ಬಿಸಿಲ ಏಟಿಗೆ ಪರಿತಪಿಸಿದೆ ಜೀವಸಂಕುಲ
Team Udayavani, Apr 8, 2017, 7:24 AM IST
ನಗರೀಕರಣ, ವೈಜ್ಞಾನಿಕ-ತಾಂತ್ರಿಕ ಮುನ್ನಡೆ ಆವಿಷ್ಕಾರಗಳು ಅವಲಂಬನೆಯನ್ನು ಹೆಚ್ಚಿಸುವುದರ ಮೂಲಕ ಸಧ್ಯದ ಬದುಕನ್ನು ಸೋಮಾರಿಯನ್ನಾಗಿಸಿವೆ. ಇನ್ನೊಂದೆಡೆ ನೀರು, ಆಹಾರ, ಗಾಳಿ, ಖನಿಜ ಮತ್ತು ಇಂಧನಗಳ ಬೇಡಿಕೆ ಗಣನೀಯ ಹೆಚ್ಚಳ ಕಂಡಿದೆ. ಆದರೆ ಇವುಗಳನ್ನು ನವೀಕರಿಸುವ ಕೆಲಸವನ್ನು ಮಾತ್ರ ನಾವು ಮಾಡುತ್ತಿಲ್ಲ.
ಈ ವರ್ಷ ರಾಜ್ಯದ 27 ಜಿಲ್ಲೆಗಳಲ್ಲಿ ಬರಗಾಲ ಆವರಿಸಿದೆ. ಅಂದರೆ ಕರ್ನಾಟಕದ ಅಂದಾಜು ಶೇ.90ರಷ್ಟು ಪ್ರದೇಶ ಬರಪೀಡಿತವಾಗಿದೆ. ನಮ್ಮ ನೆರೆಯ ರಾಜ್ಯವಾದ ಮಹಾರಾಷ್ಟ್ರದಲ್ಲಿ ಶೇ.58ರಷ್ಟು ಮಾತ್ರ ಭೂಮಿ ಬರಕ್ಕೆ ತುತ್ತಾಗಿದೆ. ಈ ಹಿನ್ನೆಲೆಯಲ್ಲಿ ಅವಲೋಕಿಸಿದರೆ ದೇಶದಲ್ಲಿಯೇ ಅತಿ ಹೆಚ್ಚು ಬರಗಾಲಕ್ಕೆ ತುತ್ತಾದ ರಾಜ್ಯವೆಂದರೆ ಅದು ಕರ್ನಾಟಕವೇ. ಈಗ ರಾಜ್ಯದೆಲ್ಲೆಡೆ ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕ ಮತ್ತು ಹೈದ್ರಾಬಾದ್ ಕರ್ನಾಟಕ ಪ್ರದೇಶಗಳಲ್ಲಿ ವಿದ್ಯುತ್ ಉಳಿತಾಯ ಹೆಚ್ಚುತ್ತಿದೆ ಎಂಬ ವರದಿ ಇದೆ. ಕಾರಣ, ವಿದ್ಯುತ್ ಬಳಸಿ ನೀರೆತ್ತಲು ಕೊಳವೆಬಾವಿಗಳಲ್ಲಿ ನೀರೇ ಇಲ್ಲ. ಮಹಾರಾಷ್ಟ್ರದ ಲಾತೂರ್, ಮರಾಠವಾಡಗಳಲ್ಲಿನ ನೀರಿನ ಸಮಸ್ಯೆಯನ್ನು ಗಮನಿಸಿದರೆ ದೈನಂದಿನ ಬದುಕು ಬರ್ಬರವೆನಿಸುತ್ತದೆ. ರಾಜ್ಯದಲ್ಲಿ ಕೆಲ ತೆರೆದ ಬಾವಿಗಳಲ್ಲಿ ಅಂತರ್ಜಲ ತಳ ಕಂಡು ಮಹಿಳೆಯರು ಜೀವ ಭಯ ಪಕ್ಕಕ್ಕಿರಿಸಿ ಹಗ್ಗದ ಮೂಲಕ ಬಾವಿಗೆ ಇಳಿಯುವ ಚಿತ್ರಗಳು ನಮ್ಮನ್ನು ಈಗಲಾದರೂ ಜಾಗೃತರನ್ನಾಗಿ ಮಾಡದಿದ್ದರೆ ಭವಿಷ್ಯದ ಪರಿಸ್ಥಿತಿಯನ್ನು ಊಹಿಸುವುದು ಅಸಾಧ್ಯವೆಂಬಂತಾಗಿದೆ.
