ಅಮೆರಿಕ ಪುಂಡಾಟಕ್ಕೆ ತಕ್ಕ ಪಾಠ ಕಲಿಸಲಿ ಭಾರತ
Team Udayavani, Jul 31, 2018, 6:00 AM IST
ಟ್ರಂಪ್ ಅಮೆರಿಕ ಭಾರತ ದೇಶಗಳ ಸಂಬಂಧವನ್ನೇ ಪಣಕ್ಕಿಡಲು ಎಳ್ಳಷ್ಟೂ ಯೋಚಿಸುವುದಿಲ್ಲ. ದೀರ್ಘಕಾಲದಿಂದ ಬೆಳೆದು ಬಂದಿರುವ ಸಂಬಂಧವನ್ನು ಕಿವುಚಿ ಹಾಕುವುದಕ್ಕೂ ಹೇಸುವುದಿಲ್ಲ . ಭಾರತ ಇಂತಹ ಕುಚೇಷ್ಟೆಗಳಿಂದ ದೂರ ಉಳಿಯಬೇಕಾಗಿದೆ. ಅಮೆರಿಕ ಎಷ್ಟೇ ಒತ್ತಡ ಹೇರಿದರೂ ಭಾರತ ತನ್ನ ಒಳಿತಿಗೆ ಸ್ವತಂತ್ರ ನಿರ್ಧಾರಗಳನ್ನು ಮುಂದೆಯೂ ತೆಗೆದುಕೊಳ್ಳುತ್ತದೆ ಎನ್ನುವುದನ್ನು ಡೊನಾಲ್ಡ್ ಟ್ರಂಪ್‌ಗೆ ಮನದಟ್ಟು ಮಾಡಿಕೊಡುವ ಅವಶ್ಯಕತೆ ಇದೆ.
1991ರ ನಂತರ ಭಾರತ ದೇಶದಲ್ಲಿ ಆರ್ಥಿಕ ಸುಧಾರಣೆಗಳನ್ನು ತಂದ ಬಳಿಕ ಅಮೆರಿಕ ಹಾಗೂ ಭಾರತದ ಸಂಬಂಧ ಉತ್ತಮಗೊಳ್ಳುತ್ತಾ ಬಂದಿದೆ. ಪ್ರಾರಂಭದಲ್ಲಿ ಆರ್ಥಿಕ ಆಯಾಮ ದಲ್ಲಿ ಸಂಬಂಧವನ್ನು ಪುಷ್ಟೀಕರಿಸಿದ್ದರೂ, 1998ರ ಅಣು ಪರೀಕ್ಷೆಗಳ ನಂತರ ಅಮೆರಿಕ ಆರ್ಥಿಕ ನಿರ್ಬಂಧನೆಗಳನ್ನು ಹೇರಿದ್ದರಿಂದ 6-7 ವರ್ಷಗಳಲ್ಲಿ ಆಗಿದ್ದ ಸಂಬಂಧ ಸುಧಾರಣೆಗಳೆಲ್ಲ ಕುಸಿಬಿದ್ದಿದ್ದವು. ಕೊನೆಗೆ 2008ರಲ್ಲಿ ನಾಗರಿಕ ಅಣು ಒಪ್ಪಂದಕ್ಕೆ ಸಹಿ ಹಾಕಿದಾಗಿನಿಂದ ಸಂಬಂಧಗಳು ಪುನಃ ಸುಧಾರಿಸತೊಡಗಿದ್ದು ಭವಿಷ್ಯದಲ್ಲೂ ಹೀಗೆಯೇ ಉತ್ತಮವಾಗುತ್ತಾ ಸಾಗುತ್ತದೆನ್ನುವ ಆಶಾಭಾವನೆ ಉಭಯ ದೇಶಗಳಲ್ಲೂ ಇದೆ.
ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರ ಆಡಳಿತಾವಧಿಯಲ್ಲಿ ಭಾರತದಲ್ಲಿ ಇಬ್ಬರು ಪ್ರಧಾನ ಮಂತ್ರಿಗಳು ಕೆಲಸ ಮಾಡಿದ್ದರು. ಮನಮೋಹನ್ ಸಿಂಗ್ ಅವರ ಜೊತೆ ಸಂಬಂಧಗಳು ಉತ್ತಮವಾಗಿತ್ತಾದರೂ ಮೋದಿ ಅವರ ಜೊತೆಗಂತೂ ಔಪಚಾರಿಕ ಸಂಬಂಧವು ಸ್ನೇಹಕ್ಕೆ ತಿರುಗಿತ್ತು. ಅಮೆರಿಕದಲ್ಲಾಗಲಿ ಭಾರತದಲ್ಲಾಗಲಿ ಭವಿಷ್ಯದಲ್ಲಿ ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಸಂಬಂಧಗಳು ಹದಗೆಡದಂತಹ ಸ್ಥಿತಿಯ ನಿರ್ಮಾಣಕ್ಕೆ ಮುನ್ನುಡಿ ಬರೆದಾಗಿತ್ತು. ಆದರೆ ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾದದ್ದೇ ಪರಿಸ್ಥಿತಿ ಬದಲಾಯಿತು. ಮೂಲತಃ ಓರ್ವ ವ್ಯಾಪಾರಿಯಾಗಿರುವ ಇವರಿಗೆ ತಿಳಿದಿರುವುದು ಒಂದೇ ಭಾಷೆ. ಅದು ಲೇವಾದೇವಿಯ ಭಾಷೆ. ಅದೇ ಭಾಷೆಯನ್ನು ಅವರು ರಾಜತಾಂತ್ರಿಕ ಪ್ರಪಂಚಕ್ಕೂ ತಂದು ಬಳಸತೊಡಗಿದ್ದಾರೆ. ರಾಜತಾಂತ್ರಿಕ ಆಯಾಮದಲ್ಲಿ ಸಾಮಾನ್ಯವಾಗಿ ದೀರ್ಘಾವಧಿಯ ನಿರ್ಧಾರಗಳನ್ನು ತೆಗೆದುಕೊಳ್ಳು ತ್ತಾರೆ. ಇದಕ್ಕೆ ಭಾರತವೇ ಒಂದು ಉದಾಹರಣೆ. 1991ರ ನಂತರ ನಿಧಾನಗತಿಯಲ್ಲಿ ಭಾರತವನ್ನು ಸೊವಿಯತ್/ರಷ್ಯಾ ಮುಷ್ಟಿ ಯಿಂದ ಹೊರಗೆಳೆದು ತನ್ನೆಡೆಗೆ ಸೆಳೆದುಕೊಳ್ಳುವ ಪ್ರಯತ್ನವನ್ನು ಅಮೆರಿಕ ಮಾಡಿತ್ತು. ಹೆಸರಿಗೆ ಆಲಿಪ್ತತೆಯನ್ನು ಪಠಿಸುತ್ತಿದ್ದ ಭಾರತವನ್ನು ಒಮ್ಮೆಲೇ ತನ್ನೆಡೆಗೆ ಸೆಳೆಯುವುದು ಕಷ್ಟಸಾಧ್ಯವಾಗಿ ದ್ದರಿಂದ ಈ ರೀತಿಯ ಮಂದಗತಿಯ ನಡೆಗಳು ಕಂಡುಬಂದವು. ಒಂದು ವೇಳೆ ಆಗ ಅಮೆರಿಕ ತ್ವರಿತವಾಗಿ ಸೆಳೆಯುವ ಪ್ರಯತ್ನ ಮಾಡಿದ್ದರೆ, ಈಗಿನ ಪರಿಸ್ಥಿತಿ ಕಾಣಸಿಗುತ್ತಿರಲಿಲ್ಲವೇನೋ ಎನ್ನುವ ಆಲೋಚನೆ ಬರುವುದು ಸಹಜ.
ಹೀಗಾಗಿ ಅಮೆರಿಕದ ಈಗಿನ ನಡೆಗಳನ್ನು ಅವಲೋಕಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಕಳೆದ ವರ್ಷ ಉತ್ತರ ಕೊರಿಯಾ ಬಿಕ್ಕಟ್ಟು ಪರಾಕಾಷ್ಠೆಯನ್ನು ತಲುಪಿದಾಗ ಅಮೆರಿಕ ಭಾರತದ ಮೇಲೂ ಒತ್ತಡ ಹೇರಿ ನೀವು ಅವರ ಜೊತೆ ಯಾವುದೇ ವಾಣಿಜ್ಯ ವಹಿವಾಟನ್ನು ನಡೆಸಬೇಡಿ ಎಂದು ಹೇಳಿತ್ತು. ಈಗ ಇದೇ ಉತ್ತರ ಕೊರಿಯಾದೊಂದಿಗೆ ತಾನು ಗಳಸ್ಯಕಂಠಸ್ಯ ಎನ್ನುವಂತೆ ವರ್ತಿಸುತ್ತಿದೆ.
