ಜೀವನ ಶೈಲಿಯ ಕಾಯಿಲೆಗಳು ಹೆಚ್ಚುತ್ತಿವೆ ಜೋಕೆ!
Team Udayavani, Feb 4, 2018, 6:00 AM IST
ಅತ್ಯಧಿಕ ಭಾರತೀಯರ ಮರಣಕ್ಕೆ ಕಾರಣವೆನಿಸುತ್ತಿರುವ ಕಾಯಿಲೆಗಳಲ್ಲಿ ಇದೀಗ ಪರಸ್ಪರ ಹರಡದ ಕಾಯಿಲೆಗಳು ಅಗ್ರಸ್ಥಾನದಲ್ಲಿವೆ. ಜೀವನ ಶೈಲಿಯ ಕಾಯಿಲೆಗಳು ಎಂದೂ ಕರೆಯಲ್ಪಡುವ ಈ ಗಂಭೀರ ಕಾಯಿಲೆಗಳು ಅನಿಯಂತ್ರಿತವಾಗಿ ವೃದ್ಧಿಸಲು, ನಾವಿಂದು ಅನುಸರಿಸುತ್ತಿರುವ ಆರಾಮದಾಯಕ ಮತ್ತು ನಿಷ್ಕ್ರಿಯ ಜೀವನ ಶೈಲಿಗಳೊಂದಿಗೆ, ಪರಿಸರ ಸಂಬಂಧಿ ಅಪಾಯಕಾರಿ ಅಂಶಗಳೂ ಪ್ರಮುಖ ಕಾರಣವೆನಿಸಿವೆ. ಸೆಂಟರ್ ಫಾರ್ ಸಯನ್ಸ್ ಆ್ಯಂಡ್ ಎನ್ವಿರಾನ್ಮೆಂಟ್ ಸಿಎಸ್‌ಇ) ಸಂಸ್ಥೆಯು ಇತ್ತೀಚೆಗೆ ನಡೆಸಿದ ಅಧ್ಯಯನದಿಂದ ಲಭಿಸಿರುವ ಈ ಮಾಹಿತಿಯು ನಿಜಕ್ಕೂ ಗಾಬರಿ ಹುಟ್ಟಿಸುವಂತಿದೆ.
ಪ್ರಸ್ತುತ ಭಾರತದಲ್ಲಿ ಶೇ. 61ರಷ್ಟು ಮರಣಗಳು ಜೀವನ ಶೈಲಿಯ ಕಾಯಿಲೆಗಳಿಂದ ಸಂಭವಿಸುತ್ತಿವೆ ಎಂದು ಸಿಎಸ್‌ಇ ಪ್ರಕಟಿಸಿರುವ ವರದಿಯಿಂದ ಬಹಿರಂಗಗೊಂಡಿದೆ.ಅಂತೆಯೇ ಪರಿಸರ ಸಂಬಂಧಿ ಅಪಾಯಕಾರಿ ಅಂಶಗಳಿಗೆ ಮತ್ತು ಏಳು ವಿಧದ ಜೀವನ ಶೈಲಿಯ ಕಾಯಿಲೆಗಳಿಗೆ ಇರಬಹುದಾದ ಸಂಬಂಧದ ಸಂಭಾವ್ಯತೆಯನ್ನು ಈ ವರದಿಯಲ್ಲಿ ಉಲ್ಲೇಖೀಸಲಾಗಿದೆ.
ಅಪಾಯಕಾರಿ ಕಾಯಿಲೆಗಳು/ ಸಮಸ್ಯೆಗಳು
ಸಿಎಸ್‌ಇ ವರದಿಯಂತೆ ಸ್ಥೂಲಕಾಯ, ಕ್ಯಾನ್ಸರ್, ಹೃದಯ ಮತ್ತು ರಕ್ತನಾಳಗಳ ಕಾಯಿಲೆಗಳು, ಮಧುಮೇಹ (ಡಯಾಬಿಟಿಸ್), ಶ್ವಾಸಕಾಂಗಗಳ ವ್ಯಾಧಿಗಳು (ದೀರ್ಘಕಾಲೀನ ಶ್ವಾಸಕೋಶಗಳ ಅಡಚಣೆಯ ಸಮಸ್ಯೆ), ಹಾರ್ಮೋನ್ ಅಸಮತೋಲನ, ಆಹಾರ ಒಗ್ಗದಿರುವಿಕೆ (ಅಲರ್ಜಿ) ಮತ್ತು ಮಾನಸಿಕ ವ್ಯಾಧಿಗಳು ಜೀವನ ಶೈಲಿಯ ಕಾಯಿಲೆ ಮತ್ತು ಸಮಸ್ಯೆಗಳಲ್ಲಿ ಪ್ರಮುಖವಾಗಿವೆ.
