ಅಧಿವೇಶನ ಜಂಬೂ ಸರ್ಕಸ್ ಆಗೇತಿ
Team Udayavani, Nov 26, 2017, 9:37 AM IST
ನಾನು ಬೆಳಗಾವಿ ಅಧಿವೇಶನಕ್ಕ ಹೋಗುದು ಐತಿ ಅಂದ್ರ ಯಜಮಾನಿ¤ಗೆ ಫುಲ್ ಖುಷಿ, ಯಾಕಂದ್ರ ಅಕಿ ಹದಿನೈದ್ ದಿನಾ ಅರಾಮ್ ತವರು ಮನಿಗಿ ಹೋಗಬೌದು ಅಂತ ಅಕಿ ಲೆಕ್ಕಾಚಾರ. ಬ್ಯಾರೆ ಟೈಮಿನ್ಯಾಗ ಬಂದ್ರ ಅಷ್ಟು ದಿನಾ ತವರು ಮನ್ಯಾಗ ಇರಾಕ ಸಾಧ್ಯ ಇಲ್ಲಾ ಅನ್ನು ಲೆಕ್ಕಾಚಾರ ಅಕಿದು. ಈ ಬೆಳಗಾವಿ ಅಧಿವೇಶನ ಎಲ್ಲಾರದೂ ಒಂದೊಂದು ಲೆಕ್ಕಾಚಾರ ಕೆಲವರಿಗೆ ಹದಿನೈದ್ ದಿನದ ಟೂರ್ ಆದ್ರ, ಇನ್ನ
ಕೆಲವು ಮಂದಿಗೆ ಪ್ರಕೃತಿ ಚಿಕಿತ್ಸಾ ಕೇಂದ್ರ ಇದ್ದಂಗ, ಹೊತ್ತಿಗಿ ಸರಿಯಾಗಿ ಊಟ, ಮುಂಜಾನೆದ್ದು, ಜೇನ್ ತುಪ್ಪಾ ನಿಂಬಿ ಹಣ್ಣಿನ ರಸಾ ಕುಡುದು, ಕಿಲ್ಲಾ ಮುಂದಿನ ಕೆರೆ ಯಾಡ್ ರೌಂಡ್ ಹೊಡದು, ಹೊಟ್ಟಿಗಿ ಹಿಡಿಸಿದಷ್ಟ ತಿಂದು ಅರಾಮಾಗಿ ಇರಾರು ಆದ್ರ, ಮತ್ತಷ್ಟು ಮಂದಿ ಬೇಕಾಬಿಟ್ಟಿ ರೊಟ್ಟಿ ತಿಂದು ಹೊಟ್ಟಿ ಕೆಡಸಕೊಂಡು ಹೊಟೆಲ್‌ನ್ಯಾಗ ಮಲಗಿದವರು ಅದಾರ.
ಇನ್ನ ರಾಜಕಾರಣಿಗೋಳಿಗೆ ಬೆಳಗಾವಿ ಅಧಿವೇಶನ ಅಂದ್ರ ಜಂಬೂ ಸರ್ಕಸ್ ಇದ್ದಂಗ, ಹದಿನೈದ ದಿನದಾಗ ಎಷ್ಟು ಬರತೈತಿ ಅಷ್ಟು ಸರ್ಕಸ್ ನಡಿಸಿ ಹೊಂಟ್ ಬಿಡುದು, ಒಂದ ರೀತಿ ಗುಡಿ ಹುಣಿವಿ ಎಲ್ಲಮ್ಮನ ಜಾತ್ರಿ ಇದ್ದಂಗ. ಎಷ್ಟು ಬರತೈತಿ ಅಷ್ಟು ಹಡ್ಡಲಗಿ ತುಂಬಿಸಿಕೊಂಡು ಹೊಂಟ್
ಬಿಡುದು. ಬೆಳಗಾವಿ ಅಧಿವೇಶನ ಘೊಷಣೆ ಮಾಡಿದಾಗಿ ನಿಂದ ಉತ್ತರ ಕರ್ನಾಟಕ ಅಭಿವೃದ್ಧಿ ಬಗ್ಗೆ ಚರ್ಚೆಗೆ ಆದ್ಯತೆ ನೀಡಬೇಕು. ಈ ಭಾಗದ ಸಮಸ್ಯೆ ಚರ್ಚೆ ಆಗಬೇಕು. ಅನ್ಯಾಯ ಸರಿಪಡಿಸಬೇಕು ಅಂತ ಪ್ರತಿಪಕ್ಷದಾಗ ಇದ್ದಾರೆಲ್ಲಾ ಮಾತಾಡೊದು, ಆಡಳಿತಾ ನಡಸಾರು ಅದ ನಂಜುಂಡಪ್ಪ ವರದಿ, ಹೈದರಾಬಾದ್ ಕರ್ನಾಟಕ ವಿಶೇಷ ಸ್ಥಾನಮಾನ ಕೊಟ್ಟಿದ್ದು ಕತಿ ಹೇಳ್ಳೋದು ಗುಡಚಾಪಿ ಕಟಗೊಂಡು ಹೊಂಟ್ ಬಿಡುದು.
