ಸಮಾಜ ವೈದ್ಯರನ್ನು ದ್ವೇಷಿಸಲಾರಂಭಿಸಿದೆಯೇ?
Team Udayavani, May 11, 2017, 11:41 PM IST
ನುರಿತ ವೈದ್ಯರೇ ಸರಿಯಾಗಿ ಅರ್ಥೈಸಿಕೊಳ್ಳಲಾಗದ ಸಮಸ್ಯೆಗಳ ಬಗ್ಗೆ, 10 ನಿಮಿಷ ‘ಗೂಗಲ್’ ಹುಡುಕಾಟದ ನಂತರ ಬಲ್ಲವರಂತೆ ಮಾತನಾಡುವ ರೋಗಿಗಳ ಸಂಬಂಧಿಕರ ಬಗ್ಗೆ ವೈದ್ಯರಲ್ಲಿ ಮೂಡುವ ಭಾವನೆ ತಿರಸ್ಕಾರವೋ, ರೋಷವೋ?
ಇತ್ತೀಚೆಗೆ ಮುಂಬಯಿಯ ಸರ್ಕಾರಿ ಆಸ್ಪತ್ರೆಯ ವೈದ್ಯರು ದೇಶದೆಲ್ಲೆಡೆ, ಅದರಲ್ಲೂ ಮಹಾರಾಷ್ಟ್ರದಲ್ಲಿನ ಹಲವೆಡೆ ಕರ್ತವ್ಯ ನಿರತ ಸರಕಾರಿ ವೈದ್ಯರ ಮೇಲೆ ರೋಗಿಗಳ ಕಡೆಯವರು ಹಲ್ಲೆ ನಡೆಸಿದ ವಿದ್ಯಮಾನದ ವಿರುದ್ಧ ಸೆಟೆದು ನಿಂತಿದ್ದರು. ಇವರ ಮುಷ್ಕರದಿಂದ ಅನಿವಾರ್ಯವಾಗಿಯೇ ಜನರಿಗೆ ಅನನುಕೂಲವಾಗಿದ್ದಲ್ಲದೇ ಹಲವಾರು ರೋಗಿಗಳ ಮರಣಕ್ಕೂ ಕಾರಣವಾಯಿತು. ಎಂದಿನಂತೆ, ಸಮಾಜದ ಕೆಂಗಣ್ಣು ಮುಷ್ಕರ ನಿರತ ವೈದ್ಯರ ಮೇಲೆಯೇ ಬಿತ್ತು. ‘ವೈದ್ಯರು ನಿಷ್ಕರುಣಿ’ ಎಂಬಂತೆ ಮಾಧ್ಯಮಗಳಲ್ಲಿ ಬಿಂಬಿಸಲಾಯಿತು. ವೈದ್ಯರ ಮನಸ್ಸನ್ನು ಅರಿಯುವ ಚಿಕ್ಕ ಪ್ರಯತ್ನವೂ ಯಾರಿಂದಲೂ ನಡೆದಂತೆ ಕಾಣಲಿಲ್ಲ. ಏಕೆ ಹೀಗೆ? ಸಮಾಜದ ಯಾವುದೇ ವರ್ಗದ ಮುಷ್ಕರ ನಿರತರ ಬಗ್ಗೆ ಇರದ ಒಂದು ರೀತಿಯ ಸಾಮಾಜಿಕ ತಿರಸ್ಕಾರ ವೈದ್ಯರ ಬಗೆಗೇಕೆ ಹುಟ್ಟಿಕೊಳ್ಳುತ್ತದೆ?
