ಮಹಿಳಾ ಸುರಕ್ಷತೆಗೆ ಇಡಲೇಬೇಕಿದೆ ದಿಟ್ಟ ಹೆಜ್ಜೆ
Team Udayavani, Jun 14, 2019, 5:39 AM IST
ಉತ್ತರ ಪ್ರದೇಶದ ಅಲೀಗಢದಲ್ಲಿ ಮೇ 31 ರಂದು 3 ವರ್ಷದ ಬಾಲೆಯನ್ನು ಅಪಹರಿಸಿ ಅತ್ಯಾಚಾರವೆಸಗಿ ಅಮಾನುಷವಾಗಿ ಹತ್ಯೆಮಾಡಿದ್ದಾರೆ. ಕೊಲೆಗೆ ಕಾರಣ ಬಾಲಕಿಯ ಹೆತ್ತವರು ಸಾಲವಾಗಿ ಪಡೆದಿದ್ದ ಹಣವನ್ನು ಮರು ಪಾವತಿಸಲು ಅಸಾಧ್ಯವಾದದ್ದು. ರೋಷಗೊಂಡ ಹಂತಕರು ಸೇಡು ತೀರಿಸಿಕೊಂಡರು.
ಕೊಲೆಗಾರನೋರ್ವನು ಕೊಲೆಯಾದವನ ಭೌತಿಕ ಚೌಕಟ್ಟನ್ನು ನಾಶಗೊಳಿಸುತ್ತಾನೆ. ಆದರೆ ಅತ್ಯಾಚಾರಿಯು ಅಸಹಾಯಕ ಹೆಣ್ಣಿನ ಆತ್ಮವನ್ನು ಅವಮಾನಿಸುತ್ತಾನೆ, ಅಲ್ಲದೆ ಕಲುಷಿತ ಗೊಳಿಸುತ್ತಾನೆ ಎಂಬುದೊಂದು ಅತ್ಯಾಚಾರದ ಕುರಿತಾದ ಪ್ರಸಿದ್ಧ ಉದ್ಧರಣ. ಮಹಿಳೆಯರ ಮೇಲೆ ಲೈಂಗಿಕ ದಾಳಿ ನಮ್ಮ ದೇಶದಲ್ಲಿ ಒಂದು ಸಾಮಾನ್ಯ ದಿನಚರಿಯ ರೀತಿಯಲ್ಲಿ ನಡೆಯುತ್ತಿದೆ. ಲೈಂಗಿಕ ಪೀಡನೆ, ಚುಡಾಯಿಸುವಿಕೆ, ಬಾಲಕಿಯರ ಲೈಂಗಿಕ ದುರಾಚಾರ, ಅತ್ಯಾಚಾರ, ವೈವಾಹಿಕ ಅತ್ಯಾಚಾರ ಮತ್ತು ಗೃಹಕೃತ್ಯದ ಹಿಂಸೆ ಇತ್ಯಾದಿಗಳನ್ನು ಲೈಂಗಿಕ ದಾಳಿ ಎಂದು ಪರಿಗಣಿಸಲಾಗಿದೆ. ಈ ಪೈಕಿ ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರವು ಹೇಯ ಅಪರಾಧವಾಗಿದೆ. ಭಾರತೀಯ ದಂಡ ಸಂಹಿತೆ 375ರಂತೆ ಅತ್ಯಾಚಾರ ಎಂದರೆ ಪುರುಷನೋರ್ವನು ಮಹಿಳೆಯ ಒಪ್ಪಿಗೆಯಿಲ್ಲದೆ, ಕಾನೂನು ಬಾಹಿರವಾಗಿ ಲೈಂಗಿಕ ಕ್ರಿಯೆಗೆ ಪ್ರಯತ್ನಿಸುವುದು. ಅತ್ಯಾಚಾರ ಕ್ಕೊಳಗಾದ ಮಹಿಳೆಯು ಭಯದಿಂದ, ಖನ್ನತೆಯಿಂದ, ಪಾಪಪ್ರಜ್ಞೆಯಿಂದ, ಸಾಮಾಜಿಕ ಕಳಂಕಕ್ಕೆ ಹೆದರಿ ಕೆಲವೊಮ್ಮೆ ಆತ್ಮಹತ್ಯೆಗೆ ಪ್ರಯತ್ನಿಸುವುದು ಇದೆ. ಅಂತೂ ಅವಳ ಬದುಕು ಕರುಣಾಜನಕವಾಗಿ ಇರುತ್ತದೆ.