ಉತ್ತರ ಕರ್ನಾಟಕ ಭಾಗಕ್ಕ ಅನ್ಯಾಯ ಆಗಾಕತ್ತೇತಿ ಅಂತ ಎಲ್ಲಾ ಪಾರ್ಟಿಯಾರು ಹೇಳ್ತಾರು. ಹಂಗಾದ್ರ ಅನ್ಯಾಯ ಮಾಡಾಕತ್ತಾರ್ಯಾರು? ನಿಮಗ ಅನ್ಯಾಯ ಮಾಡಿ ಅವರಿಗೆ ಆಗೋ ಲಾಭ ಏನು? ಅನ್ಯಾಯ ಮಾಡಾರ ವಿರುದ್ಧ ಮಾತಾಡಾಕ್ ಬ್ಯಾಡ್ ಆಂದಾರು ಯಾರು? ಇಂತಾ
ಪ್ರಶ್ನೆಗೋಳ್ನ ಜನಾ ಕೇಳಾಕ್ ಶುರುವಾಗೇತಿ. ಸುವರ್ಣಸೌಧ ಕಟ್ಟಿದ ಮ್ಯಾಲ ಮೂರು ಪಕ್ಷದಾರು ಅಧಿಕಾರ ನಡಿಸ್ಯಾರು, ಬೆಳಗಾವ್ಯಾಗ ಅಧಿವೇಶನ ನಡಿಸ್ಯಾರು.
ಬಿಜೆಪ್ಯಾರು ಅಧಿಕಾರದಾಗ ಇದ್ದಾಗ ಕಾಂಗ್ರೆಸ್‌ನ್ಯಾರು ಅನ್ಯಾಯ ಅಂದ್ರು, ಅವರು ಆಧಿಕಾರ ನಡಸುವಾಗ ಬಿಜೆಪ್ಯಾರ ತಾರತಮ್ಯ ಅಂದ್ರು, ನಮ್ಮ ಭಾಗದ ಅಭಿವೃದ್ಧಿಗೆ ನಮ್ಮಾರ ಧ್ವನಿ ಎತ್ತಬೇಕು ಬಿಟ್ಟರ ಅವರ ಬಂದು ಅಭಿವೃದ್ಧಿ ಮಾಡ್ಲಿ ಅಂದ್ರ ಹೆಂಗ್ ಮಾಡ್ತಾರು? ಅಡಿಕೆ, ತೆಂಗು, ಕಾಫಿಗೆ ತೊಂದರಿ ಆಗೇತಿ ಅಂದ್ರ ಆ ಭಾಗದ ಎಲ್ಲಾ ಎಂಎಲ್ಲೆಗೋಳು ಪಕ್ಷ ಭೇದ ಬಿಟ್ಟು ಮಾತಾಡ್ತಾರು, ಪ್ರತಿಭಟನೆ ಮಾಡ್ತಾರು, ಕರಾವಳಿಗೆ ಸಮಸ್ಯೆ ಆಗೇತಿ ಅಂದ್ರ ಅವರೂ ಎಲ್ಲಾರೂ ಕೂಡೆ ಸದನದ ಬಾವಿಗಿಳಿದು ತಮ್ಮ ಹಕ್ಕು ಪಡಕೋತಾರು. ಉ.ಕರ್ನಾಟಕದ
ಸಮಸ್ಯೆ ಚರ್ಚೆಗೆ ಬಂದಾಗ ಮೂರು ಪಾಟ್ಯಾರು ಸೇರಿ ಒಂದಿನಾನಾದ್ರೂ ಬಾಯಿ ಮಾಡಿದಾರಾ?
