ಆರೋಗ್ಯ ನೀತಿಗೆ ಬೇಕು ಆದರ್ಶ ಸೂತ್ರ
Team Udayavani, Dec 16, 2017, 12:24 PM IST
ಆತ್ಮಾವಲೋಕನದಿಂದ ಮತ್ತು ಸ್ವಯಂಪ್ರೇರಣೆಯಿಂದ ಮಾಡುವ ನಿಯಂತ್ರಣವೇ ಹೆಚ್ಚು ಪರಿಣಾಮಕಾರಿ. ಆದರೆ ಇದು ಎಷ್ಟು ಮಂದಿಗೆ ಸಾಧ್ಯ ಎನ್ನುವ ಪ್ರಶ್ನೆಗೂ ತೃಪ್ತಿಕರವಾದ ಉತ್ತರ ಸಿಗುವುದಿಲ್ಲ. ಕೊನೆಯ ಪಕ್ಷ ವೈದ್ಯರು ರೋಗಿಗಳ ಹಿತಾಸಕ್ತಿಯ ಕುರಿತಾಗಿ, ರೋಗಿಗಳು ವೈದ್ಯರ ಹಿತಾಸಕ್ತಿಯ ಕುರಿತಾಗಿ ಸರಕಾರ ರೋಗಿ ಮತ್ತು ವೈದ್ಯರುಗಳಿಬ್ಬರ ಹಿತಾಸಕ್ತಿಯ ಕುರಿತಾಗಿ ಯೋಚಿಸುವುದಕ್ಕೆ ಮನಸ್ಸು ಮಾಡಿದರೆ ಸಮಸ್ಯೆಗಳ ಪರಿಹಾರ ಸುಲಭವಾಗಬಹುದು.
“ಮುಟ್ಟಲು ಹೋದರೆ ಕಚ್ಚುವುದಕ್ಕೆ ಬರುತ್ತದೆ’ ಎನ್ನುವ ಮಾತೊಂದಿದೆ. ಸಾಮಾನ್ಯವಾಗಿ ಬದುಕಿನ ಅನೇಕ ಕ್ಷೇತ್ರಗಳಲ್ಲಿರುವ ಸಮಸ್ಯೆಗಳಿಗೆ ಅನ್ವಯಿಸುವ ಈ ಮಾತು ವೈದ್ಯಕೀಯ ಕ್ಷೇತ್ರಕ್ಕೆ ಅತ್ಯಂತ ಸಮರ್ಪಕವಾಗಿ ಹೊಂದಿಕೊಳ್ಳುತ್ತದೆ. ತಳಸ್ಪರ್ಶಿಯಾದ ಅಧ್ಯಯನ ಮತ್ತು ವಿವೇಚನೆಯೊಂದಿಗೆ ಸುದೀರ್ಘ ಕಾಲದ ಸಮಾಲೋಚನೆ ಸೇರದಿದ್ದರೆ ಸಮಸ್ಯೆಗಳಿಗೆ ಕಂಡುಕೊಳ್ಳುವ ಪರಿಹಾರವಿದೆಯಲ್ಲ ಅದು ಸಮಸ್ಯೆಗಳಿಗಿಂತಲೂ ಹೆಚ್ಚು ಅಪಾಯಕಾರಿಯಾಗಬಹುದು. ಚಿಕಿತ್ಸೆಯೇ ರೋಗಕ್ಕಿಂತ ಹೆಚ್ಚು ಉಪದ್ರವಕಾರಿಯಾದಂತೆ.
ನಮ್ಮ ಅಪೇಕ್ಷೆಗಳು
1. ವೈದ್ಯಕೀಯ ಸೇವೆ ಯಾವುದೇ ಕಾರಣಕ್ಕೂ ದುಬಾರಿಯಾಗಬಾರದು
2. ಅತ್ಯುತ್ತಮ ಗುಣಮಟ್ಟದ ಸೇವೆ ಲಭ್ಯವಾಗಬೇಕು
3. ಯಾವುದೇ ರೀತಿಯ ಅಸಡ್ಡೆ, ಅಪಾಯಗಳು ಇರಕೂಡದು
4. ಕ್ಷಿಪ್ರವಾಗಿ ಸೇವೆ ಒದಗಿಸಬೇಕು
5. ವೈದ್ಯಕೀಯ ಶುಶ್ರೂಷೆಯ ಅಲಭ್ಯತೆ ಕಾರಣವಾಗಿ ಯಾವ ರೋಗಿಯೂ ಸಾಯಕೂಡದು
6. ಸಮಾಜದ ಕಟ್ಟಕಡೆಯ ಮನುಷ್ಯನಿಗೂ ವೈದ್ಯಕೀಯ ಸೇವೆ ತಲುಪುವಂತಿರಬೇಕು ಈ ಅಪೇಕ್ಷೆಗಳನ್ನು ಪೂರೈಸುವುದು ಹೇಗೆ? ಪರಿಹಾರವನ್ನು ಪ್ರಯೋಗಕ್ಕಿಳಿಸುವುದು ಹೇಗೆ ಮತ್ತು ಯಾರು? ಕನಿಷ್ಠ ಮತ್ತು ಗರಿಷ್ಠ ದರ ಸಮನ್ವಯಗೊಳಿಸುವುದು ಹೇಗೆ? ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿ ನಿರ್ಧಾರಗಳನ್ನು ಕೈಗೊಳ್ಳುವುದಕ್ಕೆ ಸರಕಾರಕ್ಕೆ ಹಕ್ಕಿದೆ. ಅದು ಅದರ ಬಾಧ್ಯತೆಯೂ ಹೌದು. ಪ್ರಜಾಪ್ರಭುತ್ವದಲ್ಲಿ ಜನರ ಆರೋಗ್ಯವನ್ನು ಕಾಪಾಡಿಕೊಳ್ಳುವ ಪೂರ್ಣ ಹೊಣೆಗಾರಿಕೆ ಸರಕಾರದ್ದೆನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಇದನ್ನು ಸಾಧ್ಯವಾಗಿಸುವುದು ಹೇಗೆ? ನಮ್ಮ ದೇಶದ ಎಲ್ಲ ಕ್ಷೇತ್ರಗಳಲ್ಲೂ ಸರಕಾರಿ ಮತ್ತು ಖಾಸಗಿ ವ್ಯವಸ್ಥೆಗಳ ತಾಕಲಾಟ ಅನೇಕ ಸಮಸ್ಯೆಗಳನ್ನು ಸೃಷ್ಟಿಸಿದೆ. ಈ ನೆಲೆಯಲ್ಲಿ ಮುಂದಿರುವ ಆಯ್ಕೆಗಳು:
1. ಸಂಪೂರ್ಣ ಖಾಸಗಿ ವೈದ್ಯಕೀಯವನ್ನು ನಿಷೇಧಿಸಿ ಸರಕಾರಿ ವ್ಯವಸ್ಥೆಯನ್ನು ಮಾತ್ರ ಅನುಷ್ಠಾನಗೊಳಿಸಬೇಕು. ಎಲ್ಲ ರೀತಿಯ ಚಿಕಿತ್ಸೆಗಳ ಜವಾಬ್ದಾರಿಯನ್ನು ಸರಕಾರವೇ ವಹಿಸಿಕೊಳ್ಳಬೇಕು. ಬಡವರ ಮತ್ತು ಶ್ರೀಮಂತರ ನಡುವೆ ಇರುವ ಆರ್ಥಿಕ ಅಸಮಾನತೆಯ ಅಂತರಕ್ಕನುಗುಣವಾಗಿ ಚಿಕಿತ್ಸೆ ಲಭ್ಯವಾಗುವಂತಹ ವ್ಯವಸ್ಥೆ ಜಾರಿಗೆ ಬರಬೇಕು. ಜೀವ ವಿಮೆಯೂ ಸೇರಿದಂತೆ ಅನೇಕ ರೀತಿಯಿಂದ ಸಂಪನ್ಮೂಲಗಳನ್ನು ಕ್ರೋಢಿಕರಿಸುವುದಕ್ಕೆ ಸಾಧ್ಯವಿದೆ. ಖಾಸಗಿ ವ್ಯವಸ್ಥೆ ಇಲ್ಲವೆಂದಾದಾಗ ಸಹಜವಾಗಿಯೇ ಸರಕಾರಿ ವ್ಯವಸ್ಥೆ ದಕ್ಷವಾಗಬಹುದು ಎನ್ನುವುದು ಆಶಾದಾಯಕ ನಿರೀಕ್ಷೆ. ಅತ್ಯಂತ ಭಾರದ ಈ ಹೊಣೆಯನ್ನು ಸರಕಾರ ತಾಳುವುದಕ್ಕೆ ಸಾಧ್ಯವಾದರೆ ಮತ್ತು ಚಿಕಿತ್ಸೆಯ ಗುಣಮಟ್ಟವನ್ನು ಉಳಿಸಿಕೊಂಡಲ್ಲಿ ಇದು ಪ್ರಶಸ್ತವಾದ ಆಯ್ಕೆಯಾಗಿ ಪರಿಣಮಿಸಬಹುದು.
