ಭಾರತೀಯರ ಆರೋಗ್ಯಕ್ಕೆ ಬೇಕು, ಬದಲಾವಣೆಯ ಬೆಳಕು
Team Udayavani, Sep 22, 2017, 10:37 AM IST
ಸರಕಾರವು ಈಗ ಆರೋಗ್ಯವಲಯಕ್ಕೆ ನೀಡುವ ಅತ್ಯಲ್ಪ ಅನುದಾನ ಮತ್ತು ಆರೋಗ್ಯ ವಿಮಾ ಸೌಲಭ್ಯದ ಕೊರತೆಯಿಂದಾಗಿ ಭಾರತದಲ್ಲಿ ಪ್ರತಿವರ್ಷ ಶೇ. 3ರಷ್ಟು ಜನರು ಸಾಲದ ಸುಳಿಗೆ ಸಿಲುಕುತ್ತಿದ್ದಾರೆ. ಇದರಿಂದ ಅವರಿಗೆ ಹೊರಬರಲು ಆಗುತ್ತಿಲ್ಲ. ಈ ಪರಿಸ್ಥಿತಿಯನ್ನು ಬದಲಿಸಬೇಕೆಂದರೆ ಸರಕಾರ ಸಾರ್ವಜನಿಕ ಆರೋಗ್ಯ ವಲಯವನ್ನು ಸುಧಾರಿಸಲು ಕಾಲ ಮಿತಿ ಹಾಕಿಕೊಳ್ಳಬೇಕು.
ಭಾರತದ ಒಟ್ಟು ಜನಸಂಖ್ಯೆಯ ಮೂರನೆಯ ಒಂದರಷ್ಟು ಮಂದಿ 18 ವರ್ಷ ವಯಸ್ಸಿನೊಳಗಿನವರು. ಆದರೂ ಭಾರತದ ಮಕ್ಕಳ ಮೇಲೆ ಅದರಲ್ಲೂ ವಿಶೇಷವಾಗಿ ಆರೋಗ್ಯ ಮತ್ತು ಶಿಕ್ಷಣದ ಮೇಲೆ 2015-16ಸಾಲಿನ ಬಜೆಟ್‌ನಲ್ಲಿ ಒಟ್ಟು ಮೀಸಲಿಟ್ಟರುವ ಹಣ ಶೇ.6ಕ್ಕಿಂತ ಕಡಿಮೆ! ಅತಿಹೆಚ್ಚು ಬಾಲ ಕಾರ್ಮಿಕರು ಮತ್ತು ಲೈಂಗಿಕ ದೌರ್ಜನ್ಯಕ್ಕೊಳಗಾದ ಮಕ್ಕಳನ್ನು ಹೊಂದಿರುವ ದೇಶವಿದು. ಎಚ್‌ಐವಿ ಸೋಂಕು ತಗುಲಿದ ಮಕ್ಕಳ ಸಂಖ್ಯೆಯಲ್ಲಿ ಜಗತ್ತಿನಲ್ಲಿ 2ನೆಯ ಸ್ಥಾನದಲ್ಲಿ ನಾವಿದ್ದೇವೆ. ವಿಚಿತ್ರವೆಂದರೆ ವಾಸ್ತವ ಹೀಗಿರುವಾಗ ಮಕ್ಕಳ ಆರೋಗ್ಯ ರಕ್ಷಣೆಗಾಗಿ ಭಾರತ ಸರಕಾರ ಬಜೆಟ್‌ನಲ್ಲಿ ಮೀಸಲಿಟ್ಟಿರುವ ಹಣ ಕೇವಲ 0.043ರಷ್ಟು ಮಾತ್ರ! ಸರಕಾರವು ದೇಶದ ಸಾರ್ವಜನಿಕ ಸಂಸ್ಥೆಗಳನ್ನು ಯಥಾಸ್ಥಿತಿಯಲ್ಲೇ ಮುಂದುವರಿಸಿಕೊಂಡು ಹೋಗುತ್ತಿದೆ ಎನ್ನುವುದು ಇದರಿಂದ ಗೋಚರಿಸುತ್ತದೆ. ದೇಶದ ಸಾರ್ವಜನಿಕ ಆರೋಗ್ಯ ಹಾಗೂ ಮಕ್ಕಳ ರಕ್ಷಣೆಯ ಹಾದಿಯಲ್ಲಿ ಅತಿ ದೊಡ್ಡ ಹೆಜ್ಜೆಯಾಗಲೆಂದು ರೂಪಿಸಲಾದ “ಸಮಗ್ರ ಆರೋಗ್ಯ ರಕ್ಷಣಾ ಯೋಜನೆ’ಗೆ 11ನೆಯ ಪಂಚವಾರ್ಷಿಕ ಯೋಜನೆಯ ಆರಂಭದಲ್ಲಿ ಯೋಜನಾ ಆಯೋಗ ತಾತ್ವಿಕ ಒಪ್ಪಿಗೆ ನೀಡಿತ್ತು. ಆದರೆ ಅದು ಜಾರಿಯಾಗಿ 6 ವರ್ಷಗಳೇ ಗತಿಸಿದರೂ ಅದರ ಕಾಯಕಲ್ಪ ಮಾತ್ರ ಕಡತ ಬಿಟ್ಟು ಹೊರಬರುತ್ತಿಲ್ಲ.
