ವಿಮರ್ಶೆಗೆ ಒಳಪಡದಿದ್ದರೆ ನ್ಯಾಯಾಂಗವೂ ಜಡವಾಗುತ್ತದೆ
Team Udayavani, Jan 18, 2018, 12:53 PM IST
ಯಾವಾಗಲೂ ವಿಷಯಗಳೇ ಪ್ರಧಾನವಾಗಬೇಕು ಹೊರತು ವ್ಯಕ್ತಿಗಳಲ್ಲ. ಇದೊಂದು ಆಡಳಿತಾತ್ಮಕ ವಿಚಾರದಂತೆ ಕಂಡರೂ ಅದರಲ್ಲಿ ಅದಕ್ಕಿಂತ ಹೆಚ್ಚಿನದ್ದು ಅಡಗಿದೆ.
ದೇಶದ ನ್ಯಾಯಾಂಗದ ಇತಿಹಾಸದಲ್ಲೇ ಕಂಡು ಕೇಳರಿಯದ ಘಟನೆಯೊಂದು ಜ.12ರಂದು ಘಟಿಸಿತು. ಸುಪ್ರೀಂ ಕೋರ್ಟಿನ ಹಿರಿಯ ನ್ಯಾಯಮೂರ್ತಿಗಳಾದ ಚಲಮೇಶ್ವರ್, ರಂಜನ್ ಗೊಗೋಯ…, ಮದನ್ ಬಿ. ಲೋಕೂರ್ ಮತ್ತು ಕುರಿಯನ್ ಜೋಸೆಫ್ ಬಹಿರಂಗವಾಗಿ ಪತ್ರಿಕಾಗೋಷ್ಠಿ ನಡೆಸಿ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾರ ಕಾರ್ಯವೈಖರಿಯ ವಿರುದ್ಧ ಅಸಮಾಧಾನಗಳನ್ನು ರಾಷ್ಟ್ರದ ಮುಂದಿಟ್ಟರು. ನ್ಯಾಯಮೂರ್ತಿಗಳ ಈ ನಡೆ ವ್ಯಾಪಕವಾದ ಪರ – ವಿರೋಧ ಚರ್ಚೆ ಹುಟ್ಟು ಹಾಕಿದ್ದು, ದೇಶಾದ್ಯಂತ ಸಂಚಲನ ಸೃಷ್ಟಿಸಿದೆ.
ಈ ಅಭೂತಪೂರ್ವ ಘಟನೆಗೆ ನ್ಯಾಯಾಂಗದ ಹಲವು ಧೀಮಂತರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿ ಇದೊಂದು ಅಳಿಸಲಾಗದ ಕಪ್ಪು ಚುಕ್ಕೆ ಎಂದು ಅಭಿಪ್ರಾಯಪಟ್ಟಿದ್ದಾರೆ. “ನ್ಯಾಯಮೂರ್ತಿಗಳು ಬಹಿರಂಗವಾಗಿ ಹೇಳಿಕೆ ನೀಡುವ ಬದಲು ಬೇರೆ ಮಾರ್ಗಗಳ ಮೂಲಕ ಪರಿಹರಿಸಿಕೊಳ್ಳಲು ಯತ್ನಿಸಬೇಕಿತ್ತು. ಇದೊಂದು ಕೆಟ್ಟ ಮೇಲ್ಪಂಕ್ತಿಯಾಗಲಿದೆ. ಜನರು ನ್ಯಾಯಾಂಗವನ್ನು ಅನುಮಾನದ ದೃಷ್ಟಿಯಿಂದ ನೋಡುವಂತಾಗುತ್ತದೆ. ನ್ಯಾಯಾಂಗದ ವಿಶ್ವಾಸಾ ರ್ಹತೆಗೆ ಧಕ್ಕೆ ಬಂದಂತಾಗಿದೆ. ಇದು ಆರೋಗ್ಯಕರ ಬೆಳವಣಿಗೆ ಅಲ್ಲ’ ಎಂದು ಕೆಲವರು ಟೀಕಿಸಿದ್ದಾರೆ. “ಇಲ್ಲಿ ವಿಷಯಗಳು ಮುಖ್ಯ ವಲ್ಲ, ಇದು ಕೇವಲ ಆಡಳಿತಾತ್ಮಕ ವಿಚಾರದ ಬಗ್ಗೆ ಉಂಟಾದ ತಕರಾರು. ಆಕ್ಷೇಪಣೆ ಮಾಡಿದ್ದು ಕೇವಲ ನಾಲ್ಕು ಮಂದಿ ಮಾತ್ರ, ಉಳಿದ ಇಪ್ಪತ್ತೂರು