ಮೌಲ್ಯಗಳ ಗುರುತಿಸುವುದು ಹೇಗೆ?
Team Udayavani, Sep 2, 2017, 10:18 AM IST
ಮೌಲ್ಯಗಳು ತನ್ನ ಸುತ್ತಮುತ್ತಲಿನವರಿಗೆ ಸಮ್ಮತವಾಗಿರಬೇಕೆಂದೇನೂ ಇಲ್ಲ. ಕೆಲವೊಮ್ಮೆ ಆ ಮೌಲ್ಯಗಳೇ ಆ ವ್ಯಕ್ತಿಗೆ ವೈರಿಯಾಗಿ ನಿಂತು ಪರೀಕ್ಷೆ ಮಾಡುತ್ತದೆ. ಮೌಲ್ಯಗಳನ್ನು ನಂಬಿದ ವ್ಯಕ್ತಿ ಒಂಟಿಯಾಗಿ, ಅನಾಥ ಪ್ರಜ್ಞೆಯಿಂದ ಬಳಲಬಹುದು.
ಮೌಲ್ಯ ಮತ್ತು ಮಸಲ್ ಪವರ್‌ಗಳ ನಡುವಿನ ಸಂಘರ್ಷಕ್ಕೆ ದೀರ್ಘವಾದ ಇತಿಹಾಸವಿದೆ. ಅದನ್ನು ದೇವತೆಗಳ ಮತ್ತು ರಾಕ್ಷಸರ ಸಂಘರ್ಷದವರೆಗೂ ಕೊಂಡುಹೋಗಬಹುದು. ಸಾಕ್ರೆಟಿಸ್, ಏಸು ಮೊದಲಾದವರು ತಾವು ನಂಬಿದ ಮೌಲ್ಯಗಳನ್ನು ಬಿಡದೆ ಇದ್ದಾಗ ಅಧಿಕಾರ ಕೇಂದ್ರಗಳು ಅವರ ಧ್ವನಿಗಳನ್ನು ಮಸಲ್ ಪವರಿನ ಮೂಲಕ ಹತ್ತಿಕ್ಕಿದವು. ಆದರೆ ಕೊನೆಗೆ ಅವರು ನಂಬಿದ ಮೌಲ್ಯಗಳಿಗೆ ಜಯವಾಯಿತು. ಮಸಲ್ ಪವರ್‌ಗಳು ತತ್‌ಕ್ಷಣದ ವಿಜಯದಲ್ಲಿ ವಿಜೃಂಭಿಸಬಹುದು. ಆದರೆ ಅಂತಿಮ ಜಯ ಮೌಲ್ಯಗಳಿಗೆ ಎಂಬುದಕ್ಕೆ ನಮ್ಮ ಮುಂದೆ ನಡೆಯುವ ಅನೇಕ ಘಟನೆಗಳು ಸಾಕ್ಷಿಯಾಗಿ ನಿಲ್ಲುತ್ತವೆ.
ಮೌಲ್ಯಗಳು ಇದ್ದಕ್ಕಿದ್ದ ಹಾಗೆ ಧುತ್ ಎಂದು ಕಾಣಿಸಿಕೊಳ್ಳುವ ಕಾಮನಬಿಲ್ಲಲ್ಲ. ಅದು ವ್ಯಕ್ತಿಯೊಬ್ಬನ ಬದುಕಿನಲ್ಲಿ ಪ್ರಯೋಗವಾಗಿ, ಆ ಪ್ರಯೋಗದಲ್ಲಿ ಗೆದ್ದು ಬಂದ ವಿಚಾರಗಳು. ಮೌಲ್ಯಗಳು ವ್ಯಕ್ತಿಯನ್ನು ಒಂದು ಮಾಧ್ಯಮವನ್ನಾಗಿಸಿಕೊಂಡು ತಮ್ಮನ್ನು ಅನಾವರಣಗೊಳಿಸಿಕೊಳ್ಳುತ್ತವೆ. ಉದಾಹರಣೆಗೆ, ಹರಿಶ್ಚಂದ್ರ ಸತ್ಯವನ್ನೇ ಪ್ರಧಾನ ಮೌಲ್ಯವೆಂದು ನಂಬಿಕೊಂಡಿದ್ದವನು. ಹರಿಶ್ಚಂದ್ರ ಸತ್ಯವನ್ನು ಹೇಳಿದ ಎನ್ನುವುದಕ್ಕಿಂತ ಸತ್ಯವು