ಕನ್ನಡದ ಕಲ್ಯಾಣಕ್ಕೆ ಕಾರಣವಾಗಲಿ ಸಮ್ಮೇಳನ
Team Udayavani, Feb 4, 2020, 6:00 AM IST
ಭೌಗೋಳಿಕವಾಗಿ ರಾಜ್ಯದ ರಾಜಧಾನಿಯಿಂದ ಬಹುದೂರದಲ್ಲಿರುವ ಕಲಬುರಗಿ ಅಭಿವೃದ್ಧಿಯ ವಿಚಾರದಲ್ಲಿ ಅಷ್ಟೇ ಅಂತರದಲ್ಲಿದೆ. ಒಂದೆಡೆ ಶತ ಮಾನಗಳಿಂದ ಆಳಿದವರ ಪ್ರಭಾವದಿಂದ ಬಂದ ಹಿಂದಿ, ಉರ್ದು, ಮರಾಠಿ, ತೆಲಗು ನಂಟು ಕನ್ನಡಕ್ಕೆ ಕಗ್ಗಂಟಾಗಿವೆ.
“”ರಾಜ್ಯದ ಗಡಿನಾಡಿನ ಕನ್ನಡಿಗರ ಸ್ಥಿತಿಗತಿ ಸುಧಾರಿಸದೇ ನಾಡು ನುಡಿಯ ಬೆಳವಣಿಗೆ ಸಾಧ್ಯವಿಲ್ಲ. ರಾಜ್ಯದ ಎಲ್ಲಾ ಭಾಗದ ಜನರು ದೊಡ್ಡವರಾಗದೇ ನಮ್ಮ ನಾಡು ನುಡಿಗಳು ದೊಡ್ಡದಾಗುವುದಿಲ್ಲ” ಎಂದು 1985ರಲ್ಲಿ ನಡೆದ 57ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷರಾಗಿದ್ದ ಡಾ.ಹಾ.ಮಾ.ನಾಯಕ ಹೇಳಿದ್ದರು. ಇಂತಹ ಆಶಯವನ್ನು ಅವರು ವ್ಯಕ್ತಪಡಿಸಿ ಮೂರು ದಶಕಗಳೇ ಗತಿಸಿವೆ. ಅವರ ಎಚ್ಚರಿಕೆಯ ನುಡಿಗಳು ಬೀದರ್ ನೆಲದಲ್ಲಿಯೇ ಮೊಳಗಿದ್ದವು. ಬೀದರ್ ಅಂಚಿನಲ್ಲೇ ಇರುವ ಗುಲ್ಬರ್ಗಾ ತನ್ನ ಹೆಸರು ಬದಲಿಸಿಕೊಂಡು ಈಗ ಕಲಬುರಗಿ ಆಗಿದೆ. ಆಗ ಹೈದ್ರಾಬಾದ್ ಕರ್ನಾಟಕ ಇದ್ದದ್ದು ಈಗ ಕಲ್ಯಾಣ ಕರ್ನಾಟಕವೂ ಆಯಿತು.
ಆದರೆ ಹೆಸರು ಬದಲಾದಂತೆ ಈ ಭಾಗದ ಜನರ ಸ್ಥಿತಿಗತಿ ಸುಧಾರಿಸದೇ ಇರುವುದು ದುರದೃಷ್ಟಕರ. ಹಾ.ಮಾ.ನಾ. ಅವರು ನೀಡಿದ್ದ ಎಚ್ಚರಿಕೆಯ ಮಾತುಗಳನ್ನು ಗಂಭೀರವಾಗಿ ಪರಿಗಣಿಸಿದ್ದರೆ ಈ ಭಾಗದ ಜನರು ಇವತ್ತು ಗುಳೆ ಹೋಗುವ ಪರಿಸ್ಥಿತಿ ಬರುತ್ತಿರಲಿಲ್ಲ.
