ಭ್ರಷ್ಟ ಬಕಾಸುರರು ಬೆಳೆದುದು ಹೇಗೆ?
Team Udayavani, Oct 16, 2018, 6:00 AM IST
ಸರಕಾರಿ ಅಧಿಕಾರಿ, ನೌಕರರೆಲ್ಲರಿಗೂ ಲಂಚ ಸ್ವೀಕರಿಸುವ ಅವಕಾಶವಿರುವುದಿಲ್ಲ. ಕೆಲವೇ ಇಲಾಖೆಯ ಹಾಗೂ ಆ ಇಲಾಖೆಗಳ ಕೆಲವೇ ಹುದ್ದೆಗಳಿಗೆ ಮಾತ್ರ ತಮ್ಮ ಸ್ಥಾನಕ್ಕೆ ದತ್ತವಾದ ಅಧಿಕಾರದ ದುರ್ಬಳಕೆ ಮಾಡಿಕೊಂಡು ಅನಧಿಕೃತ ಸಂಪಾದನೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಅರ್ಥಾತ್ ವಿಶಾಲ ನೌಕರಶಾಹಿಯೊಳಗೆ ಕೇವಲ ಶೇಕಡಾ 20 ರಿಂದ 25ರಷ್ಟು ಅಧಿಕಾರಿಗಳಿಗೆ ಈ ಅವಕಾಶವಿರಬಹುದು. ವಿಚಕ್ಷಣ ದಳದವರು ಕಣ್ಣಿಡಬೇಕಾದ ಹಾಗೂ ಕಣ್ಣಿರಿಕೆಯಲ್ಲಿಡಬೇಕಾದ ಸರಕಾರಿ ಅಧಿಕಾರಿ-ನೌಕರ ವರ್ಗ ಅಂದರೆ ಇದೆ.
ಅಧಿಕಾರಿಗಳ ಮನೆ ಮೇಲೆ ಹಠಾತ್ ದಾಳಿ ನಡೆಸಿದ ಕರ್ನಾಟಕ ಎಸಿಬಿ ವಶಪಡಿಸಿಕೊಂಡ ಅಪಾರ ಚಿನ್ನಾಭರಣ, ಕೋಟಿ ಗಟ್ಟಲೆ ಹಣ, ನೋಟಿನ ಅಟ್ಟಿಗಳನ್ನು ಟಿ.ವಿ. ಚಾನೆಲ್‌ಗಳಲ್ಲಿ ಕಂಡಾಗ ಎಂಥವರಿಗೂ ಮೂಡಬಹುದಾದ ಅನುಮಾನವೆಂದರೆ ಇದು ಒಂದೆರಡು ದಿನ ಅಲ್ಲ, ಒಂದೆರಡು ವರ್ಷ ಅಲ್ಲ, ಹಲವಾರು ವರ್ಷಗಳಿಂದ ಸಂಗ್ರಹಿಸುತ್ತಾ ಬಂದಿರುವ ಸಂಪತ್ತು ಎಂಬುದು. ಪ್ರಸಕ್ತ ದಾಳಿಗೊಳಗಾದ ಅಧಿಕಾರಿಗಳೆಂದರೆ ಕೆಐಎಡಿಬಿ ಮುಖ್ಯ ಅಭಿವೃದ್ಧಿ ಅಧಿಕಾರಿ ಟಿ.ಆರ್. ಸ್ವಾಮಿ ಹಾಗೂ ಬಿಡಿಎ ಇಂಜಿನಿಯರ್ ಎನ್.ಜಿ. ಗೌಡಯ್ಯ. ಮಾಧ್ಯಮಗಳು ಈ ಅಪಾರ ಅನಧಿಕೃತ ಎಂದು ಹೇಳಲಾದ ನಗದುಗಳನ್ನು ಟೆಲಿಕಾಸ್ಟ್ ಮಾಡುತ್ತಾ ವೈಭವೀಕರಿಸಿದವಷ್ಟೆ. ಈ ಕುಳಗಳ ಅಕ್ರಮ ಗಳಿಕೆಗೆ ಪೂರಕವಾದ ಅಥವಾ ಸಹಕಾರಿಯಾದ ಸನ್ನಿವೇಶಗಳ ಹಾಗೂ ಅದರ ಹಿಂದಿರುವ ಶಕ್ತಿಗಳ ಕುರಿತ ಮಾಹಿತಿ ಬಿತ್ತರಿಸಲು ಮಾತ್ರ ಆಸಕ್ತಿ ತೋರಿಸಲಿಲ್ಲ. ಅದು ಎಸಿಬಿ ತನಿಖೆಗೆ ಬಿಟ್ಟ ವಿಚಾರವೆಂಬ ಹಾಗೆ ನಿಶ್ಚಿಂತೆಯಿಂದ ಇರುವುದನ್ನು ಕಾಣುತ್ತಿದ್ದೇವೆ.
