ವೈದ್ಯನ ಬೆನ್ನೆಲುಬು ಮುರಿದರೆ ಸಮಾಜವನ್ನು ಕಾಯುವವರಾರು?
Team Udayavani, Nov 3, 2017, 11:03 AM IST
ಖಾಸಗಿಯವರು ಮಾಡುವ ಸೇವೆ ಹಳ್ಳಿ ಸೇವೆಯಲ್ಲವೇ? ಖಾಸಗಿ ವೈದ್ಯರು ಅಷ್ಟೊಂದು ವರ್ಷ ಮಾಡಿದ ಹಳ್ಳಿ ಸೇವೆಗೆ ಸರಕಾರದಿಂದ ಏನು ಮನ್ನಣೆ ದೊರೆತಿದೆ? ಏನು ಸಾಮಾಜಿಕ ಭದ್ರತೆ, ಪಿಂಚಣಿ ದೊರೆತಿದೆ?
ಇತ್ತೀಚಿನ ದಿನಗಳಲ್ಲಿ ವೈದ್ಯಲೋಕದ ಮೇಲೆ ಸತತ ದಾಳಿ ನಡೆಯುತ್ತಿದೆ. ವಾಗ್ಧಾಳಿ, ದೈಹಿಕ ದಾಳಿ, ಅಧಿಕಾರದ ದಾಳಿ, ಅಸೂಯೆಯ ದಾಳಿ, ದ್ವೇಷದ ದಾಳಿ… ಹೀಗೆ ಏನೇನೋ… ಇದಕ್ಕೆ ಕಾರಣ ಅರಿತೋ ಅರಿಯದೆಯೋ ವೈದ್ಯ ಮಿತ್ರರಿಂದ ಅಲ್ಲಿ ಇಲ್ಲಿ ನಡೆದ ಪ್ರಮಾದಗಳು ಇರಬಹುದು. ಆದರೆ ಹೆಚ್ಚಿನಂಶವೂ ಯಾವುದೇ ರಾಜಕೀಯ ಮಾಡದೇ ತಮ್ಮ ಪಾಲಿಗೆ ತಾವು ಇದ್ದುಕೊಂಡು ಘನತೆಯಿಂದ ತಮ್ಮ ವೃತ್ತಿಯನ್ನು ಮಾಡುವ ವೈದ್ಯರ ಮೇಲೆ ಆಡಳಿತವರ್ಗವು ಸಮಾಜವನ್ನೇ ಎತ್ತಿಕಟ್ಟುವ ಅಜೆಂಡಾ ಇದು ಎಂಬಂತೆ ಎದ್ದು ಕಾಣಿಸುತ್ತದೆ. ವೈದ್ಯರನ್ನು ಅಧಿಕಾರಿಗಳ, ಆಡಳಿತ ವರ್ಗದ ಕಪಿಮುಷ್ಠಿಯೊಳಗೆ ತರುವ ಹುನ್ನಾರವೂ ನಡೆಯುತ್ತಿದೆ. ಇದಕ್ಕೆ ಸಿದ್ಧಗೊಳ್ಳುತ್ತಿವೆ ಕರಾಳ ಶಾಸನಗಳು. ಇದರಿಂದ ಸಮಾಜದಲ್ಲಿ ಸಂಘರ್ಷವಂತೂ ಖಂಡಿತ. ಆದರೆ ಮುಂದಕ್ಕೆ ಇದರಿಂದ ಸಮಾಜಕ್ಕೆ ಒಳಿತೋ ಕೆಡುಕೋ- ಕಾಲವೇ ನಿರ್ಧರಿಸಬೇಕು.