ಅತ್ಯುನ್ನತಮಟ್ಟದ ಆರೋಗ್ಯ ಸೇವೆ ಪ್ರತಿಯೊಬ್ಬ ಮನುಷ್ಯನ ಮೂಲಭೂತ ಹಕ್ಕು. ಈ ನಿಟ್ಟಿನಲ್ಲಿ ದೇಶದ ಒಟ್ಟು 130 ಕೋಟಿ ಜನರಿಗೆ ಉತ್ತಮ ಆರೋಗ್ಯ ಸೌಲಭ್ಯ ದೊರಕಿಸಿಕೊಡುವುದಕ್ಕೆ ಈ ವಲಯ ಪಣತೊಡಬೇಕಾಗಿದೆ. ಗುಣಮಟ್ಟದ ಸೇವೆ ಎಂಬುದು ನೀತಿ-ನಿರೂಪಕರಿಗೆ ಸ್ವಾತಂತ್ರಾ ನಂತರದಲ್ಲಿ ದೊಡ್ಡ ಸವಾಲುಗಳನ್ನೊಡ್ಡಿದೆ. ನಮ್ಮಲ್ಲಿನ್ನೂ ಪ್ರತಿ 1,750 ಜನರಿಗೆ ಒಬ್ಬ ವೈದ್ಯರಿದ್ದಾರೆ! ವಿಶ್ವ ಆರೋಗ್ಯ ಸಂಸ್ಥೆ ಕನಿಷ್ಟ ಒಂದು ಸಾವಿರ ಜನರಿಗಾದರೂ ಒಬ್ಬ ವೈದ್ಯನಿರಬೇಕು ಎಂದು ಹೇಳಿದೆ. ಈ ವಲಯದ ಸುಧಾರಣೆಗೆ ಕೇಂದ್ರ ಸರಕಾರ ನೀಡುತ್ತಿರುವ ಅನುದಾನ ನಮ್ಮ ಒಟ್ಟು ಜಿಡಿಪಿಯ ಶೇ.1ಕ್ಕಿಂತ ಹೆಚ್ಚಿಲ್ಲ. ಮಾನವ ಸಂಪನ್ಮೂಲ ಹೆಚ್ಚಿರುವ ಈ ದೇಶದಲ್ಲಿ ಇದು ತುಂಬಾ ಅತಂಕಕಾರಿ. ಇದರ ನೇರ ಪರಿಣಾಮ ದೇಶದ ಒಟ್ಟು ಜನಸಂಖ್ಯೆಯಲ್ಲಿನ ಶೇ.3ರಷ್ಟು ಜನರ ಮೇಲೆ ಬೀಳುತ್ತಿದೆ. ವೈದ್ಯಕೀಯ ವೆಚ್ಚ ಭರಿಸಲಾರದೇ ಸಾಲದ ಸುಳಿಗೆ ಸಿಲುಕಿ ನಲುಗುತ್ತಿದ್ದಾರಿವರು.
