ಸುಧಾರಣೆ ವಿರೋಧ ಪ್ರತಿಪಕ್ಷಗಳ ಕಾಯಕವೇ?
ಏಕಕಾಲದ ಚುನಾವಣೆ ದೇಶಕ್ಕೆ ಸ್ಥಿರತೆ, ಶಾಂತಿಯನ್ನು ತಂದುಕೊಡಬಲ್ಲದು
Team Udayavani, Jun 28, 2019, 5:00 AM IST
ಸುಧಾರಣೆಗಳಿಗೆ ತೆರೆದುಕೊಳ್ಳ ಬೇಕಾಗಿರುವುದು ಸಮಯದ ಬೇಡಿಕೆ. ಭ್ರಷ್ಟಾಚಾರ ಮತ್ತು ಅದಕ್ಕೆ ಕುಮ್ಮಕ್ಕು ನೀಡುವ ಚುನಾವಣಾ ವ್ಯವಸ್ಥೆಯಲ್ಲಿ ಸುಧಾರಣೆ ಖಂಡಿತಾ ಅಪೇಕ್ಷಣೀಯ. ಆಗಾಗ್ಗೆ ಬರುವ ಚುನಾವಣೆಗಳ ದುಬಾರಿ ವೆಚ್ಚವನ್ನು ಭರಿಸಲೆಂದೇ ಭ್ರಷ್ಟಾಚಾರದ ವಿಷಚಕ್ರ ನಿರ್ಮಾಣವಾಗುತ್ತಿದೆ. ರಕ್ಷಣಾ ಖರೀದಿಯಂತಹ ಸಂವೇದನಾಶೀಲ ಕ್ಷೇತ್ರದಲ್ಲೂ ಅದು ಪ್ರಭಾವ ಬೀರುತ್ತದೆ. ರಾಜಕಾರಣಿಗಳು ಜನಹಿತ, ದೇಶಹಿತ ಮರೆಯುತ್ತಿರುವುದು ವಿಷಾದಕರ.
ತಮ್ಮ ಮೊದಲ ಐದು ವರ್ಷದ ಕಾರ್ಯಕಾಲದಲ್ಲಿ ದಶಕಗಳಿಂದ ನನೆಗುದಿಗೆ ಬಿದ್ದಿದ್ದ GSTಯನ್ನು ಜಾರಿಗೆ ತಂದು ದೇಶದ ತೆರಿಗೆ ಪದ್ಧತಿಯನ್ನು ಸರಳಗೊಳಿಸುವ ದೃಢ ಇಚ್ಛಾಶಕ್ತಿ ತೋರಿದ್ದ ಪ್ರಧಾನಿ ನರೇಂದ್ರ ಮೋದಿಯವರ ಎರಡನೇ ಅವಧಿಯ ಕಾರ್ಯಕಾಲ ಮತ್ತಷ್ಟು ಕ್ರಾಂತಿಕಾರಿ ಸುಧಾರಣೆಯ ಸುಳಿವಿನೊಂದಿಗೆ ಪ್ರಾರಂಭವಾಗಿದೆ. ಅದಕ್ಷತೆಯ ಕಾರಣದಿಂದ 27 ಆಡಳಿತಾತ್ಮಕ ಉನ್ನತ ಅಧಿಕಾರಿಗಳನ್ನು ಸೇವೆಯಿಂದ ಕಡ್ಡಾಯ ನಿವೃತ್ತಿಗೊಳಿಸುವ ಕಠಿಣ ನಿರ್ಧಾರ ‘ಸಬ್ ಚಲ್ತಾ ಹೈ’ ಎನ್ನುವ ಮನೋಭಾವದ ಅಧಿಕಾರಿಗಳಿಗೆ ಶಾಕ್ ನೀಡಿದೆ. ಏಕಕಾಲದಲ್ಲಿ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆ ನಡೆಸುವ ಕುರಿತಾದ ಚಿಂತನೆ ಕೂಡಾ ರಾಜಕೀಯ ಶುದ್ಧೀಕರಣದತ್ತ ಇನ್ನೊಂದು ಹೆಜ್ಜೆಯೇ ಆಗಿದೆ.
