ಮತದಾನದ ಪರಿಣಾಮಕ್ಕೂ ನೇರ ಹೊಣೆಗಾರ ಮತದಾರರೇ ಅಲ್ಲವೇ?
Team Udayavani, Oct 12, 2018, 6:00 AM IST
ಹಣ ಮತ್ತು ಹೆಂಡದ ಆಮಿಷದ ಮೂಲಕ ಮತಗಿಟ್ಟಿಸುವ ರೀತಿಗೆ ರಾಜಕಾರಣಿಗಳನ್ನು ಹಳಿದು ಪ್ರಯೋಜನವಿಲ್ಲ. ಯಾಕೆಂದರೆ ಸ್ವತಃ ಮತದಾರನೇ ಅವನ್ನೆಲ್ಲ ಪಡೆದುಕೊಂಡು ಏನನ್ನೂ ಯೋಚಿಸದೆ ತನ್ನ ಮತವನ್ನು ಚಲಾಯಿಸುತ್ತಾನೆ. ಇದಕ್ಕೆಲ್ಲ ಹೊಣೆಗಾರ ಮತದಾರನೇ. ಮತದಾರರು ಯಾವುದು ಹಾಲು ಯಾವುದು ಹಾಲಾಹಲ ಎಂದು ತಿಳಿಯದಷ್ಟು ದಡ್ಡರಲ್ಲ. ಆದರೂ ಆಮಿಷಕ್ಕೆ ಕೈಚಾಚಿ ಅಸಮರ್ಪಕ ಅಭ್ಯರ್ಥಿಯನ್ನೂ ಆಯ್ಕೆ ಮಾಡುವುದು ಎಂದಿಗೂ ಕ್ಷಮಾರ್ಹವಲ್ಲ.
ಪ್ರಜೆಗಳೇ ಪ್ರಭುಗಳು ಎಂಬ ಧ್ಯೇಯವನ್ನು ಹೊಂದಿದ ನಮ್ಮ ಆಡಳಿತ ವ್ಯವಸ್ಥೆಯಲ್ಲಿ ನಿಜವಾಗಿಯೂ ಪ್ರಜೆಗಳು ಪ್ರಭುಗಳೇ ಎಂದು ಕೇಳಿದರೆ ಪ್ರಶ್ನೆಯೇ ಹಾಸ್ಯಾಸ್ಪದವಾದೀತು ಅಥವಾ ಅದಕ್ಕೆ ಕೊಡುವ ಉತ್ತರವೂ ಹಾಸ್ಯಾಸ್ಪದವೆನಿಸೀತು. ಭಾರತೀಯನೊಬ್ಬ 18ನೇ ವಯಸ್ಸಿಗೆ ಕಾಲಿಡುತ್ತಿದ್ದಂತೆ ಮತದಾನದ ಅವಕಾಶ ಪಡೆಯುತ್ತಾನೆ. ಅಂದರೆ ಆತ ಸಮರ್ಥ ನಾಯಕನನ್ನು ಆರಿಸುವ ನಿರ್ಧಾರವನ್ನು ತೆಗೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದ್ದಾನೆ ಎಂದರ್ಥ. ಆದರೆ ಆಡಳಿತಾಕಾಂಕ್ಷಿಯಾಗಿ ಚುನಾವಣೆಗೆ ನಿಂತ ಅಭ್ಯರ್ಥಿ ಎಷ್ಟರಮಟ್ಟಿಗೆ ಸಮರ್ಥ ಎಂದು ಪ್ರತಿಯೊಬ್ಬ ಮತದಾರ ಇಂದು ಚಿಂತಿಸಬೇಕಾದ ವಿಷಯ. ಯಾಕೆಂದರೆ ಆ ಅಭ್ಯರ್ಥಿಗೆ ಯಾವುದೇ ನಿರ್ದಿಷ್ಟವಾದ ಆಡಳಿತಾತ್ಮಕವಾದ, ಸಾಂವಿಧಾನಿಕವಾದ ಶೈಕ್ಷಣಿಕ ಅರ್ಹತೆಯ ಅಗತ್ಯ ಇಲ್ಲ. ಇದು ಪ್ರಜಾಪ್ರಭುತ್ವ.