ಪ್ರಸ್ತುತ ಕ್ಯಾನ್ಸರ್ ಕಾಯಿಲೆಯನ್ನು ಉದಾಹರಣೆಯಾಗಿಸಿದಲ್ಲಿ 2020ಕ್ಕೆ ಮುನ್ನ ನಮ್ಮ ದೇಶದಲ್ಲಿ ವರ್ಷಂ ಪ್ರತಿ 1.73 ದಶಲಕ್ಷಕ್ಕೂ ಅಧಿಕ ಜನರು ಈ ಮಾರಕ ಕಾಯಿಲೆಗೆ ಈಡಾಗಲಿರುವರೆಂದು ವರದಿಯಲ್ಲಿ ಉಲ್ಲೇಖೀಸ ಲಾಗಿದೆ. ವಾಯುಮಾಲಿನ್ಯ, ತಂಬಾಕಿನ ಬಳಕೆ, ಮದ್ಯಪಾನ, ಆಹಾರ ಸೇವನೆ ಪದ್ಧತಿಯಲ್ಲಿ ಬದಲಾವಣೆಗಳು ಕ್ಯಾನ್ಸರ್ ಉದ್ಭವಿಸುವಲ್ಲಿ ಕಾರಣವೆನಿಸಿದರೂ, ಶೇ. 20ರಷ್ಟು ಕ್ಯಾನ್ಸರ್ ಪ್ರಕರಣಗಳು ಪರಿಸರದಲ್ಲಿನ ವಿಷಕಾರಕ ಅಂಶಗಳಿಂದಾಗಿ ಬರುತ್ತಿ¤ವೆ. ಇದೇ ಕಾರಣದಿಂದಾಗಿ ಪರಿಸರ ಸಂಬಂಧಿತ ಅಪಾಯಕಾರಿ ಅಂಶಗಳನ್ನು ಕ್ಷಿಪ್ರಗತಿಯಲ್ಲಿ ನಿವಾರಿಸುವ ಮೂಲಕ ಶೇ. 61 ರಷ್ಟು ಮರಣಗಳಿಗೆ ಕಾರಣವೆನಿಸುತ್ತಿರುವ ಜೀವನ ಶೈಲಿಯ ಕಾಯಿಲೆಗಳನ್ನು ನಿಯಂತ್ರಿಸಬೇಕೆಂದು ಈ ವರದಿಯಲ್ಲಿ ಹೇಳಲಾಗಿದೆ.