ದುರದೃಷ್ಟವಶಾತ್ ಲೋಕಸಭಾ ಚುನಾವಣಾ ಪರಾಜಯದ ಹತಾಶೆಯಿಂದ ಹೊರಬರಲಾಗದ ಮನಸ್ಥಿತಿಯಲ್ಲಿರುವ ವಿಪಕ್ಷಗಳು ಸರಕಾರ ಕರೆದ ಸಭೆಗೆ ಹಾಜರಾಗಿ ತಮ್ಮ ಅಭಿಪ್ರಾಯ ಪ್ರಕಟಿಸುವ ಬದಲಾಗಿ ಗೈರುಹಾಜರಾಗಿ ತಮ್ಮ ಪ್ರಜಾಸತ್ತಾತ್ಮಕ ಜವಾಬ್ದಾರಿ ಮರೆತವು.
ರಾಜಕಾರಣಿಗಳು ಮತ್ತು ಭ್ರಷ್ಟ ನೌಕರಶಾಹಿಯ ನಡುವಿನ ಅಕ್ರಮ ಸಂಬಂಧ ಆಳವಾಗಿ ಬೇರೂರಿದ ನಮ್ಮ ವ್ಯವಸ್ಥೆಯ ಸುಧಾರಣೆಯ ದೃಷ್ಟಿಯಲ್ಲಿ ಸರಕಾರದ ಎರಡೂ ಸುಧಾರಣಾ ಪ್ರಕ್ರಿಯೆಗಳು ದೂರಗಾಮಿ ಪರಿಣಾಮ ಬೀರಬಲ್ಲವುಗಳಾಗಿವೆ. ಚುನಾವಣೆ ಗೆದ್ದಾಗ ಬೀಗುವ ಸೋತಾಗ ಇಲೆಕ್ಟ್ರಾನಿಕ್ ಮತಯಂತ್ರದ ವಿರುದ್ಧ ದೋಷಾರೋಪ ಮಾಡುವ, ಬ್ಯಾಲೆಟ್ ಪೇಪರ್ ಬೇಕೆಂದು ಪಟ್ಟು ಹಿಡಿಯುವ ವಿರೋಧ ಪಕ್ಷಗಳ ಸುಧಾರಣಾ ವಿರೋಧಿ ಹಾಗೂ ದೇಶವನ್ನು ಹಿಂದಕ್ಕೆ ಕೊಂಡೊಯ್ಯುವ ನೀತಿ ಕೂಡಾ ಮುನ್ನಲೆಗೆ ಬಂತು. ಚುನಾವಣಾ ಆಯೋಗದ ಸಭೆಗಳಿಗೆ ಗೈರಾಗಿ, ತಮ್ಮ ಅಭಿಪ್ರಾಯವನ್ನು ತಾರ್ಕಿಕವಾಗಿಯೂ ಮತ್ತು ತಾಂತ್ರಿಕವಾಗಿಯೂ ಸರಿಯಾಗಿ ಮಂಡಿಸಲಾಗದ ಶರದ್ ಪವಾರರಂತಹ ಹಿರಿಯ ನಾಯಕರು ಇಲೆಕ್ಟ್ರಾನಿಕ್ ಮತಯಂತ್ರಗಳಿಂದಲೇ ಅಧಿಕಾರಕ್ಕೆ ಏರಿದ್ದ ಕೇಜ್ರಿವಾಲ್, ಮಮತಾ, ಮಾಯಾವತಿಯಂತಹ ನಾಯಕರೂ ಮತಯಂತ್ರದ ಮೇಲೆ ಗೂಬೆ ಕೂರಿಸುವುದು ಖೇದಕರ. ಜನರ ವಿವೇಚನಾ ಶಕ್ತಿಯ ಮೇಲೆ ಸಂಶಯಪಡುವ ಹಾಗೂ ವಾಸ್ತವವನ್ನು ಒಪ್ಪಿಕೊಳ್ಳಲಾಗದ ವಿಪಕ್ಷ ನಾಯಕರ ಮನಸ್ಥಿತಿಗೆ ಇದು ದರ್ಪಣ ಹಿಡಿಯುತ್ತದೆ.
