ಸ್ವಾತಂತ್ರ್ಯದ ಸ್ವರಾಜ್ಯ, ಸೇವೆಯ ಸುರಾಜ್ಯ
Team Udayavani, Apr 21, 2018, 7:27 PM IST
ಅಧಿಕಾರಿಗಳು ತಮ್ಮ ಮೇಲಿನವರು ಆದೇಶಿಸಿದ ಕೆಲಸವನ್ನು ದಕ್ಷವಾಗಿ ನಿರ್ವಹಿಸುವುದಷ್ಟೇ ಅಲ್ಲ, ಪೂರ್ಣ ಮನಸಿನಿಂದ ಕೆಲಸ ಮಾಡಬೇಕು. ಇದನ್ನು ಅಂದು ಪಟೇಲರು ಅತ್ಯಂತ ಹೃದ್ಯವಾಗಿ ವಿವರಿಸಿದ್ದರು. ಹಿಂದೆ ಅಧಿಕಾರಿಗಳು ಜನರಿಗೆ ನಿಲುಕದಂತೆ ಇರುತ್ತಿದ್ದರು. ಆದರೆ ಈಗ ಅವರು ನಮ್ಮವರೇ ಎಂದು ಸೇವೆಗೈಯಬೇಕಿದೆ.
ಎಪ್ಪತ್ತೂಂದು ವರ್ಷಗಳ ಹಿಂದೆ, ಭಾರತ ಸ್ವಾತಂತ್ರ್ಯಕ್ಕೂ ನಾಲ್ಕು ತಿಂಗಳು ಮೊದಲು ಅಂದರೆ 1947ರಂದು ಇದೇ ದಿನ ಸರ್ದಾರ್ ವಲ್ಲಭಭಾಯಿ ಪಟೇಲರು ಭಾರತೀಯ ಆಡಳಿತ ಸೇವೆ (ಐಎಎಸ್) ಅಧಿಕಾರಿಗಳ ಮೊದಲ ಬ್ಯಾಚ್ ಉದ್ದೇಶಿಸಿ ದೆಹಲಿ ಮೆಟ್‌ಕೇಫ್ ಹೌಸ್‌ನಲ್ಲಿ ಮಾತನಾಡುತ್ತಾ, ಸ್ವರಾಜ್ಯಕ್ಕೆ ಸುರಾಜ್ಯದ ಕಲ್ಪನೆಯನ್ನು ಬಿತ್ತಿದ್ದರು. ಈ ದಿನವನ್ನು ಇಂದಿಗೂ ನಾಗರಿಕ ಸೇವೆ ದಿನ ಎಂದೇ ಪರಿಗಣಿಸಲಾಗುತ್ತಿದೆ. ಇದು ಆಚರಣೆ, ಪ್ರತಿಫಲನ ಹಾಗೂ ಬದ್ಧತೆಯ ದ್ಯೋತಕ. ಬ್ರಿಟಿಷರ ನಾಗರಿಕ ಸೇವೆಯನ್ನು ರೂಪಾಂತರಿಸಿದ ದಿನವಿದು. ವಿದೇಶಿ ದೊರೆಗಳಿಗೆ ಬದ್ಧವಾಗಿ ಆಡಳಿತ ನಡೆಸುವುದರ ಬದಲಿಗೆ ನಾಗರಿಕರಿಗಾಗಿ ಪ್ರಜಾಪ್ರಭುತ್ವದ ಚೌಕಟ್ಟಿನಲ್ಲಿ ಆಡಳಿತ ನಡೆಸಲು ಆಡಳಿತ ಸೇವೆ ಅಧಿಕಾರಿಗಳನ್ನು ರೂಪಾಂತರಿಸಿದ ದಿನವಿದು.