“ವೈದ್ಯೋ ನಾರಾಯಣೋ ಹರಿಃ’ ಎಂಬ ಕಾಲವೊಂದಿತ್ತು. ಯಾಕೆಂದರೆ ಆ ಮಟ್ಟಿಗೆ ವ್ಯಕ್ತಿಯ ಜೀವನದಲ್ಲಿ ವೈದ್ಯನ ಪ್ರಾಮುಖ್ಯವಿದೆ. ತಾನು ಸುಖವಾಗಿದ್ದರೆ ಮಾತ್ರ ತನ್ನ ಜೀವನದ ಸಕಲ ಆಶೋತ್ತರಗಳನ್ನು ಪೂರೈಸಿಕೊಳ್ಳಲು ಸಾಧ್ಯ. ಅಂದರೆ ಇಲ್ಲಿ ವೈದ್ಯರ ಪಾತ್ರವು ಮಹತ್ತರವಾದುದಾಗಿರುತ್ತದೆ. ಅದಕ್ಕೆ ಸಮಾಜವು ವೈದ್ಯನನ್ನು ತನ್ನ ಬಂಧು, ಮಿತ್ರ, ಅಪತಾºಂಧವ ಎಂಬುದಾಗಿ ತಿಳಿಯುತ್ತದೆ. ಆದರೆ ಇತ್ತೀಚೆಗೆ ಆ “ಹರಿ’ಯನ್ನು “ನರಿ’ ಎಂಬುದಾಗಿ ಬಿಂಬಿಸಲಾಗುತ್ತಿದೆ. ಅಂದರೆ ವೈದ್ಯ ಹಾಗೂ ರೋಗಿಯ ಮಧ್ಯೆ ಕಂದಕ ನಿರ್ಮಿಸಲಾಗುತ್ತಿದೆ. ವೈದ್ಯ-ರೋಗಿಯ ನಂಬಿಕೆಗೆ ದ್ರೋಹ ಬಗೆಯಲಾಗುತ್ತಿದೆ. ವೈದ್ಯರುಗಳು ದುಡ್ಡು ಮಾಡುವುದಕ್ಕಷ್ಟೇ ಸೀಮಿತ ಎಂಬಂತೆ ಚಿತ್ರಿಸಲಾಗುತ್ತಿದೆ.
ಪಟ್ಟಣಗಳಲ್ಲಿ ದೊಡ್ಡ ದೊಡ್ಡ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ದುಬಾರಿ ವೆಚ್ಚದ ಚಿಕಿತ್ಸೆ ಎಂಬುದಾಗಿ ಹೇಳಲಾಗುತ್ತಿದೆ. ಆದರೆ ಸಮಾಜದ ಅವಶ್ಯಕತೆಗನುಗುಣವಾಗಿ, ಬೇಡಿಕೆಗೆ ಅನುಗುಣವಾಗಿ ವ್ಯವಸ್ಥೆಗಳು ನಿರ್ಮಾಣವಾಗುತ್ತವೆ. ಬೇಡಿಕೆ ಇದ್ದುದಕ್ಕೆ ತಾನೇ ಅಂತಹ ಆಸ್ಪತ್ರೆಗಳು ಉದ್ಭವಿಸುತ್ತಿವೆ? ಬೇಡಿಕೆ ಕುಸಿದರೆ ತಾನಾಗಿಯೇ ಅವು ಬಿದ್ದು ಹೋಗುತ್ತವೆ. ಅಂತಹ ಆಸ್ಪತ್ರೆಗಳನ್ನು ಕಟ್ಟಿ ನಡೆಸುವುದಕ್ಕೂ ನೂರು, ಸಾವಿರ, ಕೋಟಿ ಖರ್ಚಾಗುತ್ತದೆ ಎಂಬುದೂ ಅಷ್ಟೇ ಸತ್ಯ. ಹಾಗಂತ ಯಾರೂ ತಮ್ಮ ಅಸ್ಪತ್ರೆಗೆ ಬನ್ನಿ ಎಂದು ಬಲವಂತ ಮಾಡುವುದಿಲ್ಲ.