ಇದೆಲ್ಲ ಚಿಂತಿಸಬೇಕಾದ ವಿಷಯವೇ ಅಲ್ಲ. ರಾಜಕೀಯ ಪಕ್ಷಗಳು ಪ್ರಣಾಳಿಕೆಯನ್ನು ನಮ್ಮ ಕೈಗಿಡುತ್ತಾರೆ, ಪ್ರಚಾರ ಭಾಷಣಗಳಲ್ಲಿ ಎಲ್ಲವನ್ನೂ ತಿಳಿಸುತ್ತಾರೆ. ಅಲ್ಲದೇ ಈಗಂತೂ ವಾಟ್ಸ್‌ಆ್ಯಪ್, ಫೇಸ್‌ಬುಕ್ ಮೊದಲಾದ ಸಾಮಾಜಿಕ ಮಾಧ್ಯಮಗಳ ಮೂಲಕ ಎಲ್ಲಾ ಸಂಗತಿಗಳು ಜನರನ್ನು ಸೇರುತ್ತವೆ. ಹಾಗಾಗಿ ಮತದಾರ ಸ್ಪಷ್ಟವಾಗಿ ಯಾರಿಗೆ ಮತ ನೀಡಬೇಕೆಂಬುದನ್ನು ನಿರ್ಧರಿಸಬಹುದು ಎಂದು ಯೋಚಿಸುವವರು ಹಲವರಿದ್ದಾರೆ. ಅದೇ ಇನ್ನೊಂದೆಡೆ ರಾಜಕಾರಣಿಯು ಆಡಳಿತಕ್ಕೆ ಸಂಬಂಧಪಟ್ಟ ಶಿಕ್ಷಣವನ್ನು ಹೊಂದಿರಬೇಕು ಎಂಬ ಮಾತುಗಳೂ ಕೇಳಿ ಬರುತ್ತವೆ.
ಅತ್ಯುನ್ನತ ಶಿಕ್ಷಣ ಪಡೆದ ಮತದಾರರೂ ಮಾತೃ ಭಾಷೆಯಲ್ಲಿರುವ ಪತ್ರಗಳನ್ನೂ ಓದಲು ಬಾರದವನಿಗೆ ಓಟು ಹಾಕುವ ಪರಿಸ್ಥಿತಿ ನಮ್ಮಲ್ಲಿದೆ. ಇದು ಗ್ರಾಮ ಪಂಚಾಯತ್ ಮಟ್ಟದಿಂದಲೇ ಆರಂಭವಾಗುತ್ತದೆ. ಇದಕ್ಕೆ ಕಾರಣವನ್ನು ಹುಡುಕುತ್ತ ಹೋದರೆ ಅದರ ಮೂಲ ಅಡಗಿರುವುದು ಮತದಾರರಲ್ಲೇ. ಕೆಲವು ಕಡೆ ಯಾವುದೋ ಒಂದು ಪಕ್ಷಕ್ಕೆ ಮತಹಾಕಬೇಕೆಂಬುದು ತಮ್ಮ ಕುಟುಂಬದ ಸತ್ಸಂಪ್ರದಾಯವೋ ಎಂಬಂತೆ ಅಭ್ಯರ್ಥಿಯ ಅರ್ಹತೆಯನ್ನು ಪರಿಗಣಿಸದೆ ಆ ಪಕ್ಷಕ್ಕೆ ಮಾತ್ರ ಮತ ಹಾಕುವ ಪರಂಪರೆ ಇಂದಿಗೂ ಇದೆ. ಆದರೆ ಮತದಾರ ದೇಶದಲ್ಲಿ ಉತ್ತಮ ಆಡಳಿತವನ್ನು ಕಾಣಬೇಕಾದರೆ ಇಂತಹ ಅಸಂಬದ್ಧ ನಂಬಿಕೆಗಳಿಂದ ಹೊರಬರಲೇ ಬೇಕು.
