ಅಧಿಕಾರಿಗಳು ಫೋಬಿಯಾದಿಂದ ಮುಕ್ತರಾಗಬೇಕು
Team Udayavani, Jan 15, 2018, 6:00 AM IST
ಪರಪ್ಪನ ಅಗ್ರಹಾರ ಜೈಲು ಅಕ್ರಮವನ್ನು ಬಯಲಿಗೆಳೆದು ಸುದ್ದಿಯಾಗಿದ್ದ ಖಡಕ್ ಐಪಿಎಸ್ ಅಧಿಕಾರಿ ಡಿ. ರೂಪಾ ಅವರು, ಇಂದು ದೇಶದಲ್ಲಿ ಅಧಿಕಾರಿ ವರ್ಗ ಎದುರಿಸುತ್ತಿರುವ “ವರ್ಗಾವಣೆ ಮತ್ತು ರಾಜಕಾರಣಿ ಫೋಬಿಯಾ’ದ ಬಗ್ಗೆ ಮಾತನಾಡಿದ್ದಾರೆ. ಜೊತೆಗೆ ಭ್ರಷ್ಟ ವ್ಯವಸ್ಥೆಗೆ ಪ್ರಾಮಾಣಿಕತೆಯ ಮೂಲಕ ಮುಲಾಮು ಹಚ್ಚಿ ಇಲಾಜು ಮಾಡುವ ಪರಿಯನ್ನೂ ಹೇಳಿದ್ದಾರೆ. “ಟೆಡ್ ಟಾಕ್ಸ್’ನಲ್ಲಿ ಅವರು ಮಾಡಿದ ಭಾಷಣದ ಅಕ್ಷರ ರೂಪ ಇಲ್ಲಿದೆ…
ನನ್ನನ್ನು ಭೇಟಿಯಾಗುವ ಬಹುತೇಕ ಜನರಿಗೆ ಸಾಮಾನ್ಯವಾಗಿ- ‘ಪೊಲೀಸ್ ಅಧಿಕಾರಿಯಾಗಬೇಕೆಂದರೆ ಏನು ಮಾಡಬೇಕು?’ “ಅಲ್ಲಿ ಯಾವ ಸವಾಲುಗಳು ಎದುರಾಗುತ್ತವೆ?’ “ಪುರುಷ ಪ್ರಾಬಲ್ಯವಿರುವ ಪೊಲೀಸ್ ಪಡೆಯಲ್ಲಿ ಮಹಿಳಾ ಟಾಪ್ ಕಾಪ್‌ಗೆ ಈ ಸವಾಲುಗಳು ಭಿನ್ನವಾಗಿವೆಯೇ?’ ಇತ್ಯಾದಿ ಕುತೂಹಲಗಳಿರುತ್ತವೆ.
ನಾನೀಗ ಎಲ್ಲವೂ ಅಲ್ಲದಿದ್ದರೂ ಕೆಲವು ಸವಾಲುಗಳ ಗೋಜಲು ಬಿಡಿಸಲು ಪ್ರಯತ್ನಿಸುತ್ತೇನೆ.
ಐಪಿಎಸ್ ಸೇರಿದವರು ಆರಂಭದಲ್ಲಿ ಉತ್ಸಾಹಭರಿತರಾಗಿರುತ್ತಾರೆ ಮತ್ತು ಸಿಂಘಂನಂಥ ಆದರ್ಶವಾದವನ್ನು ಮನದಲ್ಲಿ ಹೊತ್ತಿರುತ್ತಾರೆ. ಆದರೆ ಯಾವಾಗ ದಿನಗಳು ಉರುಳಲಾರಂಭಿಸಿ, ಅವರು ಈ ವ್ಯವಸ್ಥೆಯ ಭಾಗವಾಗುತ್ತಾರೋ, ಆಗ ಅವರ ಆದರ್ಶವಾದ ಅವಸಾನದ ಹಾದಿಯಲ್ಲಿ ಸಾಗುತ್ತದೆ. ಯಾವಾಗ ಒಬ್ಬ ಅಧಿಕಾರಿ ‘ಕಾನೂನು ತನ್ನಿಂದ ಏನು ನಿರೀಕ್ಷಿಸುತ್ತಿದೆ ಎನ್ನುವುದನ್ನು ಬಿಟ್ಟು, ತನ್ನ ರಾಜಕೀಯ ಬಾಸ್ ತನ್ನಿಂದ ಏನು ಬಯಸುತ್ತಾನೆ’ ಎಂದು ಯೋಚಿಸಲು ಆರಂಭಿಸುತ್ತಾನೋ ಆಗ ಈ ಅವಸಾನದ ಮೊದಲ ಲಕ್ಷಣ ನಮಗೆ ಗೋಚರಿಸುತ್ತದೆ.