ನ್ಯಾಯಾಧೀಶರು ಸುಮ್ಮನಿದ್ದಾರಲ್ಲವೆ? ಅವರಿಗೆ ಯಾವುದೇ ಸಮಸ್ಯೆ ಕಂಡಿಲ್ಲ. ಇದೊಂದು ಅಪ್ರಬುದ್ಧ ಮತ್ತು ಬಾಲಿಶ ವರ್ತನೆಯಾಗಿದೆ, ಅವರ ಮೇಲೆ ದೋಷಾರೋಪಣೆ ಮಾಡಬೇಕು, ಅವರಿಗೆ ನ್ಯಾಯಪೀಠದಲ್ಲಿ ಕುಳಿತು ತೀರ್ಪು ನೀಡುವ ನೈತಿಕತೆಯಿಲ್ಲ. ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂಬ ಮಾತಲ್ಲಿ ಹುರುಳಿಲ್ಲ. ಇಲ್ಲಿ ಸಂಸತ್ತು, ನ್ಯಾಯಾಲಯ, ಪೊಲೀಸ್ ವ್ಯವಸ್ಥೆ ಎಲ್ಲ ಸರಿಯಾಗೇ ಇದೆ’ ಎಂದು ಇನ್ನೊಬ್ಬರು ಹರಿಹಾಯ್ದಿ¨ªಾರೆ. “ನ್ಯಾಯಾಂಗ ಒಂದು ಕುಟುಂಬದಂತೆ ಇದ್ದು, ತಮ್ಮ ಅಸಮಾಧಾನಗಳನ್ನು ತಮ್ಮೊಳಗೇ ಪರಿಹರಿಸಿಕೊಳ್ಳಬೇಕಿತ್ತು’ ಎಂದು ಇನ್ನೊಬ್ಬರು ಪ್ರತಿಕ್ರಿಯಿಸಿದ್ದಾರೆ. ಬಹಿರಂಗವಾಗಿ ಕೊಳಕು ಬಟ್ಟೆಯನ್ನು ಒಗೆಯುವುದು ಸರಿಯಾದ ಕ್ರಮವಲ್ಲ ಎಂಬುದು ಇನ್ನೊಬ್ಬರ ಕಟುವಾದ ಪ್ರತಿಕ್ರಿಯೆ. “ನ್ಯಾಯಾಧೀಶರಿಗೆ ಹೀಗೆ ಬಹಿರಂಗವಾಗಿ ಮಾತನಾಡುವ ಹಕ್ಕಿಲ್ಲ. ಅವರು ಅದನ್ನು ತಮ್ಮೊಳಗೇ ಬಗೆಹರಿಸಿಕೊಳ್ಳಬೇಕಿತ್ತು’ ಎಂದು ಅವರ ಅಧಿಕಾರ ವ್ಯಾಪ್ತಿಯ ಬಗ್ಗೆ ಒಬ್ಬರು ವ್ಯಾಖ್ಯಾನಿಸಿದ್ದಾರೆ. ನ್ಯಾಯಾಧೀಶರುಗಳಲ್ಲಿ ಸೀನಿಯರ್ ಮತ್ತು ಜೂನಿಯರ್ ಎಂಬ ಭೇದ ಭಾವ ಸರಿಯಲ್ಲ, ಹಿಂದೆ ಅನೇಕ ಸೂಕ್ಷ್ಮ ಪ್ರಕರಣಗಳನ್ನು ಜೂನಿಯರ್ ಪೀಠ ಕೂಡಾ ನಿಭಾಯಿಸಿದೆ. ಎಲ್ಲ ಪೀಠಗಳು ಸಮಾನ ಎಂಬ ಮಾತು ಕೇಳಿ ಬಂದಿದೆ.
ಹುರುಳಿಲ್ಲದ ಆಕ್ಷೇಪಗಳು
ಮೇಲೆ ಹೇಳಿದ ಯಾವುದೇ ಆಕ್ಷೇಪಣೆಗಳಲ್ಲಿ ಹುರುಳಿದ್ದಂತೆ ಅನಿಸುವುದಿಲ್ಲ. ಮೊದಲನೆಯದಾಗಿ ನ್ಯಾಯಮೂರ್ತಿಗಳು ತಮ್ಮೊಳಗೆ ಬಗೆಹರಿಸಿಕೊಳ್ಳಲು ಯತ್ನಿಸಿದರೂ ಸಿಜೆಐಯವರು ಸೂಕ್ತ ಸ್ಪಂದನೆ ನೀಡದೇ ಇದ್ದುದರಿಂದ ಕೊನೆಯ ಅಸ್ತ್ರವಾಗಿ ಪತ್ರಿಕಾಗೋಷ್ಠಿ ಆರಿಸಿಕೊಂಡರು. ಇದರಿಂದ ನ್ಯಾಯಾಂಗ ವಿಶ್ವಾಸಾ ರ್ಹತೆಗೆ ಧಕ್ಕೆಯಾಗುವುದರ ಬದಲಾಗಿ ಅದು ಹೆಚ್ಚಾಗುತ್ತದೆ. ತಮ್ಮೊಳಗಿನ ಹುಳುಕುಗಳನ್ನು ಹೊರ ಜಗತ್ತಿಗೆ ತೋರಿಸುವುದರಿಂದ ಮತ್ತು ಅದನ್ನು ಒಪ್ಪಿಕೊಳ್ಳುವುದರಿಂದ ಜನರ ಮನದಲ್ಲಿ ನ್ಯಾಯಾಂಗದ ಪ್ರಾಮಾಣಿಕತೆಯ ಬಗ್ಗೆ ಅನುಮಾನಗಳು ಉಳಿಯಲಾರದು. ಎರಡನೆಯದಾಗಿ ವಿಷಯಗಳು ಮುಖ್ಯವಲ್ಲ ಎಂದರೆ ವ್ಯಕ್ತಿಗಳು ಮುಖ್ಯ ಎಂದರ್ಥವೆ? ಯಾವಾಗಲೂ ವಿಷಯ ಗಳೇ ಪ್ರಧಾನವಾಗಬೇಕು ಹೊರತು ವ್ಯಕ್ತಿಗಳಲ್ಲ. ಇದೊಂದು ಆಡಳಿತಾತ್ಮಕ ವಿಚಾರದಂತೆ ಕಂಡರೂ ಅದರಲ್ಲಿ ಅದಕ್ಕಿಂತ ಹೆಚ್ಚಿನದ್ದು ಅಡಗಿದೆ. ಇಡೀ ಪ್ರಕರಣ ಸ್ಫೋಟಗೊಂಡದ್ದೇ ಸೂಕ್ಷ್ಮವಾದ ಎರಡು ಪ್ರಕರಣಗಳನ್ನು ಸಿಜೆಐ ನಿಭಾಯಿಸಿದ ರೀತಿಯಿಂದ ಎಂಬುದು ನಿಚ್ಚಳ. ಕೇವಲ ಆಡಳಿತಾತ್ಮಕ ವಿಚಾರ ವಾಗಿದ್ದರೆ ಸಿಜೆಐಯವರು ಆ ಸೂಕ್ಷ್ಮ ಪ್ರಕರಣಗಳನ್ನು ನಿರ್ದಿಷ್ಟ ಪೀಠಕ್ಕೆ ನೀಡಿದುದರ ಉದ್ದೇಶವೇನು? ಕೇವಲ ನಾಲ್ಕು ಮಂದಿ ಯಷ್ಟೇ ತಕರಾರು ತೆಗೆದಿದ್ದು, ಬಾಕಿ ಇಪ್ಪತೂರು ಮಂದಿಗೆ ಯಾವುದೇ ಸಮಸ್ಯೆ ಕಂಡಿಲ್ಲವಾದ್ದರಿಂದ, ಸಮಸ್ಯೆಯಿಲ್ಲ ಎಂದು ವಾದಿಸುವುದು ತಪ್ಪಾಗುತ್ತದೆ. ಬಹುಮತದ ಆಧಾರದ ಮೇಲೆಯೇ ನಿರ್ಧರಿಸುವುದಾದರೆ ಮದ್ಯವು ಉತ್ತಮ ಪೇಯ ಎಂದು ಹೇಳಬೇಕಾದೀತು! ಮೂರನೆಯದಾಗಿ ನ್ಯಾಯಾಂಗ ಒಂದು ಕುಟುಂಬದಂತೆ ಇದ್ದು, ಅದರೊಳಗೆ ಸಮಸ್ಯೆ ಬಗೆಹರಿಸಿ ಕೊಳ್ಳಬೇಕಿತ್ತು ಎಂಬ ಮಾತು ಎಷ್ಟು ಸರಿ? ಕುಟುಂಬ ಎಂದರೆ ಯಾವ ಅರ್ಥದಲ್ಲಿ? ಹಾಗಿದ್ದರೆ ರಾಜಕಾರಣಿಯೊಬ್ಬ ತಪ್ಪು$ಮಾಡಿದಾಗ ಕೋರ್ಟಿಗೆ ಹೋಗದೆ ಅಥವಾ ಪೊಲೀಸರ ಬಳಿ ಹೋಗದೆ ಶಾಸಕಾಂಗದ ಒಳಗೇ ಇತ್ಯರ್ಥ ಮಾಡಿಕೊಳ್ಳಬೇಕು ಎನ್ನಬೇಕಾಗುತ್ತದೆ. ಏಕೆಂದರೆ ಶಾಸಕಾಂಗವೂ ಒಂದು ಕುಟುಂಬ ದಂತೆ ಅಲ್ವೆ? ಇನ್ನು ಈ ರೀತಿ ಬಹಿರಂಗವಾಗಿ ಕೊಳಕು ಬಟ್ಟೆಯನ್ನು ಒಗೆದರೆ ಒಳಗಿನ ಹುಳುಕುಗಳು ಜಗತ್ತಿಗೆ ಗೊತ್ತಾಗುತ್ತದೆಯಾದ್ದ ರಿಂದ ಇದು ಸಮಂಜಸವಲ್ಲವೆನ್ನುವುದನ್ನು ಒಪ್ಪಲು ಸಾಧ್ಯವಿಲ್ಲ.
