ಅಭಿಮತ: ಚೀನಕ್ಕೆ ಸರಿಯಾಗಿಯೇ ಉತ್ತರಿಸುತ್ತಿದೆ ಭಾರತ!
Team Udayavani, Sep 9, 2020, 7:02 AM IST
ನಾವು ಅರ್ಥಮಾಡಿಕೊಳ್ಳಬೇಕಿರುವುದೆಂದರೆ, ಚೀನಿ ಆಡಳಿತ ಪಿಎಲ್‌ಎ ಸೈನಿಕರನ್ನು ಮನುಷ್ಯರಂತೆ ನೋಡುವುದೇ ಇಲ್ಲ. ಅವರೆಲ್ಲರೂ ಅದಕ್ಕೆ ತನ್ನ ವಿಸ್ತರಣಾವಾದಿ ಉದ್ದೇಶಗಳನ್ನು ಈಡೇರಿಸಿಕೊಳ್ಳಲು ಬಳಕೆಯಾಗುವ ಮತ್ತೂಂದು ಶಸ್ತ್ರಾಸ್ತ್ರವಷ್ಟೆ! ಒಂದು ಅಸ್ತ್ರದ ಕೆಲಸ ಮುಗಿಯಿತು ಎಂದರೆ, ಇನ್ನೊಂದರ ಬಳಕೆ! ಒಂದು ದೇಶದ ನೈತಿಕ ಅಧಃಪತನದ ಪ್ರಮುಖ ಲಕ್ಷಣವಿದು.
ಭಾರತೀಯ ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ, ರಾಜಕೀಯ ವಲಯದಲ್ಲಿ, ರಕ್ಷಣಾ ಪರಿಣತರಿಂದ ಭಾರತ-ಚೀನ ಗಡಿ ಬಿಕ್ಕಟ್ಟಿನ ವಿಚಾರದಲ್ಲಿ ಚರ್ಚೆಗಳು ನಡೆದೇ ಇವೆ. ನಾನು ಮಿಲಿಟರಿಯಲ್ಲಿದ್ದವನು, ಲಡಾಖ್‌ನಲ್ಲಿ ಕೆಲವು ಸಮಯ ಸೇವೆ ಸಲ್ಲಿಸಿಯೂ ಅನುಭವವಿದೆ. ವಾಸ್ತವಿಕ ಗಡಿ ನಿಯಂತ್ರಣ ರೇಖೆ ದಾಟಿ ಬರಲು ಚೀನಿ ಸೇನೆ ನಿರಂತರವಾಗಿ ಹೇಗೆಲ್ಲ ಪ್ರಯತ್ನಿಸುತ್ತಿರುತ್ತದೆ ಎನ್ನುವುದನ್ನು ನಾನು ಚೆನ್ನಾಗಿ ಬಲ್ಲೆ. 3,488 ಕಿಲೋಮೀಟರ್ ಉದ್ದದ ವಾಸ್ತವಿಕ ಗಡಿ ನಿಯಂತ್ರಣ ರೇಖೆಯಲ್ಲಿ ನಿತ್ಯ ಒಂದಲ್ಲ ಒಂದು ಕಡೆ ಚೀನಿ ಸೈನಿಕರ ಸಂಚು ಪತ್ತೆಯಾಗುತ್ತಲೇ ಇರುತ್ತದೆ. ನಮ್ಮ ಗಸ್ತುಪಡೆಗಳು ಇದನ್ನೆಲ್ಲ ತ್ವರಿತವಾಗಿ ಪತ್ತೆಹಚ್ಚಿ ಚೀನಿಯರು ಹಿಂದೆ ಸರಿಯುವಂತೆ ಮಾಡುತ್ತಾರೆ.
