ಕೃಷಿ ಭೂಮಿ ಕೈಗಾರಿಕೆಗೆ ಹೋಗುತ್ತದೆಂಬುದು ತಪ್ಪು


Team Udayavani, Dec 15, 2020, 5:58 AM IST

ಕೃಷಿ ಭೂಮಿ ಕೈಗಾರಿಕೆಗೆ ಹೋಗುತ್ತದೆಂಬುದು ತಪ್ಪು

ಸಾಂದರ್ಭಿಕ ಚಿತ್ರ

ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತಂದು 79 ಎ ಮತ್ತು ಬಿ ರದ್ದುಪಡಿಸಿದ್ದರಿಂದ ರೈತಾಪಿ ಸಮುದಾಯಕ್ಕೆ ಏನೋ ತೊಂದರೆಯಾಗಿಬಿಡುತ್ತದೆ ಎಂಬ ಕಲ್ಪನೆ ಬೇಡ. ಕಾಂಗ್ರೆಸ್‌ ರೈತರನ್ನು ಎತ್ತಿಕಟ್ಟುವ, ಪ್ರಚೋದಿಸುವ ಕೆಲಸ ಬಿಡಬೇಕು.

ನಮ್ಮ ಸರಕಾರ ಕರ್ನಾಟಕ ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತಂದು 79ಎ ಮತ್ತು ಬಿ ರದ್ದುಪಡಿಸಿದ್ದರಿಂದ ರೈತಾಪಿ ಸಮುದಾಯಕ್ಕೆ ಏನೋ ತೊಂದರೆಯಾಗಿಬಿಡುತ್ತದೆ ಎಂಬ ತಪ್ಪು ಕಲ್ಪನೆ ಬೇಡ. ಇದೊಂದು ರೈತಪರ, ಕೃಷಿ- ತೋಟಗಾರಿಕೆಯಲ್ಲಿ ಆಸಕ್ತಿ ಹೊಂದಿರುವವರಿಗೆ ಕೃಷಿ ಮಾಡಲು ಮುಕ್ತ ಅವಕಾಶ ಕೊಡುವ ಕ್ರಾಂತಿಕಾರಕ ನಿರ್ಧಾರ.

ಕೊರೊನಾ ಅನಂತರ ನಗರ ಪ್ರದೇಶಗಳಿಂದ ಯುವಕರು ಮತ್ತೆ ಗ್ರಾಮಗಳಿಗೆ ಹೋಗುತ್ತಿದ್ದಾರೆ. ವಿದ್ಯಾವಂತರು ಕೃಷಿಯತ್ತ ಮರಳುತ್ತಿದ್ದಾರೆ. ಇವರೆ ಲ್ಲರಿಗೂ ಸಿಎಂ ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಸರಕಾರ ಕೈಗೊಂಡ ಮಹತ್ವದ ತೀರ್ಮಾನ ವರದಾನವಾಗಿದೆ. ಸ್ವಗ್ರಾಮಗಳಿಗೆ ಹೋಗಿರುವವರು ಸಣ್ಣ ಪ್ರಮಾಣದ ಜಮೀನು ಖರೀದಿಸಿ ನರೇಗಾ ಸೇರಿದಂತೆ ರಾಜ್ಯ ಹಾಗೂ ಕೇಂದ್ರ ಸರಕಾರದ ಯೋಜನೆಗಳ ನೆರವು ಪಡೆದು ಹೊಸ ಬದುಕು ಕಟ್ಟಿಕೊಳ್ಳಲು ಖಂಡಿತವಾಗಿಯೂ ನೆರವಾಗಲಿದೆ.

ಆದರೆ ವಿಪಕ್ಷ ಅದರಲ್ಲೂ ಕಾಂಗ್ರೆಸ್‌ ಸುಖಾಸುಮ್ಮನೆ ರೈತರಲ್ಲಿ ಗೊಂದಲ ಮೂಡಿಸುತ್ತಿದೆ. ದಶಕಗಳ ಕಾಲ ರಾಜ್ಯದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್‌ ರೈತರ ಅಭಿವೃದ್ಧಿಗೆ ಯಾವುದೇ ಸುಧಾರಣೆ ತರಲಿಲ್ಲ. ಈಗಿನ ಕಾಲಕ್ಕೆ ತಕ್ಕಂತೆ ನಮ್ಮ ಸರಕಾರ ಕೈಗೊಳ್ಳುತ್ತಿರುವ ಸಕಾಲಿಕ ನಿರ್ಧಾರ ಸಹಿಸಲು ಆ ಪಕ್ಷಕ್ಕೆ ಆಗುತ್ತಿಲ್ಲ.

