ಪಾತ್ರಿಗಳು “ನಿನಗೆ ಮಗಳನ್ನು ಕರೆಸಿಕೊಡುತ್ತೇನೆ. … ತಿಂಗಳ ..ದಿನಗಳ ಬಳಿಕ ಆಕೆ ಬರುತ್ತಾಳೆ. ಅವಳು ದೈಹಿಕವಾಗಿ ಕೃಶಳಾಗಿದ್ದಾಳೆ. ಆಕೆಗೆ ಮದುವೆಯಾಗಿ ಮೂರು ಮಕ್ಕಳಿದ್ದಾರೆ. ಆಕೆ ಸಂಜೆ ಹೊತ್ತಿಗೆ ಬರುತ್ತಾಳೆ. ಮನೆಯಿಂದ ಬ್ರಹ್ಮಾವರದ ಪೇಟೆಗೆ ತಾಯಿ ಹೋಗುವಾಗ ದಾರಿಯಲ್ಲಿ ಇದಿರಾಗಿ ಮಗಳು ಸಿಗುತ್ತಾಳೆ. ಮಗಳು ಕೃಶಳಾದ ಕಾರಣ ತಾಯಿಗೆ ಪರಿಚಯ ಸಿಗುವುದಿಲ್ಲ. ಮಗಳಿಗೆ ತಾಯಿಯ ಪರಿಚಯ ಸಿಗುತ್ತದೆ’ ಎಂಬ ನುಡಿ ಕೊಡುತ್ತಾರೆ. ಈ ಅವಧಿಯಲ್ಲಿ ಅದೇ ರೀತಿ ಸಂಭವಿಸಿತು. ನರ್ಸಿ ಮನೆಯಿಂದ ಪೇಟೆಗೆ ಗದ್ದೆಯ ಅಂಚುಕಟ್ಟಿನಲ್ಲಿ ಸಂಜೆ ಹೋಗುವಾಗ ಒಬ್ಬಳು ಮಹಿಳೆ ಜೋಳಿಗೆಯಲ್ಲಿ ಒಂದು ಮಗುವನ್ನು ಹಾಕಿಕೊಂಡು ಇನ್ನಿಬ್ಬರು ಚಿಕ್ಕ ಮಕ್ಕಳೊಂದಿಗೆ ಬರುವಾಗ ಸಹಜವಾಗಿ ಮೂರು ಜನರಿದ್ದ ಕಾರಣ ದಾರಿ ಬಿಡುತ್ತಾಳೆ. ತಾಯಿಗೆ ಮಗಳ ಪರಿಚಯವಾಗುವುದಿಲ್ಲ. ರೂಪ ಹಾಗಿತ್ತು! ಆದರೆ ಮಗಳಿಗೆ ಮಾತ್ರ ತಾಯಿಯ ಪರಿಚಯವಾಗಿ “ಅಬಾ! (ಗ್ರಾಮೀಣ ಪ್ರದೇಶದಲ್ಲಿ ತಾಯಿಯನ್ನು ಕುಂದಾಪ್ರ ಕನ್ನಡದಲ್ಲಿ ಕರೆಯುವ ಭಾಷೆ) ನನ್ನ ಗುರ್ತ ಸಿಕ್ಕಲ್ಯಾ? ನಾನ್ ಲಕ್ಷ್ಮೀ. ಆಗ ನಿಂಗೆ ಲಕ್ಷ್ಮೀ ಗುರ್ತ್ ಸಿಗತ್ತ್. ಈಗ ಮಾತ್ರ ಲಕ್ಷ್ಮಿ ಗುರ್ತ್ ಸಿಕ್ಕುದಿಲ್ಲೆ ಅಲ್ದಾ?’ ಎಂದಾಗ ತಾಯಿ ನರ್ಸಿಗೆ ಶಾಕ್ ಆಯ್¤. (ಶಾಕ್ ಆಯ್¤ ಎಂಬುದು ನರ್ಸಿ ಈಗ ಹೇಳುವ ಮಾತು). “ಮಗೂನ ಕಸ್ಕಂಡ್ ಚಂಚ್‌ಕಂಡ್ ಪೇಟೆಗೆ ಹೋಗೆª ಸೀದಾ ಮನೆ ಕಡೆ ಬಂದೆ’ ಎಂದು ಆಗಿನ ಘಟನೆಯನ್ನು, ಘಟನೆ ನಡೆದ ಸ್ಥಳವನ್ನೂ ನರ್ಸಿ ಈಗ ನೆನಪಿಗೆ ತಂದುಕೊಂಡು ಹೇಳುತ್ತಾರೆ. ಇದು ಎಷ್ಟು ವರ್ಷದ ಹಿಂದಿನ ಘಟನೆ ಎಂದು ಕರಾರುವಾಕ್ಕಾಗಿ ಹೇಳಲು ಒಂದು ಸರಳ ಲೆಕ್ಕಾಚಾರವಿದೆ. ಆಗ ಬರುವಾಗ ಇದ್ದ ದೊಡ್ಡ ಮಗ ರಾಜುವಿಗೆ ಈಗ 41 ವರ್ಷ. ಆಗ ಬರುವಾಗ ಸುಮಾರು ಐದು ವರ್ಷದ ಬಾಲಕ. ಈ ಲೆಕ್ಕಾಚಾರದಲ್ಲಿ ಇದು 36 ವರ್ಷಗಳ ಹಿಂದೆ ನಡೆದ ಘಟನೆ ಎಂದು ನಿರ್ಧಾರಕ್ಕೆ ಬರಬಹುದು. ಈಗ ರಾಜು ಮನೆಯಲ್ಲಿದ್ದಾರೆ. ಇನ್ನೊಬ್ಬ ಮಗ ರಮೇಶ ಆಟೋರಿಕ್ಷಾ ವೃತ್ತಿಯಲ್ಲಿದ್ದಾರೆ. ಚಿಕ್ಕಪ್ರಾಯದಲ್ಲಿ ಹೋದವಳು ಮೂರು ಮಕ್ಕಳ ತಾಯಿಯಾಗಿ ಬರುವಾಗ ಎಷ್ಟು ವರ್ಷಗಳ ಅಂತರವಿರಬಹುದೆಂದು ಯೋಚಿಸಿಕೊಳ್ಳಿ.
ಇದು ಸಿನೆಮಾ ಕಥೆಯೆ? ಪೌರಾಣಿಕ ಕಥೆಯೆ? ಹೀಗೆಲ್ಲ ಹೇಳಿದಂತೆ ನಡೆಯಲು ಸಾಧ್ಯವೆ? ಎಂದು ಪ್ರಶ್ನೆ ಬರಬಹುದು. ಒಂದೋ ಇದೆಲ್ಲಕ್ಕೂ ಸಾಕ್ಷಿಯಾಗಿರುವ 85ರ ವಯೋವೃದ್ಧೆ ಮುಗೆœ ನರ್ಸಿ ಮಾತನ್ನು ಒಪ್ಪಬೇಕು, ಇಲ್ಲವೆ ಇವರ, ಪರಿಸರದವರ, ಮನೆಯವರ ಸಾಕ್ಷಿಗಳನ್ನು ಅಲ್ಲಗಳೆಯಬೇಕು. ಈ ವಂಡರ್ ಭೇದಿಸುವವರಿದ್ದರೆ ನರ್ಸಿಯವರನ್ನು ಭೇಟಿಯಾಗಬಹುದು.
