ಬಲಾಡ್ಯರು ತಪ್ಪೆಸಗಿದರೆ ಶಿಕ್ಷೆ ಸಾಧ್ಯವೆ?
Team Udayavani, Dec 16, 2018, 6:00 AM IST
ಸರಕಾರದಿಂದ ದೊರೆಯಬೇಕಾದ ಸೌಲಭ್ಯಗಳು ಸಿಗಲಿಲ್ಲವೆಂದು ಹೋರಾಟ, ಪ್ರತಿಭಟನೆಗಳು ನಡೆಯುವುದಿದೆ. ಬೇಡಿಕೆ ಈಡೇರಿದ ಬಳಿಕ ಗುರಿ ಈಡೇರಿತು ಎಂದು ಸುಮ್ಮನಿರುತ್ತಾರೆ. ಬಹುತೇಕ ಸಂದರ್ಭದಲ್ಲಿ ಆಂಶಿಕ ಈಡೇರಿಕೆ ಆಗುವಾಗಲೇ ಸುಸ್ತಾಗಿ ಬದಿಗೆ ಸರಿಯುತ್ತಾರೆ. ಆದರೆ ಮೀಸೆ ಮಣ್ಣಾಗಲಿಲ್ಲವೆಂದು ತೋರಿಸಿಕೊಳ್ಳುವುದೂ ಇದೆ. ಈ ಲೇಖನದ ಸಾರ ಇದಕ್ಕಿಂತ ಭಿನ್ನ. ಇವರು ಸರಕಾರದ ಅಧಿಕಾರಿಯಾಗಿದ್ದವರು. ಆದ ಕಾರಣ ಇವರೂ ಪ್ರತಿಭಟನೆಯನ್ನು ಕಂಡವರೇ ಅಥವಾ ಎದುರಿಸಿದವರೇ. ಇವರು ನಿವೃತ್ತರಾದ ಬಳಿಕ ತನಗಾದ ಅನ್ಯಾಯಕ್ಕೆ ಕಾನೂನಾತ್ಮಕ ಹೋರಾಟ ನಡೆಸಿ ಅದರಲ್ಲಿ ಗೆದ್ದರು. ಇಲ್ಲಿಗೇ ಸುಮ್ಮನಾಗದ ಅವರು ತನಗೆ ಸಿಕ್ಕಿದ ಸೌಲಭ್ಯ ಸರಕಾರದಿಂದ ಪಾವತಿಯಾಗುವುದು ಸೂಕ್ತವಲ್ಲ, ತಪ್ಪು ಮಾಡಿದವರಿಂದಲೇ ವಸೂಲಿಯಾಗಬೇಕೆಂದು ಪಣ ತೊಟ್ಟ ವರು. ಇದೂ ಅಂತಿಂಥ ವ್ಯಕ್ತಿಗಳಲ್ಲ. ಸಂತ್ರಸ್ತರಾಗಿ ಗೆದ್ದವರು ಕೆಎಎಸ್ ಅಧಿಕಾರಿ, ತಪ್ಪೆಸಗಿದವರು ಐಎಎಸ್ ಅಧಿಕಾರಿಗಳು.
ಎಷ್ಟೋ ಮಂದಿ ಆಡಳಿತಾರೂಢರು (ಜನಪ್ರತಿನಿಧಿಗಳು) “ನಿಮ್ಮದು ಇನ್ನೂ ಮುಗಿದಿಲ್ಲವಾ ಮಾರಾಯೆÅà? ನಿಮ್ಮ ಕೆಲಸ ಆಯಿತಲ್ಲ. ನಿಮಗೆ ಸಿಗಬೇಕಾದದ್ದು ಸರಕಾರದಿಂದ ಸಿಕ್ಕಿತಲ್ಲವೆ? ಇನ್ನು ತಪ್ಪು ಮಾಡಿದವರೇ ಪರಿಹಾರ ಮೊತ್ತವನ್ನು ಭರಿಸಬೇಕೆಂಬ ಹಠವೇಕೆ?’ ಎಂದು ಕೇಳಿದವರಿದ್ದಾರೆ. ಇದರರ್ಥ ಬಲಾಡ್ಯ ಕಾರ್ಯಾಂಗದವರ ವಿರುದ್ಧ ಗೆಲ್ಲುವ ಹಂಬಲ ಶಾಸಕಾಂಗಕ್ಕೂ ಇಲ್ಲದ ಅಸಹಾಯಕ ಸ್ಥಿತಿ ನಿರ್ಮಾಣವಾಗಿದೆ ಎಂದೇ?