ಸರಕಾರಿ ಅಧಿಕಾರಿಗಳ ಅಪರಾಧಕ್ಕೆ ಕೆಲವು ಆಡಳಿತಾತ್ಮಕ ದೋಷಗಳೂ ಕಾರಣವಾಗಿವೆ. ಮೇಲಿನ ಪ್ರಕರಣದಲ್ಲಿ ಆ ಅಧಿಕಾರಿಗಳು ಬಹಳ ವರ್ಷದಿಂದ ಒಂದೇ ಸ್ಥಳದಲ್ಲಿ ಬೀಡುಬಿಟ್ಟಿದ್ದಾರೆ ಎಂಬುದು ಶತಃಸಿದ್ಧ. ಇದು ಆಡಳಿತಾತ್ಮಕ ದೋಷ. ಇದೇ ಭ್ರಷ್ಟಾಚಾರಕ್ಕೆ ಮೂಲ. ಮಾಧ್ಯಮದವರು ಇದರ ಮೇಲೆ ಬೆಳಕನ್ನು ಚೆಲ್ಲುವ ಕೆಲಸ ಮಾಡಬೇಕು. ಆ ಅಧಿಕಾರಿಗಳ ಮೇಲಾಧಿಕಾರಿಗಳನ್ನು, ಇಲಾಖಾ ಮುಖ್ಯಸ್ಥರನ್ನು ಹಾಗೂ ಸಂಬಂಧಪಟ್ಟ ಸಚಿವರ ಸಂದರ್ಶನ ನಡೆಸಿ, ಈ ಅಕ್ರಮ ಹಾಗೂ ದುರ್ನಡತೆಗೆ ಆಡಳಿತವೂ ಸಹಕಾರಿಯಾಗಿದೆ ಎಂಬ ಸತ್ಯಾಂಶವನ್ನು ಸಾರ್ವಜನಿಕರೂ ತಿಳಿಯುವಂತೆ ಮಾಡುವುದೇ ಮಾಧ್ಯಮಗಳ ಕರ್ತವ್ಯ. ಈ ಕ್ರಮದಿಂದ ಎಸಿಬಿ ತನಿಖೆಗೆ ಬಾಧಕವಾಗಲಾರದು. ಎಸಿಬಿ ಮುಂದಿರುವ ಸವಾಲೆಂದರೆ, ಅಪರಾಧ ನಡೆಸಿದ ವಿಧಾನ, ಅಗಾಧತೆ, ಕಾನೂನಿನ ಉಲ್ಲಂಘನೆ ಇತ್ಯಾದಿ. ಜನಸಾಮಾನ್ಯರಿಗೆ ಮಾಹಿತಿ ಹೆಚ್ಚು ಸಿಗುವಂತೆ ಮಾಡುವುದೇ ಪ್ರಜಾಸತ್ತೆಯಲ್ಲಿ ಮಾಧ್ಯಮಗಳ ಅಮೋಘ ಸೇವೆ. ಆ ಕಾರ್ಯವನ್ನು ನಮ್ಮ ಮಾಧ್ಯಮಗಳು ಸಮರ್ಥವಾಗಿ ನಿರ್ವಹಿಸಬೇಕೆಂಬುದೇ ನಮ್ಮ ಆಶಯ.
