ಇದು ಗೋ ಸ್ವಾತಂತ್ರ್ಯ ಸಂಗ್ರಾಮ
Team Udayavani, Jan 25, 2017, 3:45 AM IST
ಶ್ರೀರಾಮಚಂದ್ರಾಪುರ ಮಠಾಧೀಶ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಕಳೆದ ಗೋಪಾಷ್ಟಮಿಯಂದು (ನ. 8, 2016)
ಆರಂಭಿಸಿದ ಮಂಗಲ ಗೋಯಾತ್ರೆ ಗೋವುಗಳ ಬಗ್ಗೆ ಎಚ್ಚರ ಮೂಡಿಸುವ ಸಂಚಾರ ನಡೆಸಿ ಸಮಾಪನಕ್ಕೆ ಸಿದ್ಧವಾಗಿದೆ. ಯಾತ್ರೆಯ ಮಹಾಮಂಗಲ ಮಂಗಳೂರು ಸಮೀಪದ ಕೂಳೂರು ಗೋಲ್ಡ್ ಫಿಂಚ್ ಸಿಟಿಯ ಮಂಗಲಭೂಮಿಯಲ್ಲಿ 2017ರ ಜ.29ರಂದು ನಡೆಯಲಿದೆ. ಈ ಮಂಗಲ ಗೋಯಾತ್ರೆಯನ್ನು ನಡೆಸಿದ್ದೇಕೆ ಎಂಬುದನ್ನು ಸ್ವಾಮೀಜಿ ಇಲ್ಲಿ ವಿವರಿಸಿದ್ದಾರೆ.
ಮಂಗಲ ಗೋಯಾತ್ರೆ ಕಳೆದ 80 ದಿನಗಳಲ್ಲಿ ನಡೆಸಿದ ಸಂಚಾರ ಭಾರೀ ಪರಿಣಾಮಕಾರಿಯಾಗಿದೆ. ಈ ಯಾತ್ರೆ ಕ್ರಾಂತಿಯನ್ನೇ ಉಂಟುಮಾಡಿದೆ. ಗೋ ಅರಿವನ್ನು ಮೂಡಿಸಿಕೊಂಡ ಜನ ಪ್ರವಾಹ ಯಾತ್ರೆಯ ಹಿಂದೆ ನಡೆದು ಬಂದಿದೆ. ಸಮಾಜದಲ್ಲಿ ಜಾಗೃತಿ ಮೂಡಿದೆ. ಗೋಸೇವಕರ ಸಂಖ್ಯೆ ಜಾಸ್ತಿಯಾಗಿದೆ. ಸಂಘಟನೆ ಬಲಿಷ್ಠವಾಗಿದೆ. ಇದು ಮಂಗಲ ಗೋಯಾತ್ರೆ; ಹಾಗೆಯೇ ಗೋಸ್ವಾತಂತ್ರ್ಯ ಚಳವಳಿಯೂ ಹೌದು.
ಗೋಯಾತ್ರೆಯ ಉದ್ದೇಶ ಒಂದೇ – ಗೋ ಅರಿವಿನ ಮೂಲಕ ಸಮಾಜದಲ್ಲಿ ಸ್ವಾಸ್ಥÂವನ್ನು ಉಂಟು ಮಾಡುವುದು. ಇದನ್ನು ನಡೆಸಿದ್ದು ಸಮಾಜದ ಒಳಿತಿಗಾಗಿ ಹೊರತು ಯಾರನ್ನೋ ಕೇಂದ್ರೀಕರಿಸಿ ಅಲ್ಲ. ಸಮಾಜ ಒಳಿತಿಗೆ ನಮ್ಮ ಮೊದಲ ಆದ್ಯತೆ. ನಮ್ಮ ಉದ್ದೇಶ ಸ್ವದೇಶೀ ಗೋತಳಿಗಳ ಬಗ್ಗೆ, ಗೋಮಾತೆಯ ಸಂರಕ್ಷಣೆಯ ಬಗ್ಗೆ ಸರಕಾರಗಳನ್ನು ಎಚ್ಚರಿಸುವುದು ಮಾತ್ರ.