***
ಕಾಸರಗೋಡು ಜಿಲ್ಲೆ ಮಂಜೇಶ್ವರದ ಶ್ರೀಅನಂತೇಶ್ವರ ದೇವಸ್ಥಾನದಲ್ಲಿ ಹಿಂದೆ ದರ್ಶನ ಪದ್ಧತಿ ಇತ್ತು. ಇದು ಸುಮಾರು 1930ರಲ್ಲಿ ನಿಂತು ಹೋಯಿತು. ಅದು ಸಹಜವಾಗಿ ನಿಂತುಕೊಂಡು ಮಾಡುತ್ತಿದ್ದ ದರ್ಶನವಲ್ಲ. ಕಾಲ ಹೆಬ್ಬೆರಳ ತುದಿಯಲ್ಲಿ ನಿಂತುಕೊಂಡು ಮಾಡುತ್ತಿದ್ದ ದರ್ಶನ. ರಾತ್ರಿ ಇಡೀ ಸುಮಾರು 10 ಕೆ.ಜಿ. ತೂಕದ ದೇವರ ವಿಗ್ರಹವನ್ನು ತಲೆ ಮೇಲೆ ಹೊತ್ತು ನಡೆಯುತ್ತಿದ್ದ “ದೇವದರ್ಶನ’. ಮಾತಿರಲಿಲ್ಲ. ಕೈಸನ್ನೆ ಮೂಲಕ ಹೇಳುವುದನ್ನು ಅನುವಾದಿಸಲು ನುರಿತವರು ಇರುತ್ತಿದ್ದರು. 1850ರ ಸುಮಾರಿಗೆ ಹಿಂದೊಮ್ಮೆ ದರ್ಶನ ನಿಂತು ಹೋಗಿತ್ತು. ದರ್ಶನ ಮತ್ತೆ ಬರುವಂತೆ ಆಗಲು ಆಗಿನ ಶ್ರೀಕಾಶೀ ಮಠಾಧೀಶರಾದ ಶ್ರೀಭುವನೇಂದ್ರತೀರ್ಥ ಸ್ವಾಮೀಜಿಯವರು ಮೊಣಕಾಲಿನಲ್ಲಿ ರಕ್ತ ಸುರಿಯುತ್ತಿದ್ದರೂ (ಒಳಸುತ್ತಿನಲ್ಲಿ ಈಗಲೂ ಮಣ್ಣಿನ ನೆಲ) ಸುಮಾರು 600-700 ಸುತ್ತು ಬಂದು (ಪ್ರತಿ ಸುತ್ತಿಗೆ ಒಂದು ಬಾರಿ ವಿಷ್ಣುಸಹಸ್ರನಾಮ ಪಾರಾಯಣ ಮಾಡುತ್ತ) ಪ್ರಾರ್ಥಿಸಿದಾಗ ಪಾತ್ರಿಗೆ ಆವೇಶ ಬಂದು “ಮುಂದಿನ ದಿನಗಳಲ್ಲಿ ಸಂಸ್ಥಾನದಿಂದ ಹೀಗೆ ಒತ್ತಡ ತರಬಾರದು. ಧರ್ಮಸಂಕಟಕ್ಕೆ ಸಿಲುಕಿಸಿದಂತೆ ಆಗುತ್ತದೆ’ ಎಂದು ನುಡಿದರಂತೆ. ಅನಂತರ ಸುಮಾರು 1930ರಲ್ಲಿ ದರ್ಶನದ ನುಡಿಯ ಸಮರ್ಪಕ ಅನುಷ್ಠಾನವಾಗದ ಕಾರಣ ನಿಂತದ್ದು ಮತ್ತೆ ಬರಲಿಲ್ಲ, ಆಗ “18 ಪೇಟೆಯ ಜನರು ಕಷ್ಟಕಾಲದಲ್ಲಿ ಅಂತಃಕರಣಪೂರ್ವಕವಾಗಿ ಪ್ರಾರ್ಥನೆ ಮಾಡಿದರೆ ಮತ್ತೆ ಬರುತ್ತೇನೆ, ಈಗಲೂ ಸಂಕಷ್ಟದಲ್ಲಿ ಪ್ರಾರ್ಥಿಸಿದರೆ ಅಭಯ ನೀಡುತ್ತೇನೆ’ ಎಂದು ನಿಂತು ಹೋಯಿತು. “ಮತ್ತೆ ದರ್ಶನವನ್ನು ಬರಿಸಲು ನಿರಂತರ ಪ್ರಯತ್ನ ನಡೆಯುತ್ತಲೇ ಇದೆ. ಒಂದು ವೇಳೆ ದರ್ಶನ ಬಂದರೂ ಪಾತ್ರಿಗಳ ಕೈಸನ್ನೆಯನ್ನು ಡೀಕೋಡ್ ಮಾಡುವವರ ಕೊರತೆಯೂ ಇದೆ’ ಎನ್ನುತ್ತಾರೆ ದೇವಸ್ಥಾನದ ಮೊಕ್ತೇಸರರಾಗಿ ಸೇವೆ ಸಲ್ಲಿಸಿದ್ದ ಕೊಂಚಾಡಿ ಗುರುದತ್ ಕಾಮತ್.