ಲಭ್ಯ ಮಾಹಿತಿಯಂತೆ ಕಳೆದ ಎರಡು ದಶಕಗಳಲ್ಲಿ ಅಧಿಕ ರಕ್ತದ ಒತ್ತಡ, ಮಧುಮೇಹ, ಅಧಿಕತೂಕ, ಬೊಜ್ಜು, ಖನ್ನತೆ ಮತ್ತಿತರ ಮಾನಸಿಕ ಕಾಯಿಲೆಗಳು ಭಾರತೀಯರಲ್ಲಿ ಸಾಮಾನ್ಯ ಹಾಗೂ ವ್ಯಾಪಕವಾಗಿ ಕಂಡುಬರುತ್ತಿವೆ. ವಿಶೇಷವೆಂದರೆ ಹಿಂದೆ ಮಧ್ಯ ವಯಸ್ಸು ಮೀರಿದ ಬಳಿಕ ಪ್ರತ್ಯಕ್ಷವಾಗುತ್ತಿದ್ದ ಗಂಭೀರ ಆರೋಗ್ಯದ ಸಮಸ್ಯೆಗಳು, ಇದೀಗ ಯೌವ್ವನ ಮತ್ತು ಎಳೆಯ ವಯಸ್ಸಿನವರನ್ನು ಪೀಡಿಸಲು ಆರಂಭಿಸಿದೆ. ಅನಿಯಂತ್ರಿತವಾಗಿ ವೃದ್ಧಿಸುತ್ತಿರುವ ವಾಯು ಮಾಲಿನ್ಯದ ಪರಿಣಾಮವಾಗಿ ಮನುಷ್ಯನ ಹೃದಯ, ಶ್ವಾಸಾಂಗಗಳು ಮತ್ತು ಮೂತ್ರಪಿಂಡಗಳು ಹಾನಿಗೀಡಾಗುತ್ತಿವೆ. ರೈತಾಪಿ ಜನರು ಬಳಸುತ್ತಿರುವ ಕೀಟನಾಶಕಗಳ ಪರಿಣಾಮವಾಗಿ ಜನ್ಮದತ್ತ ವೈಕಲ್ಯಗಳು, ಮಧುಮೇಹ, ಸಂತಾನ ಹೀನತೆ, ನಪುಂಸಕತ್ವ ಮತ್ತು ಮಾರಕ ಕ್ಯಾನ್ಸರ್ ಇತ್ಯಾದಿ ಕಾಯಿಲೆಗಳು ಉದ್ಭವಿಸುತ್ತಿವೆ. ಇದಲ್ಲದೇ ಗಾಳಿಯಲ್ಲಿರುವ ವಿಷಕಾರಕ ಅಂಶಗಳಿಂದಾಗಿ ಸಂತಾನಹೀನತೆ, ಮತ್ತು ಇನ್ಸುಲಿನ್ ಪ್ರತಿರೋಧವೇ ಮುಂತಾದ ಗಂಭೀರ ಸಮಸ್ಯೆಗಳು ಭಾರತೀಯರನ್ನು ಕಾಡುತ್ತಿವೆ. ಈ ಸಮಸ್ಯೆ ಯನ್ನು ಸಮರೋಪಾದಿಯಲ್ಲಿ ಪರಿಹರಿಸದೇ ಇದ್ದಲ್ಲಿ, ನಮ್ಮ ಮುಂದಿನ ಸಂತತಿಯನ್ನು ಇದು ಶಾಪದೋಪಾದಿಯಲ್ಲಿ ಪೀಡಿಸಲಿದೆ.
ನಾಲ್ಕು ಅಂಶಗಳು
ವಿಶ್ವ ಆರೋಗ್ಯ ಸಂಸ್ಥೆಯು ಮದ್ಯಪಾನ, ತಂಬಾಕಿನ ಉತ್ಪನ್ನಗಳ ಬಳಕೆ, ಅಪೌಷ್ಟಿಕ – ನಿರುಪಯುಕ್ತ ಆಹಾರ (ಜಂಕ್ ಫುಡ್) ಸೇವನೆ ಮತ್ತು ನಿಷ್ಕ್ರಿಯ ಬದುಕು ಜೀವನ ಶೈಲಿಯ ಅರ್ಥಾತ್ ಪರಸ್ಪರ ಒಬ್ಬರಿಂದ ಮತ್ತೂಬ್ಬರಿಗೆ ಹರಡದ ಕಾಯಿಲೆಗಳಿಗೆ ಕಾರಣವೆಂದು ಗುರುತಿಸಿದೆ. ಸಂಸ್ಥೆಯ ಅಭಿಪ್ರಾಯ ದಂತೆ ಜಗತ್ತಿನ ವಿವಿಧ ರಾಷ್ಟ್ರಗಳು ಕಿಂಚಿತ್ ಹಣವನ್ನು ವಿನಿಯೋಗಿಸುವ ಮೂಲಕ, ಈ ಗಂಭೀರ ಸಮಸ್ಯೆಯನ್ನು ಮತ್ತು ಇದರಿಂದಾಗಿ ಸಂಭವಿಸುವ ಮರಣದ ಪ್ರಮಾಣವನ್ನು ನಿಯಂತ್ರಿಸಬಹುದಾಗಿದೆ.