ಆದರೆ ಸರಕಾರಿ ಯೋಜನೆಗಳು ಅಲ್ಲಿ ಇಲ್ಲಿ ಸೋರಿ ಹೋಗುತ್ತಿರುವುದನ್ನು ಪ್ರತ್ಯಕ್ಷವಾಗಿ ಅನುಭವಿಸುತ್ತಿರುವ ನಮ್ಮಲ್ಲಿ ಈ ಆಶಾದಾಯಕ ನಿರೀಕ್ಷೆ ಯಶಸ್ವಿಯಾದೀತೆ? ಜೀವನ್ಮರಣ ಹೋರಾಟದಂತಿರುವ ಆರೋಗ್ಯ ಕ್ಷೇತ್ರದಲ್ಲಿ ಸಣ್ಣ ಪ್ರಮಾಣದ ರಿಸ್ಕನ್ನಾದರೂ ತೆಗೆದುಕೊಳ್ಳುವುದು ಯೋಗ್ಯವೇ?
2. ವೈದ್ಯಕೀಯ ಕ್ಷೇತ್ರವನ್ನು ಸಂಪೂರ್ಣವಾಗಿ ಖಾಸಗಿಯವರಿಗೆ ಬಿಟ್ಟುಕೊಡುವುದು. ಅವರ ಮೇಲೆ ಎಲ್ಲ ರೀತಿಯ ಶಾಸನಾತ್ಮಕವಾದ ನಿಯಂತ್ರಣವನ್ನು ಹೇರುವುದು. ಅಗತ್ಯವಿದ್ದಲ್ಲಿ ಸಬ್ಸಿಡಿ ಕೊಡುವ ಮೂಲಕ ಅಥವಾ ಜೀವ ವಿಮೆಯ ಮೂಲಕ ಬಡವರಿಗೆ ಕಡಿಮೆ ಖರ್ಚಿನಲ್ಲಿ ಚಿಕಿತ್ಸೆ ಸಿಗುವಂತೆ ಮಾಡುವುದು. ಸರಕಾರಿ ಕ್ಷೇತ್ರದಲ್ಲಿ ಬೊಕ್ಕಸಕ್ಕೆ ಆಗುತ್ತಿರುವ ವೆಚ್ಚದ ಒಂದಂಶವನ್ನು ಖಾಸಗಿ ಕ್ಷೇತ್ರಕ್ಕೆ ವಿನಿಯೋಗಿಸಿದರೆ ಸಾಕಾಗಬಹುದು ಎಂದರೆ ಇದೊಂದು ರೀತಿಯ ಅರೆ ಸರಕಾರಿ ವ್ಯವಸ್ಥೆಯಂತೆ ನಡೆಯ ಬೇಕಾಗಬಹುದು. ಆಗ ವೈದ್ಯರಿಗೆ ನಿರುದ್ಯೋಗ ಸಮಸ್ಯೆ ಬಾಧಿಸೀತೇ? ಅಥವಾ ವೈದ್ಯರ ಸಂಖ್ಯೆ ಸಾಲದಾದೀತೆ? ಇತ್ಯಾದಿ ಅನೇಕ ವಿಚಾರಗಳ ಬಗ್ಗೆ ಕೂಲಂಕಷವಾಗಿ ವಿಮರ್ಶಿಸಬೇಕು.
3. ಈಗ ಇರುವಂತೆ ಎರಡೂ ವ್ಯವಸ್ಥೆಗಳನ್ನೂ ಒಟ್ಟಾಗಿ ಬದುಕುವುದಕ್ಕೆ ಬಿಡುವುದು. ಸರಕಾರಿ ವ್ಯವಸ್ಥೆಯನ್ನು ಅತ್ಯಂತ ಶ್ರೇಷ್ಠ ಮಟ್ಟದಲ್ಲಿ ಮತ್ತು ಅತ್ಯಂತ ವ್ಯಾಪಕವಾಗಿ ಮತ್ತು ಅತ್ಯಂತ ಸ್ಪರ್ಧಾತ್ಮಕವಾಗಿ ಬೆಳೆಸುವ ಸವಾಲನ್ನು ಸರಕಾರ ಸ್ವೀಕರಿಸಬೇಕು. ಖಾಸಗಿಯಾಗಿ ನಡೆಯುವ ಶೋಷಣೆಗಳನ್ನು ಯಾವ ದಾಕ್ಷಿಣ್ಯವೂ ಇಲ್ಲದೆ ಬಗ್ಗುಬಡಿಯಬೇಕು.