ಹಣದ ಮತ್ತು ಹೆಂಡದ ಆಮಿಷಕ್ಕೆ ಒಳಗಾಗಿ ಅಮೂಲ್ಯವಾದ ಮತವನ್ನು ಅಸಮರ್ಥನಿಗೆ ನೀಡುವ ಮತದಾರರ ಸಂಖ್ಯೆ ಇಂದು ಹೆಚ್ಚಿದೆ; ಹೆಚ್ಚುತ್ತಲೂ ಇದೆ. ಇದು ನಮ್ಮ ಪ್ರಜಾತಂತ್ರದ ದೌರ್ಬಲ್ಯವೇ ಸರಿ. ಇನ್ನೂ ಆಘಾತಕಾರಿ ಬೆಳವಣಿಗೆಯೆಂದರೆ ರಾಜಕೀಯದಲ್ಲಿ ಸೇರಿಕೊಂಡಿರುವ ಧರ್ಮ ರಾಜಕಾರಣ. ನಮ್ಮದು ಜ್ಯಾತ್ಯತೀತ ರಾಷ್ಟ್ರವೆಂದು ಹೇಳಿಕೊಳ್ಳುತ್ತಲೇ ಜಾತಿ-ಧರ್ಮಗಳನ್ನೇ ಮೂಲ ದಾಳವಾಗಿಸಿಕೊಂಡು ಮತ ಕೇಳುವ ಪದ್ಧತಿ ವ್ಯವಸ್ಥಿತವಾಗಿ ಜಾರಿಯಲ್ಲಿದೆ. ಇನ್ನು ಪಕ್ಷದ ಕಾರ್ಯಕರ್ತರೂ ಕೂಡ ತಾವು ಕಾರ್ಯಕರ್ತರಾಗಿರುವ ಪಕ್ಷಕ್ಕೆ ನಿಷ್ಠೆಯನ್ನು ತೋರಿಸಿದಷ್ಟೇ ಮತದಾರನ ಪರವಾಗಿಯೂ ಯೋಚಿಸಬೇಕು. ಯಾಕೆಂದರೆ ಪಕ್ಷದ ಕಾರ್ಯಕರ್ತರೆಲ್ಲರೂ ಮತದಾರರೇ. ಇವತ್ತಿಗೂ ತಾವು ಮತನೀಡುವ ಅಭ್ಯರ್ಥಿಯ ಕೂಲಂಕಷ ಪರಿಚಯ ಅದೆಷ್ಟೋ ಮತದಾರರಿಗೆ ಇರುವುದಿಲ್ಲ. ಮತದಾರರಿಗಷ್ಟೇ ಅಲ್ಲ ಆ ಪಕ್ಷದ ಕಾರ್ಯಕರ್ತನಿಗೂ ತಿಳಿಯದಿರುವಂತಹ ಪರಿಸ್ಥಿತಿಯೂ ಇದೆ. ಯಾಕೆಂದರೆ ಆ ಕಾರ್ಯಕರ್ತ ಚುನಾವಣಾ ಸಂದರ್ಭಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಾನೆ. ನಂತರ ಪಕ್ಷಕ್ಕೂ ಆತನಿಗೂ ಯಾವುದೇ ಸಂಬಂಧವಿರುವುದಿಲ್ಲ. ಅಂತೆಯೇ ಒಮ್ಮೆ ಮತ ಚಲಾಯಿಸಿಯಾದ ಮೇಲೆ ರಾಜಕಾರಣಿಗಳೂ ಪಕ್ಷದ ಕಾರ್ಯಕರ್ತರೂ ದೂರ, ಮತದಾರರಂತೂ ಇನ್ನೂ ದೂರ.