ಸರಕಾರ- ಪ್ರಜೆಗಳ ಹೊಣೆಗಾರಿಕೆ
ದೇಶದ ಪ್ರಜೆಗಳ ಆರೋಗ್ಯ ರಕ್ಷಣೆಯ ಮಹತ್ತರವಾದ ಹೊಣೆಗಾರಿಕೆಯು ರಾಜ್ಯ ಮತ್ತು ಕೇಂದ್ರ ಸರಕಾರಗಳ ಮೇಲಿದೆ. ಆದರೆ ಮಾನವಜನ್ಯ ಜಲ ಮತ್ತು ವಾಯು ಮಾಲಿನ್ಯ, ಅವೈಜ್ಞಾನಿಕ ತ್ಯಾಜ್ಯ ವಿಲೇವಾರಿ, ಹೆಚ್ಚುತ್ತಿರುವ ಜಾಗತಿಕ ತಾಪಮಾನ ಮತ್ತು ಪರಿಸರ ಮಾಲಿನ್ಯದ ಸಮಸ್ಯೆಯನ್ನು ನಿವಾರಿಸಲು ಮತ್ತು ಜೀವನ ಶೈಲಿಯ ಕಾಯಿಲೆಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿ ಸಲು, ದೇಶದ ಪ್ರತಿಯೊಬ್ಬ ಪ್ರಜೆಯ ಮನಃಪೂರ್ವಕ ಸಹಕಾರದ ಅವಶ್ಯಕತೆಯಿದೆ. ಈ ಸಮಸ್ಯೆಯನ್ನು ನಿರ್ಲಕ್ಷಿಸಿದಲ್ಲಿ, ಮುಂದಿನ ಕೆಲವೇ ವರ್ಷಗಳಲ್ಲಿ ಜೀವನ ಶೈಲಿಯ ಕಾಯಿಲೆಗಳಿಗೆ ಬಲಿಯಾಗುವ ಭಾರತೀಯರ ಸಂಖ್ಯೆ ಮತ್ತಷ್ಟು ಹೆಚ್ಚಲಿದೆ.
ಪರಿಹಾರವೇನು?
ನಿಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿರಿಸಲು ದಿನದಲ್ಲಿ ಒಂದಿಷ್ಟು ಸಮಯವನ್ನು ಮೀಸಲಿಡಿ. ನಿಮ್ಮ ಮಕ್ಕಳನ್ನೂ ಈ ಮಹಾನ್ ಕಾರ್ಯದಲ್ಲಿ ಸೇರುವಂತೆ ಪ್ರೇರೇಪಿಸಿ. ವಾಯು ಮತ್ತು ಜಲ ಮಾಲಿನ್ಯವನ್ನು ತಡೆಗಟ್ಟಲು ಶ್ರಮಿಸಿ. ಸಾಧ್ಯವಿರುವಷ್ಟು ಪುನರ್ ಆವರ್ತನಗೊಳಿಸಬಲ್ಲ ವಸ್ತುಗಳನ್ನೇ ಬಳಸಿ. ತ್ಯಾಜ್ಯಗಳ ಉತ್ಪಾದನೆಯನ್ನು ನಿಯಂತ್ರಿಸಿ. ದೈನಂದಿನ ಜೀವನದಲ್ಲಿ ಶಿಸ್ತು, ಪೌಷ್ಟಿಕ ಹಾಗೂ ಸಮತೋಲಿತ ಆಹಾರವನ್ನು ಮತ್ತು ತರಕಾರಿ, ಹಣ್ಣು ಹಂಪಲುಗಳನ್ನು ಸೇವಿಸಿ. ದಿನನಿತ್ಯ ವ್ಯಾಯಾಮ, ನಡಿಗೆ ಅಥವಾ ಕ್ರೀಡೆಗಳಲ್ಲಿ ಭಾಗವಹಿಸಿ. ನಿಮ್ಮ ಆರೋಗ್ಯ ಚೆನ್ನಾಗಿದೆ ಎಂದು ಭಾವಿಸಿ ಇದನ್ನು ನಿರ್ಲಕ್ಷಿಸಿದಲ್ಲಿ ಮುಂದೆ ಗಂಭೀರ ಸಮಸ್ಯೆಗಳು ಬಾಧಿಸುವ ಸಾಧ್ಯತೆಗಳಿವೆ ಎನ್ನುವುದನ್ನು ಮರೆಯದಿರಿ. ಈಗಾಗಲೇ ಅನಿಯಂತ್ರಿತವಾಗಿ ವೃದ್ಧಿಸುತ್ತಿರುವ ಜೀವನ ಶೈಲಿಯ ಕಾಯಿಲೆಗಳಿಗೆ ನಿಮ್ಮ ಮಕ್ಕಳು – ಮೊಮ್ಮಕ್ಕಳು ಈಡಾಗದಂತೆ ಕಾಪಾಡಬೇಕಾದ ಹೊಣೆಗಾರಿಕೆ ನಿಮ್ಮದೇ ಎನ್ನುವುದನ್ನು ನೆನಪಿನಲ್ಲಿಡಿ.