ಗ್ರಾಮೀಣ ಜನರು ತಮ್ಮ ವಿಶೇಷ ಕುರುಕಲು ಖಾದ್ಯಗಳಾದ ಹಪ್ಪಳ, ಸಂಡಿಗೆ, ಶ್ಯಾವಿಗೆ ಇತ್ಯಾದಿಗಳನ್ನು ಈ ಕಾಲದಲ್ಲಿಯೇ ತಯಾರು ಮಾಡಿ ಶೇಖರಿಸಿಕೊಳ್ಳುತ್ತಾರೆ. ಪ್ರಕೃತಿ ನಿಗದಿಪಡಿಸಿದ ಈ ಕಾಲಮಾನದಲ್ಲಿ ನಮ್ಮ ಭವಿಷ್ಯತ್ತಿನ ಸುಖಗಳಿಗೆ ಬೇಕಾದವುಗಳನ್ನು ತಾಳ್ಮೆಯಿಂದ ಸಂಗ್ರಹಿಸಿಕೊಳ್ಳುವ ಪ್ರಯತ್ನವನ್ನು ನಮ್ಮ ಜನಪದರು ಕ್ರಮಬದ್ಧವಾಗಿ ಮಾಡುತ್ತಿದ್ದರು. ಇದರಲ್ಲಿ ನಾವು ಬರವನ್ನು ಎದುರಿಸಲು ಕಲಿಯಬೇಕಾದ ಪಾಠವೊಂದಿದೆ. ಅದು, ನೀರು ಮಳೆಯ ರೂಪದಲ್ಲಿ ಬೇಕಾದಷ್ಟು ಲಭ್ಯವಿರುವ ಸಮಯದಲ್ಲಿ ಅದನ್ನು ಭವಿಷ್ಯತ್ತಿಗೆ ಬೇಕಾಗಿ ಕಾಯ್ದಿಟ್ಟುಕೊಳ್ಳಬೇಕು ಎಂಬುದು. ಅಂದರೆ, ಮಳೆಗಾಲದಲ್ಲಿ ಎಷ್ಟು ಸಾಧ್ಯವೋ ಅಷ್ಟು ಅಂತರ್ಜಲ ಮರುಪೂರಣ, ಮಳೆಕೊಯ್ಲು ನಡೆಸಬೇಕು.
ಪರಿಸರದ ಮೇಲೆ ಹೆಚ್ಚಿದೆ ಒತ್ತಡ
ಇಂದಿನ ಜನಸಂಖ್ಯಾ ಹೆಚ್ಚಳ, ಮಾನವನ ಅನಿಯಂತ್ರಿತ ಆವಶ್ಯಕತೆ ಮತ್ತು ಆಶೋತ್ತರಗಳು, ವಿವಿಧ ರೀತಿಯ ತಾಂತ್ರಿಕ ಆವಿಷ್ಕಾರಗಳು ನಮ್ಮ ಸದ್ಯದ ಬದುಕನ್ನು ಇನ್ನು ಒತ್ತಡಮಯವಾಗಿಸಿವೆ. ಪರರ ಮೇಲಿನ ಅವಲಂಬನೆಯನ್ನು ಹೆಚ್ಚಿಸುವುದರ ಮೂಲಕ ಸದ್ಯದ ಬದುಕನ್ನು ಸೋಮಾರಿಯನ್ನಾಗಿಸಿದೆ. ಇನ್ನೊಂದೆಡೆ ನೀರು, ಆಹಾರ, ಗಾಳಿ, ಖನಿಜ ಮತ್ತು ಇಂಧನಗಳ ಬೇಡಿಕೆ ಗಣನೀಯ ಹೆಚ್ಚಳ ಕಂಡಿದೆ. ಆದರೆ ಇವುಗಳನ್ನು ನವೀಕರಿಸುವ ಕೆಲಸವನ್ನು ಮಾತ್ರ ನಾವು ಮಾಡುತ್ತಿಲ್ಲ. ನೈಸರ್ಗಿಕ ಸಂಪನ್ಮೂಲಗಳು