ಈಗಲೂ ಈ ದರ್ಶನದ ಬಗೆಗೆ ಅನೇಕ ದಂತಕಥೆಗಳಿವೆ. ಅದರಲ್ಲಿ ಒಂದು ಹೀಗಿದೆ: ಕೊಚ್ಚಿಕಾರ್ ಪೈ ಕುಟುಂಬ ಪ್ರಸಿದ್ಧ ಮನೆತನ. ಇವರ ಮನೆತನದಲ್ಲಿ ಹಿಂದೊಮ್ಮೆ ಸಂತತಿ ಇರಲಿಲ್ಲ. ದರ್ಶನದಲ್ಲಿ ಕೇಳಲು ಹೋದಾಗ ಪಾತ್ರಿಗಳು ದಿನ ಮುಂದೂಡುತ್ತಿದ್ದರು. ಒಂದು ಬಾರಿ ದಂಪತಿಗಳು “ಇನ್ನೆಷ್ಟು ಬಾರಿ ಬರಬೇಕು’ ಎಂದು ಸ್ವಲ್ಪ ಕೋಪಿಸಿಕೊಂಡರಂತೆ. ಕುಳಿತುಕೊಳ್ಳಲು ಸೂಚನೆ ಬಂತು. ಅದೇ ದಿನ ರಾತ್ರಿ ಕೊಚ್ಚಿಯಿಂದ ಒಂದು ಬಡಕುಟುಂಬ ಬಡತನದ ಬೇಗೆಯಿಂದ ಪಾರಾಗಲು ನಾಲ್ಕಾರು ಮಕ್ಕಳ ಸಂಸಾರದೊಂದಿಗೆ ಅಲ್ಲಿಗೆ ಬಂದಿತ್ತು. ಬೆಳಗ್ಗೆ ವರೆಗೂ ಏನೂ ಸೂಚನೆ ಇಲ್ಲದಾಗ ಪೈ ದಂಪತಿಗಳು ಮತ್ತೆ ಮುಂದೆ ಹೋದರು. ಅದೇ ಹೊತ್ತಿಗೆ ಒಂದು ಮಗು ಓಡಿ ಬಂದು “ಅಮ್ಮಾ’ ಎಂದು ಪತ್ನಿಯ ಸೀರೆ ಸೆರಗು ಹಿಡಿದು ಎಳೆಯಿತು. ಅತ್ತ ಮಗುವನ್ನು ಹುಡುಕಿಕೊಂಡು ಮಗುವಿನ ತಂದೆತಾಯಿಗಳು ಬಂದರು. ಅಲ್ಲಿಯೇ ಪಾತ್ರಿಗಳು ಇತ್ಯರ್ಥ ಪಡಿಸಿದ್ದು ಹೀಗಿತ್ತು: “ನಿನಗೆ ಸಂಪತ್ತು ಇದೆ, ಮಕ್ಕಳು ಇಲ್ಲ. ಅವರಿಗೆ ಮಕ್ಕಳು ಇದ್ದಾರೆ, ಬದುಕಲು ಸಂಪತ್ತು ಇಲ್ಲ. ಮಕ್ಕಳು ಇಲ್ಲದವರಿಗೆ ಮಕ್ಕಳು ಇದ್ದವರು ಒಂದು ಮಗುವನ್ನು ಕೊಡಬೇಕು. ಸಂಪತ್ತು ಇಲ್ಲದವರಿಗೆ ಅವರ ಜೀವನಕ್ಕೆ ಬೇಕಾದಷ್ಟು ದ್ರವ್ಯವನ್ನು ಸಂಪತ್ತು ಇದ್ದವರು