ಹರಿಶ್ಚಂದ್ರನ ಮೂಲಕ ತನ್ನನ್ನು ಪ್ರಕಟಿಸಿಕೊಂಡಿತು ಎಂದು ಹೇಳುವುದು ಹೆಚ್ಚು ಸರಿ. ಹೀಗೆ ಅನೇಕ ಮೌಲ್ಯಗಳು ತಮ್ಮನ್ನು ಪ್ರಕಟಿಸಿಕೊಳ್ಳಲು ಯೋಗ್ಯ ವ್ಯಕ್ತಿಗಳನ್ನು ಹುಡುಕುತ್ತಿರುತ್ತವೆ. ಸಮಯ ಸಂದರ್ಭ ಬಂದಾಗ ತಮ್ಮನ್ನು ಪ್ರಕಟಿಸಿಕೊಳ್ಳುತ್ತವೆ. ಒಂದು ಮೌಲ್ಯ ತನ್ನ ಅಭಿವ್ಯಕ್ತಿಗೆ ವ್ಯಕ್ತಿಯನ್ನು ಆಯ್ಕೆ ಮಾಡುವ ಮೊದಲು ಆತನನ್ನು ಬೆಂಕಿಯಲ್ಲಿಟ್ಟು ಸುಡುತ್ತದೆ, ಸುತ್ತಿಗೆಯಲ್ಲಿ ಬಡಿಯುತ್ತದೆ, ಕತ್ತರಿಯಿಂದ ಕತ್ತರಿಸುತ್ತದೆ. ಈ ಎಲ್ಲ ಪರೀಕ್ಷೆಗಳಲ್ಲಿ ಆ ವ್ಯಕ್ತಿ ಗೆದ್ದುಬಂದಾಗ ಮೌಲ್ಯ ಆ ವ್ಯಕ್ತಿಯಲ್ಲಿ ಪ್ರಕಟಗೊಳ್ಳುತ್ತದೆ.
ವ್ಯಕ್ತಿಯೊಬ್ಬ ತನ್ನ ಬದುಕಿನಲ್ಲಿ ಅನೇಕ ಮೌಲ್ಯಗಳನ್ನು ಇಟ್ಟುಕೊಂಡು ಬದುಕುತ್ತಿರುತ್ತಾನೆ. ಆ ಮೌಲ್ಯಗಳು ತನ್ನ ಸುತ್ತಮುತ್ತಲಿನವರಿಗೆ ಸಮ್ಮತವಾಗಿರಬೇಕೆಂದೇನೂ ಇಲ್ಲ. ಕೆಲವೊಮ್ಮೆ ಆ ಮೌಲ್ಯಗಳೇ ಆ ವ್ಯಕ್ತಿಗೆ ವೈರಿಯಾಗಿ ನಿಂತು ಪರೀಕ್ಷೆ ಮಾಡುತ್ತದೆ. ವ್ಯಕ್ತಿಯ ಮೌಲ್ಯಗಳನ್ನು ಒಪ್ಪದ ಜನರೆಲ್ಲ ಒಟ್ಟಾಗಿ ಬೇರೆ ಬೇರೆ ವಿಧಾನದ ಮೂಲಕ, ಮಾಧ್ಯಮಗಳ ಮೂಲಕ, ಸಂಘಟನೆಗಳ ಚಳವಳಿಗಳ ಮೂಲಕ ಪ್ರತಿಭಟಿಸಬಹುದು. ಮೌಲ್ಯಗಳನ್ನು ನಂಬಿದ ವ್ಯಕ್ತಿ ಒಂಟಿಯಾಗಿ, ಅನಾಥ ಪ್ರಜ್ಞೆಯಿಂದ ಬಳಲಬಹುದು. ಭಾರತಕ್ಕೆ ಸ್ವಾತಂತ್ರ ದೊರೆತ ಮರುದಿನ ಗಾಂಧೀಜಿಯವರು ಕಲ್ಕತ್ತಾ ಬೀದಿಯಲ್ಲಿ ಒಂಟಿಯಾಗಿ ತಿರುಗುತ್ತಿದ್ದರಂತೆ. ಅವರನ್ನು ಕೇಳುವರು, ಮಾತನಾಡಿಸುವವರು ಯಾರೂ ಇರಲಿಲ್ಲ. ಅವರು ನಂಬಿಕೊಂಡಿದ್ದ ಸತ್ಯ, ಅಹಿಂಸೆ, ತ್ಯಾಗ, ಸಾಮರಸ್ಯಗಳೆಂಬ ಮೌಲ್ಯಗಳು ಬೀದಿಯ ಅನಾಥ ಮಕ್ಕಳಾದುವು. ಆ ಮಕ್ಕಳನ್ನು ಎತ್ತಿ ಆಡಿಸುವವರು ಕೆಲವರು ಅನಂತರ ಹುಟ್ಟಿ ಬಂದರು ಎಂಬುದು ಮೌಲ್ಯಗಳ ಬಗ್ಗೆ ಭರವಸೆಯನ್ನು ಮತ್ತೆ ತುಂಬುವಂತೆ ಮಾಡಿತು. ವ್ಯಕ್ತಿಗೆ ಹೀಗೆ ಬರುವ ಪರೀಕ್ಷೆಗಳು ಆತನ ಸಣ್ತೀ ಪರೀಕ್ಷೆಯ ಕಾಲಘಟ್ಟವಾಗಿರುತ್ತದೆ. ಇದಲ್ಲದೆ ತನ್ನೊಂದಿಗೆ ದಿನನಿತ್ಯ ಇದ್ದು, ತನ್ನಿಂದ ಲಾಭಪಡೆದುಕೊಂಡ ಹಿತಶತ್ರುಗಳು ಯಾರೆಂದು ಗುರುತಿಸುವ ಸಂದರ್ಭವೂ ಇದಾಗಿರುತ್ತದೆ.
ವ್ಯಕ್ತಿಯ ಮೌಲ್ಯಗಳನ್ನು ಗುರುತಿಸುವುದು ಹೇಗೆ? ಮೌಲ್ಯಮಾಪನ ಮಾಡುವುದು ಹೇಗೆ ಎಂಬುದು ದೊಡ್ಡ ಪ್ರಶ್ನೆ. ಇದಕ್ಕೆ ಪ್ರಧಾನವಾಗಿ ಮೂರು ಮಾರ್ಗಗಳಿವೆ. ಮೊದಲನೆಯದ್ದು ವ್ಯಕ್ತಿ ತನ್ನ ಬಗ್ಗೆ ಬರೆದ, ಹೇಳಿರುವ ಬರವಣಿಗೆಗಳು ಮತ್ತು ಮಾತುಗಳು. ವ್ಯಕ್ತಿ ಆತ್ಮಚರಿತ್ರೆ ಬರೆದಿದ್ದರೆ ಆತನ ಮೌಲ್ಯಗಳನ್ನು ಗುರುತಿಸುವುದು ಸುಲಭ. ಆದರೆ ಇದನ್ನು ನೂರು ಶೇಕಡಾ ನಂಬಲು ಸಾಧ್ಯವಿಲ್ಲ. ಯಾಕೆಂದರೆೆ ಎಷ್ಟೋ ವ್ಯಕ್ತಿಗಳ ಆತ್ಮಚರಿತ್ರೆಗಳು ಆತ್ಮರತಿಗಳಾಗಿವೆ. ಹೇಳಿದ ಮಾತಿಗೂ ಬದುಕುವ ರೀತಿಗೂ ಯಾವುದೇ ಸಂಬಂಧವಿಲ್ಲದೆ ಇರಬಹುದು.
ಎರಡನೆಯ ಮಾರ್ಗವೆಂದರೆ, ವ್ಯಕ್ತಿಯ ಬಗ್ಗೆ ಬೇರೆಯವರು ಹೇಳಿದ ಮತ್ತು ಬರೆದ ಮಾತುಗಳು ಹಾಗೂ ಬರವಣಿಗೆಗಳು. ಇದು ಕೆಲವೊಮ್ಮೆ ವ್ಯಕ್ತಿಯ ಮೇಲಿನ ದಾಕ್ಷಿಣ್ಯಕ್ಕೆ ಒಳಗಾಗಿ, ಪಡೆದ ಉಪಕಾರದ ಋಣಕ್ಕೆ ಒಳಗಾಗಿ ವ್ಯಕ್ತಿಯನ್ನು ಹೊಗಳಿರಬಹುದು. ಆತನ ಮೌಲ್ಯಗಳಲ್ಲಿ ಬೆಂಬಲಿಸಿರಬಹುದು. ಇದಲ್ಲದೆ ವ್ಯಕ್ತಿ ಹಣಕೊಟ್ಟು ಬರೆಸಬಹುದು. ಹೀಗಾಗಿ ಇದೂ ಕೂಡ ನೂರು ಶೇಕಡಾ ನಂಬಲು ಅಸಾಧ್ಯವಾಗಿರುತ್ತದೆ.