****
ಭಾರತದಲ್ಲಿ ವಿಐಪಿ ಸಂಸ್ಕೃತಿಯೆಂಬ ಪೀಡೆ ವರ್ಷಗಳಿಂದ ಆಳವಾಗಿ ಬೇರೂರಿಬಿಟ್ಟಿದೆ. ವಿಐಪಿಗಳಿಗೆ, ಅದರಲ್ಲೂ ರಾಜಕಾರಣಿಗಳಿಗೆ ವಿಶೇಷ ಸವಲತ್ತುಗಳನ್ನು ಕೊಡಲಾಗುತ್ತದೆ. ಅಂಥ ಸವಲತ್ತುಗಳಲ್ಲಿ ಒಂದೆಂದರೆ ರಾಜಕಾರಣಿಗಳಿಗೆ ಪೊಲೀಸರನ್ನು ಗನ್‌ಮೆನ್‌ಗಳಾಗಿ ನೇಮಿಸುವುದು. ಬಹಳಷ್ಟು ಸಂದರ್ಭಗಳಲ್ಲಿ ಏನಾಗುತ್ತದೆಂದರೆ ನಿಜಕ್ಕೂ ಯಾವುದೇ ಅಪಾಯ ಇಲ್ಲದಿದ್ದರೂ ರಾಜಕಾರಣಿಗಳಿಗೆ ಗನ್‌ಮೆನ್‌ಗಳನ್ನು ಪ್ರತಿಷ್ಠೆಯ ಪ್ರತೀಕವಾಗಿ ನಿಯೋಜಿಸಲಾಗುತ್ತದೆ. ಹೆಚ್ಚು ಗನ್‌ಮೆನ್‌ಗಳಿದ್ದರೆ ಹೆಚ್ಚು ಪ್ರತಿಷ್ಠೆ ಎಂಬ ಭಾವಿಸಲಾಗುತ್ತದೆ. ಅನೇಕಬಾರಿ ಗನ್‌ಮೆನ್‌ಗಳನ್ನು ಸಣ್ಣಪುಟ್ಟ ಚಾಕರಿ ಮಾಡುವ ಹುಡುಗರಂತೆ ಬಳಸಿಕೊಳ್ಳಲಾಗುತ್ತದೆ ಎನ್ನುವುದು ಉತ್ಪ್ರೇಕ್ಷೆಯೇನೂ ಅಲ್ಲ.
ನಾನು ಬೆಂಗಳೂರು ನಗರ ಸಶಸ್ತ್ರ ಮೀಸಲು ಪಡೆಯ ಡಿಸಿಪಿ ಆಗಿ ನೇಮಕಗೊಂಡಾಗ ಸಿಬ್ಬಂದಿ ನಿರ್ವಹಣೆ ಮತ್ತು ನಿಯೋಜನೆಯ ಉಸ್ತುವಾರಿ ನೋಡಿಕೊಳ್ಳುವುದು ನನ್ನ ಜವಾಬ್ದಾರಿಯಾಗಿತ್ತು. ಹೀಗಾಗಿ ನನ್ನ ತಂಡದಲ್ಲಿರುವವರನ್ನು ಎಲ್ಲೆಲ್ಲಿ ನಿಯೋಜಿಸಲಾಗಿದೆ ಎನ್ನುವುದನ್ನು ಪರಿಶೀಲಿಸಿದೆ. ನನಗೆ ಆಘಾತ ಕಾದಿತ್ತು! ಏಕೆಂದರೆ ಬಹಳಷ್ಟು ರಾಜಕಾರಣಿಗಳು ಅಧಿಕೃತವಾಗಿ ತಮಗೆ ನೀಡಲಾದ ಸಂಖ್ಯೆಗಿಂತಲೂ ಹೆಚ್ಚಿನ ಗನ್‌ಮೆನ್‌ಗಳನ್ನು ಹೊಂದಿದ್ದರು. ನಾನೊಂದು ಪಟ್ಟಿ ಮಾಡಿದೆ. 82 ರಾಜಕಾರಣಿಗಳು ತಮಗೆ ನಿಗದಿಗೊಳಿಸಿದ್ದಕ್ಕಿಂತಲೂ 216 ಹೆಚ್ಚುವರಿ ಗನ್‌ಮೆನ್‌ಗಳನ್ನು ಹೊಂದಿದ್ದರು. ನಾನು ಈ ಹೆಚ್ಚುವರಿ ಗನ್‌ಮೆನ್‌ಗಳನ್ನು ಹಿಂದಕ್ಕೆ ಕರೆಸಿಕೊಳ್ಳಲು ಆರಂಭಿಸಿದೆ. ನನಗೆ ಮೊದಲು ಪ್ರತಿರೋಧ ಎದುರಾದದ್ದೇ ಬಾಸ್‌ನಿಂದ. ಅವರು ನನ್ನ ನಡೆಯನ್ನು ಅಧೀನ ಅಧಿಕಾರಗಳ ಸಮ್ಮುಖದಲ್ಲೇ ಖಂಡಿಸಿದ್ದರು. ಆದರೂ ನಾನು ಎದೆಗುಂದದೆ, ಹೆಚ್ಚುವರಿಯಾಗಿ ನಿಯೋಜನೆಗೊಂಡಿದ್ದ ಕಟ್ಟ ಕಡೆಯ ವ್ಯಕ್ತಿಯೂ ಯೂನಿಟ್‌ಗೆ ಹಿಂದಿರುಗುವಂತೆ ಮಾಡಿ ಹಿಡಿದ ಕೆಲಸ ಮುಗಿಸಿದೆ. ಅದೇ ವೇಳೆಯಲ್ಲೇ ಮಾಜಿ ಮುಖ್ಯಮಂತ್ರಿಯೊಬ್ಬರು ತಮ್ಮ ಬಳಿ ಇಟ್ಟುಕೊಂಡಿದ್ದ 8 ಹೊಚ್ಚ ಹೊಸ ಎಸ್‌ಯುವಿ ವಾಹನಗಳನ್ನೂ ಹಿಂಪಡೆದೆ. ಆ ವ್ಯಕ್ತಿ ಮುಖ್ಯಮಂತ್ರಿ ಹುದ್ದೆಯಿಂದ ನಿರ್ಗಮಿಸಿದ್ದರೂ ಆ ಕಾರುಗಳನ್ನು ಬಿಟ್ಟಿರಲಿಲ್ಲ! ನನಗೆ ಕೆಲವೊಮ್ಮೆ ಅನಿಸುತ್ತದೆ. ಅದೇಕೆ ನನ್ನ ಪೂರ್ವ ಅಧಿಕಾರಿಗಳು ಇಂಥ ಕೆಲಸ ಮಾಡಲಿಲ್ಲ? ಅವರನ್ನು ತಡೆದ ಸಂಗತಿಗಳೇನು? ನನಗೆ ನಂತರ ಅರ್ಥವಾಯಿತು. ಇಂಥ ಕೆಲಸಗಳನ್ನೆಲ್ಲ “ಡರ್ಟಿ ಜಾಬ್ಸ್’ ಎಂದು ಕರೆಯಲಾಗುತ್ತದೆ. ಅಂದರೆ ಇವು ರಾಜಕಾರಣಿಗಳ ಕ್ರೋಧವನ್ನು ಆಹ್ವಾನಿಸುವ ಅಹಿತಕರ ಕೆಲಸಗಳಾಗಿದ್ದರಿಂದ ಯಾರೂ ಈ ಹೆಜ್ಜೆಯಿಡಲು ಬಯಸುತ್ತಿರಲಿಲ್ಲ.