ಇಲ್ಲಿ ಮತ್ತೂಂದು ವಿಷಯ. ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತಂದು 79ಎ ಮತ್ತು ಬಿ ರದ್ದು ಪಡಿಸಿರುವುದರಿಂದ ಕೃಷಿ ಜಮೀನು ಕೈಗಾರಿಕೆಗಳಿಗೆ ಹೋಗಿಬಿಡುತ್ತದೆ ಎಂಬುದು ಇನ್ನೊಂದು ತಪ್ಪು ಕಲ್ಪನೆ. ಅಂಕಿ-ಅಂಶಗಳ ಸಮೇತ ಹೇಳುವುದಾದರೆ ಕರ್ನಾಟಕ ಕೈಗಾರಿಕಾಭಿವೃದ್ಧಿ ಮಂಡಳಿ (ಕೆಐಡಿಬಿ) ಅಸ್ತಿತ್ವಕ್ಕೆ ಬಂದಿದ್ದು 1966ರಲ್ಲಿ. ಅಂದಿನಿಂದ ಇಲ್ಲಿಯವರೆಗೆ ಕೆಐಡಿಬಿ ಮೂಲಕ ರಾಜ್ಯದಲ್ಲಿ ಕೈಗಾರಿಕೆಗಾಗಿ ಕೃಷಿ ಭೂಮಿ ಸ್ವಾಧೀನ ಮಾಡಿಕೊಂಡಿದ್ದು 82,289 ಎಕರೆ. ಅದರಲ್ಲಿ 170 ಕೈಗಾರಿಕಾ ಲೇಔಟ್‌ ನಿರ್ಮಿಸಿ 20,188 ಘಟಕಗಳಿಗೆ ಜಮೀನು ಹಂಚಿಕೆ ಮಾಡಲಾಗಿದೆ.

ಇನ್ನು, ಕೆಐಡಿಬಿಯಿಂದ ದೊಡ್ಡ ದೊಡ್ಡ ಕೈಗಾರಿಕೆ ಗಳಿಗೆ (ಎಸ್‌ಯುಸಿ- ಏಕ ಘಟಕ ಸಂಕೀರ್ಣ ಯೋಜನೆ) ರೈತರಿಂದ ನೇರ ಒಪ್ಪಂದದಡಿ 74,727 ಎಕರೆ ಜಮೀನು ಸ್ವಾಧೀನಪಡಿಸಿಕೊಂಡು ನೀಡಲಾಗಿದೆ. ಈ ಎರಡೂ ಸೇರಿದರೂ 1.56 ಲಕ್ಷ ಎಕರೆ. ಇದು ರಾಜ್ಯದ ಒಟ್ಟಾರೆ ಕೃಷಿ ಸಾಗುವಳಿ ಜಮೀನಿನಲ್ಲಿ ಶೇ.1ರಷ್ಟೂ ಇಲ್ಲ. ಮತ್ತೂಂದು ವಿಚಾರ ಅಂದರೆ, ಕೈಗಾರಿಕೆಗಳಿಗೆ ಕೊಟ್ಟ ಜಮೀನು ಬೇರೆ ಉದ್ದೇಶಕ್ಕೆ ಬಳಕೆಯಾಗಿದೆ. ಕೈಗಾರಿಕೆ ಮಾಡದೆ ಮಾರಾಟ ಮಾಡಿಬಿಟ್ಟಿದ್ದಾರೆ ಎನ್ನಲಾಗುತ್ತದೆ. ಇದು ಸಂಪೂರ್ಣ ಸತ್ಯವಲ್ಲ. ಶೇ.10ರಷ್ಟು ಪ್ರಕರಣಗಳಲ್ಲಿ ಬೇರೆ ಬೇರೆ ಕಾರಣಗಳಿಗೆ ಕೈಗಾರಿಕೆ ಮಾಡದೆ ಇರಬಹುದು. ಇದೀಗ ಅಂತಹ ಪ್ರಕರಣಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ.

ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತಂದು 79ಎ, ಬಿ ರದ್ದುಪಡಿಸಿದ್ದರಿಂದ ಕೃಷಿ ಭೂಮಿ ಕೈಗಾರಿಕೆಗೆ ಹೋಗಿಬಿಡುತ್ತದೆ ಎಂದು ಬೊಬ್ಬೆ ಹಾಕಲಾಗುತ್ತಿದೆ. 79ಎಬಿ ನಿಯಮ ಜಾರಿಯಲ್ಲಿದ್ದಾಗ ಇಷ್ಟು ವರ್ಷಗಳಲ್ಲಿ ಉಲ್ಲಂಘನೆಯಾದ ಪ್ರಕರಣಗಳಲ್ಲಿ ಎಷ್ಟು ಭೂಮಿ ವಶಕ್ಕೆ ಪಡೆಯಲಾಗಿದೆ? 200 ಎಕರೆ ಮೀರಿಲ್ಲ,

ನೆರೆಯ ಆಂಧ್ರ, ತಮಿಳುನಾಡು, ತೆಲಂಗಾಣ, ಕೇರಳ, ಮಹಾರಾಷ್ಟ್ರ, ಗೋವಾ ಎಲ್ಲಿಯೂ 79 ಎ, ಬಿ ಇಲ್ಲ. ಕರ್ನಾಟಕದಲ್ಲಿ ಮಾತ್ರ ಜಾರಿಯಲ್ಲಿತ್ತು. 79 ಎ ಅಡಿ ಕೃಷಿಕ ಅಲ್ಲದ ವ್ಯಕ್ತಿ ಕೃಷಿ ಭೂಮಿ ಖರೀದಿ ಮಾಡಲು ಆಗದು. ಕೃಷಿಕರಲ್ಲದವರು ಕೃಷಿ ಭೂಮಿ ಖರೀದಿಸಿ ದರೆ ನಿಯಮ ಉಲ್ಲಂಘನೆಯಾಗಿ ಸರಕಾರಕ್ಕೆ ಜಮೀನು ವಶಕ್ಕೆ ಪಡೆಯಬಹುದಾಗಿತ್ತು. 79ಬಿ ಅಡಿ ವರಮಾನ ಷರತ್ತು ಇತ್ತು. 25 ಲಕ್ಷ ರೂ. ಮೇಲ್ಪಟ್ಟು ಕೃಷಿಯೇತರ ವರಮಾನ ಇದ್ದವರು ಕೃಷಿ ಭೂಮಿ ಖರೀದಿಸಲು ಅವಕಾಶ ಇರಲಿಲ್ಲ. ಈ ನಿಯಮ ತೆಗೆದು ಹಾಕಲಾಗಿದೆ. ಇದರಿಂದ ಯಾರು ಬೇಕಾದರೂ ಕೃಷಿಯಲ್ಲಿ ತೊಡಗಲು ಅವಕಾಶ ಕಲ್ಪಿಸಲಾಗಿದೆ.

