ಕಾಶೀಮಠಕ್ಕೆ ಸುದೀರ್ಘಕಾಲ ನೇತೃತ್ವ ನೀಡಿದ ಶ್ರೀ ಸುಧೀಂದ್ರತೀರ್ಥರು
Team Udayavani, Dec 26, 2017, 10:47 AM IST
ಅದು ಸ್ವಾತಂತ್ರ್ಯಪೂರ್ವದ ಕಾಲ. ಶ್ರೀ ಕಾಶೀ ಮಠ ಸಂಸ್ಥಾನದ ಗುರುಗಳಾದ ಶ್ರೀ ಸುಕೃತೀಂದ್ರತೀರ್ಥ ಶ್ರೀಪಾದರು ಮೂಲ್ಕಿ ಶ್ರೀವೆಂಕಟರಮಣ ದೇವಸ್ಥಾನದಲ್ಲಿದ್ದರು. ಆಗ ಅವರಿಗೆ ಅನಾರೋಗ್ಯ ಉಂಟಾಯಿತು. ಯೋಗ್ಯ ಶಿಷ್ಯನೊಬ್ಬನನ್ನು ಆಯ್ಕೆ ಮಾಡಬೇಕೆಂದು ನಿರ್ಧರಿಸಿದರು. ಆಗ ಅವರು ಅನುಸರಿಸಿದ ಮಾರ್ಗ ಪುಷ್ಪ ಪ್ರಾರ್ಥನೆ. ಅಂದರೆ ಅವರು ವ್ಯಾಸರಘುಪತಿ ದೇವರ ಮೇಲೆ ಪುಷ್ಪವಿಟ್ಟು ಪ್ರಾರ್ಥಿಸಿದರು.
ಎರ್ನಾಕುಳಂ ರಾಮದಾಸ ಶೆಣೈಯವರ ಮಗ ಸದಾಶಿವ ಶೆಣೈಯವರನ್ನು ಪಟ್ಟ ಶಿಷ್ಯನನ್ನಾಗಿ ಸ್ವೀಕರಿಸಬೇಕೆಂದು ನಿರ್ಧರಿಸಿ ಶ್ರೀಪಾದರು ಪ್ರತಿನಿಧಿಗಳನ್ನು ಎರ್ನಾಕುಳಂಗೆ ಕಳುಹಿಸಿದರು. ಆ ವಟುವೇ ಸದಾಶಿವ ಶೆಣೈ, ಇವರೇ ಶ್ರೀ ಸುಧೀಂದ್ರತೀರ್ಥ ಶ್ರೀಪಾದರು. ಆಗ ಸದಾಶಿವ ಅವರು ಇಂಟರ್‌ಮೀಡಿಯಟ್ ಓದುತ್ತಿದ್ದರು. ಕೂಡಲೇ ಅವರು ಮೂಲ್ಕಿಗೆ ಬಂದರು. ಕೆಲವೇ ದಿನಗಳಲ್ಲಿ ಸದಾಶಿವ ಶೆಣೈ ಶ್ರೀ ಸುಧೀಂದ್ರತೀರ್ಥರೆನಿಸಿ ಪಟ್ಟ ಶಿಷ್ಯರಾದರು. ಅದು 1944ರ ಮೇ 24, ತಾರಣ ಸಂವತ್ಸರದ ಜ್ಯೇಷ್ಠ ಶುದ್ಧ ಬಿದಿಗೆಯಂದು. ಆಗ ಅವರ ವಯಸ್ಸು 17. ಅಲ್ಲೇ ಅವರು ಶಿಕ್ಷಣವನ್ನು ಪಡೆದರು, ಬೆಂಗಳೂರಿನಲ್ಲಿಯೂ ಶಿಕ್ಷಣ ಪಡೆದರು. 1955ನೇ ಇಸವಿಯಲ್ಲಿ ಬಂಟ್ವಾಳ ದಲ್ಲಿ “ಸುಧಾ ಮಂಗಲ’ವನ್ನು ನೆರವೇರಿಸಿದರು. 1949ರ ಜುಲೈ 10ರಂದು ಶ್ರೀ ಸುಕೃತೀಂದ್ರತೀರ್ಥರಿಗೆ ಅನಾರೋಗ್ಯ ಉಂಟಾಗಿ ಅವರು ಹರಿಪಾದ ಸೇರಿದಾಗ ಶ್ರೀ ಸುಧೀಂದ್ರತೀರ್ಥರಿಗೆ 22 ವರ್ಷ ವಯಸ್ಸು. ಅಂದಿನಿಂದ 2016ರ ಜ.16ರವರೆಗೆ ಸುದೀರ್ಘ ಕಾಲ ಸಂಸ್ಥಾನವನ್ನು ಮುನ್ನಡೆಸಿದ ಕೀರ್ತಿ ಶ್ರೀ ಸುಧೀಂದ್ರತೀರ್ಥರಿಗೆ ಸಲ್ಲುತ್ತದೆ.