ಈಗ ಅಮೆರಿಕ ಇರಾನ್ ದೇಶದ ಮೇಲೂ ಒತ್ತಡ ಹೇರುತ್ತಿದೆ. ಒಬಾಮ ಕಾಲದಲ್ಲಿ ಅಮೆರಿಕ ನೇತೃತ್ವದಲ್ಲಿ 6 ದೇಶಗಳು ಇರಾನ್ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದವು. ಇರಾನ್ ಅಣು ಸಂಶೋಧನೆ ನಡೆಸದಂತೆ ನಿರ್ಬಂಧನೆ ಹಾಕಿ, ಅದಕ್ಕೆ ಪ್ರತಿಯಾಗಿ ಆ ದೇಶದ ಮೇಲಿದ್ದ ಮೊದಲಿನ ಹಲವು ವಿತ್ತ ನಿರ್ಬಂಧವನ್ನು ಸಡಿಲಗೊಳಿಸಲಾಗಿತ್ತು. ಈಗ ಟ್ರಂಪ್ ಆ ಒಪ್ಪಂದದಿಂದ ಏಕಾ-ಏಕಿ ಹೊರ ನಡೆದಿದ್ದಲ್ಲದೆ ಇರಾನ್ ಮೇಲೆ ಹೊಸ ಆರ್ಥಿಕ ನಿರ್ಬಂಧಗಳನ್ನು ಹಾಕಿ¨ªಾರೆ. ಅಷ್ಟೇ ಅಲ್ಲದೆ ಯಾವುದೇ ದೇಶ ಇರಾನ್ ಜೊತೆಗೆ ವಹಿವಾಟು ನಡೆಸಿದರೆ ಅವರು ಇನ್ನು ಮುಂದೆ ಅಮೆರಿಕದ ಜೊತೆಯಾಗಲಿ ಅಥವಾ ಅಮೆರಿಕನ್ ಕಂಪನಿಗಳ ಜೊತೆಯಾಗಲಿ ವಹಿವಾಟು ನಡೆಸುವ ಹಾಗಿಲ್ಲ ಎಂದು ಖಡಾಖಂಡಿತವಾಗಿ ಹೇಳಿಬಿಟ್ಟಿದ್ದಾರೆ. 6 ದೇಶಗಳಲ್ಲಿ ಒಂದಾದ ಫ್ರಾನ್ಸ್ ಒಬಾಮಾ ಅವಧಿಯಲ್ಲಿನ ಒಪ್ಪಂದದ ನಂತರ ಇರಾನ್ ದೇಶಕ್ಕೆ ಏರ್ ಬಸ್ ವಿಮಾನಗಳನ್ನು
ಮಾರಲು ತಯಾರಿ ನಡೆಸಿತ್ತು. ಈಗ ಅಮೆರಿಕ ಇರಾನ್‌ಗೆ ವಿಮಾನಗಳನ್ನು ಮಾರದಂತೆ ಫ್ರಾ®ನ್ಸ್ ಗೆ ಒತ್ತಡ ಹೇರುತ್ತಿದೆ. ಅಂತೆಯೇ ಇರಾನ್ ದೇಶದಿಂದ ಕಚ್ಚಾ ತೈಲ ಕೊಳ್ಳುವ,
ಅಲ್ಲದೆ ಚಬಹಾರ್ ಬಂದರಿನ ಅಭಿವೃದ್ಧಿ ಕಾರ್ಯದಲ್ಲಿ ಭಾಗಿಯಾಗುವ ಒಪ್ಪಂದ ಮಾಡಿಕೊಂಡಿದ್ದ ಭಾರತಕ್ಕೂ ಇದು ಕಗ್ಗಂಟಾಗಿದೆ. ಸ್ವಾಭಾವಿಕವಾಗಿಯೇ ಅಮೆರಿಕದ ನಡೆಗೆ ಭಾರತದಲ್ಲಿ ನಿರಾಶೆ ವ್ಯಕ್ತವಾಗಿದೆ. ಎರಡು ಸ್ವತಂತ್ರ ದೇಶಗಳು ವಹಿವಾಟು ನಡೆಸುವಾಗ ಮೂರನೇ ದೇಶದ ಕೆಲಸವೇನು ಎನ್ನುವ ಪ್ರಶ್ನೆ ಜೋರಾಗಿಯೇ ಕೇಳಿ ಬರುತ್ತಿದೆ. ಇನ್ನೂ ಹಿಂದಕ್ಕೆ ಹೋದರೆ ಭಾರತ ರಷ್ಯಾದಿಂದ ವಾಯು ರಕ್ಷಣೆಗೆ ಬಳಸುವ ಎಸ್-400 ಕ್ಷಿಪಣಿಗಳನ್ನು ಕೊಳ್ಳಲು ತಯಾರಿ ನಡೆಸಿತ್ತು. ಇದರಲ್ಲೂ ಅಡ್ಡಗಾಲು ಹಾಕಿದ ಅಮೆರಿಕ ತಮ್ಮ ದೇಶದ ಪೇಟ್ರಿಯಾಟ್ ಕ್ಷಿಪಣಿಗಳನ್ನು ಕೊಳ್ಳಿರಿ ಎಂದು ದುಂಬಾಲು ಬಿದ್ದಿತ್ತು. ಪೇಟ್ರಿಯಾಟ್ ಕ್ಷಿಪಣಿಗಳಿಗೆ ಹೋಲಿಸಿದರೆ ಎಸ್-400 ಕ್ಷಿಪಣಿಗಳೇ ಉತ್ತಮ. ಹಾಗಾಗಿ ಭಾರತ ಸ್ವಲ್ಪ ಮಟ್ಟಿಗೆ ಅಸಮಾಧಾನ ಸೂಚಿಸಿತ್ತು. ಕೊನೆಗೂ ಅಮೆರಿಕ ತನ್ನ ಹಠವನ್ನು ಕೈ ಬಿಟ್ಟಿದ್ದು, ಭಾರತ ರಷ್ಯಾದಿಂದ ಎಸ್-400 ಕೊಳ್ಳುವ ಹಾದಿಯನ್ನು ಸುಗಮಗೊಳಿಸಿದೆ. ಆದರೆ, ಇತ್ತೀಚೆಗೆ ಬಂದಿರುವ ಸುದ್ದಿಗಳ ಪ್ರಕಾರ, ಭಾರತಕ್ಕೆ ಕೊಟ್ಟಿರುವ ಈ ಒಪ್ಪಿಗೆಯ ಹಿಂದೆ ಅಮೆರಿಕದ ಇನ್ನೊಂದು ದಾಳವಿತ್ತೆಂದು ಬಯಲಾಗಿದೆ. ಭಾರತ ಈಗ ತನ್ನ ರಾಜಧಾನಿಯನ್ನು ಕ್ಷಿಪಣಿ ದಾಳಿಯಿಂದ ರಕ್ಷಿಸಿಕೊಳ್ಳಲು ಅಮೆರಿಕಾದ ಬಳಿ ಸಿಗುವ ಮತ್ತೂಂದು ಕ್ಷಿಪಣಿ (ನಾಸಾಮ್ಸ… -2) ವ್ಯವಸ್ಥೆಯನ್ನು ಖರೀದಿಸಲು ಮುಂದಾಗಲಿದೆ ಎಂದು ತಿಳಿದುಬಂದಿದೆ. ಅಂದರೆ, ನೀವು ಬೇಕಾದರೆ ರಷ್ಯಾದಿಂದ ನಿಮಗೆ ಬೇಕಾದ ಕ್ಷಿಪಣಿಯನ್ನು ಕೊಂಡು ಕೊಳ್ಳಬಹುದು ಆದರೆ ನಮ್ಮ ಸಂಬಂಧ ಉತ್ತಮವಾಗಿರಬೇಕೆಂದರೆ ನಮ್ಮಲ್ಲಿ ಸಿಗುವ ಮತ್ತೂಂದು ಕ್ಷಿಪಣಿ ವ್ಯವಸ್ಥೆಯನ್ನೂ ನೀವು ಪರಿಶೀಲಿಸಬೇಕು ಎನ್ನುವ ಅಮೆರಿಕದ ಹಿಂಬಾಗಿಲ ಕಸರತ್ತು ಕಿರಿಕಿರಿ ಉಂಟುಮಾಡುವಂಥದ್ದು.
