ಕಾಲದೊಡನೆ ಹೆಜ್ಜೆ ಹಾಕಲೊಲ್ಲದ ಎಡಪಂಥೀಯ
Team Udayavani, Mar 6, 2018, 6:00 AM IST
…ಇಂದು ನಿಜವಾದ ಪ್ರಗತಿಪರತೆ ಎಂದರೆ ಈ ಪ್ರವೃತ್ತಿಗಳಿಗೆ ತಡೆ ಹಾಕುವಂತಹ ರಾಜಕಾರಣ ಮಾಡುವುದೇ ಆಗಿದೆ. ಅದೇ ಆಳದ ಅಹಿಂಸೆಯಲ್ಲಿನ ನಂಬಿಕೆ ಮಾತ್ರ ಸೃಷ್ಟಿಸಬಲ್ಲ ಪರಿಸರದೊಂದಿಗೆ ಸಮರಸದಲ್ಲಿರುವ ಮಿತಿಗಳುಳ್ಳ ಬದುಕಿನ ಮಾದರಿಯೊಂದನ್ನು ಎತ್ತಿ ಹಿಡಿಯುವ ರಾಜಕಾರಣ. ಇದು ಗಾಂಧಿಯನ್ನು ಇಂದಿಗೆ ಅರ್ಥೈಸಿಕೊಳ್ಳುವ ಮತ್ತು ಪ್ರಸ್ತುತ ಮಾಡಿಕೊಳ್ಳುವ ರಾಜಕಾರಣವೇ ಆಗಿರುತ್ತದೆ.
ಮೋದಿಯವರ ಆಡಳಿತದ “ನಾಗಾಲೋಟ’ವನ್ನು ನೋಡಿ ಅವರ ನೇತೃತ್ವದ ಬಿಜೆಪಿಯನ್ನು ಸದ್ಯಕ್ಕಂತೂ ಮಣಿಸಲಾಗುವುದಿಲ್ಲ ಎಂದು ನಂಬಿದ್ದ ನಮ್ಮ “ಪ್ರಗತಿಪರರು’ ರಾಜಸ್ಥಾನ, ಮಧ್ಯಪ್ರದೇಶ, ಒರಿಸ್ಸಾ ಮತ್ತು ಪ.ಬಂಗಾಳದಲ್ಲಿನ ಇತ್ತೀಚಿನ ಉಪ ಚುನಾವಣೆಗಳಿಂದ ಹಿಗ್ಗಿ ಹೀರೇಕಾಯಾಗಿದ್ದರು. ಆದರೆ ಮೊನ್ನೆ ಈಶಾನ್ಯ ಭಾರತದ ಮೂರು ರಾಜ್ಯಗಳ ಚುನಾವಣಾ ಫಲಿತಾಂಶಗಳು ಮತ್ತೆ ಅವರ ಹಿಗ್ಗಿನ ಮೇಲೆ ತಣ್ಣೀರು ಎರಚಿದಂತೆ ಬಂದು ಅಪ್ಪಳಿಸಿವೆ. ಹಾಗೆ ನೋಡಿದರೆ ನಾಗಾಲ್ಯಾಂಡ್ ಮತ್ತು ಮೇಘಾಲಯಗಳ ಫಲಿತಾಂಶಗಳಲ್ಲಿ ಕಳೆದ ಕೆಲವು ವರ್ಷಗಳಿಂದ ಕಾಣಲಾಗುತ್ತಿರುವ ಕಾಂಗ್ರೆಸ್ ಪಕ್ಷದ ಅವನತಿಯ ಪ್ರವೃತ್ತಿ ಮುಂದುವರೆದಿರುವುದರ ಹೊರತಾಗಿ ಅಂತಹ ವಿಶೇಷವೇನೂ ಇಲ್ಲ. (ಅಂತೆಯೇ ಈಗ ಅಲ್ಲಿ ಎರಡೂ ಕಡೆ ಕಾಂಗ್ರೆಸ್ಸೇತರ ಸರ್ಕಾರಗಳು ರಚನೆಯಾಗಿವೆ.) ಆದರೆ ಪ್ರಗತಿಪರರು ತಮ್ಮ (ಕೊನೆಯ) ಭದ್ರಕೋಟೆಯೆಂದು ನಂಬಿದ್ದ ತ್ರಿಪುರದ ಫಲಿತಾಂಶ ಮಾತ್ರ ಎಲ್ಲರನ್ನೂ ಬೆಚ್ಚಿಬೀಳಿಸಿದೆ ಎಂದೇ ಹೇಳಬೇಕು. ಅಲ್ಲಿ 25 ವರ್ಷಗಳ ಕಾಲ ಸತತವಾಗಿ ಆಡಳಿತ ನಡೆಸಿದ್ದ ಮಾಣಿಕ್ ಸರ್ಕಾರ್ ಅವರ ನೇತೃತ್ವದ ಮಾರ್ಕ್ಸ್ವಾದಿ ಕಮ್ಯೂನಿಸ್ಟ್ ಪಕ್ಷ ತನ್ನ ಮೂರನೇ ಎರಡು ಭಾಗದಷ್ಟು ಸ್ಥಾನಗಳನ್ನು ಕಳೆದುಕೊಂಡು ಅಧಿಕಾರದಿಂದ ಕೆಳಗಿಳಿಯಬೇಕಾಗಿದೆ. ಅದೂ ಯಾವುದೇ ಭ್ರಷ್ಟಾಚಾರದ ಕಳಂಕವಿರದೆ, ಅತ್ಯಂತ ಸರಳ ಜೀವನ ನಡೆಸುವ ಒಬ್ಬ ಆದರ್ಶ ರಾಜಕಾರಣಿಯೆಂದು ಬಿಂಬಿಸಲ್ಪಟ್ಟಿದ್ದ ಮುಖ್ಯಮಂತ್ರಿಯ ಆಡಳಿತವನ್ನು ಜನತೆ ಬಹು ನಿರ್ಣಾಯಕವಾಗಿ ತಿರಸ್ಕರಿಸಿದೆ. ಪ್ರಗತಿಪರತೆಯ ಲಾಂಛನವಿದ್ದ ಕೊನೆಯ ಕೋಟೆಯೂ ಬಿದ್ದು ಹೋಗಿದೆ. (ಅರ್ಧಂಬರ್ಧ ಉಳಿದಿರುವ ಕೇರಳದ ಕೋಟೆಯೂ ಈಗ ಶತ್ರು ಸೈನಿಕರಿಂದ ಸುತ್ತುವರಿಯಲ್ಪಟ್ಟು ಸಂಪೂರ್ಣ ಪತನದ ಎಲ್ಲ ಲಕ್ಷಣಗಳೂ ಕಾಣುತ್ತಿವೆ) ಇದು ಈ ಚುನಾವಣಾ ಫಲಿತಾಂಶಗಳಲ್ಲಿ ನಾವು ಗಮನಿಸಬೇಕಾದ ಮತ್ತು ಯೋಚಿಸಬೇಕಾದ ಬಹು ಮುಖ್ಯ ಅಂಶಗಳಲ್ಲಿ ಒಂದಾಗಿದೆ.
ತ್ರಿಪುರ ಚುನಾವಣಾ ಫಲಿತಾಂಶದ ಇಷ್ಟೇ ಬಹುಮುಖ್ಯವಾದ ಇನ್ನೊಂದು ಅಂಶವೆಂದರೆ, ಈ ರಾಜ್ಯದಲ್ಲಿ ಕಳೆದ ಚುನಾವಣೆಗಳಲ್ಲಿ ಹೇಳಹೆಸರಿಲ್ಲದ ಪಕ್ಷವಾಗಿ, ತಾನು ಸ್ಪರ್ಧಿಸಿದ 50 ವಿಧಾನಸಭಾ ಕ್ಷೇತ್ರಗಳಲ್ಲಿ 49ರಲ್ಲಿ ಠೇವಣಿ ಕಳೆದುಕೊಂಡು ಶೇ. 2ಕ್ಕಿಂತ ಕಡಿಮೆ ಮತದಾರರ ಬೆಂಬಲ ಪಡೆದಿದ್ದ ಭಾರತೀಯ ಜನತಾ ಪಕ್ಷ ತನ್ನ ಒಂದು ಪುಟ್ಟ ಸ್ಥಳೀಯ ಮಿತ್ರ ಪಕ್ಷದೊಂದಿಗೆ ಶೇ.50ಕ್ಕೂ ಹೆಚ್ಚು ಮತ ಪಡೆದು, ಹೆಚ್ಚಾ ಕಡಿಮೆ ಮೂರನೇ ಎರಡರಷ್ಟು ಬಹುಮತದೊಂದಿಗೆ ಜಯಭೇರಿ ಬಾರಿಸಿರುವುದು. ನಾವು “ಪ್ರಗತಿಪರ’ರೆನ್ನಿಸಿಕೊಂಡವರು ಬಿಜೆಪಿಯನ್ನು ಹಿಂದೂ ಕೋಮುವಾದಿ ಮತ್ತು ಪಟ್ಟಭದ್ರ ಹಿತಾಸಕ್ತಿಗಳ ಯಥಾಸ್ಥಿತಿವಾದಿ ಪಕ್ಷವೆಂದು ಗುರುತಿಸುತ್ತೇವೆ. ಆದರೆ ಮೂರನೇ ಒಂದು ಭಾಗದಷ್ಟು ಬುಡಕಟ್ಟು ಜನರಿಂದ ಕೂಡಿದ ಈ ಬಡ ರಾಜ್ಯ ಶೋಷಿತರ ಪರವಾದ ಪ್ರಗತಿಪರ ಪಕ್ಷವೆನಿಸಿದ ಕಮ್ಯೂನಿಸ್ಟ್ ಪಕ್ಷವನ್ನು ತಿರಸ್ಕರಿಸಿ ಈ ಬಿಜೆಪಿಯನ್ನು ಆಡಳಿತಕ್ಕಾಗಿ ಆರಿಸಿಕೊಂಡಿದೆ! ಇದರರ್ಥವೇನು? ಪ್ರಗತಿಪರತೆ ಎಂದರೆ ಏನೆಂಬುದನ್ನು ಪ್ರಗತಿಪರರೆಂದು ಕರೆದುಕೊಳ್ಳುವವರು ಅರ್ಥ ಮಾಡಿಕೊಂಡಿರುವುದಕ್ಕೂ ಪ್ರಗತಿಗಾಗಿ ಕಾತರಿಸುತ್ತಿರುವ ಜನ ಅರ್ಥ ಮಾಡಿಕೊಂಡಿರುವುದಕ್ಕೂ ಬಹಳ ವ್ಯತ್ಯಾಸವಿದೆ ಎಂಬುದೇ ಅಲ್ಲವೆ? ಹಾಗಿದ್ದಲ್ಲಿ ಅರ್ಥಗಳ ಈ ಅಂತರಕ್ಕೆ ಕಾರಣವೇನು?
ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ನಾವು ಮೊದಲು “ಪ್ರಗತಿಪರ’ ಎಂಬ ಶಬ್ದದ ಮೂಲಾರ್ಥವೇನು ಎಂಬುದನ್ನು ನೋಡಬೇಕು. 18-19ನೇ ಶತಮಾನಗಳ ಕೈಗಾರಿಕಾ ಕ್ರಾಂತಿ ನಂತರದ ಸಾಮಾಜಿಕ ವಿಷಮತೆಗಳನ್ನು ಪರಿಹರಿಸುವ ವಿವಿಧ ರೀತಿಯ ರಾಜಕೀಯ ಪ್ರಯತ್ನಗಳ ಮೂಸೆಯಲ್ಲಿ ಹುಟ್ಟಿದ ಈ ಶಬ್ದಕ್ಕೆ ಒಂದು ಕಾಲದ ವ್ಯವಸ್ಥೆಯನ್ನು ನಿಯಂತ್ರಿಸುವ ಪಟ್ಟಭದ್ರ ಹಿತಾಸಕ್ತಿಗಳನ್ನು ಮಣಿಸಿ ದುರ್ಬಲರ ಪರವಾಗಿ ಹೊಸ ವ್ಯವಸ್ಥೆಯನ್ನು ನಿರ್ಮಿಸುವ ರಾಜಕಾರಣದಲ್ಲಿನ ನಂಬಿಕೆ ಎಂಬ ಅರ್ಥ ಕಲ್ಪಿಸಬಹುದಾಗಿದೆ. ಆದರೆ ಈ ಶಬ್ದ ಹುಟ್ಟಿಕೊಂಡ ಕಾಲ ಮುಗಿದು ಒಂದು ಶತಮಾನವೇ ಆಗಿದೆ. ಪಟ್ಟಭದ್ರ ಹಿತಾಸಕ್ತಿಗಳು ಎಂಬ ಜೋಡಿ ಶಬ್ದದ ಪರಿಪ್ರೇಕ್ಷ್ಯವೂ ಇಂದು ಬದಲಾಗಿದೆ. ಏಕೆಂದರೆ, ಈ ಒಂದು ಶತಮಾನದಲ್ಲಿ-ವಿಶೇಷವಾಗಿ ಕಳೆದ ಕಾಲು ಶತಮಾನದಲ್ಲಿ-ನಮ್ಮ ಬದುಕಿನ ಆಶೋತ್ತರಗಳೇ ಬದಲಾಗಿವೆ. “ದುರ್ಬಲ’ರು ಎಂಬ ಶಬ್ದ ಬಳಸಿದಾಗ ಯಾರು ಅಂದು ಪ್ರಗತಿಪರರ ಕಣ್ಣಮುಂದೆ ಬರುತ್ತಿದ್ದರೋ ಆ “ದುರ್ಬಲ’ರು ಈಗ ಇಲ್ಲ. ದುರ್ಬಲರ ಸಬಲೀಕರಣ, ಪ್ರಗತಿಪರರೂ ಸೇರಿದಂತೆ ಎಲ್ಲ ರಾಜಕೀಯ ಶಕ್ತಿಗಳಿಂದಲೂ ಬೇರೆ ಬೇರೆ ಪ್ರಮಾಣಗಳಲ್ಲಾದರೂ ನಡೆದು ಅವರ ಆಶೋತ್ತರಗಳೂ ಈ ಕಾಲಾಂತರದಲ್ಲಿ ಬದಲಾಗಿವೆ. ಏಕೆಂದರೆ ಕಳೆದ ಶತಮಾನದ ಒಟ್ಟಾರೆ ರಾಜಕಾರಣದ-ಅದು ಯಾವ ಬಣ್ಣದ್ದೇ ಆಗಿರಲಿ-ಮುಖ್ಯ ಆಶಯ ಸಮಾನತೆಯೇ ಆಗಿದ್ದು, ಅದು ಒಂದಲ್ಲ ಒಂದು ರೀತಿಯಲ್ಲಿ ದುರ್ಬಲರ ಸಬಲೀಕರಣವನ್ನು ಅನಿವಾರ್ಯ ಆಗಿಸಿತ್ತು.
