ಸಹಕಾರದಿಂದ ಸರಕಾರದತ್ತ ನಡೆದ ಆರೋಗ್ಯ!
Team Udayavani, Aug 30, 2018, 8:29 AM IST
ಮೊದಲ ಎರಡು ಹಂತದ ಚಿಕಿತ್ಸೆ ಕಡ್ಡಾಯವಾಗಿ ಸರ್ಕಾರಿ ಆಸ್ಪತ್ರೆಯಲ್ಲೇ ಪಡೆಯುವುದಾದರೆ ಅದಕ್ಕೆ ಹೆಲ್ತ್ ಕಾರ್ಡ್ ಅಗತ್ಯ ಏನಿದೆ? ಮೂರು, ನಾಲ್ಕನೇ ಹಂತಕ್ಕೆ ರೆಫರಲ್ ಆಧಾರದ ಮೇಲೆ ರೋಗಿಗಳು ಚಿಕಿತ್ಸೆ ಪಡೆಯಬಹುದಲ್ಲ..! ಇಲ್ಲೂ ಸರ್ಕಾರಿ ಆಸ್ಪತ್ರೆ ಹಾಗೂ ಖಾಸಗಿಯವರ ಮಧ್ಯೆ ಮಧ್ಯವರ್ತಿಗಳ ಲಾಬಿ ನಡೆಯುವುದಿಲ್ಲ ಎಂದು ಹೇಗೆ ಹೇಳುವುದು?
ದೇಶದ ರೈತರು, ಕಾರ್ಮಿಕರೂ ಸೇರಿದಂತೆ ಶೇ. 80ರಷ್ಟು ಗ್ರಾಮೀಣ ಜನ ಇಂದಿಗೂ ತಮ್ಮ ದಿನ ನಿತ್ಯದ ಬದುಕಿಗೆ ಅಸಂಘಟಿತ ವಲಯವನ್ನೇ ನಂಬಿದ್ದಾರೆ. ಇವರಿಗೆಲ್ಲಾ ತಮ್ಮ ಸಂಸಾರಕ್ಕೆ ಎರಡು ಹೊತ್ತಿನ ಹೊಟ್ಟೆ ತುಂಬಿಸುವುದೇ ಅತ್ಯಂತ ಸಾಹಸದ ಕೆಲಸವಾಗಿದೆ. ಆದರೆ ಈ ಜನರೇ ದೇಶದ ಒಟ್ಟಾರೆ ಜಿಡಿಪಿಗೆ ಶೇ.40ರಷ್ಟು ಕೊಡುಗೆ ನೀಡುತ್ತಾರೆ ಎಂದರೆ ಅಚ್ಚರಿಯಾಗಬಹುದು. ವಿಪರ್ಯಾಸವೆಂದರೆ ಇಂತಹ ಜನರಿಗೆ ಜೀವನ ಭದ್ರತೆ ಎನ್ನುವುದೇ ಇಲ್ಲ. ಒಡೆಯ-ಕೆಲಸಗಾರನ ಕಾನೂನು ಬದ್ಧ ಸಂಬಂಧವೇ ಇಲ್ಲದಿರುವುದರಿಂದ ಇವರಿಗೆ ವಿಮೆ, ಪಿಂಚಣಿ, ವಿಶೇಷ ಭತ್ಯೆ ಈ ರೀತಿಯ ಯಾವ ಸವಲತ್ತು, ಸೌಕರ್ಯಗಳೂ ಇರುವುದಿಲ್ಲ.