ಬಲಾಡ್ಯರ ವಿರುದ್ಧ ಸೆಣಸಾಟಕ್ಕೆ ನಿಂತವರು ದಕ್ಷ ಅಧಿಕಾರಿ ಎಂದು ಹೆಸರು ಗಳಿಸಿದ ಸುಬ್ರಾಯ ಕಾಮತ್. ಇವರು ತಹಶೀಲ್ದಾರ್, ತಾ.ಪಂ. ಇಒ, ಸಹಾಯಕ ಕಮಿಷನರ್, ಅಪರ ಜಿಲ್ಲಾಧಿಕಾರಿ, ಜಿ.ಪಂ. ಸಿಇಒ, ಅರಣ್ಯ ಇಲಾಖೆ ಜಂಟಿ ಕಾರ್ಯದರ್ಶಿ ಹೀಗೆ ವಿವಿಧ ಹುದ್ದೆಗಳನ್ನು ನಿಭಾಯಿಸಿದವರು. ಕಾಮತ್ 2006ರಲ್ಲಿ ಹುಣಸೂರು ಉಪವಿಭಾಗದ ಸಹಾಯಕ ಕಮಿಷನರ್ ಆಗಿದ್ದರು. ಯಾವುದೇ ಸ್ಥಳೀಯ ಸಂಸ್ಥೆಗಳಲ್ಲಿ ಆಡಳಿತ ಮಂಡಳಿ ಇಲ್ಲದಾಗ ಆಯಾ ಶ್ರೇಣಿಗೆ ತಕ್ಕಂತೆ ಆಡಳಿತಾಧಿಕಾರಿಗಳನ್ನಾಗಿ ನೇಮಿಸುತ್ತಾರೆ. ಇದು ಹೆಚ್ಚುವರಿ ಪ್ರಭಾರದ ಒಂದು ಹುದ್ದೆ. ಇದರಂತೆ ಹುಣಸೂರು ಪುರಸಭೆಯ ಆಡಳಿತಾಧಿಕಾರಿಯಾಗಿ ಕಾಮತ್ ನಿಯುಕ್ತಿಗೊಂಡು ಆರು ತಿಂಗಳು ಕರ್ತವ್ಯ ನಿರ್ವಹಿಸಿದ್ದರು.
ದೂರಿಗೂ ವಿಚಾರಣೆಗೂ ಎಷ್ಟು ಅಂತರ?