‘ವೈದ್ಯೋ ನಾರಾಯಣೋ ಹರಿಃ’ ಎಂಬ ವಾಕ್ಯವನ್ನು ಜನಸಾಮಾನ್ಯರು ವೈದ್ಯರ ಬಗ್ಗೆ ಆಗಾಗ ಬಳಸುವುದಿದೆ. ಇದು “ಮುಪ್ಪಿನಲ್ಲಿ ಶರೀರ ಜರ್ಜರಿತವಾಗಿ ಸಾವು ಸನ್ನಿಹಿತವಾದಾಗ ಗಂಗಾಜಲವೇ ಔಷಧಿ, ಹರಿಯೇ ವೈದ್ಯ” ಎಂಬರ್ಥ ಬರುವ ಸಂಸ್ಕೃತ ಶ್ಲೋಕದ ಅಪಾರ್ಥವಲ್ಲದೆ, ಸಮಾಜದ ಅಭಿಪ್ರಾಯವೆನ್ನುವಂತಿಲ್ಲ. ಹಾಗೆ ನೋಡಿದರೆ, ವೈದ್ಯನೆಂದರೆ ‘ಯಮರಾಜನ ಸಹೋದರ’ ಎಂದು ನೇರಾನೇರ ಲೇವಡಿ ಮಾಡುವ ಶ್ಲೋಕಗಳೂ ಸಂಸ್ಕೃತದಲ್ಲಿವೆ. ವೈದ್ಯರ ಬಗ್ಗೆ ಸ್ವಲ್ಪ ಈರ್ಷ್ಯೆಯೋ ಅಸಹನೆಯೋ ಯಾವುದೋ ಒಂದು ಋಣಾತ್ಮಕ ಭಾವನೆ ಹಿಂದಿನಿಂದಲೂ ಇದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಆದಾಗ್ಯೂ ಹಿಂದೆ ವೈದ್ಯರಿಗೆ ಸಮಾಜದಲ್ಲಿ ಗೌರವದ ಸ್ಥಾನಮಾನ ಸಿಗುತ್ತಿದ್ದುದು ಸುಳ್ಳಲ್ಲ. ಅಸಹನೆ – ಗೌರವ ಎರಡೂ ಏಕಕಾಲದಲ್ಲಿ ಇರಬಹುದೇ ಎಂಬುದು ಜಿಜ್ಞಾಸಾರ್ಹ. ಆದರೆ ಇಂದು ಅಸಹನೆ ಹೆಚ್ಚಾಗುತ್ತಿದ್ದು ಗೌರವ ಕ್ಷೀಣಿಸುತ್ತಿದೆ.
ವೈದ್ಯರ ಬಗ್ಗೆ ಇರಬಹುದಾದ ಗೌರವಕ್ಕೆ ಕಾರಣವನ್ನು ಹುಡುಕುವುದು ಬಹಳ ಸುಲಭ. ವೈದ್ಯರು ರೋಗಿಗಳನ್ನು ಸಂಭಾವ್ಯ ಸಂಕಷ್ಟ ಯಾ ಸಾವಿನಿಂದ ಕಾಪಾಡುತ್ತಾರೆ. ಅದರಲ್ಲೂ ಹೆಚ್ಚಿನ ಪ್ರತಿಫಲ ಬಯಸದ ವೈದ್ಯನಾದರಂತೂ ಆತನನ್ನು ದೇವರ ದರ್ಜೆಗೇರಿಸುವವರು ಹಿಂದಿನಿಂದಲೂ ಇದ್ದರು, ಈಗಲೂ ಇದ್ದಾರೆ. ಹಾಗಿದ್ದಲ್ಲಿ, ಕ್ಷುಲ್ಲಕ ಕಾರಣಕ್ಕಾಗಿ ಹಲ್ಲೆಗಳು ಹೆಚ್ಚಾಗಿರುವುದೇಕೆ? ಅಂಥ ಸಂದರ್ಭಗಳಲ್ಲಿ ಎರಡೂ ಪಕ್ಷಗಳ ಸ್ಪಷ್ಟೀಕರಣವನ್ನು ಕೇಳದೆ “ಇವರು ವೈದ್ಯರೋ, ರಾಕ್ಷಸರೋ’ ಎಂಬ ಶೀರ್ಷಿಕೆಯೊಂದಿಗೆ ತೀರ್ಪು ನೀಡಲು ಮಾಧ್ಯಮಗಳ ಮಧ್ಯೆ ಪೈಪೋಟಿಯೇಕೆ?