ನಮ್ಮ ಸಾಮಾನ್ಯ ಕಾನೂನುಗಳಿಂದ ಭ್ರಷ್ಟಾಚಾರದಂಥ ಅಕ್ರಮಗಳನ್ನು ನಿಯಂತ್ರಿಸುವುದು ಅಸಾಧ್ಯವೆಂಬ ಕಾರಣಕ್ಕಾಗಿ ವಿಶೇಷ ಪ್ರಾಧಿಕಾರಗಳನ್ನು ರಚಿಸಲಾಗಿದೆ. ಹಿಂದೆ ಇದ್ದ ವಿಜಿಲೆನ್ಸ್ ಕಮೀಷನನ್ನು ರದ್ದು ಪಡಿಸಿ 1984-85ರಲ್ಲಿ ಕರ್ನಾಟಕ ರಾಜ್ಯದಲ್ಲಿ ಲೋಕಾಯುಕ್ತ ಸಂಸ್ಥೆಯನ್ನು ರಚಿಸಲಾಯಿತು. ಇದೊಂದು ಸ್ವತಂತ್ರ ಪ್ರಾಧಿಕಾರ. ಉಚ್ಚ ಅಥವಾ ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರೇ ಇದರ ಮುಖ್ಯಸ್ಥರು. ಕರ್ನಾಟಕದಲ್ಲಿ ಈ ಪ್ರಾಧಿಕಾರದ ಅಧೀನ ಪೊಲೀಸ್ ದಳವೂ ಇತ್ತು. ದೇಶದಲ್ಲೇ ದಕ್ಷ ಸಂಸ್ಥೆ ಎಂಬ ಹೆಸರನ್ನು ಗಳಿಸಿತ್ತು. ಆದರೆ 2016ರಲ್ಲಿ ಲೋಕಾಯುಕ್ತ ಸಂಸ್ಥೆಗೆ ದತ್ತವಾದ ಕೆಲವು ಅಧಿಕಾರಗಳನ್ನು ಹಾಗೂ ಪೊಲೀಸ್ ವಿಭಾಗವನ್ನು ಕಳಚಿ ಎಸಿಬಿ (Anti Corruption Bureau) ರಚಿಸಲಾಯಿತು. ಇದು ಪೊಲೀಸ್ ದಳ. ಸ್ವತಂತ್ರ ಪ್ರಾಧಿಕಾರವಲ್ಲ. ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ನೇರ ಮೇಲುಸ್ತುವಾರಿಯಲ್ಲಿ ಕಾರ್ಯ ನಿರ್ವಹಿಸುತ್ತದೆ. ಅಂದ ಮಾತ್ರಕ್ಕೆ ಸ್ವತಂತ್ರವಾಗಿ ಹಾಗೂ ನಿಷ್ಪಕ್ಷಪಾತದಿಂದ ಕಾರ್ಯನಿರ್ವಹಿಸಲು ಸಾಧ್ಯವಾಗುವುದಿಲ್ಲ ಎಂದರ್ಥವಲ್ಲ. ಆದರೆ ಅಂಥ ಕಾರ್ಯಕ್ಷಮತೆಯನ್ನು ತೋರಿಸಿದ ಉದಾಹರಣೆಯಿಲ್ಲ.