ಗಡಿ ಭಾಗದಲ್ಲಿ ಕೆಲವು ತಿಂಗಳಿಂದ ಚೀನ ಭಾರತದ ನಡುವೆ ಸೃಷ್ಟಿಯಾಗಿರುವ ಬಿಕ್ಕಟ್ಟನ್ನು ನಾವೆಲ್ಲರೂ ಗಮನಿಸುತ್ತಲೇ ಇದ್ದೇವೆ. ಈಗ ಚೀನದ ಪೀಪಲ್ಸ್ ರಿಪಬ್ಲಿಕ್ ಆರ್ಮಿ, “ಭಾರತೀಯ ಯೋಧರೇ ಅಕ್ರಮವಾಗಿ ವಾಸ್ತವಿಕ ಗಡಿ ನಿಯಂತ್ರಣ ರೇಖೆಯನ್ನು ದಾಟಿ, ಗಾಳಿಯಲ್ಲಿ ಗುಂಡುಹಾರಿಸಿ ಚೀನಿ ಗಸ್ತುಪಡೆಗೆ ಬೆದರಿಕೆಯೊಡ್ಡಲು ಪ್ರಯತ್ನಿಸಿದ್ದಾರೆ” ಎಂದು ಆಪಾದಿಸುತ್ತಿದೆ! ಆದರೆ ಭಾರತೀಯ ಸೇನೆ ಈ ಆಪಾದನೆಯನ್ನು ಅಲ್ಲಗಳೆದಿದ್ದು, ಚೀನಿ ಸೇನೆಯೇ ಗುಂಡು ಹಾರಿಸಿರುವುದು ಎಂದು ಹೇಳಿದೆ.
ಇಲ್ಲಿಯವರೆಗಿನ ಅನುಭವದ ಆಧಾರದಲ್ಲಿ ಒಂದು ವಿಷಯವನ್ನು ಮಾತ್ರ ನಾನು ಸ್ಪಷ್ಟವಾಗಿ ಹೇಳಬಲ್ಲೆ. ಚೀನಿ ಆಡಳಿತದಂಥ ಸಮಯ ಸಾಧಕ, ಸುಳ್ಳುಬುರುಕ ವ್ಯವಸ್ಥೆ ಬೇರೆಲ್ಲೂ ಇಲ್ಲ. ತಮ್ಮ ಉದ್ದೇಶ ಸಾಧನೆಗಾಗಿ ಚೀನಿ ಸೇನೆ ಹಾಗೂ ಅಲ್ಲಿನ ಆಡಳಿತ ನಿರಂತರವಾಗಿ ಕಟ್ಟಿಕೊಂಡು ಬಂದ ಸುಳ್ಳಿನ ಕೋಟೆ ಎಷ್ಟು ದೊಡ್ಡದಾಗಿಬಿಟ್ಟಿದೆಯೆಂದರೆ, ಅದರಾಚೆಗಿನ ಸತ್ಯ ಚೀನಿ ನಾಗರಿಕರಿಗೆ ತಿಳಿಯುವುದೇ ಇಲ್ಲ.
ನಮ್ಮಲ್ಲೋ ಪರೋಕ್ಷವಾಗಿ ಭಾರತೀಯ ಸೇನೆಯನ್ನೇ ಪ್ರಶ್ನಿಸುವಂಥ ಚರ್ಚೆಗಳು ನಡೆಯುತ್ತವೆ! ಕೇಂದ್ರ ಸರಕಾರ ಎದುರಿಡುವ ವರದಿಗಳಿಗೆ ಕೌಂಟರ್ ನರೇಟಿವ್ ಅನ್ನು ಎದುರಾಳಿ ಪಕ್ಷದ ರಾಜಕಾರಣಿಗಳು ಸೃಷ್ಟಿಸುತ್ತಾರೆ. ಸೈನಿಕರೊಬ್ಬರು ಹೋರಾಟದಲ್ಲಿ ಮಡಿದರೆ ಇಡೀ ದೇಶವೇ ಈ ವಿಚಾರದಲ್ಲಿ ಆಕ್ರೋಶಗೊಳ್ಳುತ್ತದೆ. ಅಂದರೆ ಭಾರತದಲ್ಲಿ ಈ ವಿಚಾರದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ, ಮುಕ್ತ ಚರ್ಚೆಗೆ ಅವಕಾಶವಿದೆ.