ಹೀಗಾಗಿ ಕಳೆದ ಕೆಲವು ವರ್ಷಗಳಲ್ಲಿ ಪ್ರಗತಿಪರವೆಂದೋ, ನಿರ್ದಿಷ್ಟವಾಗಿ ಎಡಪಂಥೀಯವೆಂದೋ ಕರೆಯಲ್ಪಡುತ್ತಿದ್ದ ರಾಜಕಾರಣದ ವಿಶಿಷ್ಟ ಗುರುತು ಮಸುಕಾಗುತ್ತಾ, ಇದರ ವ್ಯಾಪ್ತಿಯ ರಾಜಕೀಯ ಪಕ್ಷಗಳು ಕ್ರಮೇಣ ಕಣ್ಮರೆಯಾಗಿ ಹೋಗಿವೆ. ಇದಕ್ಕೆ ಮುಖ್ಯ ಕಾರಣ, ಈ ಶಕ್ತಿಗಳು ಸಮಾಜದ ಮತ್ತು ಅದನ್ನು ನಿರ್ವಹಿಸುವ ರಾಜಕಾರಣದ ಚಲನಶೀಲತೆಗಳನ್ನು ಗ್ರಹಿಸದೇ ಹೋದದ್ದು. ಮುಖ್ಯವಾಗಿ, ಎಡಪಂಥೀಯತೆಯ ಆಧಾರ ತತ್ವಗಳಾಗಿದ್ದ ಉತ್ಪಾದನಾ ಶಕ್ತಿ(Forces of production) ಮತ್ತು ಉತ್ಪಾದನಾ ಸಂಬಂಧ (Relations of production)ಗಳಲ್ಲಿ ಆಗಿರುವ ನಿರ್ಣಾಯಕ ಬದಲಾವ ಣೆಗಳು. ಮತ್ತು ಇದರಿಂದ ದುಡಿಮೆ- ಶ್ರಮ-ಆದಾಯಗಳ ಸಂಬಂಧದಲ್ಲಿ ಆಗಿರುವ ಏರುಪೇರು. ಇದರಿಂದಾಗಿ ವರ್ಗಗಳು ತಾತ್ವಿಕ ಗ್ರಹಿಕೆಗಳ ವೇಗವನ್ನೂ ಮೀರಿದ ವೇಗದಲ್ಲಿ ಮಿಶ್ರಗೊಂಡು ವರ್ಗಗಳ ನಡುವಣ ಗೆರೆಗಳು ಮಸುಕಾಗುತ್ತಿವೆ. ಜೊತೆಗೆ ಭಾರತದ ಜಾತಿ ವ್ಯವಸ್ಥೆ ಈ ಕ್ಷಿಪ್ರ ಬದಲಾವಣೆಯ ವೇಗಕ್ಕೆ ಸಿಕ್ಕ ಆತಂಕದಲ್ಲಿ ತನ್ನ ಗೋಡೆಗಳನ್ನು ಇನ್ನಷ್ಟು ಭದ್ರಗೊಳಿಸಿಕೊಳ್ಳುತ್ತಿದೆ. ಹಾಗೆ ನೋಡಿದರೆ ಇಂದಿನ ಆರ್ಥಿಕತೆ, ಉತ್ಪಾದನೆಯ ಆರ್ಥಿಕತೆಯಷ್ಟೇ ನಿರ್ವಹಣೆ ಮತ್ತು ಸೇವೆಗಳ ಆರ್ಥಿಕತೆಯೂ ಆಗಿ ಪರಿವರ್ತಿತವಾಗಿ ಅಂದಿನ ಪ್ರಗತಿಪರತೆಯ ಬೆನ್ನೆಲುಬಾಗಿದ್ದ ರಾಜಕೀಯ ಆರ್ಥಿಕತೆ (Political economy) ಎಂಬ ಪರಿಕಲ್ಪನೆಯೇ ತಲೆಕೆಳಗಾಗಿದೆ.
ಇದಾವುದನ್ನು° ಗಮನಕ್ಕೇ ತೆಗೆದುಕೊಳ್ಳದಂತೆ ತೋರುವ ಪ್ರಗತಿಪರರು ಸಹಜವಾಗಿಯೇ ಒಂದು ಕಾಲದ ಪ್ರಗತಿಪರತೆಯು ಚಲಾವಣೆಗೆ ತಂದಿದ್ದ ಸಾಮಾಜಿಕ ಗ್ರಹಿಕೆಗಳು ಮತ್ತು ಅವನ್ನು ವಿವರಿಸಲು ರೂಢಿಸಿಕೊಳ್ಳಲಾಗಿದ್ದ ಸೂತ್ರ ಮತ್ತು ನುಡಿಗಟ್ಟುಗಳ ಬಂಧನಗಳಿಂದ ಬಿಡುಗಡೆ ಹೊಂದದೇ ಹೋಗಿದ್ದಾರೆ. ಇನ್ನೂ ವರ್ಗ ವೈಷಮ್ಯ, ವರ್ಗ ಸಂಘರ್ಷ, ಶೋಷಿತ-ಶೋಷಕ, ಬಡವ-ಶ್ರೀಮಂತ ಎಂಬ ಶಬ್ದಾವಳಿಯನ್ನು ಬಡಬಡಿಸುತ್ತಿದ್ದಾರೆ. ಈ ಶಬ್ದಾವಳಿ ನಿನ್ನೆಯ ಶೋಷಿತನೇ ಇಂದಿನ ಶೋಷಕನಾಗಬಲ್ಲ ನೀತಿ-ನಿರ್ಲಿಪ್ತ ಸಮಾಜವನ್ನು ನಿರ್ಮಿಸಿದೆ ಎಂಬ ಸತ್ಯವೇ ಅವರಿಗೆ ಕಾಣದಾಗಿದೆ. ಇದಕ್ಕೆ ಪ್ರಗತಿಪರತೆ ಎಂಬುದರಲ್ಲೇ ಅಂತರ್ಗತವಾಗಿರುವ ಚಾರಿತ್ರಿಕವಾದ ಅಹಮ್ಮೇ ಕಾರಣವೆಂದು ಹೇಳಬಹುದು. ಇದು ಎದ್ದು ಕಾಣುವುದು ಭೌತವಾದದಲ್ಲಿನ ಇವರ ಅಚಲ ನಂಬಿಕೆ ಹಾಗೂ ಅದರಿಂದ ಹುಟ್ಟಿದ ಧರ್ಮ ಕುರಿತ ಅವರ ಸ್ಥಾವರ ನಿಲುವುಗಳಲ್ಲಿ.