ಇತ್ತೀಚಿನ ದಿನಗಳಲ್ಲಂತೂ ಅತ್ಯಾಚಾರದ ಪ್ರಕರಣಗಳು ಹೆಚ್ಚಿವೆ. ಅಂಕಿ ಅಂಶಗಳಂತೆ, ದೇಶದಲ್ಲಿ ಪ್ರತಿ ಗಂಟೆಗೆ ಇಬ್ಬರು ಮಹಿಳೆಯರು ಮತ್ತು ಪ್ರತಿ 10 ಗಂಟೆಗೆ 1-10 ವಯಸ್ಸಿನ ಹುಡುಗಿಯರು ಅತ್ಯಾಚಾರಕ್ಕೀಡಾಗುತ್ತಾರೆ. ಅತ್ಯಾಚಾರಿಗಳಿಗೆ ಕಾನೂನಿನ ಭಯವಿಲ್ಲ. ಅಪ್ರಾಪ್ತ ವಯಸ್ಕ ಹಸುಳೆಗಳು, ಬಾಲಕಿಯರು ಮತ್ತು ವಯಸ್ಸಾದ ಹೆಂಗಸರೂ ಅತ್ಯಾಚಾರಕ್ಕೆ ಒಳಗಾಗುತ್ತಾರೆ. ಅತ್ಯಾಚಾರಗಳು ಬಹುತೇಕ ಕೊಲೆಯಲ್ಲಿ ಪರ್ಯಾವಸಾನಗೊಳ್ಳುತ್ತವೆ. ಹೆಚ್ಚಿನ ಅತ್ಯಾಚಾರ ಪ್ರಕರಣಗಳಲ್ಲಿ ಆರೋಪಿಯು ಹಾನಿಗೊಳಗಾದವಳ ಪರಿಚಯವುಳ್ಳ ವನಾಗಿ ರುತ್ತಾನೆ. ಸ್ನೇಹಿತನೋ, ಸಂಬಂಧಿಯೋ, ನೆರೆಕೆರೆಯವನೋ ಆಗಿರುತ್ತಾನೆ.
ಮನುಕುಲಕ್ಕೆ ಆಘಾತಕಾರಿ ಅನ್ನುವ ರೀತಿಯಲ್ಲಿ ಮೊನ್ನೆ ಅಲೀಗಢದಲ್ಲಿ ನಡೆದ ಹಸುಳೆಯ ಕೊಲೆ. ಅದು ಅತ್ಯಂತ ಬೀಭತ್ಸವಾಗಿತ್ತು! ಅತ್ಯಾಚಾರ ಮಾತ್ರವಲ್ಲ ಹಸುಳೆಯ ಅಂಗಾಂಗ ಗಳನ್ನು ಘಾಸಿಗೊಳಿಸಿ, ಆ್ಯಸಿಡ್ ಎರಚಿ ಕುರೂಪಿ ಯನ್ನಾಗಿ ಮಾಡಿಕೊಂದೇ ಬಿಟ್ಟಿದ್ದ. ಶಾಲಾ ಶಿಕ್ಷಕರೇ ವಿದ್ಯಾರ್ಥಿನಿ ಯರನ್ನು ಅತ್ಯಾಚಾರಮಾಡುವ ಪ್ರಕರಣಗಳೂ ಇಲ್ಲದಿಲ್ಲ.
ಅತ್ಯಾಚಾರಕ್ಕೆ ಕಾರಣಗಳು?: ಅತ್ಯಾಚಾರ ಪ್ರಕರಣಗಳು ಹೆಚ್ಚಲು ಕಾರಣವೇನು? ಸಾರ್ವಜನಿಕ ಸುರಕ್ಷತೆಯ ಅಭಾವವು ಒಂದು ಕಾರಣ. ಮನೆ ಹೊರಗಡೆಯಿರುವ ಮಹಿಳೆಯರು ಸುರಕ್ಷಿತರಲ್ಲ. ಅಷ್ಟೇಕೆ ಮನೆಯೊಳಗಿರುವವರೂ ಸುರಕ್ಷಿತವಾಗಿಲ್ಲ. ಅತ್ಯಾಚಾರಕ್ಕೊಳಗಾದ ಮಹಿಳೆಯ ಮನೆ ಯಲ್ಲೇ ಅಪರಾಧ ನಡೆಯುತ್ತದೆ. ಚಲಿಸುವ ವಾಹನಗಳೂ ಅತ್ಯಾಚಾರದ ತಾಣಗಳಾಗಿವೆ. ಪೊಲೀಸ್ ಅಧಿಕಾರಿಗಳು ಮತ್ತು ವಿಶೇಷವಾಗಿ ಮಹಿಳಾ ಪೊಲೀಸರ ಕೊರತೆಯೂ ಇದೆ. ಒಂದು ವರದಿಯಂತೆ ಪ್ರತಿ 200 ನಾಗರಿಕರಿಗೆ ಒಬ್ಬ ಪೊಲೀಸ್ ಅಧಿಕಾರಿಯಿರುತ್ತಾನೆ. ಮಹಿಳಾ ಪೊಲೀಸ್ ಅಧಿಕಾರಿಗಳಿದ್ದರೆ ಮಹಿಳೆಯರು ಲೈಂಗಿಕ ಅಪರಾಧಗಳ ಬಗ್ಗೆ ದೂರು ನೀಡುತ್ತಾರೆ. ಆದರೆ ಮಹಿಳಾ ಪೊಲೀಸ್ ಸಿಬ್ಬಂದಿಯ ಕೊರತೆಯಿಂದಾಗಿ ಸಮಸ್ಯೆ ಉಲ್ಬಣ ಗೊಳ್ಳುತ್ತಿದೆ. ದೇಶದ ಜಡ ನ್ಯಾಯಾಂಗ ವ್ಯವಸ್ಥೆಯೂ ಒಂದು ಕಾರಣವೇ.