ಕೊಡಬೇಕು’. ಈಗ ಚಾಲ್ತಿಯಲ್ಲಿರುವ ಸಾಮಾಜಿಕ ನ್ಯಾಯಕ್ಕೆ ಹೋಲಿಸಬಹುದಾದ ಈ ಒಡಂಬಡಿಕೆಯಿಂದ ಕೊಚ್ಚಿಕಾರ್ ಕುಟುಂಬದ ಹೆಸರು ಬಂತು. ಇದು ಕೊಚ್ಚಿಕಾರ್ ಕುಟುಂಬದ ಸದಸ್ಯರಿಗೆ ಗೊತ್ತಿಲ್ಲದಿದ್ದರೂ ದೇವಸ್ಥಾನದ ಮೂಲದವರಿಗೆ ಗೊತ್ತಿದೆ.
***
ಇಂತಹ ಅನೇಕ “ಸಿದ್ಧಿ ಸಾಧನೆ’ ಪಾತ್ರಿಗಳು ವಿವಿಧ ಸಮುದಾಯಗಳಲ್ಲಿದ್ದರು. ಇಂತಹವರಲ್ಲಿ ಇತ್ತೀಚಿನ ದಶಕಗಳಲ್ಲಿದ್ದ ಸಾಲಿಗ್ರಾಮ ಕಾರ್ಕಡದ ಬೋಳಪ್ಪಯ್ಯ (ನರಸಿಂಹ ಉಪಾಧ್ಯ) ಅವರನ್ನು ಉಲ್ಲೇಖೀಸಬಹುದು. ಇಂತಹ ಗಟ್ಸ್ (ಸವಾಲೆಸೆಯುವ ಧೈರ್ಯ) ಸಗ್ರಿ ಅನಂತ ಸಾಮಗರಿಗೆ (ಈಗಿನವರ ಅಜ್ಜ), ಅಲ್ತಾರು ಉಡುಪರು ಮೊದಲಾದವರಿಗೆ ಇತ್ತು.
ದಲಿತರಿಂದ ಹಿಡಿದು ಬ್ರಾಹ್ಮಣರ ವರೆಗೆ ಒಂದೇ ತೆರನಾದ ಜೀವನದ “ಆಂತರಿಕ ಶಕ್ತಿ ಪ್ರವಾಹ’ ಹರಿಯುತ್ತಿತ್ತು ಎಂದು ನಿರ್ಧಾರಕ್ಕೆ ಬರಲು ಮೇಲಿನ ಕೆಲವು ಉದಾಹರಣೆಗಳು ಸಾಕಾಗಬಹುದು. ಹಿಂದು-ಮುಸ್ಲಿಮರ ಏಕತೆಗೆ ಕಾರಣವಾದ ಅಥವಾ ಎರಡರ ಸಂಸ್ಕೃತಿಯನ್ನೂ ಒಳಗೊಂಡ ಸೂಫಿತಣ್ತೀದ (ಸೂಫಿಸಂ) ಸಂತರ ಬದುಕಿನಲ್ಲಿಯೂ ಇಂತಹ ಶಕ್ತಿಗಳಿದ್ದವು ಎಂಬುದನ್ನು ಹಂಪಿ ವಿ.ವಿ. ಹಿರಿಯ ಪ್ರಾಧ್ಯಾಪಕ, ಚಿಂತಕ ಡಾ|ರಹಮತ್ ತರಿಕೆರೆ ಅವರು “ಕರ್ನಾಟಕದ ಸೂಫಿಗಳು’ ಪುಸ್ತಕದಲ್ಲಿ ವಿವರಿಸಿದ್ದಾರೆ. ಇವುಗಳ ಹಿಂದಿನ ಗುಟ್ಟು ಏನು?