ಆದರೆ, ಅತ್ತ ಚೀನಿ ಆಡಳಿತವನ್ನು, ಅಲ್ಲಿನ ರಕ್ಷಣಾ ಇಲಾಖೆಯನ್ನು ಪ್ರಶ್ನಿಸುವವರೇ ಇಲ್ಲ. ಕೆಲವು ತಿಂಗಳುಗಳ ಹಿಂದೆ ಚೀನ ಮತ್ತು ಭಾರತೀಯ ಸೈನಿಕರ ನಡುವೆ ಘರ್ಷಣೆಯಾಗಿ(ಚೀನಿಯರ ಕುತಂತ್ರದಿಂದ) 20 ಭಾರತೀಯ ಯೋಧರು ಹುತಾತ್ಮರಾದಾಗ ಈ ವಿಚಾರದಲ್ಲಿ ದೇಶಕ್ಕೆ ಆದ ನೋವು ಅಷ್ಟಿಷ್ಟಲ್ಲ. ವೀರಮರಣವಪ್ಪಿದ ಯೋಧರಿಗೆ ಸೇನೆಯು ಸಕಲ ಗೌರವಗಳೊಂದಿಗೆ ಅಂತಿಮ ನಮನ ಸಲ್ಲಿಸಿತು.
ಮಾಧ್ಯಮಗಳು ಆ ಸೈನಿಕರ ಕುಟುಂಬದವರನ್ನು ಮಾತನಾಡಿಸಿ, ಅವರಿಗೆ ಸಾಂತ್ವನ ಹೇಳಲು ಪ್ರಯತ್ನಿಸಿದವು. ಆದರೆ ಇನ್ನೊಂದಡೆ ಚೀನ ಏನು ಮಾಡಿತೋ ನೋಡಿ? ಆ ಘರ್ಷಣೆಯಲ್ಲಿ ಚೀನದ 45ಕ್ಕೂ ಅಧಿಕ ಸೈನಿಕರು ಮೃತಪಟ್ಟರು ಎಂಬುದು ಸ್ಪಷ್ಟವಾಗಿದ್ದರೂ, ಈ ವಿಚಾರದಲ್ಲಿ ಚೀನಿ ಆಡಳಿತವಾಗಲಿ, ಮಾಧ್ಯಮವಾಗಲಿ ಮಾತನಾಡಲೇ ಇಲ್ಲ. ಈ ಕಾರಣಕ್ಕಾಗಿಯೇ ಚೀನಿಯರಿಗೆ ತಮ್ಮ ಸೈನಿಕರ ಮರಣದ ಸುದ್ದಿ ತಲುಪುವುದೇ ಇಲ್ಲ! ಒಟ್ಟಿನಲ್ಲಿ ವಾಸ್ತವವಾಗಿ ಎಷ್ಟು ಪಿಎಲ್‌ಎ ಸೈನಿಕರು ಮೃತಪಟ್ಟರು ಎನ್ನುವ ವಿಷಯ ಇತಿಹಾಸದ ಪುಟಗಳಲ್ಲಿ ದಾಖಲಾಗದಂತೆ ಎಲ್ಲ ರೀತಿಯ ಎಚ್ಚರಿಕೆ ವಹಿಸುತ್ತದೆ ಚೀನಿ ಆಡಳಿತ.
ನಾವು ಅರ್ಥಮಾಡಿಕೊಳ್ಳಬೇಕಿರುವುದೆಂದರೆ, ಚೀನಿ ಆಡಳಿತ ಪಿಎಲ್‌ಎ ಸೈನಿಕರನ್ನು ಮನುಷ್ಯರಂತೆ ನೋಡುವುದೇ ಇಲ್ಲ. ಅವರೆಲ್ಲರೂ ಅದಕ್ಕೆ ತನ್ನ ವಿಸ್ತರಣಾವಾದಿ ಉದ್ದೇಶಗಳನ್ನು ಈಡೇರಿಸಿಕೊಳ್ಳಲು ಬಳಕೆಯಾಗುವ ಮತ್ತೂಂದು ಶಸ್ತ್ರಾಸ್ತ್ರಗಳಷ್ಟೆ! ಒಂದು ಅಸ್ತ್ರದ ಕೆಲಸ ಮುಗಿಯಿತು ಎಂದರೆ, ಇನ್ನೊಂದರ ಬಳಕೆ! ಒಂದು ದೇಶದ ನೈತಿಕ ಅಧಃಪತನದ ಪ್ರಮುಖ ಲಕ್ಷಣವಿದು.