ಹುಣಸೂರು ಪುರಸಭೆಯಲ್ಲಿ 1998-2001ರ ಅವಧಿಯಲ್ಲಿ ಐಡಿಎಸ್‌ಎಂಟಿ (ಸಣ್ಣ ಮತ್ತು ಮಧ್ಯಮ ನಗರಗಳ ಸಮಗ್ರ ಅಭಿವೃದ್ಧಿ) ಯೋಜನೆ ಕಾಮಗಾರಿಗಳಲ್ಲಿ ಅವ್ಯವಹಾರವಾಗಿದೆ ಎಂದು 2001ರಲ್ಲಿ ಒಬ್ಬರು ಲೋಕಾಯುಕ್ತರಿಗೆ ದೂರು ಸಲ್ಲಿಸಿದರು. ಈ ಅವಧಿಯಲ್ಲಿ ಅಧ್ಯಕ್ಷರಾಗಿದ್ದವರು ರಮೇಶ್, ಮುಖ್ಯಾಧಿಕಾರಿಯಾಗಿದ್ದವರು ಕೃಷ್ಣ. 2008ರಲ್ಲಿ ಲೋಕಾಯುಕ್ತರು ತನಿಖೆಗೆ ಆದೇಶ ಮಾಡಿದರು. 2001-02, 2002-03ರಲ್ಲಿ 15,17,424 ರೂ. ಅವ್ಯವಹಾರವಾಗಿದೆ. ಇದಕ್ಕೆ ಆಗಿನ ಅಧ್ಯಕ್ಷರು, ಮುಖ್ಯಾಧಿಕಾರಿಗಳು ಹೊಣೆ ಎಂದು ಲೋಕಾಯುಕ್ತರು ನೇಮಿಸಿದ ಲೆಕ್ಕಪರಿಶೋಧಕರು ವರದಿಯಲ್ಲಿ ಬೆಟ್ಟು ಮಾಡಿದರು. ಮುಂದಿನ ವಾಕ್ಯದಲ್ಲಿ “ಅನಂತರ ಬಂದ ಅಧ್ಯಕ್ಷರು/ ಆಡಳಿತಾಧಿಕಾರಿಗಳು ಬಾಕಿ ವಸೂಲಿ ಮಾಡಲು ಕ್ರಮ ಕೈಗೊಂಡಿರುವುದು ಕಂಡುಬಂದಿಲ್ಲ’ ಎಂಬ ವಕ್ಕಣೆ ಸೇರಿಸಿದರು. ಇದು ಸುಬ್ರಾಯ ಕಾಮತ್ ಅವರ ಸೇವಾ ನಿವೃತ್ತಿ ವೇಳೆ ಸಿಗುವ ಸೌಲಭ್ಯಕ್ಕೆ ತಡೆಯಾಯಿತು.
ಆರು ತಿಂಗಳು ಆಡಳಿತಾಧಿಕಾರಿಯಾದ ಕಾರಣ 2011ರಲ್ಲಿ ಲೋಕಾಯುಕ್ತರಿಂದ ಕಾಮತ್ ಅವರಿಗೆ ನೊಟೀಸು ಬಂತು. ಕಾಮತ್ ಅವರು 2013ರಲ್ಲಿ ನಿವೃತ್ತಿಗೊಳ್ಳುವವರು. ನಿವೃತ್ತಿಗೊಳ್ಳುವಾಗ ಸೌಲಭ್ಯಗಳನ್ನು ಕೊಡಲು ಕ್ಲಿಯರೆನ್ಸ್ ಮಾಡುವವರು ಸಿಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯವರು (ಡಿಪಿಎಆರ್). ನಗರಾಭಿವೃದ್ಧಿ ಇಲಾಖೆ ಅಧೀನದ ಪೌರಾಡಳಿತ ಇಲಾಖೆಗೆ ಡಿಪಿಎಆರ್ “ಲೋಕಾಯುಕ್ತರ ವರದಿಯಂತೆ ತಪ್ಪಿತಸ್ಥರು’ ಎಂದು ಶಿಫಾರಸು ಮಾಡಿತು. ನಿವೃತ್ತಿಗೆ 20 ದಿನಗಳಿರುವಾಗ 11-09-2013ರಂದು ಜಂಟಿ ಇಲಾಖಾ ವಿಚಾರಣೆಗೆ ಆದೇಶವಾಯಿತು.
ವಿಳಂಬಕ್ಕೆ ಪಿಳ್ಳೆ ನೆವ ಏತನ್ಮಧ್ಯೆ ಲೋಕಾಯುಕ್ತರಿಗೆ ದೂರು ಸಲ್ಲಿಸಿದವರೇ “ನಾವು ದೂರು ಸಲ್ಲಿಸಿದ್ದು ಅವ್ಯವಹಾರವಾದಾಗ ಇದ್ದ ಅಧ್ಯಕ್ಷರು/ ಮುಖ್ಯಾಧಿಕಾರಿಗಳ ಮೇಲೆ’ ಎಂದು ಸಾಕ್ಷಿ ನುಡಿದಿದ್ದರು. ಪ್ರಕರಣದಲ್ಲಿ ಮೈಸೂರು ಜಿಲ್ಲಾಧಿಕಾರಿಯವರು 29-04-2013ರಂದು ಎಲ್ಲ ಬಾಕಿ ವಸೂಲಿಯಾಗಿದೆ ಎಂದು ಪೌರಾಡಳಿತ ಇಲಾಖೆಗೆ ದೃಢೀಕರಿಸಿ ಪತ್ರ ಬರೆದರು.