ಇಂತಹ ವರ್ಗವನ್ನು ಪ್ರತಿನಿಧಿಸುವ, ಜೀವನ ಭದ್ರತೆ ಖಾತರಿಗಾಗಿ ಇವರೊಂದಿಗೆ ಬೀದಿಗಿಳಿದು ಹೋರಾಡುವ ಯಾವ ಸಂಸ್ಥೆಗಳೂ ಶಾಶ್ವತವಾಗಿ ನಿಲ್ಲುವುದಿಲ್ಲ. ಅವೂ ರಾಜಕೀಯ ಪ್ರೇರಿತವಾಗಿಯೇ ಇರುತ್ತವೆ. ಇಂತಹವರ ಆರೋಗ್ಯ ಗಟ್ಟಿಯಾಗಿದ್ದರಷ್ಟೇ ಅವರಿಗೆ ಬದುಕುವ ಹಕ್ಕಿರುತ್ತದೆ. ಇಲ್ಲವಾದಲ್ಲಿ ಅವರು ಜೀವತ್ಛವಗಳಾಗಿ ಬದುಕ ಬೇಕಾಗುತ್ತದೆ. ಅದಕ್ಕಾಗಿ ಈ ಬಡತನದ ರೇಖೆಯ ಆಸುಪಾಸಿ ನಲ್ಲಿರುವ ಜನ ತಮ್ಮ ಆರೋಗ್ಯ ನಿರ್ವಹಣೆಗಾಗಿ ತಮ್ಮ ದುಡಿಮೆಯ ಬಹುಪಾಲು ಹಣವನ್ನು ಖರ್ಚು ಮಾಡುತ್ತಾರೆ. ಆರೋಗ್ಯ ಹದಗೆಟ್ಟಾಗ ಚಿಕಿತ್ಸೆಗೆ ದುಬಾರಿ ಹಣ ತೆರುವುದಲ್ಲದೆ ಆ ಸಮಯದಲ್ಲಿ ಅವರಿಗೆ ಯಾವ ಆದಾಯ ಇಲ್ಲದೆ ಶೋಚನೀಯ ಸ್ಥಿತಿಯಲ್ಲಿ ಬದುಕಬೇಕಾಗುತ್ತದೆ. ಇದು ಬಹು ಪಾಲು ರೈತರ ಮತ್ತು ಕಾರ್ಮಿಕರ ಋಣಬಾಧೆ ಮತ್ತು ಕಡು ಬಡತನಕ್ಕೆ ಮುಖ್ಯಕಾರಣವಾಗಿದೆ. ವಾಣಿಜ್ಯ ಉದ್ದೇಶ ಹೊಂದಿದ ವಿಮಾ ಕಂಪನಿಗಳು ಕಡಿಮೆ ಲಾಭ ಮತ್ತು ಅತಿ ಹೆಚ್ಚಿನ ಜವಾಬ್ದಾರಿ ಇರುವ ಕಾರಣ ಇಂತಹ ಒಂದು ದೊಡ್ಡ ವರ್ಗದ ಆರೋಗ್ಯ ರಕ್ಷಣೆಗೆ ನಿಲ್ಲುವುದಿಲ್ಲ. ಸರ್ಕಾರಗಳೇ ಈ ಬಡವರಿಗೆ ಗರಿಷ್ಠ ಖಾತರಿ ನೀಡುವ ಮೂಲಕ ಬೆಂಬಲವಾಗಿ ನಿಲ್ಲಬೇಕಾಗುತ್ತದೆ.
ಈವರೆಗೆ ಬಡತನದ ರೇಖೆಯ ಕೆಳಗಿರುವವರಿಗೆ, ವಿಶೇಷವಾಗಿ ರೈತರಿಗೆ ಹಲವು ಆರೋಗ್ಯ ಯೋಜನೆಗಳು ಜಾರಿಯಲ್ಲಿದ್ದವು. ಯಶಸ್ವಿನಿ, ವಾಜಪೇಯಿ ಆರೋಗ್ಯ ಶ್ರೀ ಯೋಜನೆ, ರಾಜೀವ್ ಆರೋಗ್ಯ ಭಾಗ್ಯ ಯೋಜನೆ, ರಾಷ್ಟ್ರೀಯ ಸ್ವಾಸ್ಥ್ಯ ಬೀಮಾ ಯೋಜನೆ, ಇಂದಿರಾ ಸುರûಾ ಯೋಜನೆ, ಮುಖ್ಯಮಂತ್ರಿ ಸಾಂತ್ವನ(ಹರೀಶ್) ಯೋಜನೆ, ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ ಇವುಗಳ ಮೂಲಕ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಉಚಿತ ಚಿಕಿತ್ಸೆ ಪಡೆಯುವ ಸೌಲಭ್ಯ ಒದಗಿಸಿಕೊಡಲಾಗಿತ್ತು. ಈಗ ಕರ್ನಾಟಕ ಸರ್ಕಾರ ಇವೆಲ್ಲವನ್ನೂ ಒಟ್ಟುಗೂಡಿಸಿ “ಆರೋಗ್ಯ ಕರ್ನಾಟಕ’ ಎಂಬ ಹೊಸ ಯೋಜನೆ ಯನ್ನು ಜಾರಿಗೊಳಿಸಿದೆ. ಈ ಯೋಜನೆಯಡಿ ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ ಹೊಂದಿರುವ ಯಾರು ಬೇಕಾದರೂ ನೋಂದಣಿ ಮಾಡಿಸಿಕೊಳ್ಳಬಹುದು.
ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬ ಪ್ರಾಥಮಿಕ, ದ್ವಿತೀಯ, ತೃತೀಯ, ತುರ್ತು ಚಿಕಿತ್ಸೆ ಹೀಗೆ 4 ಹಂತಗಳಲ್ಲಿ ಒಟ್ಟಾರೆ ವರ್ಷಕ್ಕೆ ರೂ. 2.30 ಲಕ್ಷ ವೆಚ್ಚದ ಚಿಕಿತ್ಸೆ ಪಡೆಯಬಹುದು. ಎಪಿಎಲ್ ಕುಟುಂಬದ ಚಿಕಿತ್ಸಾ ವೆಚ್ಚದಲ್ಲಿ ಕೇವಲ ಶೇ. 30ರಷ್ಟನ್ನು ಮಾತ್ರ ಸರ್ಕಾರ ಪಾವತಿಸುತ್ತದೆ. ಉಳಿದ ಹಣವನ್ನು ಚಿಕಿತ್ಸೆ ಪಡೆಯುವ ವ್ಯಕ್ತಿಯೇ ಪಾವತಿಸಬೇಕು.
ಆರೋಗ್ಯ ಕರ್ನಾಟಕ ಯೋಜನೆಯು ಮೇಲ್ನೋಟಕ್ಕೆ ತುಂಬಾ ಪರಿಣಾಮಕಾರಿಯಾದ ಆರೋಗ್ಯ ಯೋಜನೆ ಎಂದೇ ಅನಿಸುತ್ತದೆ. ಈ ಯೋಜನೆಯ ಮೂಲಕ ಸರ್ಕಾರ ಬಡವರಿಗೆ ಹಿಂದಿನ ಯೋಜನೆಗಳಲ್ಲಿದ್ದಂತೆಯೇ ಸಾಕಷ್ಟು ಗರಿಷ್ಠ ಪ್ರಮಾಣದ ಆರೋಗ್ಯ ಖಾತರಿ ನೀಡುವ ಪ್ರಯತ್ನ ಮಾಡಿದೆ. ಹಾಗೇ ಸರ್ಕಾರ ಯೋಜನೆಯ ಮೇಲೆ ತನ್ನದೇ ಗರಿಷ್ಠ ಹಿಡಿತ ಹೊಂದಿರುವುದು ಸ್ಪಷ್ಟವಾಗುತ್ತದೆ. ಇದು ನಿಜಕ್ಕೂ ಮೆಚ್ಚುಗೆಯ ಸಂಗತಿಯೇ! ಆದರೆ ಸರ್ಕಾರ ನಿರೀಕ್ಷಿಸಿದಂತೆಯೇ ಎಲ್ಲಾ ಕಾರ್ಯರೂಪಕ್ಕೆ ಬರುತ್ತದೆಯೇ ಎಂಬುದೇ ಒಂದು ಯಕ್ಷಪ್ರಶ್ನೆ.
ಸರ್ಕಾರಿ ಯೋಜನೆಗಳ ಅನುಷ್ಠಾನ ಮತ್ತು ಅವುಗಳ ಕಾರ್ಯ ಕ್ಷಮತೆ ಬಗ್ಗೆ ಇಂದಿಗೂ ಜನರಲ್ಲಿ ಸಾಕಷ್ಟು ಅನುಮಾನ, ಗೊಂದಗಳು ಇದ್ದೇ ಇದೆ. ಅವೇ ಗೊಂದಲಗಳು ಆರೋಗ್ಯ ಕರ್ನಾಟಕ ಯೋಜನೆಯಲ್ಲೂ ಮುಂದುವರೆದಿವೆ.