ಭಾರತದಲ್ಲಿ 100ಕ್ಕೂ ಅಧಿಕ ದೇಸೀಯ ಗೋತಳಿಗಳಿದ್ದವು. ಇದೀಗ 42 ತಳಿಗಳು ಗುರುತಿಸಲ್ಪಟ್ಟಿವೆ. ಪ್ರಸ್ತುತ 30 ತಳಿಗಳು ಅಸ್ತಿತ್ವದಲ್ಲಿವೆ. ಆ ಸಂಖ್ಯೆಗೆ ಗೋವಾದ ಶ್ವೇತಕಪಿಲಾ ತಳಿ ಸೇರಿಕೊಂಡಿದೆ. ಮಲಾ°ಡು ಗಿಡ್ಡ ತಳಿ ಇಲ್ಲಿಯದ್ದು. ಅಂಥದ್ದೇ ತಳಿಗಳು ಇನ್ನೂ ಇವೆ. ಈ ತಳಿಗಳಲ್ಲಿ ಹೆಚ್ಚಿನವು ಶ್ರೀ ರಾಮಚಂದ್ರಾಪುರ ಮಠದಲ್ಲಿದೆ.
ಗೋಹತ್ಯೆ ನಿಷೇಧ ಕಾಯ್ದೆಯನ್ನು ರಾಜ್ಯ ಸರಕಾರ ಹಿಂದೆಗೆದುಕೊಳ್ಳಬಾರದಿತ್ತು. ಕೇಂದ್ರವೂ ಗೋಹತ್ಯೆ, ಗೋಮಾಂಸ ರಫ್ತು ನಿಷೇಧಕ್ಕಾಗಿ ಕೆಲಸ ಮಾಡಬೇಕು. ಗವ್ಯೋದ್ಯಮಕ್ಕೆ ಪ್ರೋತ್ಸಾಹ ನೀಡಬೇಕು. ರಸಗೊಬ್ಬರಕ್ಕೆ ಸಹಾಯಧನ ನೀಡಿದಂತೆ ಸಾವಯವ ಗೊಬ್ಬರ, ಗೋ ಉತ್ಪನ್ನಗಳಿಗೆ ಸಹಾಯಧನ ಸಿಗಬೇಕು.
ದೇಸೀ ತಳಿಗಳದ್ದು ಆದಾಯವಲ್ಲ; “ಪ್ರಯೋಜನ’
ಮಿಶ್ರತಳಿಗಳಿಗೆ ಹೋಲಿಸಿದಾಗ ದೇಸೀ ತಳಿಗಳಿಂದ ಆದಾಯ ಕಡಿಮೆ ಎಂಬ ವಾದವಿದೆ. ಎಲ್ಲವನ್ನೂ ಅರ್ಥ ರೂಪದ ಆದಾಯದ ದೃಷ್ಟಿಯಿಂದ ನೋಡಬಾರದು ಎಂದು ನಾವು ಹೇಳುತ್ತೇವೆ. ಮಿಶ್ರತಳಿಗಳಲ್ಲಿ ಹಾಲು ಹೆಚ್ಚು ಸಿಗಬಹುದು, ಆದರೆ ಸಾಕುವುದಕ್ಕೆ ಖರ್ಚು ಜಾಸ್ತಿ. ದೇಸೀ ತಳಿಗಳ ಸಾಕಣೆಗೆ ಖರ್ಚು ಕಡಿಮೆ. ಮೇವಿಗೆ ಗುಡ್ಡಕ್ಕೆ ಬಿಟ್ಟಲ್ಲಿ ಖರ್ಚೇ ಇಲ್ಲ. ದೇಸೀ ತಳಿಗಳ ಹಾಲಿನ ಬೆಲೆ ದ್ವಿಗುಣ. ದೇಸೀ ತಳಿಗಳಿಗೆ ಹಾಲು ಕಡಿಮೆ ಎನ್ನುವ ಕಲ್ಪನೆ ಸರಿಯಲ್ಲ. ಹಾಲು ಉತ್ಪಾದನೆ ಹೆಚ್ಚಿಸುವ ವೈಜ್ಞಾನಿಕ ಪ್ರಯತ್ನಗಳು ಆಗಿಲ್ಲ. ಪೂರಕ ಆಹಾರ, ಸಮರ್ಪಕ ಗರ್ಭಧಾರಣೆ, ತಳಿವೃದ್ಧಿ ಪ್ರಕ್ರಿಯೆಗಳು ನಡೆದಿಲ್ಲ. ಅವುಗಳು ನಡೆದರೆ ಹಾಲು ಉತ್ಪಾದನೆಯ ಪ್ರಮಾಣ ಹೆಚ್ಚುವುದು ಖಚಿತ. ಗೀರ್, ಕಾಂಕ್ರೀಜ್, ಥಾರ್‌ಪಾಕರ್ ಮೊದಲಾದ ಕೆಲವು ದೇಸೀಯ ತಳಿಗಳ ಹಾಲು ಅಧಿಕ. ಗೀರ್ ತಳಿ 85 ಲೀ. ಹಾಲು ನೀಡುತ್ತದೆ. ಆ ತಳಿಯ ದನಗಳ ಕೆಚ್ಚಲು ನೆಲ ಮುಟ್ಟುತ್ತದೆ. ಅಂತಹ ತಳಿಗಳು ನಮ್ಮಲ್ಲಿವೆ.