ನಮ್ಮ ಕೊಳ್ಳಬಾಕತನದಿಂದ ಸೊರಗುತ್ತಿವೆ. ಜಾಗತಿಕ ತಾಪಮಾನದಲ್ಲಿ ಹಿಂದೆಂದೂ ಕಾಣದ ವೈಪರೀತ್ಯ ಉಂಟಾಗುತ್ತಿದ್ದು, ಜೀವ ಜಗತ್ತಿಗೆ ಧಗೆಯಿಂದ ಕುತ್ತುಂಟಾಗುವ ಭೀತಿ ತಲೆದೋರಿದೆ. ಹವಾಮಾನದ ಬದಲಾವಣೆಗಳಿಗೆ ಹೊಂದಿಕೊಳ್ಳಲಾಗದೆ ನಶಿಸಿ ಹೋದ ಅದೆಷ್ಟೋ ಜೀವ ಸಂಕುಲಗಳ ಉದಾಹರಣೆ ನಮ್ಮೆದುರು ಇದೆ. ಒಂದು ಅಂದಾಜಿನ ಪ್ರಕಾರ ನೀರಿನ ಕೊರತೆಯಿಂದ 2030ರ ವೇಳೆಗೆ ಭೂಮಿ ಮೇಲಿನ ಕಾಲು ಭಾಗದಷ್ಟು ಜೀವ ಜಂತುಗಳು ಕಣ್ಮರೆಯ ದಾರಿ ಹಿಡಿಯಬಹುದು. ಮನುಕುಲವೂ ಮುಂದೊಂದು ದಿನ ಆ ದಾರಿ ಹಿಡಿದೀತೇ ಎಂದು ಚಿಂತಿಸಬೇಕಾದ ಕಾಲ ಇದು.
ಭಾರತದಲ್ಲೀಗ 36 ಕೋಟಿ ಜನರು ಭೀಕರ ಬರಗಾಲದ ಕೆನ್ನಾಲಿಗೆಗೆ ಸಿಕ್ಕು ತೀವ್ರ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ನಮ್ಮ ನಿರ್ಲಕ್ಷ್ಯದ ಪರಮಾವಧಿ ಎಷ್ಟು ಎಂದರೆ, ಬಾಯಾರಿಕೆಯಾದಾಗ ಮಾತ್ರ ಬಾವಿ ತೋಡುವಂತೆ ಸರಕಾರದಿಂದ ಕೆಲವು ತುರ್ತು ಆದೇಶಗಳನ್ನು ಹೊರಡಿಸಲಾಗುತ್ತದೆ. ಅಕ್ಕಪಕ್ಕದ ರಾಜ್ಯಗಳು ಅನುಸರಿಸುವ ಕೆಲವು ಸಾರ್ವಜನಿಕ ನೀತಿಗಳನ್ನು ಈ ಬೇಗುದಿಯ ಕಾಲದಲ್ಲಿ ಜಾರಿಗೆ ತಂದರೆ ಒಳಿತಾಗುತ್ತದೆ. ಮಹಾರಾಷ್ಟ್ರದಲ್ಲೀಗ ಹೊಸ ಸಕ್ಕರೆ ಕಾರ್ಖಾನೆ ತೆರೆಯಲು ಅನುಮತಿಯಿಲ್ಲ. ಲಾತೂರಿನಲ್ಲಿ ಗೃಹ ಬಳಕೆಗಲ್ಲದೇ ಮತ್ತಾವುದಕ್ಕೂ ನೀರನ್ನು ಬಳಸುವಂತಿಲ್ಲ ಹಾಗೂ ಮಳೆನೀರು ಕೊಯ್ಲನ್ನು ಆ ಭಾಗದಲ್ಲಿ ಕಡ್ಡಾಯ ಮಾಡಲಾಗಿದೆ.