ಆದರೆ ಇನ್ನೂ ಈ ಚಾರಿತ್ರಿಕ ಅಹಮ್ಮಿಗೇ ಅಂಟಿಕೊಂಡು, ಅವಶೇಷಗಳಂತೆ ಅಳಿದುಳಿದಿರುವ ಇಂತಹ ಜನ ಮತ್ತು ಗುಂಪುಗಳು ಸಹಜವಾಗಿಯೇ ಸಮಾಜ ಬದಲಾಗಿ ಅದರ ಆಶೋತ್ತರಗಳೂ ಯುಗಪಲ್ಲಟವಾಗಿರುವುದನ್ನು ಗುರುತಿಸಲಾಗದೆ ಕನಿಷ್ಠ ತಮ್ಮ ಗುರುತನ್ನಾದರೂ ಉಳಿಸಿಕೊಳ್ಳಲು ರಚನಾತ್ಮಕವಾಗಿ ಏನು ಮಾಡಲೂ ಅವರ ಬಳಿ ಏನೂ ಇರದೆ, ಶತ್ರುಪಕ್ಷವೊಂದನ್ನು ಗುರುತಿಸಿಕೊಂಡು ಅದರ ವಿರುದ್ಧ ಹೋರಾಟದಲ್ಲಿ ತನ್ನ ಅಸ್ತಿತ್ವದ ಸಾರ್ಥಕತೆಯನ್ನು ಕಂಡುಕೊಳ್ಳುವ ಪ್ರಯತ್ನ ಮಾಡುತ್ತಿವೆ. ಹಾಗಾಗಿಯೇ ಇಂದು ಭಾರತದಲ್ಲಿ ಪ್ರಗತಿಪರತೆ ಎಂದರೆ ಬಿಜೆಪಿ ವಿರೋಧ ಎಂಬ ಸ್ಥಿತಿ ಬಂದಿದೆ! ಹೀಗಾಗಿ, ಅರ್ಥಪೂರ್ಣತೆಯನ್ನೂ, ಆ ಮೂಲಕ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿರುವ ಪ್ರಗತಿಪರತೆಯ ಎದುರು ಬಿಜೆಪಿಗೆ ಪರಿಸ್ಥಿತಿ ಅನುಕೂಲ ಕರವಾಗಿಯೇ ಪರಿಣಮಿಸಿದೆ. ಏಕೆಂದರೆ ಬಿಜೆಪಿ ತನ್ನ ಹುಟ್ಟಿನ ಆದಿ ರೂಪದ ಕಾಲದಿಂದಲೂ ಪ್ರಗತಿಪರತೆಯ ಮೂಲಾಧಾರಗಳನ್ನುಪ್ರಶ್ನಿಸುತ್ತಲೇ ಬೆಳೆದುಬಂದಿರುವ ಪಕ್ಷವಾಗಿದ್ದು, ಈಗ ಈ ಪ್ರಗತಿಪರತೆ ಎಂಬುದು ಕ್ರಮೇಣ ತುಕ್ಕುಹಿಡಿದು ಅದರ
ಭಾಷೆ ದದ್ದುಬಿದ್ದು ಹೋಗುತ್ತಿರುವ ಈ ಕಾಲ ಅದಕ್ಕೆ
ಸುವರ್ಣ ಯುಗವೇ ಆಗಿದೆ.