ವೇದವ್ಯಾಸರಿಗೆ ಗೌರವ
ಯಾವುದೇ ಕಷ್ಟ -ಆಪತ್ತುಗಳಲ್ಲೂ ಎಂದೂ ಧೃತಿಗೆಡದ ಸಮಚಿತ್ತತೆ, ಸ್ಥಿತಪ್ರಜ್ಞತೆ ಶ್ರೀ ಸುಧೀಂದ್ರತೀರ್ಥರ ವೈಶಿಷ್ಟ್ಯ. ತಮ್ಮ ಹಿರಿಯ ಗುರುಗಳ ಇಚ್ಛೆಯಂತೆ ಇಡೀ ಭಾರತದಲ್ಲಿ ಸಂಚರಿಸುತ್ತಾ ಹಲವು ದೇವಳಗಳ ಜೀರ್ಣೋದ್ಧಾರ, ಪುನಃಪ್ರತಿಷ್ಠೆ ನೆರವೇರಿಸಿದರು. ಶ್ರೀ ಕಾಶೀಮಠದ ಹಲವು ಶಾಖಾಮಠಗಳನ್ನು ನವೀಕರಿಸಿದರು. ನಾಸಿಕ್, ಕೊಂಚಾಡಿ, ಭಾಗಮಂಡಲ, ಸುರತ್ಕಲ್, ಗೋವಾ, ಖೇಡ್, ಚೆನ್ನೈ, ನಯಂಪಳ್ಳಿ, ನಾಗಪುರ, ಬೆಂಗಳೂರುಗಳಲ್ಲಿ ಶ್ರೀ ಕಾಶೀಮಠ ಸಂಸ್ಥಾನದ ಹೊಸ ಶಾಖಾಮಠಗಳನ್ನು ಸ್ಥಾಪಿಸಿದರು.
ಕಾಲ್ಪಿಯ ಬಾಲವೇದವ್ಯಾಸ ಮಂದಿರ, ಬದರಿನಾಥದಲ್ಲಿ ಮಠ, ಹರಿದ್ವಾರದ ವ್ಯಾಸಮಂದಿರ ಸ್ಥಾಪನೆ ಬಹಳ ಮುಖ್ಯವಾದುದು. ಹರಿದ್ವಾರದ ವ್ಯಾಸಮಂದಿರ, ವೇದವ್ಯಾಸರು ಜನ್ಮತಳೆದ ಕಾಲ್ಪಿಯ ಬಾಲವೇದವ್ಯಾಸ ಮಂದಿರ ವೇದವ್ಯಾಸರಿಗೆ ಸಲ್ಲಿಸಿದ ಬಹಳ ದೊಡ್ಡ ಕೊಡುಗೆ ಎಂದು ವಿಶ್ಲೇಷಿಸಲಾಗುತ್ತದೆ. ಶ್ರೀ ಸುಧೀಂದ್ರತೀರ್ಥರು ಪ್ರಗಲ್ಫ ಸಂಸ್ಕೃತ ವಿದ್ವಾಂಸರೂ ಆಗಿದ್ದು, ದೇವತಾ ಸ್ತುತಿಗಳನ್ನು ರಚಿಸಿದ್ದಾರೆ. “ಅಲಂಕಾರಃ ಪ್ರಿಯೋವಿಷ್ಣುಃ’ ಎಂಬ ಮಾತಿಗನುಸಾರ ಶ್ರೀ ಸುಧೀಂದ್ರತೀರ್ಥರ ಪೂಜೆ ಎಂದರೆ ಅಲಂಕಾರಕ್ಕೆ ಪ್ರಥಮ ಪ್ರಾಶಸ್ತ್ಯ ಇರುತ್ತಿತ್ತು. ಇದು 90 ಇಳಿ ವಯಸ್ಸಿನಲ್ಲಿಯೂ ಮುಂದುವರಿದಿತ್ತು ಎನ್ನುವುದನ್ನು ಕಂಡವರು ಹೇಳುತ್ತಾರೆ.