ರಾಜ್ಯದೆಲ್ಲೆಡೆ ಕೊಳವೆಬಾವಿ ತೋಡಿಸಿಕೊಳ್ಳಲು ಕಠಿಣ ಕಾನೂನಿನ ನಿಯಂತ್ರಣವಿದೆ. ಈ ಕಾಯಿದೆ ಜಾರಿಗೆ ಮುನ್ನ ಕೇವಲ 5 ಇರಬೇಕಾದ ಜಾಗದಲ್ಲಿ 125 ಕೊಳವೆಬಾವಿಗಳಿದ್ದವು. ಒಟ್ಟು ನಮ್ಮ ದೇಶದಲ್ಲೀಗ ಸುಮಾರು 3 ಕೋಟಿಗೂ ಹೆಚ್ಚಿನ ಕೊಳವೆ ಬಾವಿಗಳನ್ನು ಕೊರೆಸಲಾಗಿದೆ. ಇವುಗಳಲ್ಲಿ ಶೇ.60ರಷ್ಟು ಕೊಳವೆ ಬಾವಿಗಳು ನಾವು ಈ ದೇಶದಲ್ಲಿ ಜಾಗತೀಕರಣವನ್ನು ಒಪ್ಪಿಕೊಂಡ ಮೇಲೆ ಕೊರೆಯಲಾದದ್ದು ಎಂಬುದೇ ಇಂದಿನ ವಿಪರ್ಯಾಸ. ಸಾವಿರಾರು ವರ್ಷಗಳಿಂದ ಕಾಪಾಡಿಕೊಂಡು ಬಂದಿದ್ದ ನಮ್ಮ ಜಲಮೂಲಗಳನ್ನು ಕೇವಲ ಎರಡೂವರೆ ದಶಕಗಳಲ್ಲಿ ಖಾಲಿ ಮಾಡಿಕೊಂಡಿರುವ ಕೀರ್ತಿ ನಮ್ಮದು.
ಸರಕಾರದ ಅತಿಯಾದ ಹಸ್ತಕ್ಷೇಪ
ಕಳೆದ ನಾಲ್ಕು ದಶಕದಲ್ಲಿ ನಮ್ಮ ಗ್ರಾಮೀಣ ಜನರ ಬದುಕಿನ ಎಲ್ಲ ರಂಗಗಳಲ್ಲಿ ಸರಕಾರ ಅತಿಯಾದ ಹಸ್ತಕ್ಷೇಪ ಮಾಡುವುದರ ಮೂಲಕ ಆ ವಲಯದ ಜನರಲ್ಲಿ ಅಭದ್ರತೆ, ಅತಂತ್ರತೆ, ಅಶಿಸ್ತು ಮತ್ತು ಸೋಮಾರಿತನವನ್ನು ಬೆಳೆಸಿದೆ ಎಂದರೆ ತಪ್ಪಲ್ಲ. ಸರಕಾರ ಎಲ್ಲವನ್ನೂ ತಾನೇ ಮಾಡುವ ಉಮೇದಿನಲ್ಲಿ ಅನ್ನದಾತರ ಕೈಕಟ್ಟಿ ಹಾಕಿ, ತಾನು ಮಾಡಬೇಕಾದ್ದನ್ನು ಸರಿಯಾಗಿ ನಿರ್ವಹಿಸದೇ ದಿನಗಳೆದಿದೆ.