ಮೂರನೆಯ ಮಾರ್ಗ ಸತ್ಯಕ್ಕೆ ಹತ್ತಿರವಾದದ್ದು ಮತ್ತು ಹೆಚ್ಚು ಮೂರ್ತರೂಪದ್ದು. ಅದೆಂದರೆ ವ್ಯಕ್ತಿ ನಂಬಿದ ಮೌಲ್ಯಗಳು ಆತನ ಬದುಕಿನಲ್ಲಿ ಹೇಗೆ ಸಾಕಾರಗೊಂಡಿವೆ ಎಂಬುದನ್ನು ನೋಡುವುದು. ಆತ ಬದುಕಿನಲ್ಲಿ ಏನು ಮಾಡಿದ್ದಾನೆ ಅಥವಾ ಅವನು ಮಾಡಿದ ಕೆಲಸ, ಆತನು ನಂಬಿದ ಮೌಲ್ಯಗಳನ್ನು ಬಿತ್ತರಿಸುವಲ್ಲಿ ಎಷ್ಟು ಸಫಲವಾಗಿದೆ ಎಂಬುದು. ಜನರು ಇದನ್ನು ನೋಡಿ ವ್ಯಕ್ತಿಯ ಮೌಲ್ಯ ಮತ್ತು ವ್ಯಕ್ತಿತ್ವವನ್ನು ಮೌಲ್ಯಮಾಪನ ಮಾಡಬೇಕು. ಇಲ್ಲಿ ವ್ಯಕ್ತಿ ಮಾತನಾಡದೆ, ಆತನ ಸ್ನೇಹಿತರು, ಬಂಧುಗಳು ಮಾತನಾಡದೆ ಆತನ ಸಾಧನೆ ಮಾತನಾಡಬೇಕು. ಎಲ್ಲಾ ಟೀಕೆಗಳಿಗೂ, ವಿಮರ್ಶೆಗಳಿಗೂ ಅದುವೇ ಉತ್ತರವಾಗಬೇಕು.
ವ್ಯಕ್ತಿಯ ಚಾರಿತ್ರ ವಧೆಯನ್ನು ಬೇರೆ ಬೇರೆ ಸ್ವಾರ್ಥಗಳಿಗಾಗಿ ಮಾಡಲಾಗುತ್ತದೆ. ಇತ್ತೀಚೆಗಂತೂ ಅದಕ್ಕೊಂದು ಅನೌಪಚಾರಿಕ ರೂಪ (Format) ಸಿದ್ಧಿಸಿದೆ. ಇದಕ್ಕಾಗಿ ಖಾಸಗಿ ಟಿ.ವಿ. ಚಾನಲ್‌ಗಳು ಮತ್ತು ಸಾಮಾಜಿಕ ಜಾಲತಾಣಗಳು ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು ಅದಕ್ಕೊಂದು ಚಳುವಳಿಯ ರೂಪ ಕೊಡಲು ಪ್ರಯತ್ನಿಸುತ್ತಿವೆ. ಇಂತಹ ಚಾರಿತ್ರ್ಯ ವಧೆಯ ಚಕ್ರವ್ಯೂಹದಲ್ಲಿ ಸ್ವಾಮೀಜಿಗಳು, ರಾಜಕಾರಣಿಗಳು, ಪ್ರತಿಷ್ಠಿತ ವ್ಯಕ್ತಿಗಳು, ಸಿನಿಮಾ ತಾರೆಯರು ಸಿಲುಕಿ ಪರದಾಡುವಂತಾಗಿದೆ. ಖಾಸಗಿ ಟಿ.ವಿ. ಚಾನಲ್‌ಗಳು ತಮ್ಮ ಟಿ.ಆರ್.ಪಿ.ಯನ್ನು ಇವುಗಳ ಮೂಲಕ ಹೆಚ್ಚಿಸತೊಡಗಿವೆ.