ಮಹದಾಯಿ ವಿಷಯ ಬಂದಾಗ ಬಾಯಿಬಿಟ್ಟರ ಯಡಿಯೂರಪ್ಪ ಎಲ್ಲಿ ಸಿಟ್ಟಕ್ಕಾರೋ ಆಂತ ಶೆಟ್ಟರು ಸುಮ್ಮನಾಗೋದು, ಅಧಿಕಾರದಾಗ ಇದ್ದರೂ ಜಾಸ್ತಿ ಮಾತಾಡಿದ್ರ ಎಲ್ಲಿ ಸಿದ್ದರಾಮಯ್ಯ ಗುರುಗುಡ್ತಾನೋ ಅಂತೇಳಿ, ಪಾಟೀಲರು, ಕುಲಕರ್ಣಾರು ಆಂದಕೊಂಡು ಬಾಯಿ ಮುಚಕೊಂಡು
ಇರೋದು. ಇಬ್ಬರ ನಡಕ ಅಸ್ತಿತ್ವಕ್ಕಾಗಿ ಕೋನರೆಡ್ಡಿ ಬಾಯಿ ಬಡಕೊಳ್ಳೋದು. ಹಿಂಗಿದ್ದಾಗ ಕುಡ್ಯಾಕ ನೀರು, ರೈತರ ಹೊಲಕ್ಕ ನೀರು ಬಾ ಅಂದ್ರ ಹೆಂಗ್ ಬತೈತಿ? ಉತ್ತರ ಕರ್ನಾಟಕ ಅಂದ್ರ ಬರಡು ಭೂಮಿ ಅನ್ನೋ ಮನಸ್ಥಿತಿ ಭಾಳ ಮಂದಿಗೆ ಐತಿ, ಬ್ಯಾರೆದಾರ್ಕಿಂತ ಉತ್ತರ
ಕರ್ನಾಟಕದ ಜನ ಪ್ರತಿನಿಧಿಗಳಿಗೆ ತಮ್ಮ ನಾಡಿನ ಬಗ್ಗೆ ತಮಗ ಸರಿಯಾಗಿ ತಿಳಕೊಳ್ಳೊ ಮನಸ್ಥಿತಿ ಇಲ್ಲಾ. ಹದಿಮೂರು ಜಿಲ್ಲೆಯೊಳಗ ರಾಜ್ಯದ ಅರ್ಧ ಭಾಗದಾಗ ಪ್ರಕೃತಿನ ಸಾಕಷ್ಟು ಸೌಲತ್ತು ಕೊಟ್ಟೇತಿ, ಕೃಷ್ಣಾ, ತುಂಗಭದ್ರಾ, ಮಲಪ್ರಭಾ, ಘಟಪ್ರಭಾ, ಭೀಮಾ, ಕಾರಂಜಾ ಎಲ್ಲಾ ಜಿಲ್ಲಾದಾಗೂ ಹಾದು ಹೋಗ್ಯಾವು, ಇತಿಹಾಸ ನೋಡಿದ್ರ ಕದಂಬರಿಂದ ಹಿಡಿದು ವಿಜಯನಗರದ ಸಾಮ್ರಾಜ್ಯದ ಮಟಾನೂ ಜಿಲ್ಲೆಗೊಬ್ಬ ರಾಜರು ಆಳಿ ಹೋಗ್ಯಾರು, ಹಂಪಿ, ಬದಾಮಿ, ಐಹೊಳೆ, ಪಟ್ಟದಕಲ್ಲಿನಂತಾ ಜಗತಸಿದ್ಧ ಪ್ರವಾಸಿ ತಾಣಗೋಳದಾವು.