ವೈದ್ಯಕೀಯ ಜಗತ್ತಿನ ಬಗ್ಗೆ ಸಮಾಜದಲ್ಲಿ ಹೆಚ್ಚುತ್ತಿರುವ ಅಸಹನೆಯನ್ನು ವಿಶ್ಲೇಷಿಸ ಹೊರಟಾಗ ಮೊದಲಿಗೆ ಕಾಣುವುದು ದಿನೇ ದಿನೆ ಹೆಚ್ಚುತ್ತಿರುವ ಚಿಕಿತ್ಸಾ ವೆಚ್ಚ. ಜೀವನದ ಯಾವುದೇ ಹಣಕಾಸಿನ ವ್ಯವಹಾರದಲ್ಲಿ ವೆಚ್ಚಕ್ಕೆ ತಕ್ಕ ಪ್ರತಿಫಲವನ್ನು ನಿರೀಕ್ಷಿಸುವುದು ಲೋಕದ ರೂಢಿ. ಆದರೆ, ಮಾನವ ದೇಹದ ಚಿಕಿತ್ಸೆ ಅಂಥ ವ್ಯವಹಾರದ ಪರಿಧಿಯೊಳಗೆ ಬರುವಂಥದ್ದಲ್ಲ. ಹಣವಿದ್ದ ಕೂಡಲೇ ರೋಗಿಯನ್ನು ಉಳಿಸಿಕೊಳ್ಳಬಹುದು ಎಂದು ಯಾರಾದರೂ ನಂಬಿದ್ದರೆ ಅದು ಮೌಡ್ಯದ ಪರಮಾವಧಿ. ಅಪಾರ ಹಣ ವ್ಯಯಿಸಿದರೂ ತಮ್ಮ ಪ್ರೀತಿಪಾತ್ರರ ಕಾಯಿಲೆ ವಾಸಿಯಾಗದೇ ಇದ್ದಾಗ ರೋಗಿಯ ಕಡೆಯವರು ತಲ್ಲಣಿಸಿ ಹೋಗುತ್ತಾರೆ. ಅವರ ಮನಸ್ಸು ಕ್ಷೋಭಿಸುತ್ತಿರುವಾಗ ಮೊದಲು ಗೋಚರಿಸುವ ವ್ಯಕ್ತಿಯೇ ಚಿಕಿತ್ಸೆ ನೀಡಿದ ವೈದ್ಯ! ಚಿಕಿತ್ಸಾ ವೆಚ್ಚದ ಹೆಚ್ಚಳದಿಂದ ಉಂಟಾಗುವ ಅಸಹನೆ ಹೆಚ್ಚಾಗಿ ಗೋಚರಿಸುವುದು ‘ಹೈ-ಟೆಕ್’ ಆಸ್ಪತ್ರೆಗಳಲ್ಲಿ. ‘ಅತ್ಯಾಧುನಿಕ ಸೌಲಭ್ಯ, ದುಬಾರಿ ಉಪಕರಣಗಳ ಅಳವಡಿಕೆ ಚಿಕಿತ್ಸೆಯ ಗುಣಮಟ್ಟವನ್ನು ಸುಧಾರಿಸಲು ಆವಶ್ಯ, ಇದರಿಂದ ಚಿಕಿತ್ಸಾ ವೆಚ್ಚ ಸಹಜವಾಗಿಯೇ ಹೆಚ್ಚುತ್ತದೆ’ ಎಂಬುದು ‘ಹೈಟೆಕ್’ ಆಸ್ಪತ್ರೆಗಳ ಆಡಳಿತದ ವಾದವಾದರೆ, ‘ಜನರನ್ನು ಬೆದರಿಸಿ ಅನಗತ್ಯ ತಪಾಸಣೆಗಳನ್ನು ಮಾಡಲಾಗುತ್ತದೆ’ ಎಂಬುದು ಟೀಕಿಸುವವರ ವಾದ. ಎಂದಿನಂತೆ ಸತ್ಯ ಇವೆರಡರ ಮಧ್ಯೆ ಸಿಕ್ಕಿಕೊಂಡು ನರಳುತ್ತಿರುತ್ತದೆ. ಆದರೆ ಇದರಲ್ಲಿ ಸುಲಭವಾಗಿ ಗೋಚರಿಸದ ಇನ್ನೊಂದು ಸತ್ಯವಿದೆ. ಅದೆಂದರೆ, ರೋಗಿಯೋರ್ವನ ಅಂತಿಮ ಚಿಕಿತ್ಸಾ ವೆಚ್ಚವನ್ನು ಚಿಕಿತ್ಸೆ ನೀಡುವ ವೈದ್ಯ ನಿರ್ಧರಿಸುವುದಿಲ್ಲ. ಹೆಚ್ಚಿನ ಬಾರಿ ಅವುಗಳ ನಿರ್ಧಾರವನ್ನು ಆಸ್ಪತ್ರೆಯ ಆಡಳಿತ ಮಂಡಳಿ ಮಾಡುತ್ತದೆ. ಖಾಸಗಿ ಆಸ್ಪತ್ರೆಯಲ್ಲಿನ ವೈದ್ಯ ಕೂಡ ಬ್ಯಾಂಕ್ ಸಿಬ್ಬಂದಿಯಂತೆ ಓರ್ವ ಉದ್ಯೋಗಿಯಷ್ಟೆ. ಆತನಿಗೆ ಸಂಸ್ಥೆಯ ನಿರ್ವಹಣೆಯಲ್ಲಿ ಹೆಚ್ಚಿನ ಪಾತ್ರವಿರುವುದಿಲ್ಲ!