ಈ ಎಲ್ಲ ಹಿನ್ನೆಲೆಯಲ್ಲಿ ನಾವು ತ್ರಿಪುರ ಚುನಾವಣಾ ಫಲಿತಾಂಶಗಳನ್ನು ಅರ್ಥ ಮಾಡಿಕೊಂಡರೆ ಪ್ರಗತಿಪರ ರಾಜಕಾರಣದ ದುರಂತವನ್ನು ಹೆಚ್ಚು ಆಳವಾಗಿ ಗ್ರಹಿಸಬಹುದೆಂದು ಕಾಣುತ್ತದೆ. ಆರಂಭದಲ್ಲಿ ಎಲ್ಲ ರಾಜ್ಯಗಳಲ್ಲಿದ್ದಂತೆ ಇಲ್ಲಿಯೂ ತನ್ನ ಪ್ರಾಬಲ್ಯ ಮರೆದಿದ್ದ ಕಾಂಗ್ರೆಸ್ ಈಗ ಯುವಶಕ್ತಿಯನ್ನು ಸೆಳೆಯಬಲ್ಲ ಆದರ್ಶಗಳನ್ನೆಲ್ಲ ಕಳೆದುಕೊಂಡು ಮುದಿಯಾಗಿ ಮೂಲೆ ಸೇರಿರುವುದರಿಂದ ಕಳೆದ 25 ವರ್ಷಗಳಲ್ಲಿ ಪ್ರಗತಿಪರತೆಯ ಗಿಳಿಪಾಠದ ಹೊರತಾಗಿ ಬೇರೆ ಯಾವುದೇ ರಾಜಕೀಯ ಪರ್ಯಾಯದ ಸಾಧ್ಯತೆಯನ್ನೂ ಕಾಣಲಾಗದಿದ್ದ ತ್ರಿಪುರದ ಜನತೆ ಬಿಜೆಪಿ ಎಂಬ ಹೊಸ ನುಡಿಗಟ್ಟು ಮತ್ತು ಹೊಸ ಕನಸು-ಉತ್ಸಾಹಗಳ ಪಡೆಯನ್ನು ಕಂಡು ಮರುಳಾಗಿದ್ದಲ್ಲಿ ಆಶ್ಚರ್ಯವಿಲ್ಲ. ಅಲ್ಲಿನ ಫಲಿತಾಂಶವನ್ನು ಅಲ್ಲಿನ ಜನ ಸಾಮಾನ್ಯರು “ಬಿಡುಗಡೆ’, “ಮುಕ್ತಿ’ ಎಂದೆಲ್ಲ ಬಣ್ಣಿಸುತ್ತಿರುವುದು 25 ವರ್ಷಗಳ ಪ್ರಗತಿಪರ ರಾಜಕಾರಣ ಅಲ್ಲಿ ಏನು ಮಾಡಿತ್ತು ಎಂಬುದನ್ನು ಸೂಚಿಸುತ್ತದೆ. ಅಲ್ಲಿ ಪ್ರಗತಿಪರತೆ ಎಂಬುದು ಜಡತೆ ಎಂಬ ಅರ್ಥವನ್ನು ಪಡೆದಿತ್ತು ಎಂಬುದರಲ್ಲಿ ಸಂಶಯವಿರಲಾರದು.
ಹಾಗೆ ನೋಡಿದರೆ ತ್ರಿಪುರದಲ್ಲಿ ಮಾತ್ರವಲ್ಲ, ಇಡೀ ಭಾರತದಲ್ಲಿ ಪ್ರಗತಿಪರತೆಗೆ ಜಡತೆ ಎಂಬ ದೊಡ್ಡ ರೋಗ ಬಡಿದುಕೊಂಡಿದೆ. ಅಂದರೆ ಅದು ಆಲೋಚಿಸುವ ಶಕ್ತಿಯನ್ನೇ ಕಳೆದುಕೊಂಡಿದೆ. ಹಾಗಾಗಿಯೇ ಅದು ಪುನರುಜ್ಜೀವನದ ಯಾವ ಇಚ್ಛೆಯನ್ನೂ ಪ್ರಕಟಿಸದೆ ಮುದಿಯಾಗಿ ಪರಮ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಸಂಕುಚಿತ ಸಾಮಾಜಿಕ ಓಲೈಕೆ ತಂತ್ರ, ವಂಶ ರಾಜಕಾರಣ ಇತ್ಯಾದಿ ಹಲವು ಹಳೆಯ ರೋಗಗಳಿಂದ ಬಳಲುತ್ತಾ ರಾಷ್ಟ್ರವನ್ನು ಇಂದು ಹೊಸ ರಾಜಕೀಯ ಭಾಷೆ ಮತ್ತು ಹೊಸ ಉತ್ಸಾಹದ ಪ್ರತೀಕವಾಗಿರುವ ಬಿಜೆಪಿಗೆ ಒಪ್ಪಿಸಿ ಆತಂಕ ಹುಟ್ಟಿಸಿರುವ ಕಾಂಗ್ರೆಸ್ ಇಂದು ಎಲ್ಲ ಪ್ರಗತಿಪರರ ಆಶ್ರಯದಾಣವಾಗಿದೆ. ಅದನ್ನು ಊರುಗೋಲು ಮಾಡಿಕೊಂಡು ಈ ಪ್ರಗತಿಪರರು ಬಿಜೆಪಿಯ ವಿರುದ್ಧ ಸಮರ ಸಾರಹೊರಟಿದ್ದಾರೆ! ಅವರಿಗೆ ಗೊತ್ತಿಲ್ಲದ ವಿಷಯವೆಂದರೆ, ತ್ರಿಪುರದಲ್ಲಿ ಗೆದ್ದಿರುವ ಬಿಜೆಪಿಯ ಬಹುಭಾಗ ಕಾಂಗ್ರೆಸ್ಸಿಗರಿಂದ ತುಂಬಿದೆ ಎಂಬುದು. ಕಾಂಗ್ರೆಸ್‌ನಲ್ಲಿ ಪುನರು ಜ್ಜೀವನದ ಮೂಲಗಳನ್ನೇ ಕಾಣದ ಕಾಂಗ್ರೆಸ್ಸಿಗರು ಈಗ ಬಿಜೆಪಿಯಲ್ಲಿ ಪುನರುಜ್ಜೀವಿತರಾಗಿದ್ದಾರೆ. ಅದೇ ಅಲ್ಲಿ-ಹಾಗೆ ನೋಡಿದರೆ ಅಸ್ಸಾಂನಿಂದ ಆರಂಭವಾಗಿ, ಇಡೀ ಈಶಾನ್ಯ ಭಾರತದಲ್ಲಿ ಬಿಜೆಪಿಯ ಮುನ್ನಡೆಗೆ ಕಾರಣವಾಗಿರುವುದು.