ಇತ್ತೀಚೆಗಷ್ಟೇ ನಾನು ಬೆಂಗಳೂರು ಬಂದೀಖಾನೆ ವಿಭಾಗದ ಡಿಐಜಿಯಾಗಿ ನೇಮಕಗೊಂಡೆ. ಭಾನುವಾರ ಮತ್ತು ರಜಾದಿನಗಳನ್ನು ಹೊರತುಪಡಿಸಿದರೆ ಕೇವಲ 17 ದಿನಗಳಷ್ಟೇ ಆ ಹುದ್ದೆಯಲ್ಲಿ ಕಾರ್ಯ ನಿರ್ವಹಿಸಿದೆ. ಮೇಲೆ ತಿಳಿಸಿದ ಸ್ಪೆಷಲ್ ಟ್ರೀಟ್‌ಮೆಂಟನ್ನೇ ಬಂಧಿಖಾನೆಯೊಂದರಲ್ಲಿ ಅಪರಾಧಿ ಯೊಬ್ಬರಿಗೆ ಕೊಡುತ್ತಿರುವುದನ್ನು ನಾನು ಗಮನಿಸಿದೆ. ಈ ಅಪರಾಧಿ ತಮಿಳುನಾಡಿನ ಮಾಜಿ ಮುಖ್ಯಮಂತ್ರಿಗೆ ಆಪ್ತರಾಗಿದ್ದವರು. ಅವರೇ ಆ ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಬಹುದು ಎಂದೂ ಬಿಂಬಿಸಲಾಗಿತ್ತು. ಆದಾಯಕ್ಕೂ ಮೀರಿ ಅಕ್ರಮ ಆಸ್ತಿ ಗಳಿಸಿದ್ದಕ್ಕಾಗಿ ಅವರಿಗೆ ಸುಪ್ರೀಂ ಕೋರ್ಟ್ ಶಿಕ್ಷೆ ವಿಧಿಸಿತ್ತು. ಆದರೆ ಸುಪ್ರೀಂ ಕೋರ್ಟ್ ಆದೇಶಗಳನ್ನು ಗಾಳಿಗೆ ತೂರಿದ ಜೈಲಿನ ಅಧಿಕಾರಿಗಳು ಅವರಿಗೆ ವಿಶೇಷ ಸವಲತ್ತುಗಳನ್ನು ಒದಗಿಸಿದ್ದರು. ಈ ಅಕ್ರಮಗಳ ಬಗ್ಗೆ ನಾನು ವರದಿ ಸಲ್ಲಿಸಿದೆ. ಇದಾದ ನಂತರ ಬಹಳಷ್ಟು ಜನ ನನ್ನನ್ನು ಕೇಳಿದರು- ನೀವು ಎಲ್ಲಾ ಯೋಚಿಸಿ ಹೀಗೆ ಮಾಡಿದಿರಾ ಅಥವಾ ನಿಮ್ಮ ನಡೆ ಆ ಕ್ಷಣದ ಪ್ರತಿಕ್ರಿಯೆಯಾಗಿತ್ತಾ? ಎಂದು. ಸ್ಪಷ್ಟ ಮಾಡಿಬಿಡುತ್ತೇನೆ, ನಾನು ಪರಿಣಾಮಗಳ ಬಗ್ಗೆ ಯೋಚಿಸಿರಲೇ ಇಲ್ಲ. ಯೋಚಿಸುವ ಅಗತ್ಯವೂ ಇರಲಿಲ್ಲ ಬಿಡಿ. ಏಕೆಂದರೆ ಅತ್ಯಂತ ಪಾರದರ್ಶಕವಾಗಿ ಮತ್ತು ಉತ್ತರದಾಯಿಯಾಗಿ ವರ್ತಿಸಿದ್ದೇನೆ ಎನ್ನುವುದು ನನಗೆ ಸ್ಪಷ್ಟವಿತ್ತು. ಈ ವರದಿಯ ನಂತರ ನನ್ನ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲಾಯಿತು! ಹಾಗಿದ್ದರೆ ಈ ಪ್ರಸಂಗ ಕಲಿಸುತ್ತಿರುವ ಪಾಠವೇನು? ನೀವು ಜೇನು ಗೂಡಿಗೆ ಕಲ್ಲೆಸೆಯುತ್ತೀರಿ ಎಂದರೆ ಎಲ್ಲಾ ರೀತಿಯ ಪರಿಣಾಮಗಳಿಗೂ, ನೊಟೀಸ್‌ಗಳಿಗೂ ಸಿದ್ಧರಾಗಿರಬೇಕಾಗುತ್ತದೆ ಎನ್ನುವುದು!