ನ್ಯಾಯಮೂರ್ತಿಗಳು ಎತ್ತಿದ ವಿಚಾರ ಅತಿ ಗಂಭೀರವಾಗಿದ್ದು, ಇಡೀ ರಾಷ್ಟ್ರದ ಜನತೆಗೆ ಸಂಬಂಧಿಸಿದ್ದಾಗಿದೆ. ಅಂತಹ ಕೊಳಕನ್ನು ಜಗಜ್ಜಾಹೀರು ಮಾಡದೇ ಇದ್ದರೆ ಅದೇ ಅಪರಾಧವಾಗುತ್ತ ದೆಯೇ ಹೊರತು ಬಹಿರಂಗ ಮಾಡಿದರೆ ಅಲ್ಲ. ಈ ದೇಶದ ಪ್ರತಿಯೊಬ್ಬ ಪ್ರಜೆಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ. ನ್ಯಾಯ ಮೂರ್ತಿಗಳಿಗೆ ಇಲ್ಲ ಎಂದರೆ ಹೇಗೆ? ಅವರು ಕೇವಲ ಪ್ರಚಾರದ ಉದ್ದೇಶದಿಂದ ಅಥವಾ ತಮ್ಮ ಅಹಂನಿಂದಾಗಿ ಸುಳ್ಳುಗಳನ್ನು ಹೇಳಿದ್ದರೆ ಅದಕ್ಕೆ ತಕ್ಕ ಕ್ರಮಗಳನ್ನು ಕೈಗೊಳ್ಳುವ ಅವಕಾಶ ಸಿಜೆಐಯವರಿಗೆ ಇದೆ. ನ್ಯಾಯಾಂಗದಲ್ಲಿ ನಡೆದಿದೆಯೆನ್ನಲಾದ ಗಂಭೀರ ಲೋಪಗಳ ಬಗ್ಗೆ ಅವರು ದನಿಯೆತ್ತದೇ ಇದ್ದರೆ ಅವರೂ ಅದರಲ್ಲಿ ಪಾಲುದಾರರಾಗುತ್ತಾರಲ್ಲವೇ? ನ್ಯಾಯಮೂರ್ತಿಗಳೆಲ್ಲ ಸಮಾನರು ಎಂದಾದರೆ ಯಾರನ್ನೂ ಕೂಡ ಮುಖ್ಯ ನ್ಯಾಯ ಮೂರ್ತಿಯನ್ನಾಗಿ ನೇಮಿಸಬಹುದಲ್ಲವೇ? ಆವಾಗ ಏಕೆ ಸೇವಾ ಹಿರಿತನ ಪರಿಗಣಿಸಬೇಕು? ಇಲ್ಲಿ ನ್ಯಾಯಮೂರ್ತಿಗಳು ಎತ್ತಿದ ಅಂಶ ಒಂದು ನಿರ್ದಿಷ್ಟ ಪೀಠಕ್ಕೆ ಸಿಜೆಐಯವರು ಪ್ರಕರಣಗಳನ್ನು ವರ್ಗಾಯಿಸುತ್ತಾರೆ ಎಂಬುದರ ಕುರಿತು ಹೊರತು ಜೂನಿಯರ್ ಎಂಬ ಬಗ್ಗೆ ಆಕ್ಷೇಪವಲ್ಲ. ಪೀಠವೆಲ್ಲವೂ ಸಮಾನ ಎಂದಾದರೆ ಅರ್ಜಿದಾರರಿಗೆ ಪೀಠದ ಆಯ್ಕೆಯ ಸ್ವಾತಂತ್ರ್ಯ ನೀಡಬಹುದಲ್ಲವೆ? ಅನೇಕ ವಕೀಲರು ಕೆಲವು ನಿರ್ದಿಷ್ಟ ಪೀಠ ಗಳನ್ನೇ ಬಯಸುವುದು ಈಗ ಗುಟ್ಟಾಗಿ ಉಳಿದಿಲ್ಲ. ಇದು ಎಲ್ಲಾ ಕೋರ್ಟುಗಳಲ್ಲಿ ನಡೆಯುವಂತಹದು.