ಈಗ ಪ್ರಸ್ತಾಪದಲ್ಲಿರುವ ಪ್ರಕರಣದಲ್ಲಿಯೂ ಯಾರೋ ಇಬ್ಬರು ಮಾಹಿತಿ ನೀಡಿದ್ದು, ಖಚಿತಪಡಿಸಿಕೊಂಡ ಬಳಿಕ ಎಸಿಬಿ ದಾಳಿ ನಡೆಸಿದೆ ಎಂದು ಪತ್ರಿಕೆಗಳಲ್ಲಿ ವರದಿಯಾಗಿದೆ. ಹಾಗಾದರೆ ಎಸಿಬಿ ತಾನೇ ಗುಪ್ತವಾಗಿ ಮಾಹಿತಿ ಸಂಗ್ರಹಿಸುವ ಕೆಲಸ ಮಾಡುವುದಿಲ್ಲವೇ? ದೂರು ಅರ್ಜಿ ಬಂದ ನಂತರ ಕಾರ್ಯೋನ್ಮುಖವಾಗುವುದೇ? ವಿಜಿಲೆನ್ಸ್ ಕಮೀಷನ್ ರದ್ದಾದರೂ ಆ ಪದ ವಿಜಿಲೆನ್ಸ್ ಏನು ಧ್ವನಿಸುತ್ತದೋ ಆ ಕೆಲಸವನ್ನು ಈಗ ಭ್ರಷ್ಟಾಚಾರ ನಿಗ್ರಹದಲ್ಲಿ ನಿರತವಾದ ಸಂಸ್ಥೆ ಮಾಡಬೇಕು. ಅದು ಕಣ್ಗಾಪುವಿನ ಕೆಲಸ. ಈ ಕಾರ್ಯವನ್ನು ನಿರಂತರವಾಗಿ ಮಾಡುತ್ತಿದ್ದರೆ ಇಂಥ ಅಪಾರ ಅನಧಿಕೃತ ಸಂಗ್ರಹ ಮಾಡುತ್ತಿರುವುದು ಜಾಗೃತಿ ದಳದ ಗಮನಕ್ಕೆ ಬರುವುದರಲ್ಲಿ ಅನುಮಾನವಿಲ್ಲ. ಖಂಡಿತ ಬರುತ್ತದೆ. ಯಾಕೆಂದರೆ ಈ ಅಕ್ರಮ ಗಳಿಕೆ ಆಗಲೇ ಹೇಳಿದ ಹಾಗೆ ದೀರ್ಘಕಾಲದಿಂದ ಸಂಗ್ರಹಿಸುತ್ತಾ ಬಂದಿರುವ ನಿಧಿ. ನಮ್ಮ ಜಾಗೃತಿ ದಳಗಳ ಸಾಮರ್ಥ್ಯವನ್ನು ಪ್ರಶ್ನಿಸುವಂತಿಲ್ಲ. ನಮ್ಮ ಪೊಲೀಸರು ಸ್ಕಾಟ್‌ಲ್ಯಾಂಡ್ ಯಾರ್ಡ್ ಪೋಲೀಸರ ಸಾಮರ್ಥ್ಯಕ್ಕೆ ಕಡಿಮೆ ಇಲ್ಲದವರು ಎಂದರೆ ಅತಿಶಯೋಕ್ತಿಯಲ್ಲ. ಆದರೆ ದಕ್ಷತೆ! ಆಡಳಿತದ ಪರಿಭಾಷೆಯಲ್ಲಿ ದಕ್ಷತೆ ಎಂದರೆ ಪ್ರಾಮಾಣಿಕತೆ ಹಾಗೂ ಕಾರ್ಯಕೌಶಲ್ಯದ ಮಿಶ್ರಣ. ಈಗಿನ ವಿಳಂಬ ದಾಳಿಗೆ ದಕ್ಷತೆಯ ಕೊರತೆಯೇ ಕಾರಣ.
ಸರಕಾರಿ ಅಧಿಕಾರಿ, ನೌಕರರೆಲ್ಲರಿಗೂ ಲಂಚ ಸ್ವೀಕರಿಸುವ ಅವಕಾಶವಿರುವುದಿಲ್ಲ. ಕೆಲವೇ ಇಲಾಖೆಯ ಹಾಗೂ ಆ ಇಲಾಖೆಗಳ ಕೆಲವೇ ಹುದ್ದೆಗಳಿಗೆ ಮಾತ್ರ ತಮ್ಮ ಸ್ಥಾನಕ್ಕೆ ದತ್ತವಾದ ಅಧಿಕಾರದ ದುರ್ಬಳಕೆ ಮಾಡಿಕೊಂಡು ಅನಧಿಕೃತ ಸಂಪಾದನೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಅರ್ಥಾತ್ ವಿಶಾಲ ನೌಕರಶಾಹಿಯೊಳಗೆ ಕೇವಲ ಶೇಕಡಾ 20 ರಿಂದ 25ರಷ್ಟು ಅಧಿಕಾರಿ ನೌಕರರುಗಳಿಗೆ ಈ ಅವಕಾಶವಿರಬಹುದು.