ಮುಖ್ಯವಾಗಿ ಚಿಕಿತ್ಸೆಯ ಗುಣಮಟ್ಟದ ಬಗ್ಗೆ ಮತ್ತು ತಗಲುವ ವೆಚ್ಚದ ಬಗ್ಗೆ ಸಮಾನ ನೀತಿಸಂಹಿತೆಯೊಂದನ್ನು ನಿರೂಪಿಸಬೇಕು. ಇದು ಜಟಿಲವಾದ ಕೆಲಸ. ಪರೀಕ್ಷಾ ಶುಲ್ಕದಂತಹ ನಿಷ್ಕರ್ಷಗಳನ್ನು ಸುಲಭವಾಗಿ ನಿಗದಿಪಡಿಸಬಹುದು. ಅದು ಸಾಮಾಜಿಕ-ಆರ್ಥಿಕ ಮಾನದಂಡಕ್ಕೆ ಅನುಗುಣವಾಗಿದ್ದರೆ ಅದನ್ನು ಯಾರೂ ಆಕ್ಷೇಪಿಸಲಾರರು, ಆಕ್ಷೇಪಿಸಬಾರದು ಕೂಡ. ಆದರೆ ಉಳಿದಂತೆ ನಿಯಂತ್ರಣವನ್ನು ಹೇರುವುದು ಕಷ್ಟ. ಆದರೂ ಇಂದಿನ ಸಂದರ್ಭದಲ್ಲಿ ಆಸ್ಪತ್ರೆಯ ವೆಚ್ಚದಲ್ಲಿ ಪ್ರಧಾನ ಪಾತ್ರ ವಹಿಸುವ ವೈದ್ಯರ ಸಲಹಾ ಶುಲ್ಕ, ಕೋಣೆಯ ಬಾಡಿಗೆ, ಸಿಬ್ಬಂದಿಗಳ ಸಂಭಾವನೆ, ವಿವಿಧ ಪರೀಕ್ಷೆಗಳಿಗಾಗುವ ವೆಚ್ಚ, ಡಯಾಲಿಸಿಸ್, ಶಸ್ತ್ರಚಿಕಿತ್ಸೆ ಮೊದಲಾದ ಶುಶ್ರೂಷೆಗಳ ವೆಚ್ಚ ಇಂತಹವುಗಳ ಮೇಲೆ ಒಂದು ರೀತಿಯ ನಿಯಂತ್ರಣವನ್ನು ಹೇರುವುದು ಅಗತ್ಯ.
ಸ್ವತಃ ಆತ್ಮಾವಲೋಕನವನ್ನು ಮಾಡಿ ಸ್ವಯಂಪ್ರೇರಣೆಯಿಂದ ಮಾಡುವ ನಿಯಂತ್ರಣವೇ ಹೆಚ್ಚು ಪರಿಣಾಮಕಾರಿ. ಆದರೆ ಇದು ಎಷ್ಟು ಮಂದಿಗೆ ಸಾಧ್ಯ ಎನ್ನುವ ಪ್ರಶ್ನೆಗೂ ತೃಪ್ತಿಕರವಾದ ಉತ್ತರ ಸಿಗುವುದಿಲ್ಲ. ಕೊನೆಯ ಪಕ್ಷ ವೈದ್ಯರು ರೋಗಿಗಳ ಹಿತಾಸಕ್ತಿಯ ಕುರಿತಾಗಿ, ರೋಗಿಗಳು ವೈದ್ಯರ ಹಿತಾಸಕ್ತಿಯ ಕುರಿತಾಗಿ ಸರಕಾರ ಮತ್ತು ಸಮಾಜ ರೋಗಿ-ವೈದ್ಯರುಗಳಿಬ್ಬರ ಹಿತಾಸಕ್ತಿಯ ಕುರಿತಾಗಿ ಯೋಚಿಸುವುದಕ್ಕೆ ಮನಸ್ಸು ಮಾಡಿದರೆ ಸಮಸ್ಯೆಗಳ ಪರಿಹಾರ ಸುಲಭವಾಗಬಹುದು. ಕೆಟ್ಟವರ ಸಂಖ್ಯೆ ತುಂಬ ಕಡಿಮೆಯಿದ್ದರೂ ಅವರು ಎಲ್ಲ ಕ್ಷೇತ್ರಗಳಲ್ಲಿಯೂ ಇರುತ್ತಾರೆ. ಆದರೆ ಅದಕ್ಕಾಗಿ ಒಂದು ಸಮಾಜವನ್ನೋ ಒಂದು ಸಮುದಾಯವನ್ನೋ ಸಾರ್ವತ್ರಿಕವಾಗಿ ಆಕ್ಷೇಪಿಸುವುದು