ಬದಲಾದ ರಾಜಕಾರಣದ ಸ್ವರೂಪ
ಸ್ವಾತಂತ್ರ್ಯಪೂರ್ವದಲ್ಲಿ ಬ್ರಿಟಿಷರ ವಿರುದ್ಧ ಆಂದೋಲನ ನಡೆಸುವ, ಪೊಲೀಸರ ಲಾಠಿ ಏಟು ತಿನ್ನುವ ರಾಜಕಾರಣದ ಹಾಗೂ ರಾಜಕಾರಣಿಯ ಸ್ವರೂಪ ಸ್ವಾತಂತ್ರೋತ್ತರದಲ್ಲಿ ಎಷ್ಟೊಂದು ಬದಲಾಗಿಬಿಟ್ಟಿತು. ತಮ್ಮ ಆಸ್ತಿಪಾಸ್ತಿ, ಮನೆಮಠ ತೊರೆದು ವೈಯಕ್ತಿಕ ಭೋಗಭಾಗ್ಯವನ್ನು ತ್ಯಜಿಸಿ ದೇಶಸೇವೆಗಾಗಿ ನಡೆಯುತ್ತಿದ್ದ ಸ್ವಾತಂತ್ರ್ಯ ಆಂದೋಲನದ ರಾಜಕಾರಣದ ಕಾಲಘಟ್ಟದಿಂದ ಅಧಿಕಾರ, ಭೋಗಭಾಗ್ಯಗಳಿಗಾಗಿ ಹಪಾಹಪಿಸುವ, ಹಲವಾರು ಪೀಳಿಗೆಗಳಿಗೆ ಸಾಕಾಗುವಷ್ಟು ಸಂಪತ್ತು ಸಂಗ್ರಹಿಸಲು ಪೊಗದಸ್ತಾದ ದಾರಿಮಾಡಿಕೊಡುವ ವೃತ್ತಿಯಾಗಿ ಪರಿವರ್ತನೆಗೊಂಡಿದೆ ನಮ್ಮ ಇಂದಿನ ರಾಜಕಾರಣ. ತ್ಯಾಗ, ರಾಷ್ಟ್ರ ಸೇವೆ ಎನ್ನುವ ಕಲ್ಪನೆಯಿಂದ ಅಪರಿಮಿತ ಅಧಿಕಾರ, ಐಷಾರಾಮಿ ಜೀವನದ ಕಲ್ಪನೆಯ ರಾಜಕಾರಣ ಇಂದು ನಮ್ಮ ಮುಂದೆ ಗಹಗಹಿಸಿ ನಗುತ್ತಿದೆ. ಏನಕೇನ ಪ್ರಕಾರೇಣ ಅಧಿಕಾರ ದಕ್ಕಿಸಿಕೊಳ್ಳುವುದೇ ರಾಜಕಾರಣದ ಉದ್ದೇಶ ಎನ್ನುವ ಕಲ್ಪನೆ ಬೆಳೆದಿದೆ. ನಾಲ್ಕೈದು ದಶಕಗಳ ಕಾಲ ನಿರಂತರ ವಿಪಕ್ಷದಲ್ಲಿ ತಾಳ್ಮೆಯಿಂದ ಕುಳಿತುಕೊಂಡ ವಾಜಪೇಯಿ, ಆಡ್ವಾಣಿ, ಮುರಳಿ ಮನೋಹರ ಜೋಷಿಯಂತಹ ಘಟಾನುಘಟಿ ರಾಜಕಾರಣಿಗಳು ಎಂದೂ ಹತಾಶರಾಗಲಿಲ್ಲ, ಅಧಿಕಾರಕ್ಕಾಗಿ ಹಾತೊರೆಯಲೂ ಇಲ್ಲ. ವರ್ತಮಾನದಲ್ಲಿ ರಾಜಕಾರಣಕ್ಕೆ ಕಾಲಿಕ್ಕುತ್ತಿದ್ದಂತೆ ಸಂಸತ್-ಶಾಸನ ಸಭೆ ಸದಸ್ಯನಾಗುವ, ಮಂತ್ರಿ- ಮುಖ್ಯಮಂತ್ರಿಯಾಗುವ ಹಗಲು ಕನಸು ಕಾಣುವ ರಾಜಕಾರಣಿಗಳು ರಾಜಕಾರಣವನ್ನು ಹಣ ಸಂಗ್ರಹಿಸುವ ಹುಲುಸಾದ ದಂಧೆಯಾಗಿಸಿದ್ದಾರೆ.