ಮೊದಲನೆಯದಾಗಿ ಯಶಸ್ವಿನಿ ಯೋಜನೆಯಲ್ಲಿ ಒಬ್ಬ ವ್ಯಕ್ತಿಗೆ ವಾರ್ಷಿಕ ಚಿಕಿತ್ಸೆಗೆ ರೂ. 2 ಲಕ್ಷ ಎಂದು ನಿಗದಿಪಡಿಸಲಾಗಿತ್ತು. ಈಗ ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ಐದು ಸದಸ್ಯರ ಒಂದು ಕುಟುಂಬಕ್ಕೆ ಒಟ್ಟಾರೆ ಚಿಕಿತ್ಸಾ ವೆಚ್ಚ ಗರಿಷ್ಠ ರೂ.2.30 ಲಕ್ಷ ಮೀರುವಂತಿಲ್ಲ. ಹಾಗಾಗಿ ಯಶಸ್ವಿನಿ ಯೋಜನೆಯಲ್ಲಿ ಸಿಗುತ್ತಿದ್ದ ತಲಾ ವ್ಯಕ್ತಿಯ ಚಿಕಿತ್ಸಾ ಸೌಲಭ್ಯ ಮತ್ತು ಗುಣಮಟ್ಟ ಆರೋಗ್ಯ ಕರ್ನಾಟಕದಲ್ಲಿ ನಿರೀಕ್ಷಿಸುವಂತಿಲ್ಲ. ಎರಡನೆಯದಾಗಿ ಆರೋಗ್ಯ ಕರ್ನಾಟಕ ಯೋಜನೆಯಡಿ ಪ್ರತಿಯೊಬ್ಬ ರೋಗಿಯೂ ಆನ್‌ಲೈನ್ ನೋಂದಣಿ ಮಾಡಿಸಿಕೊಳ್ಳಬೇಕು.
ಇದಕ್ಕೆ ಬಿಪಿಎಲ್ ಅಥವಾ ಎಪಿಲ್ ಕಾರ್ಡು ಅತ್ಯವಶ್ಯ. ಒಂದು ವೇಳೆ ಈ ಕಾರ್ಡುಗಳು ಯಾವುದೇ ಕಾರಣಕ್ಕೆ ಲಭ್ಯವಿಲ್ಲದಿದ್ದರೆ ಅವರನ್ನು ಆದ್ಯತೆಯ ಅರ್ಹತೆಯಿಂದ ಹೊರಗಿಟ್ಟು ಸಾಮಾನ್ಯ ರೋಗಿಯೆಂದು ಪರಿಗಣಿಸಲಾಗುತ್ತದೆ. ಆಗ ಅವರು ಶೇ.70ರಷ್ಟು ಚಿಕಿತ್ಸಾ ವೆಚ್ಚವನ್ನು ಭರಿಸಲೇಬೇಕಾಗುತ್ತದೆ.
ಈ ಯೋಜನೆಗೆ ಆಧಾರ್ ಕಾರ್ಡ್ ಕಡ್ಡಾಯ ಮಾಡಲಾಗಿದ್ದರೂ ಮತ್ತೆ ಬಯೋಮೆಟ್ರಿಕ್ ಗುರುತುಗಳನ್ನು ದಾಖಲು ಮಾಡಿ ಆಹಾರ ಇಲಾಖೆಯ ಬಯೋಮೆಟ್ರಿಕ್ ಗುರುತಿನೊಂದಿಗೆ ತುಲನೆ ಮಾಡಲಾಗುತ್ತದೆ ಎಂದು ಹೇಳಲಾಗಿದೆ. ಆಧಾರ್ ಕಾರ್ಡ್ ಇದ್ದ ಮೇಲೆ ಮತ್ತೇಕೆ ಬಯೋಮೆಟ್ರಿಕ್ ಗುರುತುಗಳನ್ನು ಸಂಗ್ರಹಿಸಬೇಕೆಂಬುದೇ ಅರ್ಥವಾಗುತ್ತಿಲ್ಲ. ಸಾಲದ್ದಕ್ಕೆ ಕಳೆದ ಸರ್ಕಾರದಲ್ಲಿ ಆನ್‌ಲೈನ್ ಮೂಲಕ ನೋಂದಣಿ ಮಾಡಿಕೊಂಡವರಿಗೆ ಪಡಿತರ ಚೀಟಿಗಳನ್ನು 15 ದಿನಗಳಲ್ಲಿ ಮನೆಬಾಗಿಲಿಗೆ ತಲುಪಿಸುವುದಾಗಿ ಹೇಳಲಾಗಿತ್ತು. ಆದರೆ ಸಾವಿರಾರು ಜನರಿಗೆ ಪಡಿತರ ಚೀಟಿ ಈವರೆಗೆ ತಲುಪಿಲ್ಲ. ಆ ಯೋಜನೆಯ ಗತಿ ಏನಾಯಿತೆಂಬುದೇ ಗೊತ್ತಿಲ್ಲ. ಪಡಿತರ ಚೀಟಿ ಇಲ್ಲದಿದ್ದರೆ ಕುಟುಂಬವನ್ನು ಯಾವ ಆಧಾರದ ಮೇಲೆ ಗುರುತಿಸಲಾಗುತ್ತದೆ, ಒಟ್ಟು ಚಿಕಿತ್ಸಾ ವೆಚ್ಚವನ್ನು ಯಾವ ಆಧಾರದ ಮೇಲೆ ನಿಷ್ಕರ್ಷ ಮಾಡಲಾಗುತ್ತದೆ ಎಂಬುದು ಸ್ಪಷ್ಟವಾಗಿಲ್ಲ.