ಮಾವೋ ಹಾದಿಯಲ್ಲಿ ಜಿನ್‌ಪಿಂಗ್
ಕ್ಸಿ ಜಿನ್‌ಪಿಂಗ್‌ರ ಇತ್ತೀಚಿನ ವರ್ಷಗಳ ನಡೆಗಳನ್ನು ಗಮನಿಸಿದಾಗ ಮಾವೋ ಜೆಡಾಂಗ್ ನೆನಪಾಗುತ್ತಾರೆ. ಮಾವೋ ಟಿಬೆಟ್ ಅನ್ನು ಚೀನದ ಅಂಗೈಯೆಂದು ಕರೆಯುತ್ತಿದ್ದರು. ಭೂತಾನ್, ನೇಪಾಲ ಮತ್ತು ಭಾರತದ ಮೂರು ಪ್ರದೇಶಗಳಾದ ಲಡಾಖ್, ಅರುಣಾಚಲ ಪ್ರದೇಶ ಹಾಗೂ ಸಿಕ್ಕಿಂ ಅನ್ನು ಅದರ ಐದು ಬೆರಳುಗಳು ಎನ್ನುತ್ತಿದ್ದರು. ಈ ಐದು ಬೆರಳುಗಳನ್ನು ಮುಕ್ತಗೊಳಿಸಬೇಕೆಂದು ಬಹುತೇಕ ಭಾಷಣಗಳಲ್ಲಿ ಹೇಳುತ್ತಲೇ ಇದ್ದರು! 1962ರ ಯುದ್ಧದಲ್ಲಿ ಚೀನ ಅಕ್ಸಾಯ್ ಚಿನ್ ಭಾಗವನ್ನು ಆಕ್ರಮಿಸಿಕೊಂಡಿದ್ದರ ಹಿಂದೆ ಅನೇಕ ವರ್ಷಗಳ ತಂತ್ರ-ಯೋಜನೆಗಳಿದ್ದವು. ಅದೇನೂ ಏಕಾಏಕಿ ಆಗ್ಗಿದ್ದಂತೂ ಖಂಡಿತ ಅಲ್ಲ.
ಜಿನ್‌ಪಿಂಗ್ ಆಡಳಿತವೂ ವರ್ಷಗಳಿಂದ ತನ್ನ ದೇಶದ ವಿಸ್ತರಣಾಕಾಂಕ್ಷೆಗೆ ಪೂರಕವಾಗುವಂಥ ತಂತ್ರಗಳನ್ನು ರಚಿಸುತ್ತಲೇ ಇದೆ. ಈಗದು ಭೂತಾನ್‌ನ 11 ಪ್ರತಿಶತದಷ್ಟು ಭಾಗವನ್ನು ತನ್ನದೆಂದು ವಾದಿಸಲಾರಂಭಿಸಿದೆ. ಆ ಭೂಭಾಗವು ಚೀನದ ವಶವಾಗಬೇಕೆಂದರೆ, ಅರುಣಾಚಲ ಮೂಲಕ ಹಾದು ಹೋಗುವುದು ಅಗತ್ಯ. ಈ ಕಾರಣಕ್ಕಾಗಿಯೇ, ಭೂತಾನ ಮತ್ತು ಅರುಣಾಚಲ ಪ್ರದೇಶದ ವಿಚಾರದಲ್ಲಿ ಮುಂದಿನ ದಿನಗಳಲ್ಲೂ ಚೀನದ ಕುತಂತ್ರಗಳು ಮುಂದುವರಿಯಲಿವೆ.
ಇತ್ತ ಭಾರತವೆಂದಷ್ಟೇ ಅಲ್ಲ, ಅತ್ತ ದಕ್ಷಿಣ ಚೀನ ಸಮುದ್ರದಲ್ಲೂ ಚೀನ, ಜಪಾನಿಯರ ನಿಯಂತ್ರಣದಲ್ಲಿರುವ ಸೆಂಕಾಕು ದ್ವೀಪ ಮತ್ತು ಏರ್‌ಸ್ಪೇಸ್‌ನಲ್ಲಿ ತನ್ನ ಉಪಟಳವನ್ನು ಹೆಚ್ಚಿಸಿಬಿಟ್ಟಿದೆ. ಜಪಾನ್ ಅನ್ನು ಪದೇಪದೆ ಕೆಣಕುವ ಮೂಲಕ ತಾನು ದಕ್ಷಿಣ ಚೀನ ಸಮುದ್ರದಲ್ಲಿ ಎಂಥ ಉದ್ಧಟತನಕ್ಕೂ ಹಿಂಜರಿಯುವುದಿಲ್ಲ ಎಂದು ಅಮೆರಿಕಕ್ಕೆ ಪರೋಕ್ಷವಾಗಿ ಸಂದೇಶ ಕಳುಹಿಸುತ್ತಿದೆ ಜಿನ್‌ಪಿಂಗ್ ಆಡಳಿತ.