ಒಂದು ವೇಳೆ ಅಕ್ರಮ ಸುಲಿಗೆಗಳು ನಡೆದರೂ ಅದನ್ನು ವಿಚಾರಿಸುವುದಕ್ಕೆ ಈಗಾಗಲೇ ಕಾಯ್ದೆ ಕಾನೂನುಗಳಿವೆ. ಏನಿದ್ದರೂ ಸಮಾಜದಲ್ಲಿ ಬೇಡಿಕೆ ಪೂರೈಕೆಯ ಮೇಲೆಯೇ ಎಲ್ಲವೂ ಅವಲಂಬಿತವಾಗಿವೆ ಎಂಬುದು ದಿಟ. ಆದರೆ ಅದನ್ನೇ ನೆಪ ಮಾಡಿಕೊಂಡು ವೈದ್ಯ ಪದ್ಧತಿಯನ್ನೇ ದೂಷಿಸುವುದು ಎಷ್ಟರಮಟ್ಟಿಗೆ ಸರಿ? ಇತ್ತೀಚೆಗಂತೂ ಅತ್ಯಂತ ನೀಚ ಪದಗಳಿಂದ ಒಂದು ಉಚ್ಚ ವೃತ್ತಿಯನ್ನು ದೂಷಿಸಲಾಗುತ್ತಿದೆ. ಮಿತ್ರರೇ, ಒಮ್ಮೆ ಯೋಚಿಸಿ ನೋಡಿ. ಭಾರತವು 70 ಶೇಕಡಾ ಹಳ್ಳಿಗಳೇ ಇರುವ ದೇಶ. ಹಾಗಿದ್ದರೆ ಹಳ್ಳಿ ಸೇವೆ ಮಾಡುವ ಖಾಸಗಿ ವೈದ್ಯರ ಸಂಖ್ಯೆ ಎಷ್ಟಿದೆ ಎಂದು ಯೋಚಿಸಿ ನೋಡಿ. ಪಟ್ಟಣಗಳಲ್ಲಿರುವುದಕ್ಕಿಂತ ನಾಲ್ಕು ಪಟ್ಟು ಹೆಚ್ಚು. ಹಾಗಿದ್ದರೆ ಎಷ್ಟೋ ಕುಗ್ರಾಮಗಳಲ್ಲೂ ಇದ್ದುಕೊಂಡು ನಮ್ಮ ದೇಶದಲ್ಲಿ ಸಾವಿರಾರು, ಲಕ್ಷ, ಲಕ್ಷ ವೈದ್ಯರು ಸೇವೆ ಸಲ್ಲಿಸುತ್ತಿಲ್ಲವೇ?
ನಿಮಗೆ ಗೊತ್ತಿದೆ, ವೈದ್ಯನನ್ನು ಸಂಪರ್ಕಿಸುವುದಕ್ಕೆ ಹೊತ್ತು ಗೊತ್ತು ಇಲ್ಲ. ಯಾಕೆಂದರೆ ನಿಮ್ಮ ಸಮಸ್ಯೆ ವೈದ್ಯರ ಕ್ಲಿನಿಕ್ ವೇಳೆಯಲ್ಲೇ ಬರಬೇಕೆಂದಿಲ್ಲ. ಅಂದರೆ ನನ್ನಂತಹ ಸಾವಿರ, ಲಕ್ಷ ವೈದ್ಯರು ಹಳ್ಳಿಗಳಲ್ಲಿ 24×7 ಸೇವೆಯನ್ನು ನೀಡುತ್ತಿದ್ದಾರೆ. ಹಾಗಿದ್ದರೆ ಅವರ ಸೇವೆಗೆ ನೀವು ಕೊಡುವ ಮನ್ನಣೆ, ಮರ್ಯಾದೆ ಇಷ್ಟೆಯೇ? ಎಷ್ಟೊಂದು ವಿವಿಧ ವೃತ್ತಿಗಳಿವೆ, ಎಷ್ಟು ವಿಧದ ವೃತ್ತಿಗಳಿಗೆ ರಾತ್ರಿ -ಹಗಲು, ಜೀವನ ಪೂರ್ತಿ ದುಡಿತ ಇರುತ್ತದೆ?ಯೋಚಿಸಿ ನೋಡಿ. ಸರಕಾರಿ ಉದ್ಯೋಗಿಗಳಿಗೆ 60 ವಯಸ್ಸಿಗೆ ನಿವೃತ್ತಿ. ಆಮೇಲೆ ಏನಿದ್ದರೂ ಜೀವನಪೂರ್ತಿ ಪಿಂಚಣಿ. ಖಾಸಗಿ ವೈದ್ಯರುಗಳಿಗೆ? ಎಷ್ಟೊಂದು ಜನ ವೈದ್ಯರು ತಮ್ಮ ಇಳಿ ವಯಸ್ಸಿನಲ್ಲಿಯೂ ರಾತ್ರಿ ಹಗಲೆನ್ನದೆ ದುಡಿಯುತ್ತಿದ್ದಾರೆ. ಇದೆಲ್ಲ ಕೇವಲ ದುಡ್ಡಿಗಾಗಿ ಎಂದುಕೊಂಡಿರಾ? ಅವರ 4-5 ದಶಕಗಳ ಈ ಸುದೀರ್ಘ ಅವಧಿಯಲ್ಲಿ ಅವರು ತಮ್ಮ ರೋಗಿ ಮಿತ್ರರಲ್ಲಿ ಹುಟ್ಟು ಹಾಕಿದ ನಂಬುಗೆಯಿಂದಲೇ ಅವರಲ್ಲಿಗೆ ಆ ರೋಗಿಗಳ ಬಂಧು-ಮಿತ್ರರು ಮತ್ತೆ ಮತ್ತೆ ಬರುತ್ತಾರೆ. ವೈದ್ಯನು ಇಳಿವಯಸ್ಸಿನಲ್ಲಿದ್ದರೂ ಅವರನ್ನು ನಿರಾಕರಿಸಲಾರ. ಯಾಕೆಂದರೆ, ಅಲ್ಲಿ ಕೆಲಸ ಮಾಡುವುದು ಆ ಪ್ರೀತಿ, ನಂಬುಗೆ.
