ಇತಿಹಾಸದ ಪುಟ ಸೇರುವುದೇ ಬಿಎಸ್‌ಎನ್‌ಎಲ್?
Team Udayavani, Oct 6, 2019, 5:42 AM IST
ಸಹಸ್ರಾರು ನೌಕರರಿಗೆ ಅನ್ನ ನೀಡಿ ಜನರಿಗೂ ತೃಪ್ತಿದಾಯಕ ಸೇವೆ ಸಲ್ಲಿಸಿದ ಸಂಸ್ಥೆಯೊಂದರ ದಯಾಮರಣದ ಗತಿಗೆ ಸರಕಾರದ ಅಲಕ್ಷ್ಯ ಬಿಟ್ಟರೆ ಬೇರೆ ಯಾವುದೇ ಕಾರಣಗಳಿಲ್ಲ. ತಂಪು ಹವೆಯಲ್ಲಿ ಕುಳಿತ ಅಧಿಕಾರಿಗಳಿಗೆ ಕೆಳಸ್ತರದ ನೌಕರರ ಬದುಕು ಅಭದ್ರವಾಗಿರುವುದರ ಅರಿವು ಇಲ್ಲವೆ? ಮುನ್ನಡೆಯುತ್ತಿರುವ, ಪ್ರಕಾಶಿಸುತ್ತಿರುವ, ದಾಖಲೆಗಳ ಮೇಲೆ ದಾಖಲೆಗಳನ್ನು ಮಾಡುತ್ತಲೇ ಇರುವ ಭಾರತದ ಸರಕಾರಿ ಸ್ವಾಮ್ಯದ ಸಂವಹನ ವ್ಯವಸ್ಥೆ ಬಾಗಿಲಿಗೆ ಬೀಗ ಜಡಿಯುವ ದುರ್ಗತಿ ಅನಿವಾರ್ಯವಾಗಿತ್ತೆ?
ಭಾರತ ಸಂಚಾರ ನಿಗಮ ಎಂಬ ಹೆಸರು ಒಂದು ಕಾಲದಲ್ಲಿ ಪ್ರತಿಯೊಬ್ಬ ಭಾರತೀಯನ ಹೆಮ್ಮೆಯ ಪ್ರತೀಕವಾಗಿತ್ತು. ಟೆಲಿಫೋನು ಎಂಬ ಮಾಯಾ ಜಾಲದ ಮೂಲಕ ಜಗತ್ತಿನ ಎಲ್ಲೆಡೆಗೆ ಸಂವಹನದ ಅವಕಾಶವನ್ನು ಕಲ್ಪಿಸಿಕೊಟ್ಟಿದ್ದ ಅದು ಸಂಪರ್ಕರಹಿತ ಕಾಡುಮೇಡುಗಳೊಳಗಿನ ಊರುಗಳಿಗೂ ಕಂಬ ಹಾಕಿ, ತಂತಿ ಜೋಡಿಸಿ ಬೇಕಾದವರೊಂದಿಗೆ ಕುಳಿತಲ್ಲೇ ಮಾತನಾಡುವ ಮಹದವಕಾಶವನ್ನು ಹಳ್ಳಿಯ ಮಂದಿಗೂ ಉಚಿತವಾಗಿ ಕಲ್ಪಿಸಿಕೊಟ್ಟಿತ್ತು. ಇಂತಹ ಊರುಗಳಿಗೆ ಮೊದಲ ಸಲ ಟೆಲಿಫೋನು ಲಭಿಸಿದಾಗ ಜನ ಆನಂದ ಭಾಷ್ಪ ಹರಿಸುತ್ತ ನಿರ್ಜೀವಿಯಾದರೂ ಜೀವವುಳ್ಳದ್ದು ಎಂದೇ ಕಲ್ಪಿಸಿಕೊಂಡು ಟೆಲಿಫೋನಿಗೆ ಪ್ರೀತಿಯಿಂದ ಮುತ್ತಿಟ್ಟವರಿದ್ದರು. ಅನಂತರ ಮೊಬೈಲು ಫೋನುಗಳು ಬಂದಾಗಲೂ ಅದನ್ನು ಪಡೆದವರು ತಾವೊಂದು ಅತ್ಯದ್ಭುತ ವಸ್ತುವನ್ನು ಸಂಪಾದಿಸಿದಂತೆ ಸಂತಸಪಟ್ಟಿದ್ದರು. ದೊಡ್ಡ ಬಿದಿರಿನ ಗಳುವಿನ ತುದಿಗೆ ಅಲ್ಯುಮಿನಿಯಂ ತಗಡನ್ನು ಕಟ್ಟಿ ಅದರಿಂದ ಸಂಕೇತ ಪಡೆದು ಮೊಬೈಲಿನಲ್ಲಿ ಮಾತನಾಡುವ ಗ್ರಾಮೀಣ ಭಾಗದವರಿಗೆ ಅಸಾಧ್ಯವಾದುದನ್ನು ಸಾಧಿಸಿದೆವು ಎಂಬ ಹೆಮ್ಮೆ ಇತ್ತು. ಆ ಕಾಲದಲ್ಲಿ ದೂರವಾಣಿ ಸೌಲಭ್ಯ ಸಿಗಬೇಕಿದ್ದರೆ ಠೇವಣಿಯೊಂದಿಗೆ ಅರ್ಜಿ ಸಲ್ಲಿಸಿ ವರ್ಷಾನುಗಟ್ಟಲೆ ಕಾಯುವ ಪರಿಸ್ಥಿತಿ ಇತ್ತು. ಕಡೆಗೂ, “ಹಲೋ’ ಎನ್ನಲು ಸಾಧ್ಯವಾದಾಗ ಭಗೀರಥನಿಗಿಂತಲೂ ದೊಡ್ಡ ಸಾರ್ಥಕ್ಯ ಭಾವ ಮನ ತುಂಬುತ್ತಿತ್ತು.
ಒಂದು ಸಮಯದಲ್ಲಿ ಅಂಚೆ ಇಲಾಖೆಯೊಂದಿಗೆ ಸರಕಾರಿ ಸ್ವಾಮ್ಯದ ದೂರವಾಣಿ ಇಲಾಖೆ ಬೆಸೆದುಕೊಂಡಿದ್ದಾಗ ನಷ್ಟದಲ್ಲಿದ್ದ ಅಂಚೆ ಇಲಾಖೆಯ ನಿರ್ವಹಣೆಯನ್ನು ದೂರವಾಣಿ ಇಲಾಖೆಯ ಲಾಭವೇ ಸರಿದೂಗಿಸುತ್ತಿತ್ತು. ಅಂತಹ ಊರವಾಣಿ ಇಲಾಖೆ ಇಂದು ತನ್ನ ಶವ ಪೆಟ್ಟಿಗೆಗೆ ಯಾವಾಗ ಕೊನೆಯ ಮೊಳೆ ಹೊಡೆಯುತ್ತಾರೋ ಎಂದು ಕಾದು ಕುಳಿತುಕೊಳ್ಳುವ ಹೀನ ಸ್ಥಿತಿ ಬಂದಿದೆ. ಬೆಳ್ತಂಗಡಿಯಂತಹ ಪುಟ್ಟ ಊರಿನ ಬಸ್ ನಿಲ್ದಾಣದ ಬಳಿ ಬೆಚ್ಚಗೆ ಒಳಗೆ ಕುಳಿತಿರಬೇಕಾಗಿದ್ದ ಬಿಎಸ್‌ಎನ್‌ಎಲ್ ನೌಕರರೊಬ್ಬರು ಸುರಿಯುವ ಮಳೆಗೆ ಕೊಡೆ ಹಿಡಿದುಕೊಂಡು ಕುಳಿತ ಮನ ಕಲಕುವ ದೃಶ್ಯ ಕಾಣಿಸುತ್ತದೆ.
“ಉಚಿತವಾಗಿ 4ಜಿ ಸಿಮ್’ ಮಾರುತ್ತಿರುವ ಫಲಕ ಹಾಕಿಕೊಂಡಿದ್ದಾರೆ. ಅರೇ, ಈ ದೂರವಾಣಿಯ ಗೋಪುರದ ಕೆಳಗೆ ನಿಂತರೇ ಸರಿಯಾದ ತ್ರೀಜಿ ಸಂಕೇತ ಸಿಗುವುದಿಲ್ಲ, ಇನ್ನು ಫೋರ್‌ಜಿಯೂ ಕೊಡುತ್ತಾರಾ ಎಂದು ನೋಡಿದರೆ ಆ ಸೌಲಭ್ಯ ಸಿಗುವುದು ಮಂಗಳೂರಿನಂತಹ ಮಹಾನಗರಗಳಿಗೆ ಮಾತ್ರ. ಎಂತಹ ಅಭಿಮಾನವಿದ್ದರೂ ಅತಿ ವೇಗದ ಅಂತರ್ಜಾಲ ಬೇರೆ ಕಂಪೆನಿಗಳಿಂದ ಸಿಗುವಾಗ ಇದನ್ನು ಕೊಳ್ಳಲು ಯಾರು ಮುಂದಾಗುತ್ತಾರೆ?