2020ರ ವೇಳೆಗೆ ಈ ದೇಶದ ಜನರ ಆರೋಗ್ಯದ ಸ್ಥಿತಿಯನ್ನು ಅವಲೋಕಿಸುವುದಾದರೆ, ಉತ್ತಮ ಆರೋಗ್ಯಕ್ಕಾಗಿ ನಾವು ಏನೇನು ತಯಾರಿ ಮಾಡಿಕೊಳ್ಳಬೇಕು ಹಾಗೂ ಭವಿಷ್ಯದ ಆರೋಗ್ಯಕರ ಬದುಕಿಗೆ ನಮ್ಮ ಮಿತ ಆರ್ಥಿಕ ಸಂಪನ್ಮೂಲಗಳ ರೂಪುರೇಷೆಯನ್ನು ಹೇಗೆ ತಯಾರಿಸಿಕೊಳ್ಳಬೇಕೆಂಬುದನ್ನು ಈಗಲೇ ನಿರ್ಧರಿಸಿಕೊಳ್ಳಬೇಕಿದೆ. ಈ ಕಾರ್ಯ ಸಾಧ್ಯವಾಗಬೇಕಾದರೆ ಆರೋಗ್ಯ ವಲಯಕ್ಕೆ ಹೆಚ್ಚು ಒತ್ತನ್ನು ಕೊಡಬೇಕಾದ ಅನಿವಾರ್ಯತೆ ಹಿಂದೆಂದಿಗಿಂತಲೂ ಇಂದು ಹೆಚ್ಚು ಅವಶ್ಯಕವಾಗಿದೆ. ಸಾರ್ವಜನಿಕರ ಆರೋಗ್ಯಕ್ಕೆ ಭಾರತ ಸರಕಾರ ಖರ್ಚು ಮಾಡುತ್ತಿರುವುದು ಕೇವಲ ಶೇ.1.1ರಷ್ಟು ಮಾತ್ರ. ಪ್ರಪಂಚದ ಬೇರೆ ಬೇರೆ ದೇಶಗಳಿಗೆ ಹೋಲಿಸಿದರೆ ಇದು ತೃಣಮಾತ್ರ. ಚೀನಾ ತನ್ನ ಒಟ್ಟು ಆದಾಯದ ಶೇ. 2.9, ಬ್ರೆಜಿಲ್‌ನ ಶೇ. 4.1ನ್ನು ಈ ವಲಯಕ್ಕೆ ಮೀಸಲಿಟ್ಟಿರುವುದನ್ನು ಹೋಲಿಸಿಕೊಂಡರೆ ನಾವು ಮಾಡುವ ವೆಚ್ಚ ತುಂಬಾ ಕಡಿಮೆಯೆಂಬುದು ತಿಳಿಯುತ್ತದೆ. ಈ ದೇಶದಲ್ಲಿ ನಿಖರವಾಗಿ ಇಂತಿಷ್ಟೇ ಪ್ರಮಾಣದ ಹಣವನ್ನು ರಾಷ್ಟ್ರವಾಸಿಗಳ ಆರೋಗ್ಯಕ್ಕಾಗಿ ವ್ಯಯಿಸಲೇಬೇಕೆಂಬ ನಿಯಮಗಳಿಲ್ಲ. ಆದರೆ ಈಗ ಹಾಗೆ ಮಾಡುವುದು ಅಗತ್ಯವಾಗಿದೆ. ನಮ್ಮ ಆರ್ಥಿಕ ವ್ಯವಸ್ಥೆಯು ಕೊರತೆಯನ್ನೇ ಯಾವಾಗಲೂ ಎದುರಿಸುತ್ತಾ ಬಂದಿರುವುದರಿಂದ ಉತ್ತಮ ಆರೋಗ್ಯ ಯೋಜನೆಯನ್ನು ಸದ್ಯಕ್ಕೆ ಪರಿಣಾಮಕಾರಿಯಾಗಿ ಜಾರಿ ಮಾಡುವ ಸಾಧ್ಯತೆ ತುಂಬ ಕಡಿಮೆ ಎಂದೇ ಭಾವಿಸಬೇಕಾಗುತ್ತದೆ.