ಆದುದರಿಂದ ಇಂದು ಪ್ರಗತಿಪರರು ಬಿಜೆಪಿಯನ್ನು ಈಗಾಗಲೇ ತುಕ್ಕು ಹಿಡಿದಿರುವ ತಮ್ಮ ಹಳೆಯ ಪಾರಿಭಾಷಿಕಗಳ
ಮೂಲಕ ಶಪಿಸುವುದನ್ನು ನಿಲ್ಲಿಸಿ, ಅದರ ಹೊಸ ಭಾಷೆ ಮತ್ತು ಉತ್ಸಾಹಗಳ ಹಿಂದಿರುವ ಅಪಾಯಗಳನ್ನು ಜನತೆಗೆ ಮನಗಾಣಿಸುವ ಹೊಸ ಭಾಷೆಯನ್ನು ಕಂಡುಕೊಳ್ಳಬೇಕಿದೆ. ಅದಕ್ಕಾಗಿ ಅವರು ಮೊದಲು ತಮ್ಮದೇ ಪುನರುಜ್ಜೀವನದ ಮೂಲಗಳನ್ನು ಕಂಡುಕೊಳ್ಳಬೇಕಾಗಿದೆ. ಅದು ಸಾಧ್ಯವಾಗಲು ಅವರು ಮೊದಲು ತಮ್ಮ ಪಾರಂಪರಿಕವಾದ ತಾತ್ವಿಕ ಶ್ರೇಷ್ಠತೆಯ ಅಹಂಕಾರವನ್ನು ತೊರೆದು ತಾವು ನಡೆದ ಬಂದ ಹಾದಿಯ ಮತ್ತು ಯೋಚಿಸಿದ ಕ್ರಮಗಳು ಮತ್ತು ಅವು ಉಂಟುಮಾಡಿರುವ ಪರಿಣಾಮಗಳ ಬಗ್ಗೆ ಒಂದು ನಿಷ್ಠುರ ಪುನರಾವಲೋಕನ ಮಾಡಬೇಕಿದೆ. ಇಂದು ಜನರ ಕಣ್ಣಿನಲ್ಲಿ ತಮಗಿಂತ ಬಿಜೆಪಿ ಏಕೆ ಹೆಚ್ಚು ಪ್ರಗತಿಪರವಾಗಿ ಕಾಣತೊಡಗಿದೆ ಎಂದು ಯೋಚಿಸಬೇಕಿದೆ. ಆಗ “ಪ್ರಗತಿಪರತೆ’ ಎಂಬ ಪರಿಕಲ್ಪನೆಯ ಅರ್ಥವನ್ನೇ ಬದಲಾಯಿಸಬೇಕಾದ ಅಗತ್ಯವನ್ನು ಅವರು ಮನಗಾಣಬಹುದು. ತಾವು ಪ್ರತಿಪಾದಿಸುತ್ತಾ ಬಂದ ಪ್ರಗತಿಪರತೆ ಕಳೆದ ಕೆಲವು ವರ್ಷಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಎಂಬ ಅವಳಿಜವಳಿಯ ಪಾಲಾದದ್ದು ಏಕೆ ಮತ್ತು ಹೇಗೆ ಎಂಬುದರ ಬಗ್ಗೆಯೂ ಮತ್ತು ಇದು ಹೇಗೆ ಆತ್ಯಂತಿಕವಾಗಿ ಅಮಾನವೀಕರಣಗೊಂಡ ಒಂದು ಹಿಂಸಾತ್ಮಕ ಸಮಾಜವನ್ನು ನಿರ್ಮಿಸತೊಡಗಿದೆ ಮತ್ತು ಕೋಮುವಾದದ ಜೊತೆಗೆ ಹೆಣ್ಣು ಮತ್ತು ಭೂಮಿಯ ಮೇಲಿನ ಅತ್ಯಾಚಾರಗಳು ಇದರ ಸ್ಫೂರ್ತಿ ತತ್ವಗಳಾಗಿವೆ ಎಂಬುದರ ಬಗ್ಗೆಯೂ ಅವರು ಯೋಚಿಸಬಲ್ಲರಾದರೆ, ಇಂದು ಪ್ರಸ್ತುತವಾಗಬಹುದಾದ ಪ್ರಗತಿಪರತೆಯ ಹೊಸ ಅರ್ಥ ಮತ್ತು ಅದನ್ನು ವಿವರಿಸುವ ಹೊಸ ಭಾಷೆಯ ಹೊಳಹು ಅವರಿಗೆ ಸಿಗಬಹುದು.