ಎಲ್ಲವೂ ಬದಲಾಗಬೇಕಾದ ಅನಿವಾರ್ಯತೆ ಇದೆ. ರಾಜಕೀಯ ಪಕ್ಷಗಳ ಮತ್ತು ಅದರ ಎಲ್ಲ ಸದಸ್ಯರ ಅಲ್ಲದೆ ತಮ್ಮ ತಮ್ಮ ಕ್ಷೇತ್ರದ ಅಭ್ಯರ್ಥಿಯ ಸಂಪೂರ್ಣವಾದ ಪರಿಚಯ ಮತದಾರ ಹೊಂದಿರಬೇಕು. ರಾಜಕಾರಣಿ ಹಾಗೂ ಪಕ್ಷದ ಕಾರ್ಯಕರ್ತರ ನಡುವೆ ಒಂದು ಪಾರದರ್ಶಕ ಸಂಬಂಧ ಏರ್ಪಡಬೇಕಾದ ಅಗತ್ಯವೂ ಇದೆ. ಅಲ್ಲದೆ ಈ ಸಂಬಂಧ ಚುನಾವಣೆಯ ನಂತರವೂ ಮುಂದುವರಿಯಬೇಕು. ಯಾವುದೇ ಪಕ್ಷವಿದ್ದರೂ ಅದೊಂದು ಕುಟುಂಬ ಇದ್ದಂತೆ. ಕುಟುಂಬವೊಂದರಲ್ಲಿ ಒಬ್ಬ ಮಾಡುವ ತಪ್ಪಿನಿಂದಾಗಿ ಆ ಇಡೀ ಕುಟುಂಬಕ್ಕೇ ಹೇಗೆ ಕಳಂಕ ತಗುಲುತ್ತದೆಯೋ ಹಾಗೇ ಪಕ್ಷಗಳಿಗೂ ಇದು ಅನ್ವಯಿಸುತ್ತದೆ. ಈ ಯುಗದಲ್ಲಿ ಪರಿಶುದ್ಧ ರಾಜಕಾರಣಿಗಳನ್ನು ದುರ್ಬೀನು ಹಿಡಿದು ಹುಡುಕಬೇಕಾದೀತು. ಆದರೆ ಪಕ್ಷಗಳು ಕೆಲವೊಂದು ಸಂಗತಿಗಳಲ್ಲಿ ಬದಲಾವಣೆ ಮಾಡಿಕೊಂಡಾಗ ಮತದಾರ ಉತ್ತಮ ಆಡಳಿತಗಾರರನ್ನು ಆಯ್ಕೆ ಮಾಡುವಲ್ಲಿ ಯಶಸ್ವಿಯಾಗಬಹುದು.
ತಮ್ಮ ಕ್ಷೇತ್ರದ ಅಭ್ಯರ್ಥಿಯ ಶೈಕ್ಷಣಿಕ ಅರ್ಹತೆಯನ್ನು ಮತ್ತು ರಾಜಕೀಯ ಅನುಭವ-ಸಾಮರ್ಥ್ಯವನ್ನು ಪ್ರದರ್ಶಿಸುವ ಕರಪತ್ರಗಳು ಮತದಾರನಿಗೆ ತಲುಪಬೇಕು. ಅಲ್ಲದೆ ಅವರು ನೈತಿಕವಾಗಿಯೂ ಎಷ್ಟು ನಿಷ್ಠರು ಎಂಬುದನ್ನೂ ತಿಳಿಸಬೇಕು. ಇವೆಲ್ಲವೂ ಆರ್.ಟಿ.ಐನಲ್ಲಿ ದಾಖಲಾಗಿರಬೇಕು. ಇವೆಲ್ಲವೂ ಪಾರದರ್ಶಕವಾಗಿರಬೇಕು. ಈ ದಾಖಲೆಯಲ್ಲಿ ಎಷ್ಟರ ಮಟ್ಟಿಗೆ ಸತ್ಯವಿರುತ್ತದೆಂಬ ಪ್ರಶ್ನೆ ಮತ್ತೆ ಉತ್ತರವಿಲ್ಲದೆ ಕಾಡುತ್ತದೆ.