ಬಾಕಿ ವಸೂಲಿಯಾಗಿರುವುದರಿಂದ ಜಂಟಿ ಇಲಾಖಾ ವಿಚಾರಣೆಯಿಂದ ಕಾಮತ್ ಹೆಸರು ಕಡಿಮೆ ಮಾಡಲು ಮುಖ್ಯಮಂತ್ರಿಗಳು 2014ರ ಫೆಬ್ರವರಿಯಲ್ಲಿ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗಳಿಗೆ ಪರಿಶೀಲಿಸಿ ಮಂಡಿಸುವಂತೆ ಲಿಖೀತವಾಗಿ ಸೂಚಿಸಿದರು. ಇಲ್ಲಿಂದ ಡಿಪಿಎಆರ್‌ಗೆ ಅನು ಮೋದನೆಗೆ ಮಂಡಿಸಲಾಯಿತು. ಆಗ ಉಪಕಾರ್ಯದರ್ಶಿ ಯಾಗಿದ್ದವರು ಒಬ್ಬರ ಹೆಸರು ತೆಗೆದರೆ ಇತರರಿಗೆ ತಾರತಮ್ಯ ವಾಗುತ್ತದೆ ಎಂಬ ನೆಪ ಒಡ್ಡಿ ಎಂಟು ತಿಂಗಳು ಹಾಗೆಯೇ ಇರಿಸಿಕೊಂಡರು. ಒಂದು ಕಡತವನ್ನು ವಿಲೆ ಮಾಡಬಾರದೆಂಬ ಮನಸ್ಸಿದ್ದರೆ ಯಾವುದೇ ವ್ಯವಸ್ಥೆಯಲ್ಲಿ ಹೇಗೆ ಸತಾಯಿಸಬಹುದು ಎಂಬುದಕ್ಕೆ ಇದೊಂದು ಉದಾಹರಣೆ.
ಶೂನ್ಯವೇಳೆಯ ಉತ್ತರದಾಯಿತ್ವ
ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿಯವರು ಶೂನ್ಯ ವೇಳೆಯಲ್ಲಿ ಪ್ರಕರಣದ ಬಗ್ಗೆ ವಿಧಾನಮಂಡಲ ಅಧಿವೇಶನದಲ್ಲಿ (26-03-2015) ಗಮನ ಸೆಳೆದರು. ಆಗ ಮುಖ್ಯಮಂತ್ರಿಯವರು ಸೂಕ್ತ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದರು. ಶೂನ್ಯ ವೇಳೆಯಲ್ಲಿ ಗಮನ ಸೆಳೆಯುವ ವಿಷಯಗಳು ತುರ್ತಾಗಿ ಆಗಬೇಕಾದ ವಿಷಯಗಳಾಗಿರುತ್ತದೆ. ಈ ಹಂತದಲ್ಲಿ ಡಿಪಿಎಆರ್ ನಗರಾಭಿವೃದ್ಧಿ ಇಲಾಖೆಗೆ ಪ್ರಕರಣ ಏನಾಗಿದೆ ಎಂದು ಕೇಳಬೇಕಾಗಿತ್ತು. ಆದರೆ ಗಮನ ಸೆಳೆಯುವ ವಿಷಯ ಡಿಪಿಎಆರ್‌ನಿಂದ ನಗರಾಭಿವೃದ್ಧಿ ಇಲಾಖೆಗೆ ಹೋಗಲೇ ಇಲ್ಲ ಎಂದರೆ ಅಧಿವೇಶನದ ಕಿಮ್ಮತ್ತು ಅರ್ಥವಾಗುತ್ತದೆ. ಈಗ ಅಧಿವೇಶನವೂ ನಡೆಯುತ್ತಿದ್ದು ಅಧಿವೇಶನದಲ್ಲಿ ಚರ್ಚಿತ ವಿಷಯಗಳನ್ನು ಆಯಾ ಇಲಾಖೆಗಮನಕ್ಕೆ ತರುವ ಉತ್ತರದಾಯಿತ್ವವನ್ನು ನಿಗದಿಪಡಿಸಬೇಕಾದ ಅಗತ್ಯವಿದೆ.
ದೂರು ಸಮಿತಿಯ ಅರ್ಜಿಯೇ ನಾಪತ್ತೆ!
ವಿಧಾನಮಂಡಲದಲ್ಲಿ ಪಿಟಿಶನ್ ಸಮಿತಿಯೊಂದಿದೆ. ಇದರಲ್ಲಿ ವಿಧಾನ ಪರಿಷತ್ ಸದಸ್ಯ ಪ್ರತಾಪಚಂದ್ರ ಶೆಟ್ಟಿಯವರು ಸದಸ್ಯರು (ಈಗ ಸಭಾಪತಿ). ಇಲ್ಲಿನ ಕ್ರಮವೆಂದರೆ ಯಾವುದೇ ದೂರುದಾರರು ಯಾವುದಾದರೂ ಒಬ್ಬ ಸದಸ್ಯರ ಮೂಲಕವೇ ಅರ್ಜಿ ಸಲ್ಲಿಸಬೇಕು. ಶೆಟ್ಟಿಯವರ ಮೂಲಕ ಕಾಮತ್ 12-08-2014ರಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ದೂರು ಅರ್ಜಿಯೇ ನಾಪತ್ತೆಯಾಯಿತು. ಕೊನೆಗೆ ಶೆಟ್ಟಿಯವರೇ ಮುತುವರ್ಜಿಯಿಂದ ಮತ್ತೆ ಅರ್ಜಿಯನ್ನು ತರಿಸಿಕೊಂಡರು. ಆ ಹಂತದಲ್ಲಿ ಸರಕಾರದಿಂದ ಕಾಮತ್ ಎಲ್ಲ ಸೌಲಭ್ಯ ಪಡೆಯಲು ಅರ್ಹರು ಎಂದು ವರದಿ ಬಂತು. ಈ ಕಾರಣದಿಂದ ಮುಖ್ಯ ಬೇಡಿಕೆಯಾದ ವಿಳಂಬಕ್ಕೆ ಕಾರಣರಾದವರ ವಿಚಾರಣೆಯನ್ನು ಇಲ್ಲಿ ಕೈಬಿಡಲಾಯಿತು. ಇಲ್ಲಿ ಮುಖ್ಯ ವಿಷಯವೆಂದರೆ ಅಷ್ಟು ಕಟ್ಟುನಿಟ್ಟಿನ ವ್ಯವಸ್ಥೆಯಲ್ಲಿ ಅರ್ಜಿಯೇ ನಾಪತ್ತೆಯಾದದ್ದು.
ನಗರಾಭಿವೃದ್ಧಿ ಇಲಾಖೆ ಮತ್ತು ಡಿಪಿಎಆರ್ ಇಲಾಖೆಗಳು ಜಂಟಿ ಇಲಾಖೆ ವಿಚಾರಣೆಯಿಂದ ಇವರ ಹೆಸರು ಕಡಿಮೆ ಮಾಡಬಾರದೆಂದು ಶಿಫಾರಸು ಮಾಡಿದ್ದರೂ ಮುಖ್ಯ ಕಾರ್ಯದರ್ಶಿಯವರ ಶಿಫಾರಸ್ಸಿನ ಮೇರೆಗೆ 25-4-2015 ರಂದು ಸಚಿವ ಸಂಪುಟ ಸಭೆಯು ಕಾಮತ್ ಅವರ ಹೆಸರನ್ನು ರದ್ದುಪಡಿಸಿತು. ಇದರ ಮರುದಿನ 26-04-2015ರಂದು ಲೋಕಾಯುಕ್ತರ ಅಂತಿಮ ತೀರ್ಪಿನಲ್ಲಿ ಹಾಲಿ ಅಧ್ಯಕ್ಷರು, ಮುಖ್ಯಾಧಿಕಾರಿಗಳೇ ಬಾಕಿ ವಸೂಲಿಗೆ ಹೊಣೆ. ಈಗಾಗಲೇ ಬಾಕಿ ವಸೂಲಿಯಾಗಿರುವುದರಿಂದ ಪ್ರಕರಣದ ಎಲ್ಲ ಆರೋಪಿಗಳೂ ನಿರ್ದೋಷಿಗಳು ಎಂದು ಆದೇಶಿಸಿದ್ದರಿಂದ ಜಂಟಿ ಇಲಾಖಾ ವಿಚಾರಣೆಯಲ್ಲಿ ಎಲ್ಲ ಆರೋಪಿಗಳನ್ನೂ ನಿರ್ದೋಷಗೊಳಿಸಿ ಪ್ರಕರಣವನ್ನು ಇತ್ಯರ್ಥಪಡಿಸಲಾಯಿತು. ಇದಾದ ಬಳಿಕ10-06-2015ರಂದು ಕಾಮತ್ ಅವರಿಗೆ ಸರಕಾರದಿಂದ ಸಿಗಬೇಕಾದ ನಿವೃತ್ತಿ ಸೌಲಭ್ಯಗಳು ಸಿಕ್ಕಿದವು.
ಅಧಿಕಾರಿಶಾಹಿ v/s ಅಧಿಕಾರಿ
ಈಗ ಕಾಮತ್ ಅವರು ಸರಕಾರಿ ನೌಕರ ತನ್ನ ಕರ್ತವ್ಯ ನಿರ್ವಹಿಸದೆ ತೊಂದರೆ ಉಂಟು ಮಾಡಿದರೆ ಆ ನೌಕರನಿಗೆ ಆರು ತಿಂಗಳು ಶಿಕ್ಷೆಗೆ ಒಳಪಡಿಸಬಹುದು ಎಂಬ ಸೆಕ್ಷನ್ 166 ಐಪಿಸಿ ಕಾನೂನಿನಂತೆ ಕಾನೂನಾತ್ಮಕ ಹೋರಾಟವನ್ನು ಆರಂಭಿಸಿದ್ದಾರೆ. ತನ್ನ ಕಡತವನ್ನು ಇತ್ಯರ್ಥಗೊಳಿಸದಂತೆ ಅನಗತ್ಯವಾಗಿ ವಿಳಂಬ ಮಾಡಿದ ಹಿರಿಯ ಅಧಿಕಾರಿಗಳ ವಿರುದ್ಧ ಕ್ರಮ ವಹಿಸುವಂತೆ ಸರಕಾರದ ಮುಖ್ಯ ಕಾರ್ಯದರ್ಶಿಯವರ ಮೊರೆ ಹೋಗಿದ್ದಾರೆ. ಇವರ ಸೌಲಭ್ಯ ವಿಳಂಬವಾದುದಕ್ಕೆ ಸರಕಾರ 1,73,430 ರೂ. ಪಾವತಿಸಿದೆ. ಈ ಮೊತ್ತವನ್ನು ವಿಳಂಬಕ್ಕೆ ಕಾರಣರಾದ ಅಧಿಕಾರಿಗಳೇ ಪಾವತಿಸಬೇಕು ಎಂಬುದು ಆಗ್ರಹ. ಕಾಮತ್ ಬೆಟ್ಟು ಮಾಡಿದ ಒಬ್ಬ ಅಧಿಕಾರಿ ಈಗ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿಯಾಗಿದ್ದರೆ, ಇತರ ನಾಲ್ವರು ಭಡ್ತಿಗೊಂಡು ಉನ್ನತ ಹುದ್ದೆಯನ್ನಲಂಕರಿಸಿ ರುವುದು ಇನ್ನೊಂದು ವಿಶೇಷ. ಇನ್ನೊಂದೆಡೆ ತನಗಾದ ಮಾನಸಿಕ ಹಿಂಸೆಗೆ 80 ಲ.