11 ವರ್ಷದ ಹಿಂದೆ, ನನಗೆ ಇದೇ ರೀತಿಯ ನೊಟೀಸ್ ಬಂದಿತ್ತು. ಆದರೆ ಅದು ಶಾಸಕರೊಬ್ಬರು ನನ್ನ ವಿರುದ್ಧ ದಾಖಲಿಸಿದ್ದ ಹಕ್ಕು ಚ್ಯುತಿ ನೊಟೀಸ್ ಆಗಿತ್ತು. ಆಗ ನಾನು ಬೀದರ್ ಜಿಲ್ಲೆಯ ಎಸ್‌ಪಿ ಆಗಿದ್ದೆ. 2006ರಲ್ಲಿ ಆ ಜಿಲ್ಲೆಯ ಹುಮನಾಬಾದ್ ತಾಲೂಕಿನಲ್ಲಿ ಗಲಭೆಯೊಂದು ನಡೆಯಿತು. ಸ್ಥಳೀಯ ಎಂಎಲ್‌ಸಿಯೊಬ್ಬರ ಪ್ರಚೋದನೆಯಿಂದಲೇ ಈ ಗಲಭೆ ಆರಂಭವಾಯಿತು ಎಂದು ಮೇಲ್ನೋಟದ ಸಾಕ್ಷ್ಯಾಧಾರ ವರದಿಗಳು ಹೇಳುತ್ತಿದ್ದವು. ಹೀಗಾಗಿ ಆ ಎಂಎಲ್‌ಸಿಯ ವಿರುದ್ಧ ಪ್ರಕರಣ ದಾಖಲಿಸಿ, ಮುಂದಿನ ಕ್ರಮ ಕೈಗೊಳ್ಳುವಂತೆ ನಾನು ಸ್ಟೇಷನ್ ಹೌಸ್ ಅಧಿಕಾರಿಗೆ ಹೇಳಿದೆ. ಇದು ನಡೆದ ಕೆಲವೇ ಅವಧಿಯಲ್ಲಿ, ಅಲ್ಲಿಂದ ನನ್ನ ವರ್ಗಾವಣೆ ಆಯಿತು! ಅಷ್ಟೇ ಅಲ್ಲ, ನನ್ನ ವಿರುದ್ಧ ಪ್ರಿವಿಲೇಜ್ ಮೋಷನ್ ನೋಟೀಸ್ ಅನ್ನೂಜಡಿಯಲಾಯಿತು.
ಈ ವಿಷಯದಲ್ಲಿ ಕಾನೂನು ಸ್ಪಷ್ಟವಾಗಿದೆ. ಒಂದು ವೇಳೆ ಎಫ್ಐಆರ್‌ನಲ್ಲಿ ಜನಪ್ರತಿನಿಧಿಯೊಬ್ಬನ ಹೆಸರು ದಾಖಲಾಗಿದೆ ಎಂದರೆ ಅದನ್ನು ಆತ ಪ್ರಿವಿಲೇಜ್ ಎಂದು ಕರೆಯುವಂತಿಲ್ಲ ಮತ್ತು ಪ್ರಿವಿಲೇಜ್ ಮೋಷನ್ ದಾಖಲಿಸುವಂತಿಲ್ಲ ಎಂದು ಕಾನೂನು ಸ್ಪಷ್ಟವಾಗಿ ಹೇಳಿದೆ. ಆದರೂ ನನ್ನ ವಿರುದ್ಧ ಹಕ್ಕು ಚ್ಯುತಿ ಮಂಡಿಸಲಾಯಿತು ಮತ್ತು ಹಕ್ಕು ಬಾಧ್ಯತಾ ಸಮಿತಿಯ ಮುಂದೆ ವರ್ಷಗಳವರೆಗೆ ಅನೇಕ ಬಾರಿ ಹಾಜರಾಗುವಂತಾಯಿತು.
ಹಾಗಿದ್ದರೆ ಇದರ ನೀತಿಯೇನು? ರಾಜಕಾರಣಿ ನಮಗೆ ಕಲಿಸುತ್ತಿರುವ ಪಾಠವೇನು?
ರಾಜಕಾರಣಿ ಇಲ್ಲಿ ಅಧಿಕಾರಿಗೆ ಪಾಠ ಕಲಿಸುತ್ತಿದ್ದಾನೆ- “ನನ್ನನ್ನು ಎದುರು ಹಾಕಿಕೊಂಡರೆ ನಿನಗೆ ಇದೇ ಗತಿ’ ಎಂಬ ಪಾಠವದು. ಆತ ಕೇವಲ ನಿರ್ದಿಷ್ಟ ಅಧಿಕಾರಿಯ ಮನದಲ್ಲಷ್ಟೇ ಅಲ್ಲ, ಒಟ್ಟೂ ಅಧಿಕಾರಿ ವರ್ಗದ ಮನದಲ್ಲಿ ಭಯ ಸೃಷ್ಟಿಸುತ್ತಿದ್ದಾನೆ. ಒಂದು ವೇಳೆ ಅಧಿಕಾರಿ ಹೆದರಿ ತಲೆಬಾಗಿದನೆಂ ದರೆ, ಅಲ್ಲಿ ರಾಜಕಾರಣಿ ಗೆಲ್ಲುತ್ತಾನೆ. ನನ್ನನ್ನು ನಂಬಿ, ಇಂಥ ನೊಟೀಸ್‌ಗಳನ್ನು ಎದುರಿಸುವುದಕ್ಕೆ ಬಹಳಷ್ಟು ಅಧಿಕಾರಿಗಳು ಸಿದ್ಧರಿಲ್ಲ. ಏಕೆಂದರೆ ಈ ರೀತಿಯ ನೋಟೀಸ್‌ಗಳು ಬಹಳಷ್ಟು ವೈಯಕ್ತಿಕ ತೊಂದರೆಗಳನ್ನು ಸೃಷ್ಟಿಸುತ್ತವೆ. ವೈಯಕ್ತಿಕ ಸಮಯ-ಶಕ್ತಿ ಹಾಳಾಗುತ್ತದೆ, ಮಾನಸಿಕ ನೆಮ್ಮದಿ ಕೆಡುತ್ತದೆ ಮತ್ತು ನ್ಯಾಯಾಲಯದಲ್ಲಿ ಹೋರಾಡುತ್ತೇವೆಂದರೆ ಹಣವನ್ನೂ ಕಳೆದುಕೊಳ್ಳಬೇಕಾಗುತ್ತದೆ. ಹೀಗಾಗಿ ಯಾರೂ ಕೂಡ ಇದನ್ನೆಲ್ಲ ಎದುರಿಸಲು ಬಯಸುವುದಿಲ್ಲ. ಆದರೆ ಈ ವಿಷಯದಲ್ಲಿ ನನ್ನ ಅಭಿಪ್ರಾಯವೇನೆಂದರೆ, ಹೇಗೆ ಪ್ರತಿಯೊಂದು ವೃತ್ತಿಗೂ ತನ್ನದೇ ಆದ ಔದ್ಯೋಗಿಕ ಅಪಾಯಗಳಿರುತ್ತವೋ ಹಾಗೆಯೇ ಅಧಿಕಾರ ವರ್ಗ ಈ ರೀತಿಯ ನೋಟಿಸ್ ಎಂಬ ಅಪಾಯವನ್ನು ಎದುರಿಸಬೇಕಾಗುತ್ತದೆ.