ಭೂಮಿ ಖರೀದಿ ಮಿತಿ ಹೆಚ್ಚಿಸಿರುವುದರಿಂದ ಸಾವಿರಾರು ಎಕರೆ ಜಮೀನು ಹಣ ಉಳ್ಳವರ ಪಾಲಾಗುತ್ತದೆ ಎಂಬ ಆರೋಪ ಮಾಡಲಾಗುತ್ತದೆ. ಯಾರೂ ಹಣ ಇದೆ ಎಂದು ಸಾವಿರಾರು ಎಕರೆ ಜಮೀನು ಖರೀದಿ ಮಾಡುವುದಿಲ್ಲ. ನಗರ ಪ್ರದೇಶಗಳಲ್ಲಿ ಕೆಲವು ಮಟ್ಟಿಗೆ ಖರೀದಿಸಬಹುದು. ನಮ್ಮ ಭಾಗದ ಕುಂದಗೋಳ, ಕಲಘಟಗಿಯಂತಹ ಪ್ರದೇಶಗಳಲ್ಲಿ ಯಾರು ಖರೀದಿಸುತ್ತಾರೆ? ಇಷ್ಟಕ್ಕೂ 5 ಸದಸ್ಯರ ಕುಟುಂಬಕ್ಕೆ 54 ಎಕರೆ ಖರೀದಿಗೆ ಮಾತ್ರ ಅವಕಾಶ. ಅದಕ್ಕಿಂತ ಹೆಚ್ಚು ಖರೀದಿಸಬೇಕಾದರೆ ಮತ್ತೆ ಸರಕಾರದ ಅನುಮತಿ ಪಡೆಯಬೇಕು. 100 ಅಥವಾ 200 ಎಕರೆ ಬೇಕು ಎಂದರೆ ಸೆಕ್ಷನ್‌ 109ರಡಿ ಅನುಮತಿ ಪಡೆಯಬೇಕು. ಸರಕಾರ ತನಿಖೆ ನಡೆಸಿದ ನಂತರವೇ ಅನುಮತಿ ಸಿಗಲಿದೆ. ಹೀಗಾಗಿ, ಬಂಡವಾಳಶಾಹಿಗಳು ಜಮೀನು ಖರೀದಿ ಮಾಡುತ್ತಾರೆ ಎಂಬುದಕ್ಕೆ ಅರ್ಥವಿಲ್ಲ. ಇನ್ನು ರಬ್ಬರ್‌, ಕಾಫಿ, ಪ್ಲಾಂಟೇಷನ್‌ ಖರೀದಿಗೆ ಭೂ ಸುಧಾರಣೆ ಕಾಯ್ದೆ ಅನ್ವಯ ಆಗದು. ಹಾಸನ, ಕೊಡಗು, ಚಿಕ್ಕಮಗಳೂರು ವ್ಯಾಪ್ತಿಯಲ್ಲಿ 200 ಎಕರೆ ಪಡೆಯಲು ಷರತ್ತು ಇಲ್ಲ.

ಈಗಲೂ ನಮ್ಮ ಕಾಯ್ದೆಯಲ್ಲಿ ಜಲಾನಯನ ಪ್ರದೇಶದ ಜಮೀನು, ನೀರಾವರಿ ಜಮೀನು ಕೈಗಾರಿಕೆಗೆ ಬಳಕೆಗೆ, ದಲಿತರ ಜಮೀನು ಖರೀದಿಗೆ ಅವಕಾಶ ಇಲ್ಲ. ಈಗಲೂ ಉಳುವವನೆ ಭೂ ಒಡೆಯ ಅದರಲ್ಲಿ ಯಾವುದೇ ಬದಲಾವಣೆಯೇ ಇಲ್ಲ. ರೈತರೇ ಇಲ್ಲಿ ಮಾಲಕರು. ಅವರು ಇಷ್ಟಪಟ್ಟರೆ ಮಾತ್ರ ಭೂಮಿ ಖರೀದಿ. ನಾವು ಕಾಯ್ದೆಗೆ ತಿದ್ದುಪಡಿ ತಂದ ಅನಂತರ ರೈತರ ಜಮೀನಿನ ಬೆಲೆ ಹೆಚ್ಚಾಗಿದೆ. ನಾನೂ ರಾಜ್ಯಾದ್ಯಂತ ಪ್ರವಾಸ ಮಾಡಿದ್ದು ಎಲ್ಲಿಯೂ 79 ಎ, ಬಿ ರದ್ದತಿಗೆ ರೈತರು ವಿರೋಧ ವ್ಯಕ್ತಪಡಿಸಲಿಲ್ಲ.

ಭೂ ಸುಧಾರಣೆ ಕಾಯ್ದೆಗೆ ನಾವು ಏಕಾಏಕಿ ತಿದ್ದುಪಡಿ ತಂದಿದ್ದಲ್ಲ. ನಮ್ಮ ಸರಕಾರ ಬಂದ ಮೇಲೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ನೇತೃತ್ವದಲ್ಲಿ ದಾವೋಸ್‌ ಅಂತಾರಾಷ್ಟ್ರೀಯ ಆರ್ಥಿಕ ಸಮಾವೇಶಕ್ಕೆ ಹೋಗಿದ್ದೆವು. ಅಲ್ಲಿ ಎಲ್ಲ ರಾಜ್ಯಗಳ ಮುಖ್ಯಸ್ಥರು, ಕೈಗಾರಿಕಾ ಮುಖ್ಯಸ್ಥರು ಬಂದಿದ್ದರು. ಮುಖಾಮುಖೀ ಭೇಟಿಗೆ ಅವಕಾಶವಿತ್ತು. ಮೊದಲಿನಿಂದಲೂ ಕರ್ನಾಟಕಕ್ಕೆ ಕೈಗಾರಿಕೆ ಸ್ನೇಹಿ ಎಂಬ ಹೆಸರಿದೆ. ಬಹಳಷ್ಟು ಉದ್ಯಮಿಗಳು ಇಲ್ಲಿ ಕೈಗಾರಿಕೆ ಮಾಡಲು ಬಯಸುತ್ತಾರೆ. ಆದರೆ, ಕೃಷಿ ಜಮೀನು ಖರೀದಿಗೆ ಸೆಕ್ಷನ್‌ 79 ಎ ಮತ್ತು ಬಿ ಸಮಸ್ಯೆಯಾಗುತ್ತಿದೆ. ಅಧಿಕಾರಿಗಳಿಂದ ಕಿರಿಕಿರಿ, ಭ್ರಷ್ಟಾಚಾರಕ್ಕೆ ಅವಕಾಶ ಕಲ್ಪಿಸಿದಂತಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.