ಬಹುಪಾಲು ಸರಕಾರಿ ನೌಕರರು ತಮ್ಮ ವೇತನದ ಮಿತಿಯ ಲ್ಲಿಯೇ ಜೀವನ ಸಾಗಿಸುತ್ತಿರುವಾಗ, ಅಲ್ಲಿಯೋ ಇಲ್ಲಿಯೋ ಕೆಲವೇ ಮಂದಿ ಸರಕಾರಿ ಅಧಿಕಾರಿಗಳ ಜೀವನ ಶೈಲಿಯಲ್ಲಿ ಆಗುತ್ತಿ ರುವ ಬದಲಾವಣೆಗಳು ಜಾಗೃತಿ ದಳದ ಗಮನಕ್ಕೆ ತಕ್ಷಣ ಬಂದೇ ಬರುತ್ತದೆ. ಅದರಲ್ಲಿಯೂ ಜಾಗೃತಿ ದಳದ ಮುಖ್ಯ ಕಾರ್ಯವೇ ಬೇಹುಗಾರಿಕೆ. ದೂರಿಗಾಗಿ ಕಾಯುವುದಲ್ಲ. ಅಂಥ ಕಮಟು ವಾಸನೆ ಜಾಗೃತ ದಳದ ಮೂಗಿಗೆ ಬಡಿಯುತ್ತಲೇ ಕಾರ್ಯೋನ್ಮುಖ ವಾಗಬೇಕಾದುದು ಕರ್ತವ್ಯ. ಈಗ ಸ್ವಾಮಿಯನ್ನು ಹಾಗೂ ಗೌಡಯ್ಯನನ್ನು ಗುರಿ ಇಟ್ಟುಕೊಂಡು ದಾಳಿ ನಡೆಸಿದ್ದಾರೆ ಎಂದರೆ ಇಲ್ಲಿಯ ತನಕ ಉದ್ದೇಶಪೂರ್ವಕವಾಗಿ ದಾಳಿ ನಡೆಸಲಾಗಿಲ್ಲ. ಹಾಗೆ ತಡೆಹಿಡಿಯುವಲ್ಲಿ ಯಾರೋ ಪ್ರಭಾವ ಬೀರಿದ್ದಾರೆ ಮತ್ತು ಈಗ ಆ ಪ್ರಭಾವಿಗಳು ಸೂಚನೆ ನೀಡಿರಬಹುದೆಂತಲೂ ಹಾಗೂ ಈ ನಡುವೆ ಎಸಿಬಿಯ ಕೃಪೆಯೂ ಇತ್ತು ಎಂದು ಹಲವು ರೀತಿಯಲ್ಲಿ ಅನುಮಾನಿಸಲು ಅವಕಾಶ ಉಂಟು.