****
ಈಗ ಒಬ್ಬ ಮಹಿಳೆಯಾಗಿ ನಾನು ಪುರುಷ ಪ್ರಾಬಲ್ಯವಿರುವ ಪೊಲೀಸ್ ಇಲಾಖೆಯಲ್ಲಿ ಎದುರಿಸಿದ ಸವಾಲುಗಳ ಬಗ್ಗೆ ಮಾತನಾಡುತ್ತೇನೆ. ಎದುರಾಗಬಹುದಾದ ದೊಡ್ಡ ತೊಂದರೆಯೆಂದರೆ ಮಹಿಳಾ ಅಧಿಕಾರಿ ಕಡೆಗಣನೆಗೆ ಒಳಗಾಗಬಹುದು, ಆಕೆಯ ಮಾತುಗಳನ್ನು ಹಗುರವಾಗಿ ಪರಿಗಣಿಸಬಹುದು, ಆಗಾಗ ಆಕೆಯ ಸೂಚನೆಗಳನ್ನು ಗಾಳಿಗೆಸೆಯುವ ಸಾಧ್ಯತೆಯೂ ಇರುತ್ತದೆ.
ನನಗೆ ಒಮ್ಮೆ ಗದಗ ಜಿಲ್ಲೆಯಲ್ಲಿ ಇಂಥದ್ದೊಂದು ಆಘಾತಕಾರಿ ಅನುಭವವಾಗಿತ್ತು. 2008ರಲ್ಲಿ ನಾನು ಗದಗ ಜಿಲ್ಲಾ ಪೊಲೀಸ್ ಅನ್ನು ಮುನ್ನಡೆಸುತ್ತಿದ್ದೆ. ಆ ವರ್ಷದ ಮಾರ್ಚ್ ತಿಂಗಳಲ್ಲಿ ನರಗುಂದ ತಾಲೂಕಿನಲ್ಲಿ, ಅಲ್ಲಿನ ಬಲಿಷ್ಠ ರಾಜಕಾರಣಿಯೊಬ್ಬರು(ಮಾಜಿ ಮಂತ್ರಿಯೂ ಕೂಡ) ತಮ್ಮ ಬೆಂಬಲಿಗರನ್ನು ಕೆರಳಿಸುವಂಥ ಭಾಷಣ ಮಾಡಿದರು. ಈ ಭಾಷಣ ಮುಗಿದ ಕೆಲವೇ ಸಮಯದಲ್ಲಿ ಅವರ ಬೆಂಬಲಿಗರು 3 ಸರ್ಕಾರಿ ಬಸ್‌ಗಳಿಗೆ ಬೆಂಕಿ ಹಚ್ಚಿಬಿಟ್ಟರು. ಸರ್ಕಾರಿ ಬಸ್‌ಗಳೆಂದರೆ ಅವು ಸಾರ್ವಜನಿಕರ ಆಸ್ತಿ. ಅವನ್ನು ತೆರಿಗೆದಾರರ ಹಣದಲ್ಲಿ ಖರೀದಿಸಲಾಗಿರುತ್ತದೆ. ಹೀಗಾಗಿ ನಾನು ನನ್ನ ಅಧೀನ ಅಧಿಕಾರಿಗೆ ಆ ರಾಜಕಾರಣಿಯನ್ನು ಅರೆಸ್ಟ್ ಮಾಡಲು ಸೂಚಿಸಿದೆ. ಆ ರಾಜಕಾರಣಿ ಮಾಡಿದ ಭಾಷಣದ ವೀಡಿಯೋ ಸಾಕ್ಷ್ಯವೂ ನಮ್ಮ ಬಳಿ ಇತ್ತು. ಆದರೆ ಆ ಅಧಿಕಾರಿ ಪ್ರತಿರೋಧವೊಡ್ಡಲು ಆರಂಭಿಸಿದ, ನನ್ನ ಆಜ್ಞೆಯನ್ನು ನಿರಾಕರಿಸತೊಡಗಿದ. ಇದಷ್ಟೇ ಅಲ್ಲ, “ಆ ರಾಜಕಾರಣಿ ಆಗಲೇ ಊರು ದಾಟಿ ಹೋಗಿದ್ದಾರೆ’ ಎಂದೂ ನಿರಂತರವಾಗಿ ಸುಳ್ಳು ಹೇಳಿದ. ಆದರೆ ನಾನೂ ಮಾತ್ರ ಹಿಂದೆ ಸರಿಯಲಿಲ್ಲ.