ಊರಿಗೊಂದು ಕೋಟೆ ಅದಾವು, ತೊಗರಿ ಕಣಜ ಅಂತ ಕಲಬುರಗಿ, ಜ್ವಾಳದ ತವರು, ನಿಜಾಮರ ನಾಡು ಬಿಜಾಪುರ, ದ್ರಾಕ್ಷಿ, ದಾಳಿಂಬಿ ಬೇಕಂದ್ರ ಬಾಗಲಕ್ವಾಟಿ ಐತಿ, ಸಕ್ಕರಿ ನಾಡು ಬೆಳಗಾವೈತಿ, ಕಲ್ಲು, ಕಬ್ಬಿಣ ಬಳ್ಳಾರ್ಯಾಗ ಅಗದಲ್ಲೆಲ್ಲಾ ಸಿಗತೈತಿ. ಬಂಗಾರ ಬೇಕಂದ್ರ ಹಟ್ಟಿ ಗಣಿ ಐತಿ, ಕರೆಂಟ್ ಬೇಕಂದ್ರ ಥರ್ಮಲ್ ಪಾವರ್ ಸಿಗತೈತಿ, ಮೆಡಿಕಲ್ ಯುನಿವರ್ಸಿಟಿಗಿಂತ ಹೆಚ್ಚಿನ ಔಷಧಿ ಸಸ್ಯಾ ಹೊಂದಿರೊ
ಕಪ್ಪತ ಗುಡ್ಡಾ ಐತಿ, ಸಾಲಿ ಕಲ್ಯಾಕ ವಿದ್ಯಾಕಾಶಿ ಧಾರವಾಡೈತಿ, ಬ್ಯಾಸರಾದರ ಹರಿಗ್ಯಾಡಾಕ ಕಾರವಾರದ ಕಡಲ ತೀರ ಐತಿ, ಪ್ರಕೃತಿನ ಇಷ್ಟೆಲ್ಲಾ ಕೊಟ್ಟಿದ್ರೂ ಉತ್ತರ ಕರ್ನಾಟಕ ಹಿಂದುಳದೈತಿ ಅಂದ್ರ ಏನ್ ಕಾರಣಾ? ಎಲ್ಲಾ ಇದ್ದೂ ಏನೋ ಆಗಿಲ್ಲಾ ಅಂದ್ರ ಎಲ್ಲೋ ಎಡವಟ್ ಆಗೇತಿ ಅಂತ ಅರ್ಥ.
ಜಗತ್ತ ಹೊಳ್ಳಿ ನೋಡುವಂತಾ ಸಾಂಸ್ಕೃತಿಕ ಶ್ರೀಮಂತಿಕೆ ಹೊಂದಿರೊ ನಾಡಿನ್ಯಾಗ ಹುಟ್ಟಿದಾರಿಗೆ ನಮ್ಮಂತೇಕ ಏನ್ ಶಕ್ತಿ ಐತಿ ಅಂತ ಹೇಳಕೊಳ್ಳಾಕ ಅಂಜುವಂತಾ ಮನಸ್ಥಿತಿ ಉತ್ತರ ಕರ್ನಾಟಕ ಭಾಗದಾಗ ಆಳಾರಿಂದ ಹಿಡದು ಕೇಳಾರ ಮಟಾನೂ ಬೆಳಕೊಂಡು ಬಂದು ಬಿಟ್ಟೇತಿ. ಬೆಂಗಳೂರು ಕಟ್ಟಿದ ಕೆಂಪೇಗೌಡ್ರನ್ನ ನಾಡ ಪ್ರಭುವನ್ನಾಗಿ ಹೆಮ್ಮೆಯಿಂದ ಹೇಳುವ ಧೈರ್ಯ ಅವರ ಆತ್ಮವಿಶ್ವಾಸ ಎತ್ತಿ ತೋರಸತೈತಿ. ಅದ ಬಸವಣ್ಣ ಅಂತ ಒಬ್ಬ ಮಹಾಪುರುಷ ಇದ್ದ ಅಂತ ದಾವಣಗೆರಿ ದಾಟಿ ದಕ್ಷಿಣ ಕರ್ನಾಟಕದ ಜನರಿಗೆ ತಿಳಿಸಾಕ