ಚುನಾವಣೆಯ ಮುಂಚೆಯೇ ಪಕ್ಷಗಳು ಮುಖ್ಯಮಂತ್ರಿ ಅಭ್ಯರ್ಥಿ ಯಾರೆಂಬುದನ್ನು ಮತದಾರನಿಗೆ ಸ್ಪಷ್ಟವಾಗಿ ತಿಳಿಸಬೇಕು. ಪ್ರತಿಯೊಂದು ಪಕ್ಷದಲ್ಲೂ ಉತ್ತಮ ಆಡಳಿತಗಾರ ಇದ್ದೇ ಇರುತ್ತಾನೆ. ಅಂತಹ ವ್ಯಕ್ತಿಯನ್ನೇ ಪಕ್ಷದವರೇ ಆರಿಸಿ ಮೇಲ್ಕಂಡಂತೆ ಅವರ ಸಂಪೂರ್ಣವಾದ ಮಾಹಿತಿಯನ್ನು ಜನರೆದುರು ತೆರೆದಿಡಬೇಕು.
ಕಾರ್ಯಕರ್ತರು ಕೇವಲ ದುಡ್ಡಿಗೋಸ್ಕರ ಕೆಲಸ ಮಾಡದೆ ಪ್ರಮಾಣಿಕವಾಗಿ ಮತದಾರನಿಗೆ ನ್ಯಾಯ ಒದಗಿಸುವ ಕೆಲಸ ಮಾಡಬೇಕು. ಇವರದ್ದು ಪಕ್ಷದ ಪ್ರಣಾಳಿಕೆಯನ್ನು ಹಿಡಿದು ಮನೆ ಮನೆಗೆ ತೆರಳಿ ಮನವೊಲಿಸುವ ಕಾರ್ಯ ಮೂಲ ಕೆಲಸವಾಗಿದ್ದರೂ ಇವರನ್ನೇ ನಂಬಿ ಜನ ಮತ ಹಾಕುವುದೂ ಇದೆ. ಆದರೆ ಚುನಾವಣೆ ಮುಗಿಯುತ್ತಿದ್ದಂತೆ ಇವರೆಲ್ಲ ಮಾಯವಾಗಿಬಿಡುತ್ತಾರೆ; ಎಲ್ಲವನ್ನೂ ಮರೆತೂ ಬಿಡುತ್ತಾರೆ, ಹಾಗಾಗಬಾರದು. ಜನರ ಕುಂದುಕೊರತೆಯನ್ನು ಗೆದ್ದ ಪಕ್ಷದ ಕಾರ್ಯಕರ್ತರು ಪಕ್ಷಕ್ಕೂ ಪಕ್ಷದಿಂದ ಆಡಳಿತ ವ್ಯವಸ್ಥೆಗೂ ತಲುಪಿಸಿ ಅದರ ನಿವಾರಣೆಗೆ ಮುಂದಾಗಬೇಕು.