ವ್ಯಕ್ತಿ ನಿಜವಾಗಿ ಅಪರಾಧಿಯಾಗಿದ್ದರೆ ಸಮಾಜಕ್ಕೆ ಇದರಿಂದ ಪ್ರಯೋಜನವಾಗಬಹುದು. ಇದರ ಬದಲು ವ್ಯಕ್ತಿ ನಿರಪರಾಧಿಯಾಗಿದ್ದರೆ ಆತನ ಚಾರಿತ್ರ ವಧೆಯಿಂದಾದ ನಷ್ಟವನ್ನು ತುಂಬಲು ಈ ಮಾಧ್ಯಮಗಳು ಎಷ್ಟು ಸಹಕರಿಸುತ್ತವೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಇದಕ್ಕೊಂದು ಉದಾಹರಣೆಯನ್ನು ಕೊಡಬಹುದು ಕೆಲವು ವರ್ಷಗಳ ಹಿಂದೆ ಹೈಸ್ಕೂಲ್ ಶಿಕ್ಷಕನೊಬ್ಬನ ಕಾರಣದಿಂದ ಅವನ ವಿದ್ಯಾರ್ಥಿನಿಯೊಬ್ಬಳು ಗರ್ಭಿಣಿಯಾದ ವಿಚಾರ ದೊಡ್ಡ ಸುದ್ದಿಯಾಯಿತು. ಮಾಧ್ಯಮಗಳು ಮುಖಪುಟದಲ್ಲಿ ಇದನ್ನು ಭಾರೀ ಸುದ್ದಿ ಮಾಡಿದವು. ಊರಿನ ಹೆಂಗಸರೆಲ್ಲ ಸೇರಿ ಸೆಗಣಿ ನೀರು ಮುಳುಗಿಸಿದ ಹಿಡಿಸೂಡಿಯಿಂದ ಆ ಶಿಕ್ಷಕನಿಗೆ ಹೊಡೆದರು. ಆದರೆ ಅನಂತರದ ವೈದ್ಯಕೀಯ ಪರೀಕ್ಷೆಯಿಂದ ಆತ ನಿರಪರಾಧಿಯೆಂದು ಗೊತ್ತಾಯಿತು. ಹುಡುಗಿಯ ಆ ಸ್ಥಿತಿಗೆ ಆಕೆಯ ಸಂಬಂಧಿಕನೇ ಕಾರಣವೆಂದು ತನಿಖೆಯಿಂದ ಗೊತ್ತಾಯಿತು. ಆ ಶಿಕ್ಷಕ ಅಪರಾಧಿಯೆಂದು ಪ್ರಚಾರ ಮಾಡಲು ತೆಗೆದುಕೊಂಡ ಉತ್ಸಾಹದ ಶೇಕಡಾ ಹತ್ತಷ್ಟನ್ನು ನಿರಪರಾಧಿಯೆಂದು ಪ್ರಚಾರ ಮಾಡಲು ತೆಗೆದುಕೊಳ್ಳಲಿಲ್ಲ. ಆತ ಕಳೆದುಕೊಂಡ ಚಾರಿತ್ರ್ಯವನ್ನು ಅನುಭವಿಸಿದ ನೋವು, ಅವಮಾನವನ್ನು ಮತ್ತೆ ಹೇಗೆ ತುಂಬಿಸುವುದು? ಕತ್ತರಿಸಿದ ಮೂಗನ್ನು ಮತ್ತೆ ಜೋಡಿಸುವುದು ಹೇಗೆ? ಹಾಗಾಗಿ ಚಾರಿತ್ರ ವಧೆ ಮಾಡುವ ಮೊದಲು ಆ ಪ್ರಕರಣವನ್ನು ಕಾನೂನಾತ್ಮಕವಾಗಿ ತನಿಖೆ ಮಾಡಿ, ಕಾನೂನಾತ್ಮಕವಾಗಿ ಶಿಕ್ಷೆಯಾಗುವಂತೆ ಜನಾಂದೋಲನಗಳು ನಡೆಯಬೇಕು. ಮಾಧ್ಯಮವಾಗಲಿ, ಸಾಮಾಜಿಕ ಜಾಲತಾಣಗಳಾಗಲಿ ತೀರ್ಪು ನೀಡುವ ಕೋರ್ಟುಗಳಾಗಬಾರದು. ಆಗ ನಮ್ಮ ನ್ಯಾಯಾಂಗದ ಬಗ್ಗೆ ಜನರಿಗೆ ಗೌರವ, ಪ್ರೀತಿ ಉಂಟಾಗುತ್ತದೆ.
ಟಿ. ಎ. ಎನ್. ಖಂಡಿಗೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ
Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು
Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ
Kasaragod: ಬಟ್ಟಿಪದವು; ಪ್ಲೈವುಡ್ ಮಿಲ್ಲಿಗೆ ಬೆಂಕಿ
Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.