ಒಂಬತ್ತು ನೂರು ವರ್ಷ ಬೇಕಾತು. ಪಂಪನಿಂದ ಹಿಡಿದು ಚಂಪಾನ ಮಟಾ ಊರಿಗೊಬ್ಬರು, ಓಣಿಗೊಬ್ಬರು ಕವಿಗೋಳು, ಸಾಹಿತಿಗೋಳದಾರು. ದಾಸರು, ಶರಣರು, ಸಂತರು ಕಾಲ ಕಾಲಕ್ಕ ಹುಟ್ಟಿ ಬದುಕಿನ ಅರ್ಥಾ ಹೇಳಿ ಹೋಗ್ಯಾರ. ಆದ್ರ, ನಿನ್ನ ಹಕ್ಕು ನಿನಗ ಸಿಗದಾಗ ಕೇಳಿಪಡಿಯೋ ದಡ್ಡಾ ಅಂತ ಹೇಳಿ ಹೋಗಲಿಲ್ಲ. ಹಿಂಗಾಗೇ ಅಳಾರು ಏನ್ ಮಾಡಾಕತ್ತಾರು ಅಂತ ಕೇಳಾರಿಲ್ಲಾ. ನಮ್ಮ ಪರವಾಗಿ ಏನರ ಕೇಳಿ ಅಂತ ಕಳಿಸಿದಾರೂ ಏನೂ ಕೇಳದ ಬಾಯಿತುಂಬ ಎಲಾಡಿ ಹಾಕ್ಕೊಂಡು ಕುಂದರತಾರು.
ರಾಜ್ಯದ ಯಾಡನೇ ರಾಜಧಾನಿ ಅನ್ನೋ ಹುಬ್ಬಳ್ಳಿ ಸಿಟಿ ಎಂಎಲ್‌ಎ ವಿಧಾನಸೌಧದ ಮೂರನೇ ಮಹಡ್ಯಾಗ ಕಾನ್ಫರೆನ್ಸ್ ಹಾಲ್‌ನಿಂದ ಪೊಲಿಸಾ ಎಬ್ಬಿಸಿ ಕಳಿಸಿದ್ರ ನಾಎಂಎಲ್ಲೆ ಅದೇನಿ ಅಂತ ಬಾಯಿ ಮಾಡಿ ಹೇಳುವಷ್ಟೂ ಧೈರ್ಯ ಇಲ್ಲದಾರು, ಅಧಿವೇಶನದಾಗ ನಮ್ಮ ನಾಡಿನ
ಪರವಾಗಿ ಮಾತಾಡ್ರಿ ಅಂದ್ರ ಏನ್ ಮಾತಾಡ್ತಾರು? ಕೆಲವರಿಗೆ ತಾವು ಎಮ್ಮೆಲ್ಲೆಗೋಳು ಅಂತ ಹೇಳೊವಷ್ಟೂ ಧೈರ್ಯಾ ಇಲ್ಲಾ, ಇನ್ನ ಕೆಲವರಿಗೆ ಪಾಳೆಗಾರಿಕೆ ಮನಸ್ಥಿತಿ ಹೋದಂಗಿಲ್ಲ. ಅಲ್ಲಿ ಹೋಗಿ ಅವರಂತೇಕ ನಾವ್ಯಾಕ ಕೈ ಚಾಚೂನು ಅನ್ನೋ ಗೌಡಿR, ಸಾವಕಾರಕಿ ದರ್ಪ ಹಂಗ ಮುಂದುವರದೈತಿ. ಅವರ ದೊಡ್ಡಸ್ತಿಕೆಗೆ ಬೇಕಾಗಿದ್ದು ಕೇಳಂಗಿಲ್ಲ. ನಮ್ಮ ಪರವಾಗಿ ಅಧಿವೇಶನದಾಗ ಏನರ ಕೇಳಿ ಅಂತ ಧೈರ್ಯಾ ಮಾಡಿ ಕೇಳಾಕ ಜನರಿಗೆ ಧ್ವನಿ ಇಲ್ಲಾ. ಹಿಂಗಿದ್ದಾಗ ನಮಗ ಅನ್ಯಾಯ ಅಗಾಕತ್ತೇತಿ ಅಂತ ರಾತ್ರಿ ಕನಸಿನ್ಯಾಗ ಬಡಬಡಿಸಿದಂಗ ಬಡಬಡಸಿದ್ರ ಏನ ಆಕ್ಕೇತಿ. ಬೆಳಕಾದ್ರ ಏನ್ ಬಡಬಡಿಸೇನಿ ಅಂತ ಅವರಿಗೆ ನೆನಪಿರುದಿಲ್ಲಾ. ಹಂಗಾಗೇತಿ ಉತ್ತರ ಕರ್ನಾಟಕ ಭಾಗದ ಜನರ ಪರಿಸ್ಥಿತಿ.