ಯಶಸ್ವಿನಿ ಯೋಜನೆಯಲ್ಲಿ ಈ ಯಾವ ಗೊಂದಲವೂ ಇರಲಿಲ್ಲ. ಸಹಕಾರಿ ಸಂಘದ ಸದಸ್ಯನೊಬ್ಬನ ಹೆಸರಿನಲ್ಲೇ
ಇಡೀ ಕುಟುಂಬದ ಸದಸ್ಯರ ನೋಂದಣಿ ಪ್ರತಿವರ್ಷ ಆಗುತ್ತಿತ್ತು. ಕುಟುಂಬದ ಸದಸ್ಯರ ಸ್ವಯಂ ಘೋಷಣೆ, ದೃಢೀಕರಣ ಬಿಟ್ಟರೆ ಬೇರೆ ಯಾವುದೇ ದಾಖಲೆ ಬೇಕಿರಲಿಲ್ಲ. ಒಂದೇ ಕಾರ್ಡಿನಲ್ಲಿ ಮನೆಯ ಇಡೀ ಸದಸ್ಯರು ಅತ್ಯಲ್ಪ ನೋಂದಣಿ ಹಣದಲ್ಲಿ ಚಿಕಿತ್ಸೆ ಪಡೆಯಬಹುದಿತ್ತು. ಮೂರನೆಯದು ಚಿಕಿತ್ಸಾ ವಿಧಾನ. ಯಶಸ್ವಿನಿ ಯೋಜನೆಯಲ್ಲಿ ದ್ದಂತೆ ಕಾರ್ಡ್ ಹಿಡಿದು ಯೋಜನೆಯ ಜಾಲದಲ್ಲಿರುವ ಖಾಸಗಿ ಆಸ್ಪತ್ರೆಗೆ ಈ ಯೋಜನೆಯಲ್ಲಿ ನೇರವಾಗಿ ಹೋಗುವಂತಿಲ್ಲ. ಆರೋಗ್ಯ ಕರ್ನಾಟಕ ಯೋಜನೆಯಡಿ ಸರ್ಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿರುವ ಎಲ್ಲಾ ಚಿಕಿತ್ಸೆಗಳನ್ನೂ ಸರ್ಕಾರಿ ಆರೋಗ್ಯ ಕೇಂದ್ರ ಗಳಲ್ಲೇ ಪಡೆಯಬೇಕು. ಅದರಲ್ಲೂ ಪ್ರಾಥಮಿಕ ಮತ್ತು
ಸಾಮಾನ್ಯ ದ್ವಿತೀಯ ಹಂತದ ಕಾಯಿಲೆಗಳಿಗೆ ಕಡ್ಡಾಯವಾಗಿ ಸರ್ಕಾರಿ ಆಸ್ಪತ್ರೆಗಳಲ್ಲೇ ಚಿಕಿತ್ಸೆ ಪಡೆಯಬೇಕು.
ಮೂರನೆಯ ಹಂತದ ಮತ್ತು ತೀರಾ ತುರ್ತು ಸಂದರ್ಭಗಳಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಆ ವಿಶೇಷ ಚಿಕಿತ್ಸೆ ಲಭ್ಯವಿಲ್ಲದಿದ್ದರೆ ಮಾತ್ರ ವೈದ್ಯರ ಶಿಫಾರಸ್ಸು (ರೆಫರಲ್) ಮೇರೆಗೆ ಜಾಲದಲ್ಲಿರುವ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದು. ಸರ್ಕಾರದ ಈ ಸಂಕಲ್ಪ ನಿಜಕ್ಕೂ ಒಪ್ಪಬೇಕಾದ್ದೇ. ಆದರೆ ಇಂದಿಗೂ ಸರ್ಕಾರಿ ಆಸ್ಪತ್ರೆಗಳು ಜನರ ನಿರೀಕ್ಷೆಯ ಮಟ್ಟಕ್ಕೆ ಆಧುನೀಕರಣಗೊಂಡಿಲ್ಲ, ಉಪಕರಣ, ಸೇವೆ, ದಕ್ಷತೆ, ಸ್ವತ್ಛತೆ ಈ ಯಾವ ವಿಷಯದಲ್ಲೂ ಖಾಸಗಿ ಆಸ್ಪತ್ರೆಗಳಿಗೆ ಸರಿಸಾಟಿಯಾಗಿ ಸರ್ಕಾರಿ ಆಸ್ಪತ್ರೆಗಳು ಕಾರ್ಯ ನಿರ್ವಹಿಸಿದ ಉದಾಹರಣೆಗಳಿಲ್ಲ. ಹೋಗಲಿ, ಅವನ್ನು ಸುಧಾರಿ ಸುವ ತತ್‌ಕ್ಷಣದ ಯೋಜನೆಗಳು ಸರ್ಕಾರದ ಬಳಿ ಇದ್ದಂತೆ ಕಾಣುತ್ತಿಲ್ಲ. ಇಂಥ ಪರಿಸ್ಥಿತಿಯಲ್ಲಿ ಸರ್ಕಾರ ಹೇಗೆ ಜನರ ನಂಬಿಕೆ, ವಿಶ್ವಾಸ ಗಳಿಸಿ ಅವರ ಆರೋಗ್ಯದ ಖಾತರಿ ನೀಡಲು ಸಾಧ್ಯ?