ಭಾರತೀಯ ನ್ಯಾಯಾಂಗ ವ್ಯವಸ್ಥೆಯು ನಿಧಾನಗತಿಯುಳ್ಳದ್ದು. ಅತ್ಯಾಚಾರದ ಪ್ರಕರಣಗಳು ದಾಖಲಾದರೂ ಅಪರಾಧ ನಿರ್ಣಯವು ಕೇವಲ 26 ಶೇಕಡದಷ್ಟು ನಡೆಯುತ್ತದೆ. ದಾಳಿಗೊಳಗಾದವಳ ಹೆಸರಿಗೆ ಕಳಂಕ ಅಂಟುವುದರಿಂದ ಮತ್ತು ಆಕೆಯನ್ನು ಸಂಧಾನಕ್ಕಾಗಿ ಮನವೊಲಿಸುವುದರಿಂದ ಇಂತಹ ಹೀನ ಅಪರಾಧಗಳು ಕಡಿಮೆಯಾಗಲಾರವು.
ಗ್ರಾಮಾಂತರ ಪ್ರದೇಶಗಳಲ್ಲಿ ಇಂತಹ ಕೃತ್ಯಗಳು ನಡೆದಾಗ, ಆರೋಪಿಯ ವಿರುದ್ಧದ ಪ್ರಕರಣವನ್ನು ಹಿಂಪಡೆಯಲು ಒತ್ತಾಯಿಸಲಾಗುತ್ತದೆ. ಮೇಲಾಗಿ, ಅತ್ಯಾಚಾರಿಯನ್ನೇ ಮದುವೆ ಮಾಡಿಕೊಳ್ಳುವಂತೆ ಹುರಿದುಂಬಿಸಲಾಗುವುದು. ಬೇರಾರು ಮದುವೆ ಯಾಗಲಾರರು, ಇಡಿಯ ಕುಟುಂಬಕ್ಕೆ ಇದು ಅವಮಾನ ಎಂದು ಬೋಧಿಸಲಾಗುತ್ತದೆ. ಇತ್ತೀಚೆಗೆ ಫ್ಯಾಷನ್ ಹೆಸರಲ್ಲಿ ಮಹಿಳೆಯರು ಬಳಸುವ ಪೋಷಾಕು ಅತ್ಯಾಚಾರದ ಸಂಖ್ಯೆ ಹೆಚ್ಚಲು ಕಾರಣ ಎನ್ನುತ್ತವೆ ಕೆಲವು ವರದಿಗಳು. ಅಶ್ಲೀಲ ಸಿನಿಮಾಗಳು ಒಂದು ಕಾರಣ ಎನ್ನಬಹುದು.
ಸಿನೆಮಾ ಕೊಡುಗೆ: ಬಹುತೇಕ ಹದಿಹರೆಯದವರ ರೋಲ್‌ಮಾಡೆಲ್ ಆಗಿರುವ ಸಿನೇಮಾಗಳ ವೀರ ನಾಯಕರುಗಳನ್ನು ಪುಂಸತ್ವ ಪ್ರದರ್ಶನ ಮತ್ತು ಹಿಂಸೆಯನ್ನು ಪ್ರದರ್ಶಿಸುವವರೆಂದು ತೋರಿಸುವುದು. ಪುರುಷತ್ವವನ್ನು ಬಿಂಬಿಸುವ ಅಷ್ಟೇ ಬಲಶಾಲೀ ಸ್ತ್ರೀ ಪಾತ್ರಗಳನ್ನು ಬಿಂಬಿಸುವುದಿಲ್ಲ. ಐಟಮ್ ನಂಬರ್ ಹಾಡು ನೃತ್ಯವನ್ನು ಚಿತ್ರದಲ್ಲಿ ತೋರಿಸುವುದರ ಮೂಲಕ ಹೈಪರ್ ಸೆಕ್ಸ್ ನ್ನು ತೋರಿಸಲಾಗುತ್ತದೆ. ಕಥೆಗೆ ಸಂಬಂಧವಿರದಿದ್ದರೂ ಹಾಡನ್ನು ಕೇವಲ ಮನೋರಂಜನೆಗಾಗಿ ಚಿತ್ರಿಸಲಾಗುತ್ತದೆ. ಐಟಂ ನಂಬರ್ ಹಾಡುಗಳಲ್ಲಿ ನಟಿಸುವವರನ್ನು ಐಟಮ್ ಗರ್ಲ್ಸ್ ಎಂದು ಸಂಬೋಧಿಸಲಾಗುತ್ತದೆ.