ಆದರೆ ಭಾರತ ಸಂಚಾರ ನಿಗಮ ತನ್ನ ನೌಕರರಿಗೆ ಅಂತಹ ದುರವಸ್ಥೆಯನ್ನು ತಂದೊಡ್ಡಿದೆ. ಅದರಲ್ಲಿರುವ ನೌಕರರೇ ಹೇಳುವ ಪ್ರಕಾರ ಸಂಬಳದ ಮುಖ ಕಾಣದೆ ತಿಂಗಳುಗಳಾಗಿವೆ. ಮೊದಲು ಅವರು ನಿಗದಿತ ಬ್ಯಾಂಕಿನಿಂದ ಪಡೆದ ಸಾಲದ ಕಂತು, ವಿಮಾ ಪಾಲಿಸಿಯ ಕಂತುಗಳು ಸಂಬಳದಿಂದ ಕಡಿತವಾಗಿ ನೇರ ಅಲ್ಲಿಗೇ ಪಾವತಿಯಾಗುತ್ತಿತ್ತು. ಈಗ ಅಲ್ಲಿಂದ ಕಂತು ಪಾವತಿಗೆ ಕರೆಯೋಲೆ ನೌಕರರಿಗೇ ಬರುತ್ತಿದೆ. ಸ್ಥಿರ ದೂರವಾಣಿಯ ಕಂಬಗಳು ಮುರಿದು ಅಥವಾ ಬೇರೆ ಕಾರಣಗಳಿಂದ ವ್ಯವಸ್ಥೆ ಕೆಟ್ಟುಹೋದರೆ ಅದನ್ನು ದುರಸ್ತಿ ಮಾಡಲು ತಂತ್ರಜ್ಞರೇ ಹಣ ಕೊಟ್ಟು ಕಾರ್ಮಿಕರಿಂದ ಕೆಲಸ ಮಾಡಿಸಬೇಕಾದ ಪರಿಸ್ಥಿತಿಯಿದೆಯಂತೆ. ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಕೈಕೊಟ್ಟರೆ ದೂರವಾಣಿಗಳೂ ತಟಸ್ಥವಾಗುತ್ತವೆ. ಅಂತರ್ಜಾಲದ ಗೋಪುರ ಸುವ್ಯವಸ್ಥಿತ ವಾಗಿರಬೇಕಿದ್ದರೆ ವಿದ್ಯುತ್ ಇಲ್ಲವಾದಾಗ ಜನರೇಟರ್ ಬಳಸುತ್ತಿದ್ದರು. ಈಗ ಅದನ್ನು ನಡೆಸಲು ಸೀಮೆಣ್ಣೆಗೆ ಸರಕಾರ ಹಣ ಕೊಡುವುದಿಲ್ಲ.
ಹೀಗಾಗಿ ನೌಕರರೂ ಅತಂತ್ರರು. ವ್ಯವಸ್ಥೆಯನ್ನೇ ನಂಬಿದವರಿಗೆ ನಿತ್ಯ ಪರದಾಟ. 2022ರ ಹೊತ್ತಿಗೆ ಬಿಎಸ್‌ಎನ್‌ಎನ್‌ಎಲ್ ಪ್ರಪಂಚದಲ್ಲಿ ಅತಿ ವೇಗದ ಅಂತರ್ಜಾಲ ತ್ರೀಫೈವ್ ವ್ಯವಸ್ಥೆ ಹೊಂದಲಿದೆ ಎಂದು ಘೋಷಿಸಿರುವ ಕೇಂದ್ರ ಸರಕಾರ ಯಾವ ಭ್ರಮಾಲೋಕದಲ್ಲಿದೆಯೋ ತಿಳಿಯದು. ಅಷ್ಟರ ತನಕ ಇಲಾಖೆಯನ್ನು ಉಳಿಸಿಕೊಳ್ಳುತ್ತದೆಯೆ? ನೌಕರರ ಸಂಬಳ ವಿತರಣೆಗೆ ಹಣ ಸಾಲ ಪಡೆದ ಬಗೆಗೆ ಸುದ್ದಿಯಾಗಿದೆ. ಅನೇಕ ನಗರಗಳಲ್ಲಿ ಇಲಾಖೆಗೆ ಮೊದಲು ಖರೀದಿಸಿಟ್ಟ ಜಾಗಗಳಿವೆ.