ಸರಿಯಲ್ಲ. ವೈದ್ಯರ ವೃತ್ತಿ ಇತರ ವೃತ್ತಿಗಿಂತ ಭಿನ್ನವಾದುದು. ಇದಕ್ಕೆ ಸಾಕ್ಷಿ ಪದವಿಯನ್ನು ಪಡೆಯುವಾಗ ಅವರು ತೆಗೆದುಕೊಳ್ಳುವ ಪ್ರತಿಜ್ಞಾವಿಧಿಯಲ್ಲೇ ಅಂತರ್ಗತವಾಗಿದೆ. ಹಾಗಾಗಿ ಅತ್ಯಂತ ಅನಿವಾರ್ಯವಲ್ಲವಾದರೆ ಪ್ರತಿಭಟನೆ, ಸತ್ಯಾಗ್ರಹಗಳಂತಹ ಹೋರಾಟಕ್ಕಿಳಿಯಬಾರದು. ಸಾಂಕೇತಿಕ ಪ್ರತಿಭಟನೆ ಅಥವಾ ಮುಷ್ಕರವನ್ನು ಅವಲಂಬಿಸಿದರೆ ತಪ್ಪಲ್ಲ. ಇತರ ಸಂದರ್ಭಗಳಲ್ಲಿ ನ್ಯಾಯಾಂಗದ ಮೊರೆ ಹೋಗುವುದು ಸಮರ್ಪಕ ಕ್ರಮ. ಸರಕಾರವು ಅಷ್ಟೆ, ವೈದ್ಯರ ಸ್ಥಾನ ಗೌರವವನ್ನು ಗುರುತಿಸಬೇಕು ಮತ್ತು ಯೋಜನೆಯ ವಿವಿಧ ಹಂತಗಳಲ್ಲಿ ವೈದ್ಯಕೀಯ ಸಂಘಟನೆಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಶೋಷಣೆಯನ್ನು ದೀರ್ಘಕಾಲ ಮುಂದುವರಿಸುವುದು ಸಾಧ್ಯವಲ್ಲ. ಯಾವ ಸಮಾಜವೂ ಅದನ್ನು ಸಹಿಸುವುದೂ ಇಲ್ಲ. ತಮ್ಮಲ್ಲಿ ಶಕ್ತಿಯಿದೆ ಎಂಬ ಕಾರಣಕ್ಕೆ ಆದರ ದುರ್ಬಳಕೆಗೆ ಮುಂದಾದರೆ ಒಂದಷ್ಟು ಕಾಲದ ಬಳಿಕ ರಭಸದಿಂದ ಚೆಂಡು ಹಿಂತಿರುಗುವ ಹಾಗೆ ಶೋಷಕರೂ ತೀವ್ರವಾದ ಪ್ರತಿಭಟನೆಯನ್ನು ಅನುಭವಿಸಬೇಕಾಗುತ್ತದೆ.
ಖಾಸಗಿ ಮತ್ತು ಸರಕಾರಿ ರಂಗಗಳ ಸಮನ್ವಯದೊಂದಿಗೆ ಸರ್ವರಿಗೂ ಸಮ್ಮತವಾಗಬಹುದಾದಂತಹ ಆರೋಗ್ಯ ನೀತಿಯೊಂದನ್ನು ಸೌಹಾರ್ದದ ಅಡಿಪಾಯದ ಮೇಲೆ ನಿರ್ಮಾಣ ಮಾಡಲು, ತುಸು ಆದರ್ಶವೆನಿಸಬಹುದಾದ ಸೂತ್ರವೊಂದನ್ನು ಅಂಗೀಕರಿಸುವುದಕ್ಕೆ ಇನ್ನೂ ಕಾಲ ಮೀರಿಲ್ಲ. ವೈದ್ಯರು ಮತ್ತು ರೋಗಿಗಳು ಒಂದಾಗಿ ಈ ಪ್ರಯತ್ನಕ್ಕೆ ಪೂರಕವಾದ ವಾತಾವರಣವನ್ನು ಸೃಷ್ಟಿಸಬೇಕು.
ಡಾ| ಕೆ. ರಮಾನಂದ ಬನಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.