ಇಲ್ಲಿ ಅವರ ಚಿಂತನೆಯ ನೆರವಿಗೆ ಬರಬಹುದಾದ ಯುಗ ದ್ರಷ್ಟಾರತೆಯ ಮಾತೊಂದನ್ನು ಉಲ್ಲೇಖೀಸಿ, ಅದರ ಮಹತ್ವವನ್ನು ಸೂಚಿಸಿ ನನ್ನ ಈ ಬರಹವನ್ನು ಮುಗಿಸಬಯಸುವೆ. ಅದು “ಪ್ರಗತಿ’ ಮತ್ತು “ಪ್ರಗತಿಪರತೆ’ ಎಂಬ ಕಲ್ಪನೆಗಳು ನವೋತ್ಸಾಹಗಳೊಂದಿಗೆ ಚಾಲ್ತಿಗೆ ಬರತೊಡಗಿದ್ದ ಸುಮಾರು ಒಂದು ಶತಮಾನದಷ್ಟು ಹಿಂದೆ ಮತ್ತು ಈ ಪ್ರಗತಿಪರರಿಂದ “ಗೊಡ್ಡು ಸಂಪ್ರದಾಯವಾದಿ’ ಎಂದು ಮೂದಲಿಸಲ್ಪಟ್ಟಿದ್ದ ಮಹಾತ್ಮ ಗಾಂಧಿ ಎಂಬ ಮನುಷ್ಯ ಹೇಳಿದ್ದ ಮಾತು: “”ಈ ಭೂಮಿ ಎಲ್ಲರ ಅಗತ್ಯಗಳನ್ನು ಪೂರೈಸಬಲ್ಲುದೇ ಹೊರತು ಎಲ್ಲರ ಆಸೆಗಳನ್ನಲ್ಲ.”
ಈ ಮಾತು ನಮಗೆ ನಾಟಬೇಕಾದ ಜಾಗವೆಂದರೆ ಇದರಲ್ಲಿನ ಆಸೆ ಎಂಬ ಶಬ್ದವೇ ಹಿಂದಿನ ಮತ್ತು ಇಂದಿನ ಪ್ರಗತಿಪರತೆಯ ಸ್ಫೂರ್ತಿ ಶಕ್ತಿಯಾಗಿದೆ ಮತ್ತು ಇದರ ವೈವಿಧ್ಯಮಯ ರೂಪಗಳೇ ಇಂದಿನ ಸಮಾಜದಲ್ಲಿನ ಹಿಂಸಾಚಾರ, ಅತ್ಯಾಚಾರ, ಕೋಮು ವಾದ ಮತ್ತು ಭೂಮಿಯ ಹತ್ಯೆಗೆ ನಮ್ಮನ್ನು ಗೊತ್ತಿಧ್ದೋ ಗೊತ್ತಿಲ್ಲದೆಯೋ ದೂಡಿದೆ ಎಂಬ ಅರಿವು. ಆದುದರಿಂದ ಇಂದು ನಿಜವಾದ ಪ್ರಗತಿಪರತೆ ಎಂದರೆ ಈ ಪ್ರವೃತ್ತಿಗಳಿಗೆ ತಡೆ ಹಾಕುವಂತಹ ರಾಜಕಾರಣ ಮಾಡುವುದೇ ಆಗಿದೆ. ಅದೇ ಆಳದ ಅಹಿಂಸೆಯಲ್ಲಿನ ನಂಬಿಕೆ ಮಾತ್ರ ಸೃಷ್ಟಿಸಬಲ್ಲ ಪರಿಸರದೊಂದಿಗೆ ಸಮರಸದಲ್ಲಿರುವ ಮಿತಿಗಳುಳ್ಳ ಬದುಕಿನ ಮಾದರಿಯೊಂದನ್ನು ಎತ್ತಿ ಹಿಡಿಯುವ ರಾಜಕಾರಣ. ಇದು ಗಾಂಧಿಯನ್ನು ಇಂದಿಗೆ ಅರ್ಥೈಸಿಕೊಳ್ಳುವ ಮತ್ತು ಪ್ರಸ್ತುತ ಮಾಡಿಕೊಳ್ಳುವ ರಾಜಕಾರಣವೇ ಆಗಿರುತ್ತದೆ.
ಡಿ.ಎಸ್. ನಾಗಭೂಷಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Tobacco: ತಂಬಾಕು ಮೇಲಿನ ಚಿತ್ರ ಸಹಿತ ಎಚ್ಚರಿಕೆ ಗಾತ್ರ ಶೀಘ್ರ ಹಿರಿದು!
Coconut: ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆ 422 ರೂ. ಹೆಚ್ಚಳ: ಕೇಂದ್ರ ಸಂಪುಟ
laws: ಕಠಿಣ ಕಾಯ್ದೆ ಇರುವುದು ಸ್ತ್ರೀ ರಕ್ಷಣೆಗೆ, ದುರ್ಬಳಕೆ ಸಲ್ಲ: ಸುಪ್ರೀಂ ಕೋರ್ಟ್
Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ
Mangaluru: ಬಾಲಕಿ, ಮಹಿಳೆಯ ವೀಡಿಯೋ ಚಿತ್ರೀಕರಣ: ಆರೋಪಿಗೆ 5 ವರ್ಷಗಳ ಜೈಲು ಶಿಕ್ಷೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.