ಅಧಿಕಾರಿಗಳು ತಮ್ಮ ಮೇಲಿನವರು ಆದೇಶಿಸಿದ ಕೆಲಸವನ್ನು ದಕ್ಷವಾಗಿ ನಿರ್ವಹಿಸುವುದಷ್ಟೇ ಅಲ್ಲ, ಪೂರ್ಣ ಮನಸಿನಿಂದ ಕೆಲಸ ಮಾಡುವ ಅಗತ್ಯ ಮೂಡಿತ್ತು. ಇದನ್ನು ಅಂದಿನ ಮಾತಿನಲ್ಲಿ ಪಟೇಲರು ಅತ್ಯಂತ ಹೃದ್ಯವಾಗಿ ವಿವರಿಸಿದ್ದರು. ಸೇವೆ ಎಂಬುದು ಬ್ರಿಟಿಷರ ಕಾಲದ ವ್ಯವಸ್ಥೆಯಿಂದ ಹೊರಬಂದು ಮುಕ್ತವಾಗಿ ಒದಗಬೇಕಿದೆ. ಅಧಿಕಾರಿಗಳು ಸ್ವ ಉತ್ಸಾಹದಿಂದ ಆಡಳಿತಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕಿದೆ. ಈ ಹಿಂದೆ ಅಧಿಕಾರಿಗಳು ಜನ ಸಾಮಾನ್ಯರಿಗೆ ನಿಲುಕದಂತೆ ಇರುತ್ತಿದ್ದರು. ಅದು ಆಗಿನ ಸಂಪ್ರದಾಯವಾಗಿತ್ತು. ಆದರೆ ಈಗ ಸಾಮಾನ್ಯ ಜನರು ನಮ್ಮವರೇ ಎಂದು ಭಾವಿಸಿ ಅವರ ಸೇವೆಗೈಯುವುದು ನಿಮ್ಮ ಕರ್ತವ್ಯ ಎಂದು ಪಟೇಲ್ ಅಂದು ಹೇಳಿದ್ದರು. ಈ ಮಾತಿನಿಂದ ಸ್ಪೂರ್ತಿಗೊಂಡು ನಾಗರಿಕ ಸೇವೆಯ ಅಧಿಕಾರಿಗಳು ಉತ್ತಮ ಆಡಳಿತದ ಮೂಲಕ ಜನರ ಜೀವನಮಟ್ಟವನ್ನು ಸುಧಾರಿಸುವಲ್ಲಿ ತೊಡಗಿಸಿಕೊಂಡರು. ಈ ನಿಟ್ಟಿನಲ್ಲಿ ಅಧಿಕಾರಿಗಳು ಯಶಸ್ಸನ್ನೂ ಕಂಡಿದ್ದಾರೆ. ಅಷ್ಟೇ ಅಲ್ಲ, ಭಾರತದ ಯಶಸ್ಸಿನ ಕಥೆಯಲ್ಲಿ ಈ ನಾಗರಿಕ ಸೇವೆ ಅಧಿಕಾರಿಗಳ ಸ್ಪಧಾತ್ಮಕತೆ ಹಾಗೂ ಬದ್ಧತೆಯು ಅತ್ಯಂತ ಮಹತ್ವದ ಪಾತ್ರವಹಿಸುತ್ತದೆ.
ಸರ್ದಾರ್ ಪಟೇಲರು ನಾಗರಿಕ ಸೇವೆಯನ್ನು ಸ್ಟೀಲ್ ಫ್ರೆàಮ್ ಎಂದು ಕರೆದಿದ್ದರು. ಈ ಫ್ರೆàಮ್ ಭಾರತದಂತಹ ವೈವಿಧ್ಯ
ಮಯ ದೇಶವನ್ನು ಒಟ್ಟಾಗಿಸುತ್ತದೆ ಮತ್ತು ದೇಶ ಕಟ್ಟುವ ಪ್ರಕ್ರಿಯೆಯಲ್ಲಿ ಸಾಧನವಾಗುತ್ತದೆ. 