“ಬೆಂಚ್ ಹಂಟಿಂಗ್” ಎಂದು ಇದನ್ನು ಕರೆಯುತ್ತಾರೆ. ಹಾಗಿರುವಾಗ ಪೀಠಕ್ಕೆ ವರ್ಗಾ ಯಿಸುವಾಗ ಅದರಲ್ಲಿ ಪಾರದರ್ಶಕತೆ ಇರಬೇಕು, ಒಬ್ಬ ವ್ಯಕ್ತಿಯ ಮರ್ಜಿಯ ಮೇಲಷ್ಟೇ ನಿರ್ಧಾರವಾಗಬಾರದು ಎಂಬುದು ಬಂಡೆದ್ದ ನ್ಯಾಯಮೂರ್ತಿಗಳ ಅಳಲು. ಹಿಂದೆ ಅನೇಕ ಸೂಕ್ಷ್ಮ ಪ್ರಕರಣಗಳನ್ನು ಜೂನಿಯರ್ ಪೀಠವೇ ನಿಭಾಯಿಸಿದೆ ಎಂದ ಮಾತ್ರಕ್ಕೆ ಅದನ್ನು ಸರಿಯೆನ್ನಲಾಗದು. ಆಗ ಏಕೆ ಸೀನಿಯರ್ ನ್ಯಾಯಾಧೀಶರು ಅದಕ್ಕೆ ಆಕ್ಷೇಪ ವ್ಯಕ್ತಪಡಿಸಲಿಲ್ಲ? ಹಿಂದೆ ಆಗಿ ಹೋಗಿದ್ದು ಚರಿತ್ರೆ, ಅದನ್ನು ಬದಲಾಯಿಸಲಾಗದು. ಹಾಗೆಂದು ಸುಧಾರಣೆಯ ಹಾದಿಯನ್ನು ನಿರಾಕರಿಸುವುದು ಎಷ್ಟು ಸಮಂಜಸ? ಇಲ್ಲಿ ಆಕ್ಷೇಪ ಬಂದಿದ್ದೇ ಪ್ರಸಾದ್ ಎಜುಕೇಶನ್ ಟ್ರಸ್ಟ್ ಪ್ರಕರಣದಲ್ಲಿ. ಹಿಂದೊಮ್ಮೆ ಸಿಜೆಐಯವರೇ ತೀರ್ಪು ನೀಡಿಯೂ ಮತ್ತೆ ಸುಪ್ರೀಂ ಕೋರ್ಟಲ್ಲಿ ತಾವೇ ಪೀಠದಲ್ಲಿದ್ದುದಕ್ಕೆ ತನ್ನ ಪ್ರಕರಣದಲ್ಲಿ ತಾನೇ ನ್ಯಾಯಮೂರ್ತಿಯಾಗಬಾರದು ಎಂಬುದು ಸರ್ವರು ಮಾನ್ಯ ಮಾಡಿದ ತತ್ವ. ಅದನ್ನು ಪಾಲಿಸದೇ ಇದ್ದುದರಿಂದ ಅದು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿತ್ತಷ್ಟೆ.
ಬೇರೆ ಆಯ್ಕೆಯಿತ್ತೆ?
ಇಡೀ ಪ್ರಕರಣದಿಂದ ನ್ಯಾಯಾಂಗದ ಘನತೆಗೆ ಧಕ್ಕೆಯಾಗಿದೆ ಮತ್ತು ಸಾರ್ವಜನಿಕರು ನ್ಯಾಯಾಂಗದ ಮೇಲೆ ವಿಶ್ವಾಸ ಕಳೆದು ಕೊಳ್ಳುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂಬು ಕೂಗು ಎದ್ದಿದೆ. ಈ ಆರೋಪ ಮಾಡುವವರ ವಾದವೆಂದರೆ ನ್ಯಾಯಮೂರ್ತಿಗಳು ತಮ್ಮೊಳಗಿನ ಭಿನ್ನಾಭಿಪ್ರಾಯಗಳನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬೇಕಿತ್ತು ಎಂದು. ಆದರೆ ನ್ಯಾಯಮೂರ್ತಿಗಳ ಹೇಳಿಕೆಯ ಪ್ರಕಾರ ಕೆಲವು ತಿಂಗಳುಗಳಿಂದ ಆ ನಿಟ್ಟಿನಲ್ಲಿ ಪ್ರಯತ್ನಿ ಸಿದರೂ ಅವರಿಗೆ ಸೂಕ್ತ ಸ್ಪಂದನೆ ಸಿಗದೇ ಇದ್ದುದರಿಂದ ಅವರು ಅಸಾಧಾರಣ ಕ್ರಮ ಕೈಗೊಳ್ಳುವುದು ಅನಿವಾರ್ಯವಾಯಿತು. ಅವರಿಗೆ ಬೇರೆ ಆಯ್ಕೆ ಏನಿತ್ತು? ಇಂತಹ ಸನ್ನಿವೇಶದಲ್ಲಿ ಕಾನೂ
ನಿನ ಅನ್ವಯ ಅವರಿಗೆ ಯಾರಿಗೂ ದೂರು ನೀಡುವ ಅವಕಾಶವಿಲ್ಲ. ಸಿಜೆಐಯವರು ಸ್ಪಂದಿಸದೇ ಇದ್ದ ಸ್ಥಿತಿಯಲ್ಲಿ ಅವರೇನು ಮಾಡಲು ಸಾಧ್ಯ? ಪ್ರಜಾಪ್ರಭುತ್ವಕ್ಕೇ ಅಪಾಯ ಎಂದು ಮನ ಗಂಡದ್ದರಿಂದ ಅವರು ಪ್ರಜಾಪ್ರಭುತ್ವದ ನಾಲ್ಕನೇ ಆಧಾರ ಸ್ತಂಭ ವಾದ ಮಾಧ್ಯಮದ ಮೊರೆ ಹೋಗಬೇಕಾಯಿತು. ಇದರಿಂದಾಗಿ ಸಿಜೆಐಯವರ ಪ್ರತಿಷ್ಠೆಗೆ ಭಂಗವಾಯಿತು ಎಂದು ಭಾವಿಸಿದರೆ ತಪ್ಪಾದೀತು. ಒಂದೊಮ್ಮೆ ನ್ಯಾಯಮೂರ್ತಿಗಳು ಮಾಡಿದ ಆರೋಪಗಳು ಮಿಥ್ಯವೆಂದಾದರೆ ಅವರ ವಿರುದ್ಧ ಮಾನನಷ್ಠ ಮೊಕದ್ದಮೆ ದಾಖಲಿಸಬಹುದಲ್ಲ.