***
ಡಾ|ಶಿವರಾಮ ಕಾರಂತರು ಪುತ್ತೂರಿನಲ್ಲಿ 1930, 40ರ ದಶಕದಲ್ಲಿದ್ದಾಗ ವೃದ್ಧ ದಂಪತಿ ಬೇಡಲು ಬರುತ್ತಿದ್ದರು. ಗುರುವಾರ ಬರುತ್ತಿದ್ದ ಕಾರಣ ಅವರನ್ನು “ಗುರುವ’ ಎಂದು ಕರೆಯುತ್ತಿದ್ದರು. ಗುರುವಾರ ಮಧ್ಯಾಹ್ನ ಅವರಿಗೆ ಕಾರಂತರ ಮನೆಯಲ್ಲಿ ಊಟ ನಡೆಯುತ್ತಿತ್ತು. ಮುಂದೊಂದು ದಿನ ಒಬ್ಬರೇ ಬರುವಾಗ ಕೇಳಿದ ಪ್ರಶ್ನೆಗೆ ಉತ್ತರ ಹೀಗಿತ್ತು: “ಪತ್ನಿಯನ್ನು ಕಳುಹಿಸಿಕೊಟ್ಟ’ನಂತೆ.
ಅನಂತರ ಗುರುವ ನಿಧನ ಹೊಂದಿದರು. ಸಾಯುವ ಎರಡು ಗಳಿಗೆ ಮೊದಲು ಮೊಮ್ಮಕ್ಕಳನ್ನು ಕರೆದು ತಾನು ತೀರಿಹೋದ ಬಳಿಕ ಕಾರಂತರ ಮನೆಗೆ ಹೋಗಿ “ಗುರುವ ಕಂತಿದ’ ಎಂದು ತಿಳಿಸಬೇಕೆಂದು ಹೇಳಿದಂತೆ ಸುದ್ದಿ ಮುಟ್ಟಿತು. “ಆ ಸುದೀರ್ಘ ಅನ್ಯೋನ್ಯ ದಾಂಪತ್ಯ, ಆ ದುರ್ಬಲ ಪತ್ನಿಯನ್ನು ವೃದ್ಧ ಉಪಚರಿಸುತ್ತಿದ್ದ ರೀತಿ ಬೆರಗುಗೊಳಿಸಿತ್ತು. ಕೊನೆಯ ಬೀಳ್ಕೊಡುಗೆ ಮಾತನ್ನು ಹೇಳಿ ಕಳುಹಿಸಬೇಕಾದರೆ ಆಂತರಿಕ ಸಜ್ಜನಿಕೆ ಎಷ್ಟು ಹಿರಿದಿದ್ದಿರಲಾರದು?’ ಎಂದು ಕಾರಂತರು ಆತ್ಮಕಥನದಲ್ಲಿ ಹೇಳಿಕೊಂಡಿದ್ದಾರೆ.