ಹೈದ್ರಾಬಾದ್ ಕರ್ನಾಟಕವು ಕಲ್ಯಾಣ ಕರ್ನಾಟಕವಾದ ನಂತರ ಮೊದಲ ಬಾರಿಗೆ ಕಲಬುರಗಿಯಲ್ಲಿ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. 1957ರಲ್ಲಿ ಕನ್ನಡ ಸಾಹಿತ್ಯದ ಹಬ್ಬವು ಇಲ್ಲಿಯೇ ನೆರವೇರಿತ್ತು. ಸೂಫಿ ಸಂತರ ನಾಡು ಎಂದೇ ಪ್ರಸಿದ್ಧಿ ಪಡೆದ ಕಲಬುರಗಿಯಲ್ಲಿ ನಡೆಯುತ್ತಿರುವ ಈ ಸಾಹಿತ್ಯ ಸಮ್ಮೇಳನಕ್ಕೆ ಅತ್ಯಂತ ಮಹತ್ವವಿದೆ.
ಯಾಕೆಂದರೆ ಈ ಶತಮಾನದ ಎರಡನೆಯ ದಶಕ(2020)ದಲ್ಲಿ ನಡೆಯುತ್ತಿರುವ ಮೊದಲ ಸಾಹಿತ್ಯ ಸಮ್ಮೇಳನ ಇದು. ಕಲ್ಯಾಣ ಕರ್ನಾಟಕಕ್ಕೆ ದೊಡ್ಡ ಚರಿತ್ರೆಯೇ ಇದ್ದು ಸರ್ವಧರ್ಮದ ಆಯಾಮಗಳಿವೆ. ರಾಷ್ಟ್ರಕೂಟರ ಕಾಲದಿಂದಲೂ ಕಲಬುರಗಿ ಚರಿತ್ರೆಯು ಗುರುತಿಗೆ ಸಿಗುತ್ತದೆ. ಭಾರತೀಯ ನ್ಯಾಯಶಾಸ್ತ್ರದ ಪಿತಾಮಹ ಮರತೂರಿನ ವಿಜ್ಞಾನೇಶ್ವರನ ಸಂಶೋಧನಾ ಕೇಂದ್ರ ಇಲ್ಲಿದೆ. ಕಾಕತೀಯ ಅರಸರು, ದೆಹಲಿಯ ಸುಲ್ತಾನರು, ಬಹುಮನಿ ಸಾಮ್ರಾಜ್ಯ, ಹೈದ್ರಾಬಾದ್ ಸಂಸ್ಥಾನ ಹೀಗೆ ನಾನಾ ಆಡಳಿತಕ್ಕೆ ಒಳಪಟ್ಟು ಬಹುಭಾಷೆ, ಬಹುಧರ್ಮ, ಬಹುಸಂಸ್ಕೃತಿಯಲ್ಲಿ ಸಾಗಿಬಂದ ಐತಿಹಾಸಿಕ ಭೂಮಿ ಕಲಬುರಗಿ.
ಭೌಗೋಳಿಕವಾಗಿ ರಾಜ್ಯದ ರಾಜಧಾನಿಯಿಂದ ಬಹುದೂರದಲ್ಲಿರುವ ಕಲಬುರಗಿ ಅಭಿವೃದ್ಧಿಯ ವಿಚಾರದಲ್ಲಿ ಅಷ್ಟೇ ಅಂತರದಲ್ಲಿದೆ. ಒಂದೆಡೆ ಆಳಿದವರ ಪ್ರಭಾವದಿಂದ ಬಂದ ಹಿಂದಿ, ಉರ್ದು, ಮರಾಠಿ, ತೆಲಗು ನಂಟು ಕನ್ನಡಕ್ಕೆ ಕಗ್ಗಂಟಾಗಿವೆ. ಸರ್ವರೊಳಗೊಂದಾಗು ಮಂಕುತಿಮ್ಮ ಎನ್ನುವ ಮಾತಿಗೆ ಅನುರೂಪವಾಗಿ ಕಲಬುರಗಿ ಇದ್ದರೂ ಇಲ್ಲಿ ಕನ್ನಡದ ವಾತಾವರಣ, ಕನ್ನಡಿಗರ ಬದುಕನ್ನು ಹಸನು ಮಾಡುವ ದೊಡ್ಡಮಟ್ಟದ ಪ್ರಯತ್ನಗಳು ಇನ್ನೂ ಆಗಬೇಕಿದೆ. ಗಡಿನಾಡಿನಲ್ಲಿ ಕನ್ನಡದ ಕಂಪನ್ನು ವಿಸ್ತಾರ ಮಾಡುವ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಯತ್ನವು ಇನ್ನೊಂದು ಆಯಾಮಕ್ಕೆ ಏರಲು ಇದೊಂದು ಅಮೂಲ್ಯ ಅವಕಾಶ.
ಹಲವಾರು ದಶಕಗಳಿಂದ ಕಲ್ಯಾಣ ಕರ್ನಾಟಕಕ್ಕೆ ಕಾಡುವ ಪ್ರಮುಖ 5 ಸಮಸ್ಯೆಗಳ ಗಂಟನ್ನು 85ನೇ ಕನ್ನಡ ಸಾಹಿತ್ಯ ಸಮ್ಮೇಳನ ಬಿಚ್ಚಬೇಕಿದೆ. 1)ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಹೆಚ್ಚುತ್ತಿರುವ ವಲಸೆ 2) ತೊಗರಿ ಕಣಜವೇ ಆದ ಕಲಬುರಗಿಯಲ್ಲಿ ದೊಡ್ಡ ಮಟ್ಟದ ತೊಗರಿ ಹಬ್-ಪಾರ್ಕ್ ಇನ್ನೂ ಆಗಿಲ್ಲದಿರುವುದು 3)ಹಲವಾರು ಜೀವ ನದಿಗಳು ಕಲ್ಯಾಣ ಕರ್ನಾಟಕದಲ್ಲಿ ಹರಿದರೂ ನೀರಾವರಿ ಯೋಜನೆಗಳು ಇಡೀ ಜಿಲ್ಲೆಯನ್ನು ವ್ಯಾಪಿಸಿಕೊಂಡಿಲ್ಲ. 4)ಕನ್ನಡ ಆಡುವ, ಆಳುವ ಭಾಷೆಯಾಗದೇ ಅನ್ಯ ಭಾಷೆಗೆ ಜನರು ಒಗ್ಗಿ ಹೋಗುತ್ತಿರುವುದು ಅತಿದೊಡ್ಡ ಸಮಸ್ಯೆಯಾಗಿ ಪರಿಣಮಿಸಿರುವುದು. 5)ರಾಜಕೀಯವಾಗಿ ಕಲ್ಯಾಣ ಕರ್ನಾಟಕ ದೊಡ್ಡ ಮಟ್ಟದ ಪ್ರಾಧಾನ್ಯತೆಯನ್ನು ಪಡೆದುಕೊಳ್ಳದೇ ಇರುವುದು. ಈ ಐದು ಸಮಸ್ಯೆಗಳಿಂದ ಈ ಭಾಗ ಇನ್ನಷ್ಟು ಹಿಂದುಳಿಯುವಿಕೆಗೆ ಕಾರಣವಾಗಿದೆ.
ಇಂಥ ಸಂದಿಗ್ಧ ಸ್ಥಿತಿಯಲ್ಲಿ 85ನೇ ಸಾಹಿತ್ಯ ಸಮ್ಮೇಳನ ಕಲಬುರಗಿಯಲ್ಲಿ ಜರುಗುತ್ತಿದೆ. ಶರಣಬಸವೇಶ್ವರರ ದೇವಸ್ಥಾನ, ಬಹಮನಿ ಕೋಟೆ, ಬಂದೇನವಾಜ್ ದರ್ಗಾ ಮತ್ತು ಬುದ್ಧವಿಹಾರಗಳಿರುವ ಕಲಬುರಗಿ ಸರ್ವ ಜನಾಂಗದ ಶಾಂತಿಯ ತೋಟ ಎನ್ನುವುದಕ್ಕೆ ಅನ್ವರ್ಥವಾಗಿದೆ.