ಮನಿಗಿ ಬರೂದು ಹತ್ತು ನಿಮಿಷ ಲೇಟ್ ಆದ್ರ, ಯಜಮಾನಿ¤ ಹತ್ತು ಸಾರಿ ಫೋನ್ ಮಾಡಿ, ಎಲ್ಲೆದಿ, ಯಾಕ್ ಲೇಟಾತು. ಯಾರ್ ಸಿಕ್ಕಾರು ಅಂತೆಲ್ಲಾ ಸಿಐಡಿ ಹಂಗ ಸಣ್ಣ ಪ್ರಮಾಣದ ಎನ್‌ಕ್ವಾಯರಿ ನಡಸ್ತಾಳು. ಉತ್ತರ ಕರ್ನಾಟಕ ಭಾಗಕ್ಕ ಎಪ್ಪತ್ತು ವರ್ಷಾದ್ರೂ ಸರಿಯಾಗಿ ನ್ಯಾಯ ಸಿಕ್ಕಿಲ್ಲಾ ಅಂದ್ರ ನಮ್ಮ ಜನಪ್ರತಿನಿಧಿಗೋಳು ನಾಕ್ ಮಂದಿಯಾದ್ರೂ ಗಟ್ಟಿಯಾಗಿ ನಿಂತು ನಮಗ ಅನ್ಯಾಯ ಆಗೇತಿ ಅಂತ ಕೇಳು
ಮನಸ್ಥಿತಿ ಬರು ಮಟಾ ಈ ಕತಿ ಏನು ಮುಗಿಯುದಿಲ್ಲಾ.
ಸರ್ಕಾರ ಅಧಿಕಾರಕ್ಕ ಬಂದಾಗ ಮುಖ್ಯಮಂತ್ರಿ ಸ್ಥಾನ ಸಿಗದ್ದಿದ್ದರೂ, ಹದಿಮೂರು ಜಿಲ್ಲೆ ಸೇರಿ ಅರ್ಧಾ ಕರ್ನಾಟಕಕ್ಕ ಆರು ಮಂದಿಗೆ ಮಂತ್ರಿ ಸ್ಥಾನಾ ಕೊಟ್ಟು ಮೈಸೂರು ಜಿಲ್ಲೆಗೆ ಮೂರು ಮಂದಿ ಮಂತ್ರಿ ಮಾಡ್ಕೊಂಡ್ರು ಕೈ ಕಟಗೊಂಡು ಇವರ ನಮ್ಮ ನಾಯಕರು ತಿರಗ್ಯಾಡಿದ್ರ ನ್ಯಾಯ ಹೆಂಗ್ ಸಿಗತೈತಿ? ನಮ್ಮ ಮಂದಿಗೆ ಬೆಂಗಳೂರಿಗೆ ಹೋಗಿ ಬರಾಕ್ ಸಾಕಾಗೇತಿ ಅಂತೇಳೆ ಬೆಳಗಾವ್ಯಾಗ ಸುವರ್ಣಸೌಧ ಕಟ್ಟಿಸ್ಯಾರು. ಆದ್ರ, ಅದು ಜಂಬೂ ಸರ್ಕಸ್ ಟೆಂಟ್ ಹಾಕಿದಂಗ ಹದಿನೈದ್ ದಿನಾ ನಡೆಸಿ, ಉಳಿದ ವರ್ಷಪೂರ್ತಿ ಹಾಸನಾಂಬೆ ದೇವಸ್ಥಾನದಂಗ ಬಾಗಲಾ ಹಾಕ್ಕೊಂಡು ಕುಂತ್ರ ಯಾರಿಗೆ ಅನುಕೂಲ ಆದಂಗ ಆತು?