ಇನ್ನು, ಇಂದು ವೈದ್ಯಕೀಯ ಜಗತ್ತಿನಿಂದ ಜನರಿಗಿರುವ ನಿರೀಕ್ಷೆ ಅತಿ ಎನ್ನುವಷ್ಟರ ಮಟ್ಟಿಗೆ ಬೆಳೆದಿದೆ. ದಿನ ಬೆಳಗಾದರೆ ವೈದ್ಯಕೀಯ ‘ಚಮತ್ಕಾರ’ಗಳ ಬಗ್ಗೆ ಮಾಧ್ಯಮಗಳಲ್ಲಿ ಓದುವ ಜನರು ತಮ್ಮ ‘ಪವಾಡ’ವನ್ನೇ ನಿರೀಕ್ಷಿಸತೊಡಗಿದ್ದಾರೆ. ಯಾವುದೇ ಕಾಯಿಲೆ ಇರಲಿ, ಯಾವುದೇ ಹಂತ ತಲುಪಿರಲಿ; ಸುಲಭ ಪರಿಹಾರ ಅಸಾಧ್ಯವೆಂಬುದನ್ನು ಪಕ್ಕನೆ ನಂಬಲು ಹೆಚ್ಚಿನವರಿಂದು ತಯಾರಿರುವುದಿಲ್ಲ. ಅದಲ್ಲದೇ ವೈದ್ಯರು ವಿವರಿಸಿದ ಚಿಕಿತ್ಸಾ ವಿಧಾನವನ್ನು ಮನಃಪೂರ್ವಕವಾಗಿ ಸ್ವೀಕರಿಸುವವರೂ ಇಂದು ವಿರಳ. ರೋಗಿಯ ಕಾಯಿಲೆಯ ಸ್ವರೂಪವನ್ನು ವಿವರಿಸಿ ಆತನಿಗೆ ಶಸ್ತ್ರಚಿಕಿತ್ಸೆಯ ಅಗತ್ಯವಿರುವುದನ್ನು ಹತ್ತಿಪ್ಪತ್ತು ನಿಮಿಷಗಳ ವಿವರಣೆಯ ಮೂಲಕ ತಿಳಿಯಪಡಿಸಿದ ಅನಂತರವೂ ‘ಇದನ್ನು ಔಷಧಿಯಿಂದ ಗುಣಪಡಿಸಲು ಸಾಧ್ಯವಿಲ್ಲವೇ’ ಎಂದು ಕೇಳುವವರು ವಿರಳವೇನಲ್ಲ! ಅನಗತ್ಯ ಶಸ್ತ್ರಚಿಕಿತ್ಸೆ ಮಾಡುವವರು ಇಲ್ಲವೆನ್ನಲಾಗದು. ಆದರೆ ಆ ಪ್ರಶ್ನೆಗೆ ಉತ್ತರವನ್ನು ವೈದ್ಯರನ್ನು ಆಯ್ದುಕೊಳ್ಳುವ ಮೊದಲೇ ಕಂಡುಕೊಳ್ಳುವುದು ಒಳ್ಳೆಯದು. ಅವಶ್ಯಕವೆನಿಸಿದ್ದಲ್ಲಿ ಎರಡೋ ಮೂರೋ ತಜ್ಞರ ಅಭಿಪ್ರಾಯ ಕೇಳಬಹುದಾದರೂ ಕೊನೆಗೆ ಯಾರೋ ಒಬ್ಬರನ್ನು ‘ನಂಬದೆ’ ವಿಧಿಯಿಲ್ಲ. ಈ ‘ನಂಬಲೇಬೇಕಾದ’ ಪರಿಸ್ಥಿತಿಯೂ ರೋಗಿಯಲ್ಲಿ ಕಹಿಭಾವನೆ ಉಂಟುಮಾಡುವ ಸಾಧ್ಯತೆ ಇಲ್ಲದಿಲ್ಲ. ಅದರಲ್ಲೂ ಜೀವನಪೂರ್ತಿ ಇತರರ ಮೇಲೆ ಅಧಿಕಾರ ಚಲಾಯಿಸಿಯೇ ರೂಢಿಯಿದ್ದವರಿಗೆ ಯಕಶ್ಚಿತ್ ವೈದ್ಯನೊಬ್ಬನ ಮಾತಿಗೆ ತಲೆಬಾಗುವುದು ಕೆಲವೊಮ್ಮೆ ಕಷ್ಟವಾಗಬಹುದೇನೋ.