79ಎಬಿ ಪ್ರಕರಣಗಳಲ್ಲಿ ನಕಲಿ ದಾಖಲೆ ಸೃಷ್ಟಿಸುವ ಕೆಲಸ ಆಗುತ್ತಿದೆ. ಅಲ್ಲಿ ದಾಖಲಾದ ಪ್ರಕರಣಗಳಿಗಿಂತ ಡ್ರಾಪ್‌ ಆದ ಪ್ರಕರಣಗಳೇ ಹೆಚ್ಚು ಎಂಬುದು ನಮ್ಮ ಗಮನಕ್ಕೂ ಬಂತು. ಹೀಗಾಗಿ, ನಾವು ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತರುವ ತೀರ್ಮಾನ ಮಾಡಿದೆವು. ಕೃಷಿ ಭೂಮಿ ಕೃಷಿಗೆ ಪೂರಕವಾದ ಆಹಾರ ಸಂಸ್ಕರಣೆಯ ಕೈಗಾರಿಕೆಗೆ ಬಳಕೆ ಆಗಬಹುದಲ್ಲವೇ? ಅದರಿಂದ ಉದ್ಯೋಗ ಸೃಷ್ಟಿಯಾಗುವುದಿಲ್ಲವೇ?
ಎಪಿಎಂಸಿ ಕಾಯ್ದೆ ಸಹ ರೈತರ ಒಳ್ಳೆಯದಕ್ಕೇ. ಆದರೆ ಅದಕ್ಕೂ ರಾಜಕೀಯ ಲೇಪನ ಮಾಡಲಾಗಿದೆ. ಎಪಿಎಂಸಿ ಕಾಯ್ದೆ ಬಂದ ಅನಂತರ ಎಷ್ಟು ಜನ ರೈತರಿಗೆ ಒಳ್ಳೆಯದಾಗಿದೆ. ದಲ್ಲಾಳಿಗಳು ಲಾಭ ಮಾಡುತ್ತಿದ್ದಾರೆ ಅಷ್ಟೇ. ನಾವು ಎಪಿಎಂಸಿ ರದ್ದು ಮಾಡಿಲ್ಲ. ಹರಿಯಾಣ, ಪಂಜಾಬ್‌, ಮಹಾರಾಷ್ಟ್ರದಲ್ಲಿ ಪ್ರತಿಭಟನೆಗೆ ಅರ್ಥವಿಲ್ಲ. ಮಹಾರಾಷ್ಟ್ರದಲ್ಲಿ ಶರದ್‌ಪವಾರ್‌ ಅಡ್‌ ಟೀಂನಲ್ಲಿ ದಲ್ಲಾಳಿಗಳಿದ್ದಾರೆ. ಅವರೇ ಪ್ರಚೋದಿಸಿ ರೈತರನ್ನು ಪ್ರತಿಭಟನೆಗೆ ಇಳಿಸಿದ್ದಾರೆ. ಇದು ಮಧ್ಯವರ್ತಿಗಳ ಲಾಬಿ. ಹರಿಯಾಣ, ದಿಲ್ಲಿಯಲ್ಲಿ ರೈತರು ಪ್ರತಿಭಟನೆ ಮಾಡುತ್ತಿರುವುದಕ್ಕೂ ಇದೀಗ ನಮ್ಮ ರಾಜ್ಯದಲ್ಲಿ ಭೂ ಸುಧಾರಣೆಗೆ ಕಾಯ್ದೆಗೆ ವಿರೋಧ ಪಡಿಸಿ ಪ್ರತಿಭಟನೆ ಮಾಡುತ್ತಿರುವುದಕ್ಕೆ ಅರ್ಥವೇ ಇಲ್ಲ. ಆ ಭಾಗದಲ್ಲಿ 79 ಎ, ಬಿ ಕಾನೂನೇ ಇಲ್ಲ.