ಸುವರ್ಣ ಸೌಧ ಶುರುವಾದಾಗಿಂದ ಉತ್ತರ ಕರ್ನಾಟಕ ಭಾಗಕ್ಕ ಸಂಬಂಧ ಪಟ್ಟಿರೋ ಇಲಾಖೆಗಳ್ನ ಸ್ಥಳಾಂತರ ಮಾಡಿದ್ರ, ಅವರಿಗೂ ವರ್ಷಕ್ಕೊಮ್ಮಿ ಬಂದು ರೊಟ್ಟಿ ತಿಂದು ಹೊಟ್ಟಿ ಕೆಟ್ಟತು ಆನ್ನೋ ಬದಲು, ಆವಾಗವಾಗ ಬಂದು ಕಟಕ್ ರೊಟ್ಟಿ, ಸೇಂಗಾ ಚೆಟ್ನಿ ತಿಂದು ಹೋದ್ರ ಅವರದೂ ಹೊಟ್ಟಿ ಗಟ್ಟಿ ಅಕ್ಕೇತಿ, ರೊಟ್ಟಿ ತಿಂದು ಹೊಟ್ಟಿ ಕೆಟ್ಟತು ಆನ್ನೋ ಆರೋಪ ಮಾಡುದು ತಪ್ಪತೈತಿ.
ಶ್ರಿಮತಿ ವರ್ಷಕ್ಕೊಮ್ಮಿ ಹಬ್ಬಕ್ಕ ಬರುವಂಗ ಬಂದು ಹದಿನೈದು ದಿನಾ ತವರು ಮನಿ ಖುಷಿ ಪಡುವಂಗ ಉತ್ತರ ಕರ್ನಾಟಕ ಭಾಗದ ಜನರು ವರ್ಷಪೂರ್ತಿ ಖುಷಿಪಡು ವಂತಾ ಕಾಲ ಬರಲಿ, ಅದರ ಸಲುವಾಗಿ ನಮಗ ಅನ್ಯಾಯ ಆಗೇತಿ ಆನಸಿದಾಗೆಲ್ಲಾ, ಯಜಮಾನಿ¤ ಕೇಳಿದಂಗ ಹತ್ತು
ನಿಮಿಷದಾಗ ಹತ್ತು ಪ್ರಶ್ನೆ ಕೇಳಿ, ಅಗಿರೋ ಅನ್ಯಾಯಕ್ಕ ನ್ಯಾಯ ಕೊಡಿಸೋ ಪ್ರಯತ್ನ ಮಾಡುವಂತ ಮನಸ್ಥಿತಿ ನಮ್ಮ ಜನಪ್ರತಿನಿಧಿಗಳಿಗೂ ಬರಲಿ.
*ಶಂಕರ ಪಾಗೋಜಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
America: ಎಚ್-1ಬಿ ವೀಸಾ ವ್ಯವಸ್ಥೆ ಸುಧಾರಣೆ ಬೇಕು: ಒಂದೇ ದಿನದಲ್ಲಿ ಮಸ್ಕ್ ಉಲ್ಟಾ!
Authortiy: ವರ್ಷದಲ್ಲಿ ದಾಖಲೆಯ 17 ಪರೀಕ್ಷೆ ನಡೆಸಿ ಫಲಿತಾಂಶ ಪ್ರಕಟಿಸಿದ ಕೆಇಎ
ಫ್ರಾನ್ಸ್ ಮೂಲದ ಸಂಸ್ಕೃತ ವಿದ್ವಾಂಸ ಪಿಯರಿ ಸಿಲ್ವೇನ್ ಫಿಲಿಯೋಜಾ ನಿಧನ
ಸಿ.ಟಿ.ರವಿ ಪ್ರಕರಣದ ತನಿಖೆ ಸಭಾಪತಿಯೇ ನಡೆಸಲಿ: ಮಾಜಿ ಸಚಿವ ಕಿಮ್ಮನೆ ರತ್ನಾಕರ್
Mangaluru; ಪ್ರತ್ಯೇಕ ಚೆಕ್‌ಬೌನ್ಸ್ ಪ್ರಕರಣ: ಇಬ್ಬರು ಖುಲಾಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.