ರಾಜಕೀಯ ನಂಟು
ನ್ಯಾಯಮೂರ್ತಿಗಳ ಈ ಐತಿಹಾಸಿಕ ನಡೆಗೆ ಕಾರಣವಾಗಿದ್ದು ಎರಡು ಪ್ರಮುಖ ಪ್ರಕರಣಗಳಲ್ಲಿ ಸಿಜೆಐಯವರ ನಡವಳಿಕೆ ಎನ್ನಲಾಗುತ್ತಿದೆ. ಮೊದಲನೆಯದ್ದು ಲೋಯಾ ನಿಗೂಢ ಸಾವಿನ ಪ್ರಕರಣ. ಇದು ರಾಜಕೀಯವಾಗಿ ಪರಿಣಾಮ ಬೀರಬಲ್ಲ ಪ್ರಕರಣವಾಗಿದೆ. ಇನ್ನೊಂದು ಲಕ್ನೋ ಮೂಲದ ಪ್ರಸಾದ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ… ಸಯನ್ಸ್ ಕಾಲೇಜಿನ ಸೀಟು ಹಂಚಿಕೆ ಪ್ರಕರಣ. ಈ ಎರಡು ಪ್ರಕರಣಗಳನ್ನು ಉದ್ದೇಶಪೂರ್ವಕವಾಗಿಯೇ ಕೋರ್ಟ ನಂ. 2ರ ಬದಲಾಗಿ ಜೂನಿಯರ್ ಪೀಠಕ್ಕೆ ವರ್ಗಾಯಿಸ ಲಾಗಿದೆ ಎಂಬುದು ನ್ಯಾಯಮೂರ್ತಿಗಳ ಆರೋಪ. ಮೆಡಿಕಲ… ಕಾಲೇಜು ಪ್ರಕರಣದಲ್ಲಿ ಹಿಂದೆ ಸಿಜೆಐಯವರು ಜಡ್ಜ್ ಆಗಿ ಕಾರ್ಯ ನಿರ್ವಹಿಸಿದ್ದರಿಂದ ಮತ್ತೂಮ್ಮೆ ಅವರೇ ನ್ಯಾಯಾ ಧೀಶ ರಾಗಬಾರದು ಎಂಬ ಅರ್ಜಿದಾರರ ಆಕ್ಷೇಪಣೆಯನ್ನು ಪುರಸ್ಕರಿ ಸಿದ ಚಲಮೇಶ್ವರ ಅವರು ಅದನ್ನು ಸಂವಿಧಾನ ಪೀಠಕ್ಕೆ ವರ್ಗಾಯಿಸಿದ್ದರು. ಆದರೆ ಮಾರನೇ ದಿನವೇ ಸಿಜೆಐಯವರು ಅದನ್ನು ಅಸಿಂಧುಗೊಳಿಸಿ, ಬೇರೊಂದು ಪೀಠಕ್ಕೆ ವರ್ಗಾಯಿಸಿದ್ದು ಚಲಮೇಶ್ವರರ ಅಸಮಾಧಾನಕ್ಕೆ ಕಾರಣ. ಈ ಪ್ರಕರಣದ ವಿಚಾರಣೆಯ ವೇಳೆ ಹಿರಿಯ ವಕೀಲರಾದ ಪ್ರಶಾಂತ್ ಭೂಷಣ ರವರು ಎಫ್ಐಆರ್‌ನಲ್ಲಿ ಸಿಜೆಐಯವರ ಹೆಸರಿದೆ ಎಂಬ ಗಂಭೀರ ಆರೋಪವನ್ನು ಕೋರ್ಟಿನಲ್ಲಿ ಮಾಡಿದ್ದರು. ಕೋಪಗೊಂಡ ಸಿಜೆಐಯವರು ಪ್ರಶಾಂತ್ ಭೂಷಣ್ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುವುದಾಗಿ ಹೇಳಿದರೂ ಮತ್ತೆ ಪ್ರಶಾಂತ್ ಅದಕ್ಕೂ ಯೋಗ್ಯರಲ್ಲ ಎಂದು ಜಾರಿಕೊಂಡರು. ಪ್ರಶಾಂತ್ ಭೂಷಣ್ ಪ್ರಕರಣ ದಾಖಲಿಸುವಂತೆ ಕೋರಿಕೊಂಡಿ ದ್ದರು ಎಂಬುದು ಗಮನಾರ್ಹ. ಈ ಎರಡೂ ಪ್ರಕರಣಗಳಲ್ಲಿ ಸಿಜೆಐಯವರು ಆವರ್ತನ ಪದ್ಧತಿ ಅನುಸರಿಸದೆ ತಮ್ಮ ಮರ್ಜಿಯಂತೆ ಕೇಸುಗಳನ್ನು ತಮಗೆ ಬೇಕಾದ ಪೀಠಗಳಿಗೆ ವರ್ಗಾಯಿಸಿ ಪಕ್ಷಪಾತದ ಧೋರಣೆ ಅನುಸರಿಸಿದ್ದಾರೆ ಎಂಬುದು ನ್ಯಾಯಮೂರ್ತಿಗಳ ಅಸಮಾಧಾನಕ್ಕೆ ಕಾರಣ. ಇದರ ಹಿಂದೆ ನಿರ್ದಿಷ್ಟ ಉದ್ದೇಶವಿದ್ದು, ನಡೆಗಳು ರಾಜಕೀಯ ಪ್ರೇರಿತವಾಗಿ ರಲೂ ಸಾಧ್ಯ ಎಂಬ ಗುಮಾನಿ ಬರುವಂತಿದೆ. ಹಾಗಾಗಿ ನ್ಯಾಯ ಮೂರ್ತಿಗಳು ಪ್ರಜಾಸತ್ತೆಗೆ ತೊಂದರೆ ಉಂಟಾಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬ ಗಂಭೀರ ಆಪಾದನೆ ಮಾಡಿದ್ದಾರೆ.
ಸಾಮಾಜಿಕ ಮಾಧ್ಯಮಗಳ ಬೆಂಬಲ
ಈ ಪ್ರಕರಣ ನಡೆದ ಮರುದಿನವೇ ಸಾಮಾಜಿಕ ಮಾಧ್ಯಮ ಗಳಲ್ಲಿ ಸಿಜೆಐಯವರ ಕಾರ್ಯವೈಖರಿ ಬೆಂಬಲಿಸಿ ಮತ್ತು ಅವರ ವ್ಯಕ್ತಿತ್ವ ವೈಭವೀಕರಿಸಿ ಅನೇಕ ಬರಹಗಳು ಕಾಣಿಸಿಕೊಂಡಿವೆ. ಜತೆಗೆ ಚಲಮೇಶ್ವರರನ್ನು ಟೀಕಿಸುವ ಕಿರು ಲೇಖನಗಳು ಹುಟ್ಟಿಕೊಂಡವು. ಅಷ್ಟು ಕ್ಷಿಪ್ರ ಸಮಯದಲ್ಲಿ ಇಂತಹ ಬರಹಗಳನ್ನು ಸೃಷ್ಟಿಸಿದವ ರಾರು? ಖಂಡಿತವಾಗಿ ಸಿಜೆಐಯವರಿಗೆ ಅಭಿಮಾನಿ ಸಂಘಗಳು ಇದ್ದಂತಿಲ್ಲ. ಹಾಗಿದ್ದರೆ ಇದನ್ನು ಸೃಷ್ಟಿಸಿದವರ ಉದ್ದೇಶಗಳೇನು? ಇದು ಸಿಜೆಐಯವರ ನಡೆಗಳಿಗೆ ರಾಜಕೀಯ ನಂಟು ಇರುವ ಬಗ್ಗೆ ಅನುಮಾನ ಹುಟ್ಟಿಸುತ್ತದೆ. ಇಡೀ ಪ್ರಕರಣದಲ್ಲಿ ಮೇಲು ನೋಟಕ್ಕೆ ಕಾಣಿಸುವುದಕ್ಕಿಂತ ಹೆಚ್ಚಿನ ಅರ್ಥ ಇರುವುದು ನಿಚ್ಚಳವಾಗುತ್ತದೆ. ಇದರಿಂದಾಗಿಯೇ ನ್ಯಾಯಮೂರ್ತಿಗಳು ಪತ್ರಿಕಾಗೋಷ್ಠಿ ಕರೆಯುವ ನಿರ್ಧಾರ ತೆಗೆದುಕೊಂಡದ್ದು.