***
ಇಂದು ಏನಾಗಿದೆ? ಯಾವುದಕ್ಕೂ ಕರೆನ್ಸಿ ನೋಟುಗಳಿಗೆ ಕೊರತೆ ಇಲ್ಲ, ನೋಟು ಬ್ಯಾನ್ ಮಾಡಿದರೂ! ಕೊರತೆ ಇರುವುದು ಕಾರಂತರ ಭಾಷೆಯಲ್ಲಿ ಹೇಳುವುದಾದರೆ “ಆಂತರಿಕ ಸಜ್ಜನಿಕೆ’. ಎಲ್ಲ ವರ್ಗಗಳಲ್ಲಿಯೂ ಆಂತರಿಕ ಶಕ್ತಿ ಜರ್ರನೆ ಉಡುಗಿ ಹೋಗಿದೆ. ಆಗಲೂ ಈ ವಿಷಯದಲ್ಲಿ ಸಮಾನತೆ ಇತ್ತು/ ಈಗಲೂ ಇದೆ ಅಂದರೆ ಆಗ ಎಲ್ಲ ವರ್ಗದ ಬಹುತೇಕರಲ್ಲಿ ಸಜ್ಜನಿಕೆ ಇತ್ತು, ಈಗ ಎಲ್ಲ ವರ್ಗದ ಬಹುತೇಕರಲ್ಲಿ ಇಲ್ಲ ಎಂಬುದಕ್ಕೆ ಆಕ್ಷೇಪಗಳಿರಲಾರದು. ಸಜ್ಜನಿಕೆ ಹಿಂದೆ ಸರಾಸರಿಗಿಂತ ಹೆಚ್ಚಿಗೆ ಇತ್ತು, ಈಗ ಸರಾಸರಿಗಿಂತ ತೀರಾ ಕಡಿಮೆ ಇದೆ. ವಿಭಿನ್ನ ಸಿದ್ಧಾಂತವಾದಿಗಳು ಹೇಳುವ “ಬಹುತ್ವ’= “ಬಹುಸಂಸ್ಕೃತಿಗಳು’ ಮತ್ತು “ವಿವಿಧತೆಯಲ್ಲಿ ಏಕತೆ’ ಈ ಘೋಷವಾಕ್ಯಗಳ ಸಾರ ಒಂದೇ ತೆರನಾಗಿ ಕಾಣುತ್ತದೆ. ಆದರೆ ಇವೆಲ್ಲ ಆಯಾ ಸಿದ್ಧಾಂತಿಗಳಲ್ಲಿ ಆಚರಣೆಗಿಂತ ವಾದಗಳಿಗೆ ಬಳಕೆಯಾಗುತ್ತಿದೆ. ಮನೆಗಳಿರಲಿ, ಪೂಜಾ ಸ್ಥಾನಗಳಿರಲಿ ಎಲ್ಲವೂ ಹಣಬಲದಲ್ಲಿ ಅಭಿವೃದ್ಧಿಗೊಳ್ಳುತ್ತಿದೆ. ನಿಸರ್ಗಕ್ಕೆ ನಮ್ಮ ಅಂತಸ್ತು, ಘನಸ್ತಿಕೆ ಎಲ್ಲವೂ ತೃಣಸಮಾನ. “ಭೂಮಿಗೆ ನಿಮ್ಮ ಪ್ರೀತಿ, ಅನುಕಂಪ ಬೇಡ. ಅದು ನಮ್ಮಂತಹ ಕೋಟಿ ಕೋಟಿ ಜನರನ್ನು ಕಂಡಿದೆ, ಮುಂದೆಯೂ ಕಾಣುತ್ತದೆ. ಭೂಮಿಯ ಒಂದು ಭಾಗ ನಾವು ಎಂಬ ಭಾವನೆ ಇದ್ದರೆ ಸಾಕು’ ಎಂದು ವನ್ಯಜೀವಿತಜ್ಞರಾದ ಕೃಪಾಕರ ಮತ್ತು ಸೇನಾನಿ ಇತ್ತೀಚಿಗೆ ಹೇಳಿದ್ದರು. ಕಾರಂತ- ಗುರುವರ ಘಟನೆಯಲ್ಲಿ ಕೇವಲ ಪ್ರಾಮಾಣಿಕತೆ ಕುತೂಹಲದ ವಿಷಯವಲ್ಲ, ಸಾವನ್ನು ಮುಂಚಿತವಾಗಿ ಅರಿತ ಗುರುವರ ಆಂತರಿಕ ಸಾಮರ್ಥ್ಯ ಬೆಳೆದದ್ದು ಪ್ರಾಮಾಣಿಕತೆಯ ಫಲ/ಬಲದಿಂದ ಎಂಬ ತರ್ಕ ಹುಟ್ಟಿಕೊಳ್ಳುತ್ತದೆ, ಇಂಥವು ಒಂದರ್ಥದಲ್ಲಿ “ಅಬ್ಸರ್ವೇಶನ್ ಸೈನ್ಸ್’ ಇದ್ದಂತೆ.