ಶಾಕ್‌ನಿಂದ ಹೊರಬಾರದ ವಿಪಕ್ಷ
ಸೋಲನ್ನು ಒಪ್ಪಿಕೊಳ್ಳಲಾಗದ ವಿಪಕ್ಷಗಳ ನಿಲುವು ದೇಶದ ಅಭಿವೃದ್ಧಿ ಹಾಗೂ ಜನಹಿತದ ದೃಷ್ಟಿಯಿಂದ ಕೈಗೊಳ್ಳುವ ಸುಧಾರಣಾ ಕ್ರಮಗಳ ಕುರಿತು ಅಸಹಕಾರ ನಕಾರಾತ್ಮಕ ಪರಿಣಾಮ ಬೀರುವುದರಲ್ಲಿ ಸಂದೇಹವಿಲ್ಲ. ಆಡಳಿತ ಪಕ್ಷದಂತೆ ವಿಪಕ್ಷಗಳೂ ಕೂಡಾ ಸಂಸದೀಯ ಜವಾಬ್ದಾರಿಯಿಂದ ನುಣುಚಿಕೊಳ್ಳುವಂತಿಲ್ಲ. ಕಳೆದ ಐದು ವರ್ಷಗಳಲ್ಲಿ ವಿಪಕ್ಷಗಳು ಸರಕಾರದ ವಿರುದ್ಧ ಸಕಾರಾತ್ಮಕ, ಸಂಘಟಿತ ಹಾಗೂ ಶಿಸ್ತುಬದ್ಧ ರಾಜಕೀಯ ಚಟುವಟಿಕೆ ಹಾಗೂ ಕರ್ತವ್ಯ ನೆರವೇರಿಸುವಲ್ಲಿ ವಿಫಲವಾದವು. ಚುನಾವಣಾ ಸಮಯದಲ್ಲಿ ಸಮಯಸಾಧಕ ಒಗ್ಗಟ್ಟಿನ ಪ್ರದರ್ಶನ ನಡೆಯಿತಾದರೂ ಜನರ ವಿಶ್ವಾಸಾರ್ಹತೆ ಗಳಿಸಲು ವಿಫಲವಾದವು. ಮುಂದಿನ ಐದು ವರ್ಷಗಳಲ್ಲಿ ಅವು ರಚನಾತ್ಮಕ ವಿಪಕ್ಷವಾಗಿ ಹೇಗೆ ಕಾರ್ಯ ನಿರ್ವಹಿಸುವವು ಹಾಗೂ ಪ್ರಧಾನ ಮಂತ್ರಿಗೆ ಸಶಕ್ತ ಪರ್ಯಾಯ ನೇತೃತ್ವವನ್ನು ಹೇಗೆ ಕೊಡಬಲ್ಲವು ಎನ್ನುವುದರನ್ನು ಜನತೆ ನಿರಂತರ ಮೌಲ್ಯಾಂಕನ (comprehensive evaluation) ಮಾಡುತ್ತಿರುತ್ತಾರೆ ಎನ್ನುವುದನ್ನು ಮರೆಯಬಾರದು.