ಸರ್ವಭಾಷೆಗಳ ಸಂಕಲಿತ ಭೂಪ್ರದೇಶ ಎನಿಸಿದ ಕಲ್ಯಾಣ ಕರ್ನಾಟಕದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಅಗತ್ಯತೆ ಮತ್ತು ಅನಿವಾರ್ಯತೆ ಅಧಿಕವಿದೆ. ಕನ್ನಡದ ವಾತಾವರಣ ಇನ್ನಷ್ಟು ವಿಸ್ತಾರಗೊಂಡು ಗಡಿಭಾಗದ ಅಭಿವೃದ್ಧಿಗಾಗಿ ಮಹಾಪೂರವೇ ಹರಿದು ಬರಬೇಕು. ಗಡಿ ಅಭಿವೃದ್ಧಿ ಪ್ರಾಧಿಕಾರ, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ, ಕನ್ನಡ ಅಧ್ಯಯನ ಕೇಂದ್ರ ಹೀಗೆ ಹಲವು ಅಧ್ಯಯನ ಕೇಂದ್ರಗಳು ಕನ್ನಡದ ನೆಲೆಯನ್ನು ಇನ್ನಷ್ಟು ಗಟ್ಟಿಗೊಳಿಸಬೇಕಿದೆ. ಕರ್ನಾಟಕ ಸಾಹಿತ್ಯ ಆಕಾಡೆಮಿಯ ಅಧ್ಯಕ್ಷೆಯಾಗಿದ್ದ ಡಾ. ಗೀತಾ ನಾಗಭೂಷಣ ಅವರು ಇದೇ ಜಿಲ್ಲೆಯವರು ಎಂಬುವುದೇ ವಿಶೇಷವಾಗಿದ್ದು ನಾಡೋಜ, ಕೇಂದ್ರ ಸಾಹಿತ್ಯ ಆಕಾಡೆಮಿ ಪ್ರಶಸ್ತಿ ಪಡೆದ ಮೊದಲ ಮಹಿಳಾ ಸಾಹಿತಿ ಇವರು. ಇನ್ನು, ಬಂಡಾಯ ಸಾಹಿತಿ ಚೆನ್ನಣ್ಣ ವಾಲೀಕಾರರನ್ನು ಕೊಡುಗೆ ಕೊಟ್ಟ ಭೂಮಿ ಇದು.
ಹಿಂದಿನ ಸಮ್ಮೇಳನಗಳಲ್ಲಿ ಕನ್ನಡಾಂಬೆಯ ಮೆರವಣಿಗೆಯು ಕೇವಲ ಮೂರು ದಿನಗಳ ಮೆರವಣಿಗೆಗೆ ಮಾತ್ರ ಸಿಮೀತವಾಗಿ ಉಳಿದ 362 ದಿನಗಳ ನಿರ್ಲಕ್ಷತೆಯ ಯಾತನೆಯ ಫಲವೇ ಈ ಹಿಂದೆ ಹಿರಿಯರಾದ ದೇವನೂರರು ಅಧ್ಯಕ್ಷನಾಗಲು ನಿರಾಕರಿಸುವ ನಿರ್ಧಾರಕ್ಕೆ ಕಾರಣವಾಗಿತ್ತೇನೋ. ಅವರು ಬಯಸಿದ್ದು ಕೇವಲ 3 ದಿನಗಳ ಬದಲಾಗಿ 365 ದಿನಗಳು ಕನ್ನಡ ಮಾಧ್ಯಮದ ಮೆರವಣಿಗೆಯಾಗಲೇಬೇಕೆಂಬುದು. ಇದು ನಾಡಿನ ಜನರ ಮತ್ತು ಕನ್ನಡ ಪರಿಷತ್ತಿನ ಬಹುದಿನಗಳ ಬೇಡಿಕೆಯಾಗಿದೆ.
ಈ ನಾಡಿನಲ್ಲಿ ಕನ್ನಡವನ್ನು ಶಿಕ್ಷಣ ಮಾಧ್ಯಮವಾಗಿ ಜಾರಿಗೊಳಿಸದ ಹೊರತು ತಾವು ಕನ್ನಡ ಸಾಹಿತ್ಯ ಸಮ್ಮೇಳಾನಾಧ್ಯಕ್ಷ ಸ್ಥಾನವನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಈ ಹಿಂದೆ ದೇವನೂರ ಮಹಾದೇವ ಅವರು ಘೋಷಿಸಿದ್ದು ಸ್ವಾಗತಾರ್ಹ ನಿಲುವಾಗಿತ್ತು. ಈ ನಿರ್ಣಯ ಕನ್ನಡಾಂಬೆಯ ರಾಜ್ಯ ಭಾಷೆಯ ಶಿಕ್ಷಣ ಮಾಧ್ಯಮವನ್ನು ಜಾರಿಗೊಳಿಸುವ ದಿಸೆಯಲ್ಲಿ ಕನ್ನಡಿಗರು ಸದಾ ಅಲೋಚಿಸುವಂತೆ ಹಾಗೂ ಕನ್ನಡದ ಉಳಿವಿಗಾಗಿ ಎಲ್ಲರೂ ಸದಾ ಪ್ರಯತ್ನಶೀಲರಾಗಿರುವಂತೆ ಮಾಡಿದೆ.