ನ್ಯಾಯಾಂಗದಲ್ಲಿ ಪಾರದರ್ಶಕತೆ
ನ್ಯಾಯಾಂಗದಲ್ಲಿ ಪಾರದರ್ಶಕತೆಗೆ ಹೆಚ್ಚಿನ ಪ್ರಾಮುಖ್ಯತೆಯಿಲ್ಲ. ನ್ಯಾಯಾಧೀಶರುಗಳನ್ನು ನೇಮಿಸುವ ಕೊಲಿಜಿಯಂ ಪದ್ಧತಿ ತೀರಾ ಗೌಪ್ಯವಾಗಿ ನಡೆಯುವಂತಹದು. ಅಲ್ಲಿ ಸಿದ್ಧ ನಿಯ ಮಾವಳಿಗಳು ಅಥವಾ ಕ್ರಮಗಳು ಇಲ್ಲ. ತಮಗೆ ಬೇಕಾದವರನ್ನೇ ನೇಮಿಸುವುದು, ಬೇಕಾದವರಿಗೆ ವರ್ಗಾವಣೆ ನೀಡುವುದು ಮುಂತಾದುವುಗಳು ನಡೆಯುತ್ತಿದೆ. ಇಂತಹ ಕೊಲಿಜಿ ಯಂನ್ನು ಚಲಮೇಶ್ವರರೊಬ್ಬರೇ ವಿರೋಧಿಸಿದ್ದು ಎಂಬುದು ಅವರ ವಿಶ್ವಾಸಾರ್ಹತೆಯನ್ನು ಸೂಚಿಸುತ್ತದೆ. ಕೇಂದ್ರ ಸರಕಾರ ಅದನ್ನು ಬದಲಾಯಿಸಲು ಯತ್ನಿಸಿ ವಿಫಲವಾಗಿದ್ದನ್ನು ನಾವು ಸ್ಮರಿಸಬಹುದು.ಜಡ್ಜರ ನೇಮಕಾತಿಕಾಗಿ ಸುಪ್ರೀಂ ರೂಪಿಸಿದ “ಮ್ಯಾನುಯಲ… ಆಫ್ ಪ್ರೊಸೀಜರ್’ಗೆ ಕೇಂದ್ರ ಸರಕಾರ ಇನ್ನೂ ಅನುಮೋದನೆ ನೀಡಿಲ್ಲ. ವಿಮರ್ಶೆಗೆ ಒಳಪಡದಿದ್ದರೆ ನ್ಯಾಯಾಂಗವೂ ಜಡವಾಗುತ್ತದೆ. ಸಿಜೆಐಯವರು ಎಲ್ಲ ನ್ಯಾಯಾ ಧೀಶರ ಜತೆ ಸಮಾನರು ಆದರೆ ಮೊದಲಿಗರು ಅಷ್ಟೇ ಎಂದು ಚಲಮೇಶ್ವರರು ಅಭಿಪ್ರಾಯಪಟ್ಟಿದ್ದಾರೆ. ಹಾಗಾಗಿ ಪ್ರಕರಣಗಳನ್ನು ವರ್ಗಾಯಿಸಲು ಹಿರಿಯ ಮೂವರು ನ್ಯಾಯಾಧೀಶರ ಸಮಿತಿಯನ್ನು ನೇಮಿಸಿದರೆ ಸಿಜೆಐಯವರ ವೈಯಕ್ತಿಕ ನಿರ್ಧಾರಗಳಿಗೆ ಕಡಿವಾಣ ಬೀಳುವುದರ ಜತೆಗೆ ಪ್ರಜಾಪ್ರಭುತ್ವದ ತತ್ವಗಳಿಗೆ ಮನ್ನಣೆ ಕೊಟ್ಟಂತಾಗುತ್ತದೆ.
ರವಿರಾಜ ಬೈಕಂಪಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
C.T. Ravi; ಅವಾಚ್ಯ ಶಬ್ದಗಳಿಂದ ನಿಂದಿಸಿದ ದಾಖಲೆ ಇಲ್ಲ: ಮಹತ್ವ ಪಡೆದ ಸಭಾಪತಿ ಹೇಳಿಕೆ
TuluMovie; ತೆರೆಗೆ ಬರಲು ಸಿದ್ದವಾಯ್ತು ಮಿಡಲ್ ಕ್ಲಾಸ್ ಫ್ಯಾಮಿಲಿ: ರಿಲೀಸ್ ದಿನಾಂಕ ಬಂತು
BJP ಪೂರ್ವಾಂಚಲಿಗಳನ್ನು ರೋಹಿಂಗ್ಯಾಗಳೆಂದು ಮತಗಳನ್ನು ಅಳಿಸುತ್ತಿದೆ: ಕೇಜ್ರಿವಾಲ್ ಆರೋಪ
Gold & Cash: ಕಾಡಿನ ಬಳಿ ನಿಲ್ಲಿಸಿದ್ದ ಕಾರಿನಲ್ಲಿ 52 ಕೆ.ಜಿ ಚಿನ್ನ, 9 ಕೋಟಿ ನಗದು ಪತ್ತೆ
Aligarh; ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಮತ್ತೊಂದು ಶಿವ ದೇವಾಲಯ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.