ಯಶಸ್ವಿನಿಯಂತಹ ಯೋಜನೆಗಳು ವಿಶೇಷವಾಗಿ ರೈತರಿಗೆಂದೇ ರೂಪಿಸಲ್ಪಟ್ಟಿದ್ದವು. ಸಹಕಾರಿ ಸಂಸ್ಥೆಗಳು, ಗುಂಪು ಯೋಜನೆಗಳ ಸದಸ್ಯರ ಜಾಲವೇ ಗ್ರಾಮೀಣ ಪ್ರದೇಶದಲ್ಲಿ ಸಾಕಷ್ಟು ಸಮರ್ಥ ವಾಗಿ ರೂಪುಗೊಂಡಿತ್ತು. ಹಾಗಾಗಿ ಈ ಆರೋಗ್ಯ ಯೋಜನೆಗಳಲ್ಲಿ ರೈತರು ಸುಲಭವಾಗಿ ಭಾಗವಹಿಸಬಹುದಿತ್ತು. ಆದರೆ ಈಗ ಹಾಗಿಲ್ಲ. ಎಲ್ಲರಿಗೂ ಒಂದೇ ಯೋಜನೆ. ಹುಷಾರು ತಪ್ಪಿದಾಗ ನೇರವಾಗಿ ಸರ್ಕಾರಿ ಆಸ್ಪತ್ರೆಗೆ ಹೋಗಬೇಕು. ಅಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಹೆಲ್ತ್‌ಕಾರ್ಡ್ ಪಡೆಯಬೇಕು, ಚಿಕಿತ್ಸೆಯ ಆಯ್ಕೆ ಇಲ್ಲದೆ ಅಲ್ಲೇ ಚಿಕಿತ್ಸೆ ಪಡೆಯಬೇಕು.
ಮುಂದಿನ ಹಂತದಲ್ಲೂ ವೈದ್ಯರು ರೆಫರ್ ಮಾಡಿದರೇ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಸೌಲಭ್ಯ. ಇಲ್ಲವಾದಲ್ಲಿ ಅದೂ ಇಲ್ಲ. ಇಷ್ಟಕ್ಕೂ ಮೊದಲ ಎರಡು ಹಂತದ ಚಿಕಿತ್ಸೆ ಕಡ್ಡಾಯವಾಗಿ ಸರ್ಕಾರಿ ಆಸ್ಪತ್ರೆಯಲ್ಲೇ ಪಡೆಯುವುದಾದರೆ ಅದಕ್ಕೆ ಹೆಲ್ತ್ ಕಾರ್ಡ್ ಆಗತ್ಯ ಏನಿದೆ? ಮೂರು, ನಾಲ್ಕನೇ ಹಂತಕ್ಕೆ ರೆಫರಲ್ ಆಧಾರದ ಮೇಲೆ ರೋಗಿಗಳು ಚಿಕಿತ್ಸೆ ಪಡೆಯಬಹುದಲ್ಲ..! ಇಲ್ಲೂ ಸರ್ಕಾರಿ ಆಸ್ಪತ್ರೆ ಹಾಗೂ ಖಾಸಗಿಯವರ ಮಧ್ಯೆ ಮಧ್ಯವರ್ತಿಗಳ ಲಾಬಿ ನಡೆಯುವುದಿಲ್ಲ ಎಂದು ಹೇಗೆ ಹೇಳುವುದು? ಮುಖ್ಯಮಂತ್ರಿಗಳ ಪರಿಹಾರ ನಿಧಿಯ ದುರ್ಬಳಕೆ ಆಗಿದ್ದು ಹೀಗೇ ಅಲ್ಲವೇ?