ಬೆಳಗ್ಗೆ ಪೊಲೀಸ್ ಸ್ಟೇಷನ್‌ಗೆ ಹೋದವಳು ಅಲ್ಲೇ ಕದಲದೇ ಕುಳಿತುಬಿಟ್ಟೆ. ಮಧ್ಯಾಹ್ನವಾಯಿತು, ಸಂಜೆಯಾಯಿತು, ರಾತ್ರಿಯಾಯಿತು. ಗಡಿಯಾರದ ಮುಳ್ಳು ಒಂಬತ್ತು ಗಂಟೆ ತಲುಪಿತು, ಒಂಬತ್ತು ಹದಿನೈದು, ಒಂಬತ್ತುವರೆೆ ಮತ್ತು ಹತ್ತು ಗಂಟೆಗೂ ಬಂದು ನಿಂತಿತು. ಕೊನೆಗೂ ಅಲ್ಲಿನ ಸಿಬ್ಬಂದಿಗೆ ಯಾವಾಗ ನಾನು ಹಿಂದೆ ಸರಿಯುವುದಿಲ್ಲ ಎನ್ನುವುದು ಅರಿವಾಯಿತೋ ಅವರು ಆ ರಾಜಕಾರಣಿಯನ್ನು ಅದ್ಹೇಗೋ ಪೊಲೀಸ್ ಸ್ಟೇಷನ್‌ಗೆ ಕರೆತಂದರು. ಆ ರಾಜಕಾರಣಿಯನ್ನು ಕಾನೂನುಸಾರವಾಗಿ ಬಂಧಿಸಲು ಮತ್ತು ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲು ಸ್ಟೇಷನ್ ಹೌಸ್ ಅಧಿಕಾರಿಗೆ ಸೂಚಿಸಿದೆ. ನನ್ನ ಆದೇಶವನ್ನು ಪಾಲಿಸಲಾಯಿತು. ಇನ್ನು ಅಧೀನ ಅಧಿಕಾರಿಯ ವಿಷಯಕ್ಕೆ ಬಂದರೆ, ಆತ ನನಗೆ ಸುಳ್ಳು ಹೇಳಿದ್ದಷ್ಟೇ ಅಲ್ಲ, ರಾಜಕಾರಣಿ ಎಲ್ಲೂ ಸಿಗುತ್ತಲೇ ಇಲ್ಲ ಎಂದು ಹೇಳುತ್ತಲೇ ಇಡೀ ದಿನ ಅದೇ ರಾಜಕಾರಣಿಯೊಂದಿಗೆ ನಿರಂತರ ಫೋನ್ ಸಂಪರ್ಕದಲ್ಲೂ ಇದ್ದ ಎನ್ನುವುದು ತನಿಖೆಯ ನಂತರ ತಿಳಿಯಿತು. ಈ ಹಿನ್ನೆಲೆಯಲ್ಲಿ ಆ ಅಧಿಕಾರಿಯ ವಿರುದ್ಧ ಸರ್ಕಾರಕ್ಕೆ ಮತ್ತು ಚುನಾವಣಾ ಆಯೋಗಕ್ಕೆ(ಏಕೆಂದರೆ ಆ ಸಮಯದಲ್ಲಿ ಚುನಾವಣೆ ಕಾರ್ಯಗಳು ನಡೆಯುತ್ತಿದ್ದವು) ವರದಿ ಸಲ್ಲಿಸಿದೆ. ಸರ್ಕಾರ ಆ ಅಧಿಕಾರಿಯನ್ನು ಅಮಾನತುಗೊಳಿಸಿತು. ಆತ ಒಂದು ವರ್ಷಕ್ಕಿಂತಲೂ ಹೆಚ್ಚು ಕಾಲ ಅಮಾನತ್ತಿನಲ್ಲೇ ಇದ್ದ.
****
ಸವಾಲುಗಳು ಯಾವುದೇ ರೂಪದಲ್ಲೂ ಎದುರಾಗಬಹುದು. ಯಾದಗಿರಿ ಕರ್ನಾಟಕದ ಹೊಸ ಜಿಲ್ಲೆಯಾಗಿ ಸೇರ್ಪಡೆಗೊಂಡಿತ್ತು. ಅದರ ಮೊದಲ ಪೊಲೀಸ್ ಮುಖ್ಯಸ್ಥೆಯಾಗಿ ನಾನು ನಿಯೋಜನೆಗೊಂಡಿದ್ದೆ. ಅಲ್ಲಿ ಅನೇಕ ಸಮಸ್ಯೆಗಳಿದ್ದವು. ಅಧಿಕಾರ ಕಚೇರಿ, ಅಧಿಕೃತ ನಿವಾಸ ಕ್ವಾರ್ಟರ್ ವಿಷಯವಿರಲಿ, ತುರ್ತು ಕಾರ್ಯಾಚರಣೆ ಪಡೆಯೂ (ಸ್ಟ್ರೈಕಿಂಗ್ ಫೋರ್ಸ್) ಅಲ್ಲಿರಲಿಲ್ಲ. ಪರಿಸ್ಥಿತಿ ಹೀಗಿರುವಾಗ ಕಾನೂನು ಸುವ್ಯವಸ್ಥೆಗೆ ಭಂಗ ಬಂದರೆ ಏನು ಮಾಡೋದು? ಹೀಗಾಗಿ ನಾನೊಂದು ತಂತ್ರ ರೂಪಿಸಿದೆ. ಮೊದಲ ಕೆಲವು ದಿನಗಳಲ್ಲಿ ನಾನು ಯಾರಾದರೂ ಶಾಂತಿಗೆ ಭಂಗ ತರುವಂಥ ಚಿಕ್ಕ ಕೃತ್ಯ ಎಸಗಿದರೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಂಡೆ. ಕಾನೂನು ಉಲ್ಲಂ ಸಿದರೆ ನಿಮ್ಮನ್ನು ಬಿಡುವುದಿಲ್ಲ ಎಂಬ ಪ್ರಬಲ ಸಂದೇಶ ಇದರಿಂದ ರವಾನೆಯಾಯಿತು.