ಆದರೆ ಭಾರತದಲ್ಲಿ ನೈಸರ್ಗಿಕ ಸಂಪನ್ಮೂಲಗಳು ಯತೇತ್ಛವಾಗಿ ಲಭ್ಯವಿದ್ದರೂ ಸಹ ಅದರ ಪ್ರಾಮಾಣಿಕ ಬಳಕೆ ಮಾತ್ರ ವಿರಳ. ಯಾವುದೇ ದೇಶ ಆರ್ಥಿಕವಾಗಿ ಸಕ್ಷಮವಾಗಬೇಕೆಂದರೆ ಆ ದೇಶಕ್ಕೆ ನಿಸರ್ಗ ಕೊಡಮಾಡಿದ ಸಂಪನ್ಮೂಲಗಳನ್ನು ದೈನಂದಿನಲ್ಲಿ ಹೇಗೆ ಬಳಸಿಕೊಳ್ಳುತ್ತದೆ ಎಂಬುದರ ಮೇಲೆ ನಿರ್ಧರಿತವಾಗಿರುತ್ತದೆ.
ಇನ್ನು ಭಾರತದ ವಾಸ್ತವದ ಸ್ಥಿತಿಯನ್ನು ಕುರಿತು ಆಲೋಚಿಸುವುದಾದರೆ ಇದು ಬಹಳ ಸಂಕೀರ್ಣವಾದ ದೇಶ. ಹಾಗಾಗಿ ನಮ್ಮ ವ್ಯವಸ್ಥೆಯಲ್ಲಿ ಈಗಾಗಲೇ ಯಾವುದೇ ದೇಶದಲ್ಲಿ ಯಶಸ್ವಿಯಾದ ಆರೋಗ್ಯ ಯೋಜನೆಗಳನ್ನು ಯಥಾವತ್ ಜಾರಿ ಮಾಡಲು ಹೊರಟರೆ ಅದು ಯಾವ ಕಾಲಕ್ಕೂ ಕಾರ್ಯಸಾಧುವಾಗದು. ಆದ್ದರಿಂದ ಇಲ್ಲಿಯ ಪರಿಸರ, ವೈವಿಧ್ಯತೆಗೆ ಅನುಗುಣವಾಗಿ ಉತ್ತಮ ಆರೋಗ್ಯ ವ್ಯವಸ್ಥೆಯ ಹೊಸ ಮಾದರಿಗಳನ್ನು ರೂಪಿಸುವ ಅಗತ್ಯತೆಯಿದೆ.
ವಿಸ್ತೃತವಾದ ಗ್ರಾಮೀಣ ಪ್ರದೇಶಗಳಲ್ಲಿ ಕಡಿಮೆ ವೈದ್ಯರು ಇಲ್ಲವೇ ಕೆಲವೊಮ್ಮೆ ವೈದ್ಯರೇ ಇಲ್ಲದೇ, ಉತ್ತಮ ಸೇವೆ ಮರೀಚಿಕೆಯಾಗಿರುವಾಗ ಅತ್ಯುತ್ತಮ ದರ್ಜೆಯ ಆರೋಗ್ಯ ಸೇವೆ ನೀಡಲು ಹೇಗೆ ಸಾಧ್ಯವೆಂಬುದನ್ನು ಪ್ರಶ್ನಿಸಿಕೊಳ್ಳುವ ಕಾಲ ಇದಾಗಿದೆ. ಇದರ ಪರಿಣಾಮವಾಗಿ ಈಗಾಗಲೇ ನಮ್ಮಲ್ಲಿನ ಮಧ್ಯಮ ವರ್ಗ, ಸೇರಿದಂತೆ ಬಹುತೇಕರು ಖಾಸಗಿ ವೈದ್ಯ ಸೇವೆಯನ್ನೇ ನೆಚ್ಚಿಕೊಂಡಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಆಡಳಿತಾರೂಢ ಸರಕಾರಗಳು ಖಾಸಗಿ ವೈದ್ಯರ ಜೊತೆಗೂಡಿ ದುಬಾರಿಯಾದ ಈ ಸೇವೆಯನ್ನು ಜನಸಾಮಾನ್ಯರಿಗೆ ತಲುಪಿಸಲು ಪ್ರಯತ್ನವೇಕೆ ಮಾಡಬಾರದು ಎಂಬುದೇ ಯಕ್ಷಪ್ರಶ್ನೆ.