ಯಶಸ್ವಿನಿ ಯೋಜನೆ ಜೊತೆಗೆ ಇತರೆ ಯೋಜನೆಗಳು ಈಗಾಗಲೇ ಮೇ 31ಕ್ಕೆ ಮುಗಿದಿವೆ. ರಾಷ್ಟ್ರೀಯ ಭೀಮಾ ಸ್ವಾಸ್ಥ್ಯ ಯೋಜನೆಯೂ ಇದೇ ಆಗಸ್ಟ್ 31ಕ್ಕೆ ಕೊನೆಗೊಳ್ಳಲಿದೆ. ಆದರೂ ಆರೋಗ್ಯ ಕರ್ನಾಟಕ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನ ಗೊಂಡಿಲ್ಲ. ಸರ್ಕಾರದ ಮಾಹಿತಿಯ ಪ್ರಕಾರ ಮೊದಲ ಎರಡು ಹಂತದಲ್ಲಿ 43 ಆಸ್ಪತ್ರೆಗಳಲ್ಲಷ್ಟೇ ಚಿಕಿತ್ಸೆ ಲಭ್ಯವಿದೆ. ತಾಲೂಕು ಕೇಂದ್ರಗಳಲ್ಲಿ ರೆಫರಲ್ ಆಧಾರದ ಮೇಲೆ ರೋಗಿಗಳನ್ನು
ಹೆಚ್ಚಿನ ಚಿಕಿತ್ಸೆಗೆ ಕಳಿಸಿಕೊಡಲಾಗುತ್ತಿದೆಯೇ ವಿನಹಃ ಅವರನ್ನು ನೊಂದಣಿ ಮಾಡಿಕೊಂಡು ಹೆಲ್ತ್ ಕಾರ್ಡ್ ನೀಡುತ್ತಿಲ್ಲ. ಇದರಿಂದ ಬೇರೆ ಯೋಜನೆಗಳಡಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರೂ ಸರ್ಕಾರಿ ಆಸ್ಪತ್ರೆಗೆ ಎಡತಾಕುವಂತಾಗಿದೆ. ಸುಮಾರು ಎರಡು ಲಕ್ಷ ಮತದಾರರಿರುವ ಒಂದು ತಾಲೂಕಿನಲ್ಲಿ ರೆಫರಲ್ ಆಧಾರದ ಮೇಲೆ ಕೇವಲ 30 ಜನರನ್ನು ಹೆಚ್ಚಿನ ಚಿಕಿತ್ಸೆಗೆ ಕಳಿಸಿಕೊಡಲಾಗಿದೆ. ಇದು ಯೋಜನೆ ಜನರನ್ನು
ತಲುಪಿಲ್ಲ ಎಂಬುದಕ್ಕೆ ಸಾಕ್ಷಿಯಾಗಿದೆ. ಸರ್ಕಾರ ಪೂರ್ಣ ಪ್ರಮಾಣದಲ್ಲಿ ಆರೋಗ್ಯ ಕರ್ನಾಟಕ ಯೋಜನೆಯನ್ನು ಜಾರಿಗೆ ತಂದ ನಂತರವೇ ಇತರೆ ಯೋಜನೆಗಳನ್ನು ಕೈ ಬಿಡಬಹುದಿತ್ತು. ಇಡೀ ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ರೂ. 2 ಸಾವಿರ ಕೋಟಿ ಬೇಕಾಗಬಹುದು ಎಂದು ನಿರೀಕ್ಷಿಸಲಾಗಿದೆ. ಸಾಲಮನ್ನಾ ಸರ್ಕಸ್ಸಿನಲ್ಲೇ ಇರುವ ಸರ್ಕಾರ ಅದಕ್ಕಾಗಿ ಸುಮಾರು 80 ಸಾವಿರ ಕೋಟಿ ಖರ್ಚು ಮಾಡುವುದಾಗಿ ಹೇಳುತ್ತಿದೆ. ಹೀಗಿರುವಾಗ 2 ಸಾವಿರ ಕೋಟಿ ಯಾವ ಮಹಾ ದೊಡ್ಡ ಮೊತ್ತ? ರೈತರ ಆರೋಗ್ಯಕ್ಕಿಂತ ಸಾಲಮನ್ನಾ ದೊಡ್ಡದಾ?