ಕೌತುಕವೆಂಬಂತೆ, ಯಾದಗಿರಿಯಲ್ಲಿನ ನನ್ನ ಮುಂದಿನ ಮೂರು ವರ್ಷಗಳು ಶಾಂತಿಯುತವಾಗಿದ್ದವು. ಆದರೆ ಅಲ್ಲಿನ ಪೋಸ್ಟಿಂಗ್ ನನಗೆ ಮತ್ತು ನನ್ನ ಕುಟುಂಬದವರಿಗೂ ವಿಭಿನ್ನ ಸವಾಲುಗಳನ್ನು ಎದುರೊಡ್ಡಿದವು. ನಾನು ಆಗಲೇ ಹೇಳಿದಂತೆ, ಅಲ್ಲಿ ಅಧಿಕೃತ ನಿವಾಸಿ ಕ್ವಾರ್ಟರ್ಸ್‌ಗಳಿರಲಿಲ್ಲ. ಆಕಸ್ಮಿಕವೆಂಬಂತೆ ಅದೇ ಜಿಲ್ಲೆಯಲ್ಲೇ ನನ್ನ ಪತಿ ಕಾರ್ಯನಿರ್ವಹಿಸುತ್ತಿದ್ದ ಹೆಚ್ಚುವರಿ ಹುದ್ದೆಯೊಂದಕ್ಕೆ ಅಧಿಕೃತ ನಿವಾಸದ ಸೌಲಭ್ಯವಿತ್ತು. ಆದರೆ ಆ ನಿವಾಸವಿದ್ದದ್ದು ಭೀಮರಾಯನಗುಡಿ ಎಂಬ ಹಳ್ಳಿಯೊಂದರಲ್ಲಿ. ನಾನೂ ಅಲ್ಲೇ ವಾಸಿಸತೊಡಗಿದೆ. ನಮ್ಮ ನಿವಾಸದ ಪಕ್ಕದಲ್ಲೇ ಶಾಲೆಯೊಂದಿತ್ತು. ನನ್ನ ಮಗಳು ಅಕ್ಷರಶಃ ಆ ಶಾಲೆಯಲ್ಲೇ ತನ್ನ ಶಿಕ್ಷಣವನ್ನು ಆರಂಭಿಸಿದಳು. ಬೆಂಚುಗಳಿಲ್ಲದ ಆ ಶಾಲೆಯಲ್ಲಿ ನೆಲದ ಮೇಲೆ ಕುಳಿತುಕೊಂಡೇ ಮಗಳು ಮೂರು ವರ್ಷ ಶಿಕ್ಷಣ ಪಡೆದಳು. ಬೆಂಚುಗಳಿರಲಿ, ಟಾಯ್ಲೆಟ್ ಕೂಡ ಇರದ ಸೌಕರ್ಯವಂಚಿತ ಶಾಲೆಯಲ್ಲಿ ಅವಳು ಓದಿದಳು. ಆದರೆ ಬಹಳಷ್ಟು ಪೊಲೀಸ್ ಅಧಿಕಾರಿಗಳು ಇಂಥ ಹಿಂದುಳಿದ ಜಾಗಗಳಲ್ಲಿ ಕೆಲಸ ಮಾಡಲು ತಯ್ನಾರಿರುವುದಿಲ್ಲ.
ಸವಾಲುಗಳು ಅನೇಕ ರೂಪಗಳಲ್ಲಿ ಇರುತ್ತವೆ. ಆದರೂ ಒಂದು ವೇಳೆ ಅಧಿಕಾರಿಯೊಬ್ಬ ರಿಸ್ಕ್ ತೆಗೆದುಕೊಳ್ಳಲು ಸಿದ್ಧನಿದ್ದರೆ, ಒಂದು ವೇಳೆ ಅಧಿಕಾರಿಗೆ ಬಚ್ಚಿಡುವಂಥದ್ದೇನೂ ಇಲ್ಲವೆಂದರೆ, ಆತನಿಗೆ ತಾನು ಕಾನೂನುಬದ್ಧವಾಗಿ ಕೆಲಸ ಮಾಡಿದ್ದೇನೆ ಎನ್ನುವ ಸ್ಪಷ್ಟತೆ ಇದ್ದರೆ, ಆತ ಪ್ರಾಮಾಣಿಕನಾಗಿದ್ದರೆ. ಲಾಭದಾಯಕ ಪೋಸ್ಟಿಂಗ್‌ಗಳಿಗಾಗಲಿ ಅಥವಾ ಇನ್ಯಾವುದೇ ಲಾಭಕ್ಕಾಗಲಿ ರಾಜಕಾರಣಿಗಳಿಗೆ ಜೋತುಬಿದ್ದಿಲ್ಲವೆಂದರೆ ಮತ್ತು ಕೊನೆಯದಾಗಿ…ಯಾವ ಸಮಯದಲ್ಲಿ ಟ್ರಾನ್ಸ್‌ಫರ್ ಆದರೂ ಎದ್ದು ನಡೆಯಲು ಆತ ಬ್ಯಾಗ್ ಸಿದ್ಧವಿಟ್ಟುಕೊಂಡಿದ್ದಾನೆ ಎಂದರೆ, ಆ ಅಧಿಕಾರಿಯು “ಕಡೆಗಣಿಸಲಾಗದಂಥ ಶಕ್ತಿ’ಯಾಗಿ ಬದಲಾಗಿಬಿಡುತ್ತಾನೆ.