ರೈತರನ್ನು ಕೃಷಿ ನಿರ್ವಹಣೆಯ ಮೂಲ ಪರಿಕರಗಳಾದ ಬೀಜ, ಗೊಬ್ಬರ, ಸಲಕರಣೆಗಳು, ತಂತ್ರಜ್ಞಾನ, ನೀರಾವರಿ ಎಲ್ಲದರಲ್ಲೂ ಪರಾವಲಂಬಿಗಳನ್ನಾಗಿಸಿದ ಮೇಲೆ ಸರಕಾರ ಮಾರುಕಟ್ಟೆಯ ಬೆಲೆಯ ಅಸ್ಥಿರತೆಯನ್ನು ಹಾಗೆಯೇ ಮುಂದುವರಿಯಗೊಟ್ಟಿದೆ. ಇದರೊಂದಿಗೆ ಅಂತರ್ಜಲದ ಉಪಯೋಗ ಹೇಳಿಕೊಟ್ಟು ಅದರ ಮರುಪೂರಣಕ್ಕೆ ಕೈಹಾಕದೇ ಅನ್ನದಾತನನ್ನು ಅಕ್ಷರಶಃ ನೀರಿಲ್ಲದ ಬಾವಿಗೆ ದೂಡಿದೆ. ಹಿಂದೆ ಜೀವನಾಡಿಗಳಂತೆ ಜಲಮೂಲಗಳ ಸಮತೋಲನಕ್ಕೆ ಕಾರಣವಾಗಿದ್ದ ಕೆರೆಗಳು ಗ್ರಾಮ ಸಮುದಾಯದ ಕೈಜಾರಿ ಅತ್ತ ಸರಕಾರದ ಜವಾಬ್ದಾರಿಯುತ ನಿವರ್ಹಣೆಯೂ ಇಲ್ಲದೆ ನಾಶವಾಗಿವೆ. ಗೋಮಾಳಗಳು ರಿಯಲ್ ಎಸ್ಟೇಟ್‌ಗಳಾಗಿ ಬದಲಾಗಿರುವುದು ಗುಟ್ಟಾಗಿ ಉಳಿದಿಲ್ಲ.
ಭೂಮಿಯ ಮೇಲಿರುವ ಒಟ್ಟು ನೀರಿನಲ್ಲಿ ಶೇ.2.5ರಷ್ಟು ಮಾತ್ರ ಶುದ್ಧ ನೀರು. ಪ್ರತಿವರ್ಷದ ಬೇಸಿಗೆಗಿಂತ ಈ ವರ್ಷದ ಧಗೆಯು ಹಾಹಾಕಾರ ಹೆಚ್ಚಿಸಿದೆ. ಇದನ್ನು ನಾವು ಹೇಗೋ ದಾಟಿದರೆ ಸಾಕು, ಪ್ರಸಕ್ತ ವರ್ಷ ಉತ್ತಮ ಮುಂಗಾರು ಕಾದಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಈ ವರ್ಷದ ಮಳೆಯು ಚೆನ್ನಾಗಿ ಆಗಬೇಕು, ಅದು ಉಳುಮೆಗೆ ಸಹಕಾರಿಯಾಗಿ ಸಕಾಲಕ್ಕೆ ಆಗುತ್ತದೆ ಎಂಬ ನಂಬಿಕೆಯಲ್ಲಿಯೇ ರೈತನು ಮುಂಗಾರಿನ ಉಳುಮೆಯ ತಯಾರಿ ಮಾಡಿಕೊಂಡಿದ್ದಾನೆ. ಆದರೆ ಅನ್ನದಾತನು ಮಿಕ್ಕಿದ್ದೆಲ್ಲವನ್ನು ಪಡೆದುಕೊಳ್ಳಲು ಸರಕಾರವನ್ನು ಅವಲಂಬಿಸಬೇಕಾದ ಅನಿವಾರ್ಯತೆಯನ್ನು ತಂದಿಟ್ಟಿರುವ ವ್ಯವಸ್ಥೆಯು ಮುಂದಿನದನ್ನು ಹೇಗೆ ನಿಭಾಯಿಸುತ್ತದೆ ಎಂಬುದನ್ನು ನಾವೀಗ ಕಾದುನೋಡಬೇಕಾಗಿದೆ.
ಮಂಜುನಾಥ ಉಲುವತ್ತಿ ಶೆಟ್ಟರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಛೋಟಾ ರಾಜನ್ ಗ್ಯಾಂಗ್‌ನ ಸದಸ್ಯ ಅರೆಸ್ಟ್
Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್ ಜಾಮೀನ ಮಂಜೂರು
Vijay Hazare; ವಾಸುಕಿ,ಗೋಪಾಲ್ ಬೊಂಬಾಟ್ ಬೌಲಿಂಗ್; ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ
ಗದಗ: ಮಾವು ಬಂಪರ್ ಬೆಳೆ ನಿರೀಕ್ಷೆ- ಬೆಳೆಗಾರರಿಗೆ ಸಂತಸ
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.