ಕೊನೆಯ ಮಾತು
ನಿಷ್ಕ್ರಿಯ ಜೀವನ ಶೈಲಿ, ನಿರುಪಯುಕ್ತ ಆಹಾರ ಸೇವನೆ ಮತ್ತು ಸುಖ ಲೋಲುಪ ಜೀವನಕ್ಕೆ ಒಗ್ಗಿಹೋಗಿರುವ ಬಹುತೇಕ ಶ್ರೀಮಂತರು, ಲಕ್ಷಾಂತರ ರೂಪಾಯಿಗಳ ಆರೋಗ್ಯ ವಿಮೆಯನ್ನು ಮಾಡಿಸಿಕೊಂಡು ನಿಶ್ಚಿಂತರಾಗಿದ್ದೇವೆ ಎನ್ನುತ್ತಾರೆ. ಆದರೆ ಈ ಆರೋಗ್ಯ ವಿಮೆಯು ವ್ಯಾಧಿ ಪೀಡಿತರ ಚಿಕಿತ್ಸೆಯ ಖರ್ಚುವೆಚ್ಚಗಳನ್ನು ಪಡೆದುಕೊಳ್ಳಲು ನೆರವಾಗಬಹುದೇ ಹೊರತು, ಯಾವುದೇ ಕಾಯಿಲೆಗಳಿಂದ ರಕ್ಷಣೆ ನೀಡಲು ಸಫಲವಾಗದು ಎನ್ನುವ ಸತ್ಯವನ್ನು ಮರೆತುಬಿಡುತ್ತಾರೆ!.
– ಡಾ| ಸಿ. ನಿತ್ಯಾನಂದ ಪೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Karinja: ಅಪಾಯಕಾರಿ ವಿದ್ಯುತ್ ಕಂಬ; ತುಕ್ಕು ಹಿಡಿದ, ಶಕ್ತಿ ಕಳೆದು ಬಾಗಿರುವ ಕಂಬ
ಟಿಬೆಟ್ ನಲ್ಲಿ ಪ್ರಬಲ ಭೂಕಂಪ… ಸಾವಿನ ಸಂಖ್ಯೆ 53ಕ್ಕೆ ಏರಿಕೆ, 60ಕ್ಕೂ ಹೆಚ್ಚು ಮಂದಿ ಗಾಯ
Updated: ಕೆನಡಾ ಮುಂದಿನ ಪ್ರಧಾನಿ ರೇಸ್ ನಲ್ಲಿ ಭಾರತೀಯ ಮೂಲದ ಅನಿತಾ ಸೇರಿ ಹಲವರ ಪೈಪೋಟಿ!
UP: ಪತಿ, ಆರು ಮಕ್ಕಳನ್ನು ಬಿಟ್ಟು ಭಿಕ್ಷುಕನ ಜತೆ ಓಡಿಹೋದ ಮಹಿಳೆ
Mangaluru: ಆಕಸ್ಮಿಕ ಗುಂಡು ತಗುಲಿ ವ್ಯಕ್ತಿಗೆ ಗಾಯ… ವಾಮಂಜೂರಿನಲ್ಲಿ ಘಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.