ಇಂಗ್ಲಿಷ್ ಮಾಧ್ಯಮದಿಂದ ಶಿಕ್ಷಣ ಕ್ಷೇತ್ರದಲ್ಲಿನ ಕೆಲವು ಅನುಕೂಲಗಳನ್ನು ನಾವು ಇಂದು ಅಲ್ಲಗಳೆಯುವಂತಿಲ್ಲ. ಅಂತಾರಾಷ್ಟೀಯ ಮಟ್ಟದಲ್ಲಿ ವಿಜ್ಞಾನ, ತಂತ್ರಜ್ಞಾನದ ಮಾಹಿತಿ ಸಂಗ್ರಹ ವಿನಿಮಯವಾಗಿ ಅದರ ಪ್ರಸಾರ ಸುಲಭವಾಗುತ್ತದೆ. ಕನ್ನಡಾಂಬೆಯನ್ನು ಈ ಸುಸಂದರ್ಭದಲ್ಲಿ ಉಳಿಸಿಕೊಂಡು ನಂತರ ಮಾರು ಗೆಲ್ಲುವ ಕೆಲಸವಾಗಬೇಕು. ಇಂದು ಸಾಹಿತ್ಯ ಜಾತ್ರೆಯಲ್ಲಿ ಕಟಿಬದ್ಧವಾದ ನಿರ್ಣಯ ತೆಗೆದುಕೊಂಡರೆ, ಒಂದನೆಯ ತರಗತಿಯಿಂದ ಇಂಗ್ಲಿಷಿನ ಕಲಿಕೆಯಾಗಿಸಿ ಉಳಿದ ವಿಷಯಗಳನ್ನು ನೇರವಾಗಿ ಕನ್ನಡ ಭಾಷೆ ಮಾಧ್ಯಮದಲ್ಲಿ ಸೇರಿಸಿ ಕಲಿಸುವ ವ್ಯವಸ್ಥೆಯನ್ನು ಸಾರ್ವತ್ರೀಕರಿಸಿದರೆ ಇಂಗ್ಲಿಷ್ ಮಾಧ್ಯಮ ಮತ್ತು ಕನ್ನಡ ಮಾಧ್ಯಮದ ಅಂತರ ಕಡಿಮೆಯಾಗಿ, ಈ ಅಂತರ ಭವಿಷ್ಯದಲ್ಲಿ ಕೊನೆಯಾಗಿ ಸಮಾನತೆ ಸಾಧಿಸಲು ಸಾಧ್ಯವಾಗುತ್ತದೆ.
ಕುವೆಂಪು ಅವರು ಮೈಸೂರು ವಿಶ್ವವಿದ್ಯಾಲಯದ ಕುಲಪತಿಯಾಗಿದ್ದಾಗ ಕನ್ನಡದ ವಿಷಯ ಬಂದಾಗ ನಾನು ಸರ್ವಾಧಿಕಾರಿ ಧೋರಣೆಯವನು ಎಂದು ಬಹಿರಂಗವಾಗಿಯೇ ಹೇಳಿಕೊಂಡಿದ್ದರು. ಇಂದು ಇಂಥದೊಂದು ಕಟಿಬದ್ಧ ಸಂಕಲ್ಪ ಆಳುವವರಿಗೆ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿಗೆ ಬರಬೇಕಾಗಿದೆ. ಕನ್ನಡ ಮಾಧ್ಯಮದಿಂದ ಕನ್ನಡನಾಡು-ನುಡಿಗೆ ಲಾಭವೇ ಅಧಿಕವಾಗುತ್ತದೆ.
ಕನ್ನಡದ ಸೋಗಸಿನ ಕವಿಯಾದ ಕೆ.ಎಸ್. ನರಸಿಂಹಸ್ವಾಮಿಯವರ ವಾಣಿಯಂತೆ ಕನ್ನಡ ಮಾಧ್ಯಮವಾಗಲೇಬೇಕು ಕನ್ನಡದ ಮಕ್ಕಳಿಗೆ.