ಅಬ್ಬರದ ಪ್ರಚಾರಗಳು ಪಕ್ಷ-ಪ್ರತಿಪಕ್ಷಗಳ ಕೆಸರೆರಚಾಟಗಳು ಯಾವತ್ತೋ ಹಳಸಿದ ಸಂಗತಿಗಳು. ಅವನ್ನೇ ಪದೇಪದೇ ಚುನಾವಣೆ ಹತ್ತಿರಕ್ಕೆ ಬಂದಾಗ ಬೀದಿಬೀದಿಯಲ್ಲಿ ಎಸೆಯುವುದರಿಂದ ಪ್ರಯೋಜನವಿಲ್ಲ. ಗ್ರಾಮ ಪಂಚಾಯ್ತಿಯಿಂದಲೇ ಪ್ರತಿ ಊರಿನ ಅಭಿವೃದ್ಧಿಗೆ ಬೇಕಾದ ಅಂಶಗಳ ಪಟ್ಟಿಮಾಡುವುದರ ಜೊತೆಗೆ ಮುಂದೆ ಆಡಳಿತಾವಧಿಯಲ್ಲಿ ಅವುಗಳನ್ನು ಪೂರೈಸುವ ಯೋಜನೆಯ ಸಂಪೂರ್ಣ ಚಿತ್ರಣವನ್ನು ಪ್ರತಿಯೊಂದು ಪಕ್ಷವೂ ಮಾಡಿ ಮತದಾರರ ಮುಂದಿಡಬೇಕು. ಅದರ ಸತ್ಯಾಸತ್ಯತೆಗಳನ್ನು ಪರಿಶೀಲಿಸಬೇಕಾದುದು ಮತದಾರನ ಹೊಣೆಗಾರಿಕೆ ಯಾಗಿರುತ್ತದೆ. ಚುನಾವಣೆ ಮತ್ತು ಆಡಳಿತವೆಂಬುದು ದುಡ್ಡು ಹಾಕಿ ದುಪ್ಪಟ್ಟು ದುಡ್ಡು ಮಾಡುವ ವಾಣಿಜ್ಯ ವ್ಯವಹಾರವಾಗಬಾರದು. ಪಕ್ಷದ ಸಂಪತ್ತು ಮತ್ತು ಖರ್ಚುಗಳನ್ನೂ ಮತದಾರರ ಮುಂದಿಡಬೇಕಾದ ಅಗತ್ಯವಿದೆ.
ಹಣ ಮತ್ತು ಹೆಂv ಅಥವಾ ಇನ್ನಿತರ ವಸ್ತುಗಳನ್ನು ಮತದಾರರಿಗೆ ನೀಡುವ ಮೂಲಕ ಮತಗಿಟ್ಟಿಸುವ ರೀತಿಗೆ ರಾಜಕಾರಣಿಗಳನ್ನು ಹಳಿದು ಪ್ರಯೋಜನವಿಲ್ಲ. ಯಾಕೆಂದರೆ ಸ್ವತಃ ಮತದಾರನೇ ಅವನ್ನೆಲ್ಲ ಪಡೆದುಕೊಂಡು ಏನನ್ನೂ ಯೋಚಿಸದೆ ತನ್ನ ಮತವನ್ನು ಚಲಾಯಿಸುತ್ತಾನೆ. ಇದಕ್ಕೆಲ್ಲ ಹೊಣೆಗಾರ ಮತದಾರನೇ. ಮತದಾರರು ಯಾವುದು ಹಾಲು ಯಾವುದು ಹಾಲಾಹಲ ಎಂದು ತಿಳಿಯದಷ್ಟು ದಡ್ಡರಲ್ಲ. ಆದರೂ ಆಮಿಷಕ್ಕೆ ಕೈಚಾಚಿ ಅಸಮರ್ಪಕ ಅಭ್ಯರ್ಥಿಯನ್ನೂ ಆಯ್ಕೆ ಮಾಡುವುದು ಎಂದಿಗೂ ಕ್ಷಮಾರ್ಹವಲ್ಲ.