ಈಗಲೂ ಇತರ ಕಂಪೆನಿಗಳ ಹಾಗೆ ಅದು ತನ್ನ ಗೋಪುರ ಅಥವಾ ಕಚೇರಿಗಳನ್ನು ಬಹುತೇಕ ಕಡೆ ಬೇರೆಯವರ ಜಾಗದಲ್ಲಿ ನಿರ್ಮಿಸಿಲ್ಲ. ಸ್ವಂತ ಜಾಗದಲ್ಲಿ ನಿರ್ಮಿಸಿರುವ ಕಾರಣ ತಿಂಗಳಿನ ಬಾಡಿಗೆಯ ಭಾರವೂ ಇಲ್ಲ. ಈಗ ನಗರಗಳಲ್ಲಿರುವ ಜಾಗಗಳನ್ನು ಖಾಸಗಿಯವರಿಗೆ ಮಾರಾಟ ಮಾಡಲು ಇಲಾಖೆಯ ಮೇಲಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆಂದು ಆರೋಪಿಸುವ ನೌಕರರು ತಾವು ಪ್ರಾಮಾಣಿಕತನದಿಂದ ದುಡಿದು ಇಲಾಖೆಯನ್ನು ಲಾಭದ ಹಾದಿಯಲ್ಲಿ ಮುನ್ನಡೆಸಿದ್ದೆವು. ಆದರೆ ಸ್ಪರ್ಧಾತ್ಮಕ ಯುಗದಲ್ಲಿ ಅಂತರ್ಜಾಲದ ತರಂಗಾಂತರಗಳನ್ನು ಖಾಸಗಿಯವರಿಗೆ ಮಾರಿದ ಸರಕಾರ ಮತ್ತು ಉನ್ನತ ಅಧಿಕಾರಿಗಳ ಅಲಕ್ಷ್ಯದಿಂದ ಮಕಾಡೆ ಮಲಗುವ ಶೋಚನೀಯ ಗತಿ ನಮ್ಮ ಮಾತೃಸಂಸ್ಥೆಗೆ ಬಂದಿದೆಯೆಂದು ಕಣ್ಣೀರಿಡುತ್ತಾರೆ.
ಸಹಸ್ರಾರು ನೌಕರರಿಗೆ ಅನ್ನ ನೀಡಿ ಜನರಿಗೂ ತೃಪ್ತಿದಾಯಕ ಸೇವೆ ಸಲ್ಲಿಸಿದ ಸಂಸ್ಥೆಯೊಂದರ ದಯಾಮರಣದ ಗತಿಗೆ ಸರಕಾರದ ಅಲಕ್ಷ್ಯ ಬಿಟ್ಟರೆ ಬೇರೆ ಯಾವುದೇ ಕಾರಣಗಳಿಲ್ಲ. ತಂಪು ಹವೆಯಲ್ಲಿ ಕುಳಿತ ಅಧಿಕಾರಿಗಳಿಗೆ ಕೆಳಸ್ತರದ ನೌಕರರ ಬದುಕು ಅಭದ್ರವಾಗಿರುವುದರ ಅರಿವು ಇಲ್ಲವೆ?
ಮುನ್ನಡೆಯುತ್ತಿರುವ, ಪ್ರಕಾಶಿಸುತ್ತಿರುವ, ದಾಖಲೆಗಳ ಮೇಲೆ ದಾಖಲೆಗಳನ್ನು ಮಾಡುತ್ತಲೇ ಇರುವ ಭಾರತದ ಸರಕಾರಿ ಸ್ವಾಮ್ಯದ ಸಂವಹನ ವ್ಯವಸ್ಥೆ ಬಾಗಿಲಿಗೆ ಬೀಗ ಜಡಿಯುವ ದುರ್ಗತಿ ಅನಿವಾರ್ಯವಾಗಿತ್ತೆ?
– ಪ. ರಾಮಕೃಷ್ಣ ಶಾಸ್ತ್ರೀ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.