1994ರಿಂದ 1999 ದೇವೇಗೌಡರು ಮುಖ್ಯಮಂತ್ರಿ ಯಾಗಿ ಕೈಗಾರಿಕೆ ಸಲುವಾಗಿ ಕೃಷಿ ಭೂಮಿ ಖರೀದಿ ಪ್ರಮಾಣ ಹೆಚ್ಚಿಸಿ ಅವಕಾಶ ಕೊಟ್ಟರು. ಹಾಗಾದರೆ ಯಾಕೆ ಕೊಟ್ಟರು? ಕಾಲಕ್ಕೆ ತಕ್ಕಂತೆ ನಿರ್ಧಾರ ಮಾಡಬೇಕಾಗುತ್ತದೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಕೃಷಿ ಭೂಮಿ ಖರೀದಿಗೆ 2 ಲಕ್ಷ ರೂ. ಇದ್ದ ಮಿತಿ 25 ಲಕ್ಷ ರೂ.ವರೆಗೆ ಹೆಚ್ಚಿಸಿದರು. ರೈತರನ್ನು ಉದ್ಧಾರ ಮಾಡುವವರು ಹಾಗೆಯೇ ಬಿಡಬೇಕಿತ್ತಲ್ಲವೇ? ಕಾಂಗ್ರೆಸ್‌ ರೈತರನ್ನು ಪ್ರಚೋದಿಸುವ ಕೆಲಸ ಬಿಡಬೇಕು. ರೈತರು, ಜನಸಾಮಾನ್ಯರಿಗೆ ಯಾವುದು ಒಳ್ಳೆಯದು ಹಾಗೂ ಕೆಟ್ಟದ್ದು ಎಂಬುದೂ ಗೊತ್ತಿದೆ.

ಜಗದೀಶ್‌ ಶೆಟ್ಟರ್‌, ಬೃಹತ್‌ ಕೈಗಾರಿಕೆ ಸಚಿವರು

ಟಾಪ್ ನ್ಯೂಸ್

Yathanal

Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್‌ ಆಕ್ರೋಶ

BY-Vijayendra

Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

One Nation, One Election; ಏಕ ಚುನಾವಣೆ: ಸಾಂವಿಧಾನಿಕ ಸವಾಲು

One Nation, One Election; ಏಕ ಚುನಾವಣೆ: ಸಾಂವಿಧಾನಿಕ ಸವಾಲು

Train ಹಳಿ ಧ್ವಂಸ ತಡೆಯಲು ನಾವೇನು ಮಾಡಬಹುದು?

Train ಹಳಿ ಧ್ವಂಸ ತಡೆಯಲು ನಾವೇನು ಮಾಡಬಹುದು?

3-

Investigative Authorities: ಕುಸಿಯುತ್ತಿದೆ ತನಿಖಾ ಪ್ರಾಧಿಕಾರಗಳ ವಿಶ್ವಾಸಾರ್ಹತೆ !

ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

Employment: ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Yathanal

Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್‌ ಆಕ್ರೋಶ

sand 1

Padubidri: ಮರಳು ಅಕ್ರಮ ಸಾಗಾಟ; ವಶ

dw

Malpe: ಕಲ್ಮಾಡಿ; ಕಟ್ಟಡದಿಂದ ಬಿದ್ದು ಕಾರ್ಮಿಕ ಸಾವು

9

Dr MC Sudhakar: ‘ಹೈಕಮಾಂಡ್‌ ಎಷ್ಟು ದಿನ ಜವಾಬ್ದಾರಿ ಕೊಡುತ್ತೋ ಅಷ್ಟು ದಿನ ಸಚಿವ’

3

Brahmavar: ಕೊಕ್ಕರ್ಣೆ; ಜುಗಾರಿ ನಿರತನ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.