ಏನೇ ಇದ್ದರೂ ಅದರ ಪರಿಣಾಮವನ್ನು ಅನುಭವಿಸುವವರು ಮತದಾರರೇ. ಒಂದು ಓಟನ್ನು ಯೋಚಿಸದೆ ಒತ್ತಿದರೆ ಮುಂದೆ ಅದರಿಂದಾಗುವ ತೊಂದರೆಗೆ ಸಿಲುಕುವವರು ಮತದಾರರೇ. ಮತ ಹಾಕುವುದನ್ನು ಮತದಾನ ಎನ್ನಲಾಗಿದೆ. ಮತ ನೀಡುವುದೂ ಒಂದು ದಾನವೇ. ದಾನ ಮಾಡುವವನಿಗೆ ಪುಣ್ಯ ಲಭಿಸುತ್ತದಂತೆ. ಅದು ಯಾವಾಗ ಆ ದಾನ ಸತ್ಕಾರ್ಯಗಳಿಗೆ ಬಳಕೆಯಾದಾಗ ಮಾತ್ರ. ಅಂದರೆ ದಾನದಿಂದಾಗುವ ಪರಿಣಾಮವೂ ದಾನಮಾಡುವವನಿಗೇ ಸೇರಿದ್ದು. ಉತ್ತಮ ಆಡಳಿತ ಸಿಗಬೇಕೆಂದರೆ ನಮ್ಮ ಮತದಾನ ಸಮರ್ಪಕ ವಾಗಿರಬೇಕು. ಇಲ್ಲವೆಂದಾದಲ್ಲಿ ಮುಂದೆ ನೋವನ್ನು ಅನುಭವಿಸ ಬೇಕಾದೀತು. ಅಲ್ಲಿಗೆ ಮತದಾನದ ನೇರ ಪರಿಣಾಮ ಮತದಾರರ ಮೇಲೆಯೇ. ಹಾಗಾಗಿ ಯಾರಿಗೆ ಬೇಕಾದರೂ ಮತ ಚಲಾಯಿಸುವ ಸ್ವಾತಂತ್ರ್ಯ ನಮಗಿದೆ. ಆದರೆ ಮತ ಚಲಾಯಿಸುವ ಮುನ್ನ ಯೋಚಿಸಿ ಮತ ಹಾಕೋಣ. ನಮ್ಮ ಮತದಾನದ ಸ್ವಾತಂತ್ರ್ಯ ನಮ್ಮನ್ನು ಅತಂತ್ರವಾಗಿಸದಿರಲಿ. ಒಂದು ನೋಟಿಗೆ ಆಸೆಪಟ್ಟು ಓಟು ಒತ್ತಿದರೆ, ನಂತರ ಸಾವಿರ ನೋಟುಗಳನ್ನು ಕೊಟ್ಟರೂ ನಮ್ಮ ಸರಕಾರಿ ಕೆಲಸಗಳು ಆಗುವುದಿಲ್ಲ.
ವಿಷ್ಣು ಭಟ್ಟ ಹೊಸ್ಮನೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
U. T. Khader: ಹೆಬ್ಟಾಳ್ಕರ್-ಸಿ.ಟಿ. ರವಿ ಪ್ರಕರಣ ಹಕ್ಕು ಭಾದ್ಯತಾ ಸಮಿತಿಗೆ: ಖಾದರ್
Munirathna ವಿರುದ್ಧದ ಅತ್ಯಾಚಾರ ಆರೋಪ ರುಜುವಾತು
New Year: ಡಿ.31, ಜ. 1ರಂದು ಬಂಡೀಪುರದಲ್ಲಿ ಪ್ರವಾಸಿಗರ ವಾಸ್ತವ್ಯ ನಿರ್ಬಂಧ
Bengaluru; ನಿದ್ರೆಗೆ ಜಾರಿದ ಕ್ಯಾಬ್ ಡ್ರೈವರ್: ಪ್ರಯಾಣಿಕನಿಂದಲೇ ವಾಹನ ಚಾಲನೆ!| Video
Data Theft: ಕಂಪನಿಯ ಡೇಟಾ ಕದ್ದು 12.5 ಕೋಟಿ ವಂಚನೆ ಮಾಡಿದ ಬ್ಯಾಂಕ್ ಮ್ಯಾನೇಜರ್!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.