ಸರ್ಕಾರ ಯಶಸ್ವಿನಿ ಯೋಜನೆಯಡಿ ಒಂದೇ ಆಸ್ಪತ್ರೆಗೆ ರೂ.3 ಕೋಟಿ ಬಾಕಿ ಉಳಿಸಿಕೊಂಡಿತ್ತು. ಆ ಯೋಜನೆಯ ಜಾಲದಲ್ಲಿದ್ದ ಸುಮಾರು 900 ಆಸ್ಪತ್ರೆಯ ರೂ.100 ಕೋಟಿಗೂ ಹೆಚ್ಚು ಹಣ ಬಾಕಿ ಉಳಿದಿತ್ತು. ಈಗಲೂ ಪೂರ್ಣ ಹಣ ಪಾವತಿಯಾಗಿಲ್ಲ ಎಂಬ ಆರೋಪವಿದೆ. ಜೊತೆಗೆ ಕಳೆದ ವರ್ಷ ವಾಜಪೇಯಿ ಆರೋಗ್ಯ ಶ್ರೀ ಯೋಜನೆಯಡಿ ಬಾಕಿ ಇರುವ ರೂ. 85 ಕೋಟಿ ಹಣ ಪಾವತಿಸುವಂತೆ ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ಸ್ಥಗಿತಗೊಳಿಸಿ ಧರಣಿ ನಡೆಸಿದ್ದವು. ಹಾಗಾಗಿ ಸರ್ಕಾರ ಖಾಸಗಿ ಆಸ್ಪತ್ರೆಗಳನ್ನು ಆದಷ್ಟೂ ಈ ಯೋಜನೆಯಿಂದ ದೂರವಿಡುವ ನಿರ್ಧಾರ ಮಾಡಿದಂತಿದೆ. ಅದು ಒಳ್ಳೆಯದೇ ಎನ್ನೋಣ. ಆದರೆ ಖಾಸಗಿ ಆಸ್ಪತ್ರೆಗಳಷ್ಟೇ ಸ್ಪರ್ಧಾತ್ಮಕವಾಗಿ, ಗುಣಾತ್ಮಕವಾಗಿ ಸರ್ಕಾರಿ ಆಸ್ಪತ್ರೆಗಳೂ ಚಿಕಿತ್ಸೆ ನೀಡಬೇಕಿದೆ. ಆದಷ್ಟು ಬೇಗ ಈ ಯೋಜನೆಯನ್ನು ಇನ್ನಷ್ಟು ಸರಳೀಕರಣಗೊಳಿಸಿ ಗ್ರಾಮೀಣ ಭಾಗದ ಎಲ್ಲರಿಗೂ ತಲುಪುವಂತೆ ಮಾಡುವುದು ಸರ್ಕಾರದ ಆದ್ಯತೆಯ ವಿಷಯವಾಗಬೇಕಿದೆ.
– ತುರುವೇಕೆರೆ ಪ್ರಸಾದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Commission: 60 ಪರ್ಸೆಂಟ್ ಕಮಿಷನ್: ಎಚ್‌ಡಿಕೆ ವಿರುದ್ಧ ಮುಗಿಬಿದ್ದ ಆಡಳಿತ ಪಕ್ಷ
illegal Investigation: ಬಿಬಿಎಂಪಿ ಮುಖ್ಯ ಎಂಜಿನಿಯರ್ ಕಚೇರಿ ಮೇಲೆ ಇ.ಡಿ. ದಾಳಿ
Waqf Report: ಅಮಿತ್ ಶಾ ಅಂಗಳಕ್ಕೆ ಭಿನ್ನರ ವಕ್ಫ್ ವರದಿ: ಕಿರಣ್ ರಿಜಿಜು ಮೂಲಕ ಸಲ್ಲಿಕೆ
Udupi:ಗೀತಾರ್ಥ ಚಿಂತನೆ 149: ಜಗತ್ತಿನಲ್ಲಿ ಇಷ್ಟೊಂದು ವ್ಯತ್ಯಾಸವೇಕೆ? ಪ್ರಶ್ನೆಗುತ್ತರವಿಲ್ಲ
ಮಮ್ತಾಜ್ ಅಲಿ ಆತ್ಮಹ*ತ್ಯೆ ಪ್ರಚೋದನೆ ಆರೋಪ: ಆರೋಪಿಗಳ ವಿರುದ್ದ ಆರೋಪ ಪಟ್ಟಿ ಸಲ್ಲಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.