1949 ಅಕ್ಟೋಬರ್ 10ರಂದು ಸಂಸತ್ತಿನಲ್ಲಿ ಪಟೇಲ್ ಮಾತನಾಡುತ್ತಾ ಕಳೆದ ಮೂರು ವರ್ಷಗಳಿಂದ ನಾಗರಿಕ ಸೇವೆ ಅಧಿಕಾರಿಗಳು ದಕ್ಷವಾಗಿ ದೇಶಸೇವೆ ಮಾಡುತ್ತಿಲ್ಲದಿದ್ದರೆ, ಈ ದೇಶ ಸಂಪೂರ್ಣ ಕುಸಿದುಹೋಗುತ್ತಿತ್ತು ಎಂದಿದ್ದರು. ಕಳೆದ ಏಳು ದಶಕಗಳಲ್ಲಿ ನಾಗರಿಕ ಸೇವೆಯು ದಕ್ಷವಾಗಿ ಕಾರ್ಯನಿರ್ವಹಿಸುತ್ತಿದೆ. ಇದು ಪ್ರಜಾಪ್ರಭುತ್ವದ ಬೇರಿನವರೆಗೂ ತನ್ನ ಜಾಲವನ್ನು ಹೊಂದಿದೆ ಹಾಗೂ ಆಡಳಿತ ವ್ಯವಸ್ಥೆಯ ಫಲ ಎಲ್ಲರಿಗೂ ಸಿಗುವಂತೆ ಮಾಡಿದೆ. ನನ್ನ ಅಭಿಪ್ರಾಯದಲ್ಲಿ ಭಾರತೀಯ ನಾಗರಿಕ ಸೇವೆಯ ಉನ್ನತ ಅಧಿಕಾರ ವರ್ಗವು ಸ್ಪೂರ್ತಿಯುತವಾಗಿ ಕೆಲಸ ಮಾಡುತ್ತದೆ. ಈ ಸ್ಪೂರ್ತಿ ಎಂದಿಗೂ ಬತ್ತಬಾರದು. ಈ ಸ್ಪೂರ್ತಿಯನ್ನು ನಾನು ತಾದಾತ್ಮé, ದಕ್ಷತೆ, ಸಮಾನತೆ ಮತ್ತು ಭ್ರಷ್ಟರಹಿತತೆ ಎಂದು ಕರೆಯಲು ಬಯಸುತ್ತೇನೆ.
ತಾದಾತ್ಮé ಎಂಬುದು ಮಹಾತ್ಮ ಗಾಂಧಿ ಹೇಳುವಂತೆ ಸಮಾಜದ ಅತ್ಯಂತ ಕೆಳ ಸ್ತರದ ವ್ಯಕ್ತಿಯ ಸಮಸ್ಯೆಯನ್ನು ಆತನ ಪರಿಸ್ಥಿತಿಯಲ್ಲೇ ನಿಂತು ನೋಡುವುದಾಗಿದೆ ಮತ್ತು ನಿರ್ದಿಷ್ಟ ನೀತಿ ಹಾಗೂ ಯೋಜನೆಯು ಅವರ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂದು ಅರಿಯುವುದಾಗಿದೆ. ಒಂದು ನಿರ್ಧಾರದ ಫಲಿತಾಂಶ ಒಳ್ಳೆಯದಾಗುತ್ತದೆಯೇ ಅಥವಾ ಕೆಟ್ಟದಾಗುತ್ತದೆಯೇ ಎಂಬುದನ್ನು ಊಹಿಸಲು ಇದು ಹಿಂದಿನಿಂದಲೂ ಉತ್ತಮ ವಿಧಾನವಾಗಿದೆ.
ನೀತಿಗಳನ್ನು ಯೋಜನೆಗಳನ್ನಾಗಿ ಪರಿವರ್ತಿಸುವುದು ಮತ್ತು ಅದನ್ನು ಜಾರಿಗೆ ತರುವುದು ಆಡಳಿತಗಾರರ ಮಹತ್ವದ
ಜವಾಬ್ದಾರಿ. ಇವರು ಶಾಸನ ಮತ್ತು ಅನುಷ್ಠಾನದ ಮಧ್ಯೆ ಮಹ ತ್ವದ ಕೊಂಡಿಯಾಗಿರುತ್ತಾರೆ. ನಮ್ಮ ದೇಶದಲ್ಲಂತೂ ಬಹಳಷ್ಟು ಬಾರಿ ಉತ್ತಮ ನೀತಿಗಳನ್ನು ಕಳಪೆಯಾಗಿ ಅನುಷ್ಠಾನಕ್ಕೆ ತಂದ ಉದಾಹರಣೆಗಳು ಸಿಗುತ್ತವೆ. ಅದಕ್ಷವಾಗಿ ಯೋಜನೆ ಮತ್ತು ನೀತಿಗಳನ್ನು ಜಾರಿಗೆ ತರುವುದು ಸಾರ್ವಜನಿಕರ ಮೇಲೆ ತೀವ್ರ ಪರಿಣಾಮ ಉಂಟು ಮಾಡುತ್ತದೆ.