ಮೇಲೆ ಉದಾಹರಿಸಿದ ಎಲ್ಲರೂ ಅಥವಾ ಇಂತಹ ಗುಣಧರ್ಮದವರೆಲ್ಲರೂ ಆರ್ಥಿಕ ಮನ್ನಣೆ ಇದ್ದವರಲ್ಲ. ಇವರೇ ನಿಜವಾಗಿ ದೇವರಿಗೂ, ನಿಸರ್ಗಕ್ಕೂ ಪ್ರೀತಿಪಾತ್ರರು, ನಾವು ತಿಳಿದುಕೊಂಡ ಸೋ ಕಾಲ್ಡ್ ಪ್ರತಿಷ್ಠಿತರಲ್ಲ ಎಂಬ ಸಿದ್ಧಾಂತವೂ ತೆರೆದುಕೊಳ್ಳುತ್ತದೆ. ನಿಷ್ಕಳಂಕ ಮನಸ್ಸಿನ ಈ ಪಾಸಿಟಿವ್ ಗುಣಗಳೂ ಇಳಿಮುಖವಾಗುತ್ತಿರುವುದನ್ನು ಕಂಡಾಗ ಈ ಗುಣಗಳಿಗೂ ಆಗಸದಿಂದ ಸುರಿಯುವ ಮಳೆಗೂ ಏನಾದರೂ ಲಿಂಕ್ ಇದೆಯೆ? ಇಂತಹ ಮನಸ್ಸುಗಳು ಕಾಡು, ನದಿ, ಗುಡ್ಡ ಬೆಟ್ಟಗಳ ಮೇಲೆರಗಿ ಅದರಿಂದ ಮಳೆ ಮೇಲೆ ಪರಿಣಾಮ ಉಂಟು ಮಾಡುವ “ನೈಸರ್ಗಿಕ (ಮನೋ)ವಿಜ್ಞಾನ”ದ ಕಾರ್ಯಾಚರಣೆ ಇದು ಆಗಿರಬಹುದೆ ಎಂಬ ಸಂಶಯ ಮೂಡುತ್ತದೆ.
– ಮಟಪಾಡಿ ಕುಮಾರಸ್ವಾಮಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Indira Gandhi Bhavan: ಕಾಂಗ್ರೆಸ್ ಪ್ರಧಾನ ಕಚೇರಿಗೆ ಇಂದಿನಿಂದ ಹೊಸ ವಿಳಾಸ
Ceasefire: ಇಸ್ರೇಲ್, ಹಮಾಸ್ ಕದನ ವಿರಾಮಕ್ಕೆ ಒಪ್ಪಿಗೆ?
Objection: ಕುಲಪತಿ ನೇಮಕದಲ್ಲಿ ಬದಲಾವಣೆ: ಕೇಂದ್ರಕ್ಕೆ ಉನ್ನತ ಶಿಕ್ಷಣ ಸಚಿವ ಪತ್ರ
Bangla crisis: ಜವಳಿ ಕ್ಷೇತ್ರಕ್ಕೆ ತೆರಿಗೆ ವಿನಾಯ್ತಿ?
Daily Horoscope;ಹಿತಶತ್ರುಗಳ ಹುನ್ನಾರದ ಕುರಿತು ಎಚ್ಚರ,ರಾತ್ರಿ ಪ್ರಯಾಣದಿಂದ ದೂರವಿರಿ…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.