ಭ್ರಷ್ಟಾಚಾರ ನಿಯಂತ್ರಣ
ಚುನಾವಣೆಗಳು ಪ್ರಜಾಪ್ರಭುತ್ವದ ಉತ್ಸವಗಳು ನಿಜ. ಆದರೆ ಆಗಿದಾಂಗ್ಗೆ ನಡೆಯುವ ಚುನಾವಣೆಗಳು ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಆರ್ಥಿಕ ಹೊರೆಯನ್ನುಂಟು ಮಾಡುವಂತಹದ್ದೆನ್ನುವುದರಲ್ಲಿ ಎರಡು ಮಾತಿಲ್ಲ. ಹಣದುಬ್ಬರ, ಉದ್ಯೋಗ ಜಗತ್ತಿನ ಮೇಲುಂಟಾಗುವ ದುಷ್ಪ್ರಭಾವದಿಂದ ಅರ್ಥವ್ಯವಸ್ಥೆ ಏರುಪೇರಾಗುತ್ತದೆ. ಅಷ್ಟೇ ಅಲ್ಲ ರಾಜಕೀಯ ಅಸ್ಥಿರತೆಗೂ ಕಾರಣವಾಗುತ್ತದೆ. ಆಗಾಗ್ಗೆ ಚುನಾವಣೆ ಎದುರಿಸಲು ಹಣ ಹೊಂದಿಸಬೇಕಾದ ಪಕ್ಷಗಳು ಮತ್ತು ರಾಜಕಾರಣಿಗಳು ಭ್ರಷ್ಟ ಮಾರ್ಗಗಳನ್ನು ಕಂಡುಕೊಳ್ಳಬೇಕಾಗುತ್ತದೆ. ಈ ಕಾರಣದಿಂದಾಗಿಯೇ ಸಾಮಾನ್ಯರು ಇಂದು ಸ್ಥಳೀಯ ಚುನಾವಣೆಗಳನ್ನು ಎದುರಿಸುವುದೂ ಕಷ್ಟವೆಂಬಂತಾಗಿದೆ. ರಾಜಕೀಯ ಪಕ್ಷಗಳ ಟಿಕೇಟು, ಪಕ್ಷಕ್ಕೆ ಹಣ ತರುವಂತಹ ಧನಬಲವುಳ್ಳವರಿಗೆ ಕೊಡುವ ರಿವಾಜು ಇತ್ತೀಚೆಗೆ ಎಲ್ಲಾ ರಾಜಕೀಯ ಪಕ್ಷಗಳಲ್ಲಿ ಕಾಣಬಹುದಾಗಿದೆ. ಒಟ್ಟಿನಲ್ಲಿ ಪ್ರಾಮಾಣಿಕರೆನಿಸಿದ ಸ್ವಚ್ಛ ವರ್ಚಸ್ಸಿನ ನಾಯಕರು ಸಹಾ ತಮ್ಮ ಸಿದ್ಧಾಂತಗಳನ್ನು ಬದಿಗೊತ್ತಿ ಕೆಲವೊಮ್ಮೆ ಚುನಾವಣಾ ಖರ್ಚಿನ ಏರ್ಪಾಡಿಗಾಗಿ ಆತ್ಮಸಾಕ್ಷಿಗೆ ವಿರುದ್ಧವಾಗಿ ನಡೆದುಕೊಳ್ಳಬೇಕಾಗುತ್ತದೆ. ನಮ್ಮ ಇಂದಿನ ರಾಜಕೀಯ ವ್ಯವಸ್ಥೆಯನ್ನು ಗೆದ್ದಲಿನಂತೆ ಒಳಗಿಂದೊಳಗೇ ತಿನ್ನುವ ಭ್ರಷ್ಟಾಚಾರಕ್ಕೆ ಮುಖ್ಯ ಕಾರಣ ದುಬಾರಿ ಮತ್ತು ಆಗ್ಗಿದಾಂಗ್ಗೆ ನಡೆಯುವ ಚುನಾವಣೆಗಳೇ ಆಗಿವೆ.