ಆರ್ಥಿಕ ದೃಷ್ಟಿಯ ಆದಾಯದ ಬಗ್ಗೆ ಮಾತ್ರ ಚಿಂತಿಸಬಾರದು ಎಂದೆವಲ್ಲ? ದೇಸೀ ಗೋತಳಿಗಳ ಇನ್ನಿತರ ಪ್ರಯೋಜನಗಳನ್ನು ಗಮನಿಸಿ. ದೇಸೀ ತಳಿಗಳ ಗೋಮೂತ್ರ, ಗೋಮಯಗಳೂ ಬೆಲೆಬಾಳುತ್ತವೆ. ಅದು ಅವುಗಳ ಆರೋಗ್ಯ ಗುಣದ ಮೌಲ್ಯ. ದೇಸೀ ತಳಿಗಳ ಗಂಡು ಕರು ಒಂದೇ ವರ್ಷದಲ್ಲಿ 1 ಲಕ್ಷ ರೂ. ಬೆಲೆ ಪಡೆಯುತ್ತದೆ. ಕರ್ನಾಟಕದ ಹೆಚ್ಚಿನ ಭಾಗಗಳಲ್ಲಿ ಜನರು ಎತ್ತುಗಳನ್ನೇ ಆಶ್ರಯಿಸಿದ್ದಾರೆ. ಅಂಕಿಅಂಶಗಳ, ಆರ್ಥಿಕ ಲೆಕ್ಕಾಚಾರದ ಪ್ರಕಾರವೂ ದೇಸೀ ತಳಿಗಳು ಲಾಭದಾಯಕವೇ. ಉಳುಮೆಯಲ್ಲಿ ಯಂತ್ರಗಳನ್ನು ಬಳಸುವುದರಿಂದ ಅವುಗಳ ಭಾರಕ್ಕೆ ಭೂಮಿ ಗಟ್ಟಿಯಾಗುತ್ತದೆ. ಸೂಕ್ಷ್ಮಜೀವಿಗಳು, ಎರೆಹುಳುಗಳು ನಾಶವಾಗುತ್ತವೆ. ಹೀಗಾಗಿ ಎತ್ತುಗಳಿಂದಲೇ ಉಳುಮೆ ಸೂಕ್ತ.
ದೇಸೀ ದನ ಸಾಕಿದರೆ ಮೇಯುವುದಕ್ಕೆ ಗುಡ್ಡ ಬೆಟ್ಟ ಇಲ್ಲ, ಹುಲ್ಲುಗಾವಲು ಇಲ್ಲವಲ್ಲ ಅನ್ನುವವರಿದ್ದಾರೆ. ಸಾಮೂಹಿಕವಾಗಿ ಗೋ ರಕ್ಷಣೆ ಆರಂಭವಾದಾಗ, ದೇಸೀ ಗೋತಳಿಗಳ ಪರ ಧ್ವನಿಯೆತ್ತುವವರ ಸಂಖ್ಯೆ ಜಾಸ್ತಿಯಾದಾಗ, ಆಂದೋಲನಗಳು ನಡೆದಾಗ, ರೈತರು ಗೋಮಾಳಗಳಿಗಾಗಿ ಆಗ್ರಹಿಸಿದಾಗ ಸರಕಾರ ನೀಡಲೇಬೇಕು. ಇದರ ಜತೆ ಜತೆಗೆ ಮೇವು ಉತ್ಪಾದನೆಯ ಹೊಸ ವಿಧಾನಗಳು ಬಂದಿವೆ. ರಾಸಾಯನಿಕ ಮುಕ್ತ ಸಾವಯವ ಮೇವನ್ನು ಕಡಿಮೆ ಖರ್ಚಿನಲ್ಲಿ, ಕಡಿಮೆ ಜಾಗದಲ್ಲಿ ತಯಾರಿಸಬಹುದು. ಎಲ್ಲ ಗೋಶಾಲೆಗಳಲ್ಲಿ ಈ ಬಗ್ಗೆ ಪ್ರಯೋಗ ನಡೆಯುತ್ತಿದೆ.