****
ಅನೇಕ ಬಲಿಷ್ಠ ವ್ಯಕ್ತಿಗಳನ್ನು ಅನೇಕ ಬಾರಿ ಎದುರಿಸಿಯೂ ನಾನು ಜೀವಂತವಾಗಿದ್ದೇನೆ, ಧೈರ್ಯವಾಗಿ ಮುನ್ನುಗ್ಗುತ್ತಿದ್ದೇನೆ ಎಂದರೆ ಅಧಿಕಾರ ವರ್ಗಕ್ಕೆ ಕಾನೂನಿನಡಿ ಸಿಗುತ್ತಿರುವ ಬಲಿಷ್ಠ ರಕ್ಷಣೆ ಹೇಗಿರಬಹುದೋ ಯೋಚಿಸಿ. ಹೀಗಾಗಿ ನಮ್ಮ ಅಧಿಕಾರಿಗಳು ಅನಗತ್ಯವಾಗಿ ಭಯ ಎದುರಿಸುತ್ತಿದ್ದಾರೆ ಮತ್ತು ಅವರ ಭಯಕ್ಕೆ ಆಧಾರವಿಲ್ಲ ಎಂದು ನಾನು ಭಾವಿಸುತ್ತೇನೆ.
ಎಂಎಲ್‌ಎ, ಎಂಪಿ, ಎಂಎಲ್‌ಸಿಯಂಥ ಹುದ್ದೆಗಳು ಭಾರತದ ಸಂವಿಧಾನದ ಅಡಿಯಲ್ಲಿ ಸೃಷ್ಟಿಯಾಗಿವೆ ಎನ್ನುವುದು ನಮಗೆಲ್ಲ ಗೊತ್ತಿದೆ. ಆದರೆ ಇದೇ ಸಂವಿಧಾನದ ಅಡಿಯಲ್ಲೇ ಐಎಎಸ್ ಮತ್ತು ಐಪಿಎಸ್‌ನಂಥ ಹುದ್ದೆಗಳೂ ಸೃಷ್ಟಿಯಾಗಿವೆ ಎನ್ನುವುದನ್ನೂ ನಾವು ಮರೆಯಬಾರದು. ಆರ್ಟಿಕಲ್ 311, ಅಧಿಕೃತ ಸಾಮರ್ಥಯದಲ್ಲಿ ಕಾರ್ಯ ನಿರ್ವಹಿಸಿದ ಅಧಿಕಾರಿಗಳಿಗೆ ಸಂಪೂರ್ಣ ರಕ್ಷಣೆ ಒದಗಿಸುತ್ತದೆ. ಈ ರಕ್ಷಣೆಯು ದೇಶದಲ್ಲಿನ ಎಲ್ಲಾ ಅಧಿಕಾರಿಗಳಿಗೂ(ಸ್ಟೇಟ್ ಸರ್ವಿಸಸ್ ಒಳಗೊಂಡು) ಲಭ್ಯವಿದೆ. ಯಾವಾಗ ಅಧಿಕಾರಿಗಳು ವರ್ಗಾವಣೆಯ ಫೋಬಿಯಾದಿಂದ, ರಾಜಕಾರಣಿಗಳ ಫೋಬಿಯಾದಿಂದ ಹೊರಬರುತ್ತಾರೋ, ಆಗ ನಮ್ಮಲ್ಲಿ ಪ್ರಪಂಚದಲ್ಲೇ ಅತ್ಯುತ್ತಮವಾದ ಅಧಿಕಾರಿವರ್ಗವಿರುತ್ತದೆ.
“ಬ್ಯೂರೋಕ್ರಸಿಯೆನ್ನುವುದು ಕಬ್ಬಿಣದ ಪಂಜರವಿದ್ದಂತೆ” ಎಂದು ಕಾರ್ಲ್ ಮಾರ್ಕ್ಸ್ ಹೇಳಿದ್ದ. ಆದರೆ ನನಗನಿಸುವುದೇನೆಂದರೆ ನಮ್ಮ ಅಧಿಕಾರಿಗಳು ತಮ್ಮನ್ನು ತಾವೇ ಕಬ್ಬಿಣದ ಸರಪಳಿಯಲ್ಲಿ ಬಂಧಿಸಿಕೊಂಡಿದ್ದಾರೆ. ಯಾವಾಗ ಅವರು ಈ ಸ್ವಯಂ ನಿರ್ಮಿತ ಸರಪಳಿಯನ್ನು ತುಂಡರಿಸುತ್ತಾರೋ, ಯಾವಾಗ ಅವರು ತಮ್ಮ ನಿಜವಾದ ಅಧಿಕಾರವನ್ನು ಅನುಷ್ಠಾನಕ್ಕೆ ತರಲಾರಂಭಿಸುತ್ತಾರೋ ಆಗ ನಾವು ಹೊಸ ಭಾರತವನ್ನು ನೋಡುತ್ತೇವೆ.
– ಡಿ. ರೂಪಾ, ಗೃಹ ರಕ್ಷಕ ದಳದ ಹೆಚ್ಚುವರಿ ಕಮಾಂಡೆಂಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Tobacco: ತಂಬಾಕು ಮೇಲಿನ ಚಿತ್ರ ಸಹಿತ ಎಚ್ಚರಿಕೆ ಗಾತ್ರ ಶೀಘ್ರ ಹಿರಿದು!
Coconut: ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆ 422 ರೂ. ಹೆಚ್ಚಳ: ಕೇಂದ್ರ ಸಂಪುಟ
laws: ಕಠಿಣ ಕಾಯ್ದೆ ಇರುವುದು ಸ್ತ್ರೀ ರಕ್ಷಣೆಗೆ, ದುರ್ಬಳಕೆ ಸಲ್ಲ: ಸುಪ್ರೀಂ ಕೋರ್ಟ್
Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ
Mangaluru: ಬಾಲಕಿ, ಮಹಿಳೆಯ ವೀಡಿಯೋ ಚಿತ್ರೀಕರಣ: ಆರೋಪಿಗೆ 5 ವರ್ಷಗಳ ಜೈಲು ಶಿಕ್ಷೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.