ಈ ಹಿನ್ನೆಲೆಯಲ್ಲಿ ಗಮನಿಸಿದಾಗ ಇತ್ತೀಚಿನ ಕೆಲವು ಸಮಯದಿಂದ ಭಾರತದ ವಿಷಯದಲ್ಲಿ ಚೀನದ ನಡೆ ಬಹಳವೇ ಆಕ್ರಮಣಕಾರಿಯಾಗಿ ಬದಲಾಗುತ್ತಿದೆ ಎಂದು ಸ್ಪಷ್ಟವಾಗುತ್ತದೆ. ಗಮನಾರ್ಹ ಸಂಗತಿಯೆಂದರೆ, ಭಾರತದಿಂದ ಈ ಪ್ರಮಾಣದ ಪ್ರಬಲ ಪ್ರತಿರೋಧವನ್ನು, ಪ್ರತಿತಂತ್ರಗಳನ್ನು ಚೀನಿ ಆಡಳಿತ ನಿರೀಕ್ಷಿಸಿಯೇ ಇರಲಿಲ್ಲ. ಗಡಿ ಭಾಗದಲ್ಲಿ ಅತ್ಯಂತ ವೇಗವಾಗಿ ರಸ್ತೆಗಳನ್ನು ನಿರ್ಮಾಣಮಾಡುವ ಮೂಲಕ ಭಾರತದ ರಕ್ಷಣಾ ಇಲಾಖೆಯ ಬಾರ್ಡರ್ ರೋಡ್ ಆರ್ಗನೈಸೇಷನ್ ಚೀನಿ ಸೇನೆಯ ತಂತ್ರಗಳಿಗೆಲ್ಲ ಪ್ರತಿತಂತ್ರ ರಚಿಸಿಬಿಟ್ಟಿದೆ. ಭಾರತ ಚೀನಕ್ಕೆ ಎದುರೇಟು ನೀಡಲು ಟಿಬೆಟ್ ಮೂಲದವರಿಂದ ರಚಿಸಲ್ಪಟ್ಟ ಸ್ಪೆಷಲ್ ಫ್ರಂಟಿಯರ್ ಫೋರ್ಸ್ ಎಂಬ ಗೌಪ್ಯ ದಳವನ್ನು ಬಳಸಿಕೊಂಡಿರುವುದು ಚೀನಿ ಆಡಳಿತಕ್ಕೆ ಬಹು ಆತಂಕದ ಸಂಗತಿಯೇ ಸರಿ. ಲಡಾಖ್‌ನ ದಕ್ಷಿಣ ಪಾಂಗಾಂಗ್‌ನಲ್ಲಿ ಸ್ಫೋಟವೊಂದರಲ್ಲಿ ಹುತಾತ್ಮರಾದ ಎಸ್‌ಎಸ್‌ಎಫ್ ಯೋಧರಿಗೆ ಭಾರತೀಯ ಸೇನೆ ಸಲ್ಲಿಸಿದ ಅಭೂತಪೂರ್ವ ಅಂತಿಮ ನಮನ ಚೀನಿ ಆಡಳಿತದ ಎದೆಯಲ್ಲಿ ನಡುಕ ಹುಟ್ಟಿಸಿರಲಿಕ್ಕೂ ಸಾಕು.
ಒಟ್ಟಿನಲ್ಲಿ ಭಾರತ ಚೀನದ ವಿಚಾರದಲ್ಲಿ ಸರಿಯಾದ ದಿಕ್ಕಿನಲ್ಲಿಯೇ ಹೆಜ್ಜೆ ಇಡುತ್ತಿದೆ. ಗಡಿ ಭಾಗದಲ್ಲಿ ನಮ್ಮ ಉಪಸ್ಥಿತಿಯನ್ನು ಮತ್ತಷ್ಟು ಬಲಿಷ್ಠಗೊಳಿಸುವುದು ಮುಂದಿನ ಹೆಜ್ಜೆಯಾಗಲಿ.
– ಮೇಜರ್ ಅಂಕಿತ್ ಗೌರ್(ನಿವೃತ್ತ)
ಕೃಪೆ: ಅಮರ್ ಉಜಾಲಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು
PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.