ಗೋಆಧಾರಿತ ಉತ್ಪನ್ನಗಳು ಬಹಳಷ್ಟು ಪರಿಣಾಮಕಾರಿ. ಆ ಬಗ್ಗೆ ಅನೇಕ ಸಂಶೋಧನೆಗಳಾಗುತ್ತಿವೆ. ಮಠದಲ್ಲಿಯೂ ಗೋಪ್ರಯೋಗಗಳು ನಡೆಯುತ್ತಿವೆ. ಚಮತ್ಕಾರೀ ಪರಿಣಾಮ ಅನುಭವಿಸಿದವರ ಜೀವನಾನುಭವವಿದೆ. “ಪೇಟೆಂಟ್ಸ್, ಪೇಪರ್, ಪೇಶನ್ಸ್’ ಎಲ್ಲವೂ ಇದೆ. ಇನ್ನೂ ಆಗಬೇಕಾದ ಕಾರ್ಯ ಬಹಳಷ್ಟಿದೆ. ಇದಕ್ಕೆ ಸಮಾಜದ ಬೆಂಬಲವೂ ಇದೆ.
ಅರಿವು ಹೆಚ್ಚಿಸಿದ ಗೋಯಾತ್ರೆ
ಮಂಗಲ ಗೋಯಾತ್ರೆ ಸಂಚರಿಸಿದ ಪ್ರಮುಖ ಕೇಂದ್ರಗಳಲ್ಲಿ ಮಾಹಿತಿ ಸಭೆ, ಮರುದಿನ ಗೋಪರಿವಾರ ರಚನೆಯ ಸಭೆ ಕೈಗೊಳ್ಳಲಾಗಿದೆ. ಶಾಶ್ವತ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಉದ್ದೇಶಿಸಲಾಗಿದೆ. ಗವ್ಯೋದ್ಯಮ, ಗವ್ಯವೈದ್ಯಶಾಲೆ, ಗೋಶಾಲೆಗಳ ನಿರ್ಮಾಣದಂತಹ ಸಾಮಾಜಿಕ ಸ್ವಾಸ್ಥ ಹೆಚ್ಚಿಸುವ ಕಾರ್ಯಗಳಿಗೆ ಜನರು ತಾವಾಗಿ ಮುಂದೆ ಬಂದಿದ್ದಾರೆ. ರೈತರ ಗವ್ಯೋತ್ಪನ್ನಗಳಿಗೆ ಬೇಡಿಕೆ ಸೃಷ್ಟಿಯಾಗುತ್ತಿದೆ. ಇದು ಉಭಯತರಿಗೂ ಪ್ರಯೋಜನ ಉಂಟು ಮಾಡುವ ಕಾರ್ಯ.
ನಾವು ಗೋಯಾತ್ರೆಯನ್ನು ಆರಂಭಿಸಿದಾಗ ಗೋಸ್ವಾತಂತ್ರ್ಯ ಸಂಗ್ರಾಮವೆಂದೇ ಈ ಆಂದೋಲನವನ್ನು ಕರೆದೆವು. ಆದರೆ ಈ ಸಂಗ್ರಾಮ ಯಾರ ವಿರುದ್ಧ? – ಪ್ರಶ್ನೆ ಸಹಜ. ಯಾಕೆಂದರೆ, ಈಗ ಬ್ರಿಟಿಷರಿಲ್ಲ. ಆದರೆ ಬ್ರಿಟಿಷರ ಮಾನಸಿಕತೆಯಿದೆ. ಗೋಸ್ವಾತಂತ್ರ್ಯ ಸಂಗ್ರಾಮ ಅದರ ವಿರುದ್ಧ. ಭಾರತೀಯರಾಗಿದ್ದೂ ಬಿಳಿಯ ಮನೋಭಾವದಿಂದ ಸಮಾಜ, ದೇಶ ಒದ್ದಾಡುತ್ತಿರುವುದು ನಾವು ಇವತ್ತು ನಿನ್ನೆಯಿಂದ ಕಾಣುತ್ತಿರುವ ಸಮಸ್ಯೆಯಲ್ಲವಲ್ಲ!