ಗುರು ಕಾಣಿಕೆ
ಶ್ರೀ ಸುಕೃತೀಂದ್ರತೀರ್ಥ ಶ್ರೀ ಪಾದಂಗಳವರಿಗೆ ಶ್ರೀ ವರದೇಂದ್ರ ತೀರ್ಥರು ಶ್ರೀರಂಗಂನ ಕಾವೇರಿ ನದಿಯಲ್ಲಿ ದೀಕ್ಷೆ ನೀಡಿರುವುದು ಸುಮಾರು 100 ವರ್ಷಗಳ ಹಿಂದೆ. ಆ ಮಹಾನದಿಯ ಉಗಮ ಸ್ಥಾನ ತಲಕಾವೇರಿಯ ಭಾಗಮಂಡಲದಲ್ಲಿ ಗುರುಕಾಣಿಕೆ ಎಂಬಂತೆ ಶ್ರೀ
ಸುಧೀಂದ್ರತೀರ್ಥರು ಸುಂದರ ಮಠ ಸ್ಥಾಪಿಸಿದರು. ಕೊಚ್ಚಿ ಸನಿಹ ಸುಕೃತೀಂದ್ರ ರಿಸರ್ಚ್ ಇನ್‌ಸ್ಟಿಟ್ಯೂಟ್ ಸ್ಥಾಪಿಸಿ ಗುರು ಕಾಣಿಕೆ ಸಮರ್ಪಿಸಿದರು.
ಸಮಾಜಮುಖಿ ಸೇವೆಗಳು
ಶ್ರೀ ವೇದವ್ಯಾಸ ಚಾರಿಟೆಬಲ್ ಟ್ರಸ್ಟ್ ಹರಿದ್ವಾರ (ಶ್ರೀ ಮಾಧವೇಂದ್ರ ಹಾಸ್ಪಿಟಲ್), ಶ್ರೀ ಭುವನೇಂದ್ರ ಬಾಲಕಾಶ್ರಮ -ವೃದ್ಧಾಶ್ರಮ ಬಸ್ರೂರು, ಶ್ರೀ ವರದೇಂದ್ರ ಬಾಲಕಾಶ್ರಮ ಅಂಬಲ ಮೇಡು-ಕೊಚ್ಚಿ, ಶ್ರೀ ಸುಕೃತೀಂದ್ರ ಬಾಲಕಾಶ್ರಮ ಕಾರ್ಕಳ, ಶ್ರೀ ಭುವನೇಂದ್ರ ಕೃಪಾಪೋಷಿತ ವೃದ್ಧಾಶ್ರಮ ಅಂಬಲಮೇಡು, ಶ್ರೀ ಭುವನೇಂದ್ರ ಕೋ-ಆಪರೇಟಿವ್ ಹೌಸಿಂಗ್ ಸೊಸೈಟಿ ದಹಿಸರ್ -ಮುಂಬೈ, ಶ್ರೀ ಸುಧೀಂದ್ರ ಮೆಡಿಕಲ್ ಮಿಶನ್ ಎರ್ನಾಕುಲಂ, ಶ್ರೀ ಶ್ರೀನಿವಾಸ ನಿಗಮಾಗಮ ಪಾಠಶಾಲೆ ಮಂಗಳೂರು, ಶ್ರೀ ಕಾಶೀಮಠ ವೆಲ್‌ಫೇರ್ ಫಂಡ್ ಉಡುಪಿ, ಶ್ರೀಮತ್ ಕೇಶವೇಂದ್ರ ತೀರ್ಥ ಸ್ವಾಮಿ ಚಾರಿಟೆಬಲ್ ಟ್ರಸ್ಟ್ ಉಡುಪಿ ಇತ್ಯಾದಿ ಸೇವಾ ಕಾರ್ಯಗಳು ಶ್ರೀ ಸುಧೀಂದ್ರ ತೀರ್ಥರ ಇಚ್ಛಾಬಲದಿಂದ ಆರಂಭಗೊಂಡು ನಡೆಯುತ್ತಿವೆ. ಇವೆಲ್ಲ ಸೇವಾ ಕಾರ್ಯಗಳೀಗ ಶ್ರೀಸುಧೀಂದ್ರತೀರ್ಥ ಶ್ರೀಪಾದರ ಪಟ್ಟಶಿಷ್ಯ ಶ್ರೀ ಸಂಯಮೀಂದ್ರ ತೀರ್ಥ ಶ್ರೀಪಾದರ ನೇತೃತ್ವದಲ್ಲಿ ಮುನ್ನಡೆಯುತ್ತಿವೆ.
ಸ್ಮರಣಶಕ್ತಿ
ಶ್ರೀಗಳ ಸ್ಮರಣಶಕ್ತಿ ಅತ್ಯದ್ಭುತ ಎನ್ನುತ್ತಾರೆ ಅಂತಹ ಅನುಭವಗಳನ್ನು ಪಡೆದವರು. ಶ್ರೀಗಳು ಉಡುಪಿಯ ಮೊಕ್ಕಾಂನಲ್ಲಿದ್ದ ಸಂದರ್ಭ ಕೇರಳ ರಾಜ್ಯದ ಎರ್ನಾಕುಲಂ ಜಿಲ್ಲೆಯ “ಚರಾಯಿ’ ಎಂಬ ಊರಿನ ದೇಗುಲದ ಆಡಳಿತ ಮಂಡಳಿಯಿಂದ ಓರ್ವರು ಭೇಟಿಗಾಗಿ ಬಂದಿದ್ದ ಸಂದರ್ಭವದು. ಅವರಿಗೆ ಕುಳಿತುಕೊಳ್ಳಲು ಹೇಳಿದ ಗುರುಗಳು ಕೂಡಲೇ ನನ್ನತ್ತ ದೃಷ್ಟಿ ಹಾಯಿಸಿ, “ನಿನ್ನ ಅಜ್ಜ ವಾಸುದೇವ ಶೆಣೈಯವರು ಉಡುಪಿಯಲ್ಲಿ ನಮ್ಮ ಚಾತುರ್ಮಾಸ್ಯ ವ್ರತ ಮಾಡಿಸಬೇಕೆಂದು ವಿನಂತಿ ಪತ್ರದೊಡನೆ ಚರಾಯಿ ದೇವಸ್ಥಾನಕ್ಕೆ ಬಂದಿದ್ದರು’ ಎಂದಿದ್ದರು. ಸುಮಾರು 50 ವರ್ಷಗಳ ಹಿಂದಿನ ನೆನಪು ಕ್ಷಣಮಾತ್ರದಲ್ಲಿ ಬಂದುದು ಅವರ ಅದ್ಭುತ ಸ್ಮರಣಶಕ್ತಿಯ ಪ್ರತೀಕ ಎನ್ನುತ್ತಾರೆ ಯು. ಹರೀಶ್ ಶೆಣೈ.
ಸಂಗ್ರಹ: ಮಟಪಾಡಿ ಕುಮಾರಸ್ವಾಮಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.