ವೈದ್ಯರುಗಳು, ರೋಗಿಗಳ ಸಂಬಂಧಿಕರ ಹಾಗೂ ಸಮಾಜದ ಕೆಂಗಣ್ಣಿಗೆ ಗುರಿಯಾಗಲು ಇನ್ನೊಂದು ಕಾರಣವೆಂದರೆ ಇಂದಿನ ಜೀವನದ ಡಾಂಭಿಕತೆ. ಕೊಳ್ಳುಬಾಕ ಸಂಸ್ಕೃತಿಯ ದಾಸರಾಗಿರುವ ನಾವಿಂದು ಕೌಟುಂಬಿಕ ಆತ್ಮೀಯತೆಯನ್ನು ಬಹುತೇಕ ಕಳೆದುಕೊಂಡಿದ್ದೇವೆ. ಹೆತ್ತವರ ಯೋಗಕ್ಷೇಮವನ್ನು ನೋಡಿಕೊಳ್ಳುವ ವ್ಯವಧಾನವಾಗಲಿ ಆಸಕ್ತಿಯಾಗಲೀ ಇಂದಿನ ಜನಾಂಗದಲ್ಲಿ ಕಡಿಮೆಯಾಗುತ್ತಿದೆ. ಆದರೂ ಮನಸ್ಸಿನ ಮೂಲೆಯಲ್ಲಿ ಈ ನಿರ್ಲಕ್ಷ್ಯದ ಬಗ್ಗೆ ಒಂದು ರೀತಿಯ ಅಪರಾಧಿ ಮನೋಭಾವವೋ, ಕೀಳರಿಮೆಯೋ ಹುದುಗಿಕೊಂಡಿರುತ್ತದೆ. ಹೆತ್ತವರ ಆರೋಗ್ಯ ತೀರಾ ಬಿಗಡಾಯಿಸಿದಾಗ ಇಂಥ ಅಪರಾಧಿ ಮನೋಭಾವದ ಆಧುನಿಕರು ವಿದೇಶದಿಂದ ಧುತ್ತೆಂದು ಪ್ರತ್ಯಕ್ಷರಾಗುತ್ತಾರೆ. ಬಂದ ಅನಂತರ ತಮ್ಮವರ ಚಿಕಿತ್ಸೆಯ ಬಗ್ಗೆ ಅವರ ಕಾಳಜಿಯೋ ಹೇಳತೀರದು. ‘ಎಷ್ಟು ವೆಚ್ಚವಾದರೂ ಪರವಾಗಿಲ್ಲ, ಹುಷಾರಾಗಬೇಕು’ ಎಂಬ ಫರ್ಮಾನು ಹೊರಡಿಸುತ್ತಾರೆ. ಚಿಕಿತ್ಸೆ ಫಲಕಾರಿಯಾಗದಿದ್ದಲ್ಲಿ ಈ ವರ್ಗದ ಸಂಬಂಧಿಕರು ವೈದ್ಯರನ್ನು ದೂಷಿಸಿ ಹುಯಿಲೆಬ್ಬಿಸುವ ಸಾಧ್ಯತೆ ಹೆಚ್ಚು. ಅಲ್ಲಿಯವರೆಗೆ ಮೃತ ವೃದ್ಧರ ಕಾಳಜಿಯನ್ನು ನಿರ್ಲಕ್ಷಿಸಲಾಗಿತ್ತು ಎಂಬ ಕಹಿಸತ್ಯ ಮುಚ್ಚಿ ಹೋಗುವುದೇ ಈ ತಂತ್ರದ ಉದ್ದೇಶ.