ಭಾರತವು ಇಂಥ ಹತ್ತು ಹಲವಾರು ಸವಾಲುಗಳನ್ನು ಜಾಗತೀಕರಣದ ನಂತರದಲ್ಲಿ ಮತ್ತಷ್ಟು ಮಗದಷ್ಟು ಎದುರಿಸುತ್ತಿದೆ. ಹಾಗೆಂದು ಈ ಸವಾಲುಗಳನ್ನು ಎದುರಿಸುವ ಶಕ್ತಿ ಒಂದು ದೇಶವಾಗಿ ಭಾರತಕ್ಕೆ ಇಲ್ಲವೆಂದಲ್ಲ. ಆದರೆ ಸರಕಾರಗಳು ಬದ್ಧತೆಯನ್ನು ಪ್ರದರ್ಶಿಸಬೇಕಿದೆ ಅಷ್ಟೇ. ದೇಶದಲ್ಲಿ ಈಗಾಗಲೇ ಜಾರಿಯಾದ ಕೆಲವು ಯೋಜನೆಗಳು ಉತ್ತಮ ಕಾರ್ಯರಂಭ ಮಾಡಿವೆ. ಉದಾಹರಣೆಗೆ, ಸ್ವತ್ಛತೆಯ ಪ್ರಚಾರಕ್ಕೆ ಸ್ವತ್ಛಭಾರತ ಆಂದೋಲನ. ಈ ಯೋಜನೆಯಿಂದ ಒಂದು ವರ್ಷದಲ್ಲಾದ ಸಾಧನೆ ಮಾತ್ರ ಅಪಾರ. ಅಂದರೆ ಸರಕಾರ ಜಾರಿ ಮಾಡುವ ಯಾವುದೇ ಯೋಜನೆ ಘೋಷಣೆ ಮಾತ್ರವಾಗಿ ಉಳಿಯಬಾರದು. ಬದಲಿಗೆ ಅವು ಪರಿಣಾಮಕಾರಿಯಾಗಿ ಕಾರ್ಯಗತವಾಗಲೇಬೇಕು.
ಇದೇನೇ ಇದ್ದರೂ 2014ರಿಂದೀಚಿಗೆ ಭಾರತ ಸರಕಾರ ಮಕ್ಕಳ ಬಗೆಗೆ ವಿಶೇಷ ಕಾಳಜಿ ವಹಿಸಿರುವುದನ್ನು ಒಪ್ಪಿಕೊಂಡು ಮೆಚ್ಚಲೇಬೇಕು. ಶಿಶು ಮರಣ ಪ್ರಮಾಣ ತಡೆಗಟ್ಟುವಲ್ಲಿ ಭಾರತದ ಆರೋಗ್ಯ ವ್ಯವಸ್ಥೆಯ ಪ್ರಯತ್ನ ಹೃದಯಸ್ಪರ್ಶಿಯಾಗಿದೆ. ಈ ಪ್ರಯತ್ನ ವೇಗ ಕಳೆದುಕೊಳ್ಳಬಾರದು. ಎಲ್ಲಕ್ಕಿಂತ ಮುಖ್ಯವಾಗಿ ದೇಶದ ಎಲ್ಲಾ ವರ್ಗದ ಜನರಿಗೆ ಆರೋಗ್ಯ, ಪೌಷ್ಟಿಕತೆ ಮತ್ತು ಶಿಕ್ಷಣ ಸಕ್ಷಮವಾಗಿ ದೊರೆಯುವಂತಾದರೆ, ಅದೇ ಹೊಸ ಸದೃಢ ಸಮಾಜದ ನಿರ್ಮಾಣಕ್ಕೆ ಅಡಿಗಲ್ಲಾಗುತ್ತದೆ. ಆ ಮೂಲಕ ಎಲ್ಲರ ಶಕ್ತಿ, ಸಾಮರ್ಥ್ಯ ದೇದೀಪ್ಯವಾಗಿ ಬೆಳಗಿ ಹೊಸ ಕ್ರಾಂತಿಯಾಗುತ್ತದೆ. ಹೀಗಾಗಬೇಕು ಎಂಬುದೇ ಭಾರತೀಯರ ಮನದಾಳದ ಆಶಯ.