ಕೊನೆಯದಾಗಿ, ಕನ್ನಡ ಈಗಾಗಲೇ ಸಾರ್ವಜನಿಕ ಭಾಷೆಯಾಗಿ ಅತಿ ದುರ್ಬಳಕೆಯಾಗುತ್ತಿದ್ದು ಒಂದು ಭಾಷೆಯನ್ನು, ಭಾವನೆಯನ್ನು ಸೂಕ್ಷ್ಮವಾಗಿ ಬಳಸಬಲ್ಲ ಸಾಧ್ಯತೆಯಿರುವ ಸಾಹಿತ್ಯಲೋಕಕ್ಕೆ ಸಾಮಾನ್ಯ ಮನುಷ್ಯರ ಪರವಾಗಿ ಮಾತಾಡುವ ಅವಕಾಶ ಉಳಿದಿದೆ. ಆದರೆ ಈ ಕೆಲಸವನ್ನು ನಮ್ಮ ಕಾಲಕಾಲದ ಸಾಹಿತ್ಯ ಸಮ್ಮೇಳನಗಳು ಪ್ರಾಮಾಣಿಕವಾಗಿ ಇನ್ನೂ ಮಾಡಬೇಕಿದೆ. ಕಲಬುರಗಿಯಲ್ಲಿ ಜರುಗಲಿರುವ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷರಾಗಿರುವ ಎಚ್.ಎಸ್.ವೆಂಕಟೇಶಮೂರ್ತಿ ಅವರು ಆಧುನಿಕ ಸಾಹಿತ್ಯವನ್ನು ನವಪೀಳಿಗೆಯತ್ತ ತಂದವರು. ಕನ್ನಡದ ಹಲವಾರು ಸವಾಲುಗಳನ್ನು ಬರಹದ ಎಲ್ಲಾ ಆಯಾಮಗಳಲ್ಲೂ ತೆರೆದಿಟ್ಟ ಎಚ್ಚೆಸ್ವಿಯವರು 85ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿರುವುದು ಕಳಸ ಪ್ರಾಯವೇ ಸರಿ. ಕಲ್ಯಾಣ ಕರ್ನಾಟಕದ ಕನ್ನಡದ ಸಮಸ್ಯೆ, ಗಡಿ ಕನ್ನಡಿಗರ ಸಮಸ್ಯೆ, ಕನ್ನಡದ ಅಸ್ಮಿತೆಯನ್ನು ಅತ್ಯಂತ ವಿಮಶಾìತ್ಮಕವಾಗಿ ನೋಡಿ ಅದಕ್ಕೊಂದು ಜಾಗೃತಿಯ ಜಾಡನ್ನು ಹಾಕಿ ಕೊಡುವ ಹಾಗೂ ಕನ್ನಡದ ಪ್ರಸ್ತುತತೆಯನ್ನು ಚರ್ಚೆಯ ಆಯಾಮಕ್ಕೆ ಒಳಪಡಿಸುವ ಪ್ರಯ ತ್ನ ವನ್ನು ಮೂರು ದಿನಗಳಲ್ಲಿ ಮಾಡಬೇಕಿದೆ. ಕಲ್ಯಾಣ ಕರ್ನಾಟಕದಲ್ಲಿ ನಡೆಯುತ್ತಿರುವ ಈ ಸಮ್ಮೇಳನ ಕನ್ನಡದ ಕಲ್ಯಾಣಕ್ಕೆ ಮತ್ತೂಂದು ಹೆದ್ದಾರಿಯಾಗಬೇಕಿದೆ.
ಇಲ್ಲಿನ ಹಿಂದುಳಿದ ಜಿಲ್ಲೆಗಳನ್ನು ಭೌಗೋಳಿಕವಾಗಿ, ಸಾಮಾಜಿಕವಾಗಿ ಮತ್ತು ಸಾಹಿತ್ಯಾತ್ಮಕವಾಗಿ ಸುಧಾರಿಸಲು ಈ ಸಮ್ಮೇಳನ ನಾಂದಿಯಾಗಲಿ.
– ಪ್ರೊ. ಮಂಜುನಾಥ ಉಲವತ್ತಿ ಶೆಟ್ಟರ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.