ಸರಕಾರಿ ವೈದ್ಯರು ಹಳ್ಳಿ ಸೇವೆಗೆ ಬರುತ್ತಿಲ್ಲ ಎಂದು ಅವರಿಗೆ ಹೆಚ್ಚುವರಿ ವೇತನ ನೀಡುತ್ತೀರಿ. ಹೆಚ್ಚು ಹೆಚ್ಚು ಸೌಲಭ್ಯ ನೀಡುತ್ತೀರಿ. ಆದರೆ ಖಾಸಗಿಯವರು ಮಾಡುವ ಸೇವೆ ಹಳ್ಳಿ ಸೇವೆಯಲ್ಲವೇ? ಖಾಸಗಿ ವೈದ್ಯರು ಅಷ್ಟೊಂದು ವರ್ಷ ಮಾಡಿದ ಹಳ್ಳಿ ಸೇವೆಗೆ ಸರಕಾರದಿಂದ ಏನು ಮನ್ನಣೆ ದೊರೆತಿದೆ? ಏನು ಸಾಮಾಜಿಕ ಭದ್ರತೆ, ಪಿಂಚಣಿ ದೊರೆತಿದೆ? ಅಂತಹ ಹಳ್ಳಿ ಸೇವೆ ಮಾಡಿದ ವೈದ್ಯರ ಮಕ್ಕಳಿಗೆ ಸರಕಾರಿ ವೈದ್ಯ ಕಾಲೇಜುಗಳಲ್ಲಿ ವೈದ್ಯಕೀಯ ಸೀಟು ಮೀಸಲಾತಿ ಕೊಡಿಸಿ. ಸಣ್ಣಪುಟ್ಟ ತಪ್ಪುಗಳಾದರೆ ಕಾನೂನಿನ ದಂಡ ಪ್ರಯೋಗ, ಆದರೆ ಅಷ್ಟೊಂದು ಸುದೀರ್ಘ ಸಮಾಜ ಸೇವೆಗೆ ಎಲ್ಲಿದೆ ಗುರುತಿಸುವಿಕೆ? ನಮ್ಮ ದೇಶವನ್ನೊಮ್ಮೆ ಅವಲೋಕಿಸಿ ನೋಡಿದರೆ ಎಷ್ಟೋ ಕಾರ್ಖಾನೆಗಳು ತಯಾರು ಮಾಡುವ ವಾಹನ, ಸಲಕರಣೆ ಇತ್ಯಾದಿಗೆ ಅವುಗಳೇ ಹೆಚ್ಚು ಲಾಭ ಇಟ್ಟು ದರ ನಿಗದಿ ಮಾಡುತ್ತವೆ. ಓರ್ವ ವಕೀಲ, ಎಂಜಿನಿಯರ್, ಕಾಪೆìಂಟರ್, ಗಾಯಕ, ನಟ, ಚಿತ್ರಗಾರ, ನಿಪುಣ ಕೆಲಸಗಾರ, ಗಾರೆಯವ, ಗ್ಯಾರೇಜಿನವ-ಇತ್ಯಾದಿ ಸಾವಿರಾರು ಬಗೆಯ ವೃತ್ತಿಪರರು ತಮ್ಮ ಸೇವೆಯ ದರವನ್ನು ತಾವೇ ನಿಗದಿಪಡಿಸುತ್ತಾರೆ. ಆದರೆ ವೈದ್ಯಕೀಯ ವೃತ್ತಿಯಲ್ಲಿ ಮಾತ್ರ ಭಿನ್ನವಾದುದನ್ನು ಬಯಸುತ್ತಾರೆ. ಸೇವೆ ಕೊಡುವುದಕ್ಕೆ ವೈದ್ಯ; ದರ ನಿಗದಿಪಡಿಸುವುದಕ್ಕೆ ಸರಕಾರ- ಏನಿದರ ಅರ್ಥ? ಮಾರುಕಟ್ಟೆಯಲ್ಲಿರುವ ಯಾವುದೇ ಸರಕಿನ ಬೆಲೆಯ ಉತ್ಪಾದನಾ ಖರ್ಚು ಅದರ ಕಾಲಂಶವೂ ಇರಲಾರದು. ಆದರೆ ವೈದ್ಯಕೀಯ ಸೇವೆ? ವೈದ್ಯನಿಲ್ಲದೆ ಸಮಾಜವೇ ಇರಲಾರದು. ಇದು ಖರೆ. ಆದರೆ ಇಂತಹ ವೈದ್ಯನ ಬೆನ್ನೆಲುಬನ್ನೇ ಮುರಿದರೆ ಸಮಾಜವನ್ನು ಕಾಯುವವರಾರು?