ಕೊನೆಯದಾಗಿ, ಸರಕಾರವು ಈಗ ಆರೋಗ್ಯವಲಯಕ್ಕೆ ನೀಡುವ ಅತ್ಯಲ್ಪ ಅನುದಾನ ಮತ್ತು ಆರೋಗ್ಯ ವಿಮಾ ಸೌಲಭ್ಯದ ಕೊರತೆಯಿಂದಾಗಿ ಭಾರತದಲ್ಲಿ ಪ್ರತಿವರ್ಷ ಶೇ.3ರಷ್ಟು ಜನರು ಸಾಲದ ಸುಳಿಗೆ ಸಿಲುಕುತ್ತಿದ್ದಾರೆ. ಈ ಸುಳಿಯಿಂದ ಅವರಿಗೆ ಹೊರಬರಲಾಗುತ್ತಿಲ್ಲ. ಸದ್ಯದ ಈ ಪರಿಸ್ಥಿತಿಯನ್ನು ಬದಲಾವಣೆ ಮಾಡಬೇಕಾದರೆ ಸರಕಾರ ಸಾರ್ವಜನಿಕ ಆರೋಗ್ಯವನ್ನು ಸುಧಾರಿಸಲು ಒಂದು ಕಾಲ ಮಿತಿಯನ್ನು ಹಾಕಿಕೊಳ್ಳಬೇಕು. ಹೊಸ ಅಸ್ಪತ್ರೆಗಳನ್ನು ನಿರ್ಮಾಣ ಮಾಡಿ ಜನಸಾಮಾನ್ಯರ ಕೈಗೆಟಕುವ ದರದಲ್ಲಿ ಸೇವೆ ಒದಗಿಸಬೇಕು. ಈ ದೇಶದಲ್ಲಿ ಜಾರಿಯಲ್ಲಿರುವ ಆರೋಗ್ಯರಕ್ಷೆ ಕಾರ್ಯಕ್ರಮ ಯಥಾವತ್ತಾಗಿ ಜಾರಿಯಾಗಿ ಎಲ್ಲಾ ವರ್ಗಗಳಿಗೂ ಸಿಗುವಂತಾಗಬೇಕು ಹಾಗೂ ಹಾಲಿ ಇರುವ ಸಾರ್ವಜನಿಕ ಆರೋಗ್ಯ ಮೂಲ ಸೌಕರ್ಯಗಳಿಗೆ ಮರುಜೀವ ನೀಡಬೇಕು. ಇದರ ಜೊತೆಗೆ ಮಾಹಿತಿ ಮತ್ತು ತಂತ್ರಜಾnನ ಆಧಾರಿತ ಟೆಲಿಮೆಡಿಸನ್ ವ್ಯವಸ್ಥೆಯನ್ನು ಕಲ್ಪಿಸಬೇಕು. ಭವಿಷ್ಯದ ಆರೋಗ್ಯಕ್ಕಾಗಿ ಸರಕಾರವು ಮಾಡುತ್ತಿರುವ ವೆಚ್ಚ ಅತಿ ಕಡಿಮೆಯಿರುವುದರಿಂದ ಅದನ್ನು ಜಿಡಿಪಿಯ ಶೇ.2.5ಕ್ಕೆ ಏರಿಸಬೇಕು. ಇದರೊಂದಿಗೆ ಸರಕಾರವು ಖಾಸಗಿ ಸಹಭಾಗಿತ್ವದೊಂದಿಗೆ ಹೊಸ ಮಾದರಿಗಳನ್ನು ಅಳವಡಿಸಿಕೊಂಡು ಮುನ್ನಡೆಯಬೇಕು . ಸಾರ್ವಜನಿಕ ಆರೋಗ್ಯ ಹಿತಸಾಧನೆಗಾಗಿ ಕೆಲವೊಂದು ಅಗತ್ಯ ನಿರ್ಬಂಧಗಳನ್ನು ಪಾಲಿಸಲೇಬೇಕಾದ ಅನಿವಾರ್ಯತೆಯಿದೆ. ಇದು ಕಾರ್ಯವ್ಯಾಪ್ತಿ, ಸಂಪನ್ಮೂಲಗಳ ಕ್ರೋಢೀಕರಣ ಮತ್ತು ನಿರ್ವಹಣೆ, ಪಾರದರ್ಶಕತೆ, ಉತ್ತರದಾಯಿತ್ವವನ್ನು ಒಳಗೊಂಡಿರವುದಲ್ಲದೆ ಸೂಕ್ತ ಕಾರ್ಯನೀತಿ ಮತ್ತು ಬದ್ಧತೆಯನ್ನು ಹೊಂದಿರಬೇಕು.
ಎಮ್.ಎಸ್.ಉಲುವತ್ತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.