ಹೆಣ್ಣನ್ನು ಒಂದು ಭೋಗದ ವಸ್ತುವೆಂದು ವೈಭವೀಕರಿಸಲಾಗುತ್ತದೆ. ಸಿನೇಮಾ ಯಶಸ್ಸು ಐಟಮ್ ನಂಬರ್‌ಗಳ ಮೇಲೆ ಅವಲಂಬಿಸಿದೆ. ಲಿಂಗ ಸಂಬಂಧಿ ಹಿಂಸೆ ಮತ್ತು ಲೈಂಗಿಕ ದಾಳಿ ಬಗ್ಗೆ ಮಾಧ್ಯಮಗಳು ಗಂಭೀರವಾಗಿ ಚರ್ಚೆಮಾಡುತ್ತಿರುವಂತೆಯೇ ಸಿನೆಮಾ ರಂಗ ಅದನ್ನು ಗಂಭೀರವಾಗಿ ಪರಿಗಣಿಸುವುದೇ ಇಲ್ಲ! ಅಂತಹ ಚಿತ್ರಗಳ ನಾಯಕ ನಟರು ಅತ್ಯಾಚಾರದ ಬಗ್ಗೆ ಮಾತನಾಡುತ್ತಾ ಅದು ಚಿತ್ರ ಪ್ರಚಾರದ ಭಾಗ ಎಂದು ಹೇಳುವುದೇ ವಿರುದ್ಧ ಪರಿಣಾಮಕವಾಗಿರುತ್ತದೆ.
ಪರಿಹಾರಗಳೇನು?: ಮೊಟ್ಟಮೊದಲಿಗೆ ಲೈಂಗಿಕ ದಾಳಿ ವಿರುದ್ಧವಾಗಿ ಇರುವ ನಮ್ಮ ಕಾನೂನುಗಳು ಕಠಿಣವಾಗಬೇಕು. ಅತ್ಯಾಚಾರಿ ಆರೋಪಿಗೆ ಮರಣದಂಡನೆ ಶಿಕ್ಷೆಯಾಗಬೇಕು. ಪ್ರತಿ ಜಿಲ್ಲೆಯಲ್ಲೂ ಮಹಿಳೆಯರ ಸಮಸ್ಯೆಗಾಗಿ ಮಹಿಳಾ ಪೊಲೀಸ್ ತಂಡಗಳ ರಚನೆಯಾಗಬೇಕು. ಕ್ಷಿಪ್ರ ನ್ಯಾಯದಾನಕ್ಕೆ ಫಾಸ್ಟ್ ಟ್ರ್ಯಾಕ್‌ನಂತಹ ವಿಶೇಷ ಕೋರ್ಟುಗಳ ಸ್ಥಾಪನೆಯಾಗಬೇಕು. ರೇಪ್ ಕ್ರೆçಸಿಸ್ ಸೆಂಟರ್‌ಗಳನ್ನು ಸರಕಾರೇತರ ಸಂಸ್ಥೆಗಳು ತೆರೆಯು ವುದರ ಮೂಲಕ ಅತ್ಯಾಚಾರಕ್ಕೊಳಗಾದವರನ್ನು ಸಂತೈಸುವ ಮತ್ತು ಕಾನೂನಾತ್ಮಕವಾಗಿ ಪರಿಹಾರ ಸಿಗುವಲ್ಲಿ ಪ್ರಯತ್ನಿಸುವುದು.
ಸ್ತ್ರೀಯರು ಅದ್ಭುತವಾದ ಸುಪುತ್ರಿಯರು, ಸಹೋದರಿಯರು, ಪತ್ನಿಯರು ಮತ್ತು ತಾಯಂದಿರು. ಅವರನ್ನು ಪ್ರೀತಿಸಬೇಕು, ಗೌರವಿಸಬೇಕು ಎಲ್ಲಕ್ಕೂ ಮಿಗಿಲಾಗಿ ಅವರನ್ನು ರಕ್ಷಿಸಬೇಕು.
– ಜಲಂಚಾರು ರಘುಪತಿ ತಂತ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bantwal: ತುಂಬೆ ಶ್ರೀಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕನ್ನ; ಲಕ್ಷಾಂತರ ಮೌಲ್ಯದ ನಗನಗದು ಲೂಟಿ
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
ಅಂಗಡಿಯಲ್ಲಿ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ
Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ
ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.