ರೂ. ಪರಿಹಾರವನ್ನು ಕೋರಿ ಕಾಮತ್ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್‌ನಲ್ಲಿ ಖಾಸಗಿ ದಾವೆ ಹೂಡಿದ್ದಾರೆ. ಇದಕ್ಕೆ ಸರಕಾರದ ಅನುಮತಿ ಬೇಕು. ಕುತೂ ಹಲದ ವಿಷಯವೆಂದರೆ ಬಲಾಡ್ಯ ಐಎಎಸ್ ಅಧಿಕಾರಿಗಳು ತಪ್ಪೆಸಗಿದರೆ ಅವರ ಮೇಲೂ ಜನಸಾಮಾನ್ಯರಿಗೆ ಲಾಗುವಾಗುವ ಕಾನೂನು ಅನ್ವಯವಾಗುತ್ತದೋ ಇಲ್ಲವೋ ಎನ್ನುವುದು. ಇಷ್ಟು ಸಂದಿಗ್ಧ ಸಂಕೀರ್ಣತೆ ಇರುವಾಗ ಖಾಸಗಿ ದಾವೆಗೆ ಸಂಬಂಧಿಸಿ ತನಿಖೆ ನಡೆಸುವಂತೆ ಸರಕಾರ ಅನುಮತಿ ಕೊಡುವುದು ಸಾಧ್ಯವೆ? ಅಧಿಕಾರಿಶಾಹಿ ಕಪಿಮುಷ್ಟಿಯಿಂದ ಹೊರಬರಲು ಇನ್ನೊಬ್ಬ ಅಧಿಕಾರಿ ಇಷ್ಟು ಪರದಾಟ ನಡೆಸಬೇಕಾದರೆ ಜನಸಾಮಾನ್ಯರ ಪಾಡೇನು? ಸರಕಾರದ ಮುಖ್ಯಸ್ಥರು ದಿನ ಬೆಳಗಾದರೆ ನೀಡುವ ಬಡತನ ನಿವಾರಣೆ, ತಾರತಮ್ಯರಹಿತ ಆಡಳಿತ, ಮಾನವ ಹಕ್ಕುಗಳ ರಕ್ಷಣೆ ಇತ್ಯಾದಿ ಶಬ್ದಾಲಂಕಾರಗಳಿಗೆ ಏನಾದರೂ ಅರ್ಥ ಇದೆಯೆ? ಒಟ್ಟಾರೆ ಕಿರುಕುಳ ಕೊಡುವ ಸ್ವಭಾವಕ್ಕೆ ಕಡಿವಾಣ ಹಾಕುವ ಮದ್ದು ಯಾವುದು ಮತ್ತು ಮದ್ದು ಕೊಡುವ ವೈದ್ಯರು ಯಾರು ಎಂಬ ಪ್ರಶ್ನೆಗೆ ಆಡಳಿತಾ ರೂಢ ಉತ್ತರದಾಯಿಗಳು ಉತ್ತರಿಸಬೇಕಾಗುತ್ತದೆ.
– ಮಟಪಾಡಿ ಕುಮಾರಸ್ವಾಮಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ
Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ
EVM Issue: ಮತಯಂತ್ರ ತಿರುಚಿದ್ದು ಸಾಬೀತಿಗೆ ನನ್ನ ಬಳಿ ಪುರಾವೆಗಳಿಲ್ಲ: ಕಾರ್ತಿ ಚಿದಂಬರಂ
Kasaragod;ತೀವ್ರ ತಲೆನೋವು: ವಿದ್ಯಾರ್ಥಿನಿ ಸಾ*ವು
Malpe: ಕಾರು ಢಿಕ್ಕಿಯಾಗಿ ಆಟೋ ರಿಕ್ಷಾ ಚಾಲಕನಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.