ಇದೆಲ್ಲದರಿಂದ ಸ್ಪಷ್ಟವಾಗುವ ವಿಚಾರವೆಂದರೆ, ಟ್ರಂಪ್ ಅಮೆರಿಕ ಭಾರತ ದೇಶಗಳ ಸಂಬಂಧವನ್ನೇ ಪಣಕ್ಕಿಡಲು ಎಳ್ಳಷ್ಟೂ ಯೋಚಿಸುವುದಿಲ್ಲ ಎನ್ನುವುದು. ದೀರ್ಘಕಾಲದಿಂದ ಬೆಳೆದು ಬಂದಿರುವ, ಸುಂದರ ಹೂವಿನಂತೆ ಅರಳುತ್ತಿರುವ ಸಂಬಂಧವನ್ನು ಸಂದರ್ಭಕ್ಕೆ ತಕ್ಕಂತೆ ಕಿವುಚಿ ಹಾಕುವುದಕ್ಕೂ ಹೇಸುವುದಿಲ್ಲ ಎನ್ನುವುದನ್ನು ಟ್ರಂಪ್ ಸಾಬೀತು ಪಡಿಸಿ¨ªಾರೆ. ಭಾರತ ಇಂತಹ ಕುಚೇಷ್ಟೆಗಳಿಂದ ದೂರ ಉಳಿಯಬೇಕಾಗಿದೆ. ಅಮೆರಿಕ ಎಷ್ಟೇ ಒತ್ತಡ ಹೇರಿದರೂ ಭಾರತ ತನ್ನ ಒಳಿತಿಗೆ ಸ್ವತಂತ್ರ ನಿರ್ಧಾರಗಳನ್ನು ಮುಂದೆಯೂ ತೆಗೆದುಕೊಳ್ಳುತ್ತದೆ ಎನ್ನುವುದನ್ನು ಟ್ರಂಪ್‌ಗೆ ಮನದಟ್ಟು ಮಾಡಿಕೊಡುವ ಅವಶ್ಯಕತೆ ಇದೆ. ಟ್ರಂಪ್ ಕನಿಷ್ಠ 2ವರ್ಷವಾದರೂ ಅಧ್ಯಕ್ಷರಾಗಿರುತ್ತಾರೆ. ಮರುಚುನಾಯಿತರಾದರೆ ಇನ್ನೂ 4 ವರ್ಷ ಹೆಚ್ಚು. ಒಂದು ಬಾರಿ ಅವರು ಹೇಳಿದ್ದಕ್ಕೆಲ್ಲ ತಲೆದೂಗುತ್ತಾರೆ ಎಂದು ತಿಳಿದುಬಂದರೆ ಟ್ರಂಪ್ ಇನ್ನೂ 6 ವರ್ಷ ನಮ್ಮ ಮೇಲೆ ಹೀಗೆ ಹೊಸ ಹೊಸ ಷರತ್ತುಗಳನ್ನು ಹಾಕುತ್ತಲೇ ಹೋಗಬಹುದು. ಇಂತಹ ದುಸ್ಸಾಹಸವನ್ನು ಆರಂಭದಲ್ಲೇ ಚಿವುಟಿ ಹಾಕಿದರೆ ಭಾರತಕ್ಕೆ ಒಳಿತು.
ಕಿಶೋರ್ ನಾರಾಯಣ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
J-K: ಭೀಕರ ಅಪಘಾ*ತದಲ್ಲಿ SUV ಚಲಾಯಿಸುತ್ತಿದ್ದ 17 ರ ಹುಡುಗರಿಬ್ಬರು ಮೃ*ತ್ಯು
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್
Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ
Manipal KMC Hospital: ಮಲ್ಪೆ ಬೀಚ್‌ನಲ್ಲಿ ಮಧುಮೇಹ ಜಾಗೃತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.