ಸಾರ್ವತ್ರಿಕ ಚುನಾವಣೆಗಳಿಂದ ಸಾಕಷ್ಟು ಮೊದಲೇ ಸರಕಾರಿ ನಿರ್ಣಯ ಪ್ರಕ್ರಿಯೆಗಳೆಲ್ಲಾ ನನೆಗುದಿಗೆ ಬೀಳುತ್ತವೆ. ಚುನಾವಣೆ ಘೋಷಣೆಯೊಂದಿಗೆ ಸರಕಾರಿ ಯಂತ್ರ ಮಿಕ್ಕೆಲ್ಲಾ ಕೆಲಸ ಬಿಟ್ಟು ಚುನಾವಣೆಯ ಯಶಸ್ಸಿಗೆ ದುಡಿಯಲು ಟೊಂಕ ಕಟ್ಟಿ ನಿಂತು ಬಿಡುತ್ತದೆ. ಇತ್ತೀಚೆಗಂತೂ ಚುನಾವಣಾ ಘೋಷಣೆಗೆ ಮೊದಲೇ ಕಚೇರಿಗಳಲ್ಲಿ ನೌಕರರು ಚುನಾವಣೆ ಹತ್ತಿರ ಬರುತ್ತಿದೆ ಎನ್ನುವ ಸಬೂಬು ಹೇಳಿ ಸಾರ್ವಜನಿಕ ಸೇವೆಯನ್ನು ಸ್ಥಗಿತಗೊಳಿಸಿ ಬಿಡುತ್ತಿರುವುದು ಸಾಮಾನ್ಯವಾಗಿದೆ. 3-4 ತಿಂಗಳು ಸರಕಾರವಿದ್ದೂ ಇಲ್ಲದ ಸ್ಥಿತಿ ನಿರ್ಮಾಣವಾಗುವುದರಿಂದ ದೇಶದ ಆರ್ಥಿಕತೆ ಹಳ್ಳ ಹಿಡಿಯುವುದಲ್ಲದೇ, ಅಂತಾರಾಷ್ಟ್ರೀಯ ಸಂಬಂಧ, ರಕ್ಷಣೆಯಂತಹ ಗಂಭೀರ ವಿಷಯಗಳ ಕುರಿತಾಗಿ ದೇಶಕ್ಕೆ ಹಾನಿಯಾಗುವ ಸಾಧ್ಯತೆಯೂ ಇರುತ್ತದೆ. ಕಳೆದ ವರ್ಷ ಚೀನಾದೊಂದಿಗೆ ನಡೆದ ಡೊಕ್ಲಾಮ್ ಬಿಕ್ಕಟ್ಟಿನಂತಹ ಸ್ಥಿತಿಯಲ್ಲಿ ಕೇಂದ್ರದಲ್ಲಿ ರಾಜಕೀಯ ಅಸ್ಥಿರ ವಾತಾವರಣ ಖಂಡಿತವಾಗಿಯೂ ದೊಡ್ಡ ಪ್ರಮಾದಕ್ಕೆ ಕಾರಣವಾಗಬಹುದು. ದಿನದಿಂದ ದಿನಕ್ಕೆ ರಾಷ್ಟ್ರ ಆಂತರಿಕವಾಗಿಯೂ ಮತ್ತು ಬಾಹ್ಯವಾಗಿಯೂ ಹೊಸ ಹೊಸ ಸಮಸ್ಯೆಗಳನ್ನು ಎದುರಿಸಬೇಕಾಗುತ್ತಿದೆ. ಸ್ಥಿರ ರಾಜಕೀಯ ವ್ಯವಸ್ಥೆ ಇಂದಿನ ಅವಶ್ಯಕತೆಯಾಗಿದೆ. ಆ ದೃಷ್ಟಿಯಲ್ಲಿ ಮೋದಿಯವರ ನಾಲ್ಕು ವರ್ಷ ಕೆಲಸ ಮಾಡೋಣ ಒಂದು ವರ್ಷ (ಕೊನೆಯ ವರ್ಷ) ರಾಜಕೀಯ ಸೆಣಸಾಟ ಮಾಡೋಣ ಎನ್ನುವ ಮಾರ್ಮಿಕ ಮಾತಿನಲ್ಲಿ ದೇಶ ಹಿತವಿದೆ. ಚುನಾವಣಾ ಸುಧಾರಣೆಗಳ ಕುರಿತು ಎಲ್ಲಾ ಪಕ್ಷಗಳು ಮಾತನಾಡುತ್ತವೆ. ಈಗ ತುರ್ತಾಗಿ ಆಗಬೇಕಾದ ಮಹತ್ವದ ಚುನಾವಣಾ ಸುಧಾರಣೆ ಎಂದರೆ ಆಗಾಗ್ಗೆ ನಡೆಯುತ್ತಿರುವ ಚುನಾವಣೆಗಳಿಗೆ ಕಡಿವಾಣ ಹಾಕಿ ಏಕಕಾಲದಲ್ಲಿ 5 ವರ್ಷದಲ್ಲಿ ಒಮ್ಮೆ ಲೋಕಸಭೆ ಮತ್ತು ವಿಧಾನಸಭೆಗಳಿಗೆ ಚುನಾವಣೆ ನಡೆಸುವುದು. ಈ ವಿಷಯದಲ್ಲಿ ಆರೋಗ್ಯಕರ ಮುಕ್ತ ಮನಸ್ಸಿನ ಚರ್ಚೆ ನಡೆಸಬೇಕಾಗಿದೆಯೆಂದು ಸರಕಾರ ಪದೇ ಪದೇ ಒತ್ತಾಯಿ ಸುತ್ತಿರುವಾಗ ಮಹತ್ವಪೂರ್ಣ ಸಭೆಗಳಿಗೆ ಹಾಜರಾಗದೇ ಮುಕ್ತ ವೇದಿಕೆಗಳಲ್ಲಿ ಸರಕಾರದ ಸುಧಾರಣಾ ಯತ್ನವನ್ನು ಸಾರಾಸಗಟಾಗಿ ಟೀಕಿಸುವುದರಿಂದ ವಿಪಕ್ಷಗಳ ವಿಶ್ವಾಸಾರ್ಹತೆ ಮತ್ತಷ್ಟು ಕಡಿಮೆಯಾಗುವುದರಲ್ಲಿ ಸಂದೇಹವಿಲ್ಲ.
ಸುಧಾರಣೆಗಳಿಗೆ ತೆರೆದುಕೊಳ್ಳಬೇಕಾಗಿರುವುದು ಸಮಯದ ಬೇಡಿಕೆ. ಭ್ರಷ್ಟಾಚಾರ ಮತ್ತು ಅದಕ್ಕೆ ಕುಮ್ಮಕ್ಕು ನೀಡುವ ಚುನಾವಣಾ ವ್ಯವಸ್ಥೆಯಲ್ಲಿ ಸುಧಾರಣೆ ಖಂಡಿತಾ ಅಪೇಕ್ಷಣೀಯ. ಆಗಾಗ್ಗೆ ಬರುವ ಚುನಾವಣೆಗಳ ದುಬಾರಿ ವೆಚ್ಚವನ್ನು ಭರಿಸಲೆಂದೇ ಭ್ರಷ್ಟಾಚಾರದ ವಿಷಚಕ್ರ ನಿರ್ಮಾಣವಾಗುತ್ತಿದೆ. ರಕ್ಷಣಾ ಖರೀದಿಯಂತಹ ಸಂವೇದನಾಶೀಲ ಕ್ಷೇತ್ರದಲ್ಲೂ ಅದು ಪ್ರಭಾವ ಬೀರುತ್ತದೆ. ಚುನಾವಣಾ ವೆಚ್ಚಕ್ಕಾಗಿ ವಿದೇಶಿ ಚಂದಾ ಕೂಡಾ ಹರಿದು ಬರುತ್ತಿದೆ. ಧನ ಸಹಾಯ ಮಾಡಿದವರಿಗೆ ಋಣ ಸಂದಾಯ ಮಾಡುವ ರಾಜಕಾರಣಿಗಳು ಜನಹಿತ, ದೇಶಹಿತ ಮರೆಯು ತ್ತಿರುವುದು ವಿಷಾದಕರ. ಏಕಕಾಲದ ಚುನಾವಣೆ ದೇಶಕ್ಕೆ ಐದು ವರ್ಷಗಳ ಸ್ಥಿರತೆ, ಶಾಂತಿಯನ್ನು ತಂದುಕೊಡಬಲ್ಲದು. ಏಕಕಾಲದ ಚುನಾವಣ ವ್ಯವಸ್ಥೆಯ ಕುರಿತು ಮಾತನಾಡಲು ಸಿದ್ಧವಿಲ್ಲ ಎನ್ನುವುದು ಕರ್ತವ್ಯಲೋಪವೇ ಸರಿ. ಸುಧಾರಣೆ ಜಗದ ನಿಯಮ. ಸಾಧಕ ಬಾಧಕಗಳ ಮುಕ್ತ ಚರ್ಚೆ ನಡೆಯಲಿ.
ಬೈಂದೂರು ಚಂದ್ರಶೇಖರ್ ನಾವಡ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.