ಕೊನೆಯದಾಗಿ ವೈದ್ಯರನ್ನು ಕಾಡುವ ಸಂಗತಿಯೆಂದರೆ ‘ಪರ್ಯಾಯ ಚಿಕಿತ್ಸೆ’ ಎಂಬ ಮಾಯಾಲೋಕ. ಪರ್ಯಾಯ ಚಿಕಿತ್ಸೆಗಳಲ್ಲೂ ಸಮಾಜಕ್ಕೆ ಒಳಿತಾಗಬಲ್ಲ ಜ್ಞಾನವಿದೆ ಎಂಬುದನ್ನು ಎಲ್ಲರೂ ಒಪ್ಪುತ್ತಾರೆ. ಆದರೆ ಕ್ಯಾನ್ಸರ್‌ನಂತಹ ಪ್ರಾಣಾಂತಿಕ ಕಾಯಿಲೆಗೂ ಪರ್ಯಾಯ ಚಿಕಿತ್ಸೆ ಮಾಡಿ ರೋಗಿಯನ್ನು ಮೃತ್ಯುವಿನ ಸನಿಹಕ್ಕೆ ದೂಡುವ ಚಿಕಿತ್ಸಕರನ್ನು ರೋಗಿಯ ಕಡೆಯವರು ತರಾಟೆಗೆ ತೆಗೆದುಕೊಂಡಿದ್ದು ನನ್ನ ಅರಿವಿಗೆ ಬಂದಿಲ್ಲ. ಕ್ಯಾನ್ಸರ್ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಯಾವನೇ ವೈದ್ಯನಿಗೂ ಈ ಪರ್ಯಾಯ ಚಿಕಿತ್ಸೆಯ ಹಾವಳಿ ಎಷ್ಟು ಗಂಭೀರ ಎಂಬ ಅರಿವಿರುತ್ತದೆ. ಇಲ್ಲಿ ಕೂಡ ಪರ್ಯಾಯ ಚಿಕಿತ್ಸೆಯ ವೈಫಲ್ಯದ ಅನಂತರ ಒಂದು ರೀತಿಯ ಸೋಲಿನ ಹತಾಶಭಾವನೆಯಿಂದ, ಒಲ್ಲದ ಮನಸ್ಸಿನಿಂದಲೇ ರೋಗಿಯನ್ನು ‘ಇಂಗ್ಲಿಷ್’ ವೈದ್ಯರ ಬಳಿ ತರಲಾಗಿರುತ್ತದೆ. ಅಂತಹ ಸಂದರ್ಭಗಳಲ್ಲಿ ರೋಗಿಯ ಕಾಯಿಲೆಯನ್ನು ಹತೋಟಿಗೆ ತರಲು ಸಮಯ ಕೈಮೀರಿರುತ್ತದೆ. ಮತ್ತೂಮ್ಮೆ ‘ಅಂತಿಮ’ ವೈಪಲ್ಯ ಇಂಗ್ಲಿಷ್ ವೈದ್ಯನದ್ದೇ!
ಹೀಗೆ ಹಲವು ಹತ್ತು ಕಾರಣಗಳಿಂದ ವೈದ್ಯಕೀಯ ರಂಗವಿಂದು ಕ್ಷೋಭೆಗೊಳಗಾಗಿದೆ. ಅದಲ್ಲದೆ ಇಂದು ವೈದ್ಯಕೀಯ ಮಾಹಿತಿ ಅಂತರ್ಜಾಲದಲ್ಲಿ ಬಹಳ ಸುಲಭವಾಗಿ ಲಭಿಸುವುದರಿಂದ ವೈದ್ಯರ ಹೇಳಿಕೆಗಳನ್ನು ‘ಒರೆ ಹಚ್ಚಿ’ ನೋಡುವ ಮತ್ತು ತಾವು ‘ತಿಳಿದುಕೊಂಡಿರುವುದು’ ವೈದ್ಯರಿಗೆ ತಿಳಿದಿದೆಯೋ ಇಲ್ಲವೋ ಎಂದು ಪರೀಕ್ಷಿಸುವ ಚಟವೂ ಬೆಳೆದಿದೆ. ಹಲವು ದಶಕಗಳ ಅನುಭವದ ನಂತರವೂ ನುರಿತ ವೈದ್ಯರೇ ಸರಿಯಾಗಿ ಅರ್ಥೈಸಿಕೊಳ್ಳಲಾಗದ ಸಮಸ್ಯೆಗಳ ಬಗ್ಗೆ, ಹತ್ತು ನಿಮಿಷ ‘ಗೂಗಲ್’ ಹುಡುಕಾಟದ ಅನಂತರ ಬಲ್ಲವರಂತೆ ಮಾತನಾಡುವ ರೋಗಿಗಳ ಸಂಬಂಧಿಕರ ಬಗ್ಗೆ ವೈದ್ಯರಲ್ಲಿ ಮೂಡುವ ಭಾವನೆ ತಿರಸ್ಕಾರವೋ ರೋಷವೋ ಕರುಣೆಯೋ ಹೇಳಲಾಗದು.