ವೆಚ್ಚ ಮತ್ತು ಸಮಯವೇ ದೇಶದ ಅಭಿವೃದ್ಧಿಯನ್ನು ನಿರ್ಧರಿಸುತ್ತದೆ. ದಕ್ಷತೆ ಮತ್ತು ವೃತ್ತಿಪರತೆಯಲ್ಲಿ ಅಧಿಕಾರಿಗಳು ಉನ್ನತ ಗುಣಮಟ್ಟವನ್ನು ಕಾಯ್ದುಕೊಳ್ಳುತ್ತಾರೆ ಎಂದು ಜನರು ಭಾವಿಸುತ್ತಾರೆ. ಈ ನಿಟ್ಟಿನಲ್ಲಿ ನಾಗರಿಕ ಸೇವಾ ಅಧಿಕಾರಿಗಳು ತಮ್ಮ ಚಿಂತನೆ ಹಾಗೂ ಕ್ರಮಗಳಲ್ಲಿ ಬದ್ಧವಾಗಿರಬೇಕಾಗುತ್ತದೆ. ಅಧಿಕಾರಿಗಳು ಇತ್ತೀಚಿನ ಮಾಹಿತಿ ಬಳಸಿಕೊಂಡು ಅದನ್ನು ತಮ್ಮ ಸೇವೆಯಲ್ಲಿ ಅನುಷ್ಠಾನಗೊಳಿಸಬೇಕು. ಈ ವಿಧಾನದಿಂದಲೇ ಹಲವು ಅಧಿಕಾರಿಗಳು ಜಡ ಸಂಸ್ಥೆಗಳನ್ನು ಸಕ್ರಿಯಗೊಳಿಸಿದ್ದಾರೆ.
ಕಾರ್ಯಸ್ಥಳ ಹಾಗೂ ವಾಸಸ್ಥಳ ಬದಲಾಗುತ್ತಿದ್ದಂತೆಯೇ ತಮ್ಮ ಕಾರ್ಯವಿಧಾನವನ್ನೂ ನಾಗರಿಕ ಸೇವೆ ಅಧಿಕಾರಿಗಳು ಬದಲಿಸಿ ಕೊಳ್ಳಬೇಕಾಗುತ್ತದೆ. ಅದರಲ್ಲೂ ವಿಶೇಷವಾಗಿ ಮೂಲಸೌಕರ್ಯ ಉತ್ತಮವಾಗಿಲ್ಲದ ಪ್ರದೇಶಗಳಲ್ಲಂತೂ ಅಧಿಕಾರಿಗಳು ಜನರ ಜೀವನ ಮಟ್ಟವನ್ನು ಸುಧಾರಿಸುವಲ್ಲಿ ತಮ್ಮ ಕಾರ್ಯವಿಧಾನವನ್ನು ಆಮೂಲಾಗ್ರವಾಗಿ ಬದಲಿಸಿಕೊಳ್ಳಬೇಕು. ಹೀಗಾಗಿ ನಾವೀನ್ಯತೆ ಎಂಬುದು ಅಧಿಕಾರಿಗಳಿಗೆ ಅತ್ಯಂತ ಪ್ರಮುಖ ಅಂಶ.
ನಾವು ಏನನ್ನು ಸಾಧಿಸಿದ್ದೇವೆ ಮತ್ತು ಏನನ್ನು ಸಾಧಿಸಬೇಕಿದೆ ಎಂಬ ಪ್ರಮಾಣಿಕ ವಿಶ್ಲೇಷಣೆಯನ್ನು ಅಧಿಕಾರಿಗಳು ಮಾಡಬೇಕು. ನಾವು ಸರ್ಕಾರ ಮತ್ತು ಜನರ ಮಧ್ಯೆ ಪಾಲುದಾರಿಕೆಯನ್ನು ರೂಪಿಸಬೇಕು. ಇದರಿಂದ ಅಭಿವೃದ್ಧಿ ತ್ವರಿತಗೊಳ್ಳುತ್ತದೆ ಮತ್ತು ಸೇವೆಯ ಗುಣಮಟ್ಟವೂ ಗಮನಾರ್ಹವಾಗಿ ಹೆಚ್ಚುತ್ತದೆ.
ದಕ್ಷತೆ ಮತ್ತು ರೂಪಾಂತರದ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಸುಧಾರಣೆ, ಸಾಧನೆ ಮತ್ತು ರೂಪಾಂತರ ಎಂಬ ಸ್ಪೂರ್ತಿದಾಯಕ ಸಂದೇಶ ಮಹತ್ವದ್ದಾಗಿದೆ. ಇನ್ನು ಪಟೇಲರೇ ಅಂದು ತಮ್ಮ ಮಾತಿನ ಮಧ್ಯೆ ಹೇಳಿರುವಂತೆ, ಅಧಿಕಾರಿಗಳು ತಾರತಮ್ಯ ಮತ್ತು ಭ್ರಷ್ಟಮುಕ್ತವಾಗಿರಬೇಕು. ದೇಶದ ಆಡಳಿತದಲ್ಲಿ ತಾರತಮ್ಯ ರಹಿತ, ಸಮಗ್ರ ಆಡಳಿತ ಸಂಸ್ಕೃತಿಯನ್ನು ಒಡಮೂಡಿಸಲು ನಾಗರಿಕ ಸೇವಾ ವಿಭಾಗವನ್ನು ರಚಿಸಲಾಗಿದೆ. ಭಾರತದಂತಹ ಬಹು ಭಾಷೆಯ, ಬಹು ಧಾರ್ಮಿಕ ಹಾಗೂ ಬಹು ಸಾಮಾಜಿಕ ವಾತಾವರಣದಲ್ಲಿ ಇದು ಮಹತ್ವ ಪಡೆಯುತ್ತದೆ. ಭಾರತದ ವೈವಿಧ್ಯಗಳನ್ನು ಒಟ್ಟಾಗಿಸಲು ನಾಗರಿಕ ಸೇವೆಯು ಸೇತುವೆಯಾಗಿದೆ. ರಾಷ್ಟ್ರೀಯ ಸಮಗ್ರತೆ ಮತ್ತು ಸಮಗ್ರ ಅಭಿವೃದ್ಧಿಯ ವಿಶಾಲ ದೃಷ್ಟಿಕೋನವನ್ನು ಹೊಂದಿರುವುದು ಮತ್ತು ತಾರತಮ್ಯ ರಹಿತವಾಗಿರುವ ಮೂಲಕ ನಾಗರಿಕ ಸೇವೆ ಅಧಿಕಾರಿಗಳು ಸಾಮಾಜಿಕ ಆರ್ಥಿಕ ಸಿದ್ಧಾಂತವನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆ.
ಪಟೇಲರು 1947ರಲ್ಲಿ ಹೇಳಿರುವಂತೆ ಆಡಳಿತದಲ್ಲಿ ತಾರತಮ್ಯ ಎಸಗದೇ ಇರುವ ಅಗತ್ಯ ಅಂದಿನಷ್ಟೇ ಇಂದಿಗೂ ಪ್ರಸ್ತುತವಾಗಿದೆ. ನಾಗರಿಕ ಸೇವೆ ಅಧಿಕಾರಿಯು ರಾಜಕೀಯದ ಭಾಗವಾಗ ಬಾರದು. ಅಷ್ಟೇ ಅಲ್ಲ, ಆತ ಯಾವುದೇ ಕೋಮಿನೊಂದಿಗೂ ಗುರುತಿಸಿಕೊಳ್ಳಬಾರದು. ಈ ಯಾವುದೇ ಒಂದರಲ್ಲಿ ಅಧಿಕಾರಿ ಸೋತರೂ, ಸಾರ್ವಜನಿಕ ಸೇವೆಯನ್ನು ಬಲಹೀನಗೊಳಿಸಿ ದಂತಾಗುತ್ತದೆ ಮತ್ತು ತನ್ನ ಘನತೆಯನ್ನು ಆತ ಕಳೆದುಕೊಳ್ಳುತ್ತಾನೆ ಎಂದು ಅಂದು ಪಟೇಲರು ಹೇಳಿದ್ದರು.
ಆಡಳಿತಾಧಿಕಾರಿಗಳು ತಮ್ಮ ಸೇವೆಯ ಬಗ್ಗೆ ಮಮಕಾರ ಹೊಂದಿರಬೇಕು. ಆದರೆ ನಿರ್ದಿಷ್ಟ ಜನ ಸಮೂಹದ ಬಗ್ಗೆ ಮಮಕಾರ ಹೊಂದಿರಬಾರದು. ಎಲ್ಲ ಜನರನ್ನೂ ಒಂದೇ ರೀತಿ, ತಾರತಮ್ಯ ರಹಿತವಾಗಿ ನೋಡಬೇಕು ಮತ್ತು ಅವರಿಗೆ ಸೇವೆ ಒದಗಿಸಬೇಕು. ಆದರೆ ಅಭಿವೃದ್ಧಿಯ ಪಥದಿಂದ ಹೊರಗುಳಿದವರ ಮೇಲೆ ಅಧಿಕಾರಿಗಳು ವಿಶೇಷ ಕಾಳಜಿ ವಹಿಸಬೇಕು. ಈ ನಿಟ್ಟಿನಲ್ಲಿ ಅಂತ್ಯೋದಯ ಎಂಬುದು ಮಾರ್ಗದರ್ಶಿ ನೀತಿಯಾದೀತು.