ಈಗ ವೈದ್ಯ ವೃತ್ತಿಯನ್ನು ಆರಿಸಿಕೊಂಡು ವಿದ್ಯಾರ್ಥಿಗಳಿಗೆ ಗ್ರಾಮೀಣ ಸೇವೆ ಕಡ್ಡಾಯ ಎಂಬ ಗುಮ್ಮ. ಈಗಾಗಲೇ ವೈದ್ಯ ಕೀಯ ಕೋರ್ಸು ಸುದೀರ್ಘವಾದುದು. ಮತ್ತೆ ಸ್ನಾತಕೋತ್ತರ ಕಲಿಕೆ ಈಗಿನ ಆವಶ್ಯಕತೆ. ಹಾಗಿದ್ದರೆ ಅವರು ಜೀವನದಲ್ಲಿ ಸ್ಥಾಪನೆಯಾಗುವುದು ಯಾವಾಗ? ಮಹಿಳಾ ವೈದ್ಯರಾಗಿದ್ದರೆ ಮದುವೆಯಾಗುವುದು ಯಾವಾಗ? ಇಷ್ಟಕ್ಕೂ ಈಗ ಹೆಚ್ಚಿನ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರಿದ್ದಾರೆ. ಇನ್ನೂ ಅದು ಕಡ್ಡಾಯ ಯಾಕೆ? ಹಾಗಿದ್ದರೆ ಅನೇಕ ಮೆಡಿಕಲ್ ವಿದ್ಯಾರ್ಥಿಗಳ ಹೆತ್ತವರು ದಶಕಗಳ ಕಾಲ ಗ್ರಾಮೀಣ ಭಾಗದಲ್ಲಿ ದುಡಿದವರನ್ನು ಗುರುತಿಸಿ ಅವರ ಮಕ್ಕಳಿಗೆ ವಿನಾಯಿತಿ ನೀಡಿ.
ಗ್ರಾಮೀಣ ಸೇವೆ ಯಾಕೆ ಕಡ್ಡಾಯ ಎಂದು ಕೇಳಿದರೆ, ಅವರು ಸರಕಾರಿ ಕಾಲೇಜುಗಳಲ್ಲಿ ಉಚಿತ ಸೀಟು ಗಳಿಸಿ ಓದಿರು
ತ್ತಾರೆ, ನಾವು ಸರಕಾರಿ ವೈದ್ಯ ಕಾಲೇಜುಗಳಿಗೆ ನೂರಾರು ಕೋಟಿ ಖರ್ಚು ಮಾಡುತ್ತೇವೆ ಎಂಬ ಉತ್ತರ. ಪ್ರತಿಭಾವಂತರು ಉಚಿತ ಸೀಟು ಗಳಿಸಿರುತ್ತಾರೆ. ಹಾಗಿದ್ದರೆ ಅವರ ಪ್ರತಿಭೆಗೆ ಅದೊಂದು ಶಿಕ್ಷೆಯೇ? ಸರಕಾರಿ ದುಡ್ಡು ಎಂದರೆ ಅದು ಸಾರ್ವಜನಿಕರ ತೆರಿಗೆಯ ದುಡ್ಡು ಅಲ್ಲವೇ? ಸಮಾಜಕ್ಕೆ ಅವಶ್ಯವಾದ ಆಸ್ಪತ್ರೆ, ಶಾಲಾ ಕಾಲೇಜು, ರಸ್ತೆ , ನೀರು ಇತ್ಯಾದಿಗಳೆಲ್ಲಾ ಸರಕಾರದ ಕರ್ತವ್ಯವಲ್ಲವೇ? ಮತ್ತೆ ಅದಕ್ಕೆ ಪ್ರತಿಯಾಗಿ ವೈದ್ಯರಿಗೆ ಮಾತ್ರ ಗ್ರಾಮೀಣ ಸೇವೆ ಕಡ್ಡಾಯ ಮಾಡುತ್ತೀರಿ. ಹಾಗಿದ್ದರೆ ಇನ್ನು ಎಷ್ಟೋ ಬಗೆಯ ಸರಕಾರಿ ಕಲಿಕಾ ಕೇಂದ್ರಗಳಿವೆ- ಇಂಜಿನಿಯ ರಿಂಗ್, ಕಾನೂನು ಕಾಲೇಜು, ಡಿಗ್ರಿ ಕಾಲೇಜು, ಪಾಲಿಟೆಕ್ನಿಕ್, ಐಟಿಐ, ಕಲಾ ಶಾಲೆಗಳು ಇತ್ಯಾದಿ ಇತ್ಯಾದಿ… ಇವುಗಳಿಗೆ ಸರಕಾರವು ಸಾವಿರಾರು ಕೋಟಿ ಖರ್ಚು ಮಾಡುವುದಿಲ್ಲವೇ? ಹಾಗಿದ್ರೆ ಪ್ರತಿಯಾಗಿ ಅವರ ಸೇವೆಯನ್ನೂ ಪಡೆಯಬೇಡವೇ? ವೈದ್ಯ ವೃತ್ತಿಯಲ್ಲಿ ಸೇವಾ ಲೋಪಗಳು ಬಂದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ. ಹಾಗಿದ್ದರೆ ಲಕ್ಷ ಲಕ್ಷ ಕೋಟಿ ಖರ್ಚು ಮಾಡಿ ಮಾಡುವ ಕಳಪೆ ಸಾರ್ವಜನಿಕ ರಸ್ತೆಗಳು, ನೀರಿಲ್ಲದ ಸಾವಿರಾರು ಕೊಳವೆ ಬಾವಿಗಳು, ಗೋಡೌನ್‌ಗಳಲ್ಲಿ ಹಾಳಾಗಿ ಹೋಗುವ ಸಾವಿರಗಟ್ಟಳೆ ಟನ್ನು ಧಾನ್ಯಗಳು, ಕುಸಿದು ಬೀಳುವ ಹೊಚ್ಚ ಹೊಸ ಸೇತುವೆಗಳು ಇವುಗಳಿಗೆಲ್ಲ ಯಾರನ್ನು ಹೊಣೆಗಾರರನ್ನಾಗಿಸುವುದು? ಆದ್ದರಿಂದ ವೈದ್ಯರು ನಿಮ್ಮ ವೈರಿಗಳಲ್ಲ, ಸ್ನೇಹಿತರು ಎಂದು ತಿಳಿದುಕೊಳ್ಳಿ. ನಿಮ್ಮ ಸ್ವಾಸ್ಥ್ಯಕ್ಕೆ ದುಡಿಯುವ ವೈದ್ಯರನ್ನು ಗುರುತಿಸಿ ಸಾಮಾಜಿಕ ಸ್ವಾಸ್ಥ್ಯ ಕಾಪಾಡಲು ಸಹಕರಿಸಿ. ಏನಿದ್ದರೂ ವೈದ್ಯರೂ ಮನುಷ್ಯರೇ ಅಲ್ಲವೇ?
ಡಾ| ಡಿ.ಎ. ಕಾಮತ್, ಗುತ್ತಿಗಾರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Congress;ಸಂಪುಟ,ಕೆಪಿಸಿಸಿ ಯಥಾಸ್ಥಿತಿ? ಬಜೆಟ್ ಅಧಿವೇಶನ, ಪಂ.ಚುನಾವಣೆ ಬಳಿಕ ಚುರುಕು?
KPTCL: ಕೆಪಿಸಿಗೆ 30 ಸಾವಿರ ಕೋಟಿ ರೂ. ಬಾಕಿ ಸಂಕಷ್ಟ !
Mangaluru; ಸಾಮಾನ್ಯ ಸ್ಥಳದಲ್ಲಿ ಬಿಲ್ಡರ್ ಹಕ್ಕು ಸಾಧಿಸುವಂತಿಲ್ಲ
Gram Panchayat ಆದಾಯಕ್ಕೆ ಟೆಲಿಕಾಂ ಕಂಪೆನಿಗಳಿಂದ ಕುತ್ತು
ಇಂದು 2ನೇ ಹಂತದ “ವಕ್ಫ್’ಸಮರ; ಬಳ್ಳಾರಿ ಜಿಲ್ಲೆ ಕಂಪ್ಲಿಯಲ್ಲಿ ಚಾಲನೆ; ಪಾದಯಾತ್ರೆ, ಜನಜಾಗೃತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.