ಮುಖತಃ ಮೂಡುವ ಅರಿವು ದೊಡ್ಡದು
ಸಾಮಾಜಿಕ ಜಾಲತಾಣಗಳ ಮೂಲಕ ಜನರನ್ನು ತಲುಪುವುದು ಸುಲಭ. ಎಲ್ಲ ಮಾಧ್ಯಮಗಳ ಸಹಕಾರವಿದ್ದರೂ ಜನರ ದೊಡ್ಡ ಬಳಗ ನಿರ್ಮಾಣ ಮಾಡಿ, ಜನರನ್ನು ಮುಖತಃ ಸಂಪರ್ಕಿಸಿ ಜಾಗೃತಿ, ಅರಿವು ಮೂಡಿಸುವುದೇ ಅತ್ಯಂತ ಪರಿಣಾಮಕಾರಿ ಎಂದು ನಾವು ನಂಬಿದ್ದೇವೆ.
ಗೋಶಾಲೆಗೆ ನೀಡಿದ ಅನುದಾನವನ್ನು ಸರಕಾರ ಹಿಂತೆಗೆದುಕೊಳ್ಳುವುದಕ್ಕೆ ಹೊರಟಿದೆ. ಗೋವಿನ ವಿಚಾರಗಳಲ್ಲಿ ರಾಮಚಂದ್ರಾಪುರ ಮಠ ಮಾಡಿದಷ್ಟು ಕಾರ್ಯ ಬೇರೆ ಎಲ್ಲೂ ಆಗಿಲ್ಲ. 10 ಲಕ್ಷ ರೂ.ಗಳನ್ನು ಸದುಪಯೋಗ ಮಾಡಿಕೊಳ್ಳಲಾದ ಬಗ್ಗೆ ದಾಖಲೆ ನೀಡಲಾಗಿದೆ. ಸರಕಾರವೂ ಒಪ್ಪಿಕೊಂಡಿದೆ. ಆದರೆ ಈಗ ವಿಚಾರ ಭಿನ್ನವಾಗಿದೆ. ಯಾವುದನ್ನೂ ಪರಿಗಣಿಸದೇ, ಎಂಟು ವರ್ಷಗಳ ಹಿಂದೆ ಬಂದ ಅನುದಾನ 10 ಲಕ್ಷ ರೂ.ಗಳನ್ನು ವಿಚಾರಣೆಯಿಲ್ಲದೇ, ನೋಟೀಸ್ ನೀಡದೇ ಹಿಂದೆಗೆದುಕೊಳ್ಳುವುದಕ್ಕೆ ಯಾರು, ಏನು ಪ್ರೇರಣೆ? ಮಂಗಲ ಗೋಯಾತ್ರೆಯನ್ನು ಸರಕಾರ ಗುರುತಿಸಿದ ರೀತಿಯಿದು. ನಮ್ಮದೇ ಸರಕಾರ ಮಠ ಮಾಡಿದ ಸಾಧನೆಗೆ ನೀಡಿದ ಸಮ್ಮಾನವಿದು ಎಂದು ಭಾವಿಸಬಹುದು.
ಗೋವು ಮತ್ತು ಸಂತರು ಈ ಮಂಗಲ ಗೋಯಾತ್ರೆಯಲ್ಲಿ ಒಗ್ಗೂಡಿದ್ದಾರೆ. ಇಬ್ಬರೂ ಪರೋಪಕಾರಿಗಳು, ನಿಃಸ್ವಾರ್ಥಿಗಳು. ಅವರು ಧರ್ಮದ ಪ್ರತೀಕ. ಸರಕಾರವನ್ನು ಆಶ್ರಯಿಸದೇ ಸಮಾಜದಲ್ಲಿ ಗೋಸಂರಕ್ಷಣೆಯ ಬಗ್ಗೆ ಎಚ್ಚರ ಮೂಡಿಸುವ ಕಾರ್ಯ ಇದು.