ದೇಶದ ನಾಗರಿಕ ಸೇವೆ ಅಧಿಕಾರಿಗಳು ಭ್ರಷ್ಟರಹಿತರಾಗುವುದು 70 ವರ್ಷಗಳ ಹಿಂದಿನಷ್ಟೇ ಇಂದಿನ ಅಗತ್ಯವೂ ಹೌದು. ಪಟೇಲರೂ ಕೂಡ ಅಂದು ಈ ವಿಚಾರವನ್ನು ತಮ್ಮ ಮಾತಿನಲ್ಲಿ ಪ್ರಸ್ತಾಪಿಸಿದ್ದರು. ‘ಇಂದು ಭಾರತದ ನಾಗರಿಕ ಸೇವೆ ಭ್ರಷ್ಟಮುಕ್ತ ವಾಗಿಲ್ಲ. ಆದರೆ ನೀವು ಈಗ ಹೊಸದಾಗಿ ನಾಗರಿಕ ಸೇವೆಯ ಶಕೆಯನ್ನು ಆರಂಭಿಸುತ್ತಿರುವುದರಿಂದ ಇದನ್ನು ಬದಲಿಸಬಹು ದಾಗಿದೆ. ಯಾವುದೇ ಆಮಿಷ ಹಾಗೂ ಆಸೆ ಅಥವಾ ಪ್ರತ್ಯೇಕ ಪ್ರತಿಫಲ ಅಪೇಕ್ಷಿಸದೇ ಕೆಲಸ ಮಾಡಬೇಕು. ಇದರಿಂದ ನೀವು ಖಚಿತವಾಗಿಯೂ ನ್ಯಾಯುತ ವಿಧಾನದಲ್ಲಿ ಪ್ರತಿಫಲವನ್ನು ಪಡೆಯುತ್ತೀರಿ’ ಎಂದು ಪಟೇಲ್ ಅಂದು ಹೇಳಿದ್ದರು.
ದೇಶವು ಉನ್ನತ ಮಟ್ಟದ ಸಾಧನೆಯನ್ನಷ್ಟೇ ಅಲ್ಲ, ಉನ್ನತ ಮಟ್ಟದ ಸಮಗ್ರತೆ ಮತ್ತು ತಾದಾತ್ಮéವನ್ನೂ ಬಯಸುತ್ತದೆ. ದೇಶದ ಯುವಕರು ನಾಗರಿಕ ಸೇವೆ ಅಧಿಕಾರಿಗಳನ್ನು ತಮ್ಮ ರೋಲ್ ಮಾಡೆಲ್‌ಗಳಂತೆ ನೋಡುತ್ತಾರೆ. ನಾಗರಿಕ ಸೇವೆ ಎಂಬುದರಲ್ಲಿನ ನಾಗರಿಕ ಎಂಬ ಶಬ್ದವೇ ಸೂಚ್ಯವಾಗಿದ್ದು, ನಾಗರಿಕರ ಸುಖ ದುಃಖಗಳನ್ನು ಸಮಾಧಾನದಿಂದ ಆಲಿಸುವಂತೆ ಮತ್ತು ಸಮ ತೋಲಿತ ನಿಲುವು ತಳೆಯುವಂತೆ ಪ್ರೇರೇಪಿಸುತ್ತದೆ. ನಾಗರಿಕ ಸೇವೆಯಲ್ಲಿರುವ ಅಧಿಕಾರಿಗಳು ತಮ್ಮ ಅಹಂ ಹಾಗೂ ಅಧಿಕಾರ ಧೋರಣೆಯನ್ನು ನುಂಗಿಕೊಳ್ಳಬೇಕು ಮತ್ತು ಮಾನಸಿಕ ಕ್ಷೋಭೆ ಉಂಟು ಮಾಡುವ ವಿಷಯ ಅಥವಾ ಸಮಸ್ಯೆಗಳನ್ನೂ ಸಮಚಿತ್ತ ದಿಂದ ನೋಡಬೇಕು. ಉತ್ತಮ ಆಡಳಿತದ ಮೂಲ ಇರುವುದೇ ಉತ್ತಮ ನಡತೆ ಮತ್ತು ಧನಾತ್ಮಕ ಮುನ್ನೋಟದಲ್ಲಿ.