ಈಗ ಹೇಳಿ, ಸ್ವಯಂ ಪ್ರೇರಣೆಯಿಂದ, ನಿಷ್ಪಕ್ಷಪಾತವಾಗಿ, ಸಕಾಲದಲ್ಲಿ ಕ್ರಮಕೈಗೊಳ್ಳದಿರುವ ಭ್ರಷ್ಟಾಚಾರ ನಿಗ್ರಹ ದಳಗಳು ನಮಗೆ ಬೇಕೇ? ಇಂಥ ದುರ್ಬಲ ವ್ಯವಸ್ಥೆ ಇರುವುದರಿಂದಲೇ, ಸರಕಾರಿ ಬಕಾಸುರರು ಬೆಳೆಯಲು ಸಾಧ್ಯವಾಯಿತಲ್ಲವೇ. ಮಾಧ್ಯಮದವರು ಇಂಥ ಗಹನವಾದ ಮಾಹಿತಿಗಳನ್ನು ಸಂಗ್ರಹಿಸಿ ಸಾರ್ವಜನಿಕರಿಗೆ ತಲುಪಿಸುವ ವ್ಯವಸ್ಥೆ ಮಾಡುವುದು ಆಡಳಿತವನ್ನು ನಿಯಂತ್ರಿಸಲು ಸಹಕಾರಿ. ದುರದೃಷ್ಟವೇನೆಂದರೆ ನಮ್ಮ ಮಾಧ್ಯಮಗಳು ವಿಷಯ ಮೂಲಕ್ಕೆ ಇಳಿಯುವುದೇ ಇಲ್ಲ. ದಾಳಿ ಮಾಡಿದ ದಿನ ಇಡೀ ಆ ಚಿನ್ನದ ಗಂಟು, ನೋಟಿನ ಕಂತೆಯನ್ನು ತೋರಿಸಿದರು.
ಹೇಳಿದ್ದನ್ನೇ ನೂರಾರು ಸಲ ಹೇಳಿದರು. ಮರುದಿನ ಅವರಿಗೆ ಬೇರೆ ವಿಷಯ ಇದೆ. ಬೆಂಗಳೂರಿನಲ್ಲಿ ನೆರೆ, ಮಂಗಳೂರಿನಲ್ಲಿ ಮೀನುಗಾರರಿಗೆ ಎಚ್ಚರಿಕೆ, ಸಮ್ಮಿಶ್ರ ಸರಕಾರದಲ್ಲಿ ಬಿರುಕು ಇತ್ಯಾದಿ. ಸುದ್ದಿಯ ಬೆನ್ನುಹತ್ತಿ ಹೋಗುವ ಪರಿಪಾಠವಿಲ್ಲ. ಉದಾ: ಸರಕಾರಿ ನೌಕರರ ವರ್ಗಾವಣೆಯನ್ನು ಪ್ರಕಟಪಡಿಸುವುದು ಮಾಧ್ಯಮಗಳಿಗೆ ಅದೊಂದು ಸುದ್ದಿ ಎಂಬ ಹಾಗೆ. ಆದರೆ ಗೊತ್ತುಗುರಿಯಿಲ್ಲದೆ, ವರ್ಷದ ಎಲ್ಲ ಕಾಲದಲ್ಲಿಯೂ ನಡೆಯುವ ಸರಕಾರಿ ಅಧಿಕಾರಿಗಳ ವರ್ಗಾವಣೆಯಲ್ಲಿ ಸಾರ್ವಜನಿಕ ಹಿತಾಸಕ್ತಿ ಇದೆಯೋ ಎನ್ನುವ ವಿಷಯದ ಮೇಲೆ ಕ್ಷ-ಕಿರಣ ಬೀರುವ ಪ್ರಯತ್ನವನ್ನು ಮಾಧ್ಯಮದವರು ಮಾಡುತ್ತಿಲ್ಲ. ಭಾರತದಲ್ಲಿ ಮಾಧ್ಯಮಗಳು ನಿಜ ನಾಲ್ಕನೇ ಅಂಗ ಎಂಬ ಹಾಗೆ ಶ್ರುತಪಡಿಸಲು ಇನ್ನೂ ಶಕ್ತವಾಗಿಲ್ಲ ಎಂದರೆ ಅವಸರದ ಹೇಳಿಕೆಯಾಗಲಾರದು. ಆತಂಕಗಳಿರಬಹುದು. ಆದರೆ ಜವಾಬ್ದಾರಿಯನ್ನು ಮರೆಯುವಂತಿಲ್ಲ.
ಬೇಳೂರು ರಾಘವ ಶೆಟ್ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Team India; ಅಶ್ವಿನ್ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್
Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ
Kambli Health: ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!
Unlock Raghava Movie: ರಾಘವನ ಮೇಲೆ ಕಣ್ಣಿಟ್ಟ ರಚೆಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.