ಸಮಾಜದ ಒಳಿತಿಗಾಗಿ
ಈ ಯಾತ್ರೆಗೆ ಇಷ್ಟೊಂದು ಖರ್ಚು ಮಾಡಬೇಕೇ ಎಂಬ ಪ್ರಶ್ನೆ ಹಲವರದ್ದು. ವಾಸ್ತವವಾಗಿ ಈ ಯಾತ್ರೆ ಕೈಗೊಂಡಿರುವುದು ಗೋವಿಗಾಗಿ; ಅರ್ಥಾತ್ ಸಮಾಜಕ್ಕಾಗಿ, ಸಾಮಾಜಿಕರ ಉದ್ಧಾರಕ್ಕಾಗಿ. ಇಲ್ಲಿ ಗೋವಿನ ಪ್ರತೀಕ ಎಲ್ಲ ಕಡೆ ಸರಳ ವಾಹನಗಳಲ್ಲಿ ಸಂಚರಿಸಿದೆ. ಮಾಹಿತಿ ಸಭೆ ನಡೆದಿದೆ. ಅದನ್ನು ಗೋಭಕ್ತರು ಆಲಿಸಿದ್ದಾರೆ. ದೇಶದಲ್ಲಿ ಚುನಾವಣೆಗೆ ಎಷ್ಟು ಖರ್ಚು ಮಾಡಲಾಗುತ್ತದೆ? ರಾಜಕೀಯ ಪಕ್ಷಗಳು ಎಷ್ಟು ಖರ್ಚು ಮಾಡುತ್ತವೆ? ಅದರಿಂದ ಸಮಾಜಕ್ಕೆ ಏನು ಸಿಕ್ಕಿದೆ? ಮದುವೆ ಇನ್ನಿತರ ಸಮಾರಂಭಗಳ ಖರ್ಚು ಎಷ್ಟು? ಇದನ್ನೆಲ್ಲ ಲೆಕ್ಕಾಚಾರ ಮಾಡಿದಾಗ ಗೋಸಂರಕ್ಷಣೆಯ ಮೂಲಕ ಸಮಾಜದ ಪ್ರಗತಿಗಾಗಿ ನಡೆಸಲಾದ ಈ ಆಂದೋಲನ, ಅದರ ಖರ್ಚು ಒಂದು ಸದ್ವಿನಿಯೋಗವೇ ತಾನೇ?
ನಮಗೆ ಗೊತ್ತಿದೆ, ರಾಮಚಂದ್ರಾಪುರ ಮಠವು ಈ ಹಿಂದೆ ಎದುರಿಸಿದ ಅಪವಾದ ಪ್ರಕರಣವನ್ನು ಮರೆಮಾಚಲು ಗೋಮಂಗಲಯಾತ್ರೆ ಕೈಗೊಂಡಿದೆ ಎನ್ನುವವರಿದ್ದಾರೆ. ಅದು ಋಣಾತ್ಮಕ ಮನೋಭಾವದ ಮಾತು. ಮಠ ಯಾವತ್ತೋ ಗೋ ಆಂದೋಲನವನ್ನು ಆರಂಭಿಸಿದೆ. ಭಾರತೀಯ ಗೋಯಾತ್ರೆ, ಗೋ ಸಂಸತ್ತು, ವಿಶ್ವ ಗೋಸಮ್ಮೇಳನ, ಗೋ ಸಂಧ್ಯಾ, ಧೇನುದರ್ಶನ, ಸಹಸ್ರ ಗೋದಾನ, ವಿಶ್ವಮಂಗಲ ಗೋಗ್ರಾಮ ಯಾತ್ರೆಗಳನ್ನು ಮಾಡಿದ್ದೇವಲ್ಲ. ಅದರ ಮುಂದುವರಿಕೆಯೇ ಈ ಮಂಗಲ ಗೋಯಾತ್ರೆ. ಅಪವಾದ ಹೊರಿಸಲಾಗಿತ್ತು, ಅದು ನ್ಯಾಯಾಲಯದ ಮೂಲಕ ಬಗೆಹರಿದಿದೆ. ಇನ್ನೂ ಆ ಬಗ್ಗೆಯೇ ತಲೆಕೆಡಿಸಿಕೊಂಡಿರುವುದೇಕೆ? ಸಮಾಜಕ್ಕೆ ಧನಾತ್ಮಕ ವಿಚಾರಗಳನ್ನು ಕೊಡುವುದೇ ನಮ್ಮ ಉದ್ದೇಶ. ಗೋವು ಜೀವನಾಧಾರ ಎಂಬ ಜಾಗೃತಿ ಸಮಾಜದಲ್ಲಿ ಮೂಡಬೇಕು, ಹರಡಬೇಕು, ವ್ಯಾಪಿಸಬೇಕು – ಇದು ನಮ್ಮ ಗುರಿ.
ನಿರೂಪಣೆ: ಉದಯಶಂಕರ್ ನೀರ್ಪಾಜೆ
ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ
ಶ್ರೀ ರಾಮಚಂದ್ರಾಪುರ ಮಠ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.