ಭ್ರಷ್ಟ ವ್ಯವಸ್ಥೆಯು ಇಡೀ ದೇಶವನ್ನು ಭ್ರಷ್ಟತೆಯ ಕೂಪಕ್ಕೆ ತಳ್ಳುತ್ತದೆ. ಭ್ರಷ್ಟಾಚಾರವನ್ನು ತೊಲಗಿಸಬೇಕೆಂದರೆ ಮೊದಲು ನಾಗರಿಕ ಸೇವೆ ಅಧಿಕಾರಿಗಳು ಶುದ್ಧವಾಗಬೇಕಿದೆ. ದೇಶದ ಚಿತ್ರಣವನ್ನು ಕಳೆಗುಂದಿಸುವ ಯಾವ ಕ್ರಮಗಳನ್ನೂ ಅಧಿಕಾರಿ
ಗಳು ಕೈಗೊಳ್ಳಬಾರದು. ಅಷ್ಟೇ ಅಲ್ಲ, ಈ ಸ್ಟೀಲ್ ಫ್ರೆಮ್ ಸ್ವಲ್ಪವೂ ತುಕ್ಕು ಹಿಡಿಯದಂತೆ, ನುಗ್ಗಾಗದಂತೆ ಕಾಯ್ದುಕೊಳ್ಳಬೇಕು. ದೇಶದ ಉಕ್ಕಿನ ಮನುಷ್ಯ ಪಟೇಲ್ ಈ ಸ್ಟೀಲ್ ಫ್ರೆàಮ್ ಕಲ್ಪನೆಯನ್ನು ನಮಗೆ ಒದಗಿಸಿದ್ದಾರೆ. ಈ ಫ್ರೆàಮ್‌ಗೆ ಐಎಎಸ್ ಅಧಿಕಾರಿಗಳು ತಮ್ಮ ಧನಾತ್ಮಕ ಕೊಡುಗೆಯಿಂದ ಹೊಳಪು ನೀಡಬೇಕು ಎಂಬುದು ನನ್ನ ಆಗ್ರಹ.
ಈ ನಾಗರಿಕ ಸೇವಾ ದಿನದಂದು, ದೇಶವನ್ನು ಸ್ವರಾಜ್ಯದಿಂದ ಸುರಾಜ್ಯದ ಕಡೆಗೆ ಕೊಂಡೊಯ್ಯುತ್ತಿರುವ ಮತ್ತು ಶ್ರೀಮಂತ, ಸೌಹಾರ್ದಯುತ ಹಾಗೂ ನವೀನ ಭಾರತವನ್ನು ಕಟ್ಟುವಲ್ಲಿ ತಮ್ಮ ಸೇವೆ ಮುಡಿಪಿಟ್ಟಿರುವ ನಾಗರಿಕ ಸೇವೆ ಅಧಿಕಾರಿಗಳಿಗೆ ನಾನು ಶುಭಾಶಯ ಕೋರುತ್ತೇನೆ.
ವೆಂಕಯ್ಯ ನಾಯ್ಡು, ಉಪರಾಷ್ಟ್ರಪತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BGT ಸೋಲು; ಇಂಗ್ಲೆಂಡ್ ವಿರುದ್ದದ ಸರಣಿಗೆ ಕೊಹ್ಲಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವೇ?
Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ
ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ
Shivamogga: ಮಾಂಗಲ್ಯ ಸರ ಕಿತ್ತು ಪರಾರಿಯಾದ ಖರ್ತನಾಕ್ ಕಳ್ಳರು; ಸಿಸಿಟಿವಿಯಲ್ಲಿ ಸೆರೆ
Mollywood: ʼಮಾರ್ಕೊʼ ಬಳಿಕ ಮೋಹನ್ ಲಾಲ್ ನಿರ್ದೇಶನದ ʼಬರೋಜ್ʼ ಚಿತ್ರಕ್ಕೂ ಪೈರಸಿ ಕಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.