ವೈದ್ಯನೂ ಓರ್ವ ಸಾಮಾನ್ಯ ಮಾನವ, ಇತರರಂತೆ ಆತನಿಗೂ ಆಸೆ, ಆಕಾಂಕ್ಷೆ, ಸ್ವಾರ್ಥ ದೌರ್ಬಲ್ಯಗಳಿರುತ್ತವೆ. ವೈದ್ಯಕೀಯ ಜ್ಞಾನದ ಪರಿಧಿ ವಿಸ್ತಾರವಾಗುತ್ತಾ ಹೋದಂತೆ ಎಲ್ಲದರ ಬಗ್ಗೆಯೂ ಮಾಹಿತಿ ಓರ್ವನಲ್ಲಿಯೇ ಇರುವುದು ಅಸಾಧ್ಯ. ಅದರಲ್ಲೂ ಸೌಲಭ್ಯಗಳ ಅಭಾವವಿರುವ ಸರಕಾರಿ ರಂಗದಲ್ಲಿ ಕೆಲಸ ಮಾಡುವ ವೈದ್ಯರಂತೂ ಇಂದಿಗೂ ತಮ್ಮ ಅನುಭವವನ್ನು ಬಳಸಿಯೇ ರೋಗಿಗಳ ಚಿಕಿತ್ಸೆ ಮಾಡಬೇಕಾದ ಪರಿಸ್ಥಿತಿಯಿದೆ. ಹೀಗಾದಾಗ ಅಪರೂಪಕ್ಕೊಮ್ಮೆ ತಪ್ಪುಗಳಾಗಬಹುದು. ಆದರೆ ಪ್ರತಿ ಬಾರಿಯೂ ವೈದ್ಯ ತನ್ನ ನಿರ್ಲಕ್ಷ್ಯದಿಂದಲೋ ಅಥವಾ ಉದ್ದೇಶಪೂರ್ವಕವಾಗಿಯೋ ಪ್ರಮಾದವೆಸಗಿರುವಂತೆ ಬಿಂಬಿಸಿ ಇಡಿಯ ವೈದ್ಯಲೋಕವನ್ನೇ ಹಳಿಯುವುದು ಸಮಾಜ ತನಗೆ ತಾನೇ ಮಾಡಿಕೊಳ್ಳುತ್ತಿರುವ ಹಾನಿ ಎನ್ನದೇ ವಿಧಿಯಿಲ್ಲ.
ಈ ಲೇಖನ, ಕೊಂಚ ಮಟ್ಟಿಗೆ ಏಕಪಕ್ಷೀಯ ಎನ್ನಿಸುವುದು ಸಹಜ. ‘ವೈದ್ಯರಂಗದಲ್ಲಿ ಸಮಸ್ಯೆಗಳಿಲ್ಲ, ಇರುವ ವೈದ್ಯರೆಲ್ಲ ದೈವಾಂಶ ಸಂಭೂತರು’ ಎಂದು ವಾದಿಸುವುದು ಇದರ ಉದ್ದೇಶವಲ್ಲ. ಸಮಸ್ಯೆ ಏನಿದ್ದರೂ ಅದರ ಪರಿಹಾರಕ್ಕಾಗಿ ಸಮಾಜದ ಒಂದು ದೊಡ್ಡ ವರ್ಗ ಹಿಡಿದಿರುವ ದಾರಿ ತಪ್ಪು, ಇದರಿಂದ ದೀರ್ಘಕಾಲಿಕ ದುಷ್ಪಾರಿಣಾಮ ಕಟ್ಟಿಟ್ಟದ್ದು ಎಂದು ಎಚ್ಚರಿಸುವುದಷ್ಟೇ ಈ ಲೇಖನದ ಆಶಯ.
– ಡಾ| ಶಿವಾನಂದ ಪ್ರಭು